ಅಗೋ ಅಲ್ಲಿ ಮತ್ತೆ ಬಂದು ನಿಂತಿದೆ ಹೊಸ ವರ್ಷ.. ನಾನೂ ನೋಡುತ್ತಿದ್ದೇನೆ ಇಪ್ಪತ್ಮೂರು ವರ್ಷಗಳಿಂದ, ಸ್ವಲ್ಪವೂ ನಾಚಿಕೆಯಿಲ್ಲ ಈ ಹೊಸ ವರ್ಷಕ್ಕೆ, ಪ್ರತೀ ವರ್ಷ ಬರುತ್ತದೆ.. ನನಗಂತೂ ಇದನ್ನು ಸ್ವಾಗತಿಸೀ ಸ್ವಾಗತಿಸಿ, ಇದು ಬಂತು ಅಂತ ಆಪ್ತರಿಗೆಲ್ಲಾ ಶುಭಾಶಯ ಕೋರಿ, ಇದೇ ಸಂದರ್ಭ ಅಂತ ಗ್ರೀಟಿಂಗು-ಪ್ರೀಟಿಂಗು ಪ್ರಿಪೇರು ಮಾಡಿ, ಬರೆದು-ಬಿಡಿಸಿ ಎಲ್ಲರಿಗೂ ಕಳಿಸಿ, ಅವರಿಂದಲೂ ತರಹೇವಾರಿ ಶುಭಾಶಯಗಳು ವಾಪಸು ಬಂದು, ಅವುಗಳ ವೈವಿಧ್ಯತೆಗೇ ಮಾರುಹೋಗಿ ಮೆಚ್ಚಿಕೊಂಡು ಸಂಭ್ರಮಿಸಿ ಸಂಭ್ರಮಿಸಿ.... ಥೂ, ಬೇಸರ ಬಂದುಬಿಟ್ಟಿದೆ. ಸರೀನಪ್ಪ, ಒಂದ್ ವರ್ಷ ಬಂತು ಆಯ್ತು ಹೋಯ್ತು ಅಂತ ಇಲ್ವಾ ಹಾಗಾದ್ರೆ? ಬಹುಶಃ ಈ ಹೊಸ ವರ್ಷಕ್ಕೆ ಒಂದು ತರಹದ ಹುಂಬ ಜಂಬ: ತಾನು ಬರ್ತಿದೀನಿ ಅಂದಕೂಡಲೇ ಈ ಜನಗಳೆಲ್ಲಾ ಖುಶಿಯಿಂದ ಸ್ವಾಗತಿಸಲಿಕ್ಕೆ ತಯಾರಾಗ್ತಾರೆ ಅಂತ.. ಅದಕ್ಕೇ, ನಾನು ಈ ವರ್ಷ ಏನೇನೂ ಸೆಲೆಬ್ರೇಟ್ ಮಾಡಬಾರ್ದು, ಬಂದ ಹೊಸ ವರ್ಷಕ್ಕೆ ಸ್ವಲ್ಪಾನೂ ಗೌರವ ತೋರಿಸದೇ ಅವಮಾನ ಮಾಡ್ಬೇಕು ಅಂತ ತೀರ್ಮಾನಿಸಿದೀನಿ!
ಆದರೆ ಹಾಗೆ ಸುಮ್ಮನೆ ಕುಳಿತಿರಲು ಆಗುತ್ತಾ? ಕನ್ವರ್ಷನ್ನು ಟೆರರಿಸಮ್ಮು ರಿಸಿಷನ್ನು ರೀಎಲೆಕ್ಷನ್ನು ವೋಟಿಂಗು ಕಾಸ್ಟ್ ಕಟಿಂಗು ಅಯ್ಯೋ ಬಿಟ್ಹಾಕಿ ಸಾರ್, ದಿನಾ ಇದ್ದದ್ದೇ ರಗಳೆ, ಹೊಸ ವರ್ಷ ಬಂದಿದೆ, ಪಾರ್ಟಿ ಮಾಡೋಣ ಬನ್ನಿ, ಎಂಜಾಯ್ ಮಾಡಿ, ಅದೇ ಲೈಫು -ಕೈ ಹಿಡಿದು ಎಳೆಯುತ್ತಿದ್ದಾರೆ ಗೆಳೆಯರು! ರೆಸಾರ್ಟುಗಳೆಲ್ಲಾ ಆಲ್ರೆಡೀ ಬುಕ್ಕುಡು, ಎಂಟ್ರಿ ಫಾರ್ ಕಪಲ್ಸ್ ಓನ್ಲೀ, ಇಡೀ ಫ್ಯಾಮಿಲಿನೇ ಹೋದ್ರೆ ಡಿಸ್ಕೌಂಟು, ಓನ್ಲೀ ಟೂ ಥೌಸಂಡ್ ಪರ್ ಹೆಡ್ಡು (ಫ್ರೀ ಬಿಯರ್ರು; ಫುಡ್ಡಿಗೆ ಎಕ್ಸ್ಟ್ರಾ ದುಡ್ಡು), ವರ್ಷಕ್ಕೊಂದೇ ಇಯರೆಂಡು, ರಾತ್ರಿಯಿಡೀ ಗ್ಲಾಸ್ ಎತ್ತು, ಬಾಟಮ್ಸ್ ಅಪ್ಪು, ಎಂಜಿ ರಸ್ತೆಗೆ ಹೋದರೆ ಡೈರೆಕ್ಟಾಗಿ ಯಾರನ್ನಾದ್ರೂ ಅಪ್ಪು, ಹೇಳೋರಿಲ್ಲಾ ಕೇಳೋರಿಲ್ಲ, ಮುಂಜಾನೆ ಹೊತ್ತಲ್ಲಿ-ಕಂಪ್ಲೀಟ್ ಮತ್ತಲ್ಲಿ ಡ್ರೈವ್ ಮಾಡ್ಕೊಂಡ್ ಹೊರಡು, ಯಾರಿಗಾದ್ರೂ ಗುದ್ದು, ನೋ ಪ್ರಾಬ್ಲಮ್ಮು, ಅವ್ರೂ ನಶೇನಲ್ಲೇ ಇರ್ತಾರೆ, ವಿಷ್ ಮಾಡು, ಕೈ ಕುಲುಕು, ಮುಂದೆ ಹೋಗ್ತಿರು. ಹೊಸ ವರ್ಷ, ನಮ್ದೇಯಾ ಅಂತ ತಿಳ್ಕೋ, ಮಸ್ತ್ ಮಜಾ ಮಾಡು. ಈ ವರ್ಷ ಬಿಟ್ಕೊಂಡ್ರೆ ಮತ್ತೆ ನೆಕ್ಸ್ಟಿಯರ್ರೇ ಬರೋದು, ಸೋ ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡ. ಹೊಸಬಟ್ಟೆ ಕೇಕು ಸ್ವೀಟು ಗಿಫ್ಟು ವೋಡ್ಕಾ ವ್ಹಿಸ್ಕಿ ಪಾರ್ಟಿ ಬೇಕಾಬಿಟ್ಟಿ ಕ್ರ್ಯಾಕರ್ರು ಬ್ಯಾನರ್ರು ಕ್ಯಾಲೆಂಡರು ಹ್ಯಾಪಿನಿವ್ವಿಯರ್ರು ಒಟ್ನಲ್ಲಿ ಖುಶ್ ಖುಶ್ ಆಗಿ ಇರು. ಜಸ್ಟ್ ಸೇ ಚಿಯರ್ಸ್.
‘ಏನಾಗ್ತಾ ಇದೆ ನಮ್ಮ ಸಂಸ್ಕೃತಿ? ಎಲ್ಲಾ ಪಾಶ್ಚಿಮಾತ್ಯ ದೇಶದವರನ್ನ ಅನುಕರಿಸ್ತಾ ಇದೀವಿ. ಇದು ಒಳ್ಳೇದಲ್ಲ..’ ರುದ್ರಾಕ್ಷಿ ಸರ ಹಿಡಿದ ವಿಭೂತಿ ಹಣೆಪಟ್ಟಿಯ ವೃದ್ಧ ಗೊಣಗುತ್ತಾನೆ. ‘ಛೇ ಅಜ್ಜಾ ನಿಂಗೆ ಅವೆಲ್ಲಾ ಗೊತ್ತಾಗಲ್ಲ. ಹೊಸವರ್ಷ ಹ್ಯಾಸ್ ಕಮ್ಮು, ವಿ ಹ್ಯಾವ್ ಟು ವೆಲ್ಕಮ್ಮು! ನೀನು ಸುಮ್ನೇ ಕೂತಿರು. ಈಗ ಅಯಾಮ್ ಗೋಯಿಂಗ್ ಫಾರ್ ಶಾಪಿಂಗು ವಿಥ್ ಮೈ ಗರ್ಲ್ಫ್ರೆಂಡು’ ಮೊಮ್ಮಗ ತಿರುಗಿ ಹೇಳುತ್ತಾನೆ.
ನಾನು ಮೂಕವೀಕ್ಷಕನಂತೆ ಕುಳಿತಿದ್ದೇನೆ ಎಂದಿನಂತೆ. ಛಂದ ಪುಸ್ತಕ ಮೊನ್ನೆ ಹೊರತಂದ ‘ಲೇರಿಯೊಂಕ’ ಎಂಬ ಕಾದಂಬರಿ ಹಿಡಿದು. ಪ್ರಶಾಂತ್ ಬೀಚಿ ಅನುವಾದಿಸಿರುವ ಹೆನ್ರಿ ಆರ್. ಓಲೆ ಕುಲೆಟ್ರವರ ಕಾದಂಬರಿ ‘ಲೇರಿಯೊಂಕ’. ಕೀನ್ಯಾ ದೇಶದ ಮಾಸಾಯಿ ಜನಾಂಗದ ದನಗಾಹಿ ಹುಡುಗನೊಬ್ಬ ಅಕ್ಷರ ಕಲಿಯಲು ಹೊರಡುವ ಕತೆ ಅದು. ಅದೆಷ್ಟು ರೋಚಕವಾಗಿದೆ ಕತೆ ಎಂದರೆ, ಇನ್ನೂರಾ ಮೂವತ್ತೆರಡು ಪುಟಗಳ ಕಾದಂಬರಿಯನ್ನು ನಾಳೆಗಿಟ್ಟುಕೊಳ್ಳಲೂ ಆಗದೇ ನಾನು ಒಂದೇ ಸಿಟ್ಟಿಂಗಿಗೆ ಓದಿ ಮುಗಿಸಿಬಿಟ್ಟೆ.
ದಟ್ಟ ಆಫ್ರಿಕನ್ ಕಾಡುಗಳಲ್ಲಿ ಅದು ನಡೆಯುವಾಗ ನಮಗೆ ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ನೆನಪಾಗುತ್ತದೆ. ಭರ್ಜಿ ಎಸೆದು ಪ್ರಾಣಿಗಳನ್ನು ಹೊಡೆದು ತಿನ್ನುವ ನಿರೂಪಣೆ ಓದುವಾಗ ಕೆದಂಬಾಡಿ ಜತ್ತಪ್ಪ ರೈರವರ ‘ಬೇಟೆಯ ನೆನಪುಗಳು’ ನೆನಪಾಗುತ್ತದೆ. ಲೇರಿಯೊಂಕ ಎಂಬ ಆ ಹುಡುಗ ತನ್ನ ಮುದ್ದು ಶೈಲಿಯಲ್ಲಿ ಕತೆ ಹೇಳುತ್ತಾ ಹೋಗುವಾಗ ಎಲ್ಲೋ ಒಂದು ಕಡೆ ‘ಆಲ್ಕೆಮಿಸ್ಟ್’ ನೆನಪಾಗುತ್ತದೆ. ನಿರಾಶ್ರಿತನಂತೆ ಕೇವಲ ಬದುಕುಳಿಯುವ ಛಲದಿಂದ ನಡೆಯುತ್ತ ನಡೆಯುತ್ತ ಹೋಗುವಾಗ ‘ಮಹಾಪಲಾಯನ’ ನೆನಪಾಗುತ್ತದೆ. ಕಲಿತು ಬಂದ ಹುಡುಗನನ್ನು ಊರು ಒಪ್ಪಲು ನಿರಾಕರಿಸುವ ದೃಶ್ಯ ಓದುವಾಗ ‘ಕಾನೂರು ಹೆಗ್ಗಡಿತಿ’ಯ ಹೂವಯ್ಯ ನೆನಪಾಗುತ್ತಾನೆ. ಹೀಗೆ ಓದಿನುದ್ದಕ್ಕೂ ಹಳೆಯ ಓದಿನ ಚಿತ್ರಗಳನ್ನು ಕೆದಕುತ್ತಾ ಹೋಗುವ ಇದು, ‘ಓದುವ ಸುಖ’ ಅಂತಾರಲ್ಲ, ಅದನ್ನನುಭವಿಸಲಿಕ್ಕೆ ಇರುವ ತಕ್ಕ ಉಪಕರ. ನಾವು ಆ ಹಳೆಯ ಕಾದಂಬರಿ-ಪುಸ್ತಕಗಳನ್ನೆಲ್ಲಾ ಎಷ್ಟು ಚೆನ್ನಾಗಿ ಓದಿಬಿಟ್ಟಿರುತ್ತೇವೆಂದರೆ, ಈ ಕಾದಂಬರಿ ಓದುವಾಗ ಆ ಕಾದಂಬರಿಯ ಚಿತ್ರಗಳೆಲ್ಲಾ ನಾವೇ ಈ ಹಿಂದೆ ಕಣ್ಣಾರೆ ಕಂಡವೇನೋ ಎಂಬಂತೆ ಬ್ಯಾಕ್ಗ್ರೌಂಡಿನಲ್ಲಿ ತೇಲುತ್ತಿರುತ್ತವೆ.
ಈ ಅನಕ್ಷರಸ್ಥ ಕಾಡುಜನಗಳ ದುನಿಯಾ, ಅವರ ಬದುಕುವ ರೀತಿ, ಮುಗ್ಧತೆ, ನಂಬಿಕೆಗಳು ಅದೆಷ್ಟು ಬೇರೆಯೇ ಆಗಿವೆ ಎಂದರೆ, ನಮ್ಮ ಮುಂದುವರೆದ ಜಗತ್ತಿನೊಂದಿಗೆ ಅವು ಯಾವ ರೀತಿಯಲ್ಲೂ ಬೆರೆಯಲಾರವು. ಆದರೆ ಅದನ್ನು ಬೆರೆಸಲಿಕ್ಕಿರುವ ‘ಕಲಬಶ’ದಂತೆ ಭಾಸವಾಗುತ್ತದೆ ಶಿಕ್ಷಣ. ತಮ್ಮ ಜನಾಂಗದ ಹುಡುಗನೊಬ್ಬ ಸುಶಿಕ್ಷಿತನಾಗಲು ಹೊರಟನೆಂದರೆ ಆತ ವಾಪಸು ಬರುವುದಿಲ್ಲ, ಬಂದರೂ ಆತ ನಮ್ಮವನಾಗಿ ಉಳಿಯುವುದಿಲ್ಲ ಎಂದು ನಂಬಿದ್ದ ಮಾಸಾಯಿಗಳು, ಕೊನೆಗೆ ‘ಒಂದು ಕೈಯಲ್ಲಿ ಭರ್ಜಿ, ಇನ್ನೊಂದು ಕೈಯಲ್ಲಿ ಪುಸ್ತಕ ಹಿಡಿಯಲು ಸಾಧ್ಯ’ ಎಂಬ ತೀರ್ಮಾನಕ್ಕೆ ಬರುತ್ತಾರೆ. ಅದಕ್ಕೆ ಆಗ ಆಫ್ರಿಕಾದಲ್ಲಿದ್ದ ಸ್ವಾತಂತ್ರ್ಯ ಚಳುವಳಿಯೂ ಇಂಬು ಕೊಡುತ್ತದೆ. ನಗರ, ಶಾಲೆ, ಓದು, ವಿದ್ಯೆ, ಅಕ್ಷರ -ಇತ್ಯಾದಿ ಶಬ್ದಗಳ ಪರಿಚಯವೇ ಇಲ್ಲದಿದ್ದ ಲೇರಿಯೊಂಕ ವಿದ್ಯಾವಂತನಾಗಿ ಮರಳಿ ಬರುವಾಗ -ಕಾದಂಬರಿ ಓದುತ್ತಿರುವ ನಮ್ಮ ಮೈಯೂ ಒಮ್ಮೆ ಜುಮ್ಮೆನ್ನುತ್ತದೆ; ಉತ್ಸಾಹದಿಂದ ನರನಾಡಿಗಳಲ್ಲಿ ರಕ್ತದ ಚಲನೆ ವೇಗಗೊಳ್ಳುತ್ತದೆ.
೧೯೫೦ರ ದಶಕದಲ್ಲಿನ ಕೀನ್ಯಾದ ಚಿತ್ರಣ ಈ ಕಾದಂಬರಿಯಲ್ಲಿದೆ. ಜಾಗತೀಕರಣ, ಕ್ರಿಸ್ತೀಕರಣಗಳಂತಹ ವಿಷಯಗಳೂ ಇಲ್ಲಿ ಇರುವುದರಿಂದ ವಿಮರ್ಶಕರಿಗೆ ಕೆಲಸ ಸಿಕ್ಕಿದೆ. ಪಾಶ್ಚಿಮಾತ್ಯ ಅಂತಲ್ಲ; ಹೊರ ಜಗತ್ತಿನ ಗಾಳಿಯ ಸೋಂಕೇ ಇಲ್ಲದೆ ಇದ್ದ ಕೀನ್ಯಾ (ಅಥವಾ ಆ ಮಾಸಾಯಿ ಪ್ರದೇಶ) ಈಗ ಹೇಗಿರಬಹುದು? ಕಾದಂಬರಿಯ ಕೊನೆಯಲ್ಲೇ ಅದು ಬದಲಾಗುವ ಮುನ್ಸೂಚನೆಗಳನ್ನು ಕೊಟ್ಟಿದ್ದಾರೆ ಲೇಖಕರು. ಇನ್ನು ಭಾರತ ಬದಲಾದ ಬಗ್ಗೆ ಅಥವಾ ಬದಲಾಗುತ್ತಿರುವ ಬಗ್ಗೆ ಮಾತನಾಡದಿರುವುದೇ ಲೇಸು! ಕಾದಂಬರಿಯಲ್ಲಿ ಬರುವ ಒಂದು ಸನ್ನಿವೇಶ ಹೀಗಿದೆ: ಹಾದಿ ಮಧ್ಯದಲ್ಲಿ ಶಾಲೆಗೆ ಹೋಗಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದ ಲೇರಿಯೊಂಕನಿಗೆ ಲಿವಿಂಗ್ಸ್ಟೋನ್ ಎಂಬ, ಅದಾಗಲೇ ಓದಿ-ಕಲಿತು ಬಂದಿದ್ದ ತಮ್ಮದೇ ಜನಾಂಗದವನ ಪರಿಚಯವಾಗುತ್ತದೆ. ಲಿವಿಂಗ್ಸ್ಟೋನ್ ಬಳಿ ಲೇರಿಯೊಂಕ ಕೇಳುತ್ತಾನೆ: "ಒಬ್ಬ ಓದಿ, ವಿದ್ಯಾವಂತನಾಗಿ ಬಂದು ಮತ್ತೆ ಈ ಅನಾಗರೀಕರ ಮಧ್ಯೆ ಅವರಂತೆ ಇರುವುದು ಹೇಗೆ ಸಾಧ್ಯ?" ಅದಕ್ಕೆ ಲಿವಿಂಗ್ಸ್ಟೋನ್ ಕಣ್ಣಲ್ಲಿ ನೀರು ತಂದುಕೊಂಡು ಹೇಳುತ್ತಾನೆ: "ದಯವಿಟ್ಟು ಇವರನ್ನು ಅನಾಗರೀಕರು ಎಂದು ಕರೆಯಬೇಡ. ನಿಜ ಹೇಳಬೇಕೆಂದರೆ, ಶಾಲೆಗೆ ಹೋಗಿರುವ ಬಹಳಷ್ಟು ಮಂದಿಗಿಂತ ಇವರು ನಾಗರೀಕರು. ನಮ್ಮಲ್ಲಿ ದ್ವಂದ್ವ ಇದೆ, ನಾವು ನಮ್ಮದೂ ಅಲ್ಲದ ವಿದೇಶಿಯರದೂ ಅಲ್ಲದ ಒಂದು ಕಳೆದುಹೋದ ಸಂಸ್ಕೃತಿಯಲ್ಲಿ ಇದ್ದೇವೆ ಅಷ್ಟೇ."
ಇಷ್ಟು ಇಷ್ಟವಾಗುವಂತೆ ಕಾದಂಬರಿಯನ್ನು ಕನ್ನಡಕ್ಕೆ ತಂದ ಪ್ರಶಾಂತ್ ಬೀಚಿಗೂ, ಪ್ರಕಟಿಸಿದ ವಸುಧೇಂದ್ರರಿಗೂ ಥ್ಯಾಂಕ್ಸ್ ಹೇಳಿ ಒಂದು ಮೇಯ್ಲ್ ಮಾಡಬೇಕು ಎಂದುಕೊಂಡು ಖುರ್ಚಿಯಿಂದ ಏಳುತ್ತೇನೆ. ಹೊರಗಾಗಲೇ ಹೊಸ ವರ್ಷ ಬಂದುಬಿಟ್ಟಿದೆ. ಸೈಲೆಂಟ್ ಮೋಡಿನಲ್ಲಿದ್ದ ಮೊಬೈಲಿನ ತುಂಬಾ ‘ಹ್ಯಾಪಿ ನ್ಯೂ ಇಯರ್’ ಎಸ್ಸೆಮ್ಮೆಸ್ಸುಗಳು, ಮಿಸ್ಡ್ ಕಾಲುಗಳು. ಮೇಯ್ಲ್ ಬಾಕ್ಸ್ ತೆರೆದರೆ ಅಲ್ಲೂ ಶುಭಾಶಯಗಳು. ಹಾಸಿಗೆ ಬಿಚ್ಚಿಟ್ಟುಕೊಂಡು, ಆದಷ್ಟೂ ಮಂದಿಗೆ ಈಗಲೇ ರಿಪ್ಲೇ ಮಾಡಿ, ‘ನಮ್ಮ ಹೊಸವರ್ಷ ಯುಗಾದಿಗೆ ಶುರು ಆಗೋದು’ ಎಂದ ಗೆಳತಿಗೂ ಶುಭಾಶಯ ಕಳುಹಿಸಿ, ಇದೊಂದು ಬ್ಲಾಗ್ಪೋಸ್ಟ್ ಬರೆದು ಮಲಗುತ್ತಿದ್ದೇನೆ. ಕೀನ್ಯಾದ ಕಾಡಲ್ಲೂ ಬಂದಿರಬಹುದು ಹೊಸ ವರ್ಷ.. ಇನ್ನೇನು ನನಗೆ ಬೀಳಲಿರುವ ಕನಸಲ್ಲಿ ಲೇರಿಯೊಂಕ ಓಡುತ್ತಿರುತ್ತಾನೆ.. ಹಸುರಿನ ಹಳುವಿನಲ್ಲಿ ನುಸುಳಿ ಹಾರಿ ಓಡೋಡಿ ತನ್ನ ಗೆಳೆಯ ಲಿವಿಂಗ್ಸ್ಟೋನ್ನನ್ನು ಕಂಡು ಬಿಗಿದಪ್ಪಿ ಹೇಳುತ್ತಿರುತ್ತಾನೆ ‘ಹ್ಯಾಪಿ ನ್ಯೂ ಇಯರ್’.. ಸುತ್ತಲ ಹುಡುಗರೆಲ್ಲ ಅದನ್ನೇ ಪುನರುಚ್ಚರಿಸುತ್ತಾ ಕುಣಿದಾಡುತ್ತಾ ಕೈ ಕೈ ಹಿಡಿದು ಇವರನ್ನೇ ಸುತ್ತುತ್ತಾ...
ನಿಮಗೂ ಹೊಸ ವರುಷದಲ್ಲಿ ಒಳ್ಳೊಳ್ಳೇದೇ ಆಗಲಿ. ಶುಭಾಶಯಗಳು.
16 comments:
ಲೇರಿಯೊಂಕನಿಗೂ ನಿನಗೂ ಹೊಸವರ್ಷದ ಶುಭಾಶಯಗಳು. ಆದರೆ ನೀನು ಎಲ್ಲೋ ಒಂದು ಕಡೆ "ಎಲ್ಲೋ ಒಂದು ಕಡೆ" ಅಂತ ಬರೆದದ್ದು ನೋಡಿ ಎಲ್ಲೋ ಒಂದು ಕಡೆ ಸಿಕ್ಕಾಪಟ್ಟೆ ನಗು ಬಂತು :)
ತುಂಬಾ ಚೆನ್ನಾಗಿ ಬರೆದಿದ್ದೀರಿ. ನಾನು ಖುದ್ದಾಗಿ ಆ ಕೃತಿ ಓದುವೆ
ಹೊಸ ಪುಸ್ತಕದ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು, ಸುಶ್ರುತ.
ಹೊಸ ವರ್ಷವು ಹರ್ಷದಾಯಕವಾಗಲಿ.
೨೦೦೯ರ ಆಗಮನದ ಶುಭಾಶಯಗಳು...ಹಾಗೇ ಹೊಸದೊಂದು ಪುಸ್ತಕ ಓದುವುದಕ್ಕೆ ಪ್ರೇರಣೆ ಕೊಟ್ಟಿದ್ದಕ್ಕೂ ಧನ್ಯವಾದ...
ತುಂಬಾ "fost" ನೀನು... ಆಗ್ಲೇ ಓದ್ಬಿಟ್ಯಾ??? ಇನ್ನು ಓದಿಸೋ ಕೆಲ್ಸಾನೂ ಬಾಕಿ ಇದೆ ಅಂತ ನೆನಪ್ ಮಾಡ್ತಾ ಇದ್ದೀನಿ...
ಸರಿ, ಎಲ್ರೂ ಹೇಳುವಾಗ ನಂದೇನ್ ಕೊಬ್ಬು, ನಂದೂ ಒಂದ್ ಶುಭಾಶಯ ಇಟ್ಕೊ, ಬ್ಲಾಗಲ್ಲೂ..
ಅಣ್ಣಯ್ಯ ಹೊಸ ವರುಷದ ಶುಬಾಶಯಗಳು...ಚೆಂದ ಇದೆ ನಿನ್ನ ಬರಹ..ಇಷ್ಟ ಆತು,
-ತುಂಬುಪ್ರೀತಿ,
ಚಿತ್ರಾ
ee nadve naanu ododu tumba kammi aagbittide... 2009ralli jaasti jaasti odbeku :-) neenu jaasti jaasti bari :-). 2009 ellrigoo chennagirli.
ಸುಶ್ರುತ,
ಹೊಸ ವರುಷದ ಶುಭಾಶಯಗಳು. ತುಂಬ ಚೆನ್ನಾಗಿ ಬರೆದಿದ್ದೀಯಾ, ಎಂದಿನಂತೆ!
-ಕೇಶವ (www.kannada-nudi.blogspot.com)
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.. ಹೊಸ ವರುಷ ಹೊಸ ಹರುಷ ತರಲಿ... :-)
ಹೊಸ ವರ್ಷವನ್ನು ಒಳ್ಳೆಯ ರೀತಿಯಲ್ಲೇ ಬರಮಾಡಿಕೊಂಡಿದ್ದೀ....
ಹೊಸತು ಯಾವುದಾದರೇನಂತೆ! ಯಾರ ಸ್ಟೈಲಿನದಾದರೇನಂತೆ! ಯಾವ ಸಂಸ್ಕೃತಿಯದಾದರೇನಂತೆ! ದಿನದಿನವೂ ಹೊಸ ಸೂರ್ಯನೇ...
ಲೇರಿಯೊಂಕನನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ಸುಶ್ರುತ,
ಹೊಸ ವರುಷಕ್ಕೆ ಹರ್ಷದ ಶುಭಾಶಯಗಳು...ಮತ್ತು ಹೊಸ ಪುಸ್ತಕ ಪರಿಚಯಿಸಿದ್ದಕ್ಕೆ...ಹಂಪಿ ಎಕ್ಷ್ಪ್ರೆಸೆ ಇನ್ನೂ ಓದಲಾಗಲ್ಲ...ಅದನ್ನು ಮುಗಿಸಿ ಇದನ್ನು ಓದಬೇಕು....೨೦೦೯ ಒಳ್ಳೆಯದಾಗಲಿ.....
thanku, oLLe pustakavanna ishtu chennnnnnaaagi parichayisiddakke:)(google chrome nalli kannada bartilla, adakkE english scriptu:( )
yapppy new year again:)
ಪ್ರತಿಕ್ರಿಯಿಸಿದ, ಶುಭಾಶಯ ಹೇಳಿದ ಎಲ್ಲರಿಗೂ ಧನ್ಯವಾದ.
ಈ ಸಲ ’ಛಂದ ಪುಸ್ತಕ’ ಹೊರತಂದ ಮೂರೂ ಪುಸ್ತಕಗಳೂ ಚೆನ್ನಾಗಿವೆ. ವಸುಧೇಂದ್ರರ ’ಹಂಪಿ ಎಕ್ಸ್ಪ್ರೆಸ್’, ಸಚ್ಚಿದಾನಂದ ಹೆಗಡೆಯವರ ’ಕಾರಂತಜ್ಜನಿಗೊಂದು ಪತ್ರ’ ಮತ್ತು ಪ್ರಶಾಂತ್ ಬೀಚಿ ಅನುವಾದದ ’ಲೇರಿಯೊಂಕ’. ನಂತರ ಬಿಡುಗಡೆಯಾದ ಜಯಂತ ಕಾಯ್ಕಿಣಿಯವರ ಮೂರು ಕವನ ಸಂಕಲನಗಳೂ ಒಂದಕ್ಕಿಂತ ಒಂದು ಚೆನ್ನಾಗಿದೆ. ಕೊಂಡು, ಓದಿ, ಸುಖಿಸುವ ಖುಶಿ ನಿಮ್ಮದು. ಹ್ಯಾಪಿ ರೀಡಿಂಗ್. :-)
ಪ್ರೀತಿಯಿಂದ,
ಸುಶ್ರುತ
ಹೊಸ ಪುಸ್ತಕವೊಂದರ ಪರಿಚಯಕ್ಕಾಗಿ ಧನ್ಯವಾದಗಳು. ಈ ಪುಸ್ತಕ ಎನ್ನುವುದಕ್ಕಿಂತ, ನಮ್ಮ ಮದುಮಗಳು, ಹೆಗ್ಗಡಿತಿ, ಶಿಕಾರಿ, ಆಲ್ಕಿಮಿಸ್ಟ್ ಇವರನ್ನು ಮತ್ತೆ ನೆನಪಿನಂಗಳದಲ್ಲಿ ತಂದು ಕೊಟ್ಟದ್ದಕ್ಕಾಗಿ ಧನ್ಯವಾದಗಳು. ನಿಸಾರ್ ರವರ ಮತ್ತದೇ ಬೇಸರ ಹಾಡಿನ ಸಾಲುಗಳನ್ನು ಹುಡುಕುತ್ತಾ ನಿಮ್ಮ ಈ ಅಂಕಣದಲ್ಲಿ ಬಂದಿಳಿದೆ. ಕೀನ್ಯಾದ ಕಾಡಿನ ಹೊಸವರ್ಷ!! ಕುತೂಹಲ ಮೂಡಿ, ಮುಂದೆ ಓದಿದಾಗ ’ಇತ್ತ ಬಿಡಲೂ ಆಗದ, ಅತ್ತ ಇಟ್ಟುಕೊಳ್ಳಲೂ ಆಗದ’ ಮತ್ತೊಬ್ಬ ದ್ವಂದ್ವ ಭಾರತೀಯನ ಪರಿಚಯವಾಯ್ತು :) ಪಾಶ್ಚಿಮಾತ್ಯರ ’ಕ್ಯಾಲೆಂಡರ್’ ನಮ್ಮದಾಗಿದೆ, ಆದರೆ ಅದರ ಪ್ರಕಾರ ಬರುವ ಹೊಸ ’ಇಸವಿ’ ನಮಗೆ ಬೇಡವಾಗಿದೆ :) ಮತ್ತೊಮ್ಮೆ ಹಾಡಿಗೂ, ಪುಸ್ತಕ ಪರಿಚಯಕ್ಕೂ ಧನ್ಯವಾದಗಳು.
ಹೊಸ ಪುಸ್ತಕವೊಂದರ ಪರಿಚಯಕ್ಕಾಗಿ ಧನ್ಯವಾದಗಳು. ಈ ಪುಸ್ತಕ ಎನ್ನುವುದಕ್ಕಿಂತ, ನಮ್ಮ ಮದುಮಗಳು, ಹೆಗ್ಗಡಿತಿ, ಶಿಕಾರಿ, ಆಲ್ಕಿಮಿಸ್ಟ್ ಇವರನ್ನು ಮತ್ತೆ ನೆನಪಿನಂಗಳದಲ್ಲಿ ತಂದು ಕೊಟ್ಟದ್ದಕ್ಕಾಗಿ ಧನ್ಯವಾದಗಳು. ನಿಸಾರ್ ರವರ ಮತ್ತದೇ ಬೇಸರ ಹಾಡಿನ ಸಾಲುಗಳನ್ನು ಹುಡುಕುತ್ತಾ ನಿಮ್ಮ ಈ ಅಂಕಣದಲ್ಲಿ ಬಂದಿಳಿದೆ. ಕೀನ್ಯಾದ ಕಾಡಿನ ಹೊಸವರ್ಷ!! ಕುತೂಹಲ ಮೂಡಿ, ಮುಂದೆ ಓದಿದಾಗ ’ಇತ್ತ ಬಿಡಲೂ ಆಗದ, ಅತ್ತ ಇಟ್ಟುಕೊಳ್ಳಲೂ ಆಗದ’ ಮತ್ತೊಬ್ಬ ದ್ವಂದ್ವ ಭಾರತೀಯನ ಪರಿಚಯವಾಯ್ತು :) ಪಾಶ್ಚಿಮಾತ್ಯರ ’ಕ್ಯಾಲೆಂಡರ್’ ನಮ್ಮದಾಗಿದೆ, ಆದರೆ ಅದರ ಪ್ರಕಾರ ಬರುವ ಹೊಸ ’ಇಸವಿ’ ನಮಗೆ ಬೇಡವಾಗಿದೆ :) ಮತ್ತೊಮ್ಮೆ ಹಾಡಿಗೂ, ಪುಸ್ತಕ ಪರಿಚಯಕ್ಕೂ ಧನ್ಯವಾದಗಳು.
ಈ ಪುಸ್ತಕ ಯಾವಾಗ ನಾನು ಓದಿಯೇನು ಅನ್ನೋ ಹಾಗೆ ಮಾಡಿಬಿಟ್ಟಿರಿ! ಧನ್ಯವಾದಗಳು
Post a Comment