ಜಯಂತ್ ಬರೆದಿದ್ದರು ಒಮ್ಮೆ: "ನಗರಗಳಲ್ಲಿ ಊಳಿಗ ಮಾಡಿಕೊಂಡಿರುವ ಏಕಾಕಿ ಜೀವಿಗಳು ಹೆದರುವುದು ಯಾವುದಕ್ಕೆ? ಇದ್ದಕ್ಕಿದ್ದಂತೆ ಎದ್ದೇಳುವ ಕೋಮು ಗಲಭೆ, ಲಾಕೌಟ್, ಬಂದ್, ಕರ್ಫ್ಯೂಗಳಿಗೇ? ಊಹೂಂ, ಅದಕ್ಕೆಲ್ಲ ಅವರು ಹೆದರುವುದಿಲ್ಲ. ಹೋಟೆಲುಗಳೆಲ್ಲ ಮುಚ್ಚಿದ್ದರೆ ರಸ್ತೆಬದಿಯ ಶೇಂಗಾ ತಿಂದು ನೀರು ಕುಡಿದು ಬದುಕಿರಬಲ್ಲರು ಅವರು. ಊರಿನ ವಿಳಾಸದಿಂದ ಬರುವ ಹಠಾತ್ ಟೆಲಿಗ್ರಾಮುಗಳಿಗೆ? ಊಹುಂ, 'ತಂದೆ ತೀರಿಕೊಂಡಿದಾನೆ, ಹೊರಡು', 'ಅಮ್ಮನಿಗೆ ಸೀರಿಯಸ್, ಹೊರಡು' ಇಂತಹ ತಂತಿಗಳನ್ನು ಆತ ಊಹಿಸಿ ಊಹಿಸಿಯೇ ಗಟ್ಟಿಯಾಗಿಬಿಟ್ಟಿರುತ್ತಾನೆ. ರಸ್ತೆಯಲ್ಲೆದುರಾಗುವ ಆಕ್ಸಿಡೆಂಟ್ನಲ್ಲಿ ಸತ್ತ ಅನಾಥ ಶವಗಳನ್ನು ಕಂಡಾಗಲೇ? ಊಹುಂ, ನಿತ್ಯ ಕಾಣುವ ಇಂತಹ ದೃಶ್ಯಗಳನ್ನು ನೋಡೀ ನೋಡಿ ಆತ ತನ್ನ ಸಾವೂ ಇಂಥದ್ದರಲ್ಲೇ ಆಗೋದು ಅಂತ ಯಾವತ್ತೋ ಮನಸಿಗೆ ಹೇಳಿಕೊಂಡುಬಿಟ್ಟಿರುತ್ತಾನೆ. ಹೆದರುವುದಿಲ್ಲ.
ಹಾಗಾದರೆ ದೂರದೂರಿನಿಂದ ಬಂದು ನಗರದಲ್ಲಿ ಅಡ್ನಾಡಿ ಬದುಕು ಬಾಳಿಕೊಂಡಿರುವ ಈ ಮನುಷ್ಯ ಏನಕ್ಕೂ ಹೆದರುವುದೇ ಇಲ್ಲವೇ? ಇಲ್ಲ, ಆತ ಸಹ ಹೆದರುತ್ತಾನೆ. ಕೇವಲ ಒಂದೇ ವಿಷಯಕ್ಕೆ: ಕಾಯಿಲೆ ಬೀಳುವುದಕ್ಕೆ! ನಿಜ, ಕಾಯಿಲೆ ಬೀಳುವ ಕಲ್ಪನೆಗೆ ಸಹ ಆತ ಭಯದಿಂದ ಕಂಪಿಸಬಲ್ಲ. ಹೇಳುವವರಿಲ್ಲದ ಕೇಳುವವರಿಲ್ಲದ ಈ ಕುರೂಪಿ ನಗರಿಯಲ್ಲಿ ಕಾಯಿಲೆ ಬೀಳುವುದಕ್ಕಿಂತ ದೊಡ್ಡ ಯಾತನೆ ಮತ್ತೊಂದಿಲ್ಲ. ಇಡೀ ಜಗತ್ತೇ ತನ್ನನ್ನು ಬಿಟ್ಟು ಮುಂದೆ ಸಾಗಿದಂತೆನಿಸುತ್ತದೆ. ಯಾರಿಗೂ ಅವನ ಕೈ ಹಿಡಿದು ಆಸ್ಪತ್ರೆಗೆ ಕರೆದೊಯ್ಯುವ ದರ್ದಿಲ್ಲ. ಯಾರೂ ಅವನಿಗೆ ಗಂಜಿ ಬೇಯಿಸಿ ಹಾಕುವುದಿಲ್ಲ. ಯಾರೂ ಪಕ್ಕದಲ್ಲಿ ಕೂತು ಹಣೆಗೆ ಒದ್ದೆ ಬಟ್ಟೆ ಹಾಕಿ ತೆಗೆಯುವುದಿಲ್ಲ. ಕಾಯಿಲೆ ಬಿದ್ದ ಏಕಾಂಗಿ ಮನುಷ್ಯನಷ್ಟು ನತದೃಷ್ಟ ವ್ಯಕ್ತಿ ಶಹರದಲ್ಲಿ ಮತ್ಯಾರೂ ಇಲ್ಲ.."
ಮೊನ್ನೆ ಜ್ವರದ ಕಣ್ಣಲ್ಲಿ ಇದನ್ನು ಮತ್ತೆ ಓದುವಾಗ ಎಷ್ಟೊಂದು ಹೌದು ಹೌದು ಅನ್ನಿಸಿತು.. ಕಣ್ಣು ಸಹ ಬಿಡಲಾಗದಷ್ಟು ಜೋಂಪು. ಭಾರ ತಲೆ. ಮಂಪರು. ಎದ್ದು ಹೋಗಿ ಒಂದು ಲೋಟ ನೀರು ಕುಡಿಯೋಣವೆಂದರೆ ಇದೇನಿದು ಏಳಲಿಕ್ಕೇ ಆಗುತ್ತಿಲ್ಲ..? ಆಫೀಸಿಗೆ ಫೋನ್ ಮಾಡಿ ಬರಲಾಗುತ್ತಿಲ್ಲ ಎಂದರೆ "ನಿನ್ನೆ ಆರಾಮಾಗೇ ಇದ್ರಲ್ಲ, ಅದು ಹೇಗೆ ಇದ್ದಕ್ಕಿದ್ದಂಗೆ ಜ್ವರ ಬಂತು?" -ಸಂಶಯದ ಪ್ರಶ್ನೆ. ಹೌದು ಸಾರ್, ನಂಗೂ ಗೊತ್ತಿಲ್ಲ. ಆದರೆ ಜ್ವರ ಬಂದಿದೆ. ಸುಳ್ಳು ಹೇಳ್ತಿಲ್ಲ ಸಾರ್. ಬರಲಿಕ್ಕೆ ಆಗಲ್ಲ. ಲೀವ್ ಬೇಕು. ಅಯ್ಯೋ, ಯಾಕೆ ಅರ್ಥವೇ ಆಗ್ತಿಲ್ಲ ನಾನು ಹೇಳ್ತಿರೋದು?
ಛೇ, ಇವತ್ತೇ ಯಾಕೆ ಇಷ್ಟೊಂದು ಕ್ಲೈಂಟ್ ಕಾಲ್ಗಳು? ಯಾರು ಇವರಿಗೆಲ್ಲ ನನ್ನ ಮೊಬೈಲ್ ನಂಬರ್ ಕೊಟ್ಟಿದ್ದು? ಯಾವಾಗಲೂ ತಡವಾಗಿ ಹೋಗುವ ರೂಂಮೇಟ್ ಇವತ್ತೇ ಯಾಕೆ ಬೇಗ ಹೋದ ಆಫೀಸಿಗೆ? ಕಷ್ಟ ಪಟ್ಟು ಎದ್ದು ಹೋಗಿ ಎರಡು ಲೋಟ ನೀರು ಕುಡಿಯುತ್ತೇನೆ.. ಸ್ವಲ್ಪ ಚೈತನ್ಯ ಬಂದಂತೆನಿಸುತ್ತದೆ.. ಬೇಕರಿಗೆ ಹೋಗಿ ಬ್ರೆಡ್-ಜಾಮ್ ತಂದುಕೊಳ್ಳುತ್ತೇನೆ. ಹಸಿವೆನಿಸಿದರೂ ಎರಡು ಬ್ರೆಡ್ ಮೇಲೆ ತಿನ್ನಲಿಕ್ಕೇ ಆಗುತ್ತಿಲ್ಲವಲ್ಲ, ಏನಾಗಿದೆ ನನಗೆ? ಕಾಫಿ ಕುಡಿಯಬೇಕು. ಸ್ಟ್ರಾಂಗ್ ಕಾಫಿ. ಥೂ, ಕಹಿ ಕಹಿ. ಇಲ್ಲೇ ಇಟ್ಟಿದ್ದೆನಲ್ಲ ಕ್ರೋಸಿನ್ ಸ್ಟ್ರಿಪ್ಪು, ಎಲ್ಲಿ ಹೋಯ್ತು? ನುಂಗಿ ಬೆಚ್ಚಗೆ ಹೊದ್ದು ಮಲಗಿದರೆ ಮಧ್ಯಾಹ್ನದೊಳಗೆ ಎಲ್ಲಾ ವಾಸಿಯಾಗುತ್ತೆ.
ಎಷ್ಟೋ ಹೊತ್ತಿನ ಮೇಲೆ ಎಚ್ಚರಾಗೊತ್ತೆ.. ಎಲ್ಲಿದ್ದೇನೆ ನಾನು? ಏನಾಗಿದೆ ನನಗೆ? ಸಮಯವೆಷ್ಟು ಈಗ? ಆಂ, ನಾಲ್ಕೂವರೆಯೇ? ಆಗಲೇ ಸಂಜೆಯಾಯಿತಾ? ಮೈಯೇಕೆ ಹೀಗೆ ಸುಡುತ್ತಿದೆ ಇನ್ನೂ? ಥರ್ಮಾಮೀಟರ್ ಎಲ್ಲಿ? ಏನೂ, ನೂರಾಮೂರು ಡಿಗ್ರಿಯಾ? ಛೇಛೆ, ಕಣ್ಣೇ ಮಂಜಾಗಿರಬೇಕು ನನಗೆ..
ನಾಲ್ಕು ದಿವಸಗಳಾಗಿವೆ.. ಎರಡು ಬಾರಿ ಡಾಕ್ಟರ್ ಬಳಿ ಹೋಗಿ ಬಂದದ್ದಾಯ್ತು. ಇಂಜೆಕ್ಷನ್ ಬೇಡ, ಟ್ಯಾಬ್ಲೆಟ್ಸಲ್ಲೇ ಗುಣ ಆಗುತ್ತೆ, ವೈರಲ್ ಫೀವರ್ ಎಂದಿದ್ದರು ಡಾಕ್ಟರು. ಆದರೆ ಇದ್ಯಾಕೋ ನನಗೆ ಹುಷಾರಾಗುವ ಲಕ್ಷಣವೇ ಕಾಣುತ್ತಿಲ್ಲ.. ರೂಂಮೇಟು ಪಾಪ ಕಾದಾರಿದ ನೀರು ಕುಡಿ ಅಂತ ಕಾಯಿಸಿಟ್ಟು ಹೋಗಿದ್ದಾನೆ. ತಿಳಿಸಾರು, ಮೆತ್ತನೆ ಅನ್ನ ಮಾಡಿಕೊಟ್ಟಿದ್ದಾನೆ. ಗಂಜಿ ಬೇಕು ಎಂದರೆ ಕುಕ್ಕರನ್ನು ಐದು ಸಲ ಕೂಗಿಸಿದ್ದಾನೆ. ಮನೆಯಲ್ಲಿ ಒಬ್ಬನೇ ಭೂತದ ಥರ ಮಲಗಿಕೊಂಡಿದ್ದೇನೆ. ಯಾವುದಾದರೂ ಪುಸ್ತಕವನ್ನಾದರೂ ಓದೋಣವೆಂದರೆ ಅದನ್ನು ಹಿಡಿದುಕೊಳ್ಳಲೂ ತ್ರಾಣವಿಲ್ಲ. ಸ್ವಲ್ಪ ಓದುವಷ್ಟರಲ್ಲೇ ಸುಸ್ತು ಸುಸ್ತು. ಮನೆಗೆ ಇನ್ನೂ ಹೇಳಿಲ್ಲ. ಹೇಳಿದರೆ ಟೆನ್ಷನ್ ಮಾಡಿಕೊಳ್ಳುತ್ತಾರೆ. "ಈಗ್ಲೇ ಕಳುಸ್ತೀನಿ ಅಮ್ಮನ್ನ" ಅಂತಾನೆ ಅಪ್ಪ. ಬೇಡ, ಇನ್ನೂ ಒಂದೆರಡು ದಿನ ನೋಡೋಣ; ಹಾಗೇ ಆರಾಮಾಗಬಹುದು. ಒಂದಿಬ್ಬರು ಫ್ರೆಂಡ್ಸು ಬಂದು ನೋಡಿಕೊಂಡು ಹೋಗಿದ್ದಾರೆ. "ಗ್ಲುಕೋಸು, ಎಳನೀರು ಅಥ್ವಾ ಜ್ಯೂಸು ಕುಡೀತಿರು, ಅದಿಲ್ಲಾಂದ್ರೆ ಲಿಕ್ವಿಡ್ ಕಂಟೆಂಟ್ಸ್ ಇಲ್ದೇ ಡಿಹೈಡ್ರೇಷನ್ ಆಗುತ್ತೆ" ಎಂದಿದ್ದಾನೆ ಕಲೀಗು ಫೋನಿನಲ್ಲಿ. ಹೌದು, ವಿಪರೀತ ಬಾಯಾರಿಕೆ. ಹೀಟು. ಈ ಪರಿ ಡಜನ್ಗಟ್ಟಲೆ ಮಾತ್ರೆ ತಿಂದರೆ ಮತ್ತಿನ್ನೇನಾಗತ್ತೆ?
ಬಹುಶಃ ನನಗೆ ಜ್ವರ ಬಂದು ಏಳೆಂಟು ದಿನಗಳೇ ಆಗಿವೆ.. ಆಫೀಸಿಗೆ ಹೊರಟ ರೂಂಮೇಟು ಎಬ್ಬಿಸುತ್ತಿದ್ದಾನೆ: "ಏಯ್ ಏಳು.. ಏಳು ಸಾಕು.. ಇದ್ಯಾಕೋ ಟೈಫಾಯ್ಡಿಗೆ ಎಳೆಯೋ ಹಾಗಿದೆ. ಮೊದಲು ಹೋಗಿ ಬ್ಲಡ್ಡು, ಯೂರಿನ್ನು ಟೆಸ್ಟ್ ಮಾಡ್ಸೋಣ, ನಡಿ.." ಥೂ, ಈ ಆಟೋ ಯಾಕೆ ಹೀಗೆ ಕುಲುಕಾಡುತ್ತೆ? ಸಿರಿಂಜ್ ಚುಚ್ಚಿ ರಕ್ತವನ್ನು ಎಳೆದುಕೊಳ್ಳುತ್ತಿದ್ದಾರೆ ಸರ್ಜನ್.. ರಿಪೋರ್ಟು ಮಧ್ಯಾಹ್ನ ಸಿಗುತ್ತೆ ಅಂತಿದಾರೆ.. ಅಲ್ಲಿಯವರೆಗೆ ನಾನೇನು ಮಾಡಲಿ? ಇಲ್ಲೇ ಬೆಂಚಿನ ಮೇಲೆ ಮಲಗಿರಲಾ? "ಇದು ಪ್ಯಾರಾಟೈಫಾಯ್ಡ್. ತುಂಬಾನೇ ನಿಶ್ಯಕ್ತಿ ಆಗಿದೆ ನಿಮಗೆ. ಡ್ರಿಪ್ ಹಾಕ್ಬೇಕು. ಅಡ್ಮಿಟ್ ಆಗಿಬಿಡಿ ಈಗಲೇ" ಕನ್ನಡಕದ ಡಾಕ್ಟರು ಒಂದೇ ಸಮನೆ ಮಾತಾಡುತ್ತಿದ್ದಾರೆ. ಅಯ್ಯೋ ಬೇಡ ಡಾಕ್ಟ್ರೇ.. ಇಲ್ಲಿ ನಾನು ಅಡ್ಮಿಟ್ ಆಗಲ್ಲ.. ನನ್ನ ನೋಡ್ಕೊಳ್ಳೋರು ಯಾರೂ ಇಲ್ಲ.. ನಾನು ಊರಿಗೆ ಹೋಗ್ತೇನೆ.. ಬೇಕಾದ್ರೆ ಅಲ್ಲೇ ಯಾವುದಾದರೂ ಹಾಸ್ಪಿಟಲ್ಗೆ ಹೋಗ್ತೇನೆ.. ಊರಿಗೆ ಹೋದರೆ ಸಾಕು, ಅಮ್ಮನ ಕೈತುತ್ತೂಟ ಉಂಡರೆ ಎಲ್ಲ ಆರಾಮಾಗುತ್ತೆ.. ನನ್ನ ಬಿಟ್ಬಿಡಿ ಈಗ..
ಮನೆಗೆ ಫೋನ್ ಮಾಡಿ ಹೇಳ್ತಿದ್ದೇನೆ.. "ಯಾಕೆ ಇಷ್ಟೆಲ್ಲ ಆದ್ರೂ ಹೇಳ್ಲಿಲ್ಲ ನಮಗೆ? ನಾವೆಲ್ಲಾ ಇರೋದು ಏನಕ್ಕೆ? ಈಗ ಒಬ್ನೇ ಹ್ಯಾಗೆ ಬರ್ತೀಯಾ?" ಇಲ್ಲಮ್ಮಾ, ಸ್ಲೀಪರ್ ಕೋಚ್ ಬಸ್ಸು.. ಊರಿಗೆ ಹೋಗೋರು ಯಾರಾದ್ರೂ ಇದ್ದೇ ಇರ್ತಾರೆ.. ಅಪ್ಪಂಗೆ ಬಸ್ಸ್ಟಾಂಡ್ ಹತ್ರ ಬರ್ಲಿಕ್ಕೆ ಹೇಳು ಅಷ್ಟೇ.. ಏನು ಭಯ ಬೇಡ..
ನಾನು ಹೋಗುವಷ್ಟರಲ್ಲೇ ನನಗೆ ಟೈಫಾಯ್ಡ್ ಆಗಿರುವುದು ಊರಿಗೆಲ್ಲ ಸುದ್ದಿಯಾಗಿಬಿಟ್ಟಿದೆ! ಎಲ್ಲರೂ ಕೇಳುವವರೇ: ಜ್ವರನಂತೆ? ಈಗ ಹೇಗಿದೆ? ತುಂಬಾ ಕೇರ್ ತಗೋಬೇಕು.. ಖಾರದ ಪದಾರ್ಥ ಸ್ವಲ್ಪಾನು ತಿನ್ಬೇಡ.. ಛೇ ಪಾಪ, ಒಂದು ವಾರದಲ್ಲಿ ಹೆಂಗೆ ತೆಳ್ಳಗಾಗಿ ಹೋಗಿದೀಯ ನೋಡು.. "ಮದ್ದಾಲೆ ಚಕ್ಕೆ ಕಷಾಯ ಮಾಡಿಕೊಡಿ ಅವಂಗೆ, ಎಂಥಾ ಜ್ವರ ಇದ್ರೂ ಎರಡೇ ದಿನದಲ್ಲಿ ಓಡಿಹೋಗುತ್ತೆ.. ನಮ್ಮನೆ ಸರೋಜಂಗೆ ಅದ್ರಲ್ಲೇ ಹುಶಾರಾಗಿದ್ದು" ಗಣಪತಿ ಭಟ್ಟರು ಸಲಹೆ ಕೊಡುತ್ತಿದ್ದಾರೆ. ಅಮ್ಮನಿಗಂತೂ ಉಪಚಾರ ಮಾಡಿದಷ್ಟೂ ಸಾಕಾಗ್ತಿಲ್ಲ.. ರವೆಗಂಜಿ ಮಾಡ್ಕೊಡ್ಲಾ? ಬಾರ್ಲಿ ನೀರು ಬತ್ತಿಸಿದ್ದಿದೆ ಕುಡೀತೀಯಾ? ಇವತ್ತು ಮಧ್ಯಾಹ್ನದ ಅಡುಗೆಗೆ ಏನು ಮಾಡ್ಲಿ? ಒಂದೆಲಗನ ತಂಬುಳಿ ಪರ್ವಾಗಿಲ್ವಾ? ಇಲ್ಲೇ ಹಾಲಲ್ಲಿ ಮಲ್ಕೋ.. ರೂಮಲ್ಲಿ ಸೆಖೆ ಅಂದ್ರೆ ಸೆಖೆ.
ಆ ಕಡೆ ಈ ಕಡೆ ಶತಪತ ಮಾಡುವ ಅಪ್ಪ. ಪಿಸುಗಣ್ಣೀರು ಹಾಕುವ ಅಜ್ಜ. ಬರೀ ಗಲಾಟಿ ಮಾಡುವ ಬೇಸಿಗೆ ರಜೆಗೆ ಬಂದಿರುವ ನೆಂಟರ ಮಕ್ಕಳು. ಒಂದೇ ಸಮನೆ ರಿಂಗಾಗುವ ಫೋನು. ಬೆಂಕಟವಳ್ಳಿಯಿಂದ ಮಾವನಂತೆ.. ನಾನು ಈಗ ಹೇಗಿದ್ದೀನಿ ಅಂತ ಕೇಳೋಕೆ ಮಾಡಿದ್ದಂತೆ. ಅತ್ತೆ ನಾಳೆ ಬರ್ತಿದ್ದಾಳಂತೆ. ನನ್ನ ನೋಡಿಕೊಂಡು ಹೋಗಲಿಕ್ಕೆ. ಛೇ! ನಂಗೇನು ಮಾರಣಾಂತಿಕ ಕಾಯಿಲೆ ಬಂದಿದೆಯೇನಪ್ಪಾ? ಜ್ವರ ಅಷ್ಟೇ. ಯಾಕೆ ಈ ಆಪ್ತೇಷ್ಟರಿಗೆ ಈ ಪರಿ ಕಾಳಜಿ? ಕನಸಿನಲ್ಲಿ ಯಾರೋ ಹೇಳುತ್ತಿದ್ದಾರೆ: ಅದು ಹಾಗಲ್ಲ, ನೀನು ಆರಾಮಾಗಿದ್ದಾಗ ಯಾರೂ ಬಾರದೇ ಇದ್ರೂ ನಡೆಯುತ್ತೆ, ಆದರೆ ತೊಂದರೇಲಿ ಇದ್ದಾಗ ಬಂದು ವಿಚಾರಿಸಿಕೊಂಡು ಹೋಗಬೇಕು.. ಅದೇ ನಿಯಮ.. ಸ್ನೇಹ, ಬಂಧುತ್ವ, ನೆರೆಹೊರೆ ಅಂದರೆ ಅದು.. ಕಷ್ಟದಲ್ಲಿದ್ದಾಗ ನೆರವಾಗೋದು. ನಗರಗಳಲ್ಲಿ ಅದೆಲ್ಲ ಇಲ್ಲ. ನೀನು ವಾರಗಟ್ಟಲೆ ಮಲಗಿದ್ರೂ ಅಕ್ಕಪಕ್ಕದ ಮನೆಯ ಒಬ್ಬರಾದ್ರೂ ಬಂದು ಕೇಳಿದ್ರಾ- ಯಾಕಪ್ಪಾ ಏನಾಗಿದೆ ಯಾಕೆ ಆಫೀಸಿಗೆ ಹೋಗ್ತಿಲ್ಲ ಅಂತ? ಅಲ್ಲಿ ಜನಗಳಿಗೆ ಮನುಷ್ಯತ್ವವನ್ನು ಪ್ರಕಟಿಸಲಿಕ್ಕೆ ಸಮಯವೂ ಇಲ್ಲ; ಪ್ರಜ್ಞೆಯೂ ಇಲ್ಲ.
"ಥೂ ಅಮ್ಮಾ, ಇದೇನಿದು ಕಿಚಿಪಿಚಿ ಕಿರುಚಾಟ? ನಿದ್ರೆ ಮಾಡ್ಲಿಕ್ಕೇ ಬಿಡ್ತಿಲ್ಲ?" ಮಗ್ಗುಲಿನಲ್ಲಿ ಮಲಗಿದ ನಾನು ಅಂಗಾತವಾಗುತ್ತ ಗೊಣಗುತ್ತೇನೆ. "ಗುಬ್ಬಚ್ಚಿಗಳು ಕಣೋ.. ಪಾಪ ಗೂಡು ಕಟ್ಕೊಳ್ತಿವೆ.. ಎರಡು ದಿನದಿಂದ ಹುಲ್ಲು ಹೆಕ್ಕಿ ತರೋದು, ಜೋಡಿಸಿ ಜೋಡಿಸಿ ಇಡೋದು -ಇದೇ ಕೆಲಸ ಸರಭರ. ಅವು ನೆಲಕ್ಕೆ ಬೀಳಿಸಿದ ಹುಲ್ಲುಕಡ್ಡಿಗಳನ್ನ ಗುಡಿಸೋ ಕೆಲಸ ಒಂದು ನಂಗೆ ಹೆಚ್ಚಿಗೆ ಅಷ್ಟೇ!" ಅರೆ, ಈ ಅಮ್ಮನಿಗೇಕೆ ಈ ಗುಬ್ಬಚ್ಚಿಗಳ ಮೇಲೆ ಕರುಣೆ? ಬೇರೆ ಎಲ್ಲಾದ್ರೂ ಕಟ್ಟಿಕೋಬಹುದಪ್ಪ ಗೂಡು.. ನಮ್ಮನೆ ಸಜ್ಜಾನೇ ಬೇಕಾ? ಗಲಾಟೆ ಅಂದ್ರೆ ಗಲಾಟೆ. "ಬೇರೆ ಕಡೆ ಅಂದ್ರೆ ಎಲ್ಲಿಗೆ ಹೋಗ್ತಾವೋ ಪಾಪ? ಅದ್ರಲ್ಲಿ ಹೆಣ್ಣುಹಕ್ಕಿ ಬಸುರಿ ಇರ್ಬೇಕು.. ಹೊಟ್ಟೆ ನೋಡಿದ್ರೆ ಹಾಗೇ ಅನ್ಸುತ್ತಪ್ಪ.." ಸಂಭ್ರಮದ ದನಿಯಲ್ಲಿ ಹೇಳುತ್ತಿದ್ದಾಳೆ ಅಮ್ಮ.
ಹತ್ತು ದಿನ ಆದ್ರೂ ಇನ್ನೂ ಹೋಗಿಲ್ಲ ಜ್ವರ.. ನೂರಾ ಎರಡು ಡಿಗ್ರಿ.. ಸೊರಬದ ಡಾಕ್ಟರ್ ಬಳಿ ಹೋಗುವುದು ಅಂತ ತೀರ್ಮಾನವಾಗಿದೆ. "ಎರಡು ಡ್ರಿಪ್ ಹಾಕಿದ್ರೆ ಎಲ್ಲ ಸರಿ ಆಗುತ್ತೆ.. ನೀವ್ ಏನೂ ಹೆದರ್ಬೇಡಿ.. ನಾನು ಸರಿ ಮಾಡಿ ಕಳುಸ್ತೀನಿ ನಿಮ್ಮ ಮಗನ್ನ" ಡಾ| ಎಂ.ಕೆ. ಭಟ್ಟರು ಹುರುಪುನಿಂದಲೇ ಹೇಳುತ್ತಿದ್ದಾರೆ. ಸಲೈನಿನ ಹನಿಗಳು ಒಂದೊಂದೆ ಒಂದೊಂದೇ ಆಗಿ ಸೇರಿಕೊಳ್ಳುತ್ತಿವೆ ದೇಹದಲ್ಲಿ.. ಸ್ವಲ್ಪ ಚೇತರಿಕೆ ಕಾಣಿಸುತ್ತಿದೆ ಈಗ.. ಇನ್ನು ಎರಡು ದಿನ. ಇದೊಂದು ಕೋರ್ಸ್ ಟ್ಯಾಬ್ಲೆಟ್ ತಗೊಂಡ್ರೆ ಫುಲ್ ರೆಡಿಯಾಗ್ತೀನಿ. ಹಾಗಂತ ನಂಗೇ ಅನ್ನಿಸ್ತಿದೆ.
...ಒಂದು ದಿನ ಮುಂಜಾನೆ ಥಟ್ಟನೆ ಎಚ್ಚರಾದಂತಾಗಿ ಕಣ್ಣು ಬಿಡುತ್ತೇನೆ. ಆಹ್ಲಾದವೆನಿಸುವ ಹಾಗೆ ಸೂರ್ಯರಶ್ಮಿ ಕಣ್ಣಿಗೆ ಬೀಳುತ್ತಿದೆ. ಅಪ್ಪ ಹತ್ತಿರ ಬಂದು ಡಿಗ್ರಿ ಕಡ್ಡಿ ಇಟ್ಟು ನೋಡುತ್ತಿದ್ದಾನೆ. ಇಲ್ಲ, ಜ್ವರ ಇಲ್ಲ; ನಾರ್ಮಲ್ ಟೆಂಪರೇಚರ್! ಹೌದು, ಜ್ವರ ಹೊರಟುಹೋಗಿದೆ. ನಿಜವಾಗಿಯೂ. ಆಹ್, ಅಮ್ಮ ದೇವರಿಗೆ ತುಪ್ಪದ ದೀಪ ಹಚ್ಚಲು ಓಡುತ್ತಿದ್ದಾಳೆ. ಅಜ್ಜ ಉಟ್ಟ ಸಾಟಿಪಂಚೆಯಿಂದಲೇ ಒರೆಸಿಕೊಳ್ಳುತ್ತಿದ್ದಾನೆ ಕಂಬನಿ. ಸುತ್ತ ನಿಂತ ಮಕ್ಕಳು "ಹಂಗಾದ್ರೆ ಇವತ್ತಿಂದ ನಮ್ ಜೊತೆ ಕ್ರಿಕೆಟ್ ಆಡ್ಬಹುದು ನೀನು?" ಕೇಳುತ್ತಿದ್ದಾರೆ ಉತ್ಸಾಹದಲ್ಲಿ. "ಪೂರ್ತಿ ರಿಕವರ್ ಆಗ್ಲಿಕ್ಕೆ ಇನ್ನೂ ಒಂದು ತಿಂಗಳು ಬೇಕು ನಿಂಗೆ. ಈಗ್ಲೇ ಹೊರಡ್ತೀನಿ ಬೆಂಗಳೂರಿಗೆ ಅಂತೆಲ್ಲ ಹಟ ಮಾಡ್ಬೇಡ. ವಾರ ಬಿಟ್ಟು ಹೋಗು" -ತಾಕೀತು ಅಪ್ಪನಿಂದ.
ಮಂಚದಿಂದಿಳಿದು ಮುಚ್ಚೆಕಡೆ ಬಾಗಿಲಿನೆಡೆಗೆ ಹೊರಟಿದ್ದೇನೆ. ಫಕ್ಕನೆ ಮೈಮೇಲೆ ಏನೋ ಬಿದ್ದಂತಾಗಿದೆ. ಏನಿದು? ಒಂದು ಹುಲ್ಲುಕಡ್ಡಿ. ಮೇಲೆ ನೋಡುತ್ತೇನೆ. ಒತ್ತೊತ್ತಾಗಿ ಚಂದವಾಗಿ ಜೋಡಿಸಿ ನಿರ್ಮಿತವಾಗಿರುವ ಗೂಡಿನಿಂದ ಬಸುರಿ ಗುಬ್ಬಚ್ಚಿ ಹೊರಗಿಣುಕಿ ನೋಡುತ್ತಿದೆ ನನ್ನನ್ನೇ: "..ಚಿಲಿಪಿಲಿ ಚಿಲಿಪಿಲಿ.." ಹೇ... ನನಗೆ ಒಮ್ಮೆಲೆ ಖುಶಿ ಉಕ್ಕಿ ಬರುತ್ತಿದೆ.. ಎಲ್ಲಿಂದಲೋ ಪುರ್ರನೆ ಹಾರಿಬಂದ ಗಂಡುಹಕ್ಕಿ ಗೂಡಿನ ಬಳಿ ಕೂತು ಹೆಂಡತಿಗೆ ಅದೇನೋ ಹೇಳುತ್ತಿದೆ. ಅಂದು ಗಲಾಟೆಯಂತೆ ಕೇಳಿದ್ದ ಇವುಗಳ ಮಾತು ಇಂದು ಹಿತವಾಗಿ ಕಲರವದಂತೆ ಕೇಳಿಸುತ್ತಿದೆ. ಎವೆ ಬಡಿಯದೇ ನೋಡುತ್ತಿದ್ದೇನೆ ನಾನು. ಪುಟ್ಟ ಸಂಸಾರಕ್ಕೆ ಇನ್ನೇನು ಬಂದು ಸೇರಲಿರುವ ಹೊಸದೊಂದು ಜೀವಕ್ಕೆ ಸ್ವಾಗತ ಕೋರುವ ತಯಾರಿಯಲ್ಲಿವೆ ಗುಬ್ಬಚ್ಚಿ ದಂಪತಿಗಳು.
* * *
ಈ ನಡುವೆ, ಏಪ್ರಿಲ್ ೨೬ಕ್ಕೆ ನನ್ನ ಬ್ಲಾಗಿನ ಮೂರನೇ ವರ್ಷದ ಹುಟ್ಟುಹಬ್ಬ ಕಳೆದುಹೋಗಿದೆ! ಸಿಂಗಾರಬಂಗಾರವಾಗಿ ಕಂಗೊಳಿಸಬೇಕಿದ್ದ ನನ್ನ ಬ್ಲಾಗು, ಪಾಪ ಒಡೆಯನ ಅನಾರೋಗ್ಯದಿಂದ ಯಾವುದೇ ಆಚರಣೆಯಿಲ್ಲದೆ ಸೊರಗಿ ಬೇಸರದಲ್ಲಿ ನಿಂತಿದೆ. ಸಮಾಧಾನ ಮಾಡಲು ನಾನು ಕರ್ಚೀಫು ಹುಡುಕುತ್ತಿದ್ದೇನೆ.
ನಾನು ಬ್ಲಾಗು ಶುರು ಮಾಡುವಾಗ ಕನ್ನಡದಲ್ಲಿದ್ದ ಬ್ಲಾಗುಗಳು ಬೆರಳೆಣಿಕೆಯಷ್ಟು. ಬ್ಲಾಗು ಎಂದರೇನು, ಬರಹ ಎಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬೇಕು, ಯುನಿಕೋಡ್ ಬಳಸುವುದು ಹೇಗೆ, ಲಿಂಕಿಂಗ್ ಮಾಡುವುದು ಹೇಗೆ, ಬೇರೆಯವರಿಗೆ ನನ್ನದೂ ಒಂದು ಬ್ಲಾಗ್ ಇದೆ ಅಂತ ತಿಳಿಸುವುದು ಹೇಗೆ -ಇತ್ಯಾದಿ ಸಹಸ್ರ ಪ್ರಶ್ನೆಗಳಿದ್ದವು ನನ್ನ ಮುಂದೆ.
ಹೈಸ್ಕೂಲು ಕಾಲದಿಂದ ಬರೆಯುತ್ತಿದ್ದರೂ ಅವನ್ನು ಯಾರಿಗೂ ತೋರಿಸದೇ ಮುಚ್ಚಿಡುತ್ತ ಬಂದಿದ್ದ ನನಗೆ, ನನ್ನ ಬರಹಗಳು ಬೇರೆಯವರೂ ಓದುವಂತಿದೆಯೋ ಇಲ್ಲವೋ ಎಂಬುದೇ ದೊಡ್ಡ ಕುತೂಹಲವಾಗಿತ್ತು. ಬಹುಶಃ ನಾನು ಬ್ಲಾಗ್ ಶುರು ಮಾಡಿದ್ದು ಅದನ್ನು ಪರೀಕ್ಷಿಸಲೆಂದೇ ಇರಬೇಕು! ತೀರಾ ಪತ್ರಿಕೆಗಳಿಗೆ ನಾನು ಬರೆದ ಕತೆ-ಕವನ ಕಳುಹಿಸಿ ಅವು ರಿಜೆಕ್ಟ್ ಆಗಿ ವಾಪಸು ಬರುವುದಕ್ಕಿಂತ ಈ ಬ್ಲಾಗಿಂಗು ಸೇಫು ಅನ್ನಿಸಿತು ನನಗೆ. ಇಲ್ಲಿ ಇದನ್ನು ಅಕಸ್ಮಾತಾಗಿ ಯಾರಾದರೂ ಓದಿ ಚೆನ್ನಾಗಿದೆ ಅಂದುಬಿಟ್ಟರೆ ನಾನು ಗೆದ್ದೆ; ಅದಿಲ್ಲದಿದ್ದರೆ ಬೇಸರವಂತೂ ಇಲ್ಲ. ಯಾರೂ ಓದಲೇ ಇಲ್ಲವೇನೋ ಅಂದುಕೊಂಡು ಸುಮ್ಮನಿದ್ದರಾಯಿತು! ಬ್ಲಾಗು, ನನ್ನ ಬರಹಗಳ ಪ್ರಯೋಗಕ್ಕೊಂದು ವೇದಿಕೆಯಾಗಲಿ - ಆದೀತು ಎಂಬುದು ನನ್ನ ಆಶಯವಾಗಿತ್ತು.
ನಾನು ಬ್ಲಾಗಿಂಗ್ ಶುರುಮಾಡುವಾಗ ಇದ್ದ ಕನ್ನಡ ಬ್ಲಾಗುಗಳಲ್ಲಿ ಹೆಚ್ಚಿನವು ಪರ್ಸನಲ್ ಬ್ಲಾಗುಗಳೇ ಆಗಿದ್ದವು. ಕೆಲವರು ಕತೆ-ಕವನ ಬರೆಯುತ್ತಿದ್ದರು. ಇನ್ನುಳಿದಂತೆ ಪ್ರವಾಸ ಕಥನಗಳು, ಲಹರಿಗಳು, ಲಲಿತ ಪ್ರಬಂಧಗಳು, ಹೆಚ್ಚೆಂದರೆ ಯಾವುದೋ ಕಾರ್ಯಕ್ರಮದ ವರದಿ. ಬ್ಲಾಗುಗಳ ಸಂಖ್ಯೆ ಜಾಸ್ತಿಯಾಗುತ್ತಾ ಹೋದಂತೆ ಬ್ಲಾಗರುಗಳಲ್ಲೇ ಕ್ಲಾಸಿಫಿಕೇಶನ್ನುಗಳು, ಗುಂಪುಗಳು ಪ್ರಾರಂಭವಾದವು. ಬ್ಲಾಗ್ ಜಗತ್ತಿಗೆ ರಾಜಕೀಯ, ಸ್ತ್ರೀವಾದ, ಧೋರಣೆಗಳು, ಎಡಪಂಥ-ಬಲಪಂಥ, ವಿಚಾರವಾದ, ಕಮ್ಯೂನಲಿಸಮ್ಮು, ಟೆರರಿಸಮ್ಮು, ಪಾರ್ನು, ಸೆಲೆಬ್ರಿಟಿಗಳು(!), ಪರಸ್ಪರ ಆರೋಪಗಳು, ಕಚ್ಚಾಟಗಳು, ಪ್ರತಿಕ್ರಿಯಾ ಪ್ರತಿಭಟನೆ -ಇತ್ಯಾದಿ ಸಾಮಾನ್ಯ ಮನುಷ್ಯರಿಗೆ ಅರ್ಥವಾಗದ ಎಲ್ಲಾ ವಿಚಾರಗಳೂ ಕಾಲಿಟ್ಟವು.
ಒಬ್ಬ ಬರೆದ ಒಂದು ಬರಹವನ್ನೇ ಎದುರಿಗಿಟ್ಟುಕೊಂಡು "ಆತ ಇಂಥವ" ಅಂತ ಹಣೆಪಟ್ಟಿ ಕೊಡುವ ಪರಿ ಶುರುವಾಯ್ತು. ಅವನಿಗೊಂದು ವಿರೋಧಿ ಗುಂಪೇ ತಯಾರಾಗಿ ಹೋಗಿದೆಯೇನೋ ಎಂಬಂತೆ ಆತನ ಮುಂದಿನ ಬರಹಗಳಿಗೆಲ್ಲವಕ್ಕೂ ಬೈಗುಳಗಳ ಸುರಿಮಳೆಯೇ ಬೀಳತೊಡಗಿದವು. ಅನಾನಿಮಸ್ ಹೆಸರಿನಲ್ಲಿ, ಬೇರೆಯವರ ಹೆಸರಿನಲ್ಲಿ ಬರುವ ಪ್ರತಿಕ್ರಿಯೆಗಳು ಜಾಸ್ತಿಯಾದವು. 'ರೆಸ್ಪಾನ್ಸಿಬಲ್ ಕಮೆಂಟಿಂಗ್'ಅನ್ನು ಕಲಿಯಲು ನಮಗಿನ್ನು ಕಾಲವೇ ಬೇಕೇನೋ ಅಂತ ನಾವು ಆಕಾಶ ನೋಡುವಂತಾಯಿತು. ಸಮಸ್ಯೆಯೆಂದರೆ, ಆವಾಗಿನಿಂದಲೂ ಕತೆ-ಕವನ-ಲಹರಿ ಅಂತ ಬರೆದುಕೊಂಡು ಬಂದಿದ್ದ ನನ್ನಂಥವರಿಗೆ, ಎಲ್ಲೋ ಆಫೀಸಿನ ಬಿಡುವಿನ ವೇಳೆಯಲ್ಲಿ ರಿಲಾಕ್ಸ್ ಆಗೋಣ ಅಂತ ಬ್ಲಾಗ್ಗಳ ಕಡೆಗೆ ಕಣ್ಣು ಹಾಯಿಸಿದರೆ, ಬರೀ ಇಂತಹ ಸೀರಿಯಸ್ಸಾದ ಚರ್ಚೆಗಳೋ, ಚರ್ಚೆಯಾಗಿ ಉಳಿದಿರದ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳೇ ಕಣ್ಣಿಗೆ ಬೀಳತೊಡಗಿ -ಛೇ, ಇದೇನಪ್ಪಾ ಆಗಿಹೋಯ್ತು ಕನ್ನಡ ಬ್ಲಾಗಿಂಗ್ ಪರಿಸ್ಥಿತಿ ಅಂತ ಬೇಸರ ಪಟ್ಟುಕೊಳ್ಳುವಂತಾಯ್ತು.
ಇರಲಿ, ಯಾವುದೇ ಮಾಧ್ಯಮದಲ್ಲಿ ಆಗುವಂತೆ ಇವೂ ಸಹ ಬ್ಲಾಗ್ ಮಾಧ್ಯಮದಲ್ಲಿ ಕನ್ನಡ ಬೆಳೆಯುತ್ತಿರುವ ಲಕ್ಷಣಗಳು ಅಂತ ಸಧ್ಯ ನಾನಂತೂ ಸಮಾಧಾನ ಮಾಡಿಕೊಂಡಿದ್ದೇನೆ.
ಇತ್ತೀಚೆಗೆ ಪ್ರತಿಕ್ರಿಯೆಗಳಿಗಾಗಿ ದಾಹ ಪಡುವ, ಒತ್ತಡ ಹೇರುವ ಬ್ಲಾಗರುಗಳು ಒಂದು ದೊಡ್ಡ ತಲೆನೋವಾಗಿದ್ದಾರೆ. ಬ್ಲಾಗರ್-ಬ್ಲಾಗರುಗಳ ನಡುವೆಯೇ ವೈಮನಸ್ಸುಗಳು ಉಂಟಾಗಿವೆ. ಬ್ಲಾಗರುಗಳಿಗಾಗಿ ಕಮ್ಯೂನಿಟಿಗಳಾಗಿವೆ, ಪರಸ್ಪರ ಪರಿಚಯಕ್ಕೆ-ಸ್ನೇಹಕ್ಕೆ ವೇದಿಕೆಗಳಾಗಿವೆ. ನನ್ನ ಗೂಗಲ್ ರೀಡರಿನಲ್ಲಿಯೇ ಹೆಚ್ಚುಕಮ್ಮಿ ಆರುನೂರು ಕನ್ನಡ ಬ್ಲಾಗುಗಳ ಫೀಡ್ ಇದೆ. ಇಪ್ಪತ್ತು ದಿನಗಳ ರಜೆಯಿಂದ ಮೊನ್ನೆ ವಾಪಸು ಬಂದು ನೋಡಿದರೆ ೧೦೦೦+ ಅಪ್ಡೇಟ್ಗಳನ್ನು ತೋರಿಸುತ್ತಿದೆ ರೀಡರ್! ಯಾವಾಗ ಓದಿ ಮುಗಿಸುತ್ತೇನೋ?
ಅವೆಲ್ಲ ಏನೇ ಇದ್ದರೂ, ಮುಂಬಯಿಯಲ್ಲಿ ಭಯೋತ್ಪಾದಕರ ದಾಳಿಯಾದಾಗ ಒಬ್ಬ ಬ್ಲಾಗರ್ ನೀಡಿದ ಕರೆಗೆ ಸ್ಪಂದಿಸಿ ನಾವು ಎಷ್ಟೊಂದು ಬ್ಲಾಗರುಗಳು ನಮ್ಮ ಬ್ಲಾಗುಗಳ ಹಣೆಗೆ ಕಪ್ಪುಪಟ್ಟಿ ಹಚ್ಚಿಕೊಂಡಿದ್ದು; ಯಾರದೋ ಬ್ಲಾಗಿನ ಹುಟ್ಟುಹಬ್ಬ ಎಂದರೆ ಅಲ್ಲಿ ಹೋಗಿ ಅವರಿಗೆ ಶುಭಾಶಯ ಹೇಳುವುದು; ಒಬ್ಬರ ಬ್ಲಾಗ್ ಮೆಚ್ಚಿ ಮತ್ತೊಬ್ಬರು ಬರೆಯುವುದು; ಕಮ್ಯೂನಿಟಿಗಳಲ್ಲಿ ಬ್ಲಾಗರುಗಳು ಪರಸ್ಪರ ಸ್ನೇಹ ಬಯಸಿ ರಿಕ್ವೆಸ್ಟ್ ಕಳುಹಿಸುವುದು -ಎಲ್ಲಾ ಖುಶಿ ಪಡಬೇಕಾದ ವಿಷಯಗಳೇ. ಎಷ್ಟೊಂದು ಬ್ಲಾಗರುಗಳು ಪೋಸ್ಟಿನಿಂದ ಪೋಸ್ಟಿಗೆ ಪಕ್ವವಾಗುತ್ತ ಹೋಗಿರುವುದು ನಮ್ಮ ಕಣ್ಮುಂದಿದೆ. ಯಾವಾಗ ಮುಂದಿನ ಪೋಸ್ಟು ಅಂತ ಕಾಯುವಂತೆ ಮಾಡುವ ಬಹಳಷ್ಟು ಬ್ಲಾಗರ್ ಗೆಳೆಯ-ಗೆಳತಿಯರು ನಮ್ಮೊಂದಿಗಿದ್ದಾರೆ. ಈಗೀಗ ಬ್ಲಾಗುಗಳು ಇವೆಂಟ್ ನೋಟಿಫಿಕೇಶನ್ನಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ಪರಿಸರ, ಸಮಾಜ, ಪುಸ್ತಕ, ಸಂಗೀತ, ಸಿನೆಮಾಗಳ ಬಗ್ಗೆ ಅರಿವು-ಜಾಗೃತಿ ಮೂಡಿಸುವ ಪ್ರಯತ್ನ ಮಾಡುವ ಬ್ಲಾಗುಗಳು ಶುರುವಾಗಿವೆ. ಅನೇಕ ಹಿರಿಯರು ಉತ್ಸಾಹದಿಂದ ಬ್ಲಾಗಿಸುತ್ತಿದ್ದಾರೆ. ಸುಮಾರು ಬ್ಲಾಗರುಗಳು ಬ್ಲಾಗ್ ಮುಚ್ಚುತ್ತಿದ್ದೇನೆ, ಅಲ್ಪವಿರಾಮ, ಪೂರ್ಣವಿರಾಮ ಅಂತೆಲ್ಲ ಹೇಳಿಕೆ ಕೊಟ್ಟೂ ನಂತರ ಮತ್ತೆ ಬರೆಯಲು ಶುರು ಮಾಡಿದ್ದಾರೆ.. ಹಾಗೇ ಇದು: ಬಿಟ್ಟೇನೆಂದರೂ ಬಿಡದೀ ಮಾಯೆ!
ಬಹುಶಃ ಬ್ಲಾಗಿಂಗಿನ ದೊಡ್ಡ ಲಾಭವೆಂದರೆ ಇದು ನಮ್ಮ ಪ್ರತಿಭೆಗೆ ಕಲ್ಪಿಸಿಕೊಡುವ ವೇದಿಕೆ, ಆ ಪ್ರತಿಭೆಯನ್ನು ಮುಂದುವರೆಸಲು ಸಿಗುವ ಪ್ರೋತ್ಸಾಹ, ತಿದ್ದಿಕೊಳ್ಳಲು ಅವಕಾಶಗಳು, ಗಳಿಸಿಕೊಡುವ 'ಐಡೆಂಟಿಟಿ' ಮತ್ತು ಸಂಪಾದಿಸಿಕೊಡುವ ಹೊಸ ಸ್ನೇಹಗಳು. ಅದು ದುರುಪಯೋಗವಾಗದಂತೆ ಕಾಯ್ದುಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಮೂರು ವರ್ಷಗಳಿಂದ ಕನ್ನಡ ಬ್ಲಾಗಿಂಗನ್ನು ಶ್ರದ್ಧೆಯಿಂದಲೇ ಗಮನಿಸಿಕೊಂಡು ಬರುತ್ತಿರುವ ಒಬ್ಬ ಬ್ಲಾಗರ್ ಆಗಿ ನಾನು ಇಷ್ಟೆಲ್ಲ ಬರೆಯಬೇಕಾಯ್ತು ಅಷ್ಟೇ.
ಒಂದೊಂದೇ ಹುಲ್ಲುಕಡ್ಡಿ ಸೇರಿಸುತ್ತ ನಾವೇ ಕಟ್ಟಿಕೊಂಡಿರುವ ಗುಬ್ಬಚ್ಚಿ ಗೂಡು ಇದು.. ಇಲ್ಲಿ ಕಚ್ಚಾಟಗಳು ಬೇಡ. ಪರಸ್ಪರ ಪ್ರೀತಿಯಿಂದ ಇರೋಣ. ಗುಬ್ಬಚ್ಚಿ ಗೂಡಿನಿಂದ ಹೊರಬೀಳುವ ಚಿಲಿಪಿಲಿ ಕಲರವ ಕೇಳುಗರ ಕಿವಿಗೆ ಇಂಪಾಗಿರಲಿ; ನಮ್ಮ ವರ್ತನೆ ನೋಡುಗರ ಕಣ್ಣಿಗೆ ತಂಪಾಗಿರಲಿ.
ಈ ಮೂರು ವರ್ಷದ ಹಾದಿಯಲ್ಲಿ ಸಿಕ್ಕ ಎಲ್ಲರಿಗೂ ನನ್ನ ಧನ್ಯವಾದ. ಪಯಣ ಮುಂದುವರೆಯುತ್ತದೆ. ಹ್ಯಾಪಿ ಬ್ಲಾಗಿಂಗ್. ಲವ್ಯೂ ಆಲ್!
35 comments:
ಈಗ ಹುಷಾರಾಗಿ ಇದೀಯೇನೋ ಮಾರಾಯ ?
ಪಾರ ಟೈಫಾಯಿಡ್ ವಸಿ ನಾ? ಗಮನ ಇರಲಿ ಆರೋಗ್ಯದ ಮೇಲೆ.
ಇನ್ನು ಗುಬ್ಬಚ್ಚಿ ಗೂಡು, ನಮ್ಮ ಬ್ಲಾಗು ನಿಜ.
ಬೇರೇನೂ ಹೇಳೋಕ್ಕೆ ಗೊತ್ತಾಗ್ತಾ ಇಲ್ಲ.
ಕಟ್ಟೆ ಶಂಕ್ರ
ಸುಶ್ರುತ,
ದೊಡ್ಡ ಸಂದೇಶವನ್ನು ಕೊಟ್ಟಿರುವಿರಿ. ನಿಮ್ಮ ಹಾರೈಕೆಯಂತೆ ನಮ್ಮ ಬ್ಲಾಗರುಗಳ ತಾಣವು ಚಿಲಿಪಿಲಿಗುಟ್ಟುವ ಗುಬ್ಬಿಯ ಗೂಡಾಗಲಿ.
ನೀವು ಬೇಗನೇ fully recover ಆಗಿ blogger duty ಮೇಲೆ ಹಾಜರಾಗುತ್ತೀರಿ ಎಂದು ಹಾರೈಸುತ್ತೇನೆ.
ಮೂರು ವರ್ಷ ಪೂರೈಸಿದ್ದಕ್ಕೆ ನಿಮಗೆ ಶುಭಾಶಯಗಳು.
ಸುಶ್ರುತ,
ಮೊದಲಿಗೆ ನಿನಗೆ ಹಾಗೂ ನಿನ್ನ ಬ್ಲಾಗ್ ಗುಬ್ಬಚ್ಚಿಗೆ ಹಾರ್ದಿಕ ಶುಭಾಶಯಗಳು. ನಾನು ಮಾನಸವನ್ನು ಶುರುಮಾಡಿದಾಗ ಬಹುವಾಗಿ ಮೆಚ್ಚಿಕೊಂಡಿದ್ದ ಕೆಲವೇ ಕೆಲವು ಬ್ಲಾಗ್ಗಳಲ್ಲಿ ಮೌನಗಾಳವೂ ಒಂದಾಗಿತ್ತು. (ಕೇವಲ ಮಾತಿಗಾಗಿ ಹೇಳುತ್ತಿಲ್ಲ. ಇದು ಸತ್ಯ.) ಮೌನವಾಗಿ ಅದೆಷ್ಟೋ ಓದುಗರಿಗೆ ಗಾಳಹಾಕುತ್ತಾ ೬೦,೦೦೦ಕ್ಕೆ ಲಗ್ಗೆ ಇಡುತ್ತಿರುವ ನಿನ್ನ ಬ್ಲಾಗ್ ಮರಿಗೆ ಶುಭವಾಗಲೆಂದು ಹಾರೈಸುವೆ.
ಬ್ಲಾಗ್ಗಳ ಪ್ರತಿ ನೀನು ತೋರುತ್ತಿರುವ ಆರೋಗ್ಯಕರ ಕಾಳಜಿ ಮೆಚ್ಚತಕ್ಕದ್ದೇ. ಅದೇ ರೀತಿ ನಿನ್ನ ಆರೋಗ್ಯದ ಕುರಿತೂ ಕಾಳಜಿ ಇರಲಿ. ಆದಷ್ಟು ಬೇಗ ಗುಣಮುಖನಾಗಿ ಮತ್ತಷ್ಟು ಸುಂದರ ಬರಹಗಳ ಸುರಿಮಳೆ ನಿನ್ನ ಬ್ಲಾಗ್ನಲ್ಲಿ ಕಾಣುವಂತಾಗಲಿ:-)
ಪ್ರೀತಿಯಿಂದ,
ತೇಜಕ್ಕ.
ಮೌನಗಾಳಕ್ಕೆ ಹುಟ್ಟುಹಬ್ಬದ ಶುಭಾಷಯಗಳು.ಬಿಟ್ಟೇನೆಂದರೂ ಬಿಡದೀ ಮಾಯೆ!
ಐ ಲವ್ ಬ್ಲಾಗಿ೦ಗ್.
Shush, Cool.. :-)
Wish you a speedy recovery... Yappy Yappy B'day to ur lovely blog :)
ಪೋಸ್ಟ್ ನ ಪ್ರಥಮಾರ್ಧದಲ್ಲಿ ಆರೋಗ್ಯ ಕೆಡಿಸಿಕೊಂಡಿದ್ದೀಯಾ ದ್ವಿತೀಯಾರ್ಧದಲ್ಲಿ ತಲೆ ಕೆಡಿಸಿಕೊಂಡಿದ್ದೀಯ!
Sush,
ಶುಭಾಶಯಗಳನ್ನ ಹೇಳಲೇ ಬೇಕು ನಾನು.
ಕಾರಣ,ಕನ್ನಡ ಬ್ಲಾಗಿಂಗ್ ಮೇಲೆ ನನಗೆ ಆಸಕ್ತಿ, ಪ್ರೀತಿ ಹುಟ್ಟಿಸಿದ್ದು ನಿನ್ನಂತಹ ಮೊದಲನೇ ತಲೆಮಾರಿನ ಬ್ಲಾಗರುಗಳು ಮತ್ತು ನಿಮ್ಮ ಚಂದ ಚಂದದ ಬರಹಗಳು.
ಮೂರಲ್ಲ, ಮೂವತ್ತು ವರುಷದವರೆಗೂ ಮುಂದುವರೆಯಲಿ..
Happy blogging..
al d best..
ಬರಹ ಚೆನ್ನಾಗಿದೆ - ಮೊದ್ಲು ಹುಷಾರಾಗೋದು ನೋಡಿ :) ಬರೆಯೋದು ಓದೋದು ಇದ್ದಿದ್ದೇ!
(ಹುಷಾರು ಅಂದ್ರೆ ನಿಮ್ಕಡೆ ಹುಷಾರಲ್ಲ, ನಮ್ಕಡೇದು)
ಪುಟ್ಟಣ್ಣಾ...
ಬ್ಲಾಗಿನ ಮೂರನೇ ವರ್ಷದ ಹುಟ್ಟುಹಬ್ಬಕ್ಕೆ ಶುಭಾಶಯ.
ಬ್ಲಾಗುಗಳಲ್ಲಿ ಕಥೆ ಕವನಗಳನ್ನು ಬರೆಯುತ್ತ, ಕಥೆ ಕವನಗಳನ್ನು ಬರೆದ ಬ್ಲಾಗುಗಳನ್ನು ಹೆಚ್ಚು ಇಷ್ಟಪಡುವ ನನ್ನಂಥವರೂ ‘ಬಿಟ್ಟೇನೆಂದರೂ ಬಿಡಲಾಗದ ಈ ಮಾಯೆಯೊಳಗೆ’ ಸಿಲುಕಿಕೊಂಡೇ ಇದ್ದೇವೆ. ನಿನ್ನೀ ಬರಹದೊಳಗಿನ ಕಾಳಜಿ, ಆಶಯಗಳೆರಡೂ ಇಷ್ಟವಾದವು.
ಎಷ್ಟೆಲ್ಲ ಪ್ರೋತ್ಸಾಹ ದೊರೆಯುತ್ತಿದ್ದರೂ ನಾನು ಬರೆದದ್ದರಲ್ಲಿ ನಿಜವಾಗಿಯೂ ಜನ ಇಷ್ಟಪಟ್ಟ/ಪಡುವಂತಿರುವ ಬರಹ ಯಾವುದು ಎಂಬ ಸತ್ಯ ಗೊತ್ತಾಗಲೇ ಇಲ್ಲ. ಸುಮ್ಮನೆ ಗೀಚುತ್ತಲೇ ಇದ್ದೇನೆ.
ನೀ ಬೇಗನೆ ಹುಷಾರಾಗು.
ಬೇಗ ಹುಶಾರಾಗು :)
ಮತ್ತದೇ ಸುಶ್ರುತ, ಅದು ಹೇಗೋ !
ಏನೇ ಬರೆದ್ರೂ ಅದ್ರಲ್ಲಿ ಆತ್ಮೀಯತೆ ಇರುತ್ತೆ !
ಮತ್ತೆ ಓದಬೇಕು, ಹೀಗೇ ಮಾಡಬೇಕು ಅನ್ನೋ ಭಾವನೆ ಬರುತ್ತೆ :)
awesome... i'd once read that "writing is turning one's worst moments in to best words". i can see that happening here..
good boy ! congrats.
ಸುಶ್ರುತ,
ಇಲ್ಲಿ ಪುನಹ ಕಂಗ್ರಾಟ್ಸ್! ಬರಹದ ಎರಡನೆ ಭಾಗ ಬ್ಲಾಗ್ ಲೋಕದ ಬಗ್ಗೆ ಬಹಳ ಒಳ್ಳೆಯ ಕಮೆಂಟರಿ. ಸಂದೀಪ್ ಬರೆದದ್ದು ಓದಿ ನಗು ಬಂತು. ಏನೆ ಇರಲಿ ಸುಶ್ರುತ, ಕನ್ನಡದ ಬ್ಲಾಗುಗಳ ಪೈಕಿ ನಾನು ಇಷ್ಟಪಡುವ ಬ್ಲಾಗುಗಳಲ್ಲಿ ನಿಮ್ಮದೂ ಒಂದು. ಆಮೇಲೆ ಅದೇನೊ ಸಿಹಿಸುದ್ದಿ ಕೊಡುತ್ತೀನಿ ಅಂತ ನಮ್ಮನ್ನೆಲ್ಲ ಕಾಯುವಹಾಗೆ ಮಾಡಿದಿರಿ. ಹೋಗಲಿ, ಬ್ಲಾಗಿಗೆ ಐದು ವರುಷ ತುಂಬಿದಾಗಾದರು ನಮಗೆ ಸಿಹಿ ಹಂಚುತ್ತೀರ?
-ಟೀನಾ.
Sushruta,
Hope you are feeling better now. Health first, all else next. Take care.
Affectionately,
Meena
ಸುಶ್ರುತ,
ಕಂಗ್ರಾಟ್ಸ್...!!!
ಆರೋಗ್ಯದ ಕಡೆಗೆ ಗಮನವಿರಲಿ, ಊರು ಬಿಟ್ಟು ಬಂದವರು ಕಾಯಿಲೆ ಬಿದ್ದರೆ ಅದಕ್ಕಿಂತ ದೊಡ್ಡ ಕಷ್ಟ ಯಾವುದು ಅಲ್ಲ.
ಇನ್ನು ಹೆಚ್ಚು ಹೆಚ್ಚು ಬರಹಗಳು ನಿಮ್ಮಿಂದ ಬರಲಿ.
-ಶೆಟ್ಟರು
ಅಂತೂ ಮೂರು ವರ್ಷ ಆಗೋಯ್ತೇನಪ್ಪ? ವೆಟೆರನ್ ಬ್ಲಾಗರ್ರು ನೀನು. ಸಂತೋಷ.
ಅಲ್ಲ, ಬ್ಲಾಗುಗಳಲ್ಲಿ ಕಚ್ಚಾಟಗಳು ಬೇಡವೆಂದು ಹೇಳಿದ್ದೀಯೆ. ಇದುವರೆಗೂ ನಿನ್ನ ಹಾಗೂ ಶ್ರೀನಿಧಿಯ ಬಾಯಿಂದ ಕೇಳಿದ್ದೇನೇ ಹೊರೆತು ಪ್ರತ್ಯಕ್ಷ ಈ ಕಚ್ಚಾಟಗಳ ಕಡೆ ಕಣ್ಣು ಸಹ ಹಾಯಿಸಿಲ್ಲ ನಾನು. ನಾನೇ ಧನ್ಯ ನೋಡು.
ಮುಂದಿನ ವರ್ಷದ ನಿನ್ನ ಬ್ಲಾಗ್ ಹುಟ್ಟುಹಬ್ಬಕ್ಕೆ ಇನ್ನೊಂದಷ್ಟು ವಿಷಯ ಹೇಳ್ತೀನಿ. ಈಗಲೇ ಎಲ್ಲ ಹೇಳೋದಿಲ್ಲ.
ವಿ.ಸೂ. ಬ್ಲಾಗಲ್ಲಿ ಕಂಪ್ಯೂಟರ್ ಪರದೆಯ ಮೇಲೆ ಓದೋಕಿಂತ ನಿನ್ನ 'ಹೊಳೆಬಾಗಿಲು' ಹೆಚ್ಚು ಮುದ ನೀಡಿತು. ಕಾಲ ಬಂದಾಗ ಒಂದು 'ವಿಮರ್ಶೆ' ಬರೆದೇನು.
ಸುಶ್ರುತ,
ಬ್ಲಾಗ್ ಹುಟ್ಟುಹಬ್ಬದ ಶುಭಾಶಯಗಳು.
ಇನ್ನೂ ಬರೀತಾ ಇರಿ. ಬೇಗನೇ ಗುಣಮುಖವಾಗಿ.
ಕಂಗ್ರಾಟ್ಸ್..!
"ಬಿಟ್ಟರೂ ಬಿಡೆನೆಂದರೂ.." ಆಗಾಗ ಬಿಡುತ್ತ ಮತ್ತೆ ಸೇರಿಕೊಳ್ಳುತ್ತ ಇರೋರೇ ಎಲ್ಲರೂ. ಈಗ ನೀವು ಸೀನಿಯರ್ರು..:)
bega hushaaraagi.
blog ge 3 varsha pooraisiddakke shubhaashayagaLu.
pramod
ಆಹಾ! ಚಂದ ಫೋಟೋ ಹಾಕಿದ್ಯಲೋ ತಲೆಪಟ್ಟಿಗೆ:)
ಶುಭಾಶಯ, ಮೂರು ವರ್ಷ ಕೂಡಿಸಿದ್ದಕ್ಕೆ! ತೀರಾ ಹೊಗ್ಳಲ್ ಸಮಾ ಆಗ್ತಲ್ಯಾ:)
ಸುಶ್, ಮತ್ತೆ ಹಕ್ಕಿ ಹಾಡಲಿಕ್ಕೆ ಶುರುವಾ ಹಂಗಾದ್ರೆ? :-) ತುಂಬಾ ದಿನದಿಂದ ಹಕ್ಕಿ ಗೂಡು ಖಾಲಿ ಬಿದ್ದಿದ್ದು ನೋಡಿ ಕೇಳದೋ ಬೇಡ್ವೋ ಅಂದ್ಕೋತಿದ್ದೆ... ಹ್ಯಾಪಿ ಬರ್ತ್-ಡೇ, ನಿನ್ನ ಬ್ಲಾಗಿಗೆ, ಮತ್ತೆ ನಿಂಗೆ ಕೂಡಾ! :-)
ಒಂದು ಅನಾರೋಗ್ಯದಿಂದ ಚೇತರಿಸಿಕೊಂಡು ಎದ್ದಾಗ ಮನಸ್ಸು ಹೊಸತನ ಪಡೆದಿರುತ್ತದೆ, ಮಲಗಿದ್ದಾಗ ಮಾಡಿಕೊಳ್ಳುವ introspection ಪರಿಣಾಮವದು. ಇದೀಗ ನೀನು ಚೇತರಿಕೊಂಡು ಹೊಸ ಹುಮ್ಮಸ್ಸುನಿಂದ ಬ್ಲಾಗ್ ಪೋಸ್ಟ್ ಮಾಡಿರುವುದು ಅದರ ಹೊಸ ರೂಪದಲ್ಲಿ, ಹೊಸ ಅರ್ಥವತ್ತಾದ ಸುಂದರ ಚಿತ್ರದಲ್ಲಿ ಕಾಣುತ್ತವೆ.
ನಿನ್ನ ಬ್ಲಾಗ್ ಮರಿಗೆ ಮೂರುವರ್ಷವಾದ ಖುಷಿಯಲ್ಲಿ ನನ್ನ ಗುಬ್ಬಚ್ಚಿ ಗೂಡಿನಿಂದೆರಡು ಚಿಲಿಪಿಲಿ.
neevu mounavaage nammannella selediri...aarogya kapadikolli..aduve bhaagya bengaloorinalli..nimma blog tumbaane chennagi kangolisuttide..Wonderfull..!
fantastic write up..gubbachchi matthu typhaid jwara link maadida shyli amoghaa....take care...
ನೀನು ಇಲ್ಲಿ ವಿಷ್ ಮಾಡಿರುವ ಯಾರಿಗೂ ಥ್ಯಾಂಕ್ಸ್ ಹೇಳದೇ ಇರುವುದನ್ನು ನಾನು ಘೋರಾತಿಘೋರವಾಗಿ, ತೀವ್ರಾತಿತೀವ್ರವಾಗಿ, ಇನ್ನೇನೇನು ಅತಿ ಇದೆಯೋ ಅವೆಲ್ಲವೂ ಆಗಿ ಖಂಡಿಸುತ್ತಿದ್ದೇನೆ.
ಪ್ರೀತಿಯ ಶುಶ್ರುತಣ್ಣ...
ನಿನ್ನ ಬ್ಲಾಗಿಗೆ ನನ್ನ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು.
ಹುಟ್ಟುಹಬ್ಬವನ್ನು ಆಚರಿಸುವುದರ ಜೊತೆಗೆ ಒಳ್ಳೆಯ ಸಂದೇಶ ನೀಡಿದ್ದೀಯಾ..ಓದಿ ನಾನೂ ಖುಷಿಗೊಂಡೆ.
ಈ ಗುಬ್ಬಚ್ಚಿ ಗೂಡಲ್ಲಿ ನಾವೆಲ್ಲ ಪ್ರೀತಿಯಿಂದ ಸ್ನೇಹದ ಕಲರವಗುಟ್ಟೋಣ..ನಮ್ಮೋಳಗಿನ ಸುಪ್ರಪ್ರತಿಣಭೆಗಳಿಗೆ ಬ್ಲಾಗನ್ನು ವೇದಿಕೆಯಾಗಿಸೋಣ ಅಲ್ವೇ?
ಜ್ವರ ಬೇಗ ವಾಸಿಯಾಗಲೀ..ಆಮೇಲೆ..?
ಅಣ್ಣಯ್ಯ..ನಂಗೆ ಐಸ್ ಕ್ರೀಂ ಪಾರ್ಟಿ ಯಾವಾಗ?
-ಧರಿತ್ರಿ
Hi Shushrutha cheangi Bardidiyapa..
Good Luck..Idu Sachin...Nanna Ajji ooru Dodderi...Nenapideya??????
ಶುಭಾಶಯ ಹೇಳಿದ ಎಲ್ಲರಿಗೂ ತುಂಬಾ ತುಂಬಾ ಥ್ಯಾಂಕ್ಸ್! ಆರೋಗ್ಯ ಸರಿಯಾಗಿದೆ. ಮೀಸೆ ಚಿಗುರಿದೆ. ಸೆಖೆಯಲ್ಲಿ ಬೆವರ್ತಿದೀನಿ. ಕರಗಿ ಹೋಗ್ದೇ ಇರ್ಲಿಕ್ಕೆ ಪ್ರಯತ್ನಿಸ್ತಿದೀನಿ. ಬೇಗ ಮಳೆ ಬರಲಪ್ಪಾ ಅಂತ ಪರ್ಜನ್ಯ ಮಂತ್ರ ಪಠಿಸ್ತಾ ಇದೀನಿ. ಬಿಡದ ಮಾಯೆಯೊಳಗೆ ಸಿಲುಕಿಯೂ ಸಿಲಕದ ಹಾಗೆ ಇರಬೇಕೆಂದಿದ್ದೇನೆ. ನಿಮ್ಮ ಪ್ರೀತಿ ಹೀಗೇ ಇರಲಿ. :-)
@ಸಂದೀಪ್,
thats a wise comment dude!
ಟೀನಾ,
ಸ್ವೀಟ್ ತಾನೇ? ಹಂಚೋಣಂತೆ ಬಿಡಿ!
ಅರುಣ್,
ಇನ್ನೂ ಸುಮಾರೆಲ್ಲ ಅತಿ ಇದ್ವು.. .. ;)
ಧರಿತ್ರಿ,
ಆಯ್ತು ಮಾರಾಯ್ತಿ.. ಕೊಡಿಸ್ತೀನಿ ಐಚ್ರೀಮು..
ಹಾಯ್ ಸಚಿನ್... ಎಲ್ಲಿದ್ಯೋ? ಐಡಿ-ಗೀಯ್ಡಿ ಕೊಡಪ್ಪ.. ಖುಶಿಯಾತು ನೀ ಪ್ರತ್ಯಕ್ಷ ಆಗಿದ್ದು ಹೀಗೆ ಇಲ್ಲಿ.. :-)
nimma mouna galakke nanna namaskaragalu
modalane saari oodhide nimma blogannu thumba ista ayithu
be lated happy birth day..
ನಿನ್ನ ಬರಹಗಳು ಯಾವತ್ತು ಚಂದ. ಒಳೆದಾಗಲಿ.
ಹಿಂಗೆ ಬರಿತಾ ಇರು.
ಹ್ಮ್!, ಪ್ರೇಮ-ಜ್ವರ ಇರಬಹುದು. ಸುಮಾರಿನ ಜ್ವರವೆಲ್ಲ ೨-೩ ದಿನಗಳೊಳಗೆ ಹೋಗಿಬಿಡುತ್ತವೆ, ಆದರೆ ಈ ಜಾತಿಯ ಜ್ವರ ಮಾತ್ರ, ಒಮ್ಮೆ ಬಂದ ಮೇಲೆ ಹೋಗುವುದು ಕಷ್ಟ. ಯಾವುದುಕ್ಕು ನೀನು ಸ್ವಲ್ಪ ಆವೇಗ ಕಡಿಮೆ ಮಾಡಿಕೊ.-D.M.Sagar (Original, not Vikas hegade's version!LOL)
ಮೌನಗಾಳದ ಪ್ರಶಾಂತ ಘರ್ಜನೆಗೆ ಮೂರು ವರ್ಷ ತುಂಬಿ ಹೋಯಿತಾ? ಹುಟ್ಟುಹಬ್ಬದ ಶುಭಾಶಯಗಳು...ತಡವಾಗಿ ನೋಡಿದೆ...ಈಗ ಆರೋಗ್ಯ, ತಲೆ(ಕೃಪೆ-ಸಂದೀಪ್ ಕಾಮತ್!)ಎರಡು ಸರಿಯಾಗಿದೆ ಅಂದುಕೊಳ್ಳುತ್ತೇನೆ...ಬ್ಲಾಗ್ ಲೋಕದ ಕುರಿತಾಗಿ ನಿನ್ನ ಆಶಯ ಈಡೇರಲಿ...
ವಿನಾಯಕ ಕೋಡ್ಸರ
"ಇಲ್ಲಿ ಕಚ್ಚಾಟಗಳು ಬೇಡ" .... ಸಮಾಧಾನವಾಗಿ ಯೋಚಿಸಿ ಬರೆದಿದ್ದೀರ. ಆದರೆ ಕೆಲವರು ದುಡುಕಿ ಇನ್ನೊಬ್ಬರ ಮೇಲೆ ಅಪಾದನೆ ಮಾಡಿ ... ಇನ್ನೊಬ್ಬರ ಬರೆಯುವ ಉತ್ಸಾಹವನ್ನೇ ಕಡಿಮೆ ಮಾಡಿದ ನಿರ್ದಶನಗಳು ಇವೆ.
- ನೊಂದವ
belated wishes!(naanu endinante nidde hoDeetidde ishT dina!) blogging bagge bardirOdu bahaLa hiDstu:)
ತುಂಬಾ ಚೆಂದ ಇತ್ತು ಓದುವುದಕ್ಕೆ..
ಗುಬ್ಬಚ್ಚಿಗಳ ಕಲರವ ನನ್ನ ಮನಕ್ಕೂ ತಟ್ಟಿದೆ..
ನನ್ನ ಮನಸಿನ ಭಾವನೆಗಳನ್ನು ನನ್ನ ಬ್ಲಾಗಿನಲ್ಲಿ ಹರಿದುಬಿಟ್ಟೆದ್ದೇನೆ..
ದಯಮಾಡಿ ನಿಮ್ಮ ಮನದಾಳದ ಕಲರವ ನಮೂದಿಸಿದರೆ ಚಿಕ್ಕವ ನಾನು ತಿದ್ದುಕೊಳ್ಳಲು ಸಹಕಾರಿಯಾಗುತ್ತದೆ..
Post a Comment