Friday, January 01, 2010

ಕುಂಟಾಬಿಲ್ಲೆ ಪಟ

ಆ ಕ್ಯಾಲೆಂಡರನ್ನು ಮೊಳೆಯಿಂದ ಕಳಚಿ ಕೆಳಗಿಳಿಸಿ
ಸುರುಳಿ ಸುತ್ತಿ ರಬ್ಬರ್ ಬ್ಯಾಂಡ್ ಹಾಕಿ
ನಾಗಂದಿಗೆಯ ಮೇಲೆ ಬೀಸಾಡುವ ಮುನ್ನ
ಯಾಕೋ ಏನೋ ಅನ್ನಿಸಿ ಕೊಳವೆಯನ್ನು ಕಿವಿಗೆ ಹಿಡಿದರೆ
ನೂರಾರು ರಾಗಗಳ ಮಿಶ್ರ ಕಲರವ..

ಕುತೂಹಲ ಕೆರಳಿ ಸುರುಳಿಯನ್ನು ಬಿಚ್ಚಿ
ಒಂದೊಂದು ಪುಟದ ಒಂದೊಂದೆ ಮನೆಯ ದಿಟ್ಟಿಸಿದರೆ

ಕುಂಟಾಬಿಲ್ಲೆ ಆಟದಂತೆ ಈ ಮನೆಯಿಂದ ಮುಂದಿನ ಮನೆಗೆ
ಹಾರುತ್ತ ಹಾರುತ್ತ ನಡೆದ ನನ್ನ ಹೆಜ್ಜೆಯಚ್ಚು,
ಅದರಲ್ಲಿ ತುಂಬಿ ನಿಂತಿರುವ ಏನೇನೋ ಸದ್ದು:

ಬಿಡದೇ ನಕ್ಕ ದನಿ, ಸೆರೆಯುಬ್ಬಿ ಅತ್ತ ಬಿಕ್ಕು,
ಯಾರೋ ಬೈದ ಸದ್ದು, ನರಳಿದ ಮರ್ಮರ,
ಖುಶಿಯಲ್ಲಿ ಕಿರುಚಿದ ಪ್ರತಿಧ್ವನಿ, ಬಿಟ್ಟ ನಿಟ್ಟುಸಿರು..

ಬ್ಯಾಲೆನ್ಸ್ ಮಾಡುವುದರಲ್ಲೇ ದಿನ ಮುಗಿಯುತ್ತಿದ್ದ,
ದೆಸೆಯೇ ಗೊತ್ತಿಲ್ಲದೆ ಸುಮ್ಮನೆ ಮನೆಯಿಂದ ಮನೆಗೆ
ಹಾರುತ್ತ ನಡೆದಿದ್ದ ನನ್ನ ಒಂಟಿಹೆಜ್ಜೆ ಗುರುತುಗಳು
ತೀರ ಅಪೂರ್ಣ ಎನ್ನಿಸಿ, ಮತ್ತೊಮ್ಮೆ ಇದೇ ಮನೆಗಳಲ್ಲಿ
ನಡೆದು ಅಲ್ಲೇ ಉಳಿದ ಕನಸುಗಳ ನನಸಾಗಿಸಲೇ
ಅರ್ಧಕ್ಕೆ ಬಿಟ್ಟ ವ್ರತಗಳ ಪೂರ್ತಿ ಮಾಡಲೇ
ದಾಟಲಾಗದ ಮೈಲಿಗಲ್ಲುಗಳ ದಾಟಲೇ
ಪೂರೈಸದ ಕೆಲಸಗಳ ಕೈಂಕರ್ಯದಲ್ಲಿ ತೊಡಗಲೇ
ಎಂದು ಯೋಚಿಸುತ್ತಿದ್ದವನನ್ನು ನೋಡಿ

ಎರಡುಸಾವಿರದ ಹತ್ತರ ಕುಂಟಾಬಿಲ್ಲೆ ಪಟ
ಕೇಕೆ ಹಾಕಿ ನಕ್ಕು ಹೊಸ ಆಟಕ್ಕೆ ಕರೆಯಿತು.

[ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.]

20 comments:

ತೇಜಸ್ವಿನಿ ಹೆಗಡೆ said...

ನಿನಗೂ ಕೂಡ ಹೊಸ ವರುಷದ ಹಾರ್ದಿಕ ಶುಭಾಶಯಗಳು :) ಸುಂದರ ಕವನದೊಂದಿಗೆ ವರ್ಷದಾರಂಭ ಮಾಡಿದ್ದೀಯ :) ವರ್ಷವಿಡೀ ಇದೇ ರೀತಿಯ ಬರಹಗಳು ಹೊರಬರಲೆಂದು ಹಾರೈಸುವೆ.

sunaath said...

ಸುಶ್ರುತ,
ಕುಂಟಾಬಿಲ್ಲೆ ಆಡ್ತಾಲೇ ಇರಿ. ನಿಮಗೆ ಹೊಸ ವರ್ಷ ಹರುಷವನ್ನು ತರಲಿ. ಕವನ ಸೊಗಸಾಗಿದೆ.

Narayan Bhat said...

ಈ ಕುಂಟಾಬಿಲ್ಲೆ ಆಟ ಮಾತ್ರ ಕಡ್ಡಾಯ! ಕಲ್ಪನೆ ಮತ್ತು ಕವನ ಎರಡೂ ಚೆನ್ನಾಗಿದೆ.

umesh desai said...

ಸುಶ್ರುತ ಹೊಸಾವರ್ಷದ ಮೊದಲ ಕವಿತಾನೇ ಸಿಕ್ಸರ್ ಹೊಡದದ.ಬ್ಯಾಟು ಬೀಸುತ್ತಲೇ ಇರಲಿ..!
ಹೊಸ ೨೦೧೦ ನಿಂದಾಗಲಿ

Anonymous said...

very nice..!!!!!!!!
-KUNTINI

Annapoorna Daithota said...

ಕುಂಟಾಬಿಲ್ಲೆಯ ಹೊಸಾ ಮನೆಗೆ ಸ್ವಾಗತ :-)
ನಾವೂ ಎಲ್ಲಾ ಅದರಲ್ಲೇ ಆಟವಾಡುವವರು.

ಬಹಳ ಸರಳವಾಗಿ, ಇಡೀ ಜೀವನವೇ ಈ ಒಂದು ಕವನದಲ್ಲಿ ಹೇಳಲ್ಪಟ್ಟಿದೆ. ಎಂದಿನಂತೇ; ಹಿಡಿತವಿದೆ, ಸುಂದರವಾಗಿದೆ.

ಚಿತ್ರಾ said...

ಸುಶ್ರುತ,
ಈ ಹೊಸಾ ಪಟದಲ್ಲಿ ಹೆಚ್ಚೆಚ್ಚು ಖುಷಿಯಿಂದ ಮನೆಗಳನ್ನು ದಾಟುವಂತಾಗಲಿ , ಹಿಂದೆ ಬಿಟ್ಟು ಬಂದ ಮನೆಗಳತ್ತ ಲಕ್ಷ್ಯ ಕೊಡದೆ ಮುಂದೆ ಕೈಬೀಸಿ ಕರೆಯುತ್ತಿರುವ ಸಂತಸದತ್ತ ನಡೆಯುವಂತಾಗಲಿ !
ಒಟ್ಟಿನಲ್ಲಿ ಹೊಸಾ ಪಟದಲ್ಲಿ ಗೆಲುವು ನಿನ್ನದಾಗಲಿ !

Josnaa said...

ಹೊಸ ವರುಷದ ಹಾರ್ದಿಕ ಶುಭಾಶಯಗಳು

Anonymous said...

Very nice.... tumba ishtavaaytu :)

- Vaishali

Anonymous said...

ಕ್ಯಾಲೆಂಡರಿನ ದಿನಾಂಕದ ಕೋಣೆಗಳು ಕುಂಟಾಬಿಲ್ಲೆಯಾದ ಕಲ್ಪನೆ ಹಿಡಿಸಿತು.

Anonymous said...

ಚೆಂದದ ಕವಿತೆ. ಪ್ರಾರಂಭ ಇಷ್ಟವಾಯಿತು.

ದಿವ್ಯಾ ಮಲ್ಯ ಕಾಮತ್ said...

ಸುಶ್ರುತ, ಚೆಂದದ simile! ಸುಂದರವಾದ ಕವನ :) ಹೊಸ ವರುಷದ ಹಾರ್ದಿಕ ಶುಭಾಶಯಗಳು.

Parisarapremi said...

ಆದ್ರೂ ನೀನು ಗೋವಿಂದ ಪೈ ಕವನಗಳನ್ನ ಅನುಕರಣೆ ಮಾಡ್ತೀಯ ಕಣಪ್ಪ.. ;-) ;-) ;-) ;-)

ಸಾಗರದಾಚೆಯ ಇಂಚರ said...

ಸರ್
ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಉತ್ತಮ ಕವನ

Anonymous said...

jeevanave hosa hosa aata, mooru dinada baalinali jeevanada hudukata,ninthaga jeeva harida galipata,marali baralaarada dariyali agochara payana !!!!!!!.

idu nimma kavana odida mele bandantha nalakku salugalu.wish you very very happy and prosperous new year 2010.

ಸಿಂಧು sindhu said...

ಪ್ರೀತಿಯ ಸು,

ಶುಭಾಶಯದ ಪಟ ಸೊಗಸಾಗಿದೆ.

ನಂಗೆ ತುಂಬ ಆಸಕ್ತಿ ಅನಿಸಿದ್ದು ಕುಂಟಾಬಿಲ್ಲೆ ಮತ್ತು ಪಟದ (ಪದ ಜೋಡಣೆ)

ಆಮೇಲೆ ನಾನು ಅರುಣ್ ಮಾಸ್ಟ್ರ ಮಾತನ್ನು ಅನುಮೋದಿಸ್ತಾ ಇದೀನಿ.. ;)
ಪೈಯವರ ಕಾವ್ಯ ಶಕ್ತಿಯ ಜೊತೆಗೆ ಶಂಬಾ ಜೋಶಿಯವರ ವಿಶ್ಲೇಷಣೆಯೂ ಸೇರಿಕೊಂಡ ಹಾಗಿದೆ. ;) ;)

ಅದೇನೆ ಇರ್ಲಿ,
ಓದಿ ಖುಶಿಯಾಯ್ತು. ಅಪೂರ್ಣವೆನಿಸಿದ ಹೆಜ್ಜೆಗಳನ್ನ ಪೂರ್ಣಗೊಳಿಸಲು ಕಳೆದ ವರ್ಷದಂತಹದ್ದೇ ಇನ್ನೊಂದು ವರ್ಷ ದಕ್ಕಿದೆಯೆಂಬುದು ಕೃತಜ್ಞತೆಯ ವಿಷಯ. ಇದನ್ನ ವರ್ಷಾರಂಭದಲ್ಲ್ಲಿ ನೆನಪಿಸಿದ್ದಕ್ಕೆ ಥ್ಯಾಂಕ್ಸ್.

ಪ್ರೀತಿಯಿಂದ
ಸಿಂಧು

Raghu said...

ಚೆನ್ನಾಗಿದೆ ಕವನ...ಹೊಸ ವರ್ಷದ ಶುಭಾಶಯಗಳು...
ರಾಘು.

ಮನಸು said...

ತುಂಬಾ ಚೆನ್ನಾಗಿದೆ ಕವನ.... ಹೊಸ ನೀರು ಬಂದು ಹಳೆ ನೀರನ್ನು ಕೊಚ್ಚಿಕೊಂಡು ಹೋದಂಗೆ ಅಲ್ಲವೆ ... ಕವನ ಇಷ್ಟವಾಯಿತು ಹೊಸವರ್ಷ ಹಳೆಯದರೊಂದಿಗೆ ಹೊಸತನ್ನು ನೀಡಲಿ

ಗೌತಮ್ ಹೆಗಡೆ said...

sushrutanna kavana mast banju..kalpane khushi kodtu:)

Sushrutha Dodderi said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ.

ಸಿಂಧು,
ಅರುಣ್ ಮೇಷ್ಟ್ರು ಯಾಕೆ ಹಂಗೆ ಹೇಳಿದ್ದು ಅಂತ ನಿಂಗೊತ್ತಿಲ್ಲೆ. ಗೊತ್ತಿಲ್ದೇ ಹಿಂಗೆಲ್ಲ ಅವರಿಗೆ ಅನುಮೋದನೆ ಕೊಟ್ರೆ ನೀನು ಟ್ರ್ಯಾಪಲ್ಲಿ ಸಿಕ್ಕಿಹಾಕಿಕೊಳ್ತೀಯಾ! ;D