Tuesday, July 07, 2009

ಬೆಟ್ಟದಿಂದ ಬಂದ ಪತ್ರ

ಡಿಯರ್ ಫ್ರೆಂಡ್,

ಮತ್ಯಾವುದೋ ಪರ್ವತದ ಮೇಲಿದ್ದೇನೆ. ‘ಎಲ್ಲಿ? ಯಾವೂರು?’ ಅಂತೆಲ್ಲ ಹೇಳುವುದಿಲ್ಲ. ಕನಿಷ್ಟ, ಪರ್ವತದ ಶೃಂಗದಲ್ಲಿದ್ದಾಗಲಾದರೂ ಊರು-ಕೇರಿ-ಹೆಸರುಗಳನ್ನು ಮರೆಯಬೇಕು ಅಂತ ನನಗನ್ನಿಸೊತ್ತೆ. ಇಲ್ಲಿ ಈ ಕ್ಷಣದಲ್ಲಿ ನನಗೆ ಎಲ್ಲ ಪರ್ವತಗಳ ನೆತ್ತಿಯೂ ಒಂದೇ ಅನ್ನಿಸುತ್ತಿದೆ. ಊರು, ಕೇರಿ, ಹೆಸರುಗಳನ್ನೆಲ್ಲ ಒಂದೊಂದಾಗಿ ಕಳಚಿಕೊಳ್ಳುತ್ತ ಏರುತ್ತ ಏರುತ್ತ ತುತ್ತ ತುದಿಗೆ ಬಂದು ನಿಂತಿರುವ ಈ ಕ್ಷಣದಲ್ಲಿ ಕೈ ಚಾಚಿದರೆ ಆಕಾಶ, ಬಗ್ಗಿ ನೋಡಿದರೆ ಪ್ರಪಾತ, ಸುತ್ತೆಲ್ಲ ಶೂನ್ಯ ಎಂಬಂತಿರುವ ಈ ಜಾಗಕ್ಕೆ ಹೆಸರಾದರೂ ಯಾಕೆ ಬೇಕು ಹೇಳು?

ನನಗೂ ಗೊತ್ತಿಲ್ಲ ಸ್ಪಷ್ಟವಾಗಿ: ಏಕೆ ಹೀಗೆ ಚಾರಣಗಳಿಗೆ ಬರುತ್ತೇವೆ ನಾವು ಅಂತ. ಜಗದ ಜನವೆಲ್ಲ ತಮ್ತಮ್ಮ ಅಭಿವೃದ್ಧಿ ಕಾರ್ಯಗಳಲ್ಲಿ ತತ್ಪರರಾಗಿರುವಾಗ ನಾವು ಹೀಗೆ ದುಡ್ಡು ಖರ್ಚು ಮಾಡಿಕೊಂಡು, ಸಮಯ ವ್ಯಯಿಸಿ, ಸುಸ್ತು ಮಾಡಿಕೊಳ್ಳುತ್ತಾ ಬೆಟ್ಟ ಏರುವ ದರ್ದಾದರೂ ಏನಿರಬಹುದು? ಅಮ್ಮನಂತೂ ಯಾವಾಗಲೂ ಬೈಯುತ್ತಾಳೆ. ಅವಳಿಗೆ ತಿಳಿಸಿ ಹೇಳಲಿಕ್ಕಂತೂ ಇನ್ನೂ ನನಗೆ ಆಗಿಲ್ಲ. ಆದರೂ, ಸಾವನದುರ್ಗದ ಮೇಲಿನ ಮೌನ ನಂದಿಯ ಪಕ್ಕ ನಿಂತು ನೋಡಿದ ಮಳೆ, ದೇವರಾಯನದುರ್ಗದಲ್ಲಿ ಕಳೆದ ಕಾವಳದ ರಾತ್ರಿ, ಸಿದ್ದರ ಬೆಟ್ಟದ ನಿಗೂಢ ಗುಹೆಗಳು, ಕುಮಾರ ಪರ್ವತದಿಂದ ಕಂಡ ಅಮೋಘ ದೃಶ್ಯ, ದೇವಕಾರಿನ ಜಲಪಾತದ ಸೆಳೆತ, ಕೋಟೆಬೆಟ್ಟದ ಮೇಲೆ ಬೀಳುತ್ತಿದ್ದ ಹಿಮ -ಊಹುಂ, ಅವು ಮತ್ತೆಲ್ಲೂ - ಮತ್ತಿನ್ನೆಲ್ಲೂ ಸಿಗೊಲ್ಲ ಬಿಡು.

ಹಾಗೇ ಈ ಪರ್ವತದ ಶೃಂಗದಿಂದ ಕಾಣುತ್ತಿರುವ ದೃಶ್ಯ. ಇಲ್ಲಿಂದ ನೋಡುವಾಗ ಅದು ಜ್ವಾಲಾಮುಖಿಯಿಂದ ಉಕ್ಕಿ ಹರಿಯುತ್ತಿರುವ ಲಾವಾದಂತೆ ಕಾಣಿಸುತ್ತಿದೆ. ನನ್ನ ಕೆಮೆರಾದಿಂದ ಅದರ ಫೋಟೋ ತೆಗೆಯುತ್ತಿದ್ದ ಚಿನ್ಮಯ ಇನ್ನು ಸ್ವಲ್ಪ ಹೊತ್ತಿನಲ್ಲಿ ಅದು ಆಸ್ಟ್ರೇಲಿಯಾ ಮ್ಯಾಪಿನಂತೆ ಕಾಣಬಹುದು ಎಂದು ಹೇಳಿದ. ಆಸ್ಟ್ರೇಲಿಯಾ ಏನು, ಹೀಗೇ ಇನ್ನೂ ಸ್ವಲ್ಪ ಕೆಳಗಿಳಿದರೆ ಭಾರತದ ದಕ್ಷಿಣದಂಚಿನಂತೆಯೂ ಕಾಣಿಸಬಹುದು ಎನ್ನಿಸಿತು ನನಗೆ. ನಮ್ಮ ಬಟ್ಟೆ-ಆಹಾರವನ್ನೆಲ್ಲ ಸ್ವಲ್ಪ ಕೆಳಗೆ-ತಪ್ಪಲಿನಂತಹ ಜಾಗದಲ್ಲಿಟ್ಟು ಮೇಲೆ ಶೃಂಗಕ್ಕೆ ಬಂದಿದ್ದೇವೆ ನಾವು. ಶೃಂಗಕ್ಕೆ ಹತ್ತಿರದಲ್ಲೇ ಇರುವ ಮೋಡಗಳು ಕೆಳಗಿಳಿಯುತ್ತಿರುವ ಕತ್ತಲೆಯ ಪರಾಗಗಳನ್ನು ಮಧ್ಯದಲ್ಲೇ ತಡೆದು ಚಳಿಯನ್ನು ಜತೆ ಮಾಡಿ ಕಳುಹಿಸುತ್ತಿವೆ. ಆ ಪರಾಗಗಳು ನಮ್ಮ ಮೈಗೆ ತಾಕಿದ್ದೇ ತಡ, ರೋಮಗಳೆಲ್ಲ ಕುಸುಮದಂತೆ ಅರಳಿ ಎದ್ದು ನಿಂತಿವೆ.

“ಶೃಂಗದಲ್ಲಿದ್ದಾಗ ಕತ್ತಲಾದದ್ದು ಗೊತ್ತಾಗುವುದಿಲ್ಲ. ಕೆಳಗಿಳಿಯುವಾಗ ಕಷ್ಟ” ಎಂದ ಪ್ರವೀಣ. ಹೌದೆನಿಸಿತು ನನಗೆ. ಈಗಷ್ಟೇ ಮುಳುಗಿದ್ದ ಸೂರ್ಯ ಇಲ್ಲಿ. ನಮನ್ನೆಲ್ಲ ಕತ್ತಲೆಯಲ್ಲಿ ಬಿಟ್ಟು ಇಲ್ಲಿ ಹೀಗೆ ಪಶ್ಚಿಮದ ದಿಗಂತದಲ್ಲಿ ಕಣ್ಮರೆಯಾಗಿ, ಅಲ್ಲಿ ಬೇರ‍್ಯಾವುದೋ ದೇಶದ ಜನರಿಗೆ ಬೆಳಗು ಮಾಡಿ ಅಲ್ಲಿಯ ಬೆಡಗಿಯರನ್ನು ಮನೆಯಿಂದ ಹೊರ ಕರೆಸಿ ಅವರ ಸೌಂದರ್ಯವನ್ನು ಕಣ್ಮಿಟುಕಿಸದೇ ಸಂಜೆಯವರೆಗೂ ನೋಡಿಕೊಂಡು, ನಾಳೆ ಬೆಳಗಾಗುತ್ತಿದ್ದಂತೆ ಏನೂ ಆಗಿಯೇ ಇಲ್ಲವೇನೋ ಎಂಬಂತೆ ಮುಗ್ಧ ಸೋಗಿನಲ್ಲಿ ಇಲ್ಲಿ ಮತ್ತೆ ಹಾಜರಾಗುವ ಈ ಸೂರ್ಯನನ್ನು ಕಂಡಾಗಲೆಲ್ಲ ನನಗೆ ಅಸೂಯೆ. ಇರಬಹುದು ಅಂವ ದೊಡ್ಡವ. ಇರಬಹುದು ಅಂವ ಬೆಳಕಿನ ಅಧಿಪತಿ. ಇರಬಹುದು ಆತ ಜಗದೊಡೆಯ. ಆದರೆ ಆತ ಸಾಚಾ ಅಂತೂ ಅಲ್ಲ. ಒಮ್ಮೆ ಆತ ಮುಳುಗುತ್ತಿದ್ದಾಗ ಅವನ ಹಿಂದೆಯೇ ಹೋಗಿ ಅವನ ಮೋಸವನ್ನೆಲ್ಲ ಸಾಬೀತು ಮಾಡಿ ಬರಬೇಕು ಅಂತಿದೆ ನನಗೆ. ಆದರೆ ಆತ ಬುದ್ಧಿವಂತ: ಬೆಳ್ಳಿ ಚಂದಿರನನ್ನೂ ಕೋಟಿತಾರೆಗಳನ್ನೂ ನನ್ನ ಕಾವಲಿಗಿಟ್ಟೇ ಹೋಗುತ್ತಾನೆ ಪ್ರತಿದಿನ. ಇವುಗಳಿಂದ ತಪ್ಪಿಸಿಕೊಳ್ಳುವುದಿದೆಯೇ?

ಆಗಲೇ ಬೀಳತೊಡಗಿದ್ದ ಇಬ್ಬನಿಯಿಂದಾಗಿ ನೆಲ ಜಾರುತ್ತಿದೆ. “ತಪ್ಪಿ ಒಣಗಿದ ಹುಲ್ಲಿನ ಮೇಲೇನಾದರೂ ಕಾಲಿಟ್ಟರೆ ಸೀದಾ ಕೆಳಗೇ” -ಗೆಳೆಯರು ಎಚ್ಚರಿಸುತ್ತಿದ್ದಾರೆ. ಬಲು ಹುಷಾರಿನಿಂದ ಇಳಿಯುತ್ತಿದ್ದೇನೆ. ತಪ್ಪಲಿಗೆ ಮುಟ್ಟುವಷ್ಟರಲ್ಲಿ ಕತ್ತಲೆ ಪೂರ್ತಿ ಆವರಿಸಿದೆ. ಚಳಿ ತೀಕ್ಷ್ಣವಾಗುತ್ತಿದೆ. ಸರಸರನೆ ನಮ್ಮ ಜಾಕೀಟುಗಳನ್ನು ಧರಿಸಿ, ಬ್ಯಾಗುಗಳಲ್ಲಿದ್ದ ಪೆನ್‌ಟಾರ್ಚುಗಳನ್ನು ಹೊರತೆಗೆದು, ಕ್ಯಾಂಪ್‌ಫೈರ್ ಮಾಡಲಿಕ್ಕೆ ಕಟ್ಟಿಗೆ ಒಟ್ಟುಗೂಡಿಸಲಿಕ್ಕೆ ಹೊರಡುತ್ತೇವೆ ನಾವು. ನಾವು ಪಕ್ಕದ ಹಳ್ಳಿಯಿಂದ ಕರೆದುಕೊಂಡು ಬಂದಿದ್ದ ಗೈಡುಗಳು ಇನ್ನೊಂದು ತಾಸಿನೊಳಗೆ ಬರುತ್ತೇವೆ ಎಂದು ಹೇಳಿ ಎತ್ತಲೋ ಮಾಯವಾಗಿಬಿಟ್ಟಿದ್ದಾರೆ. ಅವರಾದರೂ ಇದ್ದಿದ್ದರೆ ಕಟ್ಟಿಗೆ ತರಲಿಕ್ಕೆ ಸ್ವಲ್ಪ ಸಹಾಯ ಮಾಡುತ್ತಿದ್ದರು. “ರಾತ್ರಿಯಿಡೀ ಉರೀಬೇಕು ಅಂದ್ರೆ ದೊಡ್ಡ ದೊಡ್ಡ ಕುಂಟೆಯೇ ಬೇಕು. ಈ ಸಣ್ಣ ಜಿಗ್ಗು-ಪುಡಿ ಕಟ್ಟಿಗೆಯೆಲ್ಲಾ ಹತ್ತು ನಿಮಿಷದಲ್ಲಿ ಉರಿದು ಹೋಗ್ತವೆ” ವಿನು ಹೇಳುತ್ತಿದ್ದಾನೆ. ಹೌದು, ದೊಡ್ಡ ದಿಮ್ಮಿಗಳೇ ಬೇಕು. ಇಲ್ಲಿ ಒಣಗಿದ ಮರಗಳೇನೋ ಬಹಳ ಇವೆ, ಆದರೆ ಇವನ್ನೆಲ್ಲಾ ಈ ಕತ್ತಲಿನಲ್ಲಿ ಕಡಿದು ಹೊತ್ತು ಅಲ್ಲಿಗೆ ಸಾಗಿಸುವುದೇ ತಲೆನೋವು.

ಚಳಿ ಈ ರಾತ್ರಿ ನಮಗೊಂದು ಗತಿ ಕಾಣಿಸಲಿಕ್ಕೆ ಸಂಚು ಹೂಡಿದಂತಿದೆ. ಹೊತ್ತಿಕೊಂಡ ಸಣ್ಣ ಬೆಂಕಿಯ ಬೆಳಕು ಎಲ್ಲರ ಮುಖಕ್ಕೂ ಕೆಂಪಿನ ಬಣ್ಣ ಬಳಿಯುತ್ತಿದೆ. ರವ್ಯಾ ಏನೋ ಡೈಲಾಗು ಹೊಡೆಯುತ್ತಿದ್ದಾನೆ: “ಇಷ್ಟು ದೊಡ್ಡ ಬೆಂಕಿ ಆದ್ರೂ ಶಾಖ ದೇಹದ ಎಲ್ಲಾ ಭಾಗಕ್ಕೂ ಮುಟ್ತಾನೇ ಇಲ್ಲ ಮಾರಾಯಾ..!” ಎಲ್ಲರೂ ನಗುತ್ತಿದ್ದೇವೆ. ಈ ಚಳಿಯಲ್ಲಿ ನಗೆಯ ದನಿಯೂ ಬೇರೆ ತರಹ ಕೇಳಿಸುತ್ತದೆ. ಅಥವಾ ಅದೊಂಥರಾ ಭ್ರಮೆಯಿರಬಹುದು. ಈಗ ನಮ್ಮ ಗೈಡುಗಳು ದೌಡಾಯಿಸಿದ್ದಾರೆ. ಇಬ್ಬರ ಕೈಯಲ್ಲೂ ಎರಡೆರಡು ಬಾಟಲಿಗಳು. ಬಿಳೀ ಬಣ್ಣದ ಸಾರಾಯಿ. ರಾತ್ರಿ ನಾವು ಮಲಗಿದ್ದಾಗ ಇವರು ನಿದ್ರಿಸದೇ ಬೆಂಕಿಗೆ ಕೊಳ್ಳಿ ಮುಂದೂಡುತ್ತಾ ಬೆಳಗಿನವರೆಗೂ ಕುಡಿಯುತ್ತಲೇ ಇರುತ್ತಾರಂತೆ. ಅಷ್ಟೆಲ್ಲಾ ಕುಡಿದರೂ ಇವರಿಗೆ ನಿದ್ರೆ ಬರುವುದಿಲ್ಲವಾ ಅಂತ ನನಗೆ ಆಶ್ಚರ್ಯ. ಬಹುಶಃ ನಾವು ಎದ್ದಮೇಲೆ ಇವರು ಮಲಗಬಹುದು ಅಂತ ಎಲ್ಲರೂ ತಮಾಷೆ ಮಾಡಿಕೊಂಡೆವು.

ತಂದಿದ್ದ ಚಪಾತಿಯನ್ನು ಹಂಚಿಕೊಂಡು ತಿಂದೆವು. ಸ್ವಲ್ಪ ಹೊತ್ತು ಹರಟೆಯೂ ಮುಗಿಯಿತು. ಇನ್ನೇನು ಕೆಲಸ? ಸ್ಲೀಪಿಂಗ್ ಬ್ಯಾಗಿನೊಳಗೆ ತೂರಿಕೊಂಡು ಮಲಗಿ ನಿದ್ರೆ ಹೋಗುವುದು ಅಷ್ಟೇ. ಜಾಕೇಟಿನ ಸಮೇತ ಸ್ಲೀಪಿಂಗ್ ಬ್ಯಾಗಿನೊಳಗೆ ತೂರಿ ಮಲಗಿಕೊಂಡಿದ್ದೇನೆ. ಮುಖದ ಜಾಗದಷ್ಟನ್ನೇ ಜಿಪ್ ತೆರೆದು ಉಸಿರಾಡಲಿಕ್ಕೆ ಅನುಕೂಲ ಮಾಡಿಕೊಂಡಿದ್ದೇನೆ. ಗುಡ್‌ನೈಟುಗಳ ವಿನಿಮಯವೂ ಮುಗಿದು ಈಗ ಬರೀ ಬೆಂಕಿಯ ಚಟಪಟ ಸದ್ದು. ಇನ್ನು ನಿದ್ರೆ ಬರುವವರೆಗೂ ಚುಕ್ಕೆಗಳನ್ನು ಎಣಿಸಬಹುದು. ರಂಗೋಲಿಯ ಎಳೆಯಂತೆ ಕಂಡು ಮಾಯವಾಗುವ ಉಲ್ಕಾಪಾತವನ್ನು ಬೆರಗಿಲೆ ನೋಡಬಹುದು.

ಈಗ ಈ ಚುಕ್ಕೆರಾಶಿಯ ಮುನ್ನೆಲೆಯಲ್ಲಿ ನಾವು ಸಂಜೆ ನೋಡಿದ್ದ ಜ್ವಾಲಾಮುಖಿಯ ಚಿತ್ರ ಮೂಡುತ್ತಿದೆ. ಆಕಾಶಕ್ಕೇ ಬೆಂಕಿ ಬಿದ್ದಂತೆ ಭಾಸ. ಕಪ್ಪು ಪರದೆ ಹರಿದು ಇನ್ನೇನು ನಮ್ಮ ಮೈಮೇಲೇ ಬೀಳಬಹುದು ಎಂಬಂತೆ ಭ್ರಮೆ. ಭಯವಾಗಿ ಬೆಚ್ಚಿ ಕಣ್ಮಿಟುಕಿಸಿದೆ. ಚಿತ್ರ ಮಾಯವಾಯಿತು. ಸ್ವಲ್ಪ ಹೊತ್ತು ಗಟ್ಟಿಯಾಗಿ ಕಣ್ಮುಚ್ಚಿಕೊಂಡಿದ್ದೆ. ಈಗ ಚುಕ್ಕೆಗಳೂ ಇಲ್ಲದ ಕಣ್ಣೊಳಗಿನ ಕತ್ತಲೆಯ ಕಡುಕಪ್ಪು ಪರದೆಯ ಮೇಲೆ ಸಂಜೆ ನೋಡಿದ್ದ ವಿಹಂಗಮ ಸೂರ್ಯಾಸ್ತದ ದೃಶ್ಯ ಮೂಡುತ್ತಿದೆ. ಸೂರ್ಯ ನನ್ನ ಅಕ್ಷಿಪಟಲದ ಮೇಲ್ತುದಿಯಿಂದ ಕೆಳಕೆಳಗೆ ಇಷ್ಟಿಷ್ಟೇ ಇಳಿಯುತ್ತಿದ್ದಾನೆ. ಹಾಗೇ ಇಳಿದಿಳಿದು ಪೂರ್ತಿಯಾಗಿ ಅಸ್ತಂಗತನಾಗಿ ಕಣ್ಣಗುಡ್ಡೆಯನ್ನೊಮ್ಮೆ ಹಿಂದಿನಿಂದ ಬಳಸಿ ಸ್ವಲ್ಪವೇ ಹೊತ್ತಿನಲ್ಲಿ ಮತ್ತೆ ಮುಂದೆ ಮೂಡಿ ಬರುತ್ತಿದ್ದಾನೆ. ನಾನು ಬೆಳಗೇ ಆದಂತೆನಿಸಿ ಫಕ್ಕನೆ ಎದ್ದು ಕುಳಿತೆ. ಕಣ್ಬಿಟ್ಟರೆ ಸೂರ್ಯ ಮಾಯವಾಗಿ ಎದುರಿಗೆ ಉರಿಯುತ್ತಿರುವ ಚಳಿಬೆಂಕಿ. ಅದರ ಪಕ್ಕ ಕುಳಿತು, ಈ ಜಗದ ಪರಿವೆಯೇ ಇಲ್ಲದಂತೆ ಬಾಟಲಿಯನ್ನು ಬಾಯಿಗಿಟ್ಟು ಸಂಪೂರ್ಣ ಮೇಲಕ್ಕೆತ್ತಿ ಅಕ್ಷರಶಃ ನಕ್ಷತ್ರಗಳನ್ನೆಣೆಸುತ್ತಿದ್ದಾರೆ ನಮ್ಮ ಗೈಡುಗಳು. ನಾನು ದಿಗ್ಗನೆ ಎದ್ದು ಕೂತದ್ದು ನೋಡಿ ಇನ್ನೂ ನಿದ್ದೆ ಬಂದಿರದ ನಿಧಿ “ಏನಾಯ್ತೋ ದೋಸ್ತಾ?” ಎಂದು ಕೇಳುತ್ತಿದ್ದಾನೆ. ಏನಿಲ್ಲ ಅಂತಂದು ನಾನು ಮತ್ತೆ ಮಲಗಿಕೊಳ್ಳುತ್ತಿದ್ದೇನೆ. ಈಗ ಹಟ ತೊಟ್ಟು, ಚುಕ್ಕಿಪರದೆ ಮೇಲೆ ಮೊದಲು ಬೆಟ್ಟ ಮೂಡಿ ಆ ನಂತರ ಅದರ ಮೇಲೆ ಲಾವಾ ಇಳಿಯುತ್ತಿರುವಂತೆ ಕಲ್ಪಿಸಿಕೊಳ್ಳಬೇಕು. ನನ್ನ ಕಲ್ಪನೆಯಂತೆಯೇ ಚಿತ್ರ ಆವಿರ್ಭವಿಸುತ್ತಿದೆ..

ನಾವು ಶೃಂಗದಲ್ಲಿದ್ದಾಗ ನೋಡಿದ್ದು ಪಕ್ಕದ ಚಿಕ್ಕ ಬೆಟ್ಟದ ಮೇಲೆ ಉರಿಯುತ್ತಿದ್ದ ಕಾಡಿನ ಬೆಂಕಿಯ ಚಿತ್ರ. ಮಧ್ಯದಿಂದೆಲ್ಲೋ ಹೊತ್ತಿಕೊಂಡು, ಒಣಗಿದ ಹುಲ್ಲನ್ನು ತನ್ನ ಸುತ್ತಲಿಂದಲೂ ಆವರಿಸುತ್ತಾ ಕೆಳಗಿಳಿಯುತ್ತಿದ್ದ ಅದು, ದೂರದಿಂದ ನಮಗೆ ಲಾವಾದ ಹಾಗೆಯೇ ಕಾಣುತ್ತಿತ್ತು. ಬಹುಶಃ ಯಾರೋ ಹಳ್ಳಿಗರು ಸೇದಿ ಎಸೆದ ಬೀಡಿಯಿಂದ ಹೊತ್ತಿದ್ದೋ ಅಥವಾ ಯಾರೋ ಬೇಕೆಂದೇ ಹಚ್ಚಿ ಹೋದದ್ದೋ ಇರಬೇಕು. ಹುಲ್ಲು ಒಣಗಿರುವ ಈ ಶಿಶಿರದ ಕಾಲದಲ್ಲಿ ಜನ ಹೀಗೆ ಬೇಕೆಂದೇ ಬೆಂಕಿ ಹಾಕುವುದುಂಟು. ಆಗ ಒಣಹುಲ್ಲೆಲ್ಲ ಉರಿದುಹೋಗಿ, ಬರುವ ಮಳೆಗಾಲದಲ್ಲಿ ಹೊಸ ಹುಲ್ಲು ಪುಷ್ಕಳವಾಗಿ ಮೊಳೆತು ಚಿಗುರಿ ಬೆಳೆಯುವುದಕ್ಕೆ ಅನುಕೂಲವಾಗುತ್ತದೆ. ಮುಂದಿನ ವರ್ಷ ದನಕರುಗಳಿಗೆ ಒಳ್ಳೆಯ ಮೇವು ದೊರೆಯುತ್ತದೆ.

ನಮ್ಮ ಮನೆಯ ಹುಲ್ಲಿನ ಹಿತ್ತಿಲಿಗೆ ಪ್ರತಿವರ್ಷ ಅಪ್ಪ ಮಳೆಗಾಲ ಹಿಡಿಯುವುದಕ್ಕೂ ಮುನ್ನ ಒಮ್ಮೆ ಹೀಗೇ ಬೆಂಕಿ ಹಾಕಿ ಸುಡುತ್ತಿದ್ದುದು ನೆನಪಾಗುತ್ತಿದೆ... ಬೆಂಕಿ ಹಾಕಿದಾಗ, ಅದು ಅಲ್ಲಲ್ಲಿದ್ದ ಗೇರುಗಿಡಗಳ ಬಳಿ ಹೋಗದಂತೆ, ಹಿತ್ತಿಲ ಬೇಲಿಗೆ ಹೊತ್ತಿಕೊಳ್ಳದಂತೆ ಮತ್ತು ಪಕ್ಕದ ಮನೆಯ ಹಿತ್ತಿಲಿಗೆ ಹಾಯದಂತೆ, ಹಸಿರು ಸೊಪ್ಪಿನ ಚಂಡೆ ಹಿಡಿದು ಸಂರಕ್ಷಿಸುವ ಕೆಲಸ ನನ್ನದಾಗಿತ್ತು. ಸಿಕ್ಕಿರುವ ಈ ಜವಾಬ್ದಾರಿಯಿಂದಾಗಿ ನನಗೆ ಖುಶಿಯೋ ಖುಶಿ. ಬೆಂಕಿ ಮೈಗೆ ತಾಗೀತು, ಹುಷಾರು ಅಂತ ಅಮ್ಮ ಮನೆಯಿಂದ ನೂರು ಸಲ ಹೇಳಿ ಕಳುಹಿಸಿರುತ್ತಿದ್ದಳು. ಅಪ್ಪನೂ ಕೂಗಿ ಕೂಗಿ ಎಚ್ಚರಿಸುತ್ತಿದ್ದ. ನಾನು ಮಾತ್ರ ಆವೇಶ ಬಂದವನಂತೆ ಹಸಿರು ಚಂಡೆಯನ್ನು ಹಿಡಿದು ಬೆಂಕಿಯ ಹಿಂದೆಯೇ ಓಡುತ್ತಾ ಬಡಿದು ಬಡಿದು ನಂದಿಸುತ್ತಿದ್ದೆ.

ಕೆಲವೊಮ್ಮೆ, ಇಂತಹ ಬಿರುಬೇಸಗೆ ಕಾಲದ ರಾತ್ರಿಯಲ್ಲಿ, ಇದ್ದಕ್ಕಿದ್ದಂತೆ ನಮ್ಮ ತೋಟದ ಮೇಲಣ ಕಾಡಿಗೆ ಬೆಂಕಿ ಹೊತ್ತಿಕೊಂಡುಬಿಡುತ್ತಿತ್ತು. ಆ ಕಾಡಿನ ಬೆಂಕಿಯನ್ನು ನಾವು ‘ಗುಡ್ಡೆ ಗರಕು’ ಅಂತ ಕರೆಯುತ್ತಿದ್ದೆವು. ಆಗ ಮೈಲುಗಳವರೆಗೂ ತೇಲಿಬರುತ್ತಿದ್ದ ಆ ಒಣಗಿದ ಹುಲ್ಲು-ಸೊಪ್ಪುಗಳು ಸುಟ್ಟ ವಾಸನೆಗೆ ಊರವರೆಲ್ಲ ಎಚ್ಚೆತ್ತುಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ “ಹೋಯ್, ಸೊಪ್ಪಿನ್ ಬೆಟ್ಟಕ್ಕೆ ಬೆಂಕಿ ಬಿದ್ದಿದು. ನೋಡಿ ಅಲ್ಲಿ, ಆಚೆ ದಿಂಬದಲ್ಲಿ ಹೆಂಗೆ ಕೆಂಪಗೆ ಕಾಣ್ತಾ ಇದ್ದು.. ಎಲ್ಲಾ ನೀರು ತಗಂಡು ಹೊರಡಿ” ಎಂದು ಊರವರೆಲ್ಲ ಕೂಗುತ್ತ-ಕಿರುಚಾಡುತ್ತಾ, ಗುಡ್ಡದ ಕಡೆ ಓಡುತ್ತಿದ್ದರು. ನಾವೂ ಕೊಡಪಾನದ ತುಂಬ ನೀರು ಹಿಡಿದು, ಕೈಗೊಂದು ಕತ್ತಿ ತೆಗೆದುಕೊಂಡು ಓಡುತ್ತಿದ್ದೆವು. ಬೆಂಕಿ ಬೆಟ್ಟದಿಂದ ಕೆಳಗಿಳಿದು ನಮ್ಮ ಅಡಕೆ ತೋಟಗಳ ಬಳಿ ಬರುವುದರೊಳಗೆ ಆರಿಸಬೇಕಿರುತ್ತಿತ್ತು. ಜೋರಾಗಿ ಗಾಳಿಯೇನಾದರೂ ಬೀಸುತ್ತಿದ್ದರೆ ಬೆಂಕಿ ಅತಿ ವೇಗವಾಗಿ ಹಬ್ಬುತ್ತಿತ್ತು. ಕತ್ತಲೆಯಲ್ಲಿನ ಬೆಂಕಿಯ ಜತೆಗಿನ ಹೋರಾಟದ ಆ ನೋಟ ಭೀಷಣವಾಗಿರುತ್ತಿತ್ತು.

ನನಗೆ ನಿದ್ರೆ ಬರುತ್ತಿರುವುದರಿಂದಲೋ ಏನೋ, ಆಕಾಶಪರದೆಯ ಮೇಲೆ ಮೂಡಿದ್ದ ಬೆಟ್ಟದ ಬೆಂಕಿ, ಬೀಳುತ್ತಿರುವ ಭಾರೀ ಇಬ್ಬನಿಗೆ ಆರಿ ತಣ್ಣಗಾಗುತ್ತಿದೆ. ಈಗ ಬರೀ ನಕ್ಷತ್ರಗಳಿಗೆ ಹೊತ್ತಿಕೊಂಡಿರುವ ಬೆಂಕಿ ಉಳಿದಿದ್ದು, ಅವೆಲ್ಲ ಕೆಂಪಕೆಂಪಗೆ ಹೊಳೆಯುತ್ತಿವೆ. ಯಾವಾಗ ಆರುತ್ತವೋ ಅವು, ನೋಡಿ ನೋಡಿ ನನ್ನ ಕಣ್ಣು ಉರಿಯುತ್ತಿದೆ. ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಬೀಳಲಿರುವ- ನನ್ನ ಕಣ್ಣಿಗೇ ಬೆಂಕಿ ಹೊತ್ತಿ ಧಗಧಗಿಸುತ್ತಿರುವ ಕನಸಿಗಾಗಿ -ನಾನೀಗ ನಿದ್ರೆ ಮಾಡಲೇಬೇಕಿದೆ.

ಎಷ್ಟೋ ಸಮಯ ಕಳೆದಿರಬಹುದು. ಎಷ್ಟೆಂದರೆ, ಚಾರಣದ ಸುಸ್ತೆಲ್ಲ ಕಳೆದು ಹೋಗುವಷ್ಟು ಸಮಯ. ಮೈಮರೆತು ನಿದ್ರೆ ಮಾಡಿಬಿಟ್ಟಿದ್ದೇನೆ. “ದೋಸ್ತಾ, ದೋಸ್ತಾ” ಪಕ್ಕದ ಗೆಳೆಯ ತಟ್ಟಿ ಎಬ್ಬಿಸುತ್ತಿದ್ದಾನೆ. ಕಣ್ಬಿಡುತ್ತಿದ್ದೇನೆ. ಎದುರಿನ ಆಕಾಶದ ಬಣ್ಣವೇ ಬದಲಾಗಿದೆ ಈಗ. ಯಾರೋ ಕಲೆಗಾರ ಮೂಡಣ ದಿಕ್ಕಿಗೆ ನೇತುಬಿಟ್ಟಿರುವ ಕೆಂಪು-ಹಳದಿ ಬಣ್ಣಗಳ ಜವನಿಕೆಯಲ್ಲಿ ಮೂಡಿ ಬರುತ್ತಿದ್ದಾನೆ ಅಂವ: ಖದೀಮ ಸೂರ್ಯ. ಶುದ್ಧ ಗುಂಡಗಿದ್ದಾನೆ. ಪರದೇಶದ ಚೆಂದುಳ್ಳಿ ಚೆಲುವೆಯರ ಸಂಗಡ ಚೆಲ್ಲಾಟವಾಡಿ ಬಂದವ ಬೆಳ್ಳಗೆ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿದ್ದಾನೆ. ಪಕ್ಕದ ಬೆಟ್ಟವನ್ನು ನೋಡಿದರೆ ಅಲ್ಲಿ ಬೆಂಕಿಯಿಲ್ಲ. ಎದುರಿಗೆ ನಾವು ಮಾಡಿದ್ದ ಕ್ಯಾಂಪ್‌ಫೈರ್ ಇಲ್ಲ. ಮೇಲೆ ಕೆಂಪಗೆ ಉರಿಯುತ್ತಿದ್ದ ತಾರೆಗಳಿಲ್ಲ. ನನ್ನ ಕಣ್ಣಲ್ಲೀಗ ಉರಿಯಿಲ್ಲ. ನಾನು ನಿದ್ರಿಸಿದ್ದಾಗ ಎಲ್ಲವನ್ನೂ ನುಂಗಿಬಿಟ್ಟನೇ ಈ ಜಾದೂಗಾರ? ಇಂತಹ ಸೂರ್ಯೋದಯವನ್ನು ಕಣ್ಣಾರೆ ಕಾಣದೆ ಯಾವ ಕುವೆಂಪು ತಾನೇ ಬರೆದಾರು ಹಾಗೆ ನಾಯಿಗುತ್ತಿ ಮತ್ತು ತಿಮ್ಮಿ ಕಂಡ ದೃಶ್ಯದ ವರ್ಣನೆಯನ್ನು ‘ಮಲೆಗಳಲ್ಲಿ ಮದುಮಗಳು’ ಎಂಬ ಕಾದಂಬರಿಯಲ್ಲಿ? ಅಥವಾ ಕಾಣದೆಯೂ ಬರೆಯಬಲ್ಲವರಾಗಿದ್ದರು ಎಂತಲೇ ಅವರು ರಸ‌ಋಷಿಯೇ?

“ಬಿಸಿಲು ಏರುವುದರೊಳಗೆ ಕೆಳಗಿಳಿದುಕೊಳ್ಳಬೇಕು. ಅದಿಲ್ಲದಿದ್ದರೆ ಆಗುವುದೇ ಇಲ್ಲ ಆಮೇಲೆ” ಪ್ರವೀಣ ಹೆದರಿಸಿದ. ಬೆಳಗಿನ ತಿಂಡಿಗೆಂದೇ ತಂದಿದ್ದ ಕುಟ್ಟವಲಕ್ಕಿಯನ್ನು ತಿಂದು ನಾವು ನೀರು ಕುಡಿದೆವು. ಇನ್ನೂ ಸಾರಾಯಿಯ ಅಮೃತಲೋಕದಲ್ಲಿ ತೇಲುತ್ತ ನಿದ್ದೆ ಹೊಡೆಯುತ್ತಿದ್ದ ಗೈಡುಗಳು ಮೈ ಮುರಿಯುತ್ತಾ ಎದ್ದರು. ಸ್ಲೀಪಿಂಗ್ ಬ್ಯಾಗುಗಳನ್ನು ಮಡಿಸಿ, ದೊಡ್ಡ ಬ್ಯಾಗುಗಳನ್ನು ಹೆಗಲಿಗೇರಿಸಿ ನಾವು ಅವರೋಹಣಕ್ಕಣಿಯಾದೆವು.

ಕ್ಯಾಂಪ್‌ಫೈರು ಸೃಷ್ಟಿಸಿದ್ದ ಬೂದಿಯ ಗುಡ್ಡೆಯನ್ನೊಮ್ಮೆ ಕಣ್ತುಂಬ ನೋಡಿ, ಸುಟ್ಟು ಕಪ್ಪಗಾಗಿದ್ದ ಪಕ್ಕದ ಬೆಟ್ಟದ ಮೇಲ್ಮೈಯನ್ನೊಮ್ಮೆ ಕಡೆಗಣ್ಣಿನಿಂದ ನಿರುಕಿಸಿ, ತಾರೆಗಳಿಲ್ಲದ ಆಕಾಶದ ದಿಗಂತದೆಡೆಗೆ ನಡೆಯುವವನಂತೆ, ಬೆಟ್ಟದ ಇಳಿಜಾರಿನಲ್ಲಿ ಹೆಜ್ಜೆ ಎತ್ತಿಡುತ್ತಿದ್ದೇನೆ. ಬೆಂಕಿಯುಂಡೆಯಂತಾಗುತ್ತಿರುವ ಪಾಪಿ ಸೂರ್ಯ ಹಿಂದಿನಿಂದ ಗಹಗಹಿಸಿ ನಗುತ್ತಿದ್ದಾನೆ. ಇನ್ನೇನು, ಮೂರ್ನಾಲ್ಕು ತಾಸುಗಳಲ್ಲಿ ನಾವು ಕೆಳಗಿರುತ್ತೇವೆ. ಮತ್ತೆ ನಮ್ಮ ಊರು, ಕೇರಿ, ಹೆಸರು, ಮರೆತುಹೋಗಿದ್ದ ಅದೆಷ್ಟೋ ಕೊಸರುಗಳು. ಆದರೂ ಇಷ್ಟು ಹೊತ್ತಾದರೂ ಇವನ್ನೆಲ್ಲ ಮರೆತಿದ್ದೆನಲ್ಲ ಮಾರಾಯ, ಚಾರಣದ ಹಾದಿಗೊಂದು ನಮಸ್ಕಾರ!

ಮತ್ತೆ ಹೇಗಿದ್ದೀ? ಯಾವಾಗ ಸಿಗುತ್ತೀ? ಪತ್ರ ಬರೆ. ಸಧ್ಯಕ್ಕೆ, ಟಾಟಾ...

(೨೬ನೇ ಜನವರಿ ೨೦೦೯)

ಗಯ್ಸ್, ಲಾಸ್ಟ್ ಟ್ರೆಕ್ ಹೋಗ್ಬಂದು ಆರ್ ತಿಂಗ್ಳ ಮೇಲಾತು. ಎಂತ ಮಾಡ್ತಾ ಇದ್ದಿ? ವೈನಾಟ್ ಅ ಮಾನ್ಸೂನ್ ಟ್ರೆಕ್? ;)

18 comments:

Archu said...

too good sush !
cheers,
archana

ಅನಂತ said...

ಸುಶ್ರುತ.. ಸುಪರ್ರ್,ಎಂದಿನಂತೆ.. ಮೊದಲನೇ ಪ್ಯಾರಾ ಅಂತೂ ತುಂಬಾ ಇಷ್ಟ ಆಯ್ತು.. :)

ಟಿ ಜಿ ಶ್ರೀನಿಧಿ said...

ಕಾಡ್ಗಿಚ್ಚಿನ ಚಿತ್ರ ನೋಡಿ ಬೇಜಾರಾಯ್ತು. ಇದೇ ರೀತಿ ಜನ್ರು ಹಚ್ಚುವ ಬೆಂಕಿ ಪ್ರತಿವರ್ಷ ನಮ್ಮ ಕಾಡುಗಳಿಗೆ ಹಿಂಸೆಕೊಡುತ್ತೆ... ಯೋಚ್ನೆ ಮಾಡ್ಕೊಳೋಕ್ಕೂ ಆಗದಷ್ಟು ಡಿಸಾಸ್ಟ್ರಸ್ ಅದು - ಮೊಲದಿಂದ ಹಿಡಿದು ಹುಲಿಮರಿಯ ತನಕ ಅದೆಷ್ಟೋ ಪ್ರಾಣಿಗಳು ಸತ್ತೋಗತ್ವೆ ಪಾಪ!!

ಅಂದಹಾಗೆ ಬರಹ ಚೆನ್ನಾಗಿದೆ. ನಾವೂ ಟ್ರೆಕ್ ಹೋಗಿಬಂದು ಆರುತಿಂಗಳಾಯ್ತು... ಬೇಗ ಪ್ಲಾನ್ ಮಾಡಬೇಕು! :-)

ರಾಜೇಶ್ ನಾಯ್ಕ said...

ವಿಶಿಷ್ಟ ರೀತಿಯ ಚಾರಣಾನುಭವ ಲೇಖನ. ಬೆಟ್ಟದಿಂದ ಬಂದ ಪತ್ರ ವೆರಿ ನೈಸ್.

shivu said...

ಸುಶ್ರುತಾ,

ವಿಭಿನ್ನ ಶೈಲಿಯ ಬರವಣಿಗೆ...ಮನಸೆಳೆಯಿತು...

ಧನ್ಯವಾದಗಳು.

Anonymous said...

ಗಯ್ಸ್ anta bardiddu GAYS anta kanta ide !

- PHK

ಸುಶ್ರುತ ದೊಡ್ಡೇರಿ said...

Thank you everybody!

TGS,
ಬೇಜಾರಾಯ್ತು ಶ್ರೀನಿಧಿ.. ಇದು ಚರ್ಚಾರ್ಹ ವಿಷಯ ಅನ್ಸುತ್ತೆ ನಂಗೆ..

PHK,
ಹೆಹೆ! ಎಲ್ಲಾ ಹೈಕೋರ್ಟ್ ಆರ್ಡರ್ ಪರಿಣಾಮ. :D

umesh desai said...

ಸುಶ್ರುತ ಒಳ್ಳೆಯ ಬರವಣಿಗೆ ನಾವು ಬಯಲುಸೀಮಿ ಜನ ಕಾಡು ದೂರದಿಂದ ನೋಡಿ ಗೊತ್ತು ಇನ್ನು ಟ್ರೆಕಿಂಗ ಎಲ್ಲ
ಅದು ಬರೀ ಕನಸು ಮಾತ್ರ ಈಗ ನಿಮ್ಮ ಬರಹದಲ್ಲಿ ಒಂಥರಾ ಅಪ್ಯಾಯಮಾನತೆ ಇದೆ...

sunaath said...

ಸುಶ್ರುತ,
ಬೆಟ್ಟದ ತುದಿಯಲ್ಲಿ ಚಾರಣ ಮಾಡುತ್ತಿದ್ದಾಗಲೂ ನಿಮ್ಮ ಕವಿಹೃದಯ ಪಿಸುಗುಡುತ್ತಲೇ ಇರುವದು ಖುಶಿಯ ಸಂಗತಿ.
("ಆದರೆ ಆತ ಬುದ್ಧಿವಂತ: ಬೆಳ್ಳಿ ಚಂದಿರನನ್ನೂ ಕೋಟಿತಾರೆಗಳನ್ನೂ ನನ್ನ ಕಾವಲಿಗಿಟ್ಟೇ ಹೋಗುತ್ತಾನೆ ಪ್ರತಿದಿನ. ಇವುಗಳಿಂದ ತಪ್ಪಿಸಿಕೊಳ್ಳುವುದಿದೆಯೇ?")
Anyway,ಕಾಡಿನ ಬೆಂಕಿಯ ಬಗೆಗೆ ಬೇಜಾರಾಯ್ತು.

Anonymous said...

ನಿಮ್ಮ 'ಮೌನಗಾಳ'ದಲ್ಲಿ ಸಿಲುಕಿದವರಲ್ಲಿ ನಾನೂ ಒಬ್ಬಳು! ಸಿಲುಕಲು ಕಾರಣ ನಿಮ್ಮ ಬರವಣಿಗೆಯ ಶೈಲಿ. ತುಂಬಾ ಚೆನ್ನಾಗಿ, ಡಿಫರೆಂಟಾಗಿ ಬರೀತೀರಿ. ಬ್ಲಾಗ್ ಯಾವಾಗ ಅಪ್‌ಡೇಟ್ ಮಾಡ್ತೀರ ಅಂತ ದಿನಾಲೂ ಕಾದು, ಓದ್ತೇನೆ. ಕಮೆಂಟ್ ಮಾತ್ರ ಇದೇ ಮೊದಲು ಮಾಡ್ತಿರೋದು. ನಿಮ್ಮ ಈ ಟ್ರಕ್ ಅನುಭವವು ತುಂಬಾ ಚೆನ್ನಾಗಿದೆ ಎಂದಿನ ಬರಹದಂತೆ.... ಮುಂದಿನ ಬರಹದ ನಿರೀಕ್ಷೆಯಲ್ಲಿ....

ಶ್ರೀನಿಧಿ.ಡಿ.ಎಸ್ said...

Aug14,15,16.

ಸುಶ್ರುತ ದೊಡ್ಡೇರಿ said...

@ umesh, sunaath,
ಥ್ಯಾಂಕ್ಯೂ ಬೋತ್!

Anonymous,
ಇಷ್ಟೆಲ್ಲ ಹೇಳಿ ಹೆಸರು ಹೇಳದೇ ಹೋದದ್ದಕ್ಕೆ ನಿಮಗೆ ನನ್ನ ಶಾಪವಿರಲಿ. :P

ನಿಧಿ,
ಜೈ!

Anonymous said...

ಅಯ್ಯೋ ಶಾಪ ಹಾಕ್ಬೇಡ್ರೀ....!! ಹೆಸರು ತಾನೆ... ಯಾವಾಗ್ಲೂ 'ಕನಸು' ಕಾಣುವವಳು ... 'ಸಪ್ನಾ'....

ಚಿತ್ರಾ said...

ಸುಶ್ರುತ ,
ಬರಹ ಅಂತು ಸೂಪರ್ ! ನಿಜ ಹೇಳವು ಅಂದ್ರೆ ಓದ್ತಾ ಓದ್ತಾ , ಹೊಟ್ಟೆ ಕಿಚ್ಚಾತು ! ಹೀಗೆ ಚಾರಣ ಮಾಡುವ, ಬೆಟ್ಟದ ತಪ್ಪಲಲ್ಲಿ , ಆಕಾಶದಡಿಯಲ್ಲಿ ನಕ್ಷತ್ರಗಳನ್ನೆನಿಸುತ್ತಾ ಮಲಗುವ ಭಾಗ್ಯಸಿಕ್ಕಿದ್ದಿಲ್ಯಲಾ ಅಂತ !
ಹೀಗೆ ಹೊಟ್ಟೆ ಉರಿಸ್ತಾ ಇರು ಮಾರಾಯ !

ಮುತ್ತುಮಣಿ said...

ತುಂಬಾ ಸೊಗಸಾಗಿದೆ ಲೇಖನ. ನನಗೊಂದು ಮಾತು ನೆನಪಾಗ್ತಿದೆ...

ಹಾಲು ಬಗ್ಗೆ ಕೇಳುವವರು ಸ್ವಲ್ಪ ಜನ, ಹಾಲನ್ನು ನೋಡಿದವರು ಸ್ವಲ್ಪ ಜನ, ಹಾಲನ್ನು ಕುಡಿದವರು ಎಲ್ಲೋ ಕೆಲವರು ಅದೃಷ್ಟವಂತರು!

ಹಾಗೇ, ಹಾಲಿನ ಬಗ್ಗೆ ಓದುವವರು ಸ್ವಲ್ಪ ಜನ, ನನ್ನ ಹಾಗೆ!

chitra said...

ಸುಶ್ರುತ ಅವರೇ,

ನಿಜಕ್ಕೂ ಇಷ್ಟ ಆಯಿತು. ನಿಮ್ಮ ಲೇಖನ ಓದಿ ನಮ್ಮ ಚಾರಣದ ಬಗ್ಗೆ ನೆನಪಾಯ್ತು. ಇನ್ನಷ್ಟು ಚಾರಣಗಳನ್ನು ಮಾಡಬೇಕೆನ್ನಿಸಿತು. ಒಂದಷ್ಟು ಚಾರಣ ಮಾಡಿದ ವಿಷಯಗಳು ಇಲ್ಲಿ prasca.blogspot.com ಗೆ ಭೇಟಿ ಕೊಡಿ. (ಇದು ನಮ್ಮ ಯಜಮಾನರ ತಾಣ).

ಕಮಲಪಿ೦೯ / ಚಿತ್ರ

ಇಳಾ said...

please see http://ilaone.blogspot.com

ಸುಶ್ರುತ ದೊಡ್ಡೇರಿ said...

@ ಸಪ್ನಾ,
ಥ್ಯಾಂಕ್ಯೂ. ಶಾಪ ವಾಪಸು ತಗೊಳ್ತೇನೆ. ನೀವು ಕನಸು ಕಾಣ್ತಲೇ ಇರಿ. :-)

ಚಿತ್ರಾ,
ನೀ ಹೇಳಿದ್ಮೇಲೆ ಸಯ್ಯಿ. ಉರ್ಸ್ತಾನೇ ಇರ್ತಿ. :-)

ಮುತ್ತುಮಣಿ,
ಏನ್ರೀ ಅದು? ಒಳ್ಳೇ ಕವಿತೆ ಥರ ಡಿಫಿಕಲ್ಟ್ ಡಿಫಿಕಲ್ಟ್ ಆಗಿದೆ?

chitra,
ನಿಮ್ ಯಜಮಾನ್ರ ಬ್ಲಾಗು ನೋಡ್ತಿರ್ತೀನ್ರಿ.. ಬಲು ಚಂದ ಬರೀತಾರೆ ಅವ್ರು..

ಇಳೆ,
ಓಕೆ. :-)