Tuesday, August 10, 2010

ಕೀರಂ, ಬೇಂದ್ರೆ, ಸಿದ್ದಲಿಂಗಯ್ಯ ಮತ್ತು ಮಂಜು ಮುಚ್ಚಿದ ಮುಳ್ಳಯ್ಯನ ಗಿರಿ

ಮೆಜೆಸ್ಟಿಕ್ಕಿನ ಕೆ‌ಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಒಟ್ಟೊಟ್ಟಿಗೆ ಐದಾರು ಗೆಳೆಯರ ಎಸ್ಸೆಮ್ಮೆಸ್ಸುಗಳು ಬಂದವು. ಎಲ್ಲದರಲ್ಲೂ ಇದ್ದಿದ್ದು ಒಂದೇ ಸಾಲು: ಕಿ.ರಂ. ನಾಗರಾಜ್ ಇನ್ನಿಲ್ಲ. ಮುಳ್ಳಯ್ಯನಗಿರಿಯ ಚಾರಣಕ್ಕೆಂದು ಹೊರಟಿದ್ದ ನಾನು ಹನ್ನೊಂದು ಗಂಟೆಗಿದ್ದ ಚಿಕ್ಕಮಗಳೂರಿನ ಬಸ್ ಕಾಯುತ್ತ ನಿಂತಿದ್ದೆ. ಈ ಎಸ್ಸೆಮ್ಮೆಸ್ಸುಗಳನ್ನು ಓದುತ್ತಿದ್ದಂತೆ ನಾನು ನಿಂತಿದ್ದ ಸ್ಥಳ, ಸುತ್ತಲಿದ್ದ ಜಂಗುಳಿ, ಗಂಟಲು ಸರಿ ಮಾಡಿಕೊಳ್ಳುತ್ತಿದ್ದ ಮೈಕು, ಬರಬೇಕಿದ್ದ ಬಸ್ಸು, ಇನ್ನೂ ಕೂಡಿಕೊಳ್ಳಬೇಕಿದ್ದ ಗೆಳೆಯರು -ಎಲ್ಲಾ ಅರೆಕ್ಷಣ ಮಾಯವಾಗಿ, ಕಣ್ಮುಂದೆ ಜಟೆ ಹರಡಿದ ಕೀರಂರ ಮುಖ, ಕಿವಿಯಲ್ಲಿ ಅವರ ಸಣ್ಣ ಒಡಕಲು ದನಿ ತುಂಬಿಕೊಂಡವು.

ಪ್ರಣತಿಯ ಬ್ಲಾಗರ್ಸ್ ಮೀಟ್‌ನಲ್ಲಿ ಮಾತಾಡುತ್ತಿರುವ ಕಿ.ರಂ. ನಾಗರಾಜ್
ಈ ಕೀರಂರ ಬಗ್ಗೆ ರಶೀದ್ ತಮ್ಮ ಮೈಸೂರ್‌‍ ಪೋಸ್ಟ್ ಬ್ಲಾಗಿನಲ್ಲಿ ಬರೆದಿದ್ದು ಓದಿದ್ದೆ. ಒಮ್ಮೆ ಮಂಗಳೂರಿಗೆ ಬಂದಿದ್ದ ಕೀರಂರನ್ನು ರಶೀದ್ ತಮ್ಮ ಬೈಕಿನಲ್ಲಿ ಕೂರಿಸಿಕೊಂಡು ಕಡಲು ತೋರಿಸಲು ಕರೆದೊಯ್ದದ್ದು, ಅಲ್ಲೊಂದು ಮುಳುಗಿದ ಹಡಗು ತೋರಿಸಿದ್ದು, ಅದ್ಯಾವುದೋ ಮೀನಿನ ಕಥೆ ಹೇಳಿದ್ದು, ಆ ಮೀನು ಹೆಕ್ಕಿಕೊಂಡು ಬರುವ ಮೊಹಮ್ಮದ್ ಅಲಿ ಎಂಬ ಪಾತ್ರ, ಇವನ್ನೆಲ್ಲ ಪುಟ್ಟ ಹುಡುಗನಂತೆ ನೋಡುತ್ತ ನಿಂತಿದ್ದ ಕೀರಂ.. ಆ ಬರಹ ಎಷ್ಟು ಚೆನ್ನಾಗಿತ್ತೆಂದರೆ, ನನಗೆ ಕೀರಂ ಎಂದರೆ ಕಡಲನ್ನು ನೋಡುತ್ತ ನಿಂತ ಪುಟ್ಟ ಬಾಲಕ ಎಂಬ ಚಿತ್ರವೇ ಮನಸಲ್ಲಿ ಅಚ್ಚಾಗಿಹೋಗಿತ್ತು. ಮುಂದೆ ಕೀರಂ ನಾವು ಪ್ರಣತಿಯಿಂದ ಆಯೋಜಿಸಿದ್ದ ಬ್ಲಾಗರ್ಸ್ ಮೀಟ್‌ಗೆ ಅಭ್ಯಾಗತರಂತೆ ಬಂದುಬಿಟ್ಟಿದ್ದರು. ನಮಗೋ ಭಯ: ಮೊದಲೇ ಚಿಕ್ಕದೊಂದು ಹಾಲ್ ಬುಕ್ ಮಾಡಿಕೊಂಡು ನೂರಾರು ಜನರನ್ನು ಕರೆದುಬಿಟ್ಟಿದ್ದೇವೆ, ಈಗ ಇಂತಹ ಹಿರಿಯರೆಲ್ಲ ಬಂದುಬಿಟ್ಟರೆ, ಹಾಲ್ ತುಂಬಿಹೋಗಿಬಿಟ್ಟರೆ, ಇವರನ್ನೆಲ್ಲ ಎಲ್ಲಿ ಕೂರಿಸೋದಪ್ಪ ಅಂತ.. ಆದರೆ ಕೀರಂ ಮಾತ್ರ ಸಭೆಯೊಳಗೆ ಎಲ್ಲರಂತೆ ಕೂತಿದ್ದು, ಕೊನೆಗೆ ಚರ್ಚೆಯ ಸಮಯ ಬಂದಾಗ ಮುಂದೆ ಹೋಗಿ, ಸರಳ ಕನ್ನಡದ ಕುರಿತೇನೋ ತಮ್ಮ ಒಡಕಲು ದನಿಯಲ್ಲಿ ಮಾತಾಡಿದ್ದರು. ಆಗಲೂ ಅವರು ನನಗೆ ಪುಟ್ಟ ಹುಡುಗನಂತೆಯೇ ಕಂಡಿದ್ದರು. ಮತ್ತೊಮ್ಮೆ ಮೇಫ್ಲವರಿನಲ್ಲಿ ಲಂಕೇಶ್ ಬಗ್ಗೆ ಮಾತಾಡುವಾಗ - ನಾನು ತೀರ ಅವರ ಹತ್ತಿರದಲ್ಲೇ ಕೂತಿದ್ದೆ, ಅವರು ನಗುವಾಗಲೂ ಪುಟ್ಟ ಹುಡುಗಂತೆಯೇ ಕಾಣುತ್ತಾರೆ ಅಂತ ಅವತ್ತು ನಂಗೆ ತುಂಬ ಅನಿಸಿತ್ತು. ಆಮೇಲೆ ಅವರು ಛಂದ ಕಾರ್ಯಕ್ರಮದಲ್ಲಿ ಕುಂವೀ ಬಗ್ಗೆ ಮಾತಾಡುವಾಗಲೂ ಅಷ್ಟೇ.

ಈಗ ಹೀಗೆ ಅಚಾನಕ್ಕಾಗಿ ಬಂದ ಕೀರಂರ ಸಾವಿನ ಸುದ್ದಿಯನ್ನು ಹೇಗೆ ಸ್ವೀಕರಿಸಬೇಕೋ ತಿಳಿಯಲಿಲ್ಲ. ಅಷ್ಟೊತ್ತಿಗಾಗಲೇ ಬಂದು ಸೇರಿಕೊಂಡಿದ್ದ ಅರುಣ, ಕೀರಂ ತನ್ನ ಅಮ್ಮನ ಸಾಲಿನಲ್ಲಿ ಹೇಗೋ ನೆಂಟರು, ಅಮ್ಮನಿಗೆ ಗೊತ್ತಾಗಿದೆಯೋ ಇಲ್ವೋ, ತಿಳಿಸ್ತೀನಿ ಅಂತ ಫೋನಿಗೆ ಟ್ರೈ ಮಾಡತೊಡಗಿದ. ಅಷ್ಟೊತ್ತಿಗೆ ಶ್ರೀಕಾಂತನೂ ಬಂದ. ಬಸ್ ಹುಡುಕಲು ಹೊರಟೆವು.

ಚಿಕ್ಕಮಗಳೂರಿನಲ್ಲಿ ತುಂತುರು ಹನಿಗಳ ಮುಂಜಾವಿನಲ್ಲಿ ಇಳಿದು ಪೇಪರ್ ಕೊಂಡರೆ ಮುಖಪುಟದಲ್ಲೇ ಕೀರಂ ಸಾವಿನ ಸುದ್ದಿ ಬಂದಿತ್ತು. ಚಿಕ್ಕಮಗಳೂರಿನಿಂದ ಬಾಬಾಬುಡನ್ ಗಿರಿಗೆ ಹೋಗುವ ಬಸ್ಸಿನಲ್ಲಿ ಹೋಗಿ ಮಧ್ಯದಲ್ಲೆಲ್ಲೋ ಇಳಿದು ನಾವು ಟ್ರೆಕ್ ಶುರು ಮಾಡಬೇಕಿತ್ತು. ಆಗಷ್ಟೆ ತೆರೆದ ಕಾಮತ್ ಹೋಟೆಲಿನಲ್ಲಿ ತಿಂಡಿ ತಿಂದ ನಾವು, ಬಾಬಾಬುಡನ್ ಗಿರಿಯ ಬಸ್ ಹತ್ತಿದೆವು. ಬಸ್ಸಿನಲ್ಲಿ ನಾನು ಜೋಗಿಯವರ ರೂಪರೇಖೆ ಅಂಕಣ ಓದಿದೆ. ಯಾರದೋ ಕತೆಯಲ್ಲಿ ಓದುಗ ಒಂದಾಗುವ ಕುರಿತು ಬರೆಯಹೊರಟಿದ್ದ ಜೋಗಿ, ಬೇಂದ್ರೆ ಕವನವೊಂದನ್ನು ಉದಾಹರಿಸಿದ್ದರು. ಅದರಲ್ಲೂ ಕೀರಂ ಪ್ರಸ್ತಾಪವಿತ್ತು. ಅದು ಕೀರಂಗೆ ಇಷ್ಟವಾದ ಬೇಂದ್ರೆಯವರ ಕವನವಂತೆ. ಕವನ ಓದುತ್ತ ಓದುತ್ತ ನಾನೂ ಅದರಲ್ಲಿ ಒಂದಾದೆ. ಊರಾಚೆಗೊಂದು ಕೈಮರ, ಅಲ್ಲೊಂದು ತಣ್ಣಗೆ ಹರಿವ ಗುಪ್ತಗಾಮಿನಿ, ಅದರಾಚೆಗೊಂದು ದಟ್ಟ ಕಾಡು, ನಡುವಲ್ಲೊಂದು ತಪ್ಪಿ ಬೆಳೆದ ಮಾಮರ, ಆ ಮರದಲ್ಲಿ ಕೂತು ದಿನವಿಡೀ ಕುಹೂ ಕುಹೂ ಎಂದು ಹಾಡುವ ಕೋಗಿಲೆ. ಕವಿತಾನಾಯಕಿಗೆ ಈ ಕೋಗಿಲೆ ಹಾಡು ಎಂದರೆ ಏನೋ ಸೆಳೆತ. ಹಾಡು ಕೇಳುತ್ತ ಕೇಳುತ್ತ ಆಕೆ ಮೈಮರೆಯುತ್ತಾಳೆ. ಎಲ್ಲಿ ಹೋದರೂ ಹಾಡು ಅವಳನ್ನು ಹಿಂಬಾಲಿಸುತ್ತದೆ, ದಿನವಿಡೀ ಕಾಡುತ್ತದೆ -ಎನ್ನುವಾಗ ಅದು ಬರೀ ಕೋಗಿಲೆ ದನಿಯಲ್ಲ, ಅತೀತದೆಡೆಗಿನ ಕರೆ ಎಂಬರ್ಥ ಪಡೆಯುತ್ತದೆ ಕವನ. ಅಷ್ಟರಲ್ಲಿ ನಾವು ಇಳಿಯಬೇಕಿದ್ದ ಸ್ಥಳ ಬಂದಿತ್ತು, ಬೇಂದ್ರೆ ಕರೆದೊಯ್ದಿದ್ದ ಕಾಡಿನಲ್ಲಿ ಕಳೆದುಹೋಗಿದ್ದ ನನ್ನನ್ನು ತಟ್ಟಿ ಎಚ್ಚರಿಸಿದ ಅರುಣ್. ಕೆಳಗಿಳಿದರೆ ಎದುರಿಗೆ ಅಂಬರಚುಂಬಿತ ಗಿರಿ.

ಬೇಂದ್ರೆಯ ಕವಿತೆಯ ನಾಯಕಿಯಂತೆಯೇ ಇರಬೇಕು ನಮ್ಮೆಲ್ಲರ ಪಾಡು. ಏಕೆಂದರೆ, ಕೋಟೆ ಬೆಟ್ಟ ಹತ್ತಿಳಿದು ತಿಂಗಳಾಗಿರಲಿಲ್ಲ, ಮತ್ತೆ ಕರೆದಿತ್ತು ಚಾರಣದ ಹಾದಿ. ಇದೆಂತಹ ಹುಚ್ಚೋ- ಭಾರಚೀಲ ಹೊತ್ತು ಬೆಟ್ಟವೇರುವುದು? ಸುರಿವ ಮಳೆಯಲಿ ತೊಯ್ದು ಜ್ವರ ಬರಿಸಿಕೊಳ್ಳುವುದು? ತಂಡಿಗಾಳಿಗೆ ಮುಖವೊಡ್ಡಿ ತಲೆನೋವಿಗೀಡಾಗುವುದು? ಮಂಜಮುಂಜಾವಿನ ದಟ್ಟಹಸಿರಲಿ ದಾರಿ ತಪ್ಪಿ ಕಕ್ಕಾಬಿಕ್ಕಿಯಾಗುವುದು? ನೋಯ್ವ ಕಾಲನು ತೀಡಿ ಮತ್ತೆ ನಡೆಯಲಣಿಯಾಗುವುದು? ಮುಳ್ಳಯ್ಯನಗಿರಿಯ ಏರು ಸರ್ಪದಾರಿಯಲಿ ಬರೀ ಬೇಂದ್ರೆಯದೇ ಕನವರಿಕೆ.

ಅರುಣ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ..’ ಅಂತ ಸಿದ್ದಲಿಂಗಯ್ಯನವರ ಹಾಡು ಹೇಳತೊಡಗಿದ. ಇದ್ದಕ್ಕಿದ್ದಂತೆ ಬೆಟ್ಟಕ್ಕೆ ಕವಿದಿದ್ದ ಶ್ವೇತವರ್ಣದ ಮಂಜೆಲ್ಲ ಬೆಳದಿಂಗಳಾಗಿಹೋಯಿತು. ಬೇಂದ್ರೆಯ ಹುಡುಗಿಯ ಚೆಲುವಾದ ಮೈಬಣ್ಣವನ್ನು ಸುಡುತ್ತಿರುವ ಬೆಳ್ಳಿಕಿರಣಗಳು ಸುತ್ತೆಲ್ಲ ಸುರಿಯುತ್ತಿರುವಂತೆ ಭಾಸವಾಯಿತು. ‘ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ..’ ಹಾಡಿಗೆ ನಮ್ಮ ಏದುಸಿರು ಮತ್ತು ಸುರಿವ ಮಳೆಯ ತಟ್ತಟ ಸಾಥ್ ಆದವು. ನೀರಹನಿಯಾಶ್ರಿತ ಜೊಂಡು ಹುಲ್ಲುಗಳೆಲ್ಲ ಮೊಲದ ಹಿಂಡಿನಂತೆ ಕಾಲಿಗೆ ಮುತ್ತತೊಡಗಿದವು. ಈ ಹಾಡನ್ನ ಎಸ್ಪಿಬಿಯ ಸುಶ್ರಾವ್ಯ ಕಂಠದಲ್ಲಿ ಕೇಳುವುದಕ್ಕಿಂತ ಅಪ್ಪಗೆರೆ ತಿಮ್ಮರಾಜು ಕುಣಿದಾಡಿಕೊಂಡು ಹಾಡುವ ಶೈಲಿಯೇ ಚಂದ ಅಂತ ಎಷ್ಟೋ ಬಾರಿ ನಾನು ಯೋಚಿಸಿದ್ದೆ. ಸಿದ್ದಲಿಂಗಯ್ಯನವರ ಎದುರಿಗೇ ಅವರು ಹಾಡಿದ್ದನ್ನು ನಾನು ನೋಡಿದ್ದೆ. ಸಭೆಯನ್ನೊಮ್ಮೆ, ಪಕ್ಕವಾದ್ಯದವರನ್ನೊಮ್ಮೆ, ಕವಿಯನ್ನೊಮ್ಮೆ ನೋಡುತ್ತ, ತುಂಬುನಗೆ ಚಿಮ್ಮಿಸುತ್ತ, ಮಧ್ಯದಲ್ಲೊಂದು ಸಲ ಮುಗಿದೇಹೋಯಿತೇನೋ ಎನ್ನುವಂತೆ ಹಾಡಿನ ಬಂಡಿಯನ್ನು ಗಕ್ಕನೆ ಬ್ರೇಕ್ ಹಾಕಿ ನಿಲ್ಲಿಸಿ, ಇಡೀ ಪ್ರೇಕ್ಷಕವೃಂದದ ಎದೆಬಡಿತವನ್ನು ಕ್ಷಣಕಾಲ ಹಿಡಿದು-ಬಿಟ್ಟಂತೆ, ಗಳಿಗೆಯ ನಂತರ ಮತ್ತೆ ಮುಂದುವರೆಸುವ ಪರಿ.. ವಾಹ್! ಕವಿಯ ಕಣ್ಣಲ್ಲಿ ಮಂಜ ಪದರ! ಆ ಹಾಡು, ಈ ಭಾವ, ಆ ಮಂಜು, ಈ ನೋಟ ಯಾಕೆ ನಿರಂತರವಾಗಬಾರದು? ಆಗಿಬಿಟ್ಟರೆ ಇದೂ ಬೇಸರ ಬಂದು ಮತ್ತೇನಕ್ಕೋ ತುಡಿಯುತ್ತೇವೆಯೋ? ರೇಖಾ ತನಗೆ ನಿಪ್ಪಟ್ಟು ಬೇಕು ಅಂತ ಹಟ ಶುರು ಮಾಡಿದ್ದಳು.

ಮುಳ್ಳಯ್ಯನ ಗಿರಿಯ ಸೌಂದರ್ಯವೂ ನಾಶವಾಗುವುದಕ್ಕೆ ಇನ್ನು ಹೆಚ್ಚು ಕಾಲ ಬೇಕಿಲ್ಲ ಅಂತ ಮೇಲೆ ತಲುಪಿದಾಗ ನಮಗೆ ತಿಳಿಯಿತು. ಶೃಂಗದವರೆಗೂ ಪ್ರವಾಸೋದ್ಯಮ ಇಲಾಖೆಯವರು ಟಾರ್ ಎಳೆದುಬಿಟ್ಟಿದ್ದಾರೆ. ಇಂಥ ಮಳೆಗಾಲದಲ್ಲೇ ಅಲ್ಲಿ ಹದಿನೈದಿಪ್ಪತ್ತು ಕಾರು-ಜೀಪುಗಳಿದ್ದವು. ಏರಿಸಿದ ಅರೆಪಾರದರ್ಶಕ ಗಾಜಿನ ಹಿಂದೆ ಗ್ಲಾಸುಗಳು ಖಾಲಿಯಾಗುತ್ತಿದ್ದವು. ರಸ್ತೆಬದಿಯಲ್ಲೆಲ್ಲ ಒಡೆದ ಬಾಟಲಿಗಳು. ಸಿಗರೇಟಿನ ಪ್ಯಾಕುಗಳು. ಇನ್ನೆರಡು ವರ್ಷಗಳಲ್ಲಿ ಇಲ್ಲಿ ರೆಸಾರ್ಟುಗಳು ಬಂದು, ಐಷಾರಾಮಿ ಲಾಡ್ಜುಗಳು ತಲೆಯೆತ್ತಿ, ವೆಬ್‌ಸೈಟುಗಳು ಪ್ರವಾಸಿಗರನ್ನು ಆಕರ್ಶಿಸಿ... ‘ಮುಗೀತು ಬಿಡು, ಇನ್ನು ನಾವು ಒಂದು ದಿನದ ಟ್ರೆಕ್‌ಗೆ ಹೊಸ ಜಾಗ ಹುಡುಕ್ಕೋಬೇಕು’ ಅಂತ ಶ್ರೀಕಾಂತ ನಿಟ್ಟುಸಿರು ಬಿಟ್ಟ. ಟಾರು ಬಳಿದ ಕಡುಗಪ್ಪು ರಸ್ತೆಯಲ್ಲಿ ಮಾತೇ ಇಲ್ಲದೆ ನಾವು ವಾಪಸು ನಡೆಯತೊಡಗಿದೆವು. ಬೇಂದ್ರೆಯ ಹಾಡಿನ ಹುಡುಗಿಯ ಮೇಲೆ ಸುರಿದ ಸಿದ್ದಲಿಂಗಯ್ಯನವರ ಕವಿತೆಯ ಬೆಳದಿಂಗಳ ಬಗ್ಗೆ ಕೀರಂ ಸ್ವರ್ಗದಲ್ಲಿ ಉಪನ್ಯಾಸ ಕೊಡುತ್ತಿದ್ದರು.

// ಫೋಟೋಸ್ //

7 comments:

ಸೂರ್ಯಕಿರಣ್ ಜೋಯಿಸ್ said...

ಸುಶ್ರುತ,
ನೀವುಗಳು ಆಯೋಜಿಸಿದ್ದ ಬ್ಲಾಗ್ ಬರಹಗಾರರ ಸಮ್ಮೇಳನಕ್ಕೆ ನಾನು ಅನಿವಾರ್ಯ ಕಾರಣಗಳಿಂದ ಬರಲಾಗಿರಲಿಲ್ಲ. ಆ ಬಗ್ಗೆ ನಾನು ಆಗಾಗ ಪೇಚಾಡುವುದುಂಟು. ಈ ನಿಮ್ಮ ಲೇಖನ ಓದಿದ ನಂತರ ಪೇಚಾಟ ಹೆಚ್ಚಾಗಿದೆ!
ಸುಂದರ ಬರಹ. ಅಭಿನಂದನೆಗಳು

ಸಾಗರದಾಚೆಯ ಇಂಚರ said...

ಸೊಗಸಾದ ಬರಹ

ಮನದಾಳದಿಂದ............ said...

ಉತ್ತಮ ಬರಹ,
ಫೋಟೋಗಳನ್ನೂ ನೋಡಿದೆ ಸುಂದರವಾಗಿವೆ.
ಶ್ರೀಯುತ ಕಿ. ರಂ. ನಾಗರಾಜ್ ಅವರು ಸದಾ ನಮ್ಮೆಲ್ಲರ ಮನದಲ್ಲಿ ಜೀವಂತವಾಗಿಯೇ ಇದ್ದಾರೆ.

Dr.D.T.Krishna Murthy. said...

ಉತ್ತಮ ಬರಹ.ಅಭಿನಂದನೆಗಳು.

ಸೀತಾರಾಮ. ಕೆ. / SITARAM.K said...

ಚೆಂದದ ಬರಹ.

sunaath said...

ಮನಸ್ಸು ಮಿಡಿಯುವಂತಹ ಬರಹ.

V.R.BHAT said...

Good !