Thursday, October 23, 2008

ಆಕಾಶಬುಟ್ಟಿ

ವರುಷವಿಡೀ ವಯಸ್ಸಾದ ಅಮ್ಮಮ್ಮನ ಹಾಗೆ ನಾಗಂದಿಗೆಯ ಮೇಲೆ ಮುದುಡಿ ಮಲಗಿಕೊಂಡಿದ್ದ ಅದನ್ನು ಅಪ್ಪ ಕೆಳಗಿಳಿಸಿ ಧೂಳು ಹೊಡೆದನೆಂದರೆ ಅದು ದೀಪಾವಳಿಯ ಹಿಂದಿನ ದಿನ ಎಂದರ್ಥ. ಬಣ್ಣದ ಕಾಗದ ಮುಚ್ಚಿದ ಬಿದಿರು ಕಡ್ಡಿಯ ದೇಹದ ಈ ಮಡಿಕೆ-ಮಡಿಕೆಯ ಛತ್ರಿಯಂತಹ ವಸ್ತುವನ್ನು ಅಪ್ಪ ಹುಶಾರಾಗಿ ಬಿಚ್ಚುತ್ತಾ ಹೋಗುವಾಗ ಎದುರಿಗೆ ಕುಕ್ಕರಗಾಲಲ್ಲಿ ಕೂತ ಪುಟ್ಟ ಕಣ್ಮಿಟುಕಿಸದೇ ನೋಡುತ್ತಿರುತ್ತಾನೆ.. ಏನಿದು? ಏನಿರಬಹುದು ಒಳಗೆ? ಮ್ಯಾಜಿಕ್ ಮಾಡುವವನಂತೆ ಅಪ್ಪ ಅದರ ಪದರಗಳನ್ನು ಪೂರ್ತಿಯಾಗಿ ಬಿಚ್ಚಿ ಎತ್ತಿ ಹಿಡಿದರೆ ಅದೊಂದು ನಕ್ಷತ್ರವಾಗಿಬಿಟ್ಟಿದೆ! 'ಹೇ..! ಆಕಾಶಬುಟ್ಟಿ..!' ಪುಟ್ಟ ಖುಶಿಯಲ್ಲಿ ಚಪ್ಪಾಳೆ ತಟ್ಟುತ್ತಾನೆ ಕುಣಿಯುತ್ತಾ.

ಆಮೇಲೆ ಊದ್ದದೊಂದು ವೈರು ಹುಡುಕಬೇಕು. ಅದರ ಒಂದು ತುದಿಗೆ ಪಿನ್ನು. ಇನ್ನೊಂದು ತುದಿಗೆ ಬಲ್ಬ್-ಹೋಲ್ಡರು. ಜಗುಲಿಯಲ್ಲಿರುವ ಪ್ಲಗ್ಗಿಗೆ ಈ ಪಿನ್ನು ಹಾಕಿ ವೈರನ್ನು ಕಿಟಕಿಯ ಕಂಡಿಯಲ್ಲಿ ತೂರಿಸಿ ಮನೆಯ ಹೊರತಂದು ಎದೂರಿಗೆ - ಸೂರಿನ ತುದಿಗೆ ಸುತ್ತಿ ನೇತು ಹಾಕಬೇಕು ಹೋಲ್ಡರನ್ನು. ಈಗ ಒಂದು ಬಲ್ಬು ಬೇಕಲ್ಲಾ..? ಹೊಸದು ತಂದಿಟ್ಟದ್ದು ಇಲ್ಲ. ಬಚ್ಚಲು ಮನೆಗೆ ಹೋಗುವ ದಾರಿಯಲ್ಲಿ ಹಾಕಿರುವ ಬಲ್ಬು ಸ್ವಲ್ಪ ದಿನಕ್ಕೆ ಇಲ್ಲದಿದ್ದರೂ ನಡೆಯುತ್ತೆ. ಒಂದು ತಿಂಗಳು ಅಷ್ಟೇ ತಾನೇ? ಅದನ್ನೇ ತಂದು ಇಲ್ಲಿ ಹಾಕೋದು.

'ಹಾಂ, ತಗಂಬಾ ಈಗ ಆಕಾಶಬುಟ್ಟಿ!' ಚಲಾವಣೆ ಕೊಡುತ್ತಾನೆ ಅಪ್ಪ ಪುಟ್ಟನಿಗೆ. ಪುಟ್ಟ ಓಡಿ ಹೋಗಿ ತರಾತುರಿಯಿಂದ ಅದರ ತಲೆಯ ಮೇಲೆ ಜುಟ್ಟಿನಂತಿರುವ ದಾರವನ್ನು ಹಿಡಿದು ತರುವ ವೇಳೆಯಲ್ಲೇ, ಬಾಗಿಲು ದಾಟುವಾಗ ಅದು ಕಾಲಿಗೆ ಸಿಕ್ಕಿ, ಆಕಾಶಬುಟ್ಟಿ ಹರಿದು, ಪುಟ್ಟ ಬಿದ್ದು... ಅಳಲು ಶುರುವಿಡುತ್ತಾನೆ!

'ಏ.. ಹೋತು.. ಹೋತು ಬಿಡು.. ಏನೂ ಆಗಲ್ಲೆ..' ಮಳ್ಳಂಡೆಯ ಗಾಯಕ್ಕೆ ಕೊಬ್ರಿ ಎಣ್ಣೆ ಹಚ್ಚುತ್ತಾ ಸಮಾಧಾನ ಮಾಡಿದಳು ಅಮ್ಮ. ಪುಟ್ಟನಿಗೆ ತನ್ನ ಕಾಲಿಗಾದ ಗಾಯಕ್ಕಿಂತ ಹೆಚ್ಚಿನ ನೋವಾದದ್ದು ಆಕಾಶಬುಟ್ಟಿ ಹರಿದುಹೋಯಿತಲ್ಲಾ ಎಂಬುದಕ್ಕೆ! ಆತ ಮತ್ತೂ ಜೋರಾಗಿ ಅಳತೊಡಗಿದ. ಮತ್ತೆ, ಆಗಲೇ ಉರಿಗಣ್ಣು ಮಾಡಿದ್ದ ಅಪ್ಪ, ತಾನು ಅಳು ನಿಲ್ಲಿಸಿದ್ದೇ ಬೈಯಲು ಶುರು ಮಾಡುತ್ತಾನೆ ಎಂಬ ಭಯ ಅವನಿಗೆ. ಅದಕ್ಕಾಗಿ ಅಂವ ಅಳು ನಿಲ್ಲಿಸುವುದೇ ಬೇಡವೆಂದು ತೀರ್ಮಾನಿಸಿದ..!

ಆ ಸಣ್ಣ ಊರಿನಲ್ಲಿ ಆಕಾಶಬುಟ್ಟಿ ಸಿಗುವ ಅಂಗಡಿಗಳಿರಲಿಲ್ಲ. ಇಪ್ಪತ್ತು ಕಿಲೋಮೀಟರ್ ದೂರದ ಪೇಟೆಗೆ ಹೋಗಿ ಹೊಸ ಆಕಾಶಬುಟ್ಟಿ ತಂದು, ಹೂಡಿ, ನೇತುಹಾಕಿ... ಇದೆಲ್ಲಾ ಈ ಗಡಿಬಿಡಿಯಲ್ಲಿ ಆಗುಹೋಗುವ ಕೆಲಸ ಅಲ್ಲವೆಂದು ತೀರ್ಮಾನಿಸಿದ ಅಪ್ಪ, ಮತ್ತೆ ರಿಪೇರಿ ಮಾಡಿ ಜೋಡಿಸಲಾಗದ ಸ್ಥಿತಿಯಲ್ಲಿದ್ದ ಹಳೇ ಆಕಾಶಬುಟ್ಟಿಯನ್ನು ನೋಡುತ್ತಾ 'ಹ್ಮ್.. ಒಟ್ನಲ್ಲಿ ಈ ವರ್ಷ ನಮ್ಮನೆ ಎದ್ರಿಗೆ ಆಕಾಶಬುಟ್ಟಿ ಇಲ್ದೇ ಹೋದಂಗೆ ಮಾಡ್ದೆ' ಎಂದು ಪುಟ್ಟನಿಗೆ ಬೈದಂತೆ ಹೇಳಿ ಒಳನಡೆದುಬಿಟ್ಟ. ಪುಟ್ಟನಿಗೆ ಮೊದಲಿಗಿಂತ ಜೋರಾಗಿ ಅಳು ಬಂತು.. ಪ್ರಣವನ ಮನೆಯಲ್ಲಿ ಹಾಕ್ತಾರೆ, ಪಲ್ಲವಿಯ ಮನೆಯಲ್ಲಂತೂ ನಿನ್ನೆಯೇ ಹಾಕಿಯಾಗಿದೆ, ಊರಲ್ಲೆಲ್ಲರ ಮನೆಯಲ್ಲೂ ಹಾಕ್ತಾರೆ. ನಮ್ಮ ಮನೆಯಲ್ಲಿ ಮಾತ್ರ ಇಲ್ಲ ಈ ವರ್ಷ.. ಶಾಲೆಗೆ ಹೋಗುವಾಗ ಅವರೆಲ್ಲರೂ ನಮ್ಮನೆಯೆಡೆಗೆ ನೋಡಿಯೇ ನೋಡುತ್ತಾರೆ.. ಆಗ ಇಲ್ಲಿ ಆಕಾಶಬುಟ್ಟಿ ಇಲ್ಲವೆಂದರೆ ಕೇಳಿಯೇ ಕೇಳುತ್ತಾರೆ: 'ಅಕ್ಷಯಾ, ನಿಮ್ಮನೇಲಿ ಮಾತ್ರ ಎಂಥಕ್ ಆಕಾಶಬುಟ್ಟಿ ಹಾಕಲ್ಲೆ?' ಅಂತ.. ಪುಟ್ಟನಿಗೆ ಅಳು ತಡೆಯಲಿಕ್ಕೇ ಆಗಲಿಲ್ಲ..

'ಥೋ.. ಇಷ್ಟ್ ಸಣ್ಣ ಗಾಯಕ್ಕೆ ಎಂಥಕ್ ಇಷ್ಟೆಲ್ಲಾ ಅಳ್ತಾ ಇದ್ಯಾ? ದಿನಾನೂ ಬಿದ್ದು ಗಾಯ ಮಾಡ್ಕ್ಯಂಡ್ ಬರ್ತೆ ನೀನು..' ಅಮ್ಮ ಗೊಣಗಿದಳು.
'ಅಮ್ಮಾ, ನಮ್ಮನೇಲೂ ಆಕಾಶಬುಟ್ಟಿ ಹಾಕವು.. ಎಲ್ಲಾರ್ ಮನೇಲೂ ಹಾಕ್ತ.. ಅಪ್ಪಂಗೆ ಪ್ಯಾಟಿಗ್ ಹೋಗಿ ಹೊಸಾದು ತಗಂಬರಕ್ ಹೇಳು.. ನಂಗೆ ಬೇಕೇ ಬೇಕು..' ಪುಟ್ಟ ಹಟಕ್ಕೆ ಬಿದ್ದ.
'ಅಷ್ಟೇ ಸೈಯಾ? ಅದ್ಕೇ ಇಷ್ಟೆಲ್ಲಾ ರಂಪಾಟಾನಾ? ನಾ ಹೇಳ್ತಿ ಬಿಡು ಅಪ್ಪನ್ ಹತ್ರ..' ಸಮಾಧಾನಿಸಿದಳು ಅಮ್ಮ.
'ಹೇ..' ಅಮ್ಮನಿಗೊಂದು ಮುತ್ತೊತ್ತಿ ಮಡಿಲಿಂದ ಜಿಗಿದೆದ್ದು ಓಡಿದ ಪುಟ್ಟ. ಅವನ ಕೆನ್ನೆಯ ಮೇಲಿಳಿದಿದ್ದ ಕಣ್ಣೀರು ತನ್ನ ತುಟಿಗೆ ತಾಗಿ ಉಪ್ಪುಪ್ಪೆನಿಸಿ 'ಶೀ! ಕೊಳಕು!' ಎಂದು ಒರೆಸಿಕೊಳ್ಳುತ್ತಾ ಒಳನಡೆದಳು ಅಮ್ಮ!

ಅವತ್ತು ರಾತ್ರಿಯ ನಿದ್ರೆಯಲ್ಲಿ ಪುಟ್ಟನಿಗೆ ಕನಸೋ ಕನಸು.. ಕನಸಿನಲ್ಲಿ ಅವನ ಮನೆ ಮುಂದೆ ನೂರಾರು ಆಕಾಶಬುಟ್ಟಿಗಳನ್ನು ನೇತುಹಾಕಲಾಗಿದೆ.. ಒಂದೊಂದೂ ಒಂದೊಂದು ಬಗೆಯ ಬಣ್ಣದ ಬೆಳಕನ್ನು ಬೀರುತ್ತಿದೆ.. ನಕ್ಷತ್ರಲೋಕದಲ್ಲಿರುವವನಂತೆ ಅವನ್ನೆಲ್ಲಾ ಬಾಯ್ಕಳೆದುಕೊಂಡು ನೋಡುತ್ತಾ ಸಂಚರಿಸುತ್ತಿದ್ದಾನೆ ಪುಟ್ಟ..

ಬೆಳಗಾಗಿದೆ. ಇವತ್ತೇ ಹಬ್ಬ! ಇವತ್ತು ಸಂಜೆಯೊಳಗೆ ಮನೆಯೆದುರು ಆಕಾಶಬುಟ್ಟಿ ನೇತಾಡುತ್ತಿರಬೇಕು..! ಅಪ್ಪ ಇನ್ನೇನು ಪೇಟೆಗೆ ಹೊರಡುತ್ತಾನೆ ಹೊಸ ಆಕಾಶಬುಟ್ಟಿ ತರುವುದಕ್ಕೆ ಅಂತ ಒಳಹೊರಗೆ ಓಡಾಡುತ್ತಾ ಕಾಯುತ್ತಿದ್ದಾನೆ ಪುಟ್ಟ. ಊಹುಂ, ಅಪ್ಪ ಹೊರಡುವ ಲಕ್ಷಣವೇ ಕಾಣುತ್ತಿಲ್ಲ. ಕೊಟ್ಟಿಗೆ ತೊಳೆಯುವುದು, ದನಕರುಗಳಿಗೆ ಸಿಂಗಾರ ಮಾಡುವುದು, ತೋರಣ ಕಟ್ಟುವುದು, ಇತ್ಯಾದಿ ಅವನದೇ ಕೆಲಸಗಳಲ್ಲಿ ಮಗ್ನನಾಗಿದ್ದಾನೆ ಅಪ್ಪ. ಹಾಗಾದರೆ ಅಮ್ಮ ಅಪ್ಪನಿಗೆ ಹೇಳಲೇ ಇಲ್ಲವೇ? ಮರೆತುಬಿಟ್ಟಳೇ? ಕೇಳೋಣವೆಂದರೆ ಅಮ್ಮ ಅಡುಗೆಮನೆಯಲ್ಲಿ ಬ್ಯುಸಿ! 'ಮಡಿ..! ಇಲ್ಲೆಲ್ಲಾ ಬರಡ ನೀನು' ಗುರುಗುಡುತ್ತಿದ್ದಾಳೆ ಒಳಗಿಂದಲೇ. ಪುಟ್ಟನಿಗೆ ಆಕಾಶಬುಟ್ಟಿಯದೇ ಚಿಂತೆ..

ಪುಟ್ಟನ ಮನೆಯ ಪಕ್ಕದಲ್ಲಿರುವುದು 'ಮೇಷ್ಟ್ರಂಕಲ್' ಮನೆ. ರಮೇಶ್ ಸೆಬಾಸ್ಟಿಯನ್ ಅವರ ಹೆಸರು. ಸುಮಾರು ವರ್ಷಗಳ ಹಿಂದೆಯೇ ಪಕ್ಕದೂರಿನ ಶಾಲೆಗೆ ಮೇಷ್ಟ್ರಾಗಿ ಬಂದ ಅವರು ಇಲ್ಲಿ ಮನೆ ಮಾಡಿಕೊಂಡು, ರಿಟೈರ್ ಆದಮೇಲೂ ಇಲ್ಲೇ ನೆಲೆಯೂರಿರುವವರು. ಊರವರೆಲ್ಲರ ಜೊತೆ ಚೆನ್ನಾಗಿದ್ದ ಅವರು, ಹಾಗಂತ ಯಾರನ್ನೂ ಅಷ್ಟಾಗಿ ಹಚ್ಚಿಕೊಂಡವರೂ ಅಲ್ಲ. ತಾವಾಯಿತು ತಮ್ಮ ಪಾಡಾಯಿತು ಎಂಬಂತೆ ಇರುವವರು. ಮದುವೆ - ಹಬ್ಬ - ವಿಶೇಷ ದಿನಗಳಂದು ಯಾರ ಮನೆಯಲ್ಲಾದರೂ ಕರೆದರೆ ಹೋಗಿ ಬರುತ್ತಿದ್ದರು. ಹಾಗೆಯೇ ಕ್ರಿಸ್‍ಮಸ್ ದಿನ ಊರವರೆಲ್ಲರೂ ಅವರ ಮನೆಗೆ ಹೋಗಿ, ಮಾಡಿದ್ದ ಅಲಂಕಾರವನ್ನೆಲ್ಲಾ ಹೊಗಳಿ, ಸೆಬಾಸ್ಟಿಯನ್ನರ ಹೆಂಡತಿ ಹಾಕಿಕೊಂಡ ಒಡವೆಗಳನ್ನೂ ಒಮ್ಮೆ ಪರಿಶೀಲಿಸಿ ನೋಡಿ, ಕೇಕು-ಸ್ವೀಟು ತಿಂದು ಬರುತ್ತಿದ್ದರು. ಹಿರಿಯರೂ ನಿವೃತ್ತ ಮಾಸ್ತರರೂ ಆಗಿದ್ದರಿಂದ ಅವರಿಗೆ ಊರಲ್ಲೊಂದು ಗೌರವವಿತ್ತು. ಮತ್ತೆ ಇಡೀ ಊರಲ್ಲಿ ಹುಡುಗರು ಹೀಗೆ ಇಂಗ್ಲೀಷಿನಲ್ಲಿ 'ಅಂಕಲ್' ಅಥವಾ 'ಮೇಷ್ಟ್ರಂಕಲ್' ಅಂತ ಕರೆಯುವುದು ಅವರೊಬ್ಬರನ್ನೇ.

ಅಳುಮುಖ ಮಾಡಿಕೊಂಡು ಹೊರಗಡೆ ಕಟ್ಟೆಯ ಮೇಲೆ ಕೂತಿದ್ದ ಪುಟ್ಟನನ್ನು ಕಂಡು ಅವರು ಮಾತಾಡಿಸಿದರು: 'ಯಾಕ್ ಪುಟ್ಟಾ..? ಹಬ್ಬದ ದಿನ ಖುಶ್‍ಖುಶಿಯಾಗಿರೋದು ಬಿಟ್ಟು ಹೀಗೆ ಕೂತಿದೀಯಾ?' ಅಂತ. ಪುಟ್ಟ ಹೀಗ್ ಹೀಗಾಯ್ತು, ಈ ವರ್ಷ ನಮ್ಮನೇಲಿ ಆಕಾಶಬುಟ್ಟೀನೇ ಇಲ್ಲ ಅಂತ ಹೇಳಿದ. ಮಕ್ಕಳಿಲ್ಲದ ಸೆಬಾಸ್ಟಿಯನ್ ಅಂಕಲ್‍ಗೆ ಪುಟ್ಟನನ್ನ ಕಂಡ್ರೆ ಯಾವಾಗಲೂ ಅಕ್ಕರೆ. ತಕ್ಷಣ ಪುಟ್ಟನನ್ನ ಎತ್ತಿಕೊಂಡ ಅವರು, 'ಅಯ್ಯೋ.. ಅದಕ್ಯಾಕೆ ಇಷ್ಟೆಲ್ಲಾ ಬೇಜಾರ್ ಮಾಡ್ಕೊಂಡಿದೀಯಾ..? ನಮ್ಮನೇಲಿ ಕ್ರಿಸ್‍ಮಸ್ ಟೈಮಲ್ಲಿ ಹಾಕೋ ಆಕಾಶಬುಟ್ಟಿ ಇದೆಯಲ್ಲಾ..? ಅದನ್ನೇ ಕೊಡ್ತೀನಿ. ನಿಮ್ಮನೇಲಿ ಹಾಕಿ. ಹಬ್ಬ ಮುಗಿದ ಮೇಲೆ ವಾಪಸು ಕೊಡಿ.. ಸಿಂಪಲ್..!' ಎಂದವರೇ ಪುಟ್ಟನನ್ನ ತಮ್ಮನೆ ಒಳಗೆ ಕರೆದುಕೊಂಡು ಹೋಗಿ, ಗಾಡ್ರೇಜಿನಲ್ಲಿದ್ದ ಬಣ್ಣಬಣ್ಣದ ಝರಿಯ, ಫಳಫಳನೆ ಹೊಳೆಯುವ, ಹೊಸದರ ಹಾಗೆ ಕಾಣುವ ಆಕಾಶಬುಟ್ಟಿಯನ್ನು ತೆಗೆದುಕೊಟ್ಟರು.. ಪುಟ್ಟನ ಕಣ್ಣಲ್ಲೀಗ ನಕ್ಷತ್ರ ಕಾರಂಜಿ..!

ಅಷ್ಟೊತ್ತಿಗೆ ಗೋಪೂಜೆಗೆ ಕರೆಯಲೆಂದು ಅಲ್ಲಿಗೆ ಬಂದ ಅಮ್ಮನಿಗೆ ಪುಟ್ಟ ಮೇಷ್ಟ್ರಂಕಲ್ ಕೊಟ್ಟ ಆಕಾಶಬುಟ್ಟಿ ತೋರಿಸಿದ. 'ಓಹ್, ಸಿಗ್ತಲ್ಲಪ್ಪಾ ಅಂತೂ ನಿಂಗೆ ಆಕಾಶಬುಟ್ಟಿ..? ಮೇಷ್ಟ್ರ್‍ಏ, ಇವನಿಗೆ ಇವತ್ತು ಹೆಂಗೆ ಸಮಾಧಾನ ಮಾಡೋದು ಅಂತ್ಲೇ ನಂಗೆ ಗೊತ್ತಾಗ್ದೇ ಸುಮ್ನಾಗ್ಬಿಟ್ಟಿದ್ದೆ.. ಅಂತೂ ನೀವು ಇದನ್ನ ಕೊಟ್ಟು ಒಳ್ಳೇ ಕೆಲಸ ಮಾಡಿದ್ರಿ ನೋಡಿ!' ಎಂದು, ಅವರನ್ನು ಮಡದಿ ಸಮೇತ ಪೂಜೆಗೆ - ಊಟಕ್ಕೆ ಬರುವಂತೆ ಕರೆದು ಹೋದಳು.

ಆಕಾಶಬುಟ್ಟಿಯನ್ನು ಹುಶಾರಾಗಿ ಮನೆಗೆ ತಂದ ಪುಟ್ಟ. ಅವನಿಗೆ ಅದನ್ನು ಮನೆಯೆದುರು ನೇತು ಹಾಕಿ, ಒಮ್ಮೆ ಸ್ವಿಚ್ ಹಾಕಿ ನೋಡುವವರೆಗೆ ಸಮಾಧಾನವಿಲ್ಲ.. ಅಪ್ಪನ ಬಳಿ ಕೇಳಿದರೆ 'ಈಗ ಆಗಲ್ಲೆ ಅಪ್ಪೀ.. ಮಧ್ಯಾಹ್ನದ್ ಮೇಲೆ ನೋಡನ.. ಈಗ ಸ್ನಾನಕ್ಕೆ ಹೋಗವು, ಗೋಪೂಜೆ ಮಾಡವು, ದೇವಸ್ಥಾನಕ್ ಹೋಗವು..' ಎನ್ನುತ್ತಾ ಗಡಿಬಿಡಿಯಲ್ಲಿ ಟವೆಲ್ ಎತ್ತಿಕೊಂಡು ಬಚ್ಚಲಿನೆಡೆಗೆ ನಡೆದೇಬಿಟ್ಟ. ಪುಟ್ಟ ಚಡಪಡಿಸುತ್ತಾ ಮನೆಯ ಒಳಗೂ ಹೊರಗೂ ಓಡಾಡತೊಡಗಿದ. ಅಪ್ಪ ಸ್ನಾನ ಮಾಡಿ ಬಂದು, ಮಡಿ ಉಟ್ಟು, ಪೂಜೆ ಸಾಮಾನನ್ನೆಲ್ಲಾ ಎತ್ತಿಕೊಂಡು ಕೊಟ್ಟಿಗೆ ಕಡೆ ಹೊರಟ. ಅಮ್ಮನೂ ಅಪ್ಪನ ಹಿಂದೆಯೇ ನೈವೇದ್ಯಕ್ಕೆ ಭಕ್ಷ್ಯಗಳನ್ನು ಹಿಡಿದು ಹೊರಟಳು. 'ಝಾಂಗ್ಟೆ ಹೊಡಿಲಕ್ಕು ಬಾರಾ' ಎಂದು ಕೂಗಿದರೆ ಪುಟ್ಟ ಸಿಟ್ಟು ಮಾಡಿಕೊಂಡು ಕೊಟ್ಟಿಗೆಗೆ ಹೋಗಲೇ ಇಲ್ಲ.

ಸ್ವಲ್ಪ ಸಮಯದಲ್ಲಿ ಹೊಸ ಬಟ್ಟೆ ಹಾಕಿಕೊಂಡು ಮೇಷ್ಟ್ರಂಕಲ್ ಪುಟ್ಟನ ಮನೆಗೆ ಬಂದರು. ಪುಟ್ಟನ ಚಡಪಡಿಕೆ ಅವರಿಗೆ ಅರ್ಥವಾಯಿತು. ಅದಾಗಲೇ ವೈರೆಳೆದು ತಯಾರಾಗಿದ್ದ ವ್ಯವಸ್ಥೆಗೆ ತಮ್ಮ ಮನೆಯ ಆಕಾಶಬುಟ್ಟಿಯನ್ನು ನೇತುಬಿಟ್ಟರು. ಪುಟ್ಟ ಒಳಗೋಡಿ ಸ್ವಿಚ್ ಹಾಕಿದ. ಕನಸಿನ ಲೋಕದಿಂದಲೇ ಇಳಿದು ಬಂದಂತಿದ್ದ ಆ ಆಕಾಶದೀಪ ಝಗ್ಗನೆ ಹೊತ್ತಿಕೊಳ್ಳುವುದಕ್ಕೂ, ಪುಟ್ಟನ ಮೊಗದಲ್ಲಿ ಖುಶಿಯ ಪಟಾಕಿ ಸಿಡಿದರಳುವುದಕ್ಕೂ, ಕೊಟ್ಟಿಗೆಯಿಂದ ಅಪ್ಪನ ಗೋಪೂಜೆಯ ಘಂಟೆ ಸದ್ದಾಗುವುದಕ್ಕೂ ಸರಿ ಹೋಯಿತು. 'ಹೇ..' ಎನ್ನುತ್ತಾ ಮೇಷ್ಟ್ರಂಕಲ್ಲನ್ನೂ ಎಳೆದುಕೊಂಡೇ ಕೊಟ್ಟಿಗೆಯೆಡೆಗೆ ಓಡಿದ ಪುಟ್ಟ.

* *

ಆಕಾಶಬುಟ್ಟಿಯ ಬೆಳಕು ಮೌಢ್ಯದ ಕತ್ತಲೆಯನ್ನು ತೊಡೆದು, ಸ್ನೇಹ-ಪ್ರೀತಿ-ಸಹಬಾಳ್ವೆಗಳೆಡೆಗೆ ಜನರನ್ನು ನಡೆಸುವಲ್ಲಿ ನೆರವಾಗಲಿ ಎಂದು ಹಾರೈಸೋಣ. ದೀಪಾವಳಿಯ ಶುಭಾಶಯಗಳು.

19 comments:

ಸಂದೀಪ್ ಕಾಮತ್ said...

ಚೆನ್ನಾಗಿದೆ ಆಕಾಶಬುಟ್ಟಿ :)
ನಮ್ಮ ಮನೆಯಲ್ಲೂ ಹಾಕ್ತ ಇದ್ವ ರೆಡಿಮೇಡ್ ಆಕಾಶಬುಟ್ಟಿ.ಆದ್ರೆ ನಮ್ಮ ಮನೆ ಮುಂದೆ ಇರೋ ಹುಡುಗರು ಅವರೇ ಬಣ್ಣದ ಕಾಗದದಿಂದ ಮಾಡಿದ ಆಕಾಶಬುಟ್ಟಿ ಏರಿಸ್ತಾ ಇದ್ರು.ಅವರ ಮನೆಯಲ್ಲಿ ವಿದ್ಯುತ್ ಸಂಪರ್ಕ ಇರದ ಕಾರಣ ಚಿಮಣಿ ದೀಪ ಇಟ್ಟು ಏರಿಸ್ತಾ ಇದ್ರು ಒಂದು ಕಂಬಕ್ಕೆ .
ಕೆಲಾವೊಮ್ಮೆ ಮಾತ್ರ ದೀಪದ ಕಾವು ಜಾಸ್ತಿ ಆಗಿ ಭಗ್ ಅಂತ ಉರೀತಾ ಇತ್ತು ಆಕಾಶಬುಟ್ಟಿ ಆಕಾಶದಲ್ಲೆ.So sad!!

manasa-hegde said...

ಖಂಡಿತ ಸುಶ್ರುತ.. ಪುಟ್ಟನ ಮನಸ್ಸಿನಂಥ ಅವನ ಮನೆಯವ್ರು ಹಾಂಗೇ ಅವನ ಮೇಸ್ಟ್ರಂಕಲ್‌ನಂತವ್ರೂ ಇದ್ದರೆ ನಮ್ಮ ಜೀವನ ಪ್ರೀತಿ-ಸ್ನೇಹ-ಸಹಬಾಳ್ವೆಯಿಂದ ಕಂಗೊಳಿಸ್ತಿರ್ತು ಅಲ್ದಾ? ನಿಂಗೂ ಹಾಗೂ ಎಲ್ಲಾ ಓದುಗರಿಗೂ ನನ್ನ ಕಡೆಯಿಂದ್ಲೂ ದೀಪಾವಳಿಯ ಹಾರ್ದಿಕ ಶುಭಾಶಯಗಳು :)

"ತಮಸೋಮಾ ಜ್ಯೋತಿರ್ಗಮಯ"

Deepasmitha said...

ತುಂಬ ಚೆನ್ನಾಗಿದೆ. ಈ ಸಲ ದೀಪಾವಳಿಗೆ ನಾನೆ ಸ್ವತಃ ಆಕಾಶಬುಟ್ಟಿ ತಯಾರಿಸುತ್ತಿದ್ದೇನೆ. ಚಿಕ್ಕಂದಿನಲ್ಲಿ ಊರಿನಲ್ಲಿ ಮಾವಂದಿರು ತಯಾರಿಸುತ್ತಿದ್ದ ಆಕಾಶಬುಟ್ಟಿಗಳು ನೆನಪಾಗುತ್ತಿದೆ.

ವೈಶಾಲಿ said...

ನಮ್ಮನೆಯಲ್ಲೊಂದು ಚಂದದ ನಾಯಿಯಿತ್ತು. ಮುನ್ನಾ ಅಂತ. ಎಲ್ಲರೂ ತುಂಬ ಹಚ್ಚಿಕೊಂಡಿದ್ದ ಮುದ್ದಿನ ನಾಯಿಯಾಗಿತ್ತದು. ನಾನು ನಾಲ್ಕೈದು ವರ್ಷದಲ್ಲಿದ್ದಾಗಲೇ ದೀಪಾವಳಿಯ ದಿನ ಅದು ತೀರಿಕೊಂಡಿತು. . ಅದರ ನೆನಪಿಗೆ, ಅದಿಲ್ಲದ ಬೇಸರಕ್ಕೆ ಇಂದಿಗೂ ಮನೆಯಲ್ಲಿ ಅಪ್ಪ,ಅಮ್ಮ ದೀಪಾವಳಿಗೆ ಆಕಾಶಬುಟ್ಟಿ ಹಚ್ಚುವುದಿಲ್ಲ.
ನಿಮ್ಮ ಲೇಖನ ಓದಿ ಅದೆಲ್ಲ ಮತ್ತೆ ನೆನಪಾಗಿ ಕಣ್ಣು ಒದ್ದೆಯಾಗಿಬಿಟ್ಟಿತು :( ಆಕಾಶಬುಟ್ಟಿ, ಅದರೊಂದಿಗೆ ಬೆಸೆದುಕೊಂಡ ಹಬ್ಬದ ಸಂಭ್ರಮ...ದೀಪಗಳು..ಸಡಗರ...ಕೂಡ. ಥ್ಯಾಂಕ್ಸ್ ಸುಶ್ರುತ. ಚಂದದ ಬರಹ.

-ವೈಶಾಲಿ

Vijaya said...

:-) chennagide article ... nam maneli idvargoo deepada saalu ittideeve hortu yaavattoo akaashabutti haake illa ... ee sala try maadbeku :-) thanks for the idea!!!!

Lakshmi S said...

:-)very nice...nammaneli bari haNate idtidvi isht warsha..aakaashabuttii try maadbeku naavunu !

Ultrafast laser said...

ಆಕಾಶ ಬುಟ್ಟಿ, ಜಾಗಂಟೆ ಸದ್ದು, ಗೋ ಪೂಜೆ .., ಇಂತಹ ನಾಲ್ಕಾರು ಪದಪುಂಜಗಳನ್ನು ಓದುತ್ತಲೆ, Ultrafast laser lab ನಲ್ಲಿ ಇದ್ದರೂ ಮನಸ್ಸು ಬಾಲ್ಯದೆಡೆಗೆ ಓಡಿತು. ಎಂತಹ ಖಂಡಾಂತರ ವ್ಯತ್ಯಾಸ ಇಂದಿನ ಬದುಕಿಗೂ ಅಂದಿನ ಬದುಕಿಗೂ. ದೀಪಾವಳಿ ಇರಲಿ, ಅಸಲಿಗೆ ಯಾವುದೇ ಸೆಲ್ಲೆಬ್ರಶನ್ ಇಲ್ಲದೆಯೇ ವರ್ಷಗಳೇ ಕಳೆದವು!.
ಇಂತಹ ಬರಹಗಳನ್ನು ಓದಿದಾಗೆಲ್ಲ ಮನಸ್ಸು ಭಾರತದತ್ತ ಓಡುತ್ತದೆ!. ಬೌಧ್ಧಿಕ ಏಕಕಿತನ vs. ಕೌಟುಂಬಿಕ/ಸಮಾಜಿಕ ಏಕಾಕಿತನ - ಇವೆರಡರಲ್ಲಿ ಯಾವುದರ ಭಾರ ಹೆಚ್ಚು?. ಯೋಚಿಸಿದರೆ ಎಂದಾದರೊಂದು ದಿನ ಉತ್ತರ ದೊರಕಬಹುದು, ಆದರೆ ಅಯ್ಕೆಯ ಸ್ವಾತಂತ್ರ್ಯ ಮುಗಿದಿರುತ್ತದೆ!.
D.M.Sagar (Original)

Harish - ಹರೀಶ said...

ನಮ್ಮನೆಲ್ಲೂ ಸಣ್ಣಕಿರಕ್ಕಾರೆ ಅಪ್ಪನ ಹತ್ರಕ್ಕೆ ಹಠ ಮಾಡಿ ಆಕಾಶಬುಟ್ಟಿ ಹಾಕ್ಸ್ತಿದ್ದಿ.. ಈ ಸಲ ಊರಿಗೆ ಹೋದಾಗ ಅದು ಸಿಕ್ರೆ ಹಾಕ್ತಿ..

ಚೆನ್ನಾಗ್ ಬರದ್ದೆ

ಹೊಗಳಿದ್ ಸಾಕು, ಹಬ್ಬಕ್ಕೊಂದೊಂದ್ ಲೇಖನ ಬರೀತಾ ಇದ್ಯಲ.. ಏನ್ ಸಮಾಚಾರ?? ಪನ್ನೀರಿನ ಹುಡುಗಿ ಹಿಂದೆ ಬಿದ್ದಿದ್ಯ ಎಂತು? ಫ್ರೀಕ್ವೆನ್ಸಿ ಜಾಸ್ತಿ ಮಾಡು...

mruganayanee said...

ningu habbada shubhaashayagalu.....

ಶ್ಯಾಮಾ said...

ಚಂದದ ಬರಹ. " ಆಕಾಶಬುಟ್ಟಿ " ನಂಗೂ ಬಹು ಪ್ರಿಯವಾದದ್ದು. ಆಕಾಶಬುಟ್ಟಿಯ ಜೊತೆಗೆ ಬೆಸೆದುಕೊಂಡಿರುವ ಅದೆಷ್ಟೋ ನೆನಪುಗಳು ಸ್ಮೃತಿಪಟಲದಲ್ಲಿ ಹಾದುಹೋದವು.ಯಾವಾಗಲಾದರೂ ನಾನೂ ಬರೆಯವು ಅದರ ಬಗ್ಗೆ ಅನ್ನಿಸ್ತು :) .
ನಿನಗೂ ದೀಪಗಳ ಹಬ್ಬದ ಶುಭಾಷಯಗಳು.

ಚರಿತಾ said...

'ಹೇ,..'!!
ಚೆಂದದ, ಪ್ರೀತಿ ತುಂಬಿದ ಕಥೆ...
ಇಷ್ಟ ಆಯ್ತು..

ನಿಮಗೂ ದೀಪಾವಳಿಯ ಶುಭಾಶಯಗಳು..

ನೀಲಾಂಜಲ said...

ಸಕತ್ ಆಗಿದೆ ನಿಮ್ಮ ಆಕಾಶ ಬುಟ್ಟಿ.
ನನ್ಗೂ ಸಹ ನಿನ್ನೆ ಪುಟ್ಟನ ತರಹ ಕನಸು ಬಿದ್ದಿತ್ತು. ಏಕೆಂದರೆ ಇಲ್ಲಿ ಆಪಾರ್ಟ್‌ಮೆಂಟ್ ನಲ್ಲಿ ಎಲ್ಲರ ಮನೆಯ ಹೊರಗೆ ಬಣ್ಣ ಬಣ್ಣದ್ದು ತೂಗಿ ಹಾಕಿದ್ದಾರೆ. ಇವತ್ತು ಇಂವನತ್ತೀರ ಹಠ ಮಾಡಿ ತೆಗೆಸಿಕೊನ್ಡು ನಾನು ಒಂದು ತೂಗಿ ಹಾಕೋದೇ ಸೈ ಎಂದು ಮಾಡಿದ್ದೇನೆ:D

ನಿಜಕ್ಕೂ ಕತೆಯಲ್ಲಿ ಸ್ನೇಹ-ಪ್ರೀತಿ-ಸಹಬಾಳ್ವೆಯನ್ನು
ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ.

ಚಿತ್ರಾ said...

ಚೆನಾಗಿ ಬರದ್ದೆ.

ಸಣ್ಣಕ್ಕಿದ್ದಾಗ ಮನೆ ಮುಂದೆ ನಂಗನೇ ಮಾಡಿ ನೇತು ಹಾಕ್ತಿದ್ದ ಆಕಾಶಬುಟ್ಟಿ ನೆನಪಾತು.ಅದು ಸ್ವಲ್ಪ ಸೊಟ್ಟ ಪಟ್ಟ ಅದ್ರೂ ನಂಗನೇ ಮಾಡಿದ್ದಕ್ಕೆ ಚೆಂದನೇ ಕಾಣ್ತಿತ್ತು.
ಈಗ ಎಲ್ಲದೂ ರೆಡೀ ಸಿಕ್ತು . ಸ್ವಲ್ಪ ಹೊಸಾತರ ಕಂಡಿದ್ದನ್ನ ತಂದು ನೇತು ಹಾಕದು ! ಮುಂಚಿನ ತರ ಮನೇಲೇ ಮಾಡಷ್ಟು ತಾಳ್ಮೆ , ಸಮಯ ಎರಡೂ ಇಲ್ಲೆ ಈಗ ! ಬೇಜಾರಾಗ್ತು.
ನಿಂಗೂ ದೀಪಾವಳಿಯ ಶುಭಾಶಯಗಳು

ಅಸತ್ಯ ಅನ್ವೇಷಿ said...

ಆಕಾಶಬುಟ್ಟಿಯನ್ನು ಮೊನ್ನೆ ತಾನೇ ಚಂದ್ರನಲ್ಲಿಗೆ ಕಳಿಸ್ಬಿಟ್ರು ನಮ್ ಇಸ್ರೋ ವಿಜ್ಞಾನಿಗಳು.

ನಮ್ಮ ಕೈಗಂತೂ ಸಿಗೋದಿಲ್ಲ....

ದೀಪಾವಳಿ ಶುಭಾಶಯಗಳು

sunaath said...

ಒಳ್ಳೇ ಕತೆ, ಸುಶ್ರುತ.ಓದುತ್ತ ಹೋದಂತೆ ಮನಸ್ಸು ಹಗುರವಾಗುತ್ತದೆ.

ಶರಶ್ಚಂದ್ರ ಕಲ್ಮನೆ said...

ಕತೆ ಚನಾಗಿದ್ದು. ಈ ಸಲ ಹಬ್ಬ ಬೆಂಗಳೂರಲ್ಲೇ,ಇಲ್ಲೇ ಆಕಾಶ ಬುಟ್ಟಿ ಹಚ್ಚದು :)ನಿನಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು

Parisarapremi said...

oLLe aakaashada buTTi.. vijaya try maadtaaLe, naan nOdtini.

Ganesh Puranik said...

Mast idda

Ganesh Puranik said...

mast idda.