Thursday, April 26, 2007

ಮೌನಗಾಳಕ್ಕೆ ಒಂದು ವರ್ಷ..!


ಬೆಂಗಳೂರಿನಲ್ಲಿ ದಿನವೂ ಮಳೆಯಾಗುತ್ತಿದೆ. ಪುಟ್ಟೇನಹಳ್ಳಿಯ ನಿವಾಸಿಗಳು ಮನೆಯೊಳಗೆ ನಿಂತ ನೀರನ್ನು ಬಕೆಟ್ಟುಗಳಲ್ಲಿ ಮೊಗೆ ಮೊಗೆದು ಹೊರಗೆ ಚೆಲ್ಲುತ್ತಿರುವ ಫೋಟೋ ಪೇಪರಿನಲ್ಲಿದೆ. ಮುಖ್ಯಮಂತ್ರಿಗಳು ಮಳೆಪೀಡಿತ ಪ್ರದೇಶಗಳಿಗೆ ಭೇಟಿಯಿತ್ತು ಫೋಟೋ ತೆಗೆಸಿಕೊಂಡಿದ್ದಾರೆ. ಹಾನಿಗೊಳಗಾದವರಿಗೆ ಪರಿಹಾರ ಘೋಷಿಸಿದ್ದಾರೆ.

ನೀಲಿ ಕಂಗಳ ಚೆಲುವೆ ಐಶ್ವರ್ಯಾ ರೈ ಕೊನೆಗೂ ತನ್ನ ಅಸಂಖ್ಯ ಆರಾಧಕರನ್ನು ನಿರಾಶೆಗೊಳಿಸಿ ಮದುವೆ ಮಾಡಿಕೊಂಡಿದ್ದಾಳೆ. ತಿರುಪತಿಯಲ್ಲಿ ಪತಿ ಅಭಿಶೇಕ್ ಜೊತೆ ಪೂಜೆ ಸಲ್ಲಿಸುತ್ತಿರುವ ಅವಳ ಕೆಂಪು ರೇಶ್ಮೆ ಸೀರೆಯ ಫೋಟೋಗಳಲ್ಲಿ ಏನೋ ಲವಲವಿಕೆ ಇದೆ. ಸಲ್ಲು ಭಾಯ್‍ನನ್ನು ವಿವೇಕ್ ಭಾಯ್ 'ಮುಂಗಾರು ಮಳೆ' ನಾಯಕನ ಶೈಲಿಯಲ್ಲಿ ಸಮಾಧಾನ ಮಾಡುತ್ತಿದ್ದಾನೆ: "ನಿನ್ ಕಷ್ಟ ನಂಗ್ ಅರ್ಥ ಆಗುತ್ತೆ ಭಾಯ್.. ಪ್ರೀತಿ... ನಿಂಗೆ ಐಶ್ವರ್ಯಾ ಅಂದ್ರೆ ತುಂಬಾ ಪ್ರೀತಿ ಅಲ್ಲಾ..? ಹ್ಮ್..! ಪ್ರೀತಿ... ಹೃದಯಾನ ಹಿಂಡುತ್ತೆ...!" ಪ್ರೀತಿಸಿ ಮೋಸ ಮಾಡುವ ಎಲ್ಲ ಹುಡುಗಿಯರ ಪ್ರತಿನಿಧಿಯಂತೆ ಕಾಣಿಸುತ್ತಿದ್ದಾಳೆ ಐಶ್.

ವರ್ಲ್ಡ್‍ಕಪ್ ಫೈನಲ್‍ಗೆ ಹಸಿರು ಮೈದಾನ ಸಜ್ಜಾಗುತ್ತಿದೆ. ಹಳದಿ ಬಣ್ಣದ ಅಂಗಿಗಳು - ನೀಲಿ ಬಣ್ಣದ ಅಂಗಿಗಳು ಮೈದಾನಕ್ಕಿಳಿಯಲು ತಾಲೀಮು ನಡೆಸುತ್ತಿವೆ. "ಯಾರಿಗೆ ಹೋಗಬಹುದು ಕಪ್ಪು?" "ಈ ವರ್ಷವೂ ಆಸ್ಟ್ರೇಲಿಯಾಕ್ಕೇ ಬಿಡು" "ಏ.. ಛಾನ್ಸೇ ಇಲ್ಲ.. ಈ ಸಲ ಶ್ರೀಲಂಕಾಕ್ಕೆ ಹೋಗುತ್ತೆ ನೋಡ್ತಿರು.."

ಜೆಸಿಬಿ ಯಂತ್ರಗಳು ಮಣ್ಣನ್ನು ಎತ್ತಿ ಎತ್ತಿ ಹಾಕುತ್ತಿವೆ... ಟೀವಿ ಛಾನೆಲ್‍ಗಳು ಈ 'ಕಾರ್ಯಕ್ರಮ'ವನ್ನು ಲೈವ್ ತೋರಿಸುತ್ತಿವೆ. ಜನ ವರ್ಲ್ಡ್‍ಕಪ್ ನೋಡುವುದನ್ನು ಬಿಟ್ಟು ಇದನ್ನೇ ನೋಡುತ್ತಿದ್ದಾರೆ. "ಏ, ಅದೇನ್ ಕ್ರಿಕೆಟ್ ನೋಡ್ತೀಯಾ? ಇಲ್ಲಿ ನೋಡು.. ಒಳ್ಳೇ ಸಸ್ಪೆನ್ಸ್ ಶೋ! ಲಾಸ್ಟಿಗೆ ಏನಾಗೊತ್ತೆ ಅಂತ ಯಾರಿಗೂ ಗೊತ್ತಿಲ್ಲ..!" "ಇನ್ನೂ ಇರಬಹುದಾ ಉಸಿರು..?" "ಇದ್ದರೂ ಇರಬಹುದು.." "ಓ ದೇವರೇ..! ಬಾಲಕ ಬದುಕಿ ಹೊರಬರಲಿ.."

ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ವಿಶ್ವ ಗೋ ಸಮ್ಮೇಳನ ನಡೆಯುತ್ತಿದೆ. ಕಳೆದ ಬಾರಿ ನಾನು ಊರಿಗೆ ಹೋದಾಗಲೇ ಊರ ಜನಗಳ ನಾಲಿಗೆಯ ಮೇಲೆ ಮಠದ ಕಾರ್ಯಕ್ರಮಗಳ ಬಗ್ಗೆ ಮಾತು ತುಯ್ದಾಡುತ್ತಿತ್ತು. ಊರ ಜನಗಳೆಲ್ಲ ಅಕ್ಷತೆ ಬಟ್ಟಲು ಹಿಡಿದು ಸಮ್ಮೇಳನಕ್ಕೆ ಕರೆಯಲು ಹೊರಟಿದ್ದರು. ಮಠಗಳು, ಸ್ವಾಮೀಜಿಗಳು, ದೇವರುಗಳು, ಇತ್ಯಾದಿಗಳ ಬಗೆಗಿನ ನನ್ನ ವಿಚಾರ ಸಂಘರ್ಷಗಳು ಏನೇ ಇರಲಿ. ಆದರೆ ನನಗೆ ಈ ಅಕ್ಷತೆ ಹಂಚುವ ಕಾರ್ಯ ತುಂಬಾ ಇಷ್ಟವಾಯಿತು. ಗುರುಗಳ ಆಜ್ಞೆಯಂತೆ ಗೋ ಸಮ್ಮೇಳನಕ್ಕೆ ಕರೆಯಲು ನಮ್ಮವರು ಪ್ರತಿ ಜಾತಿ, ಪ್ರತಿ ಮತ, ಪ್ರತಿ ಧರ್ಮದವರ ಮನೆಯ ಮೆಟ್ಟಿಲನ್ನೂ ಹತ್ತಿ ಇಳಿಯುತ್ತಿದ್ದಾರೆ. ಹರಿಜನ ಕೆಲಸಗಾರರನ್ನು ಇವತ್ತಿಗೂ ನಮ್ಮೂರುಗಳಲ್ಲಿ ಬ್ರಾಹ್ಮಣರು ಅಸ್ಪೃಶ್ಯರನ್ನಾಗಿ ಕಾಣುತ್ತಾರೆ. ಅವರನ್ನು ಮನೆಯೊಳಗೆ ಬರಗೊಡುವುದಿಲ್ಲ. ಅಕಸ್ಮಾತ್ ಮೈಗೆ ಮೈ ತಗುಲಿದರೆ ಸ್ನಾನ ಮಾಡುವ ಕರ್ಮಟ ಬ್ರಾಹ್ಮಣರೂ ಇದ್ದಾರೆ ನಮ್ಮ ಕಡೆ. ನಮ್ಮ ಮನೆ ಕೊನೆಕಾರ ಬಂಗಾರಿಯ ಮನೆ ಹೇಗಿದೆ ಅಂತಲೇ ನೋಡಿಲ್ಲ ನಾವು. ಅಂಥದರಲ್ಲಿ, ಗೋ ಸಮ್ಮೇಳನ ಎಂಬ ನೆಪದಲ್ಲಾದರೂ ನಮ್ಮ ಜನಗಳು ಅವರುಗಳ ಮನೆಗಳಿಗೆ ಹೋಗಿ ಬರುವಂತಾಯ್ತಲ್ಲ...? ನನಗೆ ಅದೇ ಖುಷಿಯೆನಿಸುತ್ತಿತ್ತು. ಉಳವಿಯ ಮುಸ್ಲಿಮರಿಗೆ ಅರೆಕೆಂಬಣ್ಣದ ಅಕ್ಕಿಕಾಳು ಕೊಟ್ಟು ಗೋಸಮ್ಮೇಳನಕ್ಕೆ ಆಮಂತ್ರಿಸುವ ಪರಿಕಲ್ಪನೆಯೇ ನನಗೆ ತೀರಾ ವಿಸ್ಮಯ ಮತ್ತು ಕುತೂಹಲಕರವಾಗಿ ಕಂಡಿತ್ತು. ಈಗ ಇಪ್ಪತ್ತನಾಲ್ಕು ಗಂಟೆಗಳ ಕೊಳಲ ಮೆಲುನಿನಾದದ ಹಿನ್ನೆಲೆಯಲ್ಲಿ ಗೋ ಸಮ್ಮೇಳನ ಅದ್ಧೂರಿಯಾಗಿ ನಡೆಯುತ್ತಿದೆ. ವಿಚಿತ್ರ ಖುಷಿ... ಏನೋ ಹುಮ್ಮಸ್ಸು... ನಾನು ಹೋಗಬೇಕು ನಾಳೆ ರಾತ್ರಿ...

ಊಹುಂ, ವಿಷಯ ಇದ್ಯಾವುದೂ ಅಲ್ಲ. ನಿಜವಾದ ಖುಷಿ ಏನೆಂದರೆ, ಇವತ್ತು ನನ್ನ ಬ್ಲಾಗಿನ ಹುಟ್ಟುಹಬ್ಬ! ಎರಡುಸಾವಿರದ ಆರನೇ ಇಸವಿಯ ಏಪ್ರಿಲ್ ಇಪ್ಪತ್ತಾರರ ಒಂದು ಸುಡುಮಧ್ಯಾಹ್ನ ಆಫೀಸಿನಲ್ಲಿ ಕೆಲಸವಿಲ್ಲದ ಸಮಯದಲ್ಲಿ 'ಸುಮ್ನೆ, ಟೈಂಪಾಸಿಗೆ' ಎಂಬಂತೆ ಶುರು ಮಾಡಿದ್ದ ಬ್ಲಾಗ್ ಬರವಣಿಗೆ ಇಲ್ಲಿಯವರೆಗೆ ನಿರಂತರವಾಗಿ ಹರಿದು ಬಂದಿರುವುದು ನನಗಂತೂ ಖುಷಿಯ ವಿಷಯ. ಹಾಗಂತ, ಬ್ಲಾಗ್ ಶುರು ಮಾಡುವ ಮುನ್ನ ಕನಸು ಕಟ್ಟಿರಲಿಲ್ಲ ಎಂದಲ್ಲ. ಆದರೆ ನನಗೆ ನನ್ನ ಮೇಲೇ ಕಾನ್ಫಿಡೆನ್ಸ್ ಇರಲಿಲ್ಲ. 'ನಾನು ಬರೆದದ್ದು ನಾಕು ಜನ ಓದಬಹುದಾದಂಥದ್ದೇ?' ಎನ್ನುವ ಅನುಮಾನ ಇತ್ತು. ಸುಮ್ಮನೆ ಬರೆದು ಮುಚ್ಚಿಟ್ಟಿದ್ದ ಅದೆಷ್ಟೋ ಕವನಗಳನ್ನು ಇಲ್ಲಿ ಹಾಕುವ ಉದ್ದೇಶವಿಟ್ಟುಕೊಂಡಿದ್ದೆ ಅಷ್ಟೆ. ಆದರೆ ಬರೆಯುತ್ತಾ ಹೋದಂತೆ ಎಲ್ಲಾ ಸರಾಗವಾಯಿತು. ಕಾಮೆಂಟುಗಳು, ಮೆಚ್ಚುಗೆಗಳು ಬರುತ್ತಾ ಹೋದಂತೆ ನನಗೂ ಓಘ ಸಿಕ್ಕಿತು. ಇನ್ ಫ್ಯಾಕ್ಟ್, ಶುರು ಮಾಡಿದಾಗ ಈ ಬ್ಲಾಗಿಗೆ 'About Me, About U & About Them!' ಅಂತ ಹೆಸರು ಕೊಟ್ಟಿದ್ದೆ. ಕೊನೆಗೆ, ಬರೆಯುವುದೆಲ್ಲಾ ಕನ್ನಡದಲ್ಲಾದ್ದರಿಂದ ಈ ಇಂಗ್ಲೀಷಿನ ಟೈಟಲ್ಲು ಸರಿಹೊಂದುವುದಿಲ್ಲ ಎಂದೆನಿಸಿ, ನವೆಂಬರ್ ಒಂದರಂದು, 'ಮೌನಗಾಳ' ಅಂತ ಮರುನಾಮಕರಣ ಮಾಡಿದೆ.

ಕೃತಜ್ಞತೆ ಹೇಳಬೇಕು. ಓದಿದವರಿಗೆ, ಮೆಚ್ಚಿದವರಿಗೆ, ಪ್ರತಿಕ್ರಿಯಿಸಿದವರಿಗೆ, ತಿದ್ದಿದವರಿಗೆ, ರೇಗಿದವರಿಗೆ, ಬೈದವರಿಗೆ, ಸಲಹಿದವರಿಗೆ... ಎಲ್ಲರಿಗೂ ಪ್ರೀತಿಯ ಥ್ಯಾಂಕ್ಸ್. ಸ್ಪೆಶಲಿ, ಶ್ರೀನಿಧಿ ಮತ್ತು ಸಿಂಧು ಅಕ್ಕರಿಗೆ ಸಲಹೆ-ಸೂಚನೆ ನೀಡಿದ್ದಕ್ಕೆ; ಸಂದೀಪನಿಗೆ 'ಟೆಕ್ನಿಕಲೀ' ಸಹಾಯ ಮಾಡಿದ್ದಕ್ಕೆ; ದಟ್ಸ್‍ಕನ್ನಡ.ಕಾಂ ನಲ್ಲಿ ನನ್ನ ಬ್ಲಾಗ್ ಬಗ್ಗೆ ಪ್ರಕಟಿಸಿದ್ದಕ್ಕೆ; ಇನ್ನೂ ಕೆಲವರಿಗೆ ವಿಷಯ ಒದಗಿಸಿದ್ದಕ್ಕೆ... ಹಾಗೆಲ್ಲಾ ಹೆಸರು ಹೇಳಲು ಹೊರಡುವುದೇ ತಪ್ಪು ಬಿಡಿ, ಎಲ್ಲರಿಗೂ ಥ್ಯಾಂಕ್ಸ್. ಐದು ಸಾವಿರಕ್ಕೂ ಮಿಕ್ಕಿ ಹಿಟ್ಟು ಬಿದ್ದಿವೆ. ಹೀಗಾಗಿ ಹಿಡಿದ ಮೀನನ್ನು ಕರಿಯಲು ಮಸಾಲೆಗೆ ಬೇರೆ ಹಿಟ್ಟು ತರಲು ನಾನು ಹುಡುಕಬೇಕಿಲ್ಲ; ಇದೇ ಸಾಕು. :)

ಒಂದು ವರ್ಷವಾಗಿದೆ. ಗಾಳಕ್ಕೆ ಹತ್ತತ್ತಿರ ಐವತ್ತು ಮೀನುಗಳು ಸಿಕ್ಕಿವೆ. ಕೊಳದಲ್ಲಿ ಇನ್ನೂ ಸಾಕಷ್ಟು ಮೀನುಗಳು ಇರುವ ವರ್ತಮಾನವಿದೆ. ಯಾವಾಗ ಗಾಳಕ್ಕೆ ಸಿಲುಕುತ್ತವೋ ಗೊತ್ತಿಲ್ಲ. ಗಾಳದ ತುದಿಗೆ ಸಿಕ್ಕಿಸಲು ಹುಳಗಳೂ ನಾ ಮುಂದು ತಾ ಮುಂದು ಅಂತ ಕಾಯುತ್ತಿವೆ. ಅತ್ಯುತ್ಸಾಹದಿಂದ ಕೊಳಕ್ಕಿಳಿಯುತ್ತಿವೆ. ಗಾಳಗಾರಿಕೆಗೆ ಜೊತೆಗಾರರಾಗಿ ನೀವಿದ್ದೀರಿ. ಇನ್ನೇನು ಬೇಕು ಹೇಳಿ? ಈ ಸಹಚರ್ಯಕ್ಕೆ, ಪ್ರೀತಿಗೆ ಋಣಿ.

ಗಾಳಗಾರಿಕೆ ಕಂಟಿನ್ಯೂಸ್...!

25 comments:

ShivaPadil said...

ಮೊದಲ ಹುಟ್ಟುಹಬ್ಬದ ಶುಭಾಶಯಗಳು. ಬರವಣಿಗೆ ನಿರ೦ತರವಾಗಿರಲಿ. all the best.

Shiv said...

ಸುಶ್ರುತ,

ಮೊದಲನೇಯ ಹುಟ್ಟುಹಬ್ಬದ ಅಭಿನಂದನೆಗಳು ಕಣೋ !
ಮೌನಗಾಳದಲ್ಲಿ ನನಗೆ ತುಂಬಾ ನೆನಪಾಗೋದು ನಿನ್ನ ಅಟೋಗ್ರಾಪ್ ಕತೆ, ಅದ್ಯಾವುದೋ ಇರುವೆಯ ಬಗ್ಗೆ ಕವನ, ಹೊಸವರ್ಷದಲ್ಲಿ ಬರೆದ ಲೇಖನ, ಹಾಗೇ ಅದೇರೋ ಕೆನ್ನೆಗೆ ಚಡ್ಡಿ ಒದ್ದೆಯಾಗುವಂತೆ ಹೊಡೆದಿದ್ದು..ಮೊನ್ನೆ ಮೊನ್ನೆ ಪಾತರಗಿತ್ತಿ ಮುತ್ತು ಅಂತಾ ಗಾಸಿಪ್..ಹೀಗೆ ಮೌನಗಾಳ ಗಾಳ ಚೆನ್ನಾಗಿ ಹಾಕ್ತಾನೆ ಇದೆ..

ಹೀಗೆ ಇರಲಿ ಗಾಳ..ಹೀಗೆ ಬೀಳಲಿ ಮೀನುಗಳು..
ಗಾಳ ಹಾಕಿ ಕುಂತಾಗ ಜೊತೆಗೆ ಹೇಗಿದ್ದರೂ ನಾವಿದ್ದೀವಿ !

ಶ್ರೀನಿಧಿ.ಡಿ.ಎಸ್ said...

ಹಿಂಗೇ ಬರೀತಾ ಇದು ಸುಶ್, ಇನ್ನೂ ಏನೇನೋ ಆಗಬೇಕು ನೀನು!!

ನಿನ್ನ ಬರಹದ ಏರಿಳಿತಗಳನ್ನ ಗಮನಿಸುತ್ತ ಬಂದಿದ್ದೇನೆ..
ತಲೆ ತಿನ್ನುತ್ತ "ಇದು ಸರಿ, ಇದು ತಪ್ಪು" ಅಂತ ನಾನು ಹೇಳಿದ್ದೆಲ್ಲ ಕೇಳಿಸಿಕೊಳ್ಳುತ್ತ ಬಂದಿದ್ದೀಯಾ....

ತಲೆ ತಿನ್ನುವಿಕೆ ಕಂಟಿನ್ಯೂವಸ್!:)
ಶುಭವಾಗಲಿ!

suptadeepti said...

ಜನುಮದಿನದ ಹಾರೈಕೆಗಳು.

ವರ್ಷದಲ್ಲಿ ಐವತ್ತೆರಡು ವಾರಗಳು, ನಿನಗೆ ಹಾಗಾದ್ರೆ, ವಾರಕ್ಕೊಂದು ಮೀನೂ ಸಿಗಲಿಲ್ಲವೆ? ಒಳ್ಳೆ ಹುಳಗಳನ್ನು ಹಾಕಿ ಇನ್ನೂ ಚೆನ್ನಾಗಿ ಗಾಳ ಹಾಕು ಮರೀ, ಮೀನಿನ ಊಟಕ್ಕೆ ನಾವೂ ಬರುತ್ತೇವೆ.

subbu said...

happy birthday sushrtaaaaaa...... continueeee

Ranju said...

Happy birth day to you "ಮೌನ ಗಾಳ"

ಸುಶ್ರುತ,
ನಂಗೆ ಇಷ್ಟ ಆಗಿದ್ದು ಆಮೃತ ಲವ್ ಲೆಟರ್......
ಕೀಪ್ ಇಟ್ ಅಪ್...
ಹಿಂಗೆ ಬರಿತಾ ಇರು....
ನಿನ್ನ ಮೌನಗಾಳಕ್ಕೆ ನೂರು ವರುಷ ಆಯಸ್ಸು ಇರಲಿ ಅಂತಾ ಹಾರೈಸ್ತಿ. All the best.

SHREE said...

ಬ್ಲಾಗ್ ಜನ್ಮದಿನದ ಶುಭಾಶಯಗಳು... ಪಾರ್ಟಿ ಎಲ್ಲಿ ಅಂತ ಹೇಳಿದ್ರೆ ಖಂಡಿತವಾಗಿ ಬರ್ತೀವಿ... ಹಾಗೇ ಸದ್ಯದಲ್ಲೆ ಬರಲಿರುವ ನಿಮ್ಮ ಜನ್ಮದಿನಕ್ಕೂ ಪಾರ್ಟಿ ಕೊಡಲು ಸಿದ್ಧರಾಗಿರಿ.. :) ಬರವಣಿಗೆ ನಿರಂತರವಾಗಿ ಸಾಗಲಿ...!!

ಹಷ೯ ಚರಿತ್ರೆ said...

ಹುಟ್ಟು ಹಬ್ಬದ ಶುಭಾಷಯಗಳು......

ಅಸತ್ಯ ಅನ್ವೇಷಿ said...

ಜನ್ಮದಿನದ ಶುಭಹಾರೈಕೆಗಳು.

ಮೀನು ಸಿಕ್ಕ ಕೂಡಲೇ ತಿಳಿಸಿ, ಊಟಕ್ಕೆ ಬರುತ್ತೇವೆ. :)

M G Harish said...

ಶುಭಾಷಯಗಳು

Srini said...

ಶುಭಾಶಯಗಳು ಮಾರಾಯ. ಸಾಕಷ್ಟು ಹಿಟ್ಟು ಬಿದ್ದಿದೆ ಎಂದು ಸುಮ್ಮನಾಗಿಬಿಟ್ಟೀಯೆ!! ಮೀನುಗಳು ಗಾಳಕ್ಕೆ ಸಿಕ್ಕಷ್ಟೂ ಕಡಿಮೆಯೇ. ಇನ್ನೂ ನೂರಾರು ಮೀನುಗಳು ಸಿಕ್ಕಲಿ, ಸುಂದರ ಮಷೀರ್ ಮೀನುಗಳೇ ಗಾಳಕ್ಕೆ ಸಿಕ್ಕಲಿ ಎಂದು ಹಾರೈಸುತ್ತೇನೆ. :)

ಸುಶ್ರುತ ದೊಡ್ಡೇರಿ said...

ಶುಭಾಶಯ ಹೇಳಿದ ಎಲ್ಲರಿಗೂ ಧನ್ಯವಾದಗಳು.

ಪಾರ್ಟಿ ಕೇಳಿದವರಿಗೆ- ಅಲ್ಲಾರೀ, ಇಷ್ಟೆಲ್ಲಾ ಮೀನು ಹಿಡ್ಕೊಟ್ಟಿದೀನಿ. ಇನ್ನೂ ಬೇಕು ಅಂದ್ರೆ ಹೆಂಗೆ..?!

ತಲೆ ತಿನ್ನುವಿಕೆ ಮುಂದುವರೆಸಲಣಿಯಾದವರಿಗೆ - ತಿನ್ನಿಸಿಕೊಳ್ಳಲು ನಾನೂ ರೆಡಿ ಬಾಸ್!

ವಾರಕ್ಕೊಂದು ಮೀನಿನ ಲೆಕ್ಕ ಕೇಳಿದವರಿಗೆ - ಇದರಲ್ಲಿ ನನ್ನ ತಪ್ಪೇನೂ ಇಲ್ಲ. ಎಲ್ಲಾ ಬೀಳಿಸಿಕೊಳ್ಳದ ಗಾಳದ ತುದಿಯ ಹುಳುವಿನದು; ಬೀಳದ ಮೀನಿನದು. :)

ಮತ್ತೊಮ್ಮೆ ಎಲ್ಲರಿಗೂ ಥ್ಯಾಂಕ್ಸ್. ಹೀಗೇ ಪ್ರೋತ್ಸಾಹಿಸುತ್ತಿರಿ. ಹೀಗೇ ಪ್ರತಿಕ್ರಿಯಿಸುತ್ತಿರಿ. ಹೀಗೇ ಸಲಹೆ ನೀಡುತ್ತಿರಿ. ಹೀಗೇ ಬರುತ್ತಿರಿ.

ಥ್ಯಾಂಕ್ಸ್. :)

poornima said...

ಸುಶೃತ,
ನಿಮ್ಮ ಬ್ಲಾಗಿನ ಮೊದಲ ಹುಟ್ಟುಹಬ್ಬದ ಅಭಿನಂದನೆಗಳು. ನಿಮ್ಮ ಶೈಲಿ ಬಲು ಸೊಗಸು. ಹೊಸವರ್ಷದ ಆಚರಣೆ, ಆಟೋಗ್ರಾಫ್ ( ನನ್ನ ಗೆಳತಿಯೊಬ್ಬಳು ಆಟೋಗ್ರಾಫ್ ಭ್ರಾಟೆಯಲ್ಲಿ "ಕಾಗೆ ಕಪ್ಪಗಾಗುವ ತನಕ, ಹಾಲು ಬೆಳ್ಳಗಾಗುವ ತನಕ , ನನ್ನ ನಿನ್ನ ಸ್ನೇಹವಿರಲಿ"! ಎಂದು ಬರೆದಿದ್ದಳು. ವಿಪರ್ಯಾಸವೆಂದರೆ ಈಗಲೂ , ಇದೇ ಕಾರಣಕ್ಕಾಗಿ, ಅವಳ ನೆನಪಿದೆ ), ಅಡಿಕೆ ಕೊಯ್ಲು.... ಮುಂತಾದ ಎಲ್ಲಾ ಲೇಖನಗಳೂ ಬಹಳ ಆಪ್ತವಾಗಿವೆ. ನನ್ನ ಅಚ್ಚುಮೆಚ್ಚಿನ ನಿಮ್ಮದೇ ಸಾಲು "ಸುಂದರ ಕೈಬರಹದ ಊರನ್ನು ಬಿಟ್ಟು ’ಪ್ರಿಂಟೆಡ್’ ಬೆಂಗಳೂರು....." ಹೀಗೇ ಬರೆಯುತ್ತಿರಿ.

ಮನಸ್ವಿನಿ said...

ಸುಶ್ರುತ,

ಶುಭಾಶಯಗಳು. ಪಾರ್ಟಿ ಬೇಕು..ನಾನು ಶುದ್ಧ ಸಸ್ಯಾಹಾರಿ, ಮೀನು ತಿನ್ನೊಲ್ಲ ..ಯಾವಾಗ ? ಎಲ್ಲಿ ?ಪಾರ್ಟಿ ಅಂತ ಮುಂಚೆನೆ ತಿಳ್ಸ ಬಿಡು...

mysoorininda said...

ಪ್ರಿಯ ಸುಶ್ರುತ,
ಮೊದಲ ವರ್ಷದ ಶುಭ ಹಾರೈಕೆಗಳು.
ನಿಮ್ಮಿಂದಾಗಿ ನನ್ನ ಬ್ಲಾಗಿಗೂ ಒಂದಿಷ್ಟು ನೆಂಟರು ಬರುತ್ತಿರುತ್ತಾರೆ
ಹೀಗೇ ಬರೆಯುತ್ತಿರಿ
ರಶೀದ್.

ರಾಜೇಶ್ ನಾಯ್ಕ said...

ಇನ್ನಷ್ಟು ಉತ್ತಮ ಬರಹಗಳು ನಿಮ್ಮಿಂದ ಬರಲಿ....ಬರೀತಾ ಇರಿ. ಒಂದನೇ ಜನ್ಮದಿನದ ಶುಭಾಶಯಗಳು.

ಶ್ಯಾಮಾ said...

ಬ್ಲಾಗಿನ ಮೊದಲ ಜನ್ಮ ದಿನದ ಶುಭಾಶಯಗಳು.... ಹೀಗೆ ಬರೀತಾ ಇರಿ...........

VENU VINOD said...

ಹ್ವಾಯ್ ಕಂಗ್ರಾಟ್ಸ್ ಮಾರಾಯಾ,
ಗಾಳಹಾಕುವ ಮಹತ್ಕಾರ್ಯ ಚಿರಾಯುವಾಗಲಿ

ಸಿಂಧು Sindhu said...

ಪ್ರೀತಿಯ ಸು,

ತಡವಾಗಿ ಆದರೆ ಹಾರ್ದಿಕವಾಗಿ "ಮೌನಗಾಳ"ಕ್ಕೆ ಹುಟ್ಟುಹಬ್ಬದ ಶುಭಾಶಯಗಳು. ಬೀದಿಸಾಲಿನಲ್ಲಿ ಮಾರಾಟಕ್ಕೆ ಕಾದ ಗಣಪತಿಗಳ ಬರಹದಿಂದ ನಿನ್ನ ಬ್ಲಾಗ್ ಓದಲು ಶುರುಮಾಡಿದ್ದೆ.. ತುಂಬ ಆಪ್ತವಾಗಿದ್ದು ಅಡಿಕೆಯ ಕೊಯ್ಲು. ಎಲ್ಲ ಬರಹಗಳೂ ಮನಸ್ಸಿಗೆ ಮುದ ನೀಡಿವೆ. ಆಗಾಗ ಚಿಂತನೆಗೆ ಹಚ್ಚಿವೆ, ಅಲ್ಲಲ್ಲಿ ವಿಮರ್ಶೆಯ ಕಚಗುಳಿ ಕೂಡಾ..
ಮನದ ಕೊಳದಲ್ಲಿ ಅಲ್ಲಲ್ಲಿಯೇ ತಿರುಗುತ್ತಾ, ಸ್ವಲ್ಪ ಬೆಳಕಿಗೆ ಬಂದಂತೆ ಮಾಡಿ ಅಲ್ಲೆ, ಮರೆವಿನ ಕಲ್ಲು, ಬಂಡೆಗಳ ಕತ್ತಲಲ್ಲಿ ಅಡಗುವ ನೂರಾರು ಬಣ್ಣಗಳ ಮರಿ ಮೀನುಗಳಂತ ಭಾವನೆಗಳಿಗೆ, ನಿನ್ನ ಅಕ್ಷರದ ಕಾಳು ಊಡಿಸಿ ಬೆಳಸಿ, ಲಹರಿಯ ಗಾಳದಲ್ಲಿ ಹಿಡಿದು ಹಿಡಿದು ಬರೆದಿದ್ದೀಯ.. ಹಿಡಿದ ಮೀನುಗಳನ್ನೆಲ್ಲ ಜೀವಂತವಾಗಿ (ಒಂದನ್ನೂ ಕರಿಯದೆ, ಮೀನು ಸಾರು ಮಾಡದೆ)ನಮ್ಮ ಭಾವದ ಕೊಳಕ್ಕೆ ಆಪ್ತತೆಯ ದೋಣಿ(ಒಗದಿ)ಯಲ್ಲಿ ತೇಲಿಬಿಟ್ಟಿದ್ದೀಯೆ. ಮುತ್ತುಗಳು ಸಿಕ್ಕಲಿ, ಕ್ಷಣಕ್ಷಣಕ್ಕೂ ಹೊಸತಾದ ಬದುಕಿನ ಆಳದ ರಹಸ್ಯಗಳು ನಿನ್ನ ಲೇಖನಿಯೊಡನೆ ಪಿಸುಮಾತಾಡಿ ಹಗುರಾಗಲಿ. ನಿನ್ನ ಕೊಳದ ಸುತ್ತ ನೂರಾರು ಹೂಗಿಡಗಳು ಹಬ್ಬಿ, ಮೌನದಿ ಗಾಳವಿಡಿದು ಕೂತಾಗ, ತಂಪು ಗಂಧ ನೇವರಿಸಲಿ. ಒಳ್ಳೆಯದಾಗಲಿ.

ಪ್ರೀತಿಯಿರಲಿ,
ಅಕ್ಕ

Shivakumara said...

ಮಸ್ತಪ್ಪಾ ಸುಶ್ರುತ್! ನಿನಗೂ ನಿನ್ನ ಬ್ಲಾಗೆಂಬ ಮೀನುಬುಟ್ಟಿಗೂ (ಅಥವಾ ಅದು ಬಣ್ಣ ಬಣ್ಣದ ಗೋಲ್ಡ್ ಫಿಶ್-ಗಳಿರೋ ಅಕ್ವೇರಿಯಮ್ಮೋ?) ಹುಟ್ಟುಹಬ್ಬದ ಶುಭಾಶಯಗಳು...

ಬರವಣಿಗೆಗೆ ಬರೆಯುವ ಮನಸ್ಸಿದ್ದರೆ ಸಾಲದು, ತಿಣುಕುವ ಮನಸ್ಸು, ತೆರೆದುಕೊಳ್ಳುವ ಮನಸ್ಸು, ಧ್ಯಾನಿಸುವ ಮನಸ್ಸು, ಎಲ್ಲವನ್ನೂ ಬಿಟ್ಟು ಇನ್ನೊಂದೇನನ್ನೋ ಯೋಚಿಸುವ ಮನಸ್ಸು ಇರಬೇಕು... ಇದೆಲ್ಲವೂ ನಿನ್ನಲ್ಲಿದೆ... ಅದಕ್ಕೆ ಸಾಕ್ಷಿಯಾಗಿ ನಿನ್ನ ಬ್ಲಾಗಿದೆ, ಅದಕ್ಕೆ ಸಕ್ಸಸ್-ಫುಲ್ಲಾಗಿ ಒಂದು ವರ್ಷವಾಗಿದೆ. ಹೀಗೇ ವರ್ಷಗಳುರುಳಲಿ (ನಾನು ಹೆಳದಿದ್ದರೂ ಉರುಳುತ್ತವಲ್ಲವೇ?), ಪ್ರತಿವರ್ಷಕ್ಕೂ ನಿನ್ನ ಗಾಳಕ್ಕೆ ಹೊಸ ಹೊಸ ಮೀನುಗಳು ಸಿಕ್ಕು ನಿನ್ನ ಅಕ್ವೇರಿಯಮ್ಮು ಇನ್ನೂ ವರ್ಣರಂಜಿತವಾಗಲಿ ಅಂತಾ..

ಹಾರೈಕೆಗಳೊಂದಿಗೆ,

ಶಿವಕುಮಾರ ಕೆ. ಎಸ್.

ಸುಶ್ರುತ ದೊಡ್ಡೇರಿ said...

poornima,

ಮೆಚ್ಚುಗೆಗೆ ಥ್ಯಾಂಕ್ಸ್. ಹಹ್ಹ, ಆಟೋಗ್ರಾಫೇ ಹಾಗೇನೋ? ತೆರೆದು ನೋಡಿದರೆ ನೆನಪಿನ ಬುತ್ತಿ ಬಿಚ್ಚಿದಂತೆ... ಆ ಮಧುರ ದಿನಗಳು ಕಾಡುತ್ತವೆ ತುಂಬ...

ಮನಸ್ವಿನಿ,

ನಾನೂ ಶುದ್ಧ ಸಸ್ಯಾಹಾರಿ. ನನಗೆ ಮೀನು ಅದರ ಆಟ, ಓಟ, ಮೈಮಾಟಗಳಿಂದಾಗಿ ಇಷ್ಟ . ನನ್ನ ಬ್ಲಾಗನ್ನು ಬುಟ್ಟಿ ಎಂದದ್ದೇ ತಪ್ಪಿರಬಹುದು. ಸಿಂಧು ಅಕ್ಕ ಅಂದಂತೆ, ಅಕ್ವೇರಿಯಂ ಅಂದಿದ್ದರೇ ಹೆಚ್ಚು ಸರಿಯಾಗುತ್ತಿತ್ತು. ಯಾಕೇಂದ್ರೆ, ಮೀನು ಸಾಯುವುದು ನನಗಿಷ್ಟವಿಲ್ಲ. ಮೀನಿನ ಬಗ್ಗೆ, ನಂಜುಳ್ಳೆಯ ಬಗ್ಗೆ ನಂಗೆ ಕರುಣೆಯಿದೆ. ಹಿಡಿದ ಮೀನನ್ನು ಹಾಗೇ ಮತ್ತೊಂದು ಕೊಳಕ್ಕೆ ಹಾಕೋದು ನಂಗಿಷ್ಟ. ಹಾಗೇ ಹಾಕಿದ್ದೇನೆ ಕೂಡ. ಅದನ್ನ ನೋಡಿ ನೀವು ಖುಷಿ ಪಟ್ಟಿದ್ದೀರ. ಮೀನಿಗೂ, ಗಾಳಕ್ಕೂ, ಗಾಳದ ತುದಿಯ ಹುಳಕ್ಕೂ, ಅಕ್ವೇರಿಯಂಗೂ, ನನಗೂ ಸಾರ್ಥಕ ಮನೋಭಾವ. ಇದಿಷ್ಟೂ ಸಮರ್ಥನೆಯಾಯ್ತು; ಪಾರ್ಟಿ ಎಲ್ಲಿ ಅಂದ್ಯಾ? ಕೊಡ್ತಿ.. ಕಮ್ ಇಂಡಿಯಾ.. ಊರಿಗೆ ಕರ್ಕಂಡ್ ಹೋಗಿ ಅಮ್ಮನ ಹತ್ರ ಒಳ್ಳೇ ಅಡುಗೆ ಮಾಡ್ಸಿ ಹಾಕ್ತಿ :)


ರಶೀದ್ ಸರ್,

ನಿಮ್ಮಂಥವರ ಬರಹಗಳನ್ನು ಓದಿ ಓದಿಯೇ ಈಗ ಇಷ್ಟು ಬರೆಯುವಂಥವನಾಗಿದ್ದೇನೆ ನಾನು. ಅದಕ್ಕೆ ಕೃತಜ್ಞತೆ ಹೇಳಲು ನಿಮ್ಮ ಬ್ಲಾಗಿನ ಲಿಂಕು ಹಾಕಿಕೊಂಡದ್ದು ಏನೂ ಅಲ್ಲ ಬಿಡಿ. ಥ್ಯಾಂಕ್ಸ್ ಸರ್...


ರಾಜೇಶ್, ಶ್ಯಾಮಾ, ವೇಣು:

ಶುಭಾಷಯಕ್ಕೆ ತುಂಬಾ ಥ್ಯಾಂಕ್ಸ್ ...


ಸಿಂಧು,

ನನ್ನ ಬರಹಗಳ ಬಲು ದೊಡ್ಡ ಸಪೋರ್ಟ್ ನೀನು. ಬಹುಶಃ ಮೊದ ಮೊದಲ ಪೋಸ್ಟುಗಳಿಗೆ ನೀನು 'ಚನಾಗಿದ್ದು' ಅಂತ ಮುದ್ರೆ ಒತ್ತದೇ ಹೋಗಿದ್ದರೆ ನಾನು ಇಲ್ಲಿಯವರೆಗೆ ಬರವಣಿಗೆ ಮುಂದುವರೆಸುತ್ತಿದ್ದೆನೋ ಇಲ್ಲವೋ. ಥ್ಯಾಂಕ್ಸ್ ಫಾರ್ ಆಲ್ ದಟ್...

>> ಮನದ ಕೊಳದಲ್ಲಿ ಅಲ್ಲಲ್ಲಿಯೇ ತಿರುಗುತ್ತಾ,... -ಬರಹ ಸಾಯ್ಲಿ, ಅಂಥದ್ದೊಂದು ಕಾಮೆಂಟ್ ಬರಿಯಲಿಕ್ಕೆ ನನಗೆ ಸಾಧ್ಯವಾ ಅಂತ ಯೋಚಿಸ್ತಾ ಇದೀನಿ... ತುಂಬಾ ಥ್ಯಾಂಕ್ಸ್ ಅಕ್ಕಾ...

ಪ್ರೀತಿಯಿರಲಿ.. ಹಾಂ, ಈ ಪ್ರೀತಿ ಹೀಗೇ ಇರಲಿ.. :)

shivakumar,

ನಿಮ್ಮ ಹರಟೆ ಸೀರಿಸ್ ಓದಿ, 'ಶ್ರಾವ್ಯಾ'ಳ ಕಣ್ಣಲ್ಲಿ ನನ್ನ ಬಿಂಬ ಕಂಡು, ಸಮುದ್ರದ ಅಲೆಗಳ ಮರ್ಮರದಲ್ಲಿ ತೇಲಿ, 'ಭಯ'ಪೀಡಿತನಾಗಿ... ಓಹೋ.. ಏನೇನಾಯ್ತು ನಿಮ್ಮ ಜೊತೆ ಹರಟುತ್ತಾ... ಇದರ ಮಧ್ಯೆ ನನ್ನ ಬ್ಲಾಗಿಗೆ ವರ್ಷವಾಗಿದ್ದು.. ನಿಮ್ಮ ಅನೇಕ ಬರಹಗಳು ನನಗೆ ಸ್ಪೂರ್ತಿಯಾಗಿದ್ದು ಸುಳ್ಳಲ್ಲ.. ನಾನು ನಿಮ್ಮ ಬರಹ ಓದಿ, ನೀವು ನನ್ನ ಬರಹ ಓದಿ, ಅಲ್ಲಲ್ಲೇ ಹಿಗ್ಗಿ, ಈ ಪುಟ್ಟ ಪ್ರಪಂಚದಲ್ಲಿ ಎಷ್ಟು ಚಂದ ಒಂದಾಗಿದ್ದೇವಲ್ಲಾ...? ಈ ಖುಷಿ ಹೀಗೇ ಇರಲಿ... ಥ್ಯಾಂಕ್ಸ್ ಶಿವು...

yajnesh said...

ಸುಶ್ರುತ,

ಜನ್ಮದಿನದ ಶುಭಾಶಯಗಳು

Madhooo said...

Congratulations. I have linked to your site from mine.

ಸುಶ್ರುತ ದೊಡ್ಡೇರಿ said...

@ yajnesh,

ಧನ್ಯವಾದಗಳು ಹುಡುಕಾಡುವವರಿಗೆ.. :)

@ madhoo

Thank you very much. Oh.. cool..

Satish said...

ಅಭಿನಂದನೆಗಳು - ಗಾಳವನ್ನು ಹೀಗೇ ಬೀಸುತ್ತಿರಿ!