ಬಿದ್ದ ಮೊದಲ ಮಳೆಗೇ ಚಿಗಿತು ಬೆಳೆದು ಚಪ್ಪರವನ್ನೆಲ್ಲ ಹರಡಿ ಹೂವರಳಿಸಿಕೊಂಡು ಪರಾಗಸ್ಪರ್ಶಕ್ಕೆ ಚಿಟ್ಟೆ ಬರುವದನ್ನೇ ಕಾಯುತ್ತಿರುವ ಅವರೆಯ ಬಳ್ಳಿಯ ಅಸಹನೆಯ ಕ್ಷಣ ಇದು. ರಿಸೆಷನ್ನಿನ ಪರಿಣಾಮದಿಂದಾಗಿ ಊರಿಂದ ಬಂದು ಮೂರು ತಿಂಗಳಾದರೂ ಕೆಲಸವೊಂದು ಸಿಗದೇ ಕಂಗಾಲಾಗಿರುವಾಗ, ಮನೆಯಿಂದ ಫೋನಿಸಿದ ಅಪ್ಪ 'ಸಾಕು, ಹಬ್ಬಕ್ಕೆ ಬರಕ್ಕರೆ ಬಟ್ಟೆ ಎಲ್ಲಾ ವಾಪಾಸ್ ತಗಂಡ್ ಬಂದ್ಬಿಡು. ಯಾಕೋ ಗ್ರಹಬಲ ಇದ್ದಂಗಿಲ್ಲೆ ಈಗ. ಇನ್ನೊಂದು ಆರು ತಿಂಗ್ಳು ಬಿಟ್ಟು ಮತ್ತೆ ಟ್ರೈ ಮಾಡ್ಲಕ್ಕಡ' ಎಂದದ್ದಕ್ಕೆ ಬಿಕ್ಕಿ ಬಿಕ್ಕಿ ಅಳುತ್ತಿರುವ ತರುಣನ ಕಣ್ಣೀರಿನ ಹತಾಶ ಕ್ಷಣ ಇದು. ಹೇಳದೇ ಕೇಳದೇ ಮಧ್ಯರಾತ್ರಿಯಲ್ಲಿ ಸುರಿಯಲು ಶುರುವಾದ ಹುಚ್ಚುಮಳೆಗೆ ತೇಲಿಸಿಕೊಂಡು ಹೋದ ತಗ್ಗು ಪ್ರದೇಶದಲ್ಲಿನ ಜೋಪಡಿಯ ಕುಟುಂಬದ ಮಕ್ಕಳ ನಿರ್ಭಾವುಕ ಕಣ್ಣುಗಳಲ್ಲಿ ನಿಂತಿರುವ ಕತ್ತಲೆಯ ಕ್ಷಣ ಇದು. ಮೊದಲು ಸಾಧಾರಣ ನೆಗಡಿ, ಕೆಮ್ಮು ಅಂತ ಅಲಕ್ಷ್ಯ ಮಾಡಿ ಆಮೇಲೆ ಜ್ವರ ಬಂದಾಗ ಮಾತ್ರೆ ನುಂಗಿಸಿ ಆಗಲೂ ವಾಸಿಯಾಗದೇ ಆಸ್ಪತ್ರೆಗೆ ಕರೆದುಕೊಂಡು ಹೋದಾಗ 'ಸಧ್ಯಕ್ಕೆ ಫೀವರ್ ಕೇಸಸ್ ತಗೊಳ್ತಿಲ್ಲ ನಾವು' ಎಂದು ಮುಖವಾಡ ಧರಿಸಿದ ನರ್ಸು ಕೈಚೆಲ್ಲಿದಾಗ ಒಮ್ಮೆ ಗಂಡನನ್ನೂ ಮತ್ತೊಮ್ಮೆ ತನ್ನ ಮಾಂಗಲ್ಯವನ್ನೂ ನೋಡಿಕೊಂಡು ಬೆಚ್ಚಿದ ಗೃಹಿಣಿಯ ಕ್ಷಣ ಇದೂ,
-ಭಾದೃಪದ ಬಂದಿದೆ! ದೇವಲೋಕದಲ್ಲೂ ಆತಂಕದ, ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಭುವಿಯೆಡೆಗೆ ಹೊರಟು ನಿಂತಿರುವ ಗೌರಿ-ಗಣೇಶರನ್ನು ಶಿವ ತಡೆದು ನಿಲ್ಲಿಸಿದ್ದಾನೆ: "ನಿಲ್ಲಿ, ಭೂಲೋಕಕ್ಕೆ ಮಾತ್ರ ಹೋಗಬೇಡಿ. ಅಲ್ಲಿ ಎಚ್ವನ್ ಎನ್ವನ್ ಇದೆ! ನಿಮಗೂ ಬಂದೀತು. ತೀರಾ ಹೋಗಲೇಬೇಕೆಂದಿದ್ದರೆ ಮುಖವಾಡ ಧರಿಸಿ ಹೋಗಿ. ಅದಕ್ಕೆ ಒಂದೇ ತೊಟ್ಟು ನೀಲಗಿರಿ ಎಣ್ಣೆ ಹಾಕಿಕೊಳ್ಳಿ. ಇಲ್ಲದಿದ್ದರೆ ವಾಪಸು ಬರುವಾಗ ಸೋಂಕು ನಿಮ್ಮೊಂದಿಗೇ ದೇವಲೋಕಕ್ಕೂ ಬಂದೀತು!" ತಂದೆ ಎಚ್ಚರಿಸಿದರೂ ವಿನಾಯಕನಿಗೆ ಯೋಚನೆ: ವಿಘ್ನವಿನಾಶಕನಾದ ನಾನೇ ಹೆದರಿ ಕುಳಿತರೆ ಇನ್ನು ಭೂಲೋಕದಲ್ಲಿಹ ಸಾಮಾನ್ಯ ಜನರ ಪಾಡೇನು? ಏನಾದರಾಗಲಿ, ನಾನು ಹೋಗಿಯೇ ತೀರುತ್ತೇನೆ. ಅಲ್ಲದೇ ಮೋದಕ, ಚಕ್ಕುಲಿ ತಿನ್ನದೇ ವರ್ಷವಾಯಿತು. ಭಕ್ತರು ಮಾಡಿಟ್ಟುಕೊಂಡದ್ದು ವೇಸ್ಟಾಗಿ ಡಸ್ಟ್ಬಿನ್ನು ಸೇರುವುದು ತರವಲ್ಲ. ಆದರೂ ಈ ಎಚ್1ಎನ್1 ಬಗ್ಗೆ ಗೂಗಲ್ಲಿನಲ್ಲಿ ಹುಡುಕಿ ತಿಳಿದುಕೊಂಡೇ ಹೋಗೋಣವೆಂದು ಕಂಪ್ಯೂಟರ್ ಮುಂದೆ ಕುಳಿತರೆ, ರಾಕ್ಷಸ ಲೋಕದವರು ಗಣೇಶನ ಸಿಸ್ಟಮ್ಮನ್ನು ಹ್ಯಾಕ್ ಮಾಡಿಬಿಟ್ಟಿದ್ದಾರೆ! ಇದೊಳ್ಳೆ ಫಜೀತಿಗೆ ಬಂತಲ್ಲಪ್ಪಾಂತ ಗಣೇಶ ಛಕ್ಕನೆ ತನ್ನ ಐಫೋನ್ ತೆಗೆದು ಅಶ್ವಿನೀದೇವತೆಗಳಿಗೆ ಫೋನಿಸಿ ಬೇಗನೆ ಬಂದು ಸಿಸ್ಟಮ್ ಸರಿ ಮಾಡಿಕೊಡುವಂತೆ ವಿನಂತಿಸಿಕೊಂಡಿದ್ದಾನೆ.
ಎಲ್ಲ ಸರಿಯಾಗಿ, ಈ ಹಂದಿಜ್ವರವೆಂಬುದು ಒಂದು ಮಾರಣಾಂತಿಕ ಕಾಯಿಲೆಯೆಂಬುದು ಪಕ್ಕಾ ಆಗಿ, ಗಣೇಶ ಮಾಸ್ಕ್ ಧರಿಸಿ ಇಲಿಯನ್ನೇರಿ ಭುವಿಯತ್ತ ಹೊರಟಿದ್ದಾನೆ. ಯಾವುದೋ ಹಳ್ಳಿಯ ಗದ್ದೆಯ ಬದಿಯಲ್ಲಿ ಬಿದ್ದುಕೊಂಡಿದ್ದ ಜೇಡಿಮಣ್ಣು, ಕಲಾವಿದನ ಸ್ಪರ್ಶದಿಂದ ಒಂದು ರೂಪ ಪಡೆದು ಬಣ್ಣ ಬಳಿಸಿಕೊಂಡು ಶಹರಕ್ಕೆ ಬಂದು ಬೀದಿಬದಿಯಲ್ಲಿ ನೀಟಾಗಿ ಸಾಲಿನಲ್ಲಿ ಕುಳಿತು, ಬಿಕರಿಯಾಗಿ ಯಾರದೋ ಮನೆಗೆ ಹೋಗಿ ದೇವರಾಗಿಬಿಡುವ ಪವಿತ್ರ ಕ್ಷಣವನ್ನು ಕಲ್ಪಿಸಿಕೊಳ್ಳುತ್ತಾ ರೋಮಾಂಚಿತವಾಗಿದೆ. ಬೇಳೆಯ ಬೆಲೆ ನೂರು, ಅಕ್ಕಿಯ ಬೆಲೆ ನಲವತ್ತು, ಸಕ್ಕರೆಯ ಬೆಲೆ ಮೂವತ್ತೈದು ಅಂತೆಲ್ಲ ಏರಿದ್ದರೂ ಗ್ರಾಹಕ ಬೆವರುತ್ತಾ ತನ್ನ ಕೈಚೀಲದಲ್ಲಿ ಪುಟ್ಟ ಪುಟ್ಟ ಪೊಟ್ಟಣಗಳಲ್ಲಿ ಎಲ್ಲವನ್ನೂ ಹೊತ್ತು ಮನೆಯ ಕಡೆ ಹೊರಟಿದ್ದಾನೆ. ಕಾಗದಗಳಿಂದ ತನ್ನನ್ನು ಸುತ್ತಿ ಸುತ್ತಿ ಸುತ್ತಿಸಿಕೊಂಡು ಕೂತಿರುವ ಪಟಾಕಿಯ ಮದ್ದು, ಕಿಡಿಯೊಂದು ತಾಕಿದರೆ ಸಾಕು ಸಿಡಿದು ಹೊರಬಂದು ಮುಕ್ತವಾಗಲಿಕ್ಕೆ ಕಾಯುತ್ತಿದೆ. ತಿಂಗಳಿಂದ ಜನರ ಹೊಸಬಟ್ಟೆಗಳನ್ನು ಹೊಲಿಯುವುದರಲ್ಲೇ ಗರ್ಕನಾಗಿರುವ ದರ್ಜಿಗೆ ತನ್ನ ಹೊಲಿಗೆ ಬಿಟ್ಟಿರುವ ಹಳೇ ಪಜಾಮವನ್ನು ಸರಿ ಮಾಡಿಕೊಳ್ಳುವುದಕ್ಕೂ ಬಿಡುವಿಲ್ಲ. ಆರ್ಕೆಸ್ಟ್ರಾಗಳಲ್ಲಿ ಕಿರುಚಲು ಬೃಹತ್ ಧ್ವನಿವರ್ದಕಗಳು ಗಂಟಲು ಸರಿ ಮಾಡಿಕೊಳ್ಳುತ್ತಿವೆ. ಅಕ್ಕಿಹಿಟ್ಟು ನಾದಲ್ಪಟ್ಟು ಮುಟ್ಟಿನಿಂದ ಅಷ್ಟಕೋನ ಹೊಂದಿ ಹೊರಬಂದು ಚಕ್ರಾಕಾರದಲ್ಲಿ ಸುತ್ತಲ್ಪಟ್ಟು ಕುದಿವ ಎಣ್ಣೆಯಲಿ ಕರಿದು ಗರಿಗರಿಯಾಗಿ ಚಕ್ಕುಲಿಯಾಗಿ ಹೊರಹೊಮ್ಮಿ ತಟ್ಟೆಯಲಿ ಜೋಡಿಸಿ ನೈವೇದ್ಯಗಲೆಂದು ಎದುರು ನೋಡುತ್ತಿದೆ. ಬಣ್ಣದ ಕಾಗದಗಳಿಗೆ ಮಂಟಪದ ಕಂಬವನಪ್ಪುವ ಕನಸು, ಗಿಡದಲರಳಿರುವ ಹೂವು-ನೆಲದಿ ಹಬ್ಬಿರುವ ದೂರ್ವೆಗಳಿಗೆ ಬಾಡುವ ಮುನ್ನ ಕರಿವದನನ ಚರಣದಲ್ಲಿರುವ ತವಕ, ಕರ್ಪೂರಕ್ಕೆ ಮಂಗಳಾರತಿ ತಟ್ಟೆಯ ಪ್ರದಕ್ಷಿಣೆಯಲ್ಲೇ ಕರಗಿಹೋಗುವ ಕಾತರ. ಹೇಗೆ ಉಳಿದಾನು ಬಾರದೇ ವಿಘ್ನೇಶ್ವರ?
ಬಾರಿನ ಹುಡುಗನಿಗೆ ವಾರ ರಜೆ ಸಿಕ್ಕಿದೆ. ಊರಿಗೆ ಹೋಗುವ ಮುನ್ನ ಅಪ್ಪನಿಗೊಂದು ಪಂಚೆ, ಅಮ್ಮನಿಗೆ ಸೀರೆ, ತಂಗಿಗೆ ಮಿಡಿ ಕೊಳ್ಳಬೇಕಿದೆ. ಯಾವ ಅಂಗಡಿ ನೋಡಿದರೂ ಡಿಸ್ಕೌಂಟು ಹಾಕಿದ್ದಾರೆ. ಗಾಜಿನ ಬಾಗಿಲನ್ನು ತಳ್ಳಿಕೊಂಡು ಒಳಗೆ ಹೋದರೆ ಒಟ್ಟೊಟ್ಟಿಗೇ ಮುತ್ತಿಕೊಳ್ಳುವ ಸೇಲ್ಸ್ಬಾಯ್ಸ್ 'ಯೆಸ್, ಏನ್ ಬೇಕು ಸರ್?' ಅಂತ ಕೇಳಿದ್ದಾರೆ. ಬೆವರಲೂ ಬಿಡದ ಏಸಿ, ಕಣ್ತಪ್ಪಿಸಲೂ ಬಿಡದ ಕನ್ನಡಿ, ನೆಪಗಳಿಗೂ ಅವಕಾಶ ಕೊಡದಂತೆ ಕಾಡುತ್ತಿರುವ ಸೇಲ್ಸ್ಬಾಯ್ಸ್, ಎಷ್ಟೇ ಡಿಸ್ಕೌಂಟಿದ್ದರೂ ಕೊಳ್ಳಲಾಗದಷ್ಟು ಬೆಲೆ ಕಂಡು ಹುಡುಗ ಕಕ್ಕಾಬಿಕ್ಕಿಯಾಗಿದ್ದಾನೆ. ಕೂಡಿಸಿದ ಹಣವೆಲ್ಲ ಹಬ್ಬವೊಂದಕ್ಕೇ ಖಾಲಿಯಾಗುತ್ತಿರುವುದಕ್ಕೆ ವ್ಯಥೆ ಪಡುತ್ತಿದ್ದಾನೆ. ವಿಘ್ನೇಶ್ವರ ಈಗ ಕಣ್ಣು-ಕಿವಿಗಳಿಗೂ ಮಾಸ್ಕ್ ಏರಿಸಿಕೊಂಡಿದ್ದಾನೆ.
ಅಡಾಪ್ಟರಿಗೆ ಕನೆಕ್ಟಾಗಿರುವ ಯಾರದೋ ಮೊಬೈಲು ಸದ್ದಿಲ್ಲದೇ ಛಾರ್ಜ್ ಆಗುತ್ತಿದೆ. ಯಾರೋ ಹಾಡಿರುವ ಸಿಡಿಗಳು ಡ್ರೈವಿನಲ್ಲಿ ನಿಶ್ಯಬ್ದ ರಿಪ್ ಆಗುತ್ತಿವೆ. ಸಕ್ಕರೆಪಾಕ ಕುಡಿದು ಕುಡಿದು ಜಾಮೂನು ಗರ್ಲ್ಫ್ರೆಂಡಿಗಿಂತ ಸಿಹಿಯಾಗುತ್ತಿದೆ. ಕವಿಯ ಲೇಖನಿಯೊಡಲ ನೀಲಿ ಇಂಕು ಬಿಳೀ ಕಾಗದದ ಮೇಲೆ ಅಚ್ಚಾಗುತ್ತ ಹೋದಹಾಗೇ ಸುಂದರ ಕವಿತೆಯೊಂದು ಪಡಿಮೂಡಿದೆ. ಕಾಡಿನ ಕತ್ತಲಲ್ಲಿ ವ್ಯರ್ಥವಾಗುತ್ತಿರುವ ಮಿಣುಕುಹುಳಗಳ ಬೆಳಕು ನಿದ್ದೆಹೋದ ಮಗುವಿನ ಮುಗುಳ್ನಗೆಯಾಗಿ ಹೊಮ್ಮಿ ತೊಟ್ಟಿಲೆಲ್ಲ ತುಂಬಿಕೊಂಡಿದೆ. ಹುಡುಗಿಯ ಕನಸಿನಲ್ಲಿ ಬಂದ ಹುಡುಗ ಕೈಹಿಡಿದು ಲಾಲ್ಭಾಗಿನ ಕ್ಯಾಮೆರಾಗಳಿಂದಲೂ ತಪ್ಪಿಸಿ ಎಲ್ಲಿಗೋ ಕರೆದೊಯ್ಯುತ್ತಿದ್ದಾನೆ. ಕಲಾಸಿಪಾಳ್ಯದ ಬೀದಿನಾಯಿಗೆ ಯಾರೋ ಸುಳಿದಂತಾಗಿ ಎಚ್ಚರಾಗಿ ಅತ್ತಿತ್ತ ನೋಡುತ್ತಿದೆ. ವಿಘ್ನೇಶ್ವರನನ್ನು ಹೊತ್ತ ಇಲಿಗೆ ಓಡಿ ಓಡಿ ಸುಸ್ತಾಗಿದೆ. "ಇನ್ನೇನು ಸ್ವಲ್ಪ ದೂರ.. ಬಂದೇಬಿಡ್ತು ಭೂಮಿ" ಅಂತ ಆತ ಸಮಾಧಾನ ಮಾಡುತ್ತಿದ್ದಾನೆ.
ಹಬ್ಬದ ಸಂಭ್ರಮ ಎಲ್ಲ ಜೀವಿಗಳಿಗೂ ಹಬ್ಬಲಿ. ಬಂದ ವಿಘ್ನೇಶ್ವರ ಭವದ ಭೀತಿಗಳನ್ನೆಲ್ಲ ಕಳೆಯಲಿ. ಬದುಕುಗಳಿಗೆ ಸಂತಸ ಬೆರೆಯಲಿ.
ಶುಭಾಶಯಗಳು.
19 comments:
ಯಾವ್ದಯ್ಯಾ ಇದು ಹೊಸಾ ರೋಗ ಎಚ್೧ಬಿ೧???
"ಭಾದ್ರಪದ" ಶುಕ್ಲದಾ ಚೌತಿಯಂದು... ಮನೆಮನೆಗೆ ದಯಮಾಡಿ ಹರಸು ಎಂದು :-)
ಚೆನ್ನಾಗಿದೆ ಕಣಣ್ಣ...ನಿಂಗೂ ಶುಭಾಶಯ ಆಯಿತಾ?
-ಧರಿತ್ರಿ
ಸುಶ್ರುತ ಆ ಗಣಪತಿ ಇನ್ನೂ ಬರ್ತಾ ಇದ್ದಾನೆ ಮಾರಾಯ ಆಗಲೇ ಅವನನ್ನು ಹೆದರಿಸಬೇಡ ಏನ್ ಹೇಳಲಿ ನಿನ್ನ ಲೇಖನ ಮರಳು ಮಾಡ್ತದ ಈ ನವಿರು ವಿಡಂಬನೆ ಕಲಾ ಎಲ್ಲಾರಿಗೂ ಬರೂದಿಲ್ಲ ಫ್ಲೂ,ರಿಸೆಶನ್ನು ಅಂತೆಲ್ಲ ಹೇಳಿ ಹಬ್ಬ ಬಿಡ್ತಾರೇನು..ಮಾಡೋಣ
ಹಂಗ ಈ ಸಲ ಅರ್ಜಿಗೆ ಏನಾದರೂ ಅಂಟಸೋಣ(ಅಸಲಿ ಗಾಂಧಿ ನೋಟು....!)
ಸುಂದರ ಬರಹ. ಎಲ್ಲರಿಗೂ ಹಬ್ಬದ ಶುಭಾಶಯಗಳು.
ಹರೀಶಪ್ಪ,
ಹಹಾ! ಥ್ಯಾಂಕ್ಸ್, ತಿದ್ದಿದ್ದಿ. :D
ಸುಶ್ರುತ,
ಈ ಸಲ ಗಣೇಶನಿಗೆ ವಿಡಂಬನೆಯ ರುಚಿಯಾದ ಮೋದಕವನ್ನೇ ತಿನ್ನಿಸಿದರಿ ನೀವು.
H1B1 ಎನ್ನುವ ಹರೀಶರ ತಿದ್ದುಪಡಿ ಮೋದಕದ ಜೊತೆಗೆ ಬೋಂಡಾ ಕೊಟ್ಟಂತಾಗಿದೆ!
ಸುಶ್ರುತ,
ಮೊದಲ ಪ್ಯಾರ ತುಂಬಾ ಇಷ್ಟ ಆತು. ನಿನಗೆ ಗಣೇಶ ಚತುರ್ಥಿಯ ಶುಭಾಶಯಗಳು :)
ತುಂಬಾ ಚೆನ್ನಾಗಿದೆ ಸುಶ್ರುತ ನಿಮ್ಮ ಲೇಖನ.
ಬಾರಯ್ಯ ಲಂಬೋದರ ಬೇರೆಯತೆರನಾಗಿಯೇ ಬಂದಿದೆ .
ಧನ್ಯವಾದಗಳೊಂದಿಗೆ
ತುಂಬಾನೆ ಸ್ಪೆಷಲ್ ಈ ಬರಹ!
ನಿಮಗೂ ಹಬ್ಬದ ಶುಭಾಶಯಗಳು :)
ಚೆನ್ನಾಗಿದೆ ಬರಹ.
ಗಣೇಶನ ಗೂಗಲ್ ಸರ್ಚ್ ಪ್ಯಾರ ಅಂತೂ ಸಖತ್ತಾಗಿದೆ :D
ಹಬ್ಬದ ಶುಭಾಶಯಗಳು :)
ಏಯ್ ಸುಶ್, ಚೆನ್ನಾಗಿದೆ ಕಣೋ ನಿನ್ ಹಾರೈಕೆಯ ಶೈಲಿ. ಗಣೇಶಣ್ಣ ಮಾತ್ರ ಬರ್ತಿದ್ದಾನೋ ಅಥವಾ ಅವ್ನ್ ಅಮ್ಮನೂ ಬರ್ತಿದ್ದಾಳೋ?
ನಿನಗೂ ಹಬ್ಬದ ಶುಭಾಶಯಗಳು, ಊರಿನಲ್ಲಿ ಕಾಯ್ತಿರೋ ಅಪ್ಪ-ಅಮ್ಮನಿಗೂ...
ಹಬ್ಬ, H1N1, ಎಲ್ಲ ಮಿಲಾಯಿಸಿ ಕೊಟ್ಟ ರಸಗವಳ ಚೆನ್ನಾಗಿದೆ.ಗೌರಿ ಗಣೇಶ ಹಬ್ಬದ ಶುಭಾಶಯಗಳು.
ಸುಶ್ರುತ,
ವಾಸ್ತವಕ್ಕೆ ಹಾಸ್ಯದ ಕೋಟಿಂಗ್ ಕೊಟ್ಟು ಬರೆದ ಲೇಖನ ಚೆನಾಗಿದ್ದು ! ಈ ಹೆಚ್ ೧ ಬಿ ೧ ಕಾಲ್ದಾಗೆ , ನೆಮ್ಮದಿಯಾಗಿ ಹಬ್ಬ ಮಾಡ ಹಂಗೂ ಇಲ್ಲೆ ! ಹೊಸಾ ಬಟ್ಟೆ ಜೊತಿಗೆ ಮ್ಯಾಚಿಂಗ್ ಮಾಸ್ಕ್ ಹೊಲಿಸಲಕ್ಕೇನ ಅಲ್ದಾ?
ಮೊನ್ನೆ ಒಂದು ಎಸ್ ಎಂ ಎಸ್ ನೋಡಿದಿ. There was a board infront of American consulate. Please don't apply for H1B1 , This is not a type of Visa ! "
ಸುಶ್ರುತ,
ವಾಸ್ತವಕ್ಕೆ ಹಾಸ್ಯದ ಕೋಟಿಂಗ್ ಕೊಟ್ಟು ಬರೆದ ಲೇಖನ ಚೆನಾಗಿದ್ದು ! ಈ ಹೆಚ್ ೧ ಬಿ ೧ ಕಾಲ್ದಾಗೆ , ನೆಮ್ಮದಿಯಾಗಿ ಹಬ್ಬ ಮಾಡ ಹಂಗೂ ಇಲ್ಲೆ ! ಹೊಸಾ ಬಟ್ಟೆ ಜೊತಿಗೆ ಮ್ಯಾಚಿಂಗ್ ಮಾಸ್ಕ್ ಹೊಲಿಸಲಕ್ಕೇನ ಅಲ್ದಾ?
ಮೊನ್ನೆ ಒಂದು ಎಸ್ ಎಂ ಎಸ್ ನೋಡಿದಿ. There was a board infront of American consulate. Please don't apply for H1N1 , This is not a type of Visa !
( ಮುಂಚಿನ ಕಾಮೆಂಟ್ ನಲ್ಲಿ ' H1B1 ' ಅಂತ ಆಗೋಗಿತ್ತು. ಸರಿ ಮಾಡಿದ್ದಿ. )
ನಿಮ್ಮ ಬರಹದಲಿನ ವ್ಯಂಗ್ಯ ಸೊಗಸಾಗಿ ನಮ್ಮ ವ್ಯವಸ್ಥೆಯ ಮೂದಲಿಕೆ ಅಲ್ಲಿದೆ.ವಿದಮ್ಬನೆಯಲ್ಲೇ ಗಂಬಿರವಾಗಿ ನಮ್ಮ ಸುತ್ತಲಿನ ಸಮಾಜದ ಹುಳುಕುಗನು ತೋರಿಸಿದ್ದೀರ.ನನ್ನ ಬ್ಲಾಗ್ ಒಮ್ಮೆ ನೋಡಿ
sahayaatri.blogspot.com
superraagide!:))
ಸುಶ್ರುತ ಸಾರ್,
ನಿಮ್ಮ ವಿ.ಕ ಬರಹ ಒಳ್ಳೆಯದಾಗಿ ಇದೆ .
ಕೆಲವು ಪ್ರಶ್ನೆಗಳು:
೧. ಕಡೆಗೂ ಗಣಪ ಬಂದನೇ?
೨. ಬಂದಿದ್ದನಾದರೆ, ಮಾಸ್ಕ್ ಹಾಕಿಕೊಂಡು ಬಂದಿದ್ದನೇ?
೩. ಮಾಸ್ಕ್ ಹಾಕಿಕೊಂಡಿದ್ದರೆ, ಬಾಯಿಗೊಂದು, ಸೊಂಡಿಲಿಗೊಂದು ಹಾಕಿಕೊಂಡಿದ್ದನೆ?
ಈ ಪ್ರಶ್ನೆಗಳಿಗೆ ಉತ್ತರ ತಿಳಿದೂ ಹೇಳದಿದ್ದರೆ, ಕಸ ಸಿಕ್ಕಿಕೊಂಡ ಮೌಸಿನಂತಾಗುವುದು (ಹಳೆಯ, ಬಾಲ್ ಮೌಸ್; ಈಗಿನ ಒಪ್ಟಿಕಲ್ ಮೌಸ್ ಅಲ್ಲ) ನಿಮ್ಮ ಜೀವನ, ಎಚ್ಚರ!
-ಪವನಜ
ಕಮೆಂಟಿಸಿದ, ವಿಶ್ಮಾಡಿದ ಎಲ್ಲರಿಗೂ ಥ್ಯಾಂಕ್ಸ್.
ಚಿತ್ರಾ,
ಎರಡನೇ ಕಮೆಂಟಲ್ಲೂ ತಪ್ಪು ಹಂಗೇ ಇದ್ದು. ;P
ಪವನಜ ಸರ್,
ನಿಮ್ಮ ಪ್ರಶ್ನೆಗಳು ಸಖತ್ತು. ಉತ್ತರ ನಿಜವಾಗ್ಯೂ ತಿಳಿದಿಲ್ಲ. ಸೋ, ಮೌಸು-ಲೈಫು ಎರಡೂ ಸೇಫು ಅಂದ್ಕೊಂಡಿದೀನಿ. ;) ಥ್ಯಾಂಕ್ಯೂ...
Post a Comment