ಇತ್ತೀಚೆಗೆ ಪದೇ- ಪದೇ ನಾನು ನೆನಪು ಮಾಡಿಕೊಳ್ಳುತ್ತಿದ್ದ ಸೂರಿ, ಇವತ್ತು ಸ್ಯಾಂಕಿ ಕೆರೆಯ ದಂಡೆಯ ಮೇಲೆ ಅಚಾನಕ್ಕಾಗಿ ಸಿಕ್ಕಿಬಿಟ್ಟ. ಸ್ವಲ್ಪ ದಪ್ಪಗಾಗಿದ್ದ. ಅಥವಾ ಹೊಟ್ಟೆ ಬಂದಿದ್ದರಿಂದ ಹಾಗೆ ಕಾಣಿಸುತ್ತಿದ್ದ. ತನ್ನ ಕಿರುಬೆರಳ ಕುಣಿಕೆಯೊಂದಿಕೆ ತಳುಕು ಹಾಕಿಕೊಂಡಿದ್ದ ಮತ್ತೊಂದು ಕಿರುಬೆರಳ ಜೀವವನ್ನು 'ಮೈ ವೈಫ್' ಎಂದು ಹೇಳಿ ಪರಿಚಯಿಸಿಕೊಟ್ಟ. ನನಗೆ ಅಚ್ಚರಿಯಾದರೂ ತೋರಗೊಡದೆ, ಕುಲುಕಲೆಂದು ಕೈಚಾಚುವಷ್ಟರಲ್ಲಿ ಆಕೆ 'ನಮಸ್ತೇ' ಎಂದು ಕೈಮುಗಿದಳು. ನಾನೂ ಕೈಯನ್ನು ಹಿಂದೆಳೆದುಕೊಂಡು, ಮತ್ತೊಂದು ಕೈಯೊಂದಿಗೆ ಜೋಡಿಸಿ ನಮಸ್ಕರಿಸಿ ಮುಗುಳ್ನಕ್ಕೆ. 'ಏನೋ ಇದೆಲ್ಲಾ?' ಎನ್ನುವಂತೆ ನೋಡಿದ ನನ್ನ ಬಳಿ ಸೂರಿ 'ಲೈಫು ಮ್ಯಾನ್.. ಅಡ್ಜಸ್ಟ್‌ಮೆಂಟ್ಸ್ ಮಾಡ್ಕೋಬೇಕಲ್ಲ!' ಎಂದು ನಕ್ಕ. ಮಳೆ ಬರುವಂತಿದ್ದರಿಂದ, ಐದಾರು ನಿಮಿಷ ಮಾತಾಡಿ, ಕಾರ್ಡಿಗಾಗಿ ಪರ್ಸ್ ತೆಗೆದು ಹುಡುಕಿ, ಅದು ಖಾಲಿಯಾಗಿದ್ದರಿಂದ, ತನ್ನ ಹೊಸ ಮೊಬೈಲ್ ನಂಬರ್ ಕೊಟ್ಟು, ನನ್ನಿಂದ ಮಿಸ್-ಕಾಲ್ ಕೊಡಿಸಿಕೊಂಡು, ಹೆಸರು ಫೀಡ್ ಮಾಡಿ ಸೇವ್ ಮಾಡಿಕೊಂಡು, ಮುಂದಿನ ಭಾನುವಾರ ತಮ್ಮ ಮನೆಗೆ ಬರಲೇಬೇಕೆಂದು ನನ್ನನ್ನು ಕರೆದು, ಸೂರಿ ಹೆಂಡತಿಯೊಂದಿಗೆ ಹೊರಟು ಹೋದ.
ಸ್ಯಾಂಕಿಯ ವಿಶಾಲ ನೀರ ಮೇಲ್ಮೈಯಿಂದ ಬೀಸಿ ಬರುತ್ತಿದ್ದ ತಂಪು ಗಾಳಿಗೆ ಮೈಯೊಡ್ಡಿ ನಾನು ಸ್ವಲ್ಪ ಹೊತ್ತು ಹಾಗೇ ನಿಂತೆ. ಕೆಲ ಕ್ಷಣಗಳುರುಳಿದ ಮೇಲೆ, ಹತ್ತಿರದ ಬೆಂಚೊಂದರಲ್ಲಿ ಕೂತಿದ್ದ 'ಜೋಡಿಹಕ್ಕಿ'ಗಳಿಗೆ ನನ್ನ ಇರುವಿನಿಂದ ಕಿರಿಕಿರಿ ಆಗುತ್ತಿರುವುದನ್ನು ಗಮನಿಸಿ, ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದೆ. ಮುಂದೆಲ್ಲಾದರೂ ನಿಲ್ಲೋಣವೆಂದು ಹುಡುಕಿದರೆ ಎಲ್ಲ ಬೆಂಚುಗಳಲ್ಲೂ ಜೋಡಿಹಕ್ಕಿಗಳೇ ಇದ್ದವು. ನಾನು ಎಲ್ಲಿ ನಿಂತರೂ ಮತ್ತೊಬ್ಬರಿಗೆ ಕಿರಿಕಿರಿಯೇ ಎಂದೆನಿಸಿ, ಮದುವೆಯಾದ ಹೊಸತರಲ್ಲಿ ನನಗೂ ಹಾಗೇ ಅನ್ನಿಸುತಿತ್ತು ಎಂಬುದನ್ನು ಜ್ಞಾಪಕ ಮಾಡಿಕೊಂಡು, ಪಾರ್ಕುಗಳಿಗೆ ಒಂಟೊಂಟಿ ಬರುವುದಕ್ಕಿಂತ ಅನಾಥ ಭಾವ ಮತ್ತೊಂದಿಲ್ಲ ಎಂದುಕೊಳ್ಳುತ್ತ ಅಲ್ಲಿಂದ ಹೊರಬಿದ್ದು, ಹತ್ತಿರದ ಹೋಟೆಲೊಂದರಲ್ಲಿ ಊಟ ಮಾಡಿಕೊಂಡು ಮನೆಗೆ ಬಂದೆ. ಅಷ್ಟೊತ್ತಿನ ತನಕ ತುಟಿ ಕಚ್ಚಿ ತಡೆದುಕೊಂಡಿದ್ದ ಮೋಡಗಳು ಈಗ ಮಳೆ ಸುರಿಸತೊಡಗಿದವು. ಜತೆಗೇ, ನಾಲ್ಕು ವರ್ಷಗಳ ಹಿಂದಿನ ನನ್ನ ಪೇಯಿಂಗ್ ಗೆಸ್ಟ್ ಹೌಸಿನ ದಿನಗಳು ನೆನಪ ಕೋಶದಿಂದ ಹೊರಬಂದು, ಕಂಪ್ಯೂಟರ್ ಮುಂದೆ ಕೂತ ನನ್ನೆದುರು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡುಬಿಟ್ಟವು.
***
ಹಾಗೆ ಹರಡಿಕೊಂಡ ಚೂರುಗಳಲ್ಲೊಂದು, ನಾನಾಗ ಭೇಟಿ ಮಾಡಿದ ಸೂರಿ. ಸೂರಿ ಎಂದರೆ ಸುರೇಂದ್ರನ್. ಎಂದಿನಂತಹುದೇ ಒಂದು ಇಳಿಸಂಜೆ, ನಾನು ಆಫೀಸಿನಿಂದ ಬಂದು ಪ್ಯಾಂಟ್ ಬಿಚ್ಚಿ ಹಾಕಿ ಬರ್ಮುಡಾ ತೊಟ್ಟುಕೊಳ್ಳುತ್ತಿದ್ದಾಗ ರೂಮಿಗೆ ನುಗ್ಗಿದ ಈತ "ಹಾಯ್, ಐಯಾಮ್ ಸುರೇಂದ್ರನ್" ಎನ್ನುತ್ತಾ ಕೈ ಚಾಚಿದ್ದ. ಒಂದು ಕೈಯಲ್ಲಿ ಬರ್ಮುಡಾದ ಕಸೆ ಹಿಡಿದುಕೊಂಡು ಇನ್ನೊಂದು ಕೈಯನ್ನು ಅವನಿಗೆ ಕೊಟ್ಟು ಕುಲುಕಲು ಬಿಟ್ಟಿದ್ದೆ. "ತುಮಾರಾ ನಾಮ್ ನಹೀ ಬತಾಯಾ?" -ಅವನು ಎಚ್ಚರಿಸಿದ. ನಾನು ಚಡ್ಡಿ ಕಳಚಿ ಬೀಳದಂತೆ ಎಚ್ಚರ ವಹಿಸುವುದರಲ್ಲೇ ಮಗ್ನನಾಗಿದ್ದೆ. "ಓಹ್ ಸಾರಿ! ಐಯಾಮ್ ಅಂಶು. ಅಂಶುಮಂತ್. ಫ್ರಮ್ ಶಿಮೊಗಾ" ಇನ್ನೂ ಅವನ ವಶದಲ್ಲೇ ಇದ್ದ ನನ್ನ ಕೈಯನ್ನು ಬಿಡಿಸಿಕೊಳ್ಳುತ್ತಾ ಹೇಳಿದೆ. "ಶೀಮೋವಾ? ವ್ಹೇರೀಸ್ ದಟ್? ವ್ಹಿಚ್ ಸ್ಟೇಟ್?" -ಕೇಳಿದ. "ನಾಟ್ ಶೀಮೋವಾ ಮ್ಯಾನ್, ಶಿವಮೊಗ್ಗ. ಇಟ್ಸ್ ಇನ್ ಕರ್ನಾಟಕ ಓನ್ಲೀ. ಇನ್ ಫ್ಯಾಕ್ಟ್, ವ್ಹೇರ್ ಆರ್ ಯೂ ಫ್ರಮ್?" ಚಡ್ಡಿ ಹಾಕಿಕೊಂಡಾಗಿತ್ತಾದ್ದರಿಂದ ನಾನೂ ಸ್ವಲ್ಪ ಗಟ್ಟಿಯಾಗೇ ಕೇಳಿದೆ. "ಓಹ್.. ಕರ್ನಾಟಕ ಇಟ್ಸೆಲ್ಫ್? ಹಾಗಾದ್ರೆ ನಾನು ನಿಂಜೊತೆ ಕನ್ನಡದಲ್ಲೇ ಮಾತಾಡ್ಬಹುದು. ನಾನು ಕೇರಳದಿಂದ ಬಂದಿರೋದು.. ಕ್ಯಾಲಿಕಟ್ ಗೊತ್ತಾ? ಹಾಂ, ಕ್ಯಾಲಿಕಟ್ಟಿನ ಪುಟ್ಟ ಹಳ್ಳಿಯೊಂದರಿಂದ ಬಂದಿದ್ದೇನೆ.. ಇನ್ಶುರೆನ್ಸ್, ಮ್ಯೂಚುವಲ್ ಫಂಡ್ಸ್ ಏಜೆನ್ಸಿ ಮಾಡ್ತೇನೆ.. ಊರಲ್ಲಿ ನಮ್ಮ ಪಕ್ಕದ ಮನೆಯವರು ಕನ್ನಡದವರು.. ಹೀಗಾಗಿ, ನಂಗೂ ಕನ್ನಡ ಅಭ್ಯಾಸ ಆಗಿದೆ!" -ಅವನು ಹೇಳಿದ. "ಕೂಲ್! ನಾನು ಸಿ.ಎ. ಮಾಡ್ತಿದ್ದೇನೆ. ಇಂಟರ್‌ಮೀಡಿಯೇಟ್ ಮುಗಿದಿದೆ. ಈಗ ಫೈನಲ್" -ಅಷ್ಟಂದು ನಾನು ಕಾಲು ತೊಳೆಯಲೆಂದು ಬಾತ್ ರೂಮ್ ಕಡೆ ಹೊರಟೆ.
ನಾನು ಈ ಪೀಜಿಯಲ್ಲಿ ವಾಸಿಸುತ್ತಾ ಹತ್ತತ್ತಿರ ಮೂರು ತಿಂಗಳಾಗಿತ್ತು. ಈ ಮೂರು ತಿಂಗಳ ಅವಧಿಯಲ್ಲಿ ನಾನು ಕಲಿತಿದ್ದ ದೊಡ್ಡ ಪಾಠವೆಂದರೆ ಯಾರನ್ನೂ ಹೆಚ್ಚಿಗೆ ಹಚ್ಚಿಕೊಳ್ಳಲು ಹೋಗಬಾರದು ಎಂಬುದು. ದಿನಾ ಒಬ್ಬೊಬ್ಬರು ಹೊಸಬರು ಬರುತ್ತಿರುತ್ತಾರೆ, ಹೋಗುತ್ತಿರುತ್ತಾರೆ. ಬೆಂಗಳೂರಿನ ಪ್ರತಿ ಗಲ್ಲಿಗೊಂದರಂತೆ ತೆರೆದು ನಿಂತಿರುವ ಪೇಯಿಂಗ್‌ಗೆಸ್ಟ್ ಹೌಸ್‌ಗಳೆಂಬ ಈ ವಸತಿ ಗೃಹಗಳು ಬ್ಯಾಚುಲರುಗಳ ಪಾಲಿಗೆ ಸ್ವರ್ಗವೇ ಆಗಿದ್ದರೂ ಇವು ವ್ಯವಹರಿಸುವ ರೀತಿ, ಇಲ್ಲಿನ ವ್ಯವಸ್ಥೆಗಳಂತೂ ನರಕ ಸದೃಶ. ಯಾರೇ ಬರಲಿ; ಎರಡು ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಕೊಟ್ಟುಬಿಟ್ಟರೆ ಸಾಕು, ಮಾಲೀಕ ಅವರನ್ನು ಒಳಬಿಟ್ಟುಕೊಳ್ಳುತ್ತಾನೆ. ಬಂದ ವ್ಯಕ್ತಿಗೆ ಒಂದು ಕಪಾಟು ಅಥವಾ ಗಾಡ್ರೇಜಿನಲ್ಲಿ ಒಂದು ಖಾನೆ, ಮಲಗಿಕೊಳ್ಳಲಿಕ್ಕೆ ಒಂದು ಮಂಚ ಗೊತ್ತುಮಾಡಿಕೊಟ್ಟು ಹೋಗಿಬಿಡುತ್ತಾನೆ ಮಾಲೀಕ. ಹಾಗೆ ಬಂದ ಪ್ರತಿ ವ್ಯಕ್ತಿಯೂ ತನ್ನ ಏರ್‌ಬ್ಯಾಗಿನಲ್ಲಿನ ಬಟ್ಟೆಗಳನ್ನು ತೆಗೆದು ಕಪಾಟಿನಲ್ಲಿ ನೀಟಾಗಿ ಹ್ಯಾಂಗರಿಗೆ ನೇತುಹಾಕುತ್ತಾನೆ. ನಂತರ ಆ ಬ್ಯಾಗಿನಿಂದ ಹೊರಬೀಳುತ್ತವೆ ಅವನದೇ ಸೋಪು, ಟೂತ್ ಬ್ರಶ್ಶು, ಪೇಸ್ಟು, ಶ್ಯಾಂಪೂ, ಶೇವಿಂಗ್ ಕಿಟ್ಟು, ಅಮ್ಮ ಕಳುಹಿಸಿಕೊಟ್ಟ ಸಣ್ಣ ಉಪ್ಪಿನಕಾಯಿ ಬಾಟಲಿ, ಪುಟ್ಟ ದೇವರ ಫೋಟೋ... ಪ್ರತಿ ವ್ಯಕ್ತಿಗೂ ಅವನದೇ ದೇವರು, ಜಾತಿ, ಧರ್ಮ, ಭಾಷೆ, ರುಚಿ, ಕೆಲಸ, ಊರ ನೆನಪು, ರಾತ್ರಿಯ ಕನಸಲ್ಲಿ ಬರುವ ಅವನದೇ ಹುಡುಗಿ... ಇಷ್ಟೆಲ್ಲ ಖಾಸಗಿತನ ಇರುವ ಒಬ್ಬ ಬೇರೆಯದೇ ಆದ ವ್ಯಕ್ತಿ ಇಲ್ಲಿ ಹೀಗೆ ಈ ಪೀಜಿಯ ಚಿಕ್ಕ ಜಾಗದಲ್ಲಿ ತನ್ನ ಬದುಕನ್ನು ಪುಟ್ಟದಾಗಿ-ಒಪ್ಪವಾಗಿ ಜೋಡಿಸಿಟ್ಟುಕೊಂಡು ಎಲ್ಲರೊಂದಿಗೆ ಬದುಕಲು ಶುರುಮಾಡುತ್ತಾನೆ.
ನಾನು ಈ ಪೀಜಿಗೆ ಬಂದಾಗ ಇದಿನ್ನೂ ಆಗ ತಾನೇ ಶುರುವಾಗಿದ್ದ ಪೀಜಿಯಾಗಿತ್ತು. ಎಲ್ಲಾ ಹೊಸದಾಗಿತ್ತು, ಸ್ವಚ್ಚವಾಗಿತ್ತು, ಒಂದಿಬ್ಬರು ಹುಡುಗರು ಮಾತ್ರ ಇದ್ದರು. ನಂತರ ಇದರ ಮಾಲೀಕ ಜನಗಳನ್ನು ತುರುಕುತ್ತಾ ಬಂದ. ಬರುಬರುತ್ತಾ ನನಗೆ ಇದೊಂದು ದನದ ದೊಡ್ಡಿಯಂತೆ ಭಾಸವಾಗತೊಡಗಿತು. ಬರುವವರಿಗೆ ಯಾವ ಕಟ್ಟಳೆಗಳೂ ಇರಲಿಲ್ಲವಾದ್ದರಿಂದ ಕುಡಿದುಕೊಂಡು ಬಂದು ಬಾಗಿಲಲ್ಲಿ ಕಾರಿಕೊಳ್ಳುವವರು, ಮಾತನಾಡಿಸಿದರೆ ಮೈಮೇಲೇ ಬರುವವರು, ರಾತ್ರಿಯಿಡೀ ದೊಡ್ಡದಾಗಿ ಟೀವಿ ಹಾಕಿಕೊಂಡು ಕೂರುವವರು, ಮೊಬೈಲಿನಲ್ಲಿ ಕಿರುಚಾಡುತ್ತಲೇ ಇರುವವರು, ರೌಡಿಗಳು ಎಲ್ಲಾ ಪೀಜಿಯೊಳಗೆ ಸೇರಿಕೊಂಡರು. ಕೆಲಸದವಳು ಬೇರೆ ಪ್ರತಿದಿನ ಬಂದು ಸರಿಯಾಗಿ ಗುಡಿಸಿ ಸ್ವಚ್ಚ ಮಾಡುತ್ತಿರಲಿಲ್ಲ, ಮನೆ ತುಂಬಾ ಕಸ ತುಂಬಿಕೊಂಡಿರುತ್ತಿತ್ತು. ಬಾತ್‌ರೂಮು, ಟಾಯ್ಲೆಟ್ಟುಗಳ ಕಡೆಯಂತೂ ತಲೆ ಹಾಕುವುದಕ್ಕೂ ಹೇಸಿಗೆಯಾಗುವಂತಹ ಪರಿಸ್ಥಿತಿ ಬಂದಮೇಲೆ ನಾನೊಂದು ದಿನ ಮಾಲೀಕರ ಬಳಿ ಜಗಳ ಮಾಡಿಕೊಂಡು ಈ ಪೀಜಿ ಬಿಟ್ಟು, ಬೇರೆ ಏರಿಯಾದಲ್ಲಿ ಒಂದು ಸಿಂಗಲ್ ರೂಮ್ ಬಾಡಿಗೆ ತಗೊಂಡು ಇರತೊಡಗಿದೆ. ನಾನು ಹಾಗೆ ಏಕಾಏಕೀ ಬಿಟ್ಟಿದ್ದರಿಂದ ಅದಾಗಲೇ ಆಪ್ತರಾಗಿದ್ದ ಕೆಲ ರೂಂಮೇಟುಗಳಿಗೆ ಹೇಳಲೂ ಆಗಿರಲಿಲ್ಲ. ಆಮೇಲೂ ಬೇರೆ ಏನೇನೋ ಕೆಲಸಗಳ ಬ್ಯುಸಿಯಲ್ಲಿ ಸಿಲುಕಿಕೊಂಡು ಫೋನ್ ಸಹ ಮಾಡಲಾಗದೇ ಅವರಲ್ಲನೇಕರ ಸಂಪರ್ಕವೇ ಕಡಿದುಹೋಗಿಬಿಟ್ಟಿತು. ಅಕಸ್ಮಾತ್ ಎದುರಿಗೆ ಸಿಕ್ಕಿದರೆ ಕೈಕುಲುಕಿ 'ಏನಪ್ಪಾ.. ನೀವೆಲ್ಲ ದೊಡ್ ಮನುಷ್ಯರಾಗಿಬಿಟ್ಟಿದೀರಿ.. ನಾವೆಲ್ಲ ಎಲ್ಲಿ ಕಾಣ್ತೀವೀ..' ಎಂದೇನೇನೋ ಹೇಳುತ್ತಿದ್ದರು ಅವರು.
ಆದರೆ ಸುರೇಂದ್ರನ್ ಜೊತೆ ನಾನು ಸಂಪರ್ಕದಲ್ಲೇ ಇದ್ದೆ. ಆಗೊಮ್ಮೆ ಈಗೊಮ್ಮೆ ಮಲ್ಲೇಶ್ವರಂ ಏಯ್ತ್ ಕ್ರಾಸಿನಲ್ಲಿ 'ಹಕ್ಕಿ'ಗಳನ್ನು ನೋಡುತ್ತಾ ನಾನು ನಡೆಯುತ್ತಿರಬೇಕಾದರೆ ಸೂರಿ ಒಡಾಯುತ್ತಿದ್ದ. 'ಏಯ್ ಸ್ಲೋ ಮ್ಯಾನ್.. ಎದುರುಗಡೆ ನೋಡ್ಕೊಂಡು ನಡಿ..!' ಅಂತಿದ್ದ. ನಗುತ್ತಿದ್ದೆವು. ಆಮೇಲೆ ಜನತಾ ಹೋಟೆಲಿನಲ್ಲೊಂದು ಮಸಾಲೆ ದೋಸೆ-ಕಾಫಿ ಅಥವಾ ಆಶಾ ಸ್ವೀಟ್ಸ್‌ನಲ್ಲಿ ಡ್ರೈ ಜಾಮೂನ್-ಬಾದಾಮ್ ಮಿಲ್ಕ್ ಆಗುತ್ತಿತ್ತು. ಬ್ಯುಸಿನೆಸ್ ಹೇಗೆ ನಡೀತಿದೆ, ಕಂಪನಿ ಬದಲಿಸಬೇಕೆಂದಿರುವುದು, ಸೆನ್‌ಸೆಕ್ಸು, ನೋಡಿದ ಹೊಸ ಸಿನೆಮಾ, ಸಿ.ಎ. ಫೈನಲ್ ಎಕ್ಸಾಮಿಗೆ ನನ್ನ ತಯಾರಿ... ಮಾತಿಗೆ ಆಹಾರವಾಗುತ್ತಿದ್ದ ಕೆಲ ವಿಷಯಗಳು. ಸೂರಿಯ ನಿಷ್ಕಲ್ಮಶ ನಗೆ ನನಗೆ ತುಂಬಾ ಇಷ್ಟ. ಅದಕ್ಕೇ, ನನಗೆ ಸೂರಿ ಇಷ್ಟ.
ಪೀಜಿಗೆ ಬರುತ್ತಿದ್ದ ಹತ್ತಾರು ಹುಡುಗರ ನಡುವೆ ಸೂರಿ ನನಗೆ ಹತ್ತಿರಾಗುವುದಕ್ಕೆಕಾರಣ ಆ ದಿನ ನಡೆದ ಘಟನೆಯೇ ಇರಬೇಕು. ನನ್ನ ರೂಮಿನಲ್ಲಿ ಮತ್ತೊಬ್ಬ ಹುಡುಗನಿದ್ದ: ರೆಡ್ಡಿ ಅಂತ. ಅವನ ಪೂರ್ತಿ ಹೆಸರು ಸೋಮಶೇಖರ ರೆಡ್ಡಿಯೋ ಏನೋ ಇರಬೇಕು. ಆದರೆ ನಾವೆಲ್ಲ ಅವನನ್ನು ಕರೆಯುತ್ತಿದ್ದುದು ಬರೀ ರೆಡ್ಡಿ ಅಂತ. ಬಳ್ಳಾರಿಯವನು. ರಾಜಕೀಯ ಪಡಸಾಲೆಗೆ ಸೇರಿದವನು. ತನ್ನ ಕ್ಷೇತ್ರದ ಯಾವುದೋ ಎಂಪಿ ತನಗೆ 'ಭಾಳಾ ಕ್ಲೋಸು' ಅಂತಲೂ, ಅವರು ತಮ್ಮ ಕ್ವಾರ್ಟರ್ಸಿನಲ್ಲಿಯೇ ಇರಲು ಹೇಳುತ್ತಾರಾದರೂ ತಾನು ಬೇಡವೆಂದು ಇಲ್ಲಿದ್ದೇನೆಂದೂ ಹೇಳುತ್ತಿದ್ದ. ನಮ್ಮ ಅರಿವಿನಾಚೆಗೇ ಉಳಿಯುವ ವಿಧಾನಸೌಧದ ಒಳಗಿನ ಅದೆಷ್ಟೋ ವರ್ಣರಂಜಿತ ಸುದ್ದಿಗಳನ್ನು ನಿದ್ರೆ ಬರುವವರೆಗೂ ಹೇಳುತ್ತಿದ್ದ. "ಪಾರ್ಟನರಾ, ನಿಮ್ಮುನ್ ಒಂದ್ಸಲ ವಿಧಾನಸೌಧಕ್ ಕರ್ಕೊಂಡ್ ಹೋಗ್ತೇನ್ರೀ.. ನಿಮ್ ಮಂತ್ರಿಗ್ಳು ನಿಮ್ಮೂರಿಗೆ ಬಂದಾಗ ಇರ್ತಾರಲಾ, ಅದಕ್ಕೆ ಪೂರಾ ಡಿಫರೆಂಟಾಗಿರೋ ಅದೇ ಮಂತ್ರಿಗ್ಳನ್ನ ನೀವಿಲ್ಲಿ ಕಾಣ್ಬಹುದು..!" ಅಂತಿದ್ದ.
ಇಂಥಾ ರೆಡ್ಡಿಗೆ ಆಗಾಗ ಕುಡಿಯುವ ಖಯಾಲಿ ಇತ್ತು. ಒಳ್ಳೆಯ ರೆಸ್ಟೊರೆಂಟಿಗೆ ಹೋಗಿ, ತುಂಬಾ ಪ್ಯಾಶನೇಟ್ ಆಗಿ ಕುಡಿಯುತ್ತಿದ್ದ. ಆವತ್ತೊಂದು ದಿನ ದಾರಿಯಲ್ಲಿ ಸಿಕ್ಕ ಸೂರಿಯನ್ನೂ ಕರೆದುಕೊಂಡು ಹೋಗಿದ್ದಾನೆ. ಸೂರಿ ಕುಡಿಯುವವನಲ್ಲ. ಆದರೆ 'ಪಿಯೋ ಪಿಯೋ.. ಕುಚ್ ನಹೀ ಹೋಗಾ..' ಎಂದ ರೆಡ್ಡಿಯ ಒತ್ತಾಯಕ್ಕೆ ಮಣಿದಿದ್ದಾನೆ. ಆ ರೆಸ್ಟೊರೆಂಟಿನ ಮಬ್ಬುಗತ್ತಲೆಯ ಭೂಮಿಕೆ, ತೇಲಿ ಬರುತ್ತಿದ್ದ ಬೆಳ್ಳಿತೆರೆಯ ಹಾಡು, ಗಾಳಿಯಲ್ಲಿ ಲೀನವಾಗುತ್ತಿದ್ದ ಸಿಗರೇಟಿನ ಹೊಗೆ ಸೂರಿಯನ್ನು ಭಾವನಾಲೋಕದಲ್ಲಿ ತೇಲುವಂತೆ ಮಾಡುವಲ್ಲಿ, ನೆನಪ ಬಂಡಿಹಾದಿಯಲ್ಲಿ ಹಿಂದಕ್ಕೊಯ್ಯುವಲ್ಲಿ ಸಂಪೂರ್ಣ ಯಶಸ್ವಿಯಾಗಿವೆ.
ರಾತ್ರಿ ಹನ್ನೊಂದೂವರೆ ಆಗುತ್ತಿತ್ತು. ಯಾವುದೋ ಪುಸ್ತಕ ಹಿಡಿದು ಕೂತಿದ್ದೆ. "ಪಾರ್ಟನರಾ.. ಹೊರಾಗ್ ಬರ್ರೀ.. ಈಗ ಸುರೇಂದ್ರನ್ ಹಾಡ್ತಾರಾ.. ಇಲ್ಲೇ ಹಾಲಿಗ್ ಬರ್ರೀ.." ರೆಡ್ಡಿ ರೂಮಿನ ಬಾಗಿಲು ತಟ್ಟಿ ಕರೆಯುತ್ತಿದ್ದ. ಸೀರಿಯಸ್ಸಾಗಿ ಓದುತ್ತಿದ್ದೆನಾದಾರೂ ಒಲ್ಲದ ಮನಸ್ಸಿನಿಂದಲೇ ಹೊರಬಂದೆ.
ಸೂರಿ ಕುಡಿದಿದ್ದ. ನನ್ನ ಮುಖ ಕಂಡವನೇ ವಿಚಿತ್ರವಾಗಿ ನಕ್ಕ. 'ಬರ್ರೀ' 'ಬರ್ರೀ' ಎನ್ನುತ್ತಾ ರೆಡ್ಡಿ ಎಲ್ಲ ರೂಮುಗಳ ಬಾಗಿಲು ತಟ್ಟುತ್ತಿದ್ದ. ಪೀಜಿಯಲ್ಲಿದ್ದ ಹನ್ನೆರಡು ಚಿಲ್ಲರೆ ಹುಡುಗರೆಲ್ಲ ತಾವು ಧರಿಸಿದ್ದ ಚಡ್ಡಿ, ಲುಂಗಿ, ನೈಟ್ ಟ್ರಾಕುಗಳ ಮೇಲೇ, ಕಿವಿಗೆ ಸಿಕ್ಕಿಸಿಕೊಂಡಿದ್ದ ಎಫ್ಫೆಮ್ಮುಗಳ ಸಮೇತ ಹೊರಬಂದರು. ಹಾಲಿನಲ್ಲಿ ಉರಿಯುತ್ತಿದ್ದ ಟೀವಿಯ ದನಿಯನ್ನು ಮ್ಯೂಟ್ ಮಾಡಲಾಯಿತು. ಸೂರಿಯನ್ನು ಹಾಲಿನ ಮಧ್ಯದಲ್ಲಿದ್ದ ಸೋಫಾದ ಮೇಲೆ ಕೂರಿಸಲಾಯಿತು. ಎಲ್ಲರೂ ಸೂರಿಯನ್ನೇ ನೋಡುತ್ತಿದ್ದರು. "ಹೂಂ, ಶುರೂ ಕರೋ!" ರೆಡ್ಡಿ ಚಲಾವಣೆ ಕೊಟ್ಟ. ಸೂರಿ ಹಾಡತೊಡಗಿದ:
ಮೇರೇ ನಯನಾ, ಸಾವನ್ ಭಾದೋ
ಫಿರ್ ಭೀ ಮೇರಾ ಮನ್ ಪ್ಯಾಸಾ...
ಹೊರಗೆ ನಿಶ್ಯಬ್ದವನ್ನಾಳುತ್ತಾ ಧೋ ಸುರಿಯುತ್ತಿದ್ದ ಕತ್ತಲೆ. ಒಳಗೆ ಕಿಶೋರ್! ಸೂರಿ ಜೋಶಿನಲ್ಲಿದ್ದ. ಪೀಜಿಯ ಅಷ್ಟೂ ಹುಡುಗರೂ ಅಲ್ಲಾಡದೇ ನಿಂತು ಆಲಿಸುತ್ತಿದ್ದರು. ಸ್ಟ್ಯಾಂಡಿನ ಫೋಟೋದಲ್ಲಿದ್ದ ಹಸನ್ಮುಖಿ ದೇವರು, ಗೂಡಿನಲ್ಲಿ ಮುಚ್ಚಳ ತೆರೆಯುವುದನ್ನೇ ಕಾಯುತಿದ್ದ ಟಿಫಿನ್ ಕ್ಯಾರಿಯರ್, ಮೂಲೆಯಲ್ಲಿ ಸುಸ್ತಾರಿಸಿಕೊಳ್ಳುತ್ತಿದ್ದ ಚಪ್ಪಲಿಗಳು, ಮ್ಯೂಟಾಗಿದ್ದ ಟೀವಿಯಲ್ಲಿ ಚಲಿಸುತ್ತಿದ್ದ ಚಿತ್ರಗಳು... ಎಲ್ಲವೂ ಹಾಡು ಕೇಳಿದವು. ಸೂರಿ ದನಿಯೇರಿಸಿದಾಗೆಲ್ಲ ಹುಡುಗರು 'ವ್ಹಾವ್ ವ್ಹಾವ್!' ಎನ್ನುತ್ತಿದ್ದರು. ಸೂರಿ ಇಲ್ಲಿರಲೇ ಇಲ್ಲ. ನಾವೂ!
ಹಾಡು ಮುಗಿಯುತ್ತಿದ್ದಂತೆ ಟೆರೇಸು ಹಾರಿ ಹೋಗುವಂತೆ ಚಪ್ಪಾಳೆ. ನಾನೂ ಚಪ್ಪಾಳೆ ತಟ್ಟಿದೆ. ಸೂರಿಗೆ ಇಷ್ಟೊಳ್ಳೆ ಕಂಠವಿರಬಹುದೆಂದು ನಾನು ಊಹಿಸಿರಲೂ ಇಲ್ಲ. 'ಬಹುತ್ ಅಛ್ಛಾ ಗಾಯಾ..' 'ಸುರೇಂದ್ರನ್, ಒನ್ ಮೋರ್' ಇತ್ಯಾದಿ ಪ್ರಶಂಸೆ, ಮೊರೆ, ಗದ್ದಲ. ಸೂರಿ ಕರಗಿಹೋಗಿದ್ದ. ಕಳೆದುಹೋಗಿದ್ದ. ತನಗೆ ಇದ್ದಕ್ಕಿದ್ದಂತೆ ಲಭಿಸಿದ ಜನಪ್ರಿಯತೆ, ಬೇಡಿಕೆ, ಕ್ಷಣದಲ್ಲಿ ತಾನು ಪೀಜಿಯ ಹುಡುಗರ ಕಣ್ಣಲ್ಲಿ ಹೀರೋ ಆಗಿಹೋದ ವಿಸ್ಮಯಕ್ಕೆ ಅವನ ಹೃದಯ ಅವನನ್ನು ಮತ್ತಷ್ಟು ಭಾವುಕನನ್ನಾಗಿ ಮಾಡಿಬಿಟ್ಟಿತ್ತು. ಸೂರಿ ಹಾಡುವುದರ ಬದಲು ಅಳಲಿಕ್ಕೆ ಶುರುಮಾಡಿದ.
"ಯು ಆರ್ ಮೈ ಗಾಡ್ಸ್.. ಐ ಲವ್ ಯು ಆಲ್.." ಎಂದೇನೇನೋ ಅನ್ನುತ್ತಾ ಬಿಕ್ಕತೊಡಗಿದ. "ಸ್ವಲ್ಪ ಕುಡಿಸೇನ್ರೀ.. ಅದ್ಕೇ ಇಷ್ಟು ಟೈಟ್ ಆಗ್ಯಾನ..!" ರೆಡ್ಡಿ ನನ್ನ ಕಿವಿಯಲ್ಲಿ ಉಸುರಿದ. ಎಲ್ಲರೂ ಸೂರಿಯ ಬೆನ್ನು ತಟ್ಟಿ 'ಏ ಕಮಾನ್ ಸುರೇಂದ್ರನ್.. ಇಟ್ಸ್ ಓಕೇ.. ಚಲೋ, ಏನಾದ್ರೂ ತಿಂದು ಮಲ್ಕೋ' ಎನ್ನುತ್ತಾ ಸಮಾಧಾನ ಮಾಡಲು ಯತ್ನಿಸುತ್ತಿದ್ದರು. ಸೂರಿಯ ಅಳು ನಿಲ್ಲಲೇ ಇಲ್ಲ. ಬದಲಿಗೆ, ಆ ಅಳುವಿನೊಂದಿಗೆ, ಹಳೆಯ ಮಧುರ ದಿನಗಳ ವಿಷಾದದ ಕತೆ, ಸೂರಿಯ ಬಾಯಿಂದ ಬಿಕ್ಕು ಬಿಕ್ಕಾಗಿ ಹೊರಬರತೊಡಗಿತು.
ಸೂರಿ, ಕೇರಳದ ಕ್ಯಾಲಿಕಟ್ ಜಿಲ್ಲೆಯ ತುಷಾರಗಿರಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದವನು. ಅಪ್ಪನನ್ನು ನೋಡಿದ ನೆನಪಿಲ್ಲ. ಇವನಿಗೆ ವರುಷ ಮೂರಾಗುವುದರೊಳಗೇ ಸಾಬೂನು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆತ ದುರಂತವೊಂದರಲ್ಲಿ ಕೊನೆಯುಸಿರೆಳೆದಿದ್ದ. ಅಮ್ಮನ ಆರೈಕೆಯಲ್ಲೇ ಅಕ್ಕನೊಂದಿಗೆ ಆಟವಾಡುತ್ತಾ ಬೆಳೆದವನು ಸೂರಿ. ತುಷಾರಗಿರಿಯಲ್ಲಿ ಒಂದು ಜಲಾಪಾತವಿದೆ. ಅಷ್ಟೇನು ದೊಡ್ಡದಲ್ಲದಿದ್ದರೂ ತಕ್ಕ ಮಟ್ಟಿಗೆ ಜನಪ್ರಿಯವಾಗಿರುವ ಜಲಪಾತ ಅದು. ಮನೆಯಲ್ಲಿ ತೀರಾ ಬಡತನವೇನು ಇರಲಿಲ್ಲ. ಅಪ್ಪ ಸತ್ತಮೇಲೆ, ತುಷಾರಗಿರಿಗೆ ಬರುವ ಪ್ರವಾಸಿಗರಿಗಾಗಿ ಮನೆಯಲ್ಲೇ ಒಂದು ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾಳೆ ಅಮ್ಮ. ಕಾರ್ಖಾನೆಯಿಂದ ಗಂಡನ ಹೆಸರಲ್ಲಿ ಬರುತ್ತಿದ್ದ ಹಣ ಮತ್ತು ಈ ಅಂಗಡಿಯಿಂದ ಬರುತ್ತಿದ್ದ ಅಷ್ಟಿಷ್ಟು ಲಾಭಗಳಿಂದ ಅಮ್ಮ ಸಲೀಸಾಗಿಯೇ ಸಂಸಾರವನ್ನು ತೂಗಿಸುತ್ತಿದ್ದಳು. ಹುಡುಗರನ್ನು ಶಾಲೆಗೆ ಕಳುಹಿಸುತ್ತಿದ್ದಳು. ಈ ಅಕ್ಕ-ತಮ್ಮ ಶಾಲೆಯಿಂದ ಬಂದೊಡನೆ ಪಕ್ಕದ ಮನೆಗೆ ಟೀವಿ ನೋಡಲು ಹೋಗುತ್ತಿದ್ದುದಂತೆ. ಅಕ್ಕನಿಗೆ ಹಾಡುಗಳು ಜಾಸ್ತಿ ಇರುವ ಸಿನೆಮಾ ಇಷ್ಟವಾದರೆ ತಮ್ಮನಿಗೆ ಫೈಟಿಂಗ್ ಇರುವ ಸಿನೆಮಾ. ಪ್ರತಿರಾತ್ರಿ ನಿದ್ರೆ ಬರುವವರೆಗೂ ಅಕ್ಕ-ತಮ್ಮ ಅಂತ್ಯಾಕ್ಷರೀ ಆಡುತ್ತಿದ್ದರಂತೆ. ಅಕ್ಕನಿಗೆ ಎಷ್ಟು ಹಾಡು ಬರುತ್ತಿದ್ದವು...! ಅಕ್ಕ ಹಾಕಿದ ಸವಾಲಿಗೆ ತಮ್ಮನಿಗೆ ಹಾಡು ತಿಳಿಯದೇ 'ಸೋತೆ' ಎಂದು ಒಪ್ಪಿಕೊಳ್ಳುವಂತಹ ಸಂದರ್ಭ ಬಂದಾಗ ಅಡುಗೆ ಮಾಡುತ್ತಿರುತ್ತಿದ್ದ ಅಮ್ಮ ಹಾಡು ಹೇಳಿಕೊಡುತ್ತಿದ್ದರಂತೆ. ಅವರು ಯಾವಾಗಲೂ ಮಗನ ಪರ. ಅಕ್ಕ ಅದಕ್ಕೇ ಸಿಟ್ಟಾಗಿ ಅಮ್ಮನ ಬಳಿ ಜಗಳಕ್ಕೆ ಹೋಗುತ್ತಿದ್ದುದಂತೆ. ಆಗ ಅಮ್ಮ ಅವಳಿಗೆ ಸಮಾಧಾನ ಮಾಡಿ, ಮಕ್ಕಳಿಬ್ಬರಿಗೂ ಹಾಲು ಕೊಟ್ಟು ಮಲಗಿಸುತ್ತಿದ್ದುದಂತೆ.
ಸೂರಿಗೊಬ್ಬ ಪ್ರೇಯಸಿಯಿದ್ದಳು. ತುಷಾರಗಿರಿ ಹತ್ತಿರದ ತಾಮರಶ್ಶೇರಿ ಎಂಬ ಊರಿನವಳು. ಡಿಗ್ರಿ ಓದುತ್ತಿದ್ದಾಗಿನ ಕ್ಲಾಸ್‌ಮೇಟು. ಅವಳನ್ನು ಹೋಲಿಸಲು ಹೊಸ ಉಪಮೆಗಳೂ ಇಲ್ಲ, ಹಳೆಯದನ್ನೇ ಬಳಸಲು ನನಗೆ ಇಷ್ಟವಿಲ್ಲ; ಅಷ್ಟು ಚೆನ್ನಾಗಿದ್ದಳಂತೆ ಆಕೆ! ಅವಳು ತುಂಬಾ ಕೀಟಲೆ ಮಾಡುವ, ಮಾತುಕೋರ ಹುಡುಗಿ. ಆಕೆಯ ಕಣ್ಣಲ್ಲೊಂದು ಕ್ರಿಯಾಶೀಲತೆಯ ಹೊಳಪಿತ್ತಂತೆ, ಝಳಪಿತ್ತಂತೆ. ಆಕೆಗೆ ತಾನೊಬ್ಬ ಮಾಡೆಲ್ ಆಗಬೇಕೆಂಬ ಆಸೆ ಇತ್ತಂತೆ. 'ಈ ಪ್ರಪಂಚವನ್ನೆಲ್ಲ ಒಮ್ಮೆ ಬೈಕಲ್ಲಿ ಸುತ್ತಿಬರಬೇಕು. ಬದುಕಿನಲ್ಲಿ ಥ್ರಿಲ್ ಇರಬೇಕು ಕಣೋ..' ಎನ್ನುತ್ತಿದ್ದಳಂತೆ. ಆದರೆ ಸೂರಿ ತುಂಬಾ ಮುಗ್ಧ, ಸಭ್ಯ ಸ್ವಭಾವದ, ಮೌನವನ್ನೇ ನೆಚ್ಚಿಕೊಂಡ ವ್ಯಕ್ತಿ. ಇಂಥವನ ಪ್ರೀತಿಯನ್ನು ಆ ಹುಡುಗಿ ಹೇಗೆ ಒಪ್ಪಿಕೊಂಡಳು?
ಸೂರಿಯ ಪ್ರಕಾರ, ಆಕೆ ಅವನ ಮುಗ್ಧತೆಯನ್ನು ನೋಡಿಯೇ ಒಪ್ಪಿಕೊಂಡಳು. ಸೂರಿ ಪ್ರಪೋಸ್ ಮಾಡಿದಾಗ ಅವನ ಕಣ್ಣಲ್ಲಿದ್ದ ನಿರ್ಮಲ ಪ್ರೀತಿ, 'ಹುಡುಗೀ ದಯವಿಟ್ಟು ನೀನು ನನ್ನ ಪ್ರೀತಿಯನ್ನು ಒಪ್ಪಿಕೋ... ಇಲ್ಲವೆನ್ನಬೇಡ' ಎಂಬ ಯಾಚನೆಯನ್ನು ತಿರಸ್ಕರಿಸಲಾಗದೇ ಒಪ್ಪಿಕೊಂಡಳು. ಸೂರಿಯ ಒಳ್ಳೆಯತನ, ನಿಷ್ಠೆ, ಕಪಟವೆಂದರೇನೆಂಬುದನ್ನೇ ಅರಿಯದ ಅವನ ಮನಸು ಮತ್ತು ಅವನಿಗೆ ತನ್ನೆಡೆಗಿದ್ದ ಆರಾಧನೆಯಂತಹ ಪ್ರೀತಿ ಎಲ್ಲಾ ಅವಳಿಗೂ ಇಷ್ಟವಾಗುತ್ತಿದ್ದವು.
"ಆದರೆ ಈ ಒಳ್ಳೆಯತನ, ಮೃದುತ್ವ, ಮುಗ್ಧತೆ ಎಲ್ಲಾ ಸ್ವಲ್ಪ ದಿನಕ್ಕೇ ಆಕೆಗೆ ಬೇಸರ ಉಂಟುಮಾಡ್ತು. ನಾವೂ ಎಲ್ಲರಂತೆ ಮದುವೆ ಆಗಿ, ಮಕ್ಕಳನ್ನು ಮಾಡಿಕೊಂಡು, ನಂತರ ಅವರು ಶಾಲೆಯಲ್ಲಿ ಮೇಡಂ ಹೇಳಿಕೊಟ್ಟದ್ದನ್ನೆಲ್ಲಾ ಚಾಚೂ ತಪ್ಪದೆ ನಮ್ಮೆದುರು ಒಪ್ಪಿಸುವಾಗ ಅವರ ಸಿಂಬಳ ಒರೆಸುತ್ತಾ ಉಜ್ವಲ ಭವಿಷ್ಯದ ಕನಸನ್ನು ಕಾಣುವುದು -ಎಲ್ಲಾ ಅವಳ ಪ್ರಕಾರ ಸಿಲ್ಲಿ ಅಂತೆ, ಸ್ಟುಪಿಡ್ ಅಂತೆ. ಅದೊಂದು ದಿನ ಆಕೆ ತನಗೆ ಟೀವಿ ಚಾನೆಲ್ಲೊಂದರಲ್ಲಿ ನಿರೂಪಕಿಯಾಗಲು ಕರೆ ಬಂದಿದೆಯೆಂದೂ, ತಾನು ಹೈದರಾಬಾದಿಗೆ ಮೂರು ತಿಂಗಳ ತರಬೇತಿಗಾಗಿ ಹೋಗುತ್ತಿರುವುದಾಗಿಯೂ ಹೇಳಿ ಟಾಟಾ ಮಾಡಿ ಹೋಗಿಬಿಟ್ಟಳು. ಆಮೇಲೆ ಅವಳ ಬದುಕೇ ಬದಲಾಗಿಬಿಟ್ಟಿತು. ತುಷಾರಗಿರಿ-ತಾಮರಶ್ಶೇರಿಯಂತಹ ಪುಟ್ಟ ಪರಿಸರದಲ್ಲಿ ಬದುಕಿದ್ದ ಅವಳಿಗೆ, ಹೈದರಾಬಾದು ಪ್ರಪಂಚದ ವೈಶಾಲ್ಯತೆಯನ್ನು ಪರಿಚಯ ಮಾಡಿಸಿಕೊಟ್ಟಿತು. ಪ್ರಪಂಚ ವಿಶಾಲವಾಗಿದೆ ಎಂದಾದಾಗ ಸೂರಿಯಂತಹ ಒಬ್ಬ ಸಾಮಾನ್ಯ ಹಳ್ಳಿಯ ಹುಡುಗ, ಮುಂದೆ ಏನೋ ಡಿಗ್ರಿ-ಪಗ್ರಿ ಮಾಡಿಕೊಂಡು ಸಣ್ಣದೊಂದು ಕೆಲಸ ಹಿಡಿದು ಹೊಟ್ಟೆ ಹೊರೆದುಕೊಳ್ಳಲಿರುವ ಹುಡುಗ, ಎಲ್ಲೋ ಒಂದೆರಡು ವರ್ಷ ಇಷ್ಟದಿಂದ ಜತೆಗೆ ಓಡಾಡಿಕೊಂಡಿದ್ದ ಹುಡುಗ, ಸಾಧಾರಣವಾಗಿಯೇ ಕ್ಷುಲ್ಲಕವಾಗಿ ಕಾಣುತ್ತಾನೆ. ಹುಡುಗಿ ನನ್ನೊಂದಿಗಿನ ಸಂಬಂಧವನ್ನು ಕಡಿದುಕೊಂಡಳು. 'ಪ್ರೀತಿ-ಪ್ರೇಮ-ಮದುವೆಗಿಂತ ದೊಡ್ಡದಾದ್ದು ಈ ಪ್ರಪಂಚದಲ್ಲಿ ತುಂಬಾ ಇದೆ ಕಣೋ ಸುರೇನ್.. ಎಕ್ಸ್‌ಪ್ಯಾಂಡ್ ಯುವರ್ ವ್ಯೂ..' ಎಂದೆಲ್ಲ ಉಪದೇಶ ಮಾಡಿದಳು. ಇರಬಹುದು ಪ್ರಪಂಚದಲ್ಲಿ ಪ್ರೀತಿಗಿಂತ ಮಿಗಿಲಾದ್ದು; ಆದರೆ ಆಕೆಯನ್ನು ಪ್ರಪಂಚಕ್ಕಿಂತಲೂ ಮಿಗಿಲಾಗಿ ಪ್ರೀತಿಸ್ತಿದ್ದ ನಾನು ಮಾತ್ರ ಛಿದ್ರವಾಗಿಹೋದೆ" -ಸೂರಿ ಅಲವತ್ತುಕೊಂಡ.
ಸೂರಿಯ ಪ್ರಲಾಪನೆಯಂತಹ ಕತೆಯನ್ನು ಕೇಳುತ್ತಿದ್ದ ಪೀಜಿಯ ಹುಡುಗರು ಸ್ವಲ್ಪ ಹೊತ್ತಿನ ಬಳಿಕ ಆಕಳಿಸುತ್ತಾ ನಿದ್ರೆ ಬರುತ್ತಿದೆಯೆಂದು ಒಬ್ಬೊಬ್ಬರೇ ರೂಮು ಸೇರಿ ಬಾಗಿಲು ಹಾಕಿಕೊಂಡರು. ಕುಡಿದಿದ್ದ ರೆಡ್ಡಿಯೂ ಸದ್ದು ಮಾಡದೇ ಹೋಗಿ ಮಲಗಿಕೊಂಡ. ಕೊನೆಗೆ ನಾನೊಬ್ಬನೇ ಉಳಿದಿದ್ದರಿಂದ ಅನಿವಾರ್ಯವಾಗಿ, ಮತ್ತು ಇಂತಹ ಸಂದರ್ಭಗಳಲ್ಲಿ 'ಜಾರಿಕೊಳ್ಳುವ ನಾಜೂಕು' ಅರಿಯದ ನಾನು, ಯಾವಾಗಲೂ ಆಗುವಂತೆ ಈಗಲೂ ಸಿಲುಕಿಕೊಂಡೆ. ಸೂರಿಯ ಕತೆ ಮುಗಿಯುವವರೆಗೂ ಪಕ್ಕದಲ್ಲೇ ಕೂತೆ.
ಡಿಗ್ರಿ ಮುಗಿಸಿದ ಸೂರಿ ದುಡಿಮೆಗೊಂದು ಕೆಲಸವನ್ನರಸಿಕೊಂಡು ಬೆಂಗಳೂರಿಗೆ ಬಂದ. ಸ್ಟಾಕ್ ಬ್ರೋಕರಿಂಗ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಇನ್ಶುರೆನ್ಸ್ ಏಜೆಂಟಾದ. ಮ್ಯೂಚುವಲ್ ಫಂಡ್‌ಗಳನ್ನು ಡೀಲ್ ಮಾಡಿದ. ಏನೇನೋ ಮಾಡಿದ, ನಾನಾ ವಿಧದಲ್ಲಿ ದುಡಿದ. 'ಮನೆಗೇನು ಹಣ ಕಳುಹಿಸುವುದು ಬೇಡ, ನೀನು ನಿನ್ನ ಕಾಲ ಮೇಲೆ ನಿಂತುಕೋ ಸಾಕು' ಎಂದು ಅಮ್ಮ ಹೇಳಿಬಿಟ್ಟಿದ್ದಳು. "ನಾನೀಗ ದುಡೀತಿದೀನಿ. ದುಡ್ಡು ಮಾಡೋದು ಹೇಗೇಂತ ಕಲ್ತಿದೀನಿ. ಬೆಂಗಳೂರು ಹೈದರಾಬಾದಿಗಿಂತ ದೊಡ್ಡದಿದೆ. ಪ್ರಪಂಚ ವಿಶಾಲವಾಗಿರುವುದರ ಅರಿವನ್ನು ನನಗೂ ಇದು ಮಾಡಿಕೊಟ್ಟಿದೆ. ದಿನೇದಿನೇ ಬ್ಯುಸಿನೆಸ್ ಮೈಂಡೆಡ್ ಆಗ್ತಿದೀನಿ. ಆದ್ರೆ ಸ್ಟಿಲ್, ನಾನಿನ್ನೂ ಆ ಮುಗ್ಧತೆ, ಒಳ್ಳೆಯತನ, ಸಂಕೋಚದ ಸ್ವಭಾವಗಳಿಂದ ಹೊರಬರಲಿಕ್ಕೆ ಸಾಧ್ಯವಾಗಿಲ್ಲ ಅಂಶುಮಂತ್... ಯು ನೋ ವ್ಹಾಟ್, ಅವಳು ಈಗ ಟೀವಿ ಚಾನೆಲ್ಲೊಂದರಲ್ಲಿ ಆಂಕರ್. ಪ್ರತಿದಿನ ಟೀವಿಯಲ್ಲಿ ಬರ್ತಾಳೆ. ಅದಕ್ಕೇ ನಾನು ಆ ಚಾನೆಲ್ ನೋಡೋದೇ ಇಲ್ಲ. ಆದರೂ ಎಲ್ಲಾದರೂ ಚಾನೆಲ್ ಬದಲಿಸುವಾಗ ಅರೆಕ್ಷಣ ಆಕೆ ಕಾಣಿಸ್ತಾಳೆ. ನನ್ನೆದೆಗೇ, ಯು ನೋ, ನನ್ನ ಎದೆಗೇ ನೈಫ್ ಹಾಕಿದ ಹಾಗೆ ಆಗತ್ತೆ... ನಂಗೆ ಅಳೂನೇ ಬರುತ್ತೆ... ಐ ನೋ, ಆಕೆ ನನಗೆ ಸಿಗೋದಿಲ್ಲ... ಆದ್ರೆ ಅವಳಲ್ದೇ ನಾನು ಬೇರಿನ್ಯಾರ ಜತೆಗೂ ಪ್ರೀತಿ, ಪ್ರೇಮ, ಮದುವೆಗಳ ಕನಸನ್ನ ಕಟ್ಟಲಾರೆ..." ಸೂರಿಯ ಬಿಕ್ಕು ಮುಂದುವರೆದಿತ್ತು.
ಅಷ್ಟೊತ್ತಿಗೆ ಮನೆಯ ಮಾಲೀಕರು ಬಂದು, ರಾತ್ರಿ ಒಂದು ಗಂಟೆಯಾದರೂ ಇನ್ನೂ ಲೈಟು ಉರಿಸಿಕೊಂಡು ಗಲಾಟೆ ಮಾಡುತ್ತಿರುವುದಕ್ಕಾಗಿ ಸರಿಯಾಗಿ ಬೈದರು. ಕೊನೆಗೆ ನಾನು ಹೇಗೆ- ಹೇಗೋ ಮಾಡಿ ಸೂರಿಗೆ ಸಮಾಧಾನ ಮಾಡಿ, ಕ್ಯಾರಿಯರ್‌ನಲ್ಲಿದ್ದ ಊಟ ಮಾಡಿಸಿ, ಮಲಗಿಸಿದೆ.
ನಂತರ ರೂಮಿಗೆ ಹೋಗಿ ಮಲಗಿದರೆ ನನಗೆ ನಿದ್ರೆಯೇ ಬರುತ್ತಿರಲಿಲ್ಲ. ಅಂದು ಸಂಜೆ ಬಂದು ಕೈಕುಲುಕಿ ಪರಿಚಯ ಮಾಡಿಕೊಂಡಿದ್ದ ಸೂರಿ, ಇಂದು ಕುಡಿದು ಬಂದಾಗ ಹೊಸಬನಂತೆ ಕಾಣುತ್ತಿದ್ದ ಸೂರಿ, ಮತ್ತಿನ ಖುಷಿಯಲ್ಲಿ ದನಿಯೆತ್ತಿ ಹಾಡಿದ ಸೂರಿ, ನಂತರ ಹಳೆಯದನ್ನು ನೆನಪಿಸಿಕೊಂಡು ಚಿಕ್ಕ ಮಗುವಿನಂತೆ ಅಳತೊಡಗಿದ್ದ ಸೂರಿ, ಕೇವಲ ಒಂದು ತಿಂಗಳಿಂದ ಪರಿಚಯವಿರುವ ನನ್ನ ಬಳಿ ಅತ್ಯಾಪ್ತ ಗೆಳೆಯನ ಬಳಿ ಹೇಳಿಕೊಳ್ಳುವಂತೆ ತನ್ನ ಕತೆಯನ್ನೆಲ್ಲಾ ಹೇಳಿಕೊಂಡ ಸೂರಿ... ಊಹುಂ, ನನಗೆ ಆ ರಾತ್ರಿ ನಿದ್ರೆ ಬರಲೇ ಇಲ್ಲ...
***
ಹೊರಗೆ ಮಳೆ ನಿಂತಂತೆನಿಸುತ್ತದೆ. ಯಾವುದೋ ಕಂಪನಿಯ ಬ್ಯಾಲೆನ್ಸ್ ಶೀಟ್ ಮಾಡಲು ಕಂಪ್ಯೂಟರ್ ಮುಂದೆ ಕೂತ ನಾನು, ಏನೂ ಮಾಡದೇ ಹಳೆಯ ನೆನಪುಗಳಲ್ಲೇ ಮಗ್ನನಾಗಿ, ಯೋಚಿಸುತ್ತಾ ಅದರಲ್ಲೇ ಮುಳುಗಿಹೋಗಿಬಿಟ್ಟಿದ್ದೆ. ಬಾಗಿಲು ತೆರೆದು ಟೆರೇಸಿಗೆ ಬಂದು ಸಿಗರೇಟ್ ಹಚ್ಚಲು ಕಡ್ಡಿ ಗೀರಿದೆ. ಥೂ ಗಾಳಿ! ಕಡ್ಡಿ ಆರಿಹೋಯಿತು. ನಾನಿನ್ನೂ ಈ ಸಿಗರೇಟು ಸೇದಲು ಶುರು ಮಾಡಿ ಒಂದು ವಾರವಾಯಿತು. 'ಮೊದಮೊದಲು ಹೀಗೆಯೇ. ಆಮೇಲೆ ಫ್ಯಾನಿನ ಗಾಳಿಯ ಕೆಳಗೂ ಹಚ್ಚಬಹುದು!' ಗೆಳೆಯ ಹೇಳಿದ್ದು ನೆನಪಾಗಿ ಮತ್ತೊಂದು ಕಡ್ಡಿ ಗೀರಿದೆ. ಹೊತ್ತಿಕೊಂಡ ಸಿಗರೇಟಿನೊಡಲ ತಂಬಾಕಿನ ಹೊಗೆ ಫಿಲ್ಟರ್ ಆಗಿ ನನ್ನ ಬಾಯಿ, ಗಂಟಲ ನಾಳ, ಶ್ವಾಸಕೋಶವನ್ನೆಲ್ಲ ಆವರಿಸಿ, ಮೈ ಬೆಚ್ಚಗೆ ಮಾಡಿತು. ನೆನಪು, ಯೋಚನೆ ಮುಂದುವರೆಯಿತು.
ಆ ದಿನದ ಆ ಘಟನೆಯ ನಂತರ ಸೂರಿ ನನಗೆ ಆಪ್ತನಾಗಿ ಹೋದ. ನಾನೊಮ್ಮೆ ತುಷಾರಗಿರಿಗೆ ಪ್ರವಾಸ ಹೋಗಿದ್ದಾಗ ಸೂರಿಯ ಮನೆಗೆ ಹೋಗಿ ಬಂದಿದ್ದೆ. ಸೂರಿಯ ಅಮ್ಮ ನನ್ನ ಅಮ್ಮನಂತೆಯೇ ಕಂಡಿದ್ದಳು. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ಸೂರಿಯ ಅಕ್ಕ, ಸೇವಾಸಾಗರದಲ್ಲಿ ಟೀಚರ್ ಆಗಿ ಕೆಲಸ ಮಾಡುವ ನನ್ನ ಅಕ್ಕನಿಗಿಂತ ಭಿನ್ನಳೆಂದು ಎನಿಸಲೇ ಇಲ್ಲ. 'ಈ ವರ್ಷ ಅಕ್ಕನಿಗೆ ಮದುವೆ ಮಾಡ್ಬೇಕು ಮಾರಾಯಾ' ಎಂದು ಸೂರಿ ಹೇಳುವಾಗ, ನನ್ನ ಮೇಲಿರುವ ಜವಾಬ್ದಾರಿಯ ನೆನಪಾಗುತ್ತಿತ್ತು.
ನಾನು ಪೀಜಿ ಬಿಟ್ಟು, ಸೂರಿಯ ಮೊಬೈಲು - ಜತೆಗೇ ನನ್ನ ನಂಬರು ಕಳೆದುಹೋಗಿ, ಅವನು ಬೇರೆ ನಂಬರು ತಗೊಂಡಿದ್ದರಿಂದ ಮತ್ತು, ನನ್ನದೂ ಸಿ.ಎ. ಫೈನಲ್ ಮುಗಿದು, ಭರ್ಜರಿ ಫಲಿತಾಂಶದೊಂದಿಗೇ ಪಾಸಾಗಿ, ನಂತರ ನನ್ನದೇ ಸ್ವಂತ ಆಫೀಸು ಎಂದೆಲ್ಲ ಮಾಡಿಕೊಂಡು, ಬೇರೆ ಕಡೆ ಮನೆ ಮಾಡಿಕೊಂಡು, ಸೂರಿ ಓಡಾಡುವ ಜಾಗಗಳೂ ನನ್ನ ವ್ಯವಹಾರ ಕಕ್ಷೆಯೂ ಬದಲಾಗಿಹೋದ್ದರಿಂದ ನನಗವನ ಸಂಪರ್ಕವೇ ಕಡಿದುಹೋಯಿತು. ಆದರೆ ನನಗೆ 'ಮೇರೇ ನಯನಾ...' ಹಾಡು ಕೇಳಿದಾಗಲೆಲ್ಲ ಸೂರಿ ನೆನಪಾಗುತ್ತಿದ್ದ. ಆ ರಾತ್ರಿ ನೆನಪಾಗುತ್ತಿತ್ತು. ನನ್ನನ್ನು ಪೀಜಿಯ ಆ ದಿನಗಳಿಗೆ ದಿಗ್ಗನೆ ಒಯ್ದು ಬಿಟ್ಟುಬಿಡಬಲ್ಲ ನೌಕೆಯಂತಾಗಿತ್ತು ಆ ಹಾಡು.
ಆಮೇಲೆ ನನ್ನ ಅಕ್ಕನ ಮದುವೆಯಾಯಿತು. ಈಗ ವರುಷದ ಹಿಂದೆ ನನ್ನ ಮದುವೆಯೂ ಆಯಿತು. ನನ್ನ ಹೆಂಡತಿ ಸಾಫ್ಟ್‌ವೇರ್ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಾಳೆ. ಪ್ರತಿದಿನ ಕ್ಯಾಬ್ ಬಂದು ಅವಳನ್ನು ಕರೆದುಕೊಂಡು ಹೋಗುತ್ತದೆ, ವಾಪಸು ತಂದು ಬಿಡುತ್ತದೆ. ಬೆಳಗ್ಗೆ ಏಳಕ್ಕೆ ಹೋದವಳು ರಾತ್ರಿ ಎಂಟರ ಹೊತ್ತಿಗೆ ಸುಸ್ತಾಗಿ ಮನೆ ಸೇರುತ್ತಾಳೆ. ಒಮ್ಮೊಮ್ಮೆ ನೈಟ್ ಶಿಫ್ಟು ಬೇರೆ.
ಅವಳು ಕೆಲಸಕ್ಕೆ ಹೋಗುವುದು ನನ್ನ ಅಭಿಲಾಷೆಯೇನೂ ಆಗಿರಲಿಲ್ಲ. ಅವಳು ಮನೆಯಲ್ಲೇ ಅಡುಗೆ ಮಾಡಿಕೊಂಡು ಇದ್ದರೆ ಸಾಕು ಅಂತ ಇತ್ತು. ಆದರೆ ಆಕೆಯೇ ಇಷ್ಟಪಟ್ಟು, ಹಟ ಮಾಡಿ ಕೆಲಸಕ್ಕೆ ಹೋಗುತ್ತಿದ್ದಳು. 'ಮನೇಲಿ ಕೂತು ಏನ್ ಮಾಡ್ಲಿ? ಓದಿದ್ದೆಲ್ಲ ಸುಮ್ನೇನಾ? ಬರೀ ನಿಂಗೆ ಹೆಂಡತಿಯಾಗಿ ಇರಲಿಕ್ಕಾ?' ಅಂತ ಕೇಳಿದ ದಿನ ಜೀನ್ಸ್ ಪ್ಯಾಂಟು-ಟೈಟ್ ಟಾಪಿನಲ್ಲಿದ್ದ ಅವಳು ನನ್ನೆದುರಿಗೆ ದಿಟ್ಟವಾಗಿ ನಿಂತಿದ್ದಳು. ಅವಳಿಗೆ ಉತ್ತರಿಸಲಾಗದೇ ನಾನು ತತ್ತರಿಸಿದ್ದೆ.
ಅಂದು ನಾನೊಬ್ಬನೇ ಕೂತು ಚಿಂತಿಸಿದ್ದೆ: ಹೆಂಡತಿ ಕೆಲಸಕ್ಕೆ ಹೋಗಬಾರದೆಂದು ನಾನು ಬಯಸುತ್ತಿರುವುದಕ್ಕೆ ಕಾರಣ ನನ್ನ ಪೂರ್ವಾಗ್ರಹ ಪೀಡಿತ ಮನಸ್ಥಿತಿಯೇ ಎಂದು. ನಾನು ಹುಟ್ಟಿದ, ಬೆಳೆದ ಪರಿಸರವೇ ಹಾಗಿತ್ತು. ಅಪ್ಪನಿಲ್ಲದೇ, ಅಮ್ಮನ ಆಜ್ಞಾರಾಧಕನಾಗಿಯೇ ಬೆಳೆದವ ನಾನು. ಮನೆಯಲ್ಲಿ ಬಡತನವಿದ್ದುದರಿಂದ ಮತ್ತು ಸಮಾಜ ನಮ್ಮನ್ನು ಬೇರೆಯೇ ಆಗಿ ನೋಡುತ್ತಿದ್ದುದರಿಂದ ನನಗೆ ಅಷ್ಟಾಗಿ ಜನಗಳ ಸಂಪರ್ಕವಿರಲಿಲ್ಲ. ನನ್ನ ಅಕ್ಕನನ್ನು ನೋಡಿ, ಓಹ್ ಹೆಣ್ಣುಮಕ್ಕಳೆಂದರೆ ಹೀಗಿರಬೇಕು ಎಂದುಕೊಂಡಿದ್ದೆ. ಕಷ್ಟಪಟ್ಟು, ನಿದ್ದೆಗೆಟ್ಟು ಓದಿ ಸಿ.ಎ. ಮುಗಿಸಿಕೊಂಡಿದ್ದೆ. ಸಿ.ಎ.ಯನ್ನು ಮೊದಲನೇ ಪ್ರಯತ್ನದಲ್ಲೇ ಪಾಸ್ ಮಾಡಿಕೊಳ್ಳಲಿಕ್ಕೆ ತಪಸ್ಸು ಬೇಕು. ನಾನದನ್ನು ಸಾಧಿಸಿದ್ದೆ. ಈಗ ನನ್ನದೇ ಆಫೀಸು ಮಾಡಿಕೊಂಡು, ನನಗೂ ಕ್ಲೈಂಟುಗಳು ಸಿಗತೊಡಗಿ, ಬದುಕಿನಲ್ಲಿ ಭದ್ರವಾಗಿ ನೆಲೆಯೂರಿ ನಿಲ್ಲಬೇಕು ಎಂದುಕೊಂಡು, ನಾನೂ ದುಡ್ಡು ಮಾಡತೊಡಗಿ... ಲೆಕ್ಕಾಚಾರದಿಂದ ಬದುಕುವುದೇ ಸರಿ ಎಂದುಕೊಳ್ಳುತ್ತಾ, ಟೂರು, ಪಾರ್ಟಿ, ಸಿನೆಮಾ, ಶಾಪಿಂಗು ಎಂದೆಲ್ಲ ದುಂದು ಮಾಡುವುದು ತಪ್ಪು ಎಂದೆಲ್ಲ ನನಗೆ ನಾನೇ ಅಂದುಕೊಂಡು...
ಆದರೆ ನನ್ನ ಹೆಂಡತಿ ನನಗೆ ತದ್ವಿರುದ್ಧ ಸ್ವಭಾವದವಳು. ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದರೂ, ಒಬ್ಬಳೇ ಮಗಳಾದ್ದರಿಂದ ತಂದೆ-ತಾಯಿ ಅವಳಿಗೆ ಯಾವುದೇ ರೀತಿಯಲ್ಲಿ ಕಡಿವಾಣ ಹಾಕಿರಲಿಲ್ಲ. ಶಾಲೆ, ಕಾಲೇಜು, ಓಡಾಟ, ಓದು, ಖರ್ಚು ಇತ್ಯಾದಿಗಳ್ಯಾವುದಕ್ಕೂ 'ಕೇರ್' ಮಾಡದೇ, ತನಗೆ ಹೇಗೆ ಇಷ್ಟ ಬಂತೋ ಹಾಗೆ ಬದುಕಿದವಳು, ಬೆಳೆದವಳು. ನಮ್ಮ ಮದುವೆಯಾಗಿ ಒಂದು ವಾರವೂ ಕಳೆದಿರಲಿಲ್ಲ; ಅದೊಂದು ರಾತ್ರಿ ಆಕೆ 'ಏಯ್ ನಾವು ನಮ್ ನಮ್ಮ ಫಸ್ಟ್ ಲವ್‌ಗಳ ಬಗ್ಗೆ ಮಾತಾಡೋಣ್ವಾ ಇವತ್ತು?' ಅಂತ ಕೇಳಿದ್ದಳು. ಅವಳಿಗೆ ಹೈಸ್ಕೂಲಿನಲ್ಲೇ ಮೊದಲ ಪ್ರೇಮವಾಗಿತ್ತಂತೆ. ನಂತರ ಕಾಲೇಜಿನಲ್ಲಂತೂ ಇವಳಿಗೆ ಪ್ರಪೋಸ್ ಮಾಡಿದ್ದ ಹುಡುಗರ ಸಂಖ್ಯೆ ಲೆಕ್ಕಕ್ಕಿಲ್ಲವಂತೆ. ಇವಳೂ ಅವರಲ್ಲಿ ಸುಮಾರು ಹುಡುಗರ ಬಳಿ ಫ್ಲರ್ಟ್ ಮಾಡುತ್ತಾ ಸುತ್ತಾಡಿಕೊಂಡಿದ್ದಳಂತೆ. ಆದರೆ ನನ್ನ ಶಾಲೆ-ಕಾಲೇಜಿನ ದಿನಗಳಲ್ಲಿ ಇಂತಹ ಯಾವುದೇ ಅನುಭವಗಳಿಗೆ ನಾನು ಒಳಗಾಗಲೇ ಇಲ್ಲ. ಓದುವುದಕ್ಕಾಗಿಯೇ ಕಾಲೇಜಿಗೆ ಹೋಗುವುದು ಎಂದುಕೊಳ್ಳುತ್ತಿದ್ದೆ ಮತ್ತು ನಾನು ಸದಾ ನನ್ನ ಬಗ್ಗೆ ಕೀಳರಿಮೆಯಿಂದ ನರಳುತ್ತಿರುತ್ತಿದ್ದೆ.. 'ನಂಗೆ ಆ ಥರ ಫಸ್ಟ್ ಲವ್ವು ಸೆಕೆಂಡ್ ಲವ್ವು ಅಂತೆಲ್ಲ ಯಾರೂ ಇರ್ಲಿಲ್ಲ ಕಣೇ' ಎಂದು ನಾನೆಂದಾಗ 'ಥೂ! ಯು ಆರ್ ಎ ಟೇಸ್ಟ್‌ಲೆಸ್ ಫೆಲೋ!' ಎಂದು ದೂರಿದ್ದಳು ಆಕೆ. ಆಕೆಯ ಕನಸಿನ ಹುಡುಗ ಸಿಗರೇಟ್ ಸೇದುವವನಾಗಿದ್ದನಂತೆ, ಪಾರ್ಟಿಗಳಿಗೆ ತನ್ನನ್ನು ಕರೆದುಕೊಂಡು ಹೋಗಿ ಕುಡಿಯುತ್ತಿದ್ದನಂತೆ, ರಾಕ್ ಮ್ಯೂಸಿಕ್ಕಿಗೆ ಡಾನ್ಸ್ ಮಾಡುತ್ತಿದ್ದನಂತೆ.. 'ಮತ್ತೆ ಇದ್ಯಾವುದೂ ಇಲ್ಲದ ನನ್ನನ್ಯಾಕೆ ಮದುವೆಯಾಗಲಿಕ್ಕೆ ಒಪ್ಪಿದೆ?' ಅಂತ ನಾನು ಕೇಳಿದ್ದಕ್ಕೆ 'ನಾನೇನೂ ಮನಃಪೂರ್ವಕವಾಗಿ ಒಪ್ಪಿದ್ದಲ್ಲ. ಅಪ್ಪ-ಅಮ್ಮ ಹಟ ಮಾಡಿದರು ಅಂತ ಒಪ್ಪಿದೆ. ಅಲ್ಲದೇ ನೀನು ಇಷ್ಟೊಂದು ಪೇಲವ ವ್ಯಕ್ತಿತ್ವದ ಹುಡುಗ ಅಂತ ಗೊತ್ತಿರಲೂ ಇಲ್ಲ' ಎಂದು ಮುನಿದು ನುಡಿದಿದ್ದಳು.
ಆವೊತ್ತು ನನಗೆ ಸೂರಿ ತುಂಬಾ ತುಂಬಾ ನೆನಪಾಗಿದ್ದ.. ಅವಳಿಗೆ ನಿದ್ರೆ ಬಂದಮೇಲೆ ನಾನೊಬ್ಬನೇ ಎದ್ದು ಹೋಗಿ ಸೀಡಿ ಹುಡುಕಿ ಪ್ಲೇಯರಿಗೆ ಹಾಕಿ 'ಮೇರೇ ನಯನಾ' ಹಾಡು ಮತ್ತೊಮ್ಮೆ ಕೇಳಿದ್ದೆ. ಸಣ್ಣಕೆ ಬಿಕ್ಕಿದ್ದೆ, ಬೆಚ್ಚಿದ್ದೆ. ನಾನೊಬ್ಬ 'ಅಭಿರುಚಿಗಳೇ ಇಲ್ಲದ ಹುಡುಗ', 'ಪೇಲವ ವ್ಯಕ್ತಿತ್ವದ ಹುಡುಗ' ಎಂಬ ಅವಳ ಚುಚ್ಚುಮಾತು ಆಮೇಲಿಂದ ನನ್ನನ್ನು ಕೊರೆಯಲಾರಂಭಿಸಿತು. ಅಭಿರುಚಿಗಳನ್ನು ಹೇಗೆ ಬೆಳೆಸಿಕೊಳ್ಳುವುದು ಅರ್ಥವಾಗಲಿಲ್ಲ. ಆಮೇಲೆ ಅನ್ನಿಸಿತು: ಅವಳ ಕಾಲ್‌ಸೆಂಟರ್ ಕೆಲಸ, ಶಿಫ್ಟುಗಳು, ವಿದೇಶೀ ಜನಗಳೊಂದಿಗೆ ದಿನವೂ ಮಾತು-ವ್ಯವಹಾರ, ತರಹೇವಾರಿ ಗೆಳೆಯರು, ಡ್ರೆಸ್‌ಕೋಡ್, ಪಾರ್ಟಿ-ಔಟಿಂಗ್ ಅಂತ ಹೋಗುವುದು... ನನ್ನದೋ, ಪುಟ್ಟ ಆಫೀಸು, ಇದೇ ಬೆಂಗಳೂರಿನ ಅಷ್ಟಿಷ್ಟು ಸಣ್ಣ-ಪುಟ್ಟ ಕಂಪನಿಗಳ ಕ್ಲೈಂಟುಗಳು, ಇದೇ ಅಕೌಂಟ್ಸು, ಬಂದು-ಹೋಗುವ ಕನ್ನಡದಲ್ಲೇ ಮಾತನಾಡುವ ಜನಗಳು, ನೆಗಡಿಯಾದರೆ ಕಷಾಯ ಕುಡಿಯುವ ನಾನು... ಹೀಗೆ ಅವಳ ಪ್ರಪಂಚವೇ ಬೇರೆ, ನನ್ನ ಪ್ರಪಂಚವೇ ಬೇರೆ. ಆಕೆ ಮತ್ತು ನಾನು ಸಂಪೂರ್ಣ ಬೇರೆಯದೇ ಆದ ಅಭಿರುಚಿಗಳುಳ್ಳ, ನೆಲೆಗಳುಳ್ಳ, ದಾರಿಗಳುಳ್ಳ, ಕನಸುಗಳುಳ್ಳ ವ್ಯಕ್ತಿಗಳು-ಎಂದು. ಆದರೂ... ಆದರೂ... ನಾನೊಬ್ಬ ಅಭಿರುಚಿಗಳೇ ಇಲ್ಲದವನು, ಪೇಲವ ವ್ಯಕ್ತಿತ್ವದವನು ಎಂಬ ಅವಳ ಆಕ್ಷೇಪಣೆಗಳಿಗೆ ನಾನು ಎದುರುತ್ತರ ಹೇಳಲಾರದೇ ಹೋಗಿದ್ದೇನೆ. ನಾನು ಬದಲಾಗಬೇಕೆಂದು ತೀರ್ಮಾನಿಸಿದ್ದೇನೆ. ಆದರೆ ಆ ನನ್ನ ತೀರ್ಮಾನ ಸರಿಯೇ ತಪ್ಪೇ ಎಂಬ ಬಗ್ಗೆ ಇನ್ನೂ ಗೊಂದಲದಲ್ಲಿದ್ದೇನೆ.
ಅವಳಿಗಾಗಿ ಬದಲಾಗಬೇಕೆಂದು ನಾನೇಕೆ ಹಂಬಲಿಸುತ್ತಿದ್ದೇನೆ? ನಾನೇಕೆ ಸಿಗರೇಟು ಸೇದುವುದನ್ನು ಕಲಿಯುತ್ತಿದ್ದೇನೆ? ಯಾರದೋ ದಾಕ್ಷಿಣ್ಯಕ್ಕೆ ಒಳಗಾಗಿ ನನಗಿಷ್ಟವಿಲ್ಲದ ಕೆಲಸಗಳನ್ನು ಮಾಡುವುದು, ನನ್ನ ಆದರ್ಶಗಳನ್ನು ಬಲಿ ಕೊಡುವುದು -ಇದೇ ನನ್ನ ಬದುಕಾಗಿ ಹೋಯಿತೇ?
ಸೂರಿ ಹೇಗೆ ಬದುಕಿನೊಂದಿಗೆ ರಾಜಿ ಮಾಡಿಕೊಂಡ? 'ಅವಳಿಲ್ಲದೆ ಬದುಕಿಲ್ಲ' ಎನ್ನುತ್ತಿದ್ದ ಸೂರಿ ಈಗ ಮತ್ಯಾವುದೋ ಹುಡುಗಿಯನ್ನು ಮದುವೆ ಮಾಡಿಕೊಂಡು, ಆಕೆಯೊಂದಿಗೆ ಪ್ರಪಂಚ ಸುತ್ತುತ್ತಾ, ಕೇಳಿದವರಿಗೆ 'ಮೈ ವೈಫ್' ಎಂದು ಪರಿಚಯಿಸಿಕೊಳ್ಳುವಷ್ಟರ ಮಟ್ಟಿಗೆ ಹೇಗೆ ಬದಲಾದ? ಹಾಗೆ ತನ್ನ ಮನಸ್ಸನ್ನು ಪರಿವರ್ತಿಸಿಕೊಳ್ಳಲು ಅವನು ಪಟ್ಟಿರಬಹುದಾದ ಪಾಡುಗಳೇನು? ಅಥವಾ ಯಾವುದೋ ಅನಿವಾರ್ಯತೆಗೆ ಸಿಕ್ಕಿ ಹೀಗಾದನೇ? ಬದುಕಿನಲ್ಲಿ ನಾವಂದುಕೊಂಡದ್ದು ಆಗದೇ ಮತ್ತಿನ್ನು ಹೇಗೋ ಬದುಕುವ ಸಂಭವ ಬಂದಾಗಲೆಲ್ಲ 'ಅಡ್ಜಸ್ಟ್‌ಮೆಂಟ್ಸ್ ಮ್ಯಾನ್' ಎಂದು ಹೇಳಿ ನುಣುಚಿಕೊಳ್ಳುವುದು ಬುದ್ಧಿವಂತಿಕೆಯಾ? ಕನಸುಗಳೊಂದಿಗೆ ರಾಜಿ ಮಾಡಿಕೊಳ್ಳುತ್ತ ಸಾಗುವುದೇ ಬದುಕಾ? ಪರಿಸ್ಥಿತಿಗೆ ತಕ್ಕಂತೆ ನಮ್ಮ ಜೀವನಶೈಲಿಯನ್ನು, ಕನಸುಗಳನ್ನು, ಆದರ್ಶಗಳನ್ನು ಬದಲಾಯಿಸಿಕೊಳ್ಳುತ್ತಾ, ತಿದ್ದಿಕೊಳ್ಳುತ್ತಾ ಹೋಗುವುದೇ ಸರಿಯಾ? ಈಗ ನಾನೂ ಸೂರಿಯಂತೆ ಬದಲಾಗಬೇಕಿದೆಯಾ?
ಗೊತ್ತಿಲ್ಲ... ಸೂರಿಯೊಂದಿಗೇ ಕೂತು ಮಾತಾಡಬೇಕು ಈ ವಿಷಯವಾಗಿ. ಮುಂದಿನ ಭಾನುವಾರ ಅವನ ಮನೆಗೆ ಹೋಗಬೇಕು. ಅವರ ಮದುವೆಗೆ ಹೋಗಲಾಗದ್ದಕ್ಕೆ ಏನಾದರೂ ಉಡುಗೊರೆ ಒಯ್ಯಬೇಕು. ಆ ದಂಪತಿಗಳನ್ನು ನಮ್ಮ ಮನೆಗೆ ಕರೆಯಬೇಕು. ಅವನ ಬಳಿ ಇನ್ನೊಮ್ಮೆ ಆ ಹಾಡು ಹಾಡಿಸಬೇಕು...
ಮುಗಿಯಲು ಬಂದಿದ್ದ ಸಿಗರೇಟನ್ನು ಕಾಲಲ್ಲಿ ಹೊಸಕಿ ಹಾಕುತ್ತೇನೆ. ಮೊಬೈಲಿನ ರಿಮೈಂಡರಿನಲ್ಲಿ ಭಾನುವಾರದ ದಿನಾಂಕಕ್ಕೆ 'ವಿಸಿಟ್ ಸೂರಿ ಮನೆ' ಎಂದು ನೋಟ್ ಮಾಡಿಕೊಳ್ಳುತ್ತೇನೆ. ತಡವಾಗಿ ಬರುವ ಅವಳಿಗೆ ಅನುಕೂಲವಾಗಲೆಂದು ಮುಂಬಾಗಿಲನ್ನು ಕೀಯಿಂದ ಲಾಕ್ ಮಾಡಿ, ರೂಮಿಗೆ ಬಂದು ಹಾಸಿಗೆಯಲ್ಲಿ ಪವಡಿಸುತ್ತೇನೆ.
['ದ ಸಂಡೇ ಇಂಡಿಯನ್' ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕತೆ.]
8 comments:
ಹ್ಮ ಚನ್ನಾಗಿ ಇದೆ ಕಥೆ.
ಬರುವ ಎರೆಡು female character ಉ ಚನ್ನಾಗಿ ಇಲ್ಲಾ.
ಬದುಕು ಬದಲಾಗಬಹುದೆ? ಯಾಕೆ ಆಗಬಾರದು ಸುಶ್? ನಿರೂಪಕ ಎನನ್ನ ಬಯಸುತ್ತೀರುವ? ಸೂರಿ ಅದು ಯಾರೋ ಬಿಟ್ಟು ಹೋದ ಹುಡುಗಿಯ ನೆನಪಲ್ಲೆ ಇರಬೇಕಾ?
ಜೀವನ ಒಂದೊಂದು ಸ್ಟೆಜ್ ನಲ್ಲಿ ಒಂದೋಂದು ತರ ಇರುತ್ತೆ. ನಾವು ಅದನ್ನ ಒಪ್ಪಿಕೊಳಲೇಬೇಕು. ಕಾಲೇಜ್ ದಿನಗಳ ಪ್ರೀತಿ ಹಿಂಗೆ ಇರುತ್ತೆ. ಅದು success ಆಗುವ chance ತುಂಬಾ ಕಮ್ಮಿ. ಮತ್ತೆ ತುಂಬಾ immeturity love ಆಗಿರುತ್ತೆ.
ಇನ್ನು ನಿರೂಪಕನ ಹೆಂಡತಿ ಅವಳ ಒಟ್ಟಿಗೆಮದುವೆಗೆ ಮೊದಲೇ ಸ್ವಲ್ಪ ದಿನ ಮಾತಾಡಿ ಅರ್ಥ ಮಾಡಿಕೊಂಡು ಮದುವೆ ಆಗಬೇಕಿತ್ತು ಅನ್ನಿಸುತ್ತೆ.
ನಂಗೆ ಕಥೆಯಲ್ಲಿ ಏನು ಸಿಕ್ಕಿಲ್ಲಾ. ಮಾಮುಲಿ ಸ್ಟೋರಿ.
ಕಥೆಯನ್ನು ಹೆಣೆದ ರೀತಿ ಇಷ್ಟವಾಯ್ತು,
ಜೀವನದಲ್ಲಿ ಹಲವು ಸಲ ಯವ್ಯಾವುದೋ ಅನಿವರ್ಯತೆಗೆ ಸಿಕ್ಕಿ ನಮ್ಮ ಕನಸುಗಳಿಗೆ ತಿಲಾಂಜಲಿ ಕೊಟ್ಟು, ನಾವಂದುಕೊಂಡಿದ್ದನ್ನು ಅರ್ಧಕ್ಕೆ ಕೈ ಬಿಟ್ಟು ಅದಕ್ಕೆ adjustment ಅನ್ನೋ ಹಣೆಪಟ್ಟಿ ಕಟ್ಟುವ ಪರಿಸ್ಠಿತಿ ಎದುರಾಗುವುದು.
ಆದರೆ "ಯಾರದೋ ದಾಕ್ಷಿಣ್ಯಕ್ಕೆ ಒಳಗಾಗಿ ನನಗಿಷ್ಟವಿಲ್ಲದ ಕೆಲಸಗಳನ್ನು ಮಾಡುವುದು, ನನ್ನ ಆದರ್ಶಗಳನ್ನು ಬಲಿ ಕೊಡುವುದು" ತುಂಬಾ ನೋವು ಕೊಡುವ ವಿಷಯ ನನ್ನ ಪ್ರಕಾರ. ಅದು "For the right person for the right reason" ಆಗಿದ್ರೆ ಕನಸು ಆದರ್ಶಗಳ ಆ ಬಲಿಗೆ ಒಂದು ಅರ್ಥವಿರಬಹುದೇನೋ. ಅದಲ್ಲದೇ ಹೋದಲ್ಲಿ ಯಾರದೋ ಯಾವುದೋ ಆಕ್ಷೆಪಣೇಯಿಂದ ಪಾರಾಗಲೋ ಎಂಬಂತೆ ನಮ್ಮ ವ್ಯಕ್ತಿತ್ವವನ್ನು ಬಲಿಕೊಟ್ಟು ಬದಲಾಗುವುದು ನನ್ನ ಅಭಿಪ್ರಾಯದ ಪ್ರಕಾರ ತಪ್ಪು. ನಮ್ಮನ್ನು ಇಷ್ಟಪಡುವವರು ನಮ್ಮ ವ್ಯಕ್ತಿತ್ವವನ್ನೂ ಇಷ್ಟಪಡುತ್ತಾರೆ, ಸಣ್ಣಪುಟ್ಟ ಬದಲಾವಣೆಗಳು ಇಬ್ಬರಲ್ಲೂ ಅಗತ್ಯ ಹೊಂದಾಣಿಕೆ ಮೂಡಲಿಕ್ಕೆ.
ನಿನ್ನ ಕಥೆಗಿಂತಾ ಜಾಸ್ತಿ ಉದ್ದ ನನ್ನ ಕೊರೆತನೇ ಆಗ ಹಂಗೆ ಕಾಣ್ತಾ ಇದ್ದು. ಅದ್ಕೆ ಇಲ್ಲಿಗೆ stop ಮಾಡ್ತಿ :)
ಅಂದ ಹಾಗೆ ಕಥೆ ಇಷ್ಟ ಆತು :)
ಕಥೆ ಚನ್ನಾಗಿದೆ ಸುಶ್ರುತ. ನೆನಪಿನ ಅಂಗಳಕ್ಕೆ ಎಳೆದೊಯ್ಯುತ್ತದೆ ಕಥೆ. ಯಾವುದೋ ಒಂದು ಹಂತದಲ್ಲಿ ನನ್ನನ್ನ ಅಂಶುಮಂತನ ಜಾಗದಲ್ಲಿ ನೋಡಿಕೊಂಡಿದ್ದೂ ಇದೆ. ಸಿಟಿ ಜೀವನದಲ್ಲಿ ಹಿಂದುಳಿದ ಅನುಭವ, ಅಸಹಾಯಕತೆ, ಕೀಳರಿಮೆ, ಎಲ್ಲಿಯೂ ಸಲ್ಲದೆ ಜೀವನ ಮುಗಿದುಹೊಗುವುದೊ ಎನ್ನುವ ಭಯ. ಥ್ಯಾಂಕ್ಸ್ ಫಾರ್ ಅ ಗೂಡ್ ಸ್ಟೋರಿ.
ಕತೆಯೋ ವಾಸ್ತವ ಘಟನೆಯೋ ಎಂದು ವಿಸ್ಮಯಗೊಳ್ಳುವಷ್ಟು ಚನ್ನಾಗಿದೆ. ಸಾಹಿತ್ಯವಿರಲಿ ಅಥವಾ ಯಾವುದೇ ಕಲಾ ಪ್ರಕಾರಗಳಿರಲಿ, ಅದರ ಒಟ್ಟಾರೆ ಉದ್ದೇಶ ಬದುಕಿನ ವಿಶ್ಲೇಷಣೆ, ಮೌಲ್ಯಗಳ ತುಲನಾತ್ಮಕ ಒಳನೋಟ ಹಾಗೂ ತದ್ವಾರಾ ಬದುಕಿನ ಸಮಗ್ರತೆಯ ಚಿತ್ರಣ. ಮನುಷ್ಯನಿರಲಿ ಅಥವಾ ನಿರ್ಜೀವ ವಸ್ತುಗಲಿರಲಿ ಕಾಲಪ್ರವಾಹದಲ್ಲಿ ಬದಲಾವಣೆಗೆ ಒಳಗಾಗದ ವಸ್ತು ಬಹುಶಃ ಇಲ್ಲವೇನೋ!. ಹೆಚ್ಚೀಕೆ, ನೀರಿನಡಿಯಲ್ಲಿ ಹುದುಗಿದ ಕಲ್ಲು ಬಂಡೆ ಕೂಡಾ ಕಾಲಕ್ರಮೇಣ ಬದಲಾಗುವುದು ಸಹಜ. ಹಾಗೆ ಬದಲಾಗಬೇಕಾದರೆ ಸ್ವಂತ ವ್ಯಕ್ತಿತ್ವವನ್ನು ಹಾಗೂ ವ್ಯಕ್ತಿ ವೈಶಿಷ್ಟ್ಯವನ್ನು ಬಲಿಕೊಡಬೇಕೇ?. ಬದಲಾವಣೆ ಸರ್ವತ್ರ ಹಾಗೂ ಸರ್ವಕಾಲಿಕ ಎಂದಾದರೆ, ಈ ಪ್ರಶ್ನೆ ಕೂಡಾ ಸರ್ವಕಾಲಿಕವೇ ಎಂದು ನನ್ನ ಭಾವನೆ.
ಇಲ್ಲಿ ಸೂರಿ ಬದಲಾದದ್ದು ಕೇವಲ ಅಡ್ಜಸ್ಟ್ ಮಾಡಿಕೊಳ್ಳುವ ಸಲುವಾಗಿ ಅಲ್ಲ, ಬದಲಿಗೆ ಆತನ ಬದುಕಿನ ಪಕ್ವತೆಯನ್ನು ಸೂಚಿಸುತ್ತದೆ. ಪ್ರೀತಿಸಿದ ಹುಡುಗಿಯೊಂದೆ ಜೀವನ ಎನ್ನುವುದು ಅಪಕ್ವ ಮನಸ್ಥಿತಿ, ಬದಲಿಗೆ, ಅದು ಸಮಗ್ರ ಬದುಕಿನ ಒಂದು ಅಂಶ ಮಾತ್ರ ಎನ್ನುವುದು ಪರಿಪಕ್ವತೆಯ ಸಂಕೇತ.
ಆಕೆಯನ್ನು ವಿವರಿಸಲು ಹಳೆಯ ಉಪಮೆಗಳನ್ನು ಉಪಯೋಗಿಸುವ ಮನಸ್ಸಿಲ್ಲ, ಹೊಸದು ಸಿಗುತ್ತಿಲ್ಲ - ಇದು ತುಂಬಾ ಇಷ್ಟವಾಯ್ತು !.
Dr.D.M.Sagar
ರಂಜನಾ,
ನಿನ್ನ ಪ್ರಾಮಾಣಿಕ ಅಭಿಪ್ರಾಯಕ್ಕೆ ಥ್ಯಾಂಕ್ಸ್.
Depends:
-ಕತೆ ಇಷ್ಟವಾಗಬೇಕಾದ್ರೆ (ಬಹಳ ಸಲ) ಕತೆಯ ಯಾವುದೋ character ನಮ್ಮನ್ನೇ ಹೋಲುತ್ತಿದೆ ಅನ್ನಿಸಬೇಕು.. ಅದಿಲ್ಲದಿದ್ದರೆ ಕತೆ ಆಪ್ತವಾಗುವುದಿಲ್ಲ.
-ಅಥವಾ, ಕತೆ ಹೊಮ್ಮಿಸುವ ಭಾವ ನಮಗೆ ಹೊಂದಾಣಿಕೆಯೇ ಆಗುತ್ತಿರುವುದಿಲ್ಲ, ಪೂರ್ತಿ ವಿರುದ್ಧವಿರುತ್ತೆ, ಆಗಲೂ ಕತೆ ವರ್ಜ್ಯವೆನಿಸುತ್ತೆ.
-ಅಥವಾ, ಕತೆ ಎತ್ತುವ ಪ್ರಶ್ನೆಗಳು ಸಿಲ್ಲಿ ಎನಿಸಬೇಕು, ಆಗ ಕತೆ 'ಮಾಮೂಲಿ' ಎನಿಸೊತ್ತೆ.
ಕಥೆಯಲ್ಲಿ ನಿಂಗೆ ಏನೂ ಸಿಕ್ಕಿಲ್ಲ ಅಂದೆಯಲ್ಲ, ಅದು ಬಹುಶಃ ಸುಳ್ಳು! ನೀನು ಕೇಳಿರುವ ಕೆಲ ಪ್ರಶ್ನೆಗಳು-ನಮೂದಿಸಿರುವ ಅಭಿಪ್ರಾಯಗಳು ಇವೆ ನೋಡು, ಅವುಗಳನ್ನ ಈ ಕತೆ ಮೂಡಿಸಿದೆ ಎಂದರೆ ನಿಂಗೇನೋ ಸಿಕ್ಕಿದೆ ಅಂತಲೇ ಅರ್ಥ!
ಹಾಗೇ, ಆ ಪ್ರಶ್ನೆಗಳಿಗ್ಯಾವುದಕ್ಕೂ ನಾನು ಉತ್ತರ ಕೊಡಲಾರೆ. ಈ ಕತೆಯ ನಾಯಕನೇನಾದರೂ ಕೊಡಬಲ್ಲನೇನೋ? (ಅಥವಾ ಸೂರಿ?) ನಿರೂಪಕ ಏನನ್ನೂ ಬಯಸುತ್ತಿಲ್ಲ.
ಶ್ಯಾಮಾ,
ಅಭಿಪ್ರಾಯಕ್ಕೆ ಥ್ಯಾಂಕ್ಸ್. ಇಲ್ಲೆ ಜಾಸ್ತಿ ಏನಾಗಲ್ಲೆ ನೀ ಕಾಳಜಿ ಮಾಡಡ. :)
ಶರಶ್ಚಂದ್ರ,
ಥ್ಯಾಂಕ್ಸ್ ಬ್ರದರ್.
DMS,
ಥ್ಯಾಂಕ್ಸ್, ಮೆಚ್ಚಿಕೊಂಡದ್ದಕ್ಕೆ ಮತ್ತು ಅಭಿಪ್ರಾಯಗಳಿಗೆ.
ಕಥೆ ಚೆನ್ನಾಗಿ ಬಂದಿದೆ ಸುಶೃತ..
ಕೀಪ್ ಇಟ್ ಅಪ್. ನಿನ್ನ ಬರವಣಿಗೆ ಇಷ್ಟಪಡ್ತೀನಿ..ಕೆಲವೊಮ್ಮೆ ಕೆಲವು ಕಡೆ ಚೂರು ಎಳೆದೆ ಅನ್ನಿಸಿತು.
ನೋ ಪ್ರಾಬ್ಲಂ. ಹಿಂಗೆ ಬರೀತಾ ಇರು. ಆಲ್ ದ ಬೆಸ್ಟ್.
ಕಟ್ಟೆ ಶಂಕ್ರ
ಅಂತರ್ಮುಖಿ ವ್ಯಕ್ತಿತ್ವದ ನಾಯಕ ಹಳೆಯದನ್ನು ನೆನಪಿಸಿಕೊಳ್ಳುವ, ತನಗೆ ತಾನೆ ಪ್ರಶ್ನೆ ಮಾಡಿಕೊಳ್ಳುವ ಪರಿ ಇಷ್ಟ ಆಯ್ತು ; ಬರೀ ಅಡ್ಜಸ್ಟ್ಮೆಂಟ್ ಲ್ಲೇ ಇಡೀ ಬದುಕನ್ನು ಕಳೆದುಬಿಡುವ ಅನಿವಾರ್ಯತೆಗಿಂತ ದೊಡ್ಡ ದುರಂತ ಇನ್ನೊಂದಿಲ್ಲ ; ಕಥೆ ಚೆನ್ನಾಗಿದೆ.
Post a Comment