ಪಾರಿವಾಳಕ್ಕಿಂತ ಬಿಳಿಯ ಬಣ್ಣದ ಹಕ್ಕಿಗಳು
ಬಂದು ಒಳ ಸೇರಿಕೊಂಡುಬಿಟ್ಟಿವೆ...
ಹೊತ್ತೊತ್ತಿಗೆ ಕಾಳೊಂದು ಸಿಕ್ಕುತ್ತಿರುವಾಗ
ಹೊರ ಹಾರುವುದಾದರೂ ಏಕೆ ಎಂಬಂತ
ನಿಶ್ಚಿಂತೆಯಲ್ಲಿ ಸ್ಥಿರವಾಗಿಬಿಟ್ಟಿವೆ ಇಲ್ಲೇ.
ಕೆಲ ಹಕ್ಕಿಗಳಿಗೆ ಇದು ಗೂಡು;
ಕೆಲವಕ್ಕೆ ಪಂಜರ.
ಇಲ್ಲಿ ಹೊಸ ಕನಸುಗಳು ಗರ್ಭ ಕಟ್ಟುವುದಿಲ್ಲ;
ಗುಂಪಲ್ಲಿ ಅನುರಣಿಸುವ ಕಚ್ಚಾಟದ ಕಿಚಿಪಿಚಿಗಳು
ತೀರ್ಮಾನವಾಗುವುದಿಲ್ಲ;
ಅನಾವೃತಗೊಳ್ಳುವ ಹೃದಯದ ಚಿಲಿಪಿಲಿಗಳಿಗೆ
ಕಿವಿಯೇ ಇಲ್ಲ.
ಇಂತಹ ನೆಲೆಯಲ್ಲಿ ಅದ್ಯಾಕೆ ಅದೊಂದು ಹಕ್ಕಿ
ಹಾಗೆ ಕುಳಿತಿದೆ ಮೌನದಲ್ಲಿ?
ಗೂಡಿನೊಳಗೂ ಗೂಡು ರಚಿಸಿಕೊಂಡು ನಿ-
ಗೂಢವಾಗಿದೆ?
ಬಂದ ಹೊಸ-ಅಸಭ್ಯ ಹಕ್ಕಿಗೂ ಅಚ್ಚರಿ:
ಏಕೆ ತನ್ನ 'ತಾದಿಂ ತರಿಕಿಟ ತಾ'ಗಳನ್ನು ಮೆಚ್ಚುಗೆಯ
ಕಣ್ಣಿಂದ ಈಕ್ಷಿಸುತ್ತಿದೆ?
ಸಾವಕಾಶ ಎತ್ತುತ್ತಿದೆ ಕೈ- ಒಪ್ಪಿಗೆಯ ಮತಕ್ಕೆ-
ಬರುವಂತೆ ಆಮೆ ಚಿಪ್ಪಿಂದ ಹೊರಗೆ?
ನಿಬದ್ಧಗಳ ಹರಿದು ಹಾರುವ ತನ್ನಾಲೋಚನೆಗೆ
ಹೇಗೆ ಅರಳಿಸುತ್ತಿದೆ ಮಂದಸ್ಮಿತ ಕಣ್ಣಲ್ಲೇ..
ಸುತ್ತ ನಿಶ್ಯಬ್ದವಿದ್ದಾಗ ಪಿಸುಮಾತೇ ಗದ್ದಲವಾಗುತ್ತದೆ.
"ಹಾರಿ ಹೋಗುವುದು ಎಂದರೆ
ನೀನಂದುಕೊಂಡಿರುವುದಕ್ಕಿಂತ ಸುಲಭ ಚೀಫ್..
ರೆಕ್ಕೆಗಳನ್ನು ಬಿಚ್ಚಿ ವಿಹಂಗಮ
ತೂರಿ ಸರಳುಗಳ ನಡುವಿನ ಪುಟ್ಟ ಅವಕಾಶದಲ್ಲಿ
ಸೇರಿಬಿಡಬಹುದು ಗಗನ..
ಬಚ್ಚಿಟ್ಟುಕೊಳ್ಳಬಹುದು ಬೇಕಿದ್ದರೆ,
ಚಿಕ್ಕೆಗಳ ಹಿಂದೆ.. ಬಾ,
ಹೊರಡು"
-ಎಂದೆಲ್ಲ ಹೇಳಿದ್ದ ನೀನು
ಈಗ ಹೀಗ್ಯಾಕೆ ಅಲ್ಲಾಡದೇ ಮಲಗಿರುವೆ?
ಹೊರಗೆ ಬೆಚ್ಚಗೆ ಮಲಗಿದೆ ಲೋಕ..
ಅರೆ ಎಚ್ಚರದಲ್ಲಿ ತಾಯಿ ಕೊಟ್ಟ ಮೊಲೆಯಿಂದ
ಮಗು ಹೀರುತ್ತಿರುವ ಹಾಲಿನಲ್ಲಿ
ನಾಳೆ ಬೆಳಿಗ್ಗೆ ಅರಳಲಿರುವ ಮೊಗ್ಗುಗಳೊಡಲ
ಮಕರಂದವೆಲ್ಲ ಕರಗಿದೆ..
ಚಂದಿರನ ಬೆಳಕನ್ನು ಹೊತ್ತ ದೊಡ್ಡ ಮೋಡಗಳು
ಎತ್ತಲೋ ಹೋಗುತ್ತಿವೆ..
ಗಂಟೆಯ ಮುಳ್ಳಿನ ನಿಧಾನಗತಿಯನ್ನು
ಸೆಕೆಂಡಿನ ಮುಳ್ಳು ಹಾಸ್ಯ ಮಾಡುತ್ತಿದೆ..
ಇಂಥಲ್ಲಿ,
ನೀನ್ಯಾಕೆ ಮಲಗಿದ್ದೀಯ ಹೀಗೆ ರೆಕ್ಕೆಗಳ ಮಡಚಿ?
ದುಂಬಿಗೆ ಮೋಸದ ಅರಿವಾಗುವ ಮುನ್ನ,
ಮೋಡ ಕರಗಿ ಸುರಿಯುವ ಮುನ್ನ,
ಚಿಕ್ಕ ಮುಳ್ಳು ಸೂರ್ಯನಿಗೆ ಪುಕಾರು ಹೇಳುವ ಮುನ್ನ,
ಸೇರಿ ಬಿಡೋಣ ಗೌಪ್ಯದ ಗರ್ಭ.
ಬಾ ಮ್ಯಾಕ್, ಹೊರಡು.
[One Flew over the Cuckoo's Nest ಸಿನೆಮಾ ನೋಡಿ..]
10 comments:
aa pichcharrE artha aaglilla, innu kavana elli artha aagutte!!!
ಸುಶ್ರುತ ಚಿತ್ರ ನಾನು ನೋಡಿಲ್ಲ ನಿಮ್ಮ ಕವಿತಾ ಅರ್ಥ ಮಾಡಕೊಬೇಕು ಅಂತ ಪ್ರಯತ್ನ ಪಟ್ಟೆ ಯಾಕೋ ತಿಳಿವಲ್ತುriesse
ಸುಶ್ರುತ,
One Flew Over Cuckoo's Nest ನನ್ನ ಮೆಚ್ಚಿನ ಸಿನಿಮಾ. ಅದನ್ನೇ ಇಷ್ಟು ಚಂದವಾಗಿ ಕವನ ಮಾಡಿದ್ಯಲ ಮಾರಾಯ. ಚಂದದ ಕವನಕ್ಕೆ ಧನ್ಯವಾದಗಳು :)
ಆ ಚಿತ್ರದ cd ಮಾರುಕಟ್ಟೆಗೆ ಬಂಜಾ? ಬಂದಿದ್ದ್ರೆ ಹೇಳು.. ಆದಾಗ ನೋಡ್ತಿ. ಆಮೇಲೇ ನಿನ್ನ ಕವನ ಅರ್ಥಮಾಡಿಕೊಳ್ಳಲೆ ಸಾಧ್ಯ.
Haarabeku, mareyinda. matte mareyaagabekeke? movie nodabekagide. vikshipta chintane.
ಸುಶ್,
ಫಿಲ್ಮ್ ನೋಡದೇ ಇರೋದಕೋ ಎನೋ..ಸ್ಪಲ್ಪ ಲಿಂಕ್ ಸಿಗ್ತಾ ಇಲ್ಲಾ..
ಆದರೆ ಈ ಸಾಲು ಇಷ್ಟವಾಯ್ತು
\\ಗಂಟೆಯ ಮುಳ್ಳಿನ ನಿಧಾನಗತಿಯನ್ನು
ಸೆಕೆಂಡಿನ ಮುಳ್ಳು ಹಾಸ್ಯ ಮಾಡುತ್ತಿದೆ
-ಪಾತರಗಿತ್ತಿ
Wonderful Sushruta
ನಮಸ್ತೆ. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಶರಣು. One Flew over the Cuckoo's Nest ನನ್ನ ಅತಿ ಇಷ್ಟದ ಸಿನಿಮಾಗಳಲ್ಲೊಂದು. ಡಿವಿಡಿ ಸಿಗುತ್ತೆ, ನೋಡಿ.
Susuthra Nimma e barhakke nanna salamu kanri..........
entha shreemanta maaraaya neenu...;-) hotte kichchu nange :) eshtu chena nin padya....;)
Post a Comment