Monday, July 13, 2009

ಪ್ರಣತಿಯಿಂದ ಗಮಕ ಸುಧಾ ಧಾರೆ

"ಶ್ರೀssss ವನಿತೆಯರಸನೆ..." ಎಂದು ಹೊಸಬಾಳೆ ಸೀತಾರಾಮರಾಯರು ತಮ್ಮ ಸಿರಿಕಂಠದಲ್ಲಿ ವಾಚನ ಶುರು ಮಾಡಿದರೆಂದರೆ, ಲಕ್ಷ್ಮಕ್ಕನೊಂದಿಗೆ ಗಟ್ಟಿದನಿಯಲ್ಲಿ ಮಧ್ಯಾಹ್ನದ ಅಡುಗೆಯ ಬಗ್ಗೆ ಮಾತಾಡುತ್ತಿದ್ದ ಗಂಗಕ್ಕ, ಸುಬ್ಬಣ್ಣನ ಬಳಿ ಅಡಿಕೆ ಧಾರಣೆ ವಿಷಯ ಕೇಳುತ್ತಿದ್ದ ರವಿಯಣ್ಣ, ಚಡ್ಡಿ ಎಳೆದ ಅಂತ ರಾಘುವನ್ನು ಹೊಡೆಯಲು ಹೋಗುತ್ತಿದ್ದ ಶಶಾಂಕ ಇತ್ಯಾದಿಯೆಲ್ಲರನ್ನೂ ಒಳಗೊಂಡ ಸಭೆ, ತಕ್ಷಣ ಸ್ತಬ್ಧವಾಗುತ್ತಿತ್ತು. ಶ್ರುತಿಪೆಟ್ಟಿಗೆಯ ಗುಂಯ್‌ಗುಡುವಿಕೆಗೆ ದನಿ ಹೊಂದಿಸಿಕೊಳ್ಳುತ್ತ ಸೀತಾರಾಮರಾಯರು ಮುಂದುವರೆಸುತ್ತಿದ್ದರು:

"...ವಿಮಲ ರಾಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರ ಧಾತಾರ
ರಾವಣಾಸುರ ಮಥನ ಶ್ರವಣ ಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜಗವ ಗದುಗಿನ ವೀರನಾರಯಣ|

-ಎಂಬಲ್ಲಿಗೆ ಒಂದು ಕೆಮ್ಮು, ರಾಯರ ಪಕ್ಕ ವ್ಯಾಖ್ಯಾನಕ್ಕೆಂದು ಕೂತಿರುತ್ತಿದ್ದ ಸಾಗರದ ಮಧ್ಯಸ್ತರಿಂದ!

ಅದು ನಮ್ಮೂರಿನ ದೇವಸ್ಥಾನದ ಪ್ರಾಂಗಣ. ನಮ್ಮೂರಿನದು ಶ್ರೀಕೃಷ್ಣನ ದೇವಸ್ಥಾನವಾದ್ದರಿಂದ, ಪ್ರತಿವರ್ಷದ ಕೃಷ್ಣ ಜನ್ಮಾಷ್ಟಮಿ ಅದ್ದೂರಿಯಾಗಿ ನಡೆಯುತ್ತಿತ್ತು. ಅಷ್ಟಮಿಯ ಮರುದಿನ, ಕೃಷ್ಣ ಜಯಂತಿಯಂದು ಸಂಜೆ, ಏನಾದರೂ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತಿತ್ತು. ಸಾಮಾನ್ಯವಾಗಿ ಅದು 'ಗಮಕ ವಾಚನ ಮತ್ತು ವ್ಯಾಖ್ಯಾನ' ಕಾರ್ಯಕ್ರಮವೇ ಆಗಿರುತ್ತಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ಗಮಕಿ ಹೊಸಬಾಳೆ ಸೀತಾರಾಮರಾಯರಿಂದ ಗಮಕ ವಾಚನ ಮತ್ತು ಸಾಗರದ ನೀ.ನಾ. ಮಧ್ಯಸ್ತರಿಂದ ಅದರ ವ್ಯಾಖ್ಯಾನ. ನಮ್ಮ ಮತ್ತು ಅಕ್ಕಪಕ್ಕದ ಗ್ರಾಮಸ್ಥರನ್ನೊಳಗೊಂಡ ಸುಮಾರು ನೂರು ಪ್ರೇಕ್ಷಕರು ಆ ಕಾರ್ಯಕ್ರಮದಲ್ಲಿ ಇರುತ್ತಿದ್ದರು. ಚಿಕ್ಕ ಮಕ್ಕಳಾಗಿದ್ದ ನಾವು, ಕುಮಾರವ್ಯಾಸನ 'ಕರ್ಣಾಟ ಭಾರತ ಕಥಾಮಂಜರಿ'ಯ ಅನೇಕ ಭಾಗಗಳನ್ನು ಕೇಳಿದ್ದು ಹಾಗೆ.

ಆಮೇಲೆ ಒಂದೆರಡು ವರ್ಷ, ಕೆರೆಕೊಪ್ಪದ ನರಹರಿ ಶರ್ಮರ ವಾಚನ ಮತ್ತು ನಿಸರಾಣಿ ರಾಮಚಂದ್ರರ ವ್ಯಾಖ್ಯಾನದಲ್ಲಿ ಗಮಕ ಕಾರ್ಯಕ್ರಮ ನಡೆಯಿತು. ಈ ಹೊಸ-ಯುವ ಜೋಡಿಯನ್ನು ಗ್ರಾಮಸ್ಥರು ಮೆಚ್ಚಿಕೊಂಡರಾದರೂ, ಎಷ್ಟೋ ವರ್ಷಗಳಿಂದ ಗಮಕ ಕಾರ್ಯಕ್ರಮವನ್ನೇ ಕೇಳೀ ಕೇಳಿ ಬೇಸರ ಬಂದಿತ್ತು. ಹೀಗಾಗಿ, ಗಮಕದ ಬದಲು ಈಗ ಕೆಲ ವರ್ಷಗಳಿಂದ ಬೇರೆ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮ ನಮ್ಮೂರಿನ ದೇವಸ್ಥಾನದಲ್ಲಿ ನಡೆಯುತ್ತಿದೆ.

* * *

ನಾನು ಹೋಗುತ್ತಿದ್ದ ನಿಸರಾಣಿ ಹೈಸ್ಕೂಲಿನಲ್ಲಿ, ಪಠ್ಯೇತರ ಚಟುವಟಿಕೆಗಳಿಗೆ ಸಾಕಷ್ಟು ಮಹತ್ವ ಕೊಡುತ್ತಿದ್ದರು. ಅಂದರೆ, ಮಕ್ಕಳಲ್ಲಿರುವ ಬೇರೆ ಬೇರೆ ಪ್ರತಿಭೆಗಳನ್ನು ಹೊರತೆಗೆಯಲು ಅನೇಕ ಕಾರ್ಯಕ್ರಮಗಳು - ಸ್ಪರ್ಧೆಗಳು ಅಲ್ಲಿ ನಡೆಯುತ್ತಿದ್ದವು. ಅದರಲ್ಲಿ ಗಮಕ ತರಗತಿಯೂ ಒಂದು. 'ಗಮಕ ಕಲಾ ಪರಿಷತ್'ನ ಆಶ್ರಯದಲ್ಲಿ, ಆಸಕ್ತ ವಿದ್ಯಾರ್ಥಿಗಳಿಗೆ ಸುಮಾರು ಎರಡು ತಿಂಗಳುಗಳ ಗಮಕ ತರಗತಿ ಮತ್ತು ಕೊನೆಯಲ್ಲೊಂದು ಪರೀಕ್ಷೆ ಇರುತ್ತಿತ್ತು. ನರಹರಿ ಶರ್ಮರೇ ತರಗತಿ ತೆಗೆದುಕೊಳ್ಳುತ್ತಿದ್ದುದು. ನಾನೂ ಸೇರಿದ್ದೆ. ಹೇಳಿಕೊಳ್ಳಬಹುದಾದ ಒಂದು ಖುಶಿಯ ವಿಷಯ ಎಂದರೆ, ಆ ವರ್ಷದ ಗಮಕ ಪರೀಕ್ಷೆಯಲ್ಲಿ ನಾನೇ ಶಾಲೆಗೆ ಪ್ರಥಮ ಸ್ಥಾನದಲ್ಲಿ ಪಾಸಾಗಿದ್ದೆ! ಅದಾದಮೇಲೆ, ಎಸ್ಸೆಸ್ಸೆನ್ ಮೇಡಂ ಕ್ಲಾಸಿನಲ್ಲಿ ನನ್ನ ಕಾಲೆಳೆಯ ಬೇಕೆಂದೆನಿಸಿದಾಗಲೆಲ್ಲ 'ಸುಶ್ರುತ, ಒಂದು ಭಾವಗೀತೆ ಹಾಡೋ' ಅಂತಲೋ ಚಿತ್ರಗೀತೆ ಹಾಡೋ ಅಂತಲೋ ಜನಪದ ಗೀತೆ ಹಾಡೋ ಅಂತಲೋ ಹೇಳುತ್ತಿದ್ದರು. ಅದು ಹೇಗೋ ಗಮಕದಲ್ಲೊಂದು ಬಾಯ್ಕಳೆದು ಹಾಡಿ ಸರ್ಟಿಫಿಕೇಟು ಗಿಟ್ಟಿಸಿದ್ದು ಬಿಟ್ಟರೆ, ಈ ಭಾವಗೀತೆಯನ್ನಾಗಲೀ ಚಿತ್ರಗೀತೆಯನ್ನಾಗಲೀ ಜನಪದ ಗೀತೆಯನ್ನಾಗಲೀ ನಾನು ಬಾತ್‌ರೂಮು ಮತ್ತು ಏಕಾಂತದಲ್ಲಿ ಬಿಟ್ಟು ಬೇರೆಲ್ಲೂ ಹಾಡಿದ್ದೇ ಇಲ್ಲ. ಒಟ್ಟಿನಲ್ಲಿ ಎಸ್ಸೆಸ್ಸೆನ್ ಮೇಡಂರ ತಮಾಷೆಯಿಂದಾಗಿ ಕ್ಲಾಸು ಕಿಸಕಿಸ ನಗೆಯಲ್ಲಿ ಮುಳುಗುತ್ತಿತ್ತು.

* * *

ಈಗ ಇವೆಲ್ಲ ನೆನಪಾದದ್ದು ಪ್ರಣತಿಯಿಂದ ನಾವು ಆಯೋಜಿಸಿರುವ 'ಗಮಕ ಸುಧಾ ಧಾರೆ' ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸುವ ವಿಷಯ ಬಂದಾಗ. ಹೌದು, ಬರುವ ಶನಿವಾರ- ಜುಲೈ 18ರ ಸಂಜೆ 5 ಗಂಟೆಗೆ, ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ, ರಸಋಷಿ ಕುವೆಂಪು ನೆನಪಿನಲ್ಲಿ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇತ್ತೀಚೆಗೆ ವಿರಳವಾಗುತ್ತಿರುವ ಈ ಕಲೆಯನ್ನು ಮತ್ತೆ ಪ್ರಚುರಪಡಿಸುವುದು ಪ್ರಣತಿಯ ಧ್ಯೇಯಗಳಲ್ಲೊಂದಾದ 'ಸಂಸ್ಕೃತಿ'ಯ ಕೆಲಸ. ಪ್ರಣತಿಗೆ ಇದು ಹೆಮ್ಮೆಯ ನಾಲ್ಕನೇ ಕಾರ್ಯಕ್ರಮ.

ಈ ಕಾರ್ಯಕ್ರಮಕ್ಕೆ ನೀವೆಲ್ಲ ಬರಲೇಬೇಕು ಅಂತ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ.




8 comments:

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಣತಿಗೆ ಅಭಿನಂದನೆ. ಕಾರ್ಯಕ್ರಮಕ್ಕೆ ಶುಭಾಶಯ.

umesh desai said...

ಸುಶ್ರುತ ಗಮಕ ಒಂದು ವಿಶಿಷ್ಟ ಕಲೆ..ನಮ್ಮ ಹುಬ್ಬಳ್ಳಿಯಲ್ಲಿ ಹಿರಿಯರಾದ ಬಿಂದುರಾವ್ ದೇಸಾಯಿ ಅವರು ಪ್ರತಿ ವರ್ಷ ಕುಮಾರವ್ಯಾಸ ಭಾರತದ ಹಾಡುಗಾರಿಕೆ, ವ್ಯಾಖ್ಯಾನ ಏರ್ಪಡಿಸುತ್ತಿದ್ದರು. ಇನ್ನು ಶನಿವಾರ ಹಾಜರಾಗಲು ಪ್ರಯತ್ನ ಪಡುವೆ...

Samaagama said...

Hi Sushrutha. It is a great work you all are doing through Pranathi. I am dragged to your blog because of Hosabale Seetaramanna. I am Banadakoppa Savitrakka's(Gamaki) daughter. My name is Jayashree, I am an art Conservator, living in Singapore. May be I know your father but cannot say for sure. Please see my blog http://samaagama.com and also in orkut you can find me.
Good work, keep it up, appi!

Jayashree

Anonymous said...

'ಪ್ರಣತಿ'ಯ ಈ ಉತ್ತಮ 'ಗಮಕ ಸುಧಾಧಾರೆ'ಗೆ ಬರಲಾಗುತ್ತಿಲ್ಲವಲ್ಲ ಎಂದು ಬೇಸರವಾಗ್ತಿದೆ.. :-(( ಬೆಂಗಳೂರಲ್ಲಿದ್ದರೆ ಹುಷಾರಿಲ್ಲದಿದ್ದರೂ ಪರ್ವಾಗಿರ್ಲಿಲ್ಲ ಬರ್ತಿದ್ದೆ.... ಇಲ್ಲಿ ಇದ್ದುಕೊಂಡೇ ಶುಭ ಹಾರೈಸುತ್ತೇನೆ ಪ್ರಣತಿಗೆ....

Sapna

shivu.k said...

ನಾನು ಬರಲು ಪ್ರಯತ್ನಿಸುತ್ತೇನೆ...

Anonymous said...

naanu barukaattaa kaaNte

ಚಿತ್ರಾ said...

ಸುಶ್ರುತ,
ಮತ್ತೆ ನನ್ನ ಶಾಲೆಯ ದಿನಗಳನ್ನು ನೆನಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ನಾನು ಹೈಸ್ಕೂಲ್ ನಲ್ಲಿದ್ದಾಗ ಸ್ವಲ್ಪ ದಿನ ಗಮಕ ಕಲ್ತಿದ್ದಿ. ಪರೀಕ್ಷೆನು ಕಟ್ಟಿ ಪಾಸ್ ಆಗಿದ್ದಿ. ಪರೀಕ್ಷಕರಾಗಿ ಸೀತಾರಾಮ ರಾಯರೇ ಬಂದಿದ್ದು, ಅವರ ಹತ್ತಿರ ' ಅಡ್ಡಿಲ್ಲೆ' ಹೇಳಿಸಿಕ್ಯಂಡಿದ್ದು ಎಲ್ಲ ನೆನಪಾತು. " ಶ್ರೀ ವನಿತೆಯರಸನೆ ..." ಎಂದು ಓದುತ್ತಿದ್ದಂತೆ ಸೀತಾರಾಮರಾಯರ ಕಂಠ ಕಿವಿಯಲ್ಲಿ ಮೊಳಗಿದಂತಾಗಿ ರೋಮಾಂಚನ ಆತು.
ಥ್ಯಾಂಕ್ಸ್ ನಿಂಗೆ

Ragu Kattinakere said...

good luckku