ಮೌಸ್ ಅಲ್ಲಾಡಿಸಿದರೆ ಸಾಕು, ಇದೆಲ್ಲ ತನ್ನದೇ ಎಂಬಂತೆ ಕಂಪ್ಯೂಟರ್ ಸ್ಕ್ರೀನಿನ ತುಂಬ ಓಡಾಡುವ ಈ ಬಿಳೀ ಹೊಟ್ಟೆಯ ಕಪ್ಪು ಅಲಗುಗಳ ಪುಟ್ಟ ಬಾಣವನ್ನು ಸ್ಕ್ರೀನಿನ ಕೆಳಾಗಡೆ ಬಲಮೂಲೆಗೆ ಒಯ್ದು ಒಂದು ಕ್ಷಣ ಬಿಟ್ಟರೆ ಪುಟ್ಟ ಅಸಿಸ್ಟೆಂಟ್ ಬಾಕ್ಸೊಂದು ಮೂಡಿ Tuesday, June 30, 2009 ಎಂದು ತೋರಿಸುತ್ತಿದೆ ಮುದ್ದಾಗಿ. ಅಂದರೆ ಜುಲೈ ತಿಂಗಳು ಬರಲಿಕ್ಕೆ ಇನ್ನು ಕೇವಲ ಒಂದು ದಿವಸ ಬಾಕಿ.
ನಾನು ಕಳೆದ ತಿಂಗಳ 26ನೇ ತಾರೀಖಿನ ಬೆಳಗ್ಗೆ ಎದ್ದು ಮುಂಬಾಗಿಲು ತೆರೆದಾಗ 'ಈ ವರ್ಷ ಮಳೆ ಜಾಸ್ತಿ. ಮೇ 28ರಿಂದಲೇ ಮಾನ್ಸೂನ್ ಶುರುವಾಗಲಿದೆ. ಆಗಲೇ ಕೇರಳಕ್ಕೆ ಬಂದಿದೆ' ಅಂತೆಲ್ಲ ದೊಡ್ಡಕ್ಷರಗಳಲ್ಲಿ ಬರೆದುಕೊಂಡಿದ್ದ ನ್ಯೂಸ್‍ಪೇಪರು ಬಾಗಿಲಲ್ಲಿ ಬಿದ್ದಿತ್ತು. ನನಗೆ ಖುಶಿಯಾಯಿತು. ದೇಶದಲ್ಲಿ ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂದರೆ ಯಾರಿಗೆ ತಾನೆ ಸಂತಸವಾಗುವುದಿಲ್ಲ? ನಾನು ತಕ್ಷಣವೇ ಮನೆಗೆ ಫೋನ್ ಮಾಡಿ ಅಪ್ಪನ ಬಳಿ 'ಅಮ್ಮನ ಹತ್ರ ಸೌತೆ ಬೀಜ ಎಲ್ಲ ರೆಡಿ ಮಾಡಿ ಇಟ್ಕಳಕ್ಕೆ ಹೇಳು, ಇನ್ನು ಎರಡು ದಿನದಲ್ಲಿ ಮಳೆಗಾಲ ಶುರು ಆಗ್ತಡ. ಹವಾಮಾನ ತಜ್ಞರು ಹೇಳಿಕೆ ಕೊಟ್ಟಿದ ಪೇಪರಲ್ಲಿ. ಕಟ್ಟಿಗೆ ಎಲ್ಲಾ ಸೇರುವೆ ಆಯ್ದಾ ಹೆಂಗೆ? ಹಿತ್ಲಿನ ಬೇಲಿ ಗಟ್ಟಿ ಮಾಡ್ಸಿ ಆತಾ?' ಅಂತೆಲ್ಲ ಕೇಳಿದೆ. ಬೆಳಬೆಳಗ್ಗೆ ಫೋನ್ ಮಾಡಿ ಮನೆಯ ಬಗ್ಗೆ ಕಾಳಜಿ ತೋರಿಸುತ್ತಿರುವ ಮಗನ ಬಗ್ಗೆ ಅಭಿಮಾನ ಬಂದು ಅಪ್ಪ 'ಮಗನೇ, ನಮಗೂ ಗೊತ್ತಾಯ್ದು ವಿಷಯ. ಟಿವಿ9 ಬ್ರೇಕಿಂಗ್ ನ್ಯೂಸಲ್ಲಿ ನಿನ್ನೇನೆ ತೋರ್ಸಿದ್ದ. ನೀನೇನು ತಲೆಬಿಸಿ ಮಾಡ್‍ಕ್ಯಳಡ. ನಾವು ಮಳೆಗಾಲಕ್ಕೆ ರೆಡಿ ಆಯಿದ್ಯ' ಎಂದ. ನಾನು ರೂಮಿನಲ್ಲಿ ಟಿವಿ ಇಟ್ಟುಕೊಂಡಿಲ್ಲವಾದ್ದರಿಂದ ಟಿವಿ9ಅಲ್ಲಿ ನಿನ್ನೆಯೇ ತೋರಿಸಿರುವುದು ನನಗೆ ಗೊತ್ತಿರಲಿಲ್ಲ. ಅಪ್ಪ ನನಗಿಂತ ಫಾಸ್ಟ್ ಆಗಿರುವುದು ಗೊತ್ತಾಗಿ ಬೆಪ್ಪಾದೆ. ಮುಂದುವರೆದಿರುವ ತಂತ್ರಜ್ಞಾನ, ಶ್ರೀಘ್ರ ಮತ್ತು ವೇಗದ ಮಾಹಿತಿ ಸಂವಹನ, ಮುಂಬರುವ ಮಳೆಯನ್ನು ಇಂದೇ-ಈಗಲೇ ಹೇಳುವ ವಿಜ್ಞಾನಿಗಳ ಚಾಕಚಕ್ಯತೆ ಎಲ್ಲವೂ ಆ ಬೆಳಗಿನ ಜಾವದಲ್ಲಿ ನನಗೆ ಆಪ್ಯಾಯಮಾನವಾಗಿ ಕಂಡಿತು.
ಹವಾಮಾನ ತಜ್ಞರು ಹೇಳಿದಂತೆ ಅಂದು ಸಂಜೆಯೇ ಬೆಂಗಳೂರಿಗೆ ಮೋಡಗಳ ಆಗಮನವಾಯಿತು. ರಾತ್ರಿ ಹೊತ್ತಿಗೆ ಅವೆಲ್ಲಾ ಧಡಬಡಾಂತ ಗುಡುಗು-ಸಿಡಿಲುಗಳಾಗಿ ಶಬ್ದ ಮಾಡುತ್ತಾ ಧೋ ಮಳೆ ಸುರಿಸತೊಡಗಿದವು. ಬೆಂಗಳೂರಿನ ರಸ್ತೆಗಳ ಮೇಲೆ ಬಿದ್ದ ಮಳೆನೀರು, ಪಕ್ಕಕ್ಕೆ ಹರಿದು ಇಂಗೋಣವೆಂದರೆ ಬರೀ ಕಾಂಕ್ರೀಟು-ಚಪ್ಪಡಿ ಹಾಸಿಕೊಂಡ ಫುಟ್‌ಪಾತೇ ಇದ್ದು ಎಲ್ಲೂ ಮಣ್ಣುನೆಲ ಕಾಣದೆ, ಹಾಗೇ ಟಾರ್ ರಸ್ತೆಯ ಮೇಲೆ ಸುಮಾರು ಹೊತ್ತು ಹರಿದು, ತಗ್ಗಿದ್ದಲ್ಲೆಲ್ಲ ನಿಂತು ಯೋಚಿಸಿತು. ಕೊನೆಗೆ ಬೇರೆ ದಾರಿ ಕಾಣದೆ, ಮೋರಿಗೆ ಹಾರಿ ಕೊಳಚೆ ನೀರಿನೊಂದಿಗೆ ಬೆರೆತು ಸಾಗರಮುಖಿಯಾಗುವುದೇ ತನಗುಳಿದಿರುವ ಮಾರ್ಗ ಎಂದದು ತೀರ್ಮಾನಿಸಿತು. ಪುಣ್ಯಕ್ಕೆ ಅದಕ್ಕೆ ಸುಮಾರೆಲ್ಲ ತೆರೆದ ಪಾಟ್‌ಹೋಲುಗಳು ಸಿಕ್ಕಿದ್ದರಿಂದ, ಬೇಗ ಬೇಗನೆ ಮೋರಿ ಸೇರಲಿಕ್ಕೆ ಅನುಕೂಲವಾಯಿತು. ಮೋರಿ ಸೇರುವ ರಭಸದಲ್ಲಿ ಅದು ಮನುಷ್ಯರನ್ನೂ, ಪ್ರಾಣಿಗಳನ್ನೂ, ಸಾಮಾನು-ಸರಂಜಾಮುಗಳನ್ನೂ ಜತೆಗೆ ಸೇರಿಸಿಕೊಂಡಿತು.
ಆಮೇಲೆ ಅಪ್ಪ ಫೋನ್ ಮಾಡಿದಾಗ 'ಬೆಂಗಳೂರಲ್ಲಿ ಭಾರೀ ಮಳೆಯಂತೆ. ಟಿವಿ9ಅಲ್ಲಿ ತೋರಿಸ್ತಿದ್ದ. ಒಬ್ಬ ಹುಡುಗ ಕೊಚ್ಚಿಕೊಂಡು ಹೋಯ್‍ದ್ನಡ. ನೀನು ಓಡಾಡಕ್ಕರೆ ಹುಷಾರಿ' ಅಂತೆಲ್ಲ ಎಚ್ಚರಿಸಿದ. ಬೆಂಗಳೂರಿನಲ್ಲಿ ಹುಷಾರಾಗಿರಬೇಕು ಎಂಬುದು ನನಗೂ ಗೊತ್ತಿತ್ತು. ನಿನ್ನೆಯಷ್ಟೇ ನನ್ನ ಫ್ರೆಂಡು ಅಲ್ಲೆಲ್ಲೋ ಬೈಕು ನಿಲ್ಲಿಸಿದ್ದಾಗ ಮರದ ಕೊಂಬೆ ಮುರಿದುಕೊಂಡು ಬಿದ್ದು, ಪಾಪ ಬೈಕಿನ ಮುಂಭಾಗ ಫಡ್ಚ ಆಗಿ ಹೋಗಿತ್ತಂತೆ. 'ಈಗಷ್ಟೇ ಗ್ಯಾರೇಜಲ್ಲಿ ಬಿಟ್ಟು ಬಂದೆ ಮಾರಾಯಾ. ಐದಾರು ಸಾವಿರ ಖರ್ಚು ಇದೆ ಅಂದ್ರು. ಇನ್ಷೂರೆನ್ಸ್ ಕ್ಲೇಮ್ ಮಾಡ್ಲಿಕ್ಕೆ ಆಗತ್ತಾ ನೋಡ್ಬೇಕು' ಅಂತ ಹೇಳ್ತಿದ್ದ. ನಾವು ಎಷ್ಟೇ ಹುಷಾರಾಗಿದ್ದರೂ ಹೀಗೆಲ್ಲ ತಲೆ ಮೇಲೆ ಮುರಕೊಂಡು ಬೀಳುವ ಕೊಂಬೆಗಳಿಂದ ತಪ್ಪಿಸಿಕೊಳ್ಳಲಿಕ್ಕೆ ಆಗುತ್ತಾ? ಮೇಲೆ ನೋಡುತ್ತ ನಡೆದರೆ ಚರಂಡಿಗೆ ಬೀಳ್ತೀವಿ ಅಥವಾ ಯಾವುದಾದರೂ ಆಂಟಿಗೆ ಡಿಕ್ಕಿ ಹೊಡೆದು ಕಪಾಳಮೋಕ್ಷಕ್ಕೆ ಗುರಿಯಾಗುತ್ತೀವಿ. ಇದನ್ನೆಲ್ಲ ಹೇಳಿದರೆ ಅಪ್ಪ ಇನ್ನಷ್ಟು ಗಾಭರಿಯಾದಾನು ಅಂತ ಸುಮ್ಮನಾದೆ. ಬೆಳೆದ ಮಗ ಯಾರೋ ಅಪರಿಚಿತ ಹೆಂಗಸಿಂದ ಸಾರ್ವಜನಿಕರ ಎದುರು ಕೆನ್ನೆ ಏಟು ತಿನ್ನುವುದನ್ನು ಯಾವ ತಂದೆಯೂ ಸಹಿಸಿಕೊಳ್ಳಲಾರ.
ನಾಲ್ಕಾರು ದಿನ ಹೊಡೆದ ಮಳೆ ಆಮೇಲೆ ವಾಪಸು ಹೋಗಿಬಿಟ್ಟಿತು. ಕೊನೆಗೆ ಗೊತ್ತಾಯಿತು, ಅದು ಬಂದಿದ್ದು ಮುಂಗಾರೇ ಅಲ್ಲ; ಕಳೆದ ವರ್ಷದ ಹಳೇಮೋಡಗಳ ಪೆಂಡಿಂಗ್ ಮಳೆ ಅಥವಾ ಅಲ್ಲೆಲ್ಲೋ ಸಾಗರದಲ್ಲೆದ್ದ ಚಂಡಮಾರುತದ ಪರಿಣಾಮ ಅಂತ. ಕಾರ್ಪೋರೇಶನ್ ಕೆಲಸಗಾರರು ಮೂರ್ನಾಲ್ಕು ದಿನ ಕೊಳಚೆಯನ್ನು ಶೋಧಿಸಿದರೂ ಕೊಚ್ಚಿ ಹೋಗಿದ್ದ ಹುಡುಗನ ಶವ ಸಿಗಲಿಲ್ಲ. ಆಮೇಲೆ ಬಂದ ದೇಶದ ಸೈನಿಕರಿಗೂ ಅಪಜಯವಾಯಿತು. ಅಪ್ಪ ಫೋನಿನಲ್ಲೂ, ಪತ್ರಕರ್ತರು ಪೇಪರಿನಲ್ಲೂ ನನಗೆ ಆಗಾಗ ಈ ಮಾಹಿತಿಗಳನ್ನು ಕೊಡುತ್ತಿದ್ದರು. ಅಂದು ಬೆಳಗ್ಗೆ ನನ್ನ ಕಲೀಗು 'ಸೆಕ್ಯೂರಿಟೀನೇ ಇಲ್ಲ ಕಣಯ್ಯಾ ಈ ಬೆಂಗಳೂರಲ್ಲಿ. ನೋಡು, ಇಷ್ಟೆಲ್ಲ ಅವ್ಯವಸ್ಥೆ ಆಗ್ತಿದೆ ಇಲ್ಲಿ. ಆದ್ರೆ ಸರ್ಕಾರ ಸ್ವಲ್ಪಾನಾದ್ರೂ ಸೀರಿಯಸ್ಸಾಗಿದೆಯಾ ಅಂತ? ಅವರವರಲ್ಲೇ ಕಿತ್ತಾಟ ಮಾಡಿಕೊಳ್ತಾ ಹೆಂಗೆ ನಾಚಿಕೆ ಇಲ್ಲದವರ ಥರ ಇದಾರೆ' ಅಂತ, ಟೈಮ್ಸಾಫಿಂಡಿಯಾದ ಪೇಜುಗಳನ್ನು ತಿರುಗಿಸುತ್ತಾ ಕೆಂಪು ಮುಖ ಮಾಡಿಕೊಂಡು ಉಗಿದ. ವರ್ಲ್ಡ್‌ಕಪ್ಪಿನಿಂದ ಹೊರಬಂದ ಭಾರತದ ಆಟಗಾರರೊಂದಿಗೇ ಮುಖ್ಯ ಪೇಪರಿನ ಪುಟಗಳೂ ಮುಗಿದು, ಕೊನೆಗೆ ಬ್ಯಾಂಗಲೂರ್ ಟೈಮ್ಸ್‌ನಲ್ಲಿನ ಒಂದಷ್ಟು ಚಿತ್ರಗಳನ್ನು ನೋಡಿದ ಮೇಲೆ ಅವನ ಮುಖ ಸ್ವಲ್ಪ ಪ್ರಶಾಂತವಾದಂತೆ ಕಂಡಿತು.
ಈ ಮಧ್ಯೆ, ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ವಿದ್ಯುತ್ ಕೊರತೆ ಆಗುವುದಿಲ್ಲ, ಮಳೆ ಇನ್ನೇನು ಶುರುವಾಗಲಿದೆ, ಈ ವರ್ಷ ಜಾಸ್ತಿಯೇ ಆಗಲಿರುವುದಾಗಿ ಹವಾಮಾನ ತಜ್ಞರು ಧೃಡಪಡಿಸಿರುವುದಾಗಿ ಇಂಧನ ಸಚಿವರು ಹೇಳಿಕೆ ಕೊಟ್ಟರು ಅಂತ ಗೊತ್ತಾಯಿತು. ಇಂಧನ ಸಚಿವರೇ ಹೇಳಿದ ಮೇಲೆ ಎಲ್ಲಾ ಸರಿಯಾಗುತ್ತೆ ಬಿಡು ಅಂತ ನಾನೂ ಸಮಾಧಾನ ಮಾಡಿಕೊಂಡೆ. ಅಪ್ಪ ಫೋನ್ ಮಾಡಿ ಊರ ಕಡೆ ಏನೇನೋ ಗಲಾಟಿಗಳೆಲ್ಲ ಆಗುತ್ತಿದೆ ಅಂತ ಹೇಳಿದ. ಊರಿನ ಮಹಿಳಾ ಮಂಡಳಿಗೆ ಸರ್ಕಾರದಿಂದ ಸ್ಯಾಂಕ್ಷನ್ ಆಗಿದ್ದ ಹಣವನ್ನು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಂದಿದ್ದು ಗೊತ್ತಾಗಿದೆಯಂತಲೂ, ಆತ ಕಾಂಗ್ರೆಸ್ ಪರ ಕಾರ್ಯಕರ್ತನಾದ್ದರಿಂದ, ಜನರೆಲ್ಲ ಸಭೆ ಸೇರಿ, ಸಧ್ಯದ ಬಿಜೆಪಿ ಸರ್ಕಾರದ ಸಹಾಯ ಪಡೆದು ಆತನಿಗೊಂದು ಗತಿ ಕಾಣಿಸಲಿಕ್ಕೆ ತೀರ್ಮಾನಿಸಿದ್ದಾರೆ ಅಂತ ಅಪ್ಪ ಹೇಳಿದ. 'ಇಲ್ಲಿನ ಪೇಪರ್ರಲ್ಲೆಲ್ಲಾ ಬರ್ತಾ ಇದೆ, ಟಿವಿ9ಅಲ್ಲೂ ಬಂದ್ರೂ ಬರಬಹುದು, ನೋಡು' ಅಂದ. ಛೇ, ಈ ನೆಪದಲ್ಲಾದರೂ ಟಿವಿಯಲ್ಲಿ ನಮ್ಮೂರನ್ನೆಲ್ಲ ನೋಡುವ ಅವಕಾಶ ಸಿಗುತ್ತಿತ್ತು, ನನ್ನ ರೂಮಿನಲ್ಲೂ ಟಿವಿ ಇರಬೇಕಿತ್ತು ಅಂತ ಅಲವತ್ತುಕೊಂಡೆ. ಕೊನೆಗೆ ಅಪ್ಪನೇ ದನಿ ತಗ್ಗಿಸಿ 'ಈ ಜನಕ್ಕೆ ಬೇರೆ ಕೆಲಸ ಇಲ್ಲೆ. ಅದಕ್ಕೇ ಸುಮ್ನೆ ಏನಾದ್ರೂ ತಕರಾರು ಎತ್ತತಾ ಇದ್ದ. ಮಳೇನಾದ್ರೂ ಶುರು ಆಗಿದ್ರೆ ಎಲ್ರೂ ಗದ್ದೆ-ತೋಟ ಅಂತ ಹೋಗಿ ಬ್ಯುಸಿ ಆಗ್ತಿದ್ದ' ಅಂದ. ನನಗೆ ಅದೂ ಸರಿ ಎನ್ನಿಸಿತು.
ನನ್ನ ರೂಂಮೇಟು ಅದ್ಯಾವುದೋ ವೆಬ್‌ಸೈಟು ಓಪನ್ ಮಾಡಿಕೊಂಡು 'ನೋಡು, ಇದರಲ್ಲಿ ವೆದರ್ ಫೋರ್‌ಕಾಸ್ಟ್ ತೋರಿಸ್ತಾರೆ. ಆಲ್‌ಮೋಸ್ಟ್ ಅಕ್ಯುರೇಟಾಗಿರತ್ತೆ' ಅಂತ ಹೇಳಿದ. ನಾನೂ ನೋಡಿದೆ. ವಿಶ್ವದ ಭೂಪಟದಂತಿದ್ದ ಚಿತ್ರದ ಮೇಲ್ಮೈಯಲ್ಲಿ ತೆರೆಗಳಂತೆ ಬೆಳ್ಳಬೆಳ್ಳಗೆ ಅಲ್ಲಲ್ಲಿ ಕಾಣುತ್ತಿತ್ತು. 'ಇವು ಮೋಡಗಳು. ನೋಡು, ಹೇಗೆ ನಿಧಾನಕ್ಕೆ ಮೂವ್ ಆಗ್ತಿವೆ ಅಂತ.. ಈಗ ಇಂಡಿಯಾದ ಹತ್ರಾನೇ ಬಂದಿದೆ ಅಲ್ವಾ? ಇನ್ನೇನು ನಾಲ್ಕು ದಿವಸದಲ್ಲಿ ಶುರು ಆಗಿಬಿಡತ್ತೆ ಮಾನ್ಸೂನು' ಅಂದ ರೂಂಮೇಟು. ನನಗೆ ಮತ್ತೆ ಖುಶಿಯಾಯಿತು. ಬಾನಲ್ಲಿ ಓಡೋ ಮೇಘದ ಚಲನೆಯನ್ನೂ ತೋರಿಸುವ ವಿಜ್ಞಾನಿಗಳ ಜಾಣ್ಮೆಯ ಬಗ್ಗೆ ಮನಸ್ಸಿನಲ್ಲಿಯೇ ಶ್ಲಾಘಿಸಿದೆ.
ಆದರೆ ಈಗ ಎರಡ್ಮೂರು ದಿನಗಳ ಪೇಪರಿನಲ್ಲಿನ ದೊಡ್ಡಕ್ಷರಗಳು ಬೇರೇನೋ ಹೇಳುತ್ತಿವೆ. 'ಬರ'-ವಂತೆ! ಬರಮಾಡಿಕೊಳ್ಳಲಿಕ್ಕೆ ದೇಶದ ಜನತೆ ತಯಾರಾಗಬೇಕು ಅಂತೆಲ್ಲ ಹೇಳಿಕೆ ಕೊಟ್ಟಿದ್ದಾರೆ ಮಂತ್ರಿಗಳು. ಮಳೆಗಾಲ ಬರುತ್ತದೆ ಎಂದಾದರೆ ತಯಾರಿ ಬೇಕು, ಬರಕ್ಕೆ ಏನು ತಯಾರಿ ಮಾಡಿಕೊಳ್ಳುವುದು? ಕಡಿಮೆ ನೀರು ಕುಡಿಯಬೇಕೇ, ದಿನವೂ ಸ್ನಾನ ಮಾಡುವುದನ್ನು ಬಿಡಬೇಕೇ, ಟಿಶ್ಯೂ ಪೇಪರ್ ಬಳಸಬೇಕೇ? ಅರ್ಥವೇ ಆಗದೇ ಕಕ್ಕಾಬಿಕ್ಕಿಯಾಗುತ್ತೇನೆ ನಾನು. ವಿದ್ಯುತ್ತಂತೂ ಇಲ್ಲವೇ ಇಲ್ಲವಂತೆ. ಇನ್ನು ಹನ್ನೊಂದು ದಿನಗಳಲ್ಲಿ ಜಲಾಶಯಗಳೆಲ್ಲ ಖಾಲಿಯಾಗುತ್ತವೆಯಂತೆ. ಆಮೇಲೆ ಎಲ್ಲೆಲ್ಲೂ ಕತ್ತಲೆ ಆವರಿಸುತ್ತದಂತೆ. ಪೇಪರ್ರೋದಿ 'ವಾರೆವ್ಹಾ!' ಎಂದೆ ನಾನು.
ಕೆಲ ವರ್ಷಗಳ ಹಿಂದೆ ಹೀಗೇ ಮಳೆ ಶುರುವಾಗದೇ ಇದ್ದಾಗ ನಾವೆಲ್ಲಾ ನಮ್ಮ ಸೀಮೆಯ ದೇವರಿಗೆ ಪರ್ಜನ್ಯ ಮಾಡಿದ್ದೆವು. ನೂರಾರು ಜನ ಸೇರಿ, ಹತ್ತಿರದಲ್ಲಿದ್ದ ಕೆರೆಯಿಂದ ಕೊಡಪಾನಗಳಲ್ಲಿ ನೀರನ್ನು ತುಂಬಿ ತುಂಬಿ ಒಬ್ಬರಿಂದ ಒಬ್ಬರಿಗೆ ಹಸ್ತಾಂತರಿಸುತ್ತ ಗರ್ಭಗುಡಿಯ ತುಂಬ ನೀರು ತುಂಬಿ ದೇವರನ್ನು ಮುಳುಗಿಸಿಬಿಟ್ಟಿದ್ದೆವು! ಹಾಗೆ ಮುಳುಗಿಸುತ್ತಿದ್ದಂತೆಯೇ ಮಳೆಹನಿಗಳು ಬೀಳತೊಡಗಿ ಜನಗಳೆಲ್ಲ ಹರ್ಷೋದ್ಘಾರ ಮಾಡಿದ್ದೆವು. ಕೋಡನಕಟ್ಟೆಯ ಸಿದ್ಧಿವಿನಾಯಕನ ಮಹಿಮೆಗೆ ಬೆರಗಾಗಿದ್ದೆವು. ಈಗಲೂ ಹಾಗೇ ಮಾಡೋಣವಾ ಅಂದರೆ ಹಿರೇಭಟ್ಟರು ಹೇಳುತ್ತಿದ್ದಾರೆ, 'ಈಗ ಮಾಡಿದ್ರೆ ಏನೂ ಉಪಯೋಗ ಇಲ್ಲೆ.. ಜನಗಳಲ್ಲಿ ಭಕ್ತಿ, ಶ್ರದ್ಧೆಯೇ ಇಲ್ಲೆ. ಪರ್ಜನ್ಯ ಮಾಡೋಣ ಅಂದ್ರೆ ಕೊಡಪಾನದಲ್ಲಿ ಯಾಕೆ ನೀರು ಒಯ್ಯಬೇಕು, ಡೈರೆಕ್ಟಾಗಿ ಒಂದು ಪೈಪ್ ಎಳೆದು ಪಂಪ್‌ಸೆಟ್ಟಲ್ಲಿ ಎತ್ತಿ ಸೀದಾ ದೇವರ ನೆತ್ತಿ ಮೇಲೇ ನೀರು ಬೀಳಹಂಗೆ ಮಾಡ್ಲಕ್ಕಲಾ ಅಂತ ಹೇಳ್ತಾರೆ ಈಗಿನ್ ಹುಡುಗ್ರು..! ದೇಶದ ತುಂಬ ಅನಾಚಾರ. ಹಿಂಗಾದ್ರೆ ಮಳೆಯೂ ಇಲ್ಲೆ ಬೆಳೆಯೂ ಇಲ್ಲೆ.' ನನಗೆ ಹತಾಶೆಯಾಗುತ್ತದೆ.
ಮಂತ್ರಿಗಳೆಲ್ಲ ರೆಸಾರ್ಟಿನಲ್ಲಿ ಕುಳಿತು ಇದಕ್ಕೆ ಪರಿಹಾರವೇನು ಅಂತ ಮಂಥನ ಮಾಡುತ್ತಿದ್ದಾರೆ. ನ್ಯೂಸ್‌ಪೇಪರ್ರು, ಟಿವಿ9 ಎಲ್ಲಾ ಕಡೆ ಬರಲಿರುವ ಬರದ ಬಗ್ಗೆ ಚರ್ಚೆ. ನಾನೂ ಇಲ್ಲೇ ಕೂತು ಯೋಚಿಸುತ್ತಿದ್ದೇನೆ: ಕಪ್ಪೆಗಳಿಗೆ ಮದುವೆ ಮಾಡಿಸಿದರೆ ಹೇಗೆ ಅಂತ. ಆದರೆ ಕಲ್ಲುಬಂಡೆಗಳ ಸಂದಿಯೊಳಗೆಲ್ಲೋ ಅಡಗಿ ಕುಳಿತುಕೊಂಡಿರುವ ಅವನ್ನು ಹುಡುಕುವುದೇ ಕಷ್ಟದ ಕೆಲಸ. ಮಳೆ ಬಂದಮೇಲೆಯೇ ಅವು ಹೊರಗೆ ಬರುವುದು. ಇಲ್ಯಾರೋ ಹೇಳುತ್ತಿದ್ದಾರೆ, 'ಅದು ಕಪ್ಪೆ ಅಲ್ಲ; ಕತ್ತೆ. ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆ ಆಗುತ್ತೆ' ಅಂತ. ಹಾಗಾದರೆ ಕೆಲಸ ಸುಲಭ. ಬೆಂಗಳೂರಿನಲ್ಲಿ ಕತ್ತೆಗಳಿಗೇನು ಬರವಿಲ್ಲ. 'ಆಫೀಸಿನಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ದೇಶಕ್ಕೆ ಒಳಿತಾಗುವಂಥದ್ದೇನಾದರೂ ಮಾಡುವುದು ಒಳ್ಳೆಯದು, ಕತ್ತೆ ಹುಡುಕಲಿಕ್ಕೆ ಹೋಗೋಣ ಬನ್ನಿ' ಅಂತ ನನ್ನ ಕಲೀಗುಗಳಿಗೆ ಹೇಳಿದರೆ, 'ನೀನೀಗ ಮಾಡ್ತಿರೋದು ಕತ್ತೆ ಕಾಯೋ ಕೆಲಸವೇ ಅಲ್ಲವೇನೋ' ಅಂತ ಅವರೆಲ್ಲಾ ಬಿದ್ದೂ ಬಿದ್ದು ನಗುತ್ತಿದ್ದಾರೆ. ನಾನು ಹ್ಯಾಪ ಮೋರೆ ಹಾಕಿಕೊಂಡು ಕುಳಿತಿದ್ದೇನೆ.
ಹೊರಗೆ ನೋಡಿದರೆ ಕಣ್ಣು ಕುಕ್ಕುವ ಬಿಸಿಲು. ನನ್ನೊಳಗೆ ಶುಷ್ಕ ಕತ್ತಲೆ.
16 comments:
ಮದ್ವೆ ಮಳೆ ಬಂದಮೇಲಾ..?ಇಲ್ಲಾ ಅಷ್ಟರೊಳಗಾ..?
ಹೆಣ್ಣು..!?
ಹಾರ್ಟ್ ಟಚಿಂಗ್ ಬರ(ಹ)
ಮಳೆ ಶುರು ಆಕ್ತಾ ಇಲ್ಲಾ.. ಎನ್ ಮಾಡದೋ ಎನೋ...
ಮೊನ್ನೆ ಮನಿಗೆ ಹೋದಾಗಾ ನಾನು ತುಂಬಾ ಕಾಯ್ತಾ ಇದ್ದೆ ಮಳೆ ಬರುತ್ತೆ ಅಂತಾ ಆದ್ರೆ, ಬಂದಿಲ್ಲಾ... ಕಪ್ಪೆ ಮನೆ ಒಳಗೆ ಬಂದ್ರೆ ಮಳೆ ಜೋರಾಗುತ್ತೆ ಅಂತೆಲ್ಲಾ ಹೇಳ್ತಾ ಇದ್ರು ನಮ್ಮನೆ ಒಳಗು ಕಪ್ಪೆ ಬಂದಿತ್ತು ಮಳೆ ಮಾತ್ರಾ ಬಂದಿಲ್ಲಾ.
ಮರ ಎಲ್ಲ ಕಡಿದು ಹಾಕಿದ್ದರೆ. ಈ ತರ ಪರಿಸರ ಹಾಳು ಮಾಡಿದ್ರೆ ಮಳೆ ಎಲ್ಲಿಂದ ಆಗುತ್ತೆ.
ತುಂಬಾ ಬೇಜಾರಾಗೋಯ್ತು....
ಹೊಟ್ಟೆಗೆ ಅನ್ನ ಕೊಡುವ ರೈತ ಸಾಲದಿಂದ ಸಾಯ್ತಾ ಇದ್ದಾನೆ...
ಆಳುವವರು ಕ್ರಿಕೆಟ್ ಮ್ಯಾಚ್ ಬಗೆಗೆ ಆಫ್ರಿಕಾ ಹೋಗ್ತಾರೆ....
ರೆಸಾರ್ಟಿನಲ್ಲಿ ಕುಳಿತು ಮಂಥನ ಮಾಡ್ತಾರೆ...
ಕಬ್ಬು, ಭತ್ತ, ತೊಗರಿ ಬೆಳೆಗಾರ ಫಸಲಿಗೆ ದರ ಇಲ್ಲದೇ ಸಾಯ್ತಾನೆ...
ಖರಿದಿ ಮಾಡುವವ ಕೊಳ್ಳಲಿಕ್ಕಾಗದೆ ಸಾಯಬೇಕು...
ಸಾಯುವವನ ತಲೆ ಮೇಲೆ ಮತ್ತೊಂದು ಕಲ್ಲು...
ಅನ್ನುವ ಹಾಗೆ..
ಬರಗಾಲದ ಛಾಯೆ.....!
ಬೇಸರವಾಗುತ್ತದೆ ಸುಶ್ರುತ..........
tumbaa chandada baraha...
abhinandanegaLu...
ಸುಷ್,
ಬರಹ ಬಹಳ ಸಮಯ ಸೂಕ್ತವಾಗಿದೆ,ನಿಮ್ಮ ಬರಹದ ಕೆಲವು ಅ೦ಶಗಳಿರುವ ನನ್ನ "ಯಾರು ನೀನು" ಕವನವನ್ನೊಮ್ಮೆ ಬ್ಲಾಗಿಗೆ ಬ೦ದು ಕಣ್ಣಾಯಿಸಿ ನಿಮ್ಮ ಅಬಿಪ್ರಾಯ ತಿಳಿಸಿ.ನಿಮ್ಮಷ್ಟು ಚೆನಾಗಿ ಬರೆಯಲು ಆಗಿಲ್ಲ.ಹೆ..ಹೆ.ಹೆ.
heyy ... super ...
actually hindina post nodi bejaaaragittu nange ...
idu, very thoughtful post. sari... yaavaga madve??
ಬರದ ಬಗ್ಗೆ ಬರೆದ ಬರಹ ಚೆನ್ನಾಗಿದೆ. ಮನುಷ್ಯನ ಶಕ್ತಿಯ ಮಿತಿಯನ್ನು, ಅವನ ಅವಿವೇಕದ ವಿಸ್ತಾರವನ್ನು ಧ್ವನಿಸುವ ಬರಹ.
ಏನಪಾ ಹೀಂಗೆಲ್ಲ ಸಿಕಾಪಟೇ ಸೀರಿಯಸ್ಸಾಗ್ ಬರದ್ದೆ:)
ಮಳೆ-ಬರ...ಹಮ್..
ಸುಶ್, ಆದಿನ ನೀ ಸಿಗಾಕ್ಕೊಂಡ ಮಳೆಯಲ್ಲಿ ನಾನೂ ಎಲ್ಲೋ ಸಿಗಾಕ್ಕೊಂಡಿದ್ದೆ, ಆಲಿಕಲ್ಲು ನನ್ನ ಬ್ಯಾಗಿನ ಮ್ಯಾಗೇ ಬಿದ್ದಿತ್ತು... :-) ನೆನಪಿಟ್ಕೊಳ್ಳೋಂಥಾ ದಿನ! ;-)
ಆದ್ರೆ ಮಳೆ ದಿನ ಹೋದ ಹಾಗೆ ಕಡಿಮೆಯಾಗ್ತಿರೋದು ಮಾತ್ರ ಖಂಡಿತಾ ನಿಜ. ನಿನ್ನಂತಹ-ನನ್ನಂತಹ ಮಳೆಯ ಮಕ್ಕಳಿಗೆ ಇನ್ನು ಮುಂದೆ ಹೀಗೆಯೇ ನಿರಾಸೆ ಕಾದಿಟ್ಟ ಬುತ್ತಿಯೇನೋ...
ಈ ಸಲ ಜನವರಿಗೇ ಬೇಸಿಗೆ ಆರಂಭವಾದರೂ ಅಚ್ಚರಿಯಿಲ್ಲ. ಹವಾಮಾನ ತಜ್ಞರ ಮಾತನ್ನು ಎಲ್ಲಿ ಕೇಳುತ್ತೆ ಮಳೆ? ಇವತ್ತಿನ ಪೇಪರಿನಲ್ಲಿ "Traces of shower with thunderstorm" ಎಂದು ಹಾಕಿದ್ದ. ಅವನ ಮನೆ ಹಾಳಾಗ ಎಂದು ಬೈದುಕೊಂಡೆ ಅಷ್ಟೆ. ಮನೆಯಲ್ಲಿ, ಶಾಲೆಯಲ್ಲಿ fan ಹಾಕಿಕೊಂಡಿರುವ ಆಷಾಡ ಮಾಸದ ಕಾಲ ಇದು!
[ಶ್ರೀನಿಧಿ] ಸೀರಿಯಸ್ಸಾಗಿ ಬರೆದರೆ ಇದೇನಪ್ಪ ಸೀರಿಯಸ್ಸು ಅನ್ನೋದು, ಇಲ್ಲವೆಂದರೆ ಇದೇನಪ್ಪ ಸೀರಿಯಸ್‍ನೆಸ್ಸೇ ಇಲ್ಲ ಅನ್ನೋದು - ಇಷ್ಟೇ ಆಗೋಯ್ತು ನಿಂದು! ಇರಲಿ, ನೀನು ಒಂಭತ್ತನೇ ........ ಆಗು, ನೋಡ್ಕೋತೀನಿ ಆಗ.
ಸುಶ್ರುತ ಮಳೆ ಬರ್ತಾಇದೆ ಆದ್ರೆ ಯಾರ ಕಣ್ಣಿಗೂ ಕಾಣ್ತಾಇಲ್ಲ ಮೊನ್ನೆ ಗೋಲ್ಡನ ಪಾಮನಲ್ಲಿ ಮಳೆ ಬಂದಿತ್ತು
ಲಕ್ನೋದಲ್ಲಿ ಮಾಯಾ ಮೇಮಸಾಬನ ವಿಗ್ರಹ ಸ್ಥಾಪಿಸುವಾಗಲೂ ಮಳೆ ಬಂದಿತ್ತು
ಜಾಕ್ಸನ ಹೊಟ್ಟೆಯಲ್ಲಿ ಅವಿತಿದ್ದ ಗುಳಿಗೆ ಕಕ್ಕಿಸುವಾಗಲೂ ಮಳೆ ಬಂದಿತ್ತು
ಹಾಗೆಯೇ ನಮ್ಮೂರ ಕರಿಯನ ಕಣ್ಣಲ್ಲಿ ಅನವರತ ಮಳೆ ಆಗುತ್ತಿದೆ
ಆದರೆ ಈ ಮಳೆ ಯಾರಿಗೂ ಕಾಣ್ಸುದಿಲ್ಲ....!
ಇನ್ನು ಮೇಲೆ ನಾವು ಮಳೆ ನೋಡೋದು ಟೀವಿಯಲ್ಲಿ ಮಾತ್ರ!
nimma baraha nodi irbeku... maLe barta ide noDi eega...
:) ಚೆನ್ನಾಗಿದೆ ಲೇಖನ.. witty ಆಗಿದೆ.. ಅದಿಕ್ಕೆ ಚಂದ
"..ಕತ್ತೆ ಹುಡುಕಲಿಕ್ಕೆ ಹೋಗೋಣ ಬನ್ನಿ' ಅಂತ ನನ್ನ ಕಲೀಗುಗಳಿಗೆ ಹೇಳಿದರೆ, 'ನೀನೀಗ ಮಾಡ್ತಿರೋದು ಕತ್ತೆ ಕಾಯೋ ಕೆಲಸವೇ ಅಲ್ಲವೇನೋ' ಅಂತ ಅವರೆಲ್ಲಾ ಬಿದ್ದೂ ಬಿದ್ದು ನಗುತ್ತಿದ್ದಾರೆ. ನಾನು ಹ್ಯಾಪ ಮೋರೆ ಹಾಕಿಕೊಂಡು ಕುಳಿತಿದ್ದೇನೆ.
ಹೊರಗೆ ನೋಡಿದರೆ ಕಣ್ಣು ಕುಕ್ಕುವ ಬಿಸಿಲು. ನನ್ನೊಳಗೆ ಶುಷ್ಕ ಕತ್ತಲೆ".
tumbaa arthgarbhitavaagide. idu naavelru maaDtiro kelsaane alvaa... ee bharaha tumbaa chennaagide Sushruta.
ಸುಶ್ರುತ,
ಟಿವಿಲಿ , ಪೇಪರ್ ನಲ್ಲಿ , ದಿನಾ ಹವಾಮಾನ ಬದಲಾಗ್ತು ಬಿಡು. ನಾವುಗಳು ಅದನ್ನ ನಂಬ್ಕ್ಯಂಡು ಆಕಾಶ ನೋಡ್ತಾ ಕೂತ್ಕಳದೇ ಸೈ !
ಯಾವುದಕ್ಕೂ , ಒಂದಿಷ್ಟು ಟಿಶ್ಯೂ ಪೇಪರ್ , ಪರ್ ಫ್ಯೂಮ್ ಸ್ಟಾಕ್ ಮಾಡಿಟ್ಗಳದು ಒಳ್ಳೆದು ಕಾಣ್ತು.
ಪ್ರತಿಕ್ರಿಯಿಸಿದ ಎಲ್ಲರಿಗೂ ಶರಣು. ನಿಮ್ಮ ಆತಂಕಗಳು ನನ್ನವೂ ಹೌದು. ಬರುತ್ತಿರುವ ಮಳೆ ನೆಲವ ಹದಗೊಳಿಸೊತ್ತೆ ಅಂತ ಹಾರೈಸೋಣ.
Post a Comment