Wednesday, August 13, 2008

ಡೇರೆ-ಗುಲಾಬಿ

ಹೊಸ ಮಳೆಗಾಲ; ಹೊಸ ಮಳೆ:
ಮಣ್ಣಾಳದಿಂದೆದ್ದು ಬರುತ್ತದೆ ಡೇರೆ ಗಿಡ...
ದುಬುದುಬನೆ ಬೆಳೆಯುತ್ತದೆ ತಲೆಯೆತ್ತಿ
ಬಲಿಷ್ಟವಾಗುತ್ತ ಕಾಂಡ ಬಾಗದಂತೆ...
ಹೂವಾಗುತ್ತದೆ ತಿಂಗಳಲ್ಲಿ ಮೊಗ್ಗರಳಿ
ಪಕಳೆ ಪಕಳೆಯಲ್ಲೂ ಚೆಲ್ಲಿ ಚೆಲುವು.

ಅಂಗಳದಲ್ಲೀಗ ಇದರದೇ ರಾಜ್ಯಭಾರ:
ಒಡತಿ ಡೇರೆಯನ್ನೇ ಮುಡಿಯುತ್ತಾಳೆ
ದೇವರ ಗೂಡಿನಲ್ಲೂ ಇದರದೇ ಅಲಂಕಾರ
ದಾರಿಹೋಕರ ಕಣ್ಣಿಗೂ ಡೇರೆಯೇ ಚಂದ
ದುಂಬಿಗಂತೂ ಕಹಿ ಬೇರೆ ಹೂವ ಮಕರಂದ!

ವರುಷವಿಡೀ ಹೂ ಬಿಡುವ ಗುಲಾಬಿಗೆ ಹೊಟ್ಟೆಉರಿ!
ಮೈಮೇಲಿನ ಮಳೆಹನಿಯನೆಲ್ಲ ಕಣ್ಣೀರಂತೆ ಉದುರಿಸುತ್ತಾ
ಅಳು ಅಳು ಅಳುತ್ತದೆ ಗುಲಾಬಿ...
ತಾನೆಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದೆನೋ,
ಪ್ರೀತಿಯೆಲ್ಲ ಎಲ್ಲಿ ಬೇರೆಯವರ ಪಾಲಾಯಿತೋ
ಎಂದು ಕರುಬುತ್ತದೆ...
ಮುಳ್ಳುಮುಳ್ಳಿನ ತನ್ನ ಶರೀರ
ಕುರೂಪದಂತೆ ಭಾಸವಾಗುತ್ತದೆ;
ವಿಧಿಯನ್ನು ಶಪಿಸುತ್ತದೆ; ಡೇರೆಯನ್ನು ದ್ವೇಷಿಸುತ್ತದೆ;
'ಈ ಜಗತ್ತು ಮೃಗಜಲ; ಪ್ರೀತಿ ಪ್ರೇಮ ಎಲ್ಲಾ ಸುಳ್ಳು'
ಎಂದು ಹತಾಶ ದನಿಯಲ್ಲಿ ಉಸುರುತ್ತದೆ.

ಜಗತ್ತೂ ಸುಮ್ಮನಿದೆ ನೋಡುತ್ತ ಇವನ್ನೆಲ್ಲ
ಪ್ರತಿ ಅಂಗಳದಲ್ಲೂ ಇದ್ದದ್ದೇ ಈ ವರಾತ
ನೋಡೀ ನೋಡಿ ಬಂದಿದೆ ಅದಕ್ಕೂ ಬೇಸರ
ನಕ್ಕು ಸುಮ್ಮನಾಗುತ್ತದೆ ಅದು:

'ಹುಚ್ಚು ಹೂವೇ, ಈ ಡೇರೆಯ ಮೆರೆತ
ಹೆಚ್ಚೆಂದರೆ ಇದೊಂದು ತಿಂಗಳು...
ಆಮೇಲೆ ಬೇಕು ಮತ್ತೆ ನೀನೇ...
ವರುಷವಿಡೀ ಗೆಡ್ಡೆಯಾಗಿ ಅಡಗಿದ್ದು
ಹೀಗೆಲ್ಲೋ ಋತುವೊಂದರಲ್ಲಿ ಚಿಗಿತು ಬೆಳೆದು
ಸುಂದರಿಯಂತೆ ಕಂಡುಬಿಟ್ಟರೆ ಆಗಲಿಲ್ಲ...
ಮೈತುಂಬ ಮುಳ್ಳನಿಟ್ಟುಕೊಂಡೂ,
ಗ್ರೀಷ್ಮದ ಉರಿಬಿಸಿಲಲ್ಲೂ ಬಾಡದೇ,
ಕೊರೆವ ಹುಳುಗಳಿಗೂ ಜಗ್ಗದೇ
ಅರಳಿ ನಿಂತು ನಯನವನಾಕರ್ಷಿಸುವುದು ಇದೆಯಲ್ಲ-
ಅದು ದೊಡ್ಡದು... ಅದು ಶಾಶ್ವತ...
ನೆನಪಿಡು: ನೀನು ಗುಲಾಬಿ; ಪ್ರೀತಿಯ ಸಂಕೇತ'

ಗುಲಾಬಿಗೀಗ ಚೂರು ಸಮಾಧಾನ...
ಇಷ್ಟಗಲ ಹೂ ಬಿಟ್ಟುಕೊಂಡು ನಿಂತ ಡೇರೆ
ಬಜಾರಿಯಂತೆ ಕಾಣುತ್ತದೆ...
ತನ್ನ ಹೂವೋ, ಪುಟ್ಟಕೆ, ಕೆಂಪಗೆ, ಲಘುವಾಗಿ-
ಆಹಾ! ತನ್ನ ಸೌಂದರ್ಯಕ್ಕೆ ತಾನೇ ಮಾರುಹೋದಂತೆ
ತೂಗುತ್ತದೆ ಗುಲಾಬಿಗಿಡ...
ಕಾಯತೊಡಗುತ್ತದೆ ನಿರೀಕ್ಷೆಯಲ್ಲಿ:

ಡೇರೆ ಮುಡಿದು ಬೇಸರ ಬಂದು-
ಒಡತಿ ಬರುವುದ ತನ್ನೆಡೆಗೆ ಮತ್ತೆ;
ಮಳೆ ಮಧ್ಯದಲ್ಲೇ ನಿಂತು, ಡೇರೆಗಿಡ ಬಾಡಿ-
ದೇವರಿಗೆ ಗುಲಾಬಿಯೇ ಗತಿಯಾಗಿ ಮತ್ತೆ;
ಡೇರೆಯಂಕುರಗಳಲಿ ಖಾಲಿಯಾಗಿ ಜೇನು-
ತನ್ನನರಸಿ ಬರುವ ದುಂಬಿಗಾಗಿ ಮತ್ತೆ;
ದಾರಿಗರ ಕಣ್ಣಲ್ಲಿ ತಾನೇ ಬಿಂದುವಾಗಿ-
ಮತ್ತೆ!

17 comments:

ತೇಜಸ್ವಿನಿ ಹೆಗಡೆ said...

ಸುಶ್ರುತ,

ತಾಳ್ಮೆಗೆ ಸಿಗುವ ಪ್ರತಿಫಲ, ಹಾಗೇಯೇ ಜೀವನದ ಕಹಿಗಳನ್ನು ನುಂಗಿ ಸಿಹಿಗಾಗಿ ಕಾಯುವ ತನ್ಮಯತೆಯನ್ನು ಡೇರೆ ಹಾಗೂ ಗುಲಾಬಿ ಹೂವಿನಮೂಲಕ ಚೆನ್ನಾಗಿ ಹೇಳಿರುವೆ. ಮನಸ್ಸಲ್ಲಿ ನಿಲ್ಲುವಂತಹ ಕವನ.

ನಿಜ. ಎಂದಿದ್ದರೂ ಡೇರೆ ಹೂ ಡೇರೆ ಹೂವೇ. ಗುಲಾಬಿ ಸದಾ ಗುಲಾಬಿಯೇ :)

ರಂಜನಾ ಹೆಗ್ಡೆ said...

nice poem.
sakath imagination.
super puttanna.

chetana said...

ನಮಸ್ತೇ,

ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ.

ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.

ನಿಮ್ಮೆಲ್ಲರ ಸ್ನೇಹದ ಸವಿಯನ್ನು ಈ ಒಂದು ವರ್ಷದಿಂದ ಉಣ್ಣುತ್ತಲೇ ಬಂದಿದ್ದೇನೆ. ನಿಮಗೆಲ್ಲರಿಗೂ ನಾನು ಋಣಿ.
ನೀವು ‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ. ನೀವೆಲ್ಲರೂ ಖಂಡಿತ ಬರಲೇಬೇಕು.
ಇದು ನನ್ನ ಪ್ರೀತಿಪೂರ್ವಕ ಒತ್ತಾಯ.

ಕಾದಿರುತ್ತೇನೆ.

ವಂದೇ,
ಚೇತನಾ ತೀರ್ಥಹಳ್ಳಿ

Shree said...

ಚೆನ್ನಾಗಿದೆ ಸುಶ್... by the way, ಡೇರೆ ಹೂ ಅಂದ್ರೆ ಯಾವುದು, ಫೋಟೋ ಇದೆಯಾ? ಉತ್ತರಕನ್ನಡ ಸ್ಪೆಶಲ್ಲಾ ಅದು? ಅಥವಾ ನಾವೆಲ್ಲ ಡೇಲಿಯಾ ಅಂತೇವೆ, ಮತ್ತು ಅದೇ ಕುಟುಂಬಕ್ಕೆ ಸೇರಿದ ಇನ್ನೂ ಕೆಲವು ಹೂಗಳಿವೆ, ಅದುವಾ?

ಅಂತರ್ವಾಣಿ said...

ಸುಶ್ರುತರವರೆ,
ಎರಡು ಹೂಗಳ ಜೀವನವನ್ನು ಬಹಳ ಸುಂದರವಾಗಿ ವರ್ಣಿಸಿದ್ದೀರ.

Parisarapremi said...

ಏನೇ ಆದರೂ ನಮ್ ರೆಫ್ಲೀಸಿಯಾ ಮುಂದೆ ಡೇರೆ ಗುಲಾಬಿಗಳು ಏನೂ ಇಲ್ಲ ಬಿಡಿ.. ;-)

sunaath said...

ಅಕಟಕಟಾ!
ಸುಶ್ರುತನಿಗೊ ಗುಲಾಬಿಯೆ ರತಿ!!
ಡೇರೆಗೆ ಈಗ ಯಾರು ಜೊತಿ?
ತಾಳು ಡೇರೆ, ಬರುವದು ಕಾಲ,
ದುಂಬಿಗಳಿಗೆ ಬೀಸಲು ಜಾಲ!

Lakshmi Shashidhar Chaitanya said...

ಆಗೀಗ ಮಿಂಚುವ ಮತ್ತು ಸದಾಕಾಲ ಸಿಗುವ ಎರಡು ಹೂವುಗಳ comparison ಚೆನ್ನಾಗಿದೆ.

Ultrafast laser said...

ಸುಶ್ರುತ,
ಒಳ್ಳೆಯ ಪ್ರಯತ್ನ. ಒಟ್ಟಾರೆ concept ಅದ್ಭುತವಾಗಿದೆ. ಡೇರೆ ಹಾಗು ಗುಲಾಬಿ ಹೂಗಳ ವಿಭಿನ್ನ ಪ್ರಕೃತಿಯ ಬಗ್ಗೆ ಕವನದ ಮುಖೇನ ಹೇಳುವುದು ಖಂಡಿತ ಒಳ್ಳೆಯ ಪ್ರಯತ್ನ. ಆದರೆ.., ತಾಂತ್ರಿಕವಾಗಿ ಕವನದ ಸಾಕಾರ ಆಗಲಿಲ್ಲ. ಇಲ್ಲಿ ಕವನದ ವಸ್ತು ಹಾಗು ಪರಿಣಾಮ (summary/end product)ದಲ್ಲಿ ಗೆದ್ದರು ಮಾದ್ಯಮದಲ್ಲಿ ಸೋಲಾಗಿದೆ. ಪದ ಪ್ರಯೋಗಗಳು ತೀರ ವಾಚ್ಯ ವಾದರೆ ಕವನ ತಾಂತ್ರಿಕತೆಯಲ್ಲಿ ಸೋಲುತ್ತದೆ.
ಸ್ವಲ್ಪ ಛಂದಸ್ಸು, ಲಯ ಇತ್ಯಾದಿಗಳ ಬಗ್ಗೆ ಓದಿದರೆ ಇನ್ನು ಒಳ್ಳೆಯ ಬರಹಗಳು ನಿನ್ನಿಂದ ಬರಲು ಖಂಡಿತ ಸಾದ್ಯ. ಇಷ್ಟಕ್ಕೂ, ಕವಿತೆ ಬರೆಯುವುದು ಹೇಗೆ ಎನ್ನುವ ಸಿದ್ಧ ಸೂತ್ರ ಎಲ್ಲಿಯೂ ಇಲ್ಲ.
D.M.Sagar

ಚಿತ್ರಾ said...

ಸುಶ್ರುತ ,

ಕವನ ಚೆನ್ನಾಗಿದೆ. ಅರ್ಥಪೂರ್ಣವಾಗಿದೆ.

Sushrutha Dodderi said...

ತೇಜಕ್ಕ,

ಧನ್ಯವಾದ. I think you got it almost right. :-)

ರಂಜು,
ಥ್ಯಾಂಕ್ಸ್ ಪುಟ್ಟೀ..

ಶ್ರೀ,
ಹಾಂ, ಡೇರೆ ಅಂದ್ರೆ ಡೇಲಿಯಾನೇ. ನಮ್ ಕಡೆ ಡೇರೆ ಅಂತೇವೆ.

ಅಂತರ್ವಾಣಿ,
ಥ್ಯಾಂಕ್ಸ್. :-)

parasirapremi,
ಅದೂ ನಿಜ! :D

Sushrutha Dodderi said...

ಸುನಾಥ್ ಕಾಕಾ,
ಅಕಟಕಟಾ! :D

lakshmamma,
ಥ್ಯಾಂಕ್ಸ್ ಮ್ಯಾಮ್. :)

DMS,
Thanks for your comments. ನಾನು ಜೋಗಿಯವರ ಈ ಕವಿತೆ ಯನ್ನೂ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನೂ ಓದ್ತಿದ್ದೆ.. ಕವಿತೆ ಬರೀಲಿಕ್ಕೆ ಸಿದ್ಧ ಸೂತ್ರಗಳಿದ್ದರೇ ಸುಲಭವಾಗ್ತಿತ್ತೇನೋ ಅನ್ನಿಸ್ತು..! :O

chitra,
ಧನ್ಯವಾದ.

ಚಿನ್ಮಯ said...

ಸುಶ್ರುತ,
ಪದ್ಯ ಓಕೆ. ಆದರೆ ನೀನು ಗದ್ಯ ಬರೆಯುವುದು ಒಳಿತು. ನಿನ್ನ ಗದ್ಯಗಳಿಗಿರುವ ಚೇತನ ಪದ್ಯಕ್ಕಿಲ್ಲ ಎಂಬುದೇ ನನ್ನ ಭಾವನೆ.
ಅಂದರೆ ಕೇವಲ ನನಗನ್ನಿದ್ದಷ್ಟೆ. ಪೂರ್ವಾಗ್ರಹವಿಲ್ಲ.
-ಚಿನ್ಮಯ.

ಸುಧನ್ವಾ ದೇರಾಜೆ. said...

odtha iddini swamy. can i say not bad?!

Sushrutha Dodderi said...

ಸುಧನ್ವಾ,

:-) u r always free to say your prompt views..

ಚಿನ್ಮಯ,

May be. ಆದರೆ ಎಲ್ಲವನ್ನೂ ಗದ್ಯಲ್ಲಿ ಹೇಳಲಿಕ್ಕಾಗುವುದಿಲ್ಲ. ಕೆಲವೊಮ್ಮೆ ಪದ್ಯ ಬರೆಯಲಿಕ್ಕೆ tempt ಆಗತ್ತೆ..

ಸಿಂಧು sindhu said...

ಸುಶ್ರುತ,

ವಿಷಯ ಚೆನ್ನಾಗಿದೆ. ಅಭಿವ್ಯಕ್ತಿಯೂ ಕೂಡಾ. ಎಂದಿನಂತೆ ಸುಶ್ರುತನದ್ದೇ ಛಾಪು.

ಇಷ್ಟವಾಯಿತು.

ತನ್ನ ಸೌಂದರ್ಯಕ್ಕೆ ತಾನೇ ಮಾರುಹೋದಂತೆ ಗುಲಾಬಿಗಿಡ ಬಾಗುವುದು.. - interesting perspective..

ಪ್ರೀತಿಯಿಂದ
ಸಿಂಧು

shivu.k said...

ಕವನ ಚೆನ್ನಾಗಿದೆ. ಅದ್ರೆ ಒಂದು ಸಂಶಯ, ಡೇರೆ, ಗುಲಾಬಿ ಎರಡು ಹೂವುಗಳು ಹೆಣ್ಣೆ ಅಲ್ಲವೇ ಈ ರೀತಿಯ ಕಿತ್ತಾಟ, ಜಗಳ ಹೆಚ್ಚಾಗಿ ಹೆಂಗಸರಲ್ಲೇ ಇರೋದು ಅಂತ ಪ್ರೂವ್ ಮಾಡಿದ್ದೀರಿ! ಸುಮ್ಮನೆ ತಮಾಷೆಗೆ ಹೇಳಿದೆ. ನಾನು ಈ ಬ್ಲಾಗ್ ಪ್ರಪಂಚಕ್ಕೆ ಹೊಸಬ. ನೀವೇಕೆ ನನ್ನ ಬ್ಲಾಗಿನೊಳಕ್ಕೆ ಬರಬಾರದು?. ನನ್ನದು ಫೋಟೋಗ್ರಫಿ ಪ್ರಪಂಚ. ಅಲ್ಲಿ ನಿಮಗೆ ಆಶ್ಚರ್ಯವಾಗುವಂತಹದ್ದು ಸಿಗಬಹುದು ಅಂತ ನನಗೆ ಅನಿಸುತ್ತೆ. ಆಹಾಂ! ಇತ್ತೀಚೆಗೆ ನಾನು ಮೂರು ಹೊಸ ಚಿತ್ರಸಹಿತ ಲೇಖನಗಳನ್ನು ಹಾಕಿದ್ದೇನೆ ನೋಡಿ
ನಿಮ್ಮ ಅಭಿಪ್ರಾಯಕ್ಕೆ ಕಾಯುತ್ತಾ.

ಶಿವು.ಕೆ