Monday, November 17, 2008

ಟೀವಿಯಲ್ಲಿ ನಾವು

"ಸ್ಲಂ ಬಾಲ ಪಿಚ್ಚರ್ ನೋಡಿದ್ರಾ?" ಅಂತ ನಾಗೇಗೌಡ್ರು ಕೇಳಿದಾಗ, "ಹುಂ, ನಿನ್ನೆ ತಾನೇ ನೋಡಿದ್ನಲ್ಲ? ಯಾಕೆ?" ಅಂದೆ. "ಅದ್ರಲ್ಲಿ ನಾನೂ ಯಾಕ್ಟ್ ಮಾಡಿದೀನಿ, ನೋಡ್ಲಿಲ್ವಾ?" ಅಂದರು. "ನೀವಾ?! ಎಲ್ಲಿ? ಯಾವ ಸೀನಲ್ಲಿ?" ಆಶ್ಚರ್ಯದಿಂದ ಕೇಳಿದೆ. ಅವರಂದ್ರು, "ಅದೇ, ಪೋಲೀಸ್ ಕಮಿಷನರ್ ಮೀಟಿಂಗ್ ಕರೆದಿರ್ತಾರಲ್ಲ, ಆಗ ಸುತ್ಲೂ ಸುಮಾರ್ ಪೋಲೀಸ್ರು ಕೂತಿರ್ತಾರೆ.. ಅವ್ರಲ್ಲಿ ಒಬ್ಬ ಪೋಲೀಸ್ ನಾನಾಗಿದ್ದೆ!" "ಓಹ್, ಹೌದಾ? ನಾನು ಗಮನಿಸ್ಲೇ ಇಲ್ಲ.. ಛೇ, ಸುಮ್ನೇ ದುಡ್ಡು ಕೊಟ್ಟು ಹೋದ್ವಲ್ರೀ ನಿನ್ನೆ ನಾವು.. ನೀವು ಯಾಕ್ಟ್ ಮಾಡಿದೀರ ಅಂದ್ಮೇಲೆ ನಮ್ಗೆ ಫ್ರೀ ಟಿಕೇಟ್ ಕೊಡಿಸ್ತಿದ್ರಿ.. ಮಿಸ್ ಮಾಡ್ಕೊಂಡ್ಬಿಟ್ವಿ!" ನಗುತ್ತಾ ಹೇಳಿದೆ. "ಹೆಹ್ಹೆ! ಅದ್ಕೇನಂತೆ, ಮತ್ತೊಂದ್ಸಲ ಹೋಗ್ಬನ್ನಿ. ಕೊಡಿಸ್ತೀನಿ ಟಿಕೇಟು.. ನನ್ನನ್ನೇ ನೋಡ್ಲಿಲ್ಲ ನೀವು ಅಂದ್ಮೇಲೆ ಮತ್ತೊಂದ್ಸಲ ನೋಡೋದು ಸರಿ ಇದೆ.." ಎಂದು ನಗುತ್ತಾ ಖುರ್ಚಿಯಿಂದ ಎದ್ದರು ನಾಗೇಗೌಡ್ರು.

ಈ ನಾಗೇಗೌಡ್ರು ನಮ್ಮ ಕ್ಲೈಂಟು. ಸಿನಿಮಾವೊಂದರಲ್ಲಿ ನಾವು ಇರೋದು ಅಂದ್ರೆ ಅದು ನಿಜಕ್ಕೂ ಹೇಳಿಕೊಳ್ಳಬೇಕಾದ ವಿಷಯವೇ. ಒಂದು ಸಿನಿಮಾ ಅಂದರೆ ಲಕ್ಷಗಟ್ಟಲೇ ಜನ ನೋಡುತ್ತಾರೆ. ಒಂದು ಕ್ಷಣದಲ್ಲಿ ಬಂದು ಹೋಗುವ ಸೀನೇ ಇರಬಹುದು, ಆದರೂ ಅದೊಂದು ಖುಶಿಯ ವಿಷಯವೇ ತಾನೇ? ಹೀಗಾಗಿ ನಾಗೇಗೌಡ್ರು ನನಗೆ ಮತ್ತೊಮ್ಮೆ ಸಿನಿಮಾ ನೋಡಲು ಟಿಕೇಟ್ ತೆಗೆಸಿಕೊಡುತ್ತೀನಿ ಅಂದಿದ್ದರಲ್ಲಿ ಅತಿಶಯೋಕ್ತಿಯೇನೂ ಕಾಣಲಿಲ್ಲ. ಆದರೆ ‘ಸ್ಲಂ ಬಾಲ’ ಪಿಚ್ಚರ್ರು ಮತ್ತೊಮ್ಮೆ ನೋಡುವಷ್ಟೆಲ್ಲಾ ಚೆನ್ನಾಗಿಯೇನೂ ಇಲ್ಲವಾದ್ದರಿಂದ ನಾನು ನಾಗೇಗೌಡ್ರು ಟಿಕೇಟು ತೆಗೆಸಿಕೊಟ್ಟರೂ ಹೋಗುವುದು ಅನುಮಾನ.

* * *

ಹಿಂದೊಮ್ಮೆ ನನ್ನ ಅಜ್ಜ ‘ಸೂರಪ್ಪ’ ಎಂಬ ವಿಷ್ಣುವರ್ಧನ್ ಸಿನಿಮಾದಲ್ಲಿ ನಟಿಸಿದ್ದ. ಅಜ್ಜ ಆಗ ಮೈಸೂರಿನಲ್ಲಿದ್ದ, ಅಲ್ಲಿನ ಯಾವುದೋ ಛತ್ರದಲ್ಲಿ ಇವನು ಅಡುಗೆಗೆ ಹೋಗಿದ್ದಾಗ ಅಲ್ಲಿ ಶೂಟಿಂಗ್ ನಡೆಯುತ್ತಿತ್ತಂತೆ. ಅವತ್ತಿನ ಚಿತ್ರೀಕರಣದಲ್ಲಿ ಭಟ್ಟರ ಅಸಿಸ್ಟೆಂಟ್ ಪಾತ್ರ ಮಾಡಲು ವಯಸ್ಸಾದ ಯಾರಾದರೂ ಒಬ್ಬರು ಬೇಕಿತ್ತು. ನಿರ್ದೇಶಕರು ಅಲ್ಲೇ ಓಡಾಡುತ್ತಿದ್ದ ಅಜ್ಜನನ್ನು ‘ಪಾತ್ರ ಮಾಡುತ್ತೀರಾ?’ ಅಂತ ಕೇಳಿದರಂತೆ. ಅಜ್ಜ ಡ್ರೆಸ್ ಸಮೇತ ತಯಾರಿದ್ದ, (ಹಿಂದೆಲ್ಲಾ ಯಕ್ಷಗಾನ ಕುಣಿದು ರೂಢಿಯಿದ್ದವನು ಅವನು), ‘ಸರಿ’ ಅಂದ! ಡೈರೆಕ್ಟರು ಮತ್ತೊಂದಷ್ಟು ಎಕ್ಸ್‌ಟ್ರಾ ವಿಭೂತಿ ಪಟ್ಟಿ ಬಳಿಸಿ, ಎರಡ್ಮೂರು ಟೇಕ್ ತಗೊಂಡು, ಅಜ್ಜನ ಅಭಿನಯವನ್ನು ಸೆರೆ ಹಿಡಿದೇಬಿಟ್ಟರು.

ಅದಾದನಂತರ ಮನೆಗೆ ಫೋನ್ ಮಾಡಿದ್ದಾಗ ಅಜ್ಜ ಇದರ ಬಗ್ಗೆ ಹೇಳಿದ್ದ. ಸಾಗರಕ್ಕೆ ಆ ಸಿನಿಮಾ ಮೂರ್ನಾಲ್ಕು ತಿಂಗಳ ನಂತರ ಬಂತು. ಹೋಗಲಾಗದೇ ಇದ್ದೀತೇ? ನನಗೆ ಒಂದು ವಾರದಲ್ಲಿ ಪರೀಕ್ಷೆ ಇದ್ದರೂ ಅಪ್ಪನೊಂದಿಗೆ ಹೋಗಿ ಸಿನಿಮಾ ನೋಡಿ ಬಂದಿದ್ದೆ. ಅಜ್ಜ ಪರದೆಯ ಮೇಲಿರುವುದು ಮೂರರಿಂದ ನಾಲ್ಕು ಸೆಕೆಂಡು, ಸಿನಿಮಾದ ಕೊನೆಯಲ್ಲಿ. ಎರಡೂ ಕಾಲು ತಾಸು ಸಿನಿಮಾವನ್ನು ‘ಅಜ್ಜ ಈಗ ಬರುತ್ತಾನೆ, ಈಗ ಬರುತ್ತಾನೆ’ ಅಂತ ಕಾದು ಕಾದು, ಪ್ರತಿ ಸೀನಿನಲ್ಲಿ ಜಂಗುಳಿ ಕಂಡಾಗಲೂ ‘ಇದರಲ್ಲೆಲ್ಲಾದರೂ ಅಜ್ಜ ಮಿಸ್ ಆಗಿಬಿಟ್ಟರೆ ಕಷ್ಟ’ ಅಂತ ಕಣ್ಣು ಕೀಲಿಸಿಕೊಂಡು ನೋಡಿ, ಇಂಟರ್‌ವೆಲ್ಲಿನಲ್ಲಿ ಹ್ಯಾಪ ಮೋರೆ ಹಾಕಿಕೊಂಡು ಕಡಲೆ ತಿಂದು, ಸಿನಿಮಾ ಮುಗಿಯಲು ಬರುತ್ತಿದ್ದಾಗ ‘ಅಯ್ಯೋ ಅಜ್ಜ ಬರಲೇ ಇಲ್ವಲ್ಲಪ್ಪಾ’ ಅಂದುಕೊಳ್ಳುತ್ತಿರುವಾಗಲೇ ಗೂನು ಬೆನ್ನಿನ ನನ್ನ ಅಜ್ಜ ಕುಂಟುತ್ತಾ ಬಂದಿದ್ದ..! ಅವನು ಕಣ್ ಕಣ್ ಬಿಡುತ್ತಾ ದೊಡ್ಡ ಭಟ್ಟರ ಪಕ್ಕ ನಿಂತಿದ್ದು ನೋಡಿ ನಾನಂತೂ ಖುಶಿಯಿಂದ ಚಪ್ಪಾಳೆ ತಟ್ಟುತ್ತಾ ಕುಣಿದಾಡಿಬಿಟ್ಟಿದ್ದೆ. ನನ್ನ ಹಿಂದು-ಮುಂದಿನ ಸೀಟಿನವರು ‘ಈ ಸೀನಿನಲ್ಲಿ ಚಪ್ಪಾಳೆ ತಟ್ಟುವಂಥದ್ದು ಏನಿದೆ?’ ಎಂದು ವಿಚಿತ್ರವಾಗಿ ನನ್ನನ್ನೇ ನೋಡಿದ್ದರು.

ಊರಿಗೆ ಬಂದು, ಸುಮಾರು ಜನರಿಗೆ ಹೇಳಿ, ಅವರೂ ಹೋಗಿ ನೋಡಿಕೊಂಡು ಬಂದಿದ್ದರು. ‘ಅಯ್ಯೋ, ಹೌದೇ ವರಮಾಲಕ್ಷ್ಮಕ್ಕ, ಅನಂತಣ್ಣ ಘನಾಗ್ ಕಾಣ್ತ’ ಅಂತ ಶ್ರೀಮತಕ್ಕ ನನ್ನ ಅಜ್ಜಿಯ ಬಳಿ ಹೇಳಿದಾಗ ‘ಹೌದನೇ?’ ಎನ್ನುತ್ತಾ ನಾಚಿದ್ದಳು ಅಜ್ಜಿ. ನಾನು ಅಜ್ಜನಿಗೆ ಫೋನ್ ಮಾಡಿ ‘ಅಜ್ಜಾ, ಸಖ್ಖತ್ತಾಗ್ ಯಾಕ್ಟ್ ಮಾಡಿದ್ದೆ ನೀನು’ ಎಂದು ಉಬ್ಬಿಸಿದ್ದೆ ಸಹ.

ಆಮೇಲೆ ಆ ಸಿನಿಮಾ ಟೀವಿಯಲ್ಲೂ ಪ್ರಸಾರವಾಗಿತ್ತು. ಆಗ ಊರವರೆಲ್ಲಾ ನಮ್ಮ ಮನೆಯಲ್ಲಿ ಸೇರಿದ್ದರು. ಎಲ್ಲರ ಮನೆಯಲ್ಲೂ ಟೀವಿಯಿದ್ದರೂ, ಪಾತ್ರಧಾರಿಯ ಮನೆಯಲ್ಲೇ ಕೂತು ಸಿನಿಮಾ ನೋಡುವುದರಲ್ಲಿ ಇರುವ ಥ್ರಿಲ್ ಹೆಚ್ಚಲ್ಲವೇ! ಕರೆಂಟು ಹೋಗುವುದು-ಬರುವುದು ಆಗುತ್ತಿತ್ತು.. ಜಾಹೀರಾತುಗಳಂತೂ ಅವತ್ತೇ ಜಾಸ್ತಿಯಿದ್ದಂತ್ತಿತ್ತು.. ಈಗಾಗಲೇ ಸಿನಿಮಾ ನಾನು ನೋಡಿಬಿಟ್ಟಿದ್ದರಿಂದ ‘ತಲೆಬಿಸಿ ಮಾಡ್ಕ್ಯಳಡಿ.. ಈಗಲ್ಲ, ಲಾಸ್ಟಿಗೆ ಬರ್ತ ಅಜ್ಜ’ ಎಂದು, ಎಲ್ಲಾ ತಿಳಿದವನಂತೆ, ಎಲ್ಲರಿಗೂ ಸಮಾಧಾನ ಮಾಡುತ್ತಿದ್ದೆ.. ಅಂತೂ ಅಜ್ಜ ಬರುವ ಕೊನೆಯ ಸೀನ್ ಹತ್ತಿರ ಬಂದಾಗ, ‘ಹೂಂ, ಈಗ್ಲೇಯ, ಎಲ್ಲಾ ನೋಡ್ತಿರಿ, ಈಗ ಬರ್ತ ಅಜ್ಜ..’ ಎನ್ನುತ್ತಿದ್ದೆ, ಅಷ್ಟರಲ್ಲಿ.... ಇಲ್ಲ, ಕರೆಂಟು ಹೋಗಲಿಲ್ಲ, ಅಜ್ಜ ಬಂದ! (ಸಾಮಾನ್ಯವಾಗಿ ನಮ್ಮೂರಿನ ಕರೆಂಟು ಇಂತಹ ಸಮಯವನ್ನೇ ಕಾಯುತ್ತಿರುತ್ತದೆ ಹೋಗುವುದಕ್ಕೆ: ಕ್ರಿಕೆಟ್ ಮ್ಯಾಚಿನ ಕೊನೆಯ ಓವರು, ಸಿನಿಮಾದ ಕ್ಲೈಮ್ಯಾಕ್ಸ್ ಸೀನು, ಧಾರಾವಾಹಿಯ ಕೊನೇ ಕ್ಷಣ, ಹೀಗೆ. ಆದರೆ ಅವತ್ತು ಪುಣ್ಯಕ್ಕೆ ಹೋಗಲಿಲ್ಲ.) ‘ಓಹೋಹೋ! ಅನಂತಣ್ಣ!’ ಎಂದು ಎಲ್ಲರೂ ಒಕ್ಕೊರಲಿನಿಂದ ಉದ್ಘರಿಸಿದರು. ಅಜ್ಜಿಯಂತೂ ಟೀವಿಯ ಬುಡಕ್ಕೇ ಹೋಗಿ ತನ್ನ ಪತಿದೇವರನ್ನು ನೋಡಿದಳು. ‘ಹೌದೇ ಹೌದಲೇ!’ ಎಂದಳು. ಆದ ಆನಂದಕ್ಕೆ ಅವಳ ಕಣ್ಣಿಂದ ಒಂದೆರಡು ಹನಿಗಳೂ ಉದುರಿದವು. ಆಮೇಲೆ ಅಮ್ಮ ಎಲ್ಲರಿಗೂ ಸಕ್ಕರೆ ಹಂಚಿದಳು, ಈ ಹೆರಿಗೆ ಆದಕೂಡಲೇ ಹಂಚುತ್ತಾರಲ್ಲಾ, ಹಾಗೆ.

* * *

ದೂರದರ್ಶನದ ‘ಚಂದನ’ ವಾಹಿನಿಯಲ್ಲಿ ‘ಥಟ್ ಅಂತ ಹೇಳಿ?!’ ಎಂಬ ಕ್ವಿಜ್ ಕಾರ್ಯಕ್ರಮವೊಂದು ಬರುತ್ತದೆ. ಡಾ| ನಾ. ಸೋಮೇಶ್ವರ ಅವರು ನಡೆಸಿಕೊಡುವ ಬಹು ಜನಪ್ರಿಯ ಕಾರ್ಯಕ್ರಮ ಅದು. ಅಪ್ಪನಿಗೆ ತಾನೊಮ್ಮೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬ ಹಂಬಲ ಬಂತು. ದೂರದರ್ಶನಕ್ಕೆ ಪತ್ರ ಹಾಕಿದ. ಇಂತಹ ದಿನ ಬರಬೇಕೆಂದು ಕರೆ ಬಂತು. ಅಪ್ಪ ನನಗೆ ಫೋನ್ ಮಾಡಿ ಬೆಂಗಳೂರಿಗೆ ಬರುತ್ತಿರುವುದಾಗಿ ತಿಳಿಸಿದ.

ಅಪ್ಪನನ್ನು ಕರೆದುಕೊಂಡು ದೂರದರ್ಶನ ಕಛೇರಿಗೆ ಹೋದೆ. ಹೆಸರು ಬರೆಸುವುದು, ಸಹಿ ಪಡೆಯುವುದು, ಮೊಬೈಲ್ ತೆಗೆದಿಟ್ಟುಕೊಳ್ಳುವುದು ಇತ್ಯಾದಿ ಪ್ರೊಸೀಜರ್ರುಗಳೆಲ್ಲ ಮುಗಿದು, ‘ಶ್ ಶ್’ ಎನ್ನುತ್ತಾ ಸ್ಟುಡಿಯೋದೊಳಗೆ ನಮ್ಮನ್ನು ಬಿಡಲಾಯಿತು. ಸ್ಟುಡಿಯೋವೊಂದರ ಒಳಗೆ ನಾನು ಮತ್ತು ಅಪ್ಪ ಇದೇ ಮೊದಲು ಕಾಲಿಡುತ್ತಿದ್ದುದು.. ಅಲ್ಲಿ ಅದಾಗಲೇ ಸಂಚಿಕೆಯೊಂದರ ಚಿತ್ರೀಕರಣ ನಡೆಯುತ್ತಿತ್ತು. ಸೋಮೇಶ್ವರರು ಎದುರಿಗೆ ಕೂತ ಮೂವರು ಸ್ಪರ್ಧಿಗಳಿಗೆ ಪ್ರಶ್ನೆಗಳ ಬಾಣ ಎಸೆಯುತ್ತಿದ್ದರು. ನಮ್ಮನ್ನು ದೂರದಲ್ಲಿ ಇದ್ದ ಖುರ್ಚಿಗಳಲ್ಲಿ ಶಬ್ದ ಮಾಡದಂತೆ ಕೂತಿರುವಂತೆ ಸೂಚಿಸಲಾಯಿತು. ಮುಂದಿನ ಚಿತ್ರೀಕರಣಕ್ಕೆ ತಾನು ಹೋಗಬೇಕಲ್ಲವೇ- ಅಪ್ಪ ಎಲ್ಲವನ್ನೂ ಕುತೂಹಲದಿಂದ ನೋಡಿಕೊಳ್ಳುತ್ತಿದ್ದ.. ಫೋಕಸ್ ಲೈಟುಗಳು, ಸ್ಕ್ರೀನುಗಳು, ಬ್ಯಾಕ್‌ಗ್ರೌಂಡಿನ ಬಣ್ಣಗಳನ್ನು ಲೇಸರ್ ರೇಗಳಿಂದ ಬದಲಿಸುವುದು, ಮೇಲ್ಗಡೆ ಕೋಣೆಯಲ್ಲಿ ಕೂತ ಡೈರೆಕ್ಟರ್ ಕೊಡುವ ಸೂಚನೆಗಳನ್ನು ಪಾಲಿಸುವ ಕೆಮೆರಾದವರು... ಸೋಮೇಶ್ವರರೂ ಕಿವಿಗೆ ಒಂದು ಇಯರ್‌ಫೋನ್ ಹಾಕಿಕೊಂಡಿರುತ್ತಾರೆ, ಚಿತ್ರೀಕರಣದ ಮಧ್ಯೆ ಅಲ್ಲಲ್ಲಿ ‘ಕಟ್’, ‘ರಿಪೀಟ್’ ಇತ್ಯಾದಿ ಪ್ರಸಂಗಗಳು ನಡೆದಿರುತ್ತವೆ ಅಂತೆಲ್ಲ ಗೊತ್ತಾಗಿದ್ದೇ ಆವಾಗ ನಮಗೆ..!

ನಿಧಾನಕ್ಕೆ ಪಕ್ಕದಲ್ಲಿದ್ದ ಅಪ್ಪನ ಮುಖವನ್ನು ನೋಡಿದೆ ನಾನು.. ಅಪ್ಪ ಸ್ವಲ್ಪ ಹೆದರಿದ್ದಂತೆ, ನರ್ವಸ್ ಆಗಿದ್ದಂತೆ ಕಂಡಿತು.. ಆ ಚಿತ್ರೀಕರಣದ ನಂತರ ಅಪ್ಪನನ್ನು ವೇದಿಕೆಗೆ ಕರೆದರು. ಅಪ್ಪ ನನ್ನತ್ತ ಬಾಗಿ ‘ಹೋಗ್ಬರ್ತಿ ಹಂಗರೆ’ ಎಂದ.. ಪ್ರತಿ ಪರೀಕ್ಷೆಗೆ ಹೋಗುವಾಗಲೂ ನನಗೆ ‘ಚನಾಗ್ ಮಾಡು.. ಟೆನ್ಷನ್ ಮಾಡ್ಕ್ಯಳಡ..’ ಅಂತೆಲ್ಲ ಹೇಳಿ ಕಳುಹಿಸುತ್ತಿದ್ದವ ಅಪ್ಪ.. ಅಪ್ಪ ಈಗ ಪರೀಕ್ಷೆಗೆ ಹೊರಟ ಪುಟ್ಟ ವಿದ್ಯಾರ್ಥಿಯಂತೆಯೇ ಕಾಣಿಸಿದ.. ‘ಆಲ್ ದಿ ಬೆಸ್ಟ್!’ ಎಂದು ಕೈ ಅದುಮಿದೆ.. ಅಪ್ಪನೊಂದಿಗೆ ಭಾಗವಹಿಸುವ ಮತ್ತಿಬ್ಬರು ಸ್ಪರ್ಧಿಗಳೂ ವೇದಿಕೆಗೆ ಬಂದರು.. ಸಿಟ್ಟಿಂಗ್ ಪೊಸಿಷನ್, ವಾಯ್ಸ್ ಟೆಸ್ಟಿಂಗ್, ಬಜರ್ ಒತ್ತುವುದನ್ನು ಹೇಳಿಕೊಡುವುದು, ಎಲ್ಲಾ ಮುಗಿಯಿತು. ಸೋಮೇಶ್ವರರು ಡ್ರೆಸ್ ಬದಲಿಸಿಕೊಂಡು ಬಂದರು. ಕೆಮೆರಾದವರೆಲ್ಲಾ ತಯಾರಾದ ಮೇಲೆ, ಮೇಲಿದ್ದ ಡೈರೆಕ್ಟರ್ ‘ಸ್ಟಾರ್ಟ್’ ಎಂದಿದ್ದೇ ತಡ,

‘ಸ್ವಾಗತಾ.. ಸುಸ್ವಾಗತಾ.. ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ..!’ ಎಂದು ಸೋಮೇಶ್ವರರು ತಮ್ಮ ಎಂದಿನ ಶೈಲಿಯಲ್ಲಿ ಶುರು ಮಾಡಿಯೇ ಬಿಟ್ಟರು! ಇದೊಂಥರಾ ತೀರಾ ನಾಟಕೀಯವೆನಿಸಿತಾದರೂ ನಾನು ಉತ್ಸಾಹ ತಡೆಯಲಾರದೇ ಖುರ್ಚಿಯಿಂದೊಮ್ಮೆ ಎದ್ದು ಕೂತೆ! ಸ್ಪರ್ಧಿಗಳ ಪರಿಚಯವಾಯಿತು, ಪ್ರಶ್ನೆಗಳು ಒಂದಾದ ನಂತರ ಒಂದು ಬರಲಾರಂಭಿಸಿದವು.. ಮನೆಯಲ್ಲಿ ಟೀವಿ ಮುಂದಿರುವಾಗ ಅಷ್ಟೂ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುತ್ತಿದ್ದ ಅಪ್ಪ ಇಲ್ಲಿ ತಡವರಿಸಲಾರಂಭಿಸಿದ.. ನನಗೆ ಜಯಂತ ಕಾಯ್ಕಿಣಿಯವರ ‘ಟಿಕ್ ಟಿಕ್ ಗೆಳೆಯ’ ಕಥೆ ನೆನಪಾಗುತ್ತಿತ್ತು.. ಎರಡ್ಮೂರು ಪ್ರಶ್ನೆಗಳಿಗೆ ಅಪ್ಪ ತಪ್ಪು ಉತ್ತರ ಕೊಟ್ಟ. ಮಧ್ಯೆ ಒಮ್ಮೆ ಬ್ಯಾಕ್‌ಗ್ರೌಂಡ್ ಲೈಟ್ ಏನೋ ತೊಂದರೆ ಕೊಟ್ಟು ಚಿತ್ರೀಕರಣ ಕಟ್ ಮಾಡಿ ನಿಲ್ಲಿಸಿದರು. ಆಗ ಅಪ್ಪ ದೂರದಲ್ಲಿ ಕತ್ತಲಲ್ಲಿ ಕೂತಿದ್ದ ನನ್ನನ್ನು ನೋಡಿ ಮುಗುಳ್ನಕ್ಕ. ನಾನು ಕೈ ಮಾಡಿದೆ. ಮತ್ತೆ ಕಾರ್ಯಕ್ರಮ ಮುಂದುವರೆಯಿತು. ಕೊನೆಯಲ್ಲಿ ಅಪ್ಪ ಐದು ಪುಸ್ತಕಗಳನ್ನು ಗೆದ್ದುಕೊಂಡು ಕೆಳಗಿಳಿದು ಬಂದ. ‘ಕಂಗ್ರಾಜುಲೇಷನ್ಸ್!’ ಎಂದರೆ, ‘ಎಂಥಾ, ಫುಲ್ ಟೆನ್ಷನ್ ಆಗಿಹೋತು.. ಎಷ್ಟ್ ಸುಲಭದ ಪ್ರಶ್ನೆ ಇತ್ತು.. ಥೋ..!’ ಎಂದು ಅಲವತ್ತುಕೊಳ್ಳುತ್ತಲೇ ಅಪ್ಪ ಸ್ಟುಡಿಯೋದಿಂದ ಹೊರಬಂದ.

ಅಪ್ಪನಿಗೆ ಎಳನೀರು ಕುಡಿಸುತ್ತಾ ಮನೆಗೆ ಫೋನ್ ಮಾಡಿದೆ. ‘ಐದೇ ಪುಸ್ತಕವಾ? ಅಷ್ಟೂ ಪುಸ್ತಕ ತಗಂಬರ್ತಿ ನೋಡು ಅಂತ ಹೇಳಿ ಕೊಚ್ಕ್ಯಂಡ್ ಹೋಯ್ದ ಇಲ್ಲಿಂದ.. ಬರ್ಲಿ ಇರು!’ ಎಂದಳು ಅಮ್ಮ. ನಾನು ನಕ್ಕೆ. ಕಾರ್ಯಕ್ರಮ ಪ್ರಸಾರವಾದ ದಿನ ಮತ್ತೆ ನಮ್ಮ ಮನೆಯಲ್ಲಿ ಊರವರೆಲ್ಲಾ ಸೇರಿದ್ದರಂತೆ. ರಾತ್ರಿ ಫೋನಿಸಿದ ನನ್ನ ಬಳಿ ಅಮ್ಮ ‘ಇಶೀ, ಕಪ್ಪಗ್ ಕಾಣ್ತಿದ್ವಪ.. ಎಂಥೇನ, ಪೌಡರ್ ಆದ್ರೂ ಹಚ್ಕ್ಯಂಡ್ ಹೋಗ್ಲಾಗಿತ್ತು. ನಿಂಗೆ ಹೇಳಕ್ಕಾಗಲ್ಯಾ?’ ಎಂದಳು!

* * *

‘ಅಜ್ಜ ಬಂದ, ಮಗ ಬಂದ, ಇನ್ನು ಮೊಮ್ಮಗ ಬಪ್ದು ಯಾವಾಗ ಟೀವಿಲಿ?’ ಊರವರು ಕೇಳುತ್ತಿದ್ದರು..

ಆವತ್ತು ಆಫೀಸಿನಲ್ಲಿದ್ದೆ. ಸೋಮವಾರದ ಬ್ಯುಸಿ. ಶ್ರೀನಿಧಿ ಫೋನಿಸಿದ: ‘ದೋಸ್ತಾ ಆಫೀಸಲ್ಲಿದ್ಯಾ? ನಮ್ ಛಾನೆಲ್ಲಿಗೆ ನಿಂದೊಂದು ಸಣ್ಣ ಸಂದರ್ಶನ ಬೇಕು. ಬರ್ತಿದ್ದಿ ಈಗ ಅಲ್ಲಿಗೆ!’ ಹಹ್! ನನ್ನ ಸಂದರ್ಶನವಾ? ಏನಾಗಿದೆ ಇವನಿಗೆ ಅನ್ನಿಸಿತು. ‘ನಂದಾ? ಯಾಕೆ? ಏನು?’ ಕೇಳಿದೆ. ‘ಏನಿಲ್ಲಾ, ನಮ್ಮ ಛಾನೆಲ್ಲಿನಲ್ಲಿ ಯಾವ ತರಹದ ಕಾರ್ಯಕ್ರಮಗಳನ್ನು ನೀನು ನಿರೀಕ್ಷಿಸ್ತೀಯ ಅಂತ ಐದು ನಿಮಿಷ ಮಾತಾಡು ಸಾಕು’ ಎಂದ. ನಾನು ಟೀವಿಯನ್ನೇ ನೋಡುವವನಲ್ಲ, ಇನ್ನು ಇದು ಹೇಗೆ ಹೇಳಲಿ?! ಆದರೂ ನಿಧಿ ಬಿಡಲಿಲ್ಲ. ಅವನೇ ಏನೇನೋ ಟಿಪ್ಸ್ ಕೊಟ್ಟ. ‘ಸರಿ ಮಾರಾಯ’ ಅಂತ ಒಪ್ಪಿಕೊಂಡೆ. ಈ ಸಲ ನನ್ನ ಕಲೀಗುಗಳು ‘ಆಲ್ ದಿ ಬೆಸ್ಟ್’ ಹೇಳಿದರು. ಆಫೀಸಿನ ಪಕ್ಕದ ಪಾರ್ಕಿನ ಎದುರು ನನ್ನನ್ನು ನಿಲ್ಲಿಸಿ ‘ಹೂಂ, ಮಾತಾಡು!’ ಎಂದ ನಿಧಿ; ನಾನು ಬೆವರತೊಡಗಿದೆ.

ಅದು ಪ್ರಸಾರವಾದ ದಿನ ನಮ್ಮೂರಿನಲ್ಲಿ ಕರೆಂಟ್ ಇರಲಿಲ್ಲ. ಅಪ್ಪ ಬೇರೆ ಊರಿನ ಆ ಛಾನೆಲ್ ಬರುವ ಮನೆಗೆ ಹೋಗಿ ನೋಡಿಕೊಂಡು ಬಂದಿದ್ದ. ನಾನು ಆಗ ಆಫೀಸಿನಲ್ಲಿದ್ದೆ, ಹಾಗಾಗಿ ನೋಡಲು ಆಗಲಿಲ್ಲ. ನನ್ನ ಹೆಸರಿನ ಕೆಳಗೆ ‘ಉದಯೋನ್ಮುಖ ಸಾಹಿತಿ’ ಅಂತೇನೋ ತೋರಿಸಿದ್ದರಂತೆ. ನನಗೆ ಮೈ ಉರಿದುಹೋಗಿ ನಿಧಿ ಸಿಕ್ಕಾಗ ಕೊಲೆ ಮಾಡಬೇಕು ಅಂದುಕೊಂಡಿದ್ದೆ. ಕೊನೆಗೆ, ‘ಪಾಪ, ಎಷ್ಟಂದ್ರೂ ನನ್ ಡಾರ್ಲಿಂಗ್ ಅಲ್ವಾ?’ ಅಂತ ಬಿಟ್ಟುಬಿಟ್ಟೆ. ಅದೇ ನಾನು ಮಾಡಿದ ದೊಡ್ಡ ತಪ್ಪು ಅಂತ, ಈಗ ದಿನಕ್ಕೊಮ್ಮೆ ಅವನು ಫೋನ್ ಮಾಡಿ ‘ಏನಾದ್ರೂ ಬರೆಯೋ..’ ಎಂದು ಕಾಟ ಕೊಡುವಾಗ ಅನ್ನಿಸುತ್ತಿದೆ. ;)

33 comments:

ಶಾಂತಲಾ ಭಂಡಿ (ಸನ್ನಿಧಿ) said...

ಪುಟ್ಟಣ್ಣಾ...
ರಾಶೀ ಇಷ್ಟ ಆತು ಪುಟ್ಟಣ್ಣ. ಮಧ್ಯೆ ಮಧ್ಯೆ ಬಳಸಿದ ಭಾಷೆಯೇ ಸಾಕು ಹಿಡಿದಿಟ್ಟುಕೊಳ್ಳುವುದಕ್ಕೆ.

VENU VINOD said...

ಅಂತೂ ಅಪ್ಪ ಮಗ ಇಬ್ರೂ ಟೀವೀಲಿ ಮಿಂಚಿದ್ರಿ ಬಿಡಿ :) ಸುಲಲಿತ ಪ್ರಬಂಧ ಚನಾಗಿದೆ

Archu said...

Hey Sush,
mooru talemaarina sinima/tv puraana !! wow..wonderful!!
Cheers,
Archana

ರಂಜನಾ ಹೆಗ್ಡೆ said...

ಓಹೋ ಹೋ ಟಿವಿಯಲ್ಲಿ ಅಜ್ಜ ಮಗ ಮೊಮ್ಮೊಗ ಎಲ್ಲಾ ಬಂದಿದ್ರಾ?
ಸೂರಪ್ಪ ಮೂವೀ ನೋಡಬೇಕು ಹಂಗಾದರೆ.

ಚನಾಗಿ ಇದೆ ಲೇಖನ.

Shankar Prasad ಶಂಕರ ಪ್ರಸಾದ said...

ಸಖತ್ ಕಣಮ್ಮ..
ನಿಧಿ ಡಾರ್ಲಿಂಗ್ ಗೆ ಒಂದು ಥ್ಯಾಂಕ್ಸ್ ಹೇಳು.
ಅಂದ ಹಾಗೆ ನಾನ್ ಕೂಡ ಹಂಗೆ ಮಿಂಧಿ ಹೋದ ಒಂದು ಪಾರ್ಟ್ ಮಾಡಿದೀನಿ.
ಹೆತ್ತವರು ಅನ್ನೋ ಫಿಲಮ್ಮು ಬಂದಿತ್ತು ಗೊತ್ತ ? ಕಲ್ಯಾಣ್ ಕುಮಾರ್, ಅಭಿಜಿತ್ ನಟಿಸಿದ್ದು ?
ಅದರ ಒಂದು ಫೈಟಿಂಗ್ ದೃಶ್ಯ ಮೈಸೂರಿನ ವಿವೇಕಾನಂದ ಸರ್ಕಲ್ ನಲ್ಲಿ ಇತ್ತು. ಆ ಸೀನ್ ನಲ್ಲಿ ಅಭಿಜಿತ್ ಫಿಟ್ ಮಾಡ್ತಾ ಇರೋವಾಗ, ಅವನ ಹಿಂಗೆ ನಿಂತಿದ್ದ ಜನರಲ್ಲಿ, ನಾನೂ ಒಬ್ಬ !!!
ಸಖತ್ ಆಲ್ವಾ ?

ಕಟ್ಟೆ ಶಂಕ್ರ

Parisarapremi said...

ನೀನ್ ಯಾವಾಗ್ ಬುದ್ಧಿ ಕಲ್ತ್ಕೋತೀಯೋ ಭಗವಂತ!!!

ಯಜ್ಞೇಶ್ (yajnesh) said...

ಸುಶ್ರುತ,

ನಿಮ್ಮ ಮನೆಗೆ "ಟಿ.ವಿ. ರ ಮನೇ" ಅಂತ ಹೆಸ್ರು ಬಂದ್ರೂ ಬರ್ಲಕ್ಕು. ಊರ ಕಡೇ ಹಂಗೇ ಅಲ್ದಾ??? ಅವಂಗೆ ಎಲ್ಲಾತೋ ಅಂದ್ರೆ, ಅವಂ ಕೊಬ್ಬರಿ ಮನೆ ಆತಪ ಹೇಳ್ತಾ. ಯಾವ್ದೋ ಕಾಲ್ದಲ್ಲಿ ಅವರ ಮನೇಲಿ ಕೊಬ್ಬರಿ ಜಾಸ್ತಿ ಇತ್ತಡ. ಈಗ್ಲೂ ಅದೇ ಹೆಸ್ರಿದ್ದು. ನೀನು ಊರಿಗೆ ಹೋದಾಗ.. ಅವಂ ಯಾರೋ ಅಂದ್ರೆ.. ಅವಂ ಟಿ.ವಿ. ರ ಮನೇ ಅಪ್ಪಿ ಅಂತ ಹೇಳಿದ್ರೂ ಹೇಳ್ದಾ..ಹ್ಹ ಹ್ಹ ಹ್ಹ

ತಟ್ಟಂತ ಹೇಳಿ ಕಾರ್ಯಕ್ರಮಕ್ಕೆ ನನ್ನ ಭಾವಯ್ಯ ಒಬ್ಬ ಹೋಗಿದ್ದ. ಹೋಗಿ ತಟ್ಟಂತೆ ವಾಪಾಸ್ ಬಂದಿದ್ದ. ಒಂದೂ ಪುಸ್ತಕ ಬರ್ಲೆ. ಅವಂ ತುಂಬಾ ಬುದ್ದಿವಂತ.. ಆದ್ರೆ ಹೆದ್ರಿಕಿಂಡು ತಪ್ಪು ಉತ್ರ ಕೊಟ್ಟಿದ್ದ. ನಾವೆಲ್ಲಾ ತಮಾಷೆ ಮಾಡಿದ್ರೆ, ನೀನು ಹೋಗ್ ನೋಡು. ಅಲ್ಲಿಂದ ಹೆದ್ರ್ಕಿಂಡು ಓಡಿ ಬತ್ತೆ ಅಂತ ಹೇಳ್ತ.


ಲೇಖನ ತುಂಬಾ ಚೆನ್ನಾಗಿ ಬೈಂದು.

ಸಿಂಧು sindhu said...

ಸುಶ್ರುತ,
ಸಕ್ಕತಾಗಿದ್ದು. ರಾಶಿ ಇಷ್ಟ ಆತು.

ಪ್ರೀತಿಯಿಂದ
ಸಿಂಧು

Ittigecement said...

ಸರಳವಾದ ಬರವಣಿಗೆ.. ಅಸಕ್ತಿಯಿಂದ ಓದುವಂತೆ ಮಾಡುತ್ತದೆ... ಧನ್ಯವಾದಗಳು.

Shree said...

ಯಾಕಪ್ಪಾ ನೀನು ಉದಯೋನ್ಮುಖ ಸಾಹಿತಿ ಅಲ್ಲವಾ? :P ಇದ್ದದ್ದನ್ನು ಇದ್ದ ಹಾಗೆ ಹೇಳಿದ್ರೆ... ಅಂತ ಗಾದೆನೇ ಇದೆ ಬಿಡು, ಜಾಣ, ಸಿಟ್ ಮಾಡ್ಕೋಬೇಡ..! ಹೀಗೇ ಬರೀತಾ ಇರು... :-)

Sree said...

cute...:) namm family'ya TV-cinema scenegaLu nenapaadvu:)

Sushrutha Dodderi said...

@ ಪುಟ್ಟಕ್ಕ, ವೇಣು, ಅರ್ಚು, ರಂಜು,
ಥ್ಯಾಂಕ್ಯೂ ಆಲ್!

ಶಂಕ್ರಣ್ಣ,
ಸೂಪರ್ರಲಾ? ನಂಗೆ ’ಹೆತ್ತವರು’ ಸಿಡಿ ಕಳಿಸ್ಕೊಡು. ನೋಡ್ತೀನಿ. :P

ಪ.ಪ್ರೇ. ಅರುಣ್,
ಭಗವಂತಾ..!!!

ಯಜ್ಞೇಶಣ್ಣ,
ಹಹಹಾ! ’ಟೀವೀರ ಮನೆ’! ಈ ಕಲ್ಪನೆ ಸಖತ್ ಮಜಾ ಇದ್ದು! ಥ್ಯಾಂಕ್ಯೂ!

Sushrutha Dodderi said...

ಚಿಂದಕ್ಕ,
ಥ್ಯಾಂಕ್ಸ್!

ಶ್ರೀ,
ಏ ಸುಮ್ನಿರು ಮಾರಾಯ್ತಿ.. ಎಲ್ಲಾ ನೀವಿಬ್ರು ಸೇರ್ಕೊಂಡೇ ಮಾಡಿರೋದು.. ಇರು ಮಾಡ್‍ಸ್ತೀನಿ.. :x

ಮಾತಾಶ್ರೀ,
:-) cute.

ವಿನಾಯಕ ಕೆ.ಎಸ್ said...

ಏ ನೀ ಚಾನೆಲ್‌ಗಳ ಕುರಿತು ಹಿಂಗೆಲ್ಲಾ ಬರೆಯಡ ಬಾರಿ ಡೆಂಜರ್ರು!!! ಸಖತ್ತಾಗಿದ್ದು ಹಾರ್ಟಿಕಲ್ಲು!!!
ವಿನಾಯಕ ಕೋಡ್ಸರ

ಚಿತ್ರಾ said...

ಅಡ್ಡಿಲ್ಲೆ ಹಂಗಾರೆ , ಅಜ್ಜ, ಅಪ್ಪ,ಮಗ ಹೀಂಗೆ ಎಲ್ಲ ತಲೆಮಾರೂ ಟಿ ವಿ ಲಿ ಬಂದಂಗಾತು. ಊರ ಬದಿ ಯಾವ್ದಾದ್ರೂ ಕಾರ್ಯಕ್ರಮಕ್ಕೆ ಚೀಫ್ ಗೆಸ್ಟ್ ಅಂತ ಕರೀತಿಕ್ಕು ಇನ್ನು . " ಪ್ರಖ್ಯಾತ ಟಿ ವಿ ಯಾಕ್ಟರ್’ ಅಂತ !!!

ಬರೆದಿದ್ದು ಚೆನ್ನಾಗಿದ್ದು .

ರಾಜೇಶ್ ನಾಯ್ಕ said...

ಸೂರಪ್ಪ ನೋಡಲು ಒಂದು ಕಾರಣ ಸಿಕ್ತು!

Ultrafast laser said...

Nice article indeed. On a related note, Ajja was NOT an yakshagana artist, however, had a strong affinity for Yakshagana. Once there was some yakshagana prasanga played in Dodderi. your Ajja (our ajja, rather) got dressed in yakshagana make up and was just hanging around chouki mane. In the forefront on the stage, there was a scene where a marriage was taking place. Somebody (kerekoppada Shankara narayana, If I remember correctly) went to choukimane and got Ajja on the stage and introduced him as "sodhara maava" of the bride (on stage). That was a pretty amusing scene that all enjoyed.

Regards
D.M.Sagar (Original)

ಶ್ರೀನಿಧಿ.ಡಿ.ಎಸ್ said...

ಮಗಾ, ಇರು ನಿಂಗೆ!

ಅರುಣ ಯಾಕೆ ಹಾಗೆ ಹೇಳ್ತಾಇರೋದು ಅಂತ್ಲೂ ಗೊತ್ತು ನಂಗೆ:) ಅವಂದೂ ಇಂಟರ್ವ್ಯೂ ಆಗಿದ್ದು, ಇನ್ನೂ ಟೀ.ವಿ. ಲಿ ಬಂದಿಲ್ಲ!:)

Sushrutha Dodderi said...

ಕೋಡ್ಸರ,
ಏನ್ ದೇವ್ರೂ ಹಿಂಗೆಲ್ಲಾ ಹೆದ್ರಿಸ್ತೆ? ಮುಂದಿನ್ ಆರ್ಟಿಕಲ್ ಮತ್ತೆ ಟಿವಿ ಬಗ್ಗೇನೇ ಬರಿಯವು ಅಂದ್ಕಂಡಿದಿದ್ದಿ.. :O

ಚಿತ್ರಾ,
’ಪ್ರಖ್ಯಾತ ಟಿ ವಿ ಯಾಕ್ಟರ್’!!! ಬ್ಯಾಡ ಮಾರಾಯ್ತಿ! ಈಗ ಕರೀತಿರೋದೇ ಸಾಕಾಯ್ದು.. :/

ರಾಜೇಶ್,
ನೋಡಿ ಅಲ್ಲಾ?

DMS,
True! :) ಅಜ್ಜ ಪಾತ್ರ ಮಾಡಿದ್ದು ಹಾಗೆ ಎರಡೋ ಮೂರೋ ಪ್ರಸಂಗಗಳಲ್ಲಿ ಮಾತ್ರ. ಆದ್ರೆ ಯಕ್ಷಗಾನದ ಬಗ್ಗೆ ಅವಂಗೆ ಸಿಕ್ಕಾಪಟ್ಟೆ ಒಲವು ಇತ್ತು. ಈಗ್ಲೂ ಟೀವಿಲೆಲ್ಲರೂ ಪದ ಕೇಳಿರೆ ಸಾಕು, ಅಜ್ಜ ದಡಬಡಾಯಿಸಿ ಅಲ್ಲಿಗೆ ಬರ್ತ. :-)

ನಿಧಿ,
ಓಹೋ ಹೀಗೋ ವಿಷಯ? ಅಂವ ನಮ್ ಪುಸ್ತಕದ ಬಗ್ಗೆ ಸಿಟ್ ಮಾಡ್ತಿದ್ದ ಅಂದ್ಕಂಡಿ.. :O

Suma Udupa said...

haha nimma lekhana chennagi ittu.

sunaath said...

ಓಹೋ, ಯಾಕ್ಟಿಂಗು ನಿಮ್ಮಲ್ಲಿ inherited property ಅಂತಾಯ್ತಲ್ಲ!
ಅಜ್ಜ, ಮಗ , ಮೊಮ್ಮಗ ಮೂರೂ ಜನ ಸೇರ್ಕೊಂಡು ’ಕಲ್ ಆಜ್ ಔರ್ ಕಲ್’ ಮಾಡ್ಬಹುದಲ್ಲ!

Unknown said...

ಸು.
ತುಂಬಾ ಚೆನ್ನಾಗಿದೆ.
ನಾನೂ ಒಂದು ಸಿನೆಮಾದಲ್ಲಿ ಆಕ್ಟ್ ಮಾಡಿದೀನಿ. ಯಡಕಲ್ಲು ಗುಡ್ಡದ ಮೇಲೆ ಅಂತ ಸಿನೆಮಾ ಹೆಸರು. ಹತ್ತು ಜನ ನೀರಿನಲ್ಲಿ ಮುಳುಗಿ ಹೋದರು ಅಂತ ನಾಯಕ ಹೇಳುತ್ತಾನ ನಾಯಕಿಯ ಬಳಿ ಆ ಹತ್ತರಲ್ಲಿ ನಾನೂ ಒಬ್ಬ.

Annapoorna Daithota said...

Oh.... gottagiddidre naanoo nodtidde nimma acting :-)

As usual, sundara, aathmeeyavaada baraha. Odokke khushi aagutthe....

Sushrutha Dodderi said...

@ Suma,
Thank you!

ಸುಕಾಕಾ,
ಹಹಹಾ! ’ಕಲ್ ಆಜ್ ಔರ್ ಕಲ್’! ಸುಪರ್ ಸುಪರ್.. :D

ತಲವಾಟ,
’ಎಡಕಲ್ಲು ಗುಡ್ಡದ ಮೇಲೆ’ಯಲ್ಲಿ ನೀವೂ ಯಾಕ್ಟ್ ಮಾಡಿದೀರಾ? ಅದು ನನ್ ಇಷ್ಟದ ಸಿನಿಮಾಗಳಲ್ಲೊಂದು.. ತುಂಬಾ ಕಾಲ ಆಯ್ತು ನೋಡಿ.. ಮತ್ತೊಮ್ಮೆ ನೋಡ್ಬೇಕು..

ಅನಾ,
ಥ್ಯಾಂಕ್ಸ್ ಅಕ್ಕಾ.. ಇರ್ಲಿ ಬಿಡಿ, ಈಗ ಇಲ್ಲಿ ಸುಮಾರು ಜನ ಸುಮಾರೆಲ್ಲಾ ಐಡಿಯಾಸ್ ಕೊಟ್ಟಿದಾರಲ್ಲಾ, ಅದ್ರಲ್ಲಿ ಯಾವ್ದುನ್ನಾದ್ರೂ ಎಕ್ಸಿಕ್ಯೂಟ್ ಮಾಡ್ಲಿಕ್ಕಾಗತ್ತಾ ನೋಡೋಣ.. ಐ ಮೀನ್, ಮತ್ತೊಂದು ಸಿನಿಮಾದಲ್ಲೋ ಏನ್ರಲ್ಲೋ ಯಾಕ್ಟ್ ಮಾಡೋಕೆ ಆಗತ್ತಾಂತ.. ಆಗ ಎಲ್ರೂ ನೋಡ್ಬಹುದು.. ಏನಂತೀರಾ? ;)

btw, ಸಿಮೆಂಟು ಮರಳಿನ ಮಧ್ಯದ ಹೆಗಡೆಯವರೇ, ನಿಮ್ಮ ಪ್ರತಿಕ್ರಿಯೆಗೆ ರಿಪ್ಲೇ ಮಾಡೋಕೆ ಬಿಟ್ಟು ಹೋಗಿತ್ತು.. ಈಗ ಇಲ್ಲಿ ಹೇಳ್ತಿದೀನಿ.. ಥ್ಯಾಂಕ್ಸ್.. :-)

Keshav.Kulkarni said...

ವಾಸ್ತವವನ್ನೂ ಕತೆಯಾಗಿಸಿದ ಬರಹ - ತುಂಬ ಖುಷಿಯಾಯಿತು. ಹ್ಯಾಟ್ಸ್ ಆಫ್!

ಕೇಶವ

Anonymous said...

that antha heli li naanu ondsala bhaagavahisidde... 9 pustaka tagondidde...
nice write-up ... liked it very much

ಚಿನ್ಮಯ said...

ಸುಶ್ರುತ,
ಒಳ್ಳೆಯ ಓಘ,ಚೆನ್ನಾಗಿ ಬರೆದ್ದೆ. ದೊಡ್ಡೇರಿ ಮಾಣಿ ಪಳಗ್ತಾ ಇದ್ದಾ.
-ಚಿನ್ಮಯ.

Vijaya said...

naanu tumba late aagi odtideeni ... time aagirlilla ... sorry ...
Super aagi bardideeya ... nange sittu baro haage ;-) ... yaak sittu antha ninge (mikkidorgoo) chennagi gothu!!!
Udayonmukha saahiti ... heege bareetiru ... yaav maadhyama aadrenu alwa :-)

ವಿ.ರಾ.ಹೆ. said...

ಸಖತ್ ಸುಶ್.

ಎಲ್ಲಾ ಹೇಳ್ಕಂಡ್ರು ಅವರವರು ಯಾಕ್ಟ್ ಮಾಡಿರೋ ಫಿಲಮ್ಸು.
ನಂದು ಕೇಳು. ’ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಿರಬೇಕು’ ಹಾಡಲ್ಲಿ ಒಂದು ಸಿಟಿ ಬಸ್ ಹೋಗತ್ತೆ ನೋಡಿ, ಅದ್ರೊಳಗೆ ಇದ್ದವ್ರಲ್ಲಿ ನಾನೂ ಒಬ್ಬ :) ಜೈ

Sushrutha Dodderi said...

@ ಕೇಶವ್,
ಥ್ಯಾಂಕ್ಯೂ ಸರ್!

vijay,
ಓಹ್ ಗ್ರೇಟ್! ಕಂಗ್ರಾಟ್ಸ್ ಕಣ್ರೀ..! :-)

ಚಿನ್ಮಯ,
’ದೊಡ್ಡೇರಿ ಮಾಣಿ ಪಳಗ್ತಾ ಇದ್ದಾ’ ಹಹ್! ಏನ್ ಗುರೂ ಇದು ಇಂಥಾ ಸ್ಟೇಟ್‍ಮೆಂಟು?!

vijaya,
ಸಿಟ್ಟು ಮಾಡ್ಕೋಬೇಡಿ ಮೇಡಂ.. ’ಅದಕ್ಕೂ’ ಏನಾದ್ರೂ ವ್ಯವಸ್ಥೆ ಮಾಡೋಣಂತೆ.. ;)

ವಿಕಾಸ್,
ಹಹಹಾ! ಸುಪರ್ರಲಾ? ಕನ್ನಡದ ಅತ್ಯಂತ ಜನಪ್ರಿಯ ಚಿತ್ರಗೀತೆಯಲ್ಲಿ ನೀನಿದೀಯ ಅಂದ್ರೆ? :D

Shiv said...

ಸುಶ್ರುತ್,

ಸಕತ್ ರೀ...
ನಿಮ್ಮ ಕ್ಲಿಪ್ ಎಲ್ಲಾದರೂ upload ಮಾಡಿ, ಲಿಂಕ್ ಇದ್ದರೆ ಕಳಿಸಿದರೆ ನಾವು 'ಉದಯನ್ಮೋಖ ಸಾಹಿತಿಗಳು' ಎನು ಹೇಳಿದರು ಅನ್ನುವುದನ್ನು ನೋಡ್ತಿವಿ.

preeti said...

Hi Sushruth..tumba ne estha aythu nimma lekhana..
Yaako gottilla..ondondu line odtha nagune bartha ettu..
Ade Nimma friend nidhi na kole maadade tappu maadiddu super :))..just kidding

Good one..thanks to Shantala bandi..because of her blog..I visited yours today

Keep up the good work

Kannada dalle bariyo saase..but elle..enu kathe no antha englishkannadalli reply madtha edini

Regards
Preeti

naasomeswara said...

ಸುಶೃತ...

‘ಟೀವಿಯಲ್ಲಿ ನಾವು‘ ಬರಹ ಸಾಕಷ್ಟು ಠೀವಿಯಿಂದ ಕೂಡಿದೆ. ಅಂತೂ ಇಂತೂ `ಟೀವೀರ ಮನೆ`ಯವರು ಆದಿರಿ. ಅಭಿನಂದನೆಗಳು!

ಥಟ್ ಅಂತ ಹೇಳಿಯಲ್ಲಿ ಭಾಗವಹಿಸಲು ಬರುವವರಿಗೆ ಸಾಕಷ್ಟು ಟೆನ್ಷನ್ ಇರುತ್ತೆ ಅಂತ ಗೊತ್ತು. ಸಾಧ್ಯವಾದಷ್ಟು ಅವರ ಆತಂಕವನ್ನು ಕಡಿಮೆ ಮಾಡುವುದಕ್ಕೆ ಪ್ರಯತ್ನಿಸುತ್ತಿರುತ್ತೇನೆ.

ಯಾಕೆ ಒಂದು ‘ಪತ್ರಕರ್ತರ ಸ್ಪೆಶಲ್ ಥಟ್ ಅಂತ ಹೇಳಿ‘ ಮಾಡಬಾರದು ಅಂತ ಯೋಚಿಸ್ತಿದ್ದೀನಿ...ಪ್ರಯತ್ನಿಸ್ತೇನೆ.

ಉದಯೋನ್ಮುಖ ಸಾಹಿತಿಗಳಿಗೆ ಮತ್ತೊಮ್ಮೆ ಅಭಿನಂದನೆಗಳು!

-ಡಾ.ನಾ.ಸೋಮೇಶ್ವರ
www.yakshaprashne.org