ರಾತ್ರಿ ಹೊತ್ತು ಈ ರಾಜಧಾನಿಯ ಗಗನಚುಂಬಿ ಕಟ್ಟಡವೊಂದರ ಟೆರೇಸಿನ ತುದಿಗೆ ಹೋಗಿ ಒಮ್ಮೆ ಗಟ್ಟಿ ಕಣ್ಮುಚ್ಚಿ ತೆರೆದರೆ, ಭೂಮ್ಯಾಕಾಶಗಳ ಕೂಡುರೇಖೆಯೇ ಕಾಣದಂತಹ ಎದುರಿನ ಸಾದ್ಯಂತ ಕಪ್ಪು ಅವಕಾಶವೆಂಬುದು ಕಾರ್ತೀಕ ಮಾಸದ ಲಕ್ಷದೀಪೋತ್ಸವದಂತೆ ಕಾಣಿಸುತ್ತದೆ. ಕೆಲವು ಪ್ರಶಾಂತ ಹಣತೆಗಳು, ಕೆಲವು ಮಿನುಗುತ್ತಿರುವ ಹಣತೆಗಳು, ಇನ್ನು ಕೆಲವು ಚಲಿಸುತ್ತಿರುವ ಹಣತೆಗಳು. ರಾತ್ರಿ ಆಗುತ್ತ ಆಗುತ್ತ ಹೋದಂತೆ ಒಂದೊಂದೇ ಹಣತೆಗಳು ಆರುತ್ತ ಆರುತ್ತ ಹೋಗುತ್ತವೆ. ಬೆಳಗಾಗುವಷ್ಟರಲ್ಲಿ ಅಷ್ಟೂ ಹಣತೆಗಳು ಆರಿ ಅಲ್ಲಿ ಬರೀ ಕಟ್ಟಡ ಸಮೂಹವೂ, ನೀಲಾಕಾಶವೂ, ಅಲ್ಲೇ ಎಲ್ಲೋ ಕಸರತ್ತು ಮಾಡಿ ಹಿಂದಿನಿಂದ ಹಣುಕುತ್ತಿರುವ ದಿನಕರನೂ ಕಾಣಿಸುತ್ತಾರೆ.
ನಿಧಾನಕ್ಕೆ ಕೆಳಗಿಳಿದು ಬಂದು, ಬಿಸಿ ಮತ್ತು ಬ್ಯುಸಿ ಆಗಲು ಅಣಿಯಾಗುತ್ತಿರುವ ರಸ್ತೆಯ ಮೇಲೆ ಬಿಡುಬೀಸಾಗಿ ನಡೆದು, ಗೂಡಂಗಡಿಯೊಂದರಲ್ಲಿ ನಾಲ್ಕು ಕಾಸು ಕೊಟ್ಟು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. ಜತೆಗೇ ಪ್ಲಾಸ್ಟಿಕ್ ಕಪ್ಪಿನ ಚಹಾ. ಬದಿಯ ಕಟ್ಟೆಯಲ್ಲಿ ಕೂತು ಬಿಸಿ ಚಹಾ ಹೀರುತ್ತಾ ದಿನಪತ್ರಿಕೆ ಬಿಚ್ಚಿದರೆ, ಉತ್ತರ ಕರ್ನಾಟಕದ ಮಂದಿಗೆ ನೆರೆ ಪರಿಹಾರದ ಹಂಚಿಕೆಯ ಬಗ್ಗೆ ಶುರುವಾಗಿರುವ ವಿವಾದಗಳು, ಮುಖ್ಯಮಂತ್ರಿಗಳು ಈ ವರ್ಷ ಅಲ್ಲಿಯೇ ದೀಪಾವಳಿ ಆಚರಿಸುತ್ತಿರುವ ಸುದ್ದಿಯೂ, ಒಬಾಮಾಗೆ ಕೊಟ್ಟ ನೊಬೆಲ್ ಕುರಿತ ಜಿಜ್ಞಾಸೆಗಳೂ, ಇನ್ನೂ ಹಂದಿಜ್ವರ ಹುಬ್ಬುತ್ತಲೇ ಇದೆ ಎಂಬ ಕಳವಳದ ವಾರ್ತೆಯೂ, ದ್ರಾವಿಡ್ಗೆ ಈ ಸಲವೂ ಅವಕಾಶ ಸಿಗಲಿಲ್ಲ ಎಂಬ ನಿರಾಶಾದಾಯಕ ಸಾಲೂ, ಬೀಟಿ ಬದನೇಕಾಯಿಯೂ ಕಾಣಿಸುತ್ತದೆ. ಚಹಾ ಮುಗಿಯುವಷ್ಟರಲ್ಲಿ ಸುದ್ದಿಪರ್ಯಟನೆಯೂ ಮುಗಿದು, ವಾಚು ನೋಡಿದ್ದೇ ಆಫೀಸಿಗೆ ತಡವಾಯ್ತೆಂಬ ಜ್ಞಾನೋದಯ ಆಗಿ ದಡಬಡನೆ ಓಡಲು ಶುರುವಿಡುತ್ತೇನೆ.
ಮೊನ್ನೆ ಗೆಳತಿಯೊಬ್ಬಳಿಗೆ ಫೋನಿಸಿ "ಹಬ್ಬಕ್ಕೆ ಯಾವತ್ತು ಊರಿಗೆ ಹೊರಡ್ತಿದೀಯಾ? ಶುಕ್ರವಾರಾನಾ?" ಅಂತ ಕೇಳಿದೆ. ಅವಳದಕ್ಕೆ "ಇಲ್ಲ, ಶನಿವಾರ ನಮ್ಗೆ ಆಫೀಸ್ ಇದೆ" ಅಂದಳು. "ಅರೆ, ಗೌರ್ಮೆಂಟ್ ಹಾಲಿಡೇ ಅಲ್ವೇನೇ?" ಅಂತ ಕೇಳಿದೆ. "ನಾವು ಒಂದು ದಿನದ ಸಂಬಳವನ್ನ ರಿಲೀಫ್ ಫಂಡ್ಗೆ ಕೊಡ್ತಿದೀವಿ.. ಅದಕ್ಕೇ ಒಂದು ದಿನ ಎಕ್ಸ್ಟ್ರಾ ಕೆಲಸ ಮಾಡ್ತಿದೀವಿ" ಅಂದಳು. ನನಗೆ ಅವಳ ತರ್ಕ ಅರ್ಥವಾಗಲಿಲ್ಲ: "ಅಲ್ಲಾ ಮಾರಾಯ್ತಿ, ರಿಲೀಫ್ ಫಂಡ್ಗೆ ಕೊಡಿ ಯಾರು ಬೇಡ ಅಂದ್ರು. ಒಂದು ದಿನದ ಸಂಬಳ ಕಟ್ ಮಾಡ್ಕೊಳ್ಳಲಿಕ್ಕೆ ಹೇಳು ನಿಮ್ ಬಾಸ್ಗೆ! ಆದ್ರೆ ಕೆಲಸ ಯಾಕೆ ಜಾಸ್ತಿ ಮಾಡ್ಬೇಕು?" ಅಂತ ಪ್ರಶ್ನಿಸಿದೆ. "ಕೆಲಸ ಮಾಡಿದ್ರೇನೆ ನಮ್ ದೇಶ ಮುಂದೆ ಬರೋದು ಕಣೋ" ಅಂದಳು. ಈಗಂತೂ ನಂಗೆ ಸ್ವಲ್ಪವೂ ಅರ್ಥ ಆಗಲಿಲ್ಲ. ನೆರೆ ಪರಿಹಾರಕ್ಕೂ, ಇವರು ರಜಾದಿನ ಕೆಲಸ ಮಾಡುವುದಕ್ಕೂ, ದೇಶ ಮುಂದುವರೆಯುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಅಂತ ಯೋಚಿಸಲೂ ಆಗಲಿಲ್ಲ. "ಸರಿ ಬಿಡು" ಅಂತ ಫೋನಿಟ್ಟೆ.
ಈಗ ಕೆಲ ದಿನಗಳಿಂದ ಫೇಸ್ಬುಕ್ಕಿನ ಫಾರ್ಮ್ವಿಲ್ಲೆಯಲ್ಲಿ ನಾನು ಕೃಷಿಕಾರ್ಯ ಕೈಗೊಂಡಿದ್ದೇನೆ. ಸ್ಟ್ರಾಬೆರಿ, ಗೋಧಿ, ಸೋಯಾಬೀನು, ಕುಂಬಳಕಾಯಿ, ಭತ್ತ, ಇತ್ಯಾದಿ ಬೆಳೆಗಳು ಒಳ್ಳೆಯ ಫಸಲು ಬಂದು ಲಾಭವಾಗಿದೆ. ಸುಮಾರು ಗೆಳೆಯರು ಚೆರ್ರಿ, ಅಂಜೂರ, ನಿಂಬೆ, ಇತ್ಯಾದಿ ಗಿಡಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅವೂ ಫಲ ನೀಡುತ್ತಿವೆ. ಜಮೀನಿನ ಮೂಲೆಯಲ್ಲೊಂದು ರೆಸ್ಟ್ಟೆಂಟ್ ಹಾಕಿಕೊಂಡಿದ್ದೇನೆ. ಸಧ್ಯದಲ್ಲೇ ಟ್ರಾಕ್ಟರ್ ಕೊಳ್ಳುವ ಆಲೋಚನೆಯಿದೆ. ಬೀಟಿ ಬದನೆಕಾಯಿಯ ಬೀಜ ಸಿಕ್ಕರೆ ಬಿತ್ತೋಣ ಅಂತ ಇತ್ತು, ಮಾರ್ಕೆಟ್ಟಿನಲ್ಲೆಲ್ಲೂ ಕಾಣಿಸಲಿಲ್ಲ.
ಉತ್ತರ ಕರ್ನಾಟಕದ ನೆರೆ ನಿರಾಶ್ರಿತರ ಚಿತ್ರ ಕಣ್ಮುಂದಿದೆ. ಎಲ್ಲವನ್ನೂ ಎಂದರೆ ಎಲ್ಲವನ್ನೂ ಕಳೆದುಕೊಂಡಿರುವ ಆ ಜನಗಳು ಪಕ್ಕದಲ್ಲೇ ಇರುವಾಗ ನಾವು ಹೇಗೆ ಸಂಭ್ರಮದಿಂದ ಹಬ್ಬ ಆಚರಿಸುವುದು ಎಂಬ ಕೊರಗು ಮನದಲ್ಲಿದ್ದರೂ ಎಲ್ಲರೂ ಸಂಭ್ರಮದಿಂದಲೇ ದೀಪಾವಳಿಗೆ ತಯಾರಾಗುತ್ತಿದ್ದೇವೆ. ಸ್ಲೀಪರ್ ಕೋಚ್ ಸಿಗಲಿಲ್ಲವಲ್ಲ ಅಂತ ಕೈಕೈ ಹಿಸುಕಿಕೊಂಡಿದ್ದೇವೆ. ಡಿಸ್ಕೌಂಟ್ ಹಾಕಿರುವ ಅಂಗಡಿಗಳನ್ನು ಹೊಕ್ಕು ಬಟ್ಟೆ ಖರೀದಿಸಿದ್ದೇವೆ. ಗರಿಗರಿ ಪಟಾಕಿಗಳು ಬಾಕ್ಸಿನಲ್ಲಿ ಬೆಚ್ಚಗೆ ಕೂತಿವೆ. ಅವಕ್ಕೆ ಸುರುಳಿ ಸುತ್ತಲ್ಪಟ್ಟಿರುವ ಕಾಗದದಲ್ಲಿ ಕಳೆದ ವರ್ಷ ಪಟಾಕಿ ದುರಂತದಲ್ಲಿ ಸತ್ತ ಕುಟುಂಬದ ವರದಿಯಿದೆ.
ಯಾವುದು ತಪ್ಪು ಯಾವುದು ಸರಿ ಎಂಬುದನ್ನು ವಿವೇಚಿಸುವ ಜಾಣ್ಮೆಯನ್ನೇ ಕಳೆದುಕೊಂಡಿರುವ, ಇಂದು ತೆಗೆದುಕೊಂಡ ತೀರ್ಮಾನಗಳು ನಾಳೆಯ ಹೊತ್ತಿಗೆ ಹಾಸ್ಯಾಸ್ಪದವೆನ್ನಿಸುವ, ಈಗ ತರ್ಕಿಸಿದ್ದ ರೀತಿ ಮರುದಿನದ ಹೊತ್ತಿಗೆ ನಮಗೇ ಸಣ್ಣತನವೆನ್ನಿಸುವ ವಿಚಿತ್ರ ಸಂಕಷ್ಟದಲ್ಲಿ ಸಿಲುಕಿರುವ ನಾವು ಇದೆಂತಹ ದಾರದ ಮೇಲೆ ನಡೆಯುತ್ತಿದ್ದೇವೆ? ಇದೆಂತಹ ಅಂಧಃಕಾರ ಕವಿದಿದೆ ನಮ್ಮನ್ನು? ಎತ್ತ ಹೋಗುತ್ತಿದ್ದೇವೆ? ರಾತ್ರಿ ಹಣತೆಯಂತೆ ಕಂಡ ದೀಪಗಳು ಸುಳ್ಳು, ಇಂಟರ್ನೆಟ್ಟಿನಲ್ಲಿ ಬೆಳೆದ ಭತ್ತ ಹುಸಿ, ಸಿಡಿದ ಮರುಕ್ಷಣ ಇಲ್ಲವಾಗುವ ಪಟಾಕಿಯ ಸದ್ದಿನಂತಹ ಮಾಧ್ಯಮದ ವರದಿಗಳು ಕೇವಲ ಮರುಳು, ನೆರೆ ಸಂತ್ರಸ್ತರೆಡೆಗೆ ನನ್ನ ಹೃದಯ ಮಿಡಿದಿದ್ದೂ ಡಾಂಬಿಕ. ಆದರೂ, ಇಲ್ಲ, ನಾನು ಹಣತೆಗಳನ್ನು ಕಂಡದ್ದು, ಚೆರ್ರಿ ಮರದಲ್ಲಿ ಹಣ್ಣು ಬಿಟ್ಟಾಗ ಖುಶಿಗೊಂಡದ್ದು, ಓದುತ್ತಿರುವಷ್ಟಾದರೂ ಹೊತ್ತು ನಾನೂ ಪತ್ರಿಕೆಯಲ್ಲಿ ಮುಳುಗಿದ್ದದ್ದು, ನೆರೆ ಹಾನಿಯ ಚಿತ್ರಗಳನ್ನು ನೋಡಿದಾಗ ಕರುಳು ಚುರುಕ್ ಎಂದದ್ದು ಸತ್ಯವಲ್ಲವಾ? ಊಹುಂ, ತಿಳಿಯುತ್ತಿಲ್ಲ.
ದೀಪಾವಳಿಯ ಬೆಳಕು ಈ ನಮ್ಮ ಗೊಂದಲದ ಮನಸ್ಥಿತಿಯನ್ನು ಕೊಂಚ ಮಟ್ಟಿಗಾದರೂ ತಿಳಿಗೊಳಿಸುತ್ತದೆ, ಮಬ್ಬಿನಲ್ಲೊಂದು ಪುಟ್ಟ ಬೆಳಕು ಮೂಡಿಸುತ್ತದೆ ಅಂತ ಹಾರೈಸೋಣ. ಶುಭಾಶಯಗಳು.
16 comments:
ದೀಪಾವಳಿಯ ಶುಭಾಶಯಗಳು
ಅವರವರ ಭಾವಕ್ಕೆ, ಅವರವರ ಬಕುತಿಗೆ ಎನ್ನುವಂತೆ ಹಬ್ಬದ ಆಚರಣೆ ಇರಲಿ
ಸಂತ್ರಸ್ತರಿಗೆ ಹಣ ಕೊಡುವುದೇನೋ ನಿಜ ಆದರೆ ಅದರ ಹೆಸರಿನಲ್ಲಿ ಒಂದು ದಿನ ಕೆಲಸ ಮಾಡುವುದು ಸರಿ ಇಲ್ಲ,
ಡಿಯರ್ ಸು
ಬಹಳ ಎತ್ತರದ ಅಷ್ಟೇ ಆಳದ ಆಲೋಚನೆಗೆ ಅಕ್ಷರ ರೂಪ. ಅದಕ್ಕೊಂದು ಶೀರ್ಷಿಕೆ "ಗೊಂದ......".
ನನಗೆ ನನ್ನ ಅನಿಸಿಕೆ ನಾನೇ ಓದುತ್ತಿದ್ದೇನೆ ಅನ್ನಿಸಿತು. ತುಂಬಾ ಅಂದರೆ ತುಂಬಾ ತಟ್ಟಿತು.
ನಿಜವಾಗಿಯೂ ಗೊಂದಲವಿಲ್ಲದ ಹಾರೈಕೆ ನಿನ್ನ ಯೋಚನೆಗಳಿಗೆ ಅಕ್ಷರ ರೂಪ ಇನ್ನಷ್ಟು ಹೆಚ್ಚಲಿ
ಸುಶ್ರುತ ಅಭಿನಂದನೆಗಳು ನಿಜವೇ ದೀಪ ಸುತ್ತಲೂ ಬೆಳಕು ನೀಡುತ್ತದೆ ಆದರೆ ನಾವು....?
ನಿನ್ನ ದ್ವಂದ್ವ ನನ್ನಲ್ಲೂ ಇದೆ ಮಾರಾಯ ಈ ಹಾಳು ಟ್ರಾಫಿಕ್ ನ ಕಿರಿಕಿರಿಯೇ ದೊಡ್ಡದಾಗಿರುವ ನನ್ನಂತಹವರಿಗೆ ಹೊಲ ನೆಲೆ
ಕಳೆದುಕೊಂಡವನ ನೋವು ಅರ್ಥಆಗುವುದೇ ಇಲ್ಲ. ಏನೋ ಅಂದುಕೊಂಡಿದ್ದೆ ಈ ಸಲ ಹಬ್ಬ ಹಾಗಿರಲಿಹೀಗಿರಲಿ ಉರಿದು ಆವಿಯಾಗುವ ಪಟಾಕಿಗೆ ದುಡ್ಡು ಸುರಿಯಬಾರದು ಅಂತ ಮಗಳು ಸಣ್ಣಮಾರಿ ಮಾಡಿದ್ಲು ತಡಿಲಿಲ್ಲ ೩೦೦ರೂ ಸುರಿದೆ ಮಗಳು
ನಗುತ್ತಿದ್ದಾಳೆ ನಾನು ನೆರೆದೃಶ್ಯ ಇಲ್ಲದ ಚಾನಲ್ ನೋಡುತ್ತಿರುವೆ,
ಸುಶ್ರುತ,
ನಿಮ್ಮ ಜೊತೆಗೇ ನನ್ನದೂ ಶುಭ ಹಾರೈಕೆ.
deepaavaliya shubhashaya:) barahada bagge no comments:)
ಓದುಗರ ಮನಸ್ಸನ್ನು ಚಿಂತನೆಗೆ ಒರೆ ಹಚ್ಚುವ ಬರಹ.. ಚೆನ್ನಾಗಿದೆ.
ಸುಶ್, ಪುಟ್ಟ ಹಣತೆಯ ಬೆಳಕಲ್ಲಿ ಒಬ್ಬರ ಮುಖ ಒಬ್ಬರು ನೋಡುತ್ತಾ ಕೂತಿರುವುದಕ್ಕೂ ಜಗ ಬೆಳಗುವ ಹಣತೆಯೆದುರು ನೆರೆಸಂತ್ರಸ್ತರ ವರದಿ ಓದುವುದಕ್ಕೂ ವ್ಯತ್ಯಾಸ ನಮ್ಮ ಮನಸ್ಥಿತಿಯಷ್ಟೇ. ಅದನ್ನು ಸಮರ್ಥವಾಗಿಯೇ ಹೇಳಿದ್ದೀ. ಎಲ್ಲವೂ ನಮ್ಮನಮ್ಮೊಳಗೇ ಇರುವ, ನಮ್ಮ ಜೊತೆಯೇ ಬದಲಾಗುವ ಮನಸ್ಥಿತಿ. ಅಂತಹ ಮನದ ಗೊಂದಲ ಹರಿಸಿ ನಮ್ಮ ದಾರಿ ಸುಗಮವಾಗುವಂತೆ ಒಳಗಿನ ಹಣತೆ ಬೆಳಕು ಬೀರಲಿ. ನಾಳೆಗಳನ್ನು ಬೆಳಗಲಿ.
ತಮ್ಮ, ತು೦ಬಾ ದಿನದ ನ೦ತರ ಕಣ್ಣು ಒದ್ದೆ ಆಗುವ೦ಥಹ ಬರಹ ಬರೆದಿದ್ಡಿಯ.
that was beautiful ... sari thappu tileede ondondsala gondala aagodrinda ne we are still human. Deepavali ge belated wishes :-)
ಶುಭಾಶಯಗಳು.
ದೀಪಾವಳಿ ಶುಭಾಶಯಗಳು. ಚಂದವಿದೆ ಬರಹ.
>>ಬಿಸಿ ಮತ್ತು ಬ್ಯುಸಿ ಆಗಲು ಅಣಿಯಾಗುತ್ತಿರುವ
busy ಅನ್ನೋದನ್ನ ಬ್ಯುಸಿ ಅಂತ ಬರೆಯೋದನ್ನ ಈಚೀಚೆಗೆ ನೋಡ್ತಿದೀನಿ. ಅಷ್ಟು ಸರಿ ಅಲ್ಲ ಅನ್ನಿಸತ್ತೆ. ಸಾಧಾರಣವಾಗಿ ಬೇರೊಂದು ಭಾಷೆಯ ಪದವನ್ನ ಕನ್ನಡದಲ್ಲಿ ಬರೆಯೋವಾಗ ಅದು ಹೇಗೆ ಕೇಳತ್ತೆ ಅನ್ನೋದ್ರ ತರಹ ಅಲ್ವೇ ಬರೀ ಬೇಕಾದ್ದು?
ಕಪ್ಪು ಅವಕಾಶ should be kappu 'aakaasha', right ?
ಹಬ್ಬ, ಹರಿದಿನಗಳು ಆಚರಿಸಲ್ಪಡುವುದು ದು;ಖ, ದುಮ್ಮಾನಗಳನ್ನು ಮರೆಯಲೇ ಅಲ್ಲವೆ.....? ದೀಪ ಕತ್ತಲೆಯನ್ನು ಮರೆಸುತ್ತೆ ಅಲ್ಲವೆ....?ಬರಹ ಚೆನ್ನಾಗಿದೆ.
ಪ್ರತಿಕ್ರಿಯಿಸಿದ, ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದ.
ಹಂಸಾನಂದಿ,
ಹ್ಮ್? ಅದು ’ಬ್ಯುಸಿ’ ಅಲ್ಲ ’ಬಿಜಿ’ ಆಗ್ಬೇಕು ಅಂತಲಾ ನೀವು ಹೇಳ್ತಿರೋದು? ನಾನು busy ಎಂಬ ಶಬ್ದವನ್ನ ಇಷ್ಟು ದಿನ ’ಬ್ಯುಸಿ’ ಅಂತಲೇ pronounce ಮಾಡ್ತಿದ್ದೆ.. :(
ವಿ.ರಾ.ಹೆ.,
ಇಲ್ಲ. ’ಅವಕಾಶ’ ಅಂದರೆ ತೆರವಾದ ಜಾಗ, ತೆರಪು, ಖಾಲಿ ಸ್ಥಳ ಅನ್ನೋ ಅರ್ಥವೂ ಉಂಟು. ನಾ ಬಳಸಿದ್ದು ಅದೇ ಭಾವದಲ್ಲಿ.
ಥ್ಯಾಂಕ್ಯೂ ...
"ಯಾವುದು ತಪ್ಪು ಯಾವುದು ಸರಿ ಎಂಬುದನ್ನು ವಿವೇಚಿಸುವ ಜಾಣ್ಮೆಯನ್ನೇ ಕಳೆದುಕೊಂಡಿರುವ.................. ಊಹುಂ, ತಿಳಿಯುತ್ತಿಲ್ಲ."
liked these lines a lot.....
Post a Comment