Monday, August 23, 2010

ಆಮ್‌ಲೆಟ್ಟು

ಮೊಟ್ಟೆ ವೆಜ್ಜೋ ನಾನ್ವೆಜ್ಜೋ ಎಂಬ
ಕುರಿತು ನಿನ್ನೆ ಆದ ಭಾರೀ ಚರ್ಚೆ
ಯಲ್ಲಿ ನಾನು ಭಾಗವಹಿಸಲಿಲ್ಲ.
ಕಾರಣ ಇಷ್ಟೇ:
ಸ್ವಲ್ಪ ಅಬ್ಬೊತ್ತಿದರೂ ಒಡೆದು
ಹೋಗಿಬಿಡುತ್ತದೇನೋ ಎನಿಸುವ ಮೊಟ್ಟೆಯ
ತಲೆಯನ್ನಷ್ಟೇ ಚಮಚೆಯಿಂದ ತಟ್ಟಿ ಒಡೆದು
ಹಾರಿಸುವ ಕಾರ್ಯದಲ್ಲಿ ನಾನು ಗರ್ಕನಾಗಿದ್ದೆ.
ಅದರೊಡಲ ಸರ್ವಸಾರವನ್ನೂ
ಬಸಿದು ಲೋಟಕೆ ಪುಳಕ್ಕನೆ
ಈರುಳ್ಳಿ-ಮೆಣಸಿನಕಾಯಿಗಳೊಂದಿಗೆ ಇಷ್ಟೇ
ಉಪ್ಪು ಹಾಕಿ ಲೊಳಲೊಳ ಕಲಸಿ
ಹೊಯ್ದು ಚೊಂಯನೆ ಕಾದ ಕಾವಲಿಯ ಮೇಲೆ
ಇಷ್ಟಗಲವಾಪ ಭೂಪಟದ್ಯಾವುದೋ ಖಂಡದಂತ
ದೋಸೆಯನ್ನು ಬಿಸಿಬಿಸಿ ಸವಿಯುವ
ನನ್ನಿಷ್ಟದ ಕೈಂಕರ್ಯದಲ್ಲಿ ನಿಮಗ್ನನಾಗಿದ್ದೆ.

ಜಗುಲಿಯಲ್ಲಿಯ ಮಾತು ಕೇಳಿಸುತ್ತಿತ್ತು:
ರಕ್ತವಿರುವುದಿಲ್ಲ, ಹಾಗಾಗಿ ತಿನ್ನಲಡ್ಡಿಯಿಲ್ಲ ಎಂದರು ಯಾರೋ.
ಮತ್ಯಾರೋ ಅಂದರು,
ಸಸ್ಯಜನ್ಯವಾಗಿದ್ದರೆ ಮಾತ್ರ ಅದು ಸಸ್ಯಾಹಾರ
ಅಲ್ಲದೇ,
ಯಾವ ಜಾತಿಯವರ ಮನೆಯ ಕೋಳಿಯೋ ಏನೋ
ಏನು ತಿಂದು ಬೆಳೆದಿತ್ತೋ ಏನೋ
ಎಂಥ ಹುಂಜವ ಕೂಡಿತ್ತೋ ಏನೋ
ಈಯ್ದು ಎಷ್ಟು ದಿನವಾಯ್ತೋ ಏನೋ
ಇಂಥ ಕುಲ-ಜಾತಿ-ಭೂತಗಳ ತಿಳಿಯದ
ಪದಾರ್ಥ ಸೇವನೆಗೆ ವರ್ಜ್ಯವೇ ಸರಿ
ಎಂಬ ತೀರ್ಮಾನಕ್ಕೆ ಅವರು ಬರುವಷ್ಟರಲ್ಲಿ

ನಾನು ತೇಗಿ, ಆಹ್, ಅದ್ಭುತವಾಗಿತ್ತು ಆಮ್ಲೆಟ್ಟು
ಎಂದದ್ದಕ್ಕೆ ಎಲ್ಲರೂ ತಿರುಗಿ ನನ್ನನ್ನೇ
ನೋಡಿದರು.
ಅಂಡಾಕೃತಿಯ ಅವರ ತಲೆಯ
ಮೇಲುಳಿದಿದ್ದ ಕೆಲವೇ ಕೂದಲುಗಳೂ
ನಿಮಿರಿ ನಿಂತಿದ್ದನ್ನು ನಾನು ಗಮನಿಸಿದೆ.

19 comments:

ಮನಸಿನ ಮಾತುಗಳು said...

ಹೇಯ್ ಚನಾಗಿ ಬರದ್ದೆ.. :-) ಇಷ್ಟ ಆತು.. ನಾನೂ ನಿನ್ ಹಂಗೆಯ..ಯಾರು ಎಂತ ಹೇಳಿದ್ರು ಕೇಳದಿಲ್ಲ. veg / non - veg ಹೇಳಿ ವಾದ- ವಿವಾದ ಮಾಡರು ಮಾಡ್ತಾ ಇರ್ಲಿ. ನಂದು ಮಾತ್ರ ತಿನ್ನೋ ವಿಷಯದಲ್ಲಿ ನೋ compromise ... :-)Omlet ನನ್ favourite ... ;-)

ಆನಂದ said...

ಯಾರದ್ದೋ ಚರ್ಚೆಗೆ ಬೆಲೆ ಕೊಡದಿದ್ದರೆ ಓ.ಕೆ . ಆದ್ರೆ ಸ್ವಂತ ಬುದ್ಧಿಯಿಂದ ಯೋಚನೆ ಮಾಡೋದು ಕಲಿತರೆ ಒಳ್ಳೆಯದು. ವೆಜ್ ನಾನ್ ವೆಜ್ ಅನ್ನೋ ಕಾರಣ ಸೆಕೆಂಡರಿ.

shridhar said...

ಯಾರದ್ದೋ ಗಲಾಟೆಲಿ ಆಮ್ಲೆಟ್ ತಿಂದವನೇ ಜಾಣ :)

Unknown said...

ಗದ್ಯದ ಸಾಲುಗಳನ್ನ ತುಂಡು ತುಂಡು ಮಾಡಿ ಒಂದರ ಕೆಳಗೊಂಡು ಇಟ್ಟರೆ ಪದ್ಯವಾಗುತ್ತದೆಯೇ?

Shiv said...

ರೂಂ ಮೇಟ್ ಹೋದ ಮೇಲೆ ಸುಶ್ರೂತರ ಪಾಕ ಕ್ರಾಂತಿಗಳು ಅತೀವವಾಗಿ ಹೆಚ್ಚಿದ ಹಾಗಿದೆ :)

ತೇಜಸ್ವಿನಿ ಹೆಗಡೆ said...

ಮೊಟ್ಟೇ ವೆಜ್ಜೋ ನಾನ್ವೇಜ್ಜೋ... ಅದನ್ನು ವಾದಿಸಿ ಪ್ರಯೋಜನವಿಲ್ಲ.... ಇಷ್ಟಕ್ಕೂ ಅದು ಅವರವರ ಅಭಿರುಚಿಗೆ ಬಿಟ್ಟಿದ್ದು. ಒತ್ತಾಯ ಮಾತ್ರ ಸಲ್ಲ. ಆದರೆ ಇಂದು ಮೊಟ್ಟೆ ವೆಜ್ ಎಂದೇ ತಿನ್ನುತ್ತಾ(ತಮ್ಮ ಬಾಯಿ ರುಚಿಗಾಗಿ..) ನಾಳೆ ಮೀನು, ನಾಡಿದ್ದು, ಕೋಳಿ, ಅಚೆ ನಾಡಿದ್ದು, ಕುರಿ - ಹೀಗೇ ಎಲ್ಲವನ್ನೂ ವೆಜ್ ಕೆಟಗರಿಗೆ ಸೇರಿಸಿದರೆ (ಅಲ್ಪ ಸಂಖ್ಯಾತರಾಗಿರುವ ಸಸ್ಯಾಹಾರಿಗಳೇ..) ಮಾತ್ರ ಪ್ರಾಣಿದಯಾಸಂಘಕ್ಕೆ ದೂರು ಕೊಡಬೇಕಾಗಬಹುದು :) ಮೊದ ಮೊದಲು ಬಿಯರ್ ಅನ್ನು ತೀರ್ಥ ಎಂದೇ ಸೇವಿಸುವುದು... ಆಮೇಲೆ ತಾನೇ ಅದು ಕುಡಿತಕ್ಕೆ ಬದಲಾಗುವುದು? :)

sunaath said...

ಉತ್ತಮ ಚರ್ಚೆಗೆ ಅವಕಾಶ ಮಾಡಿಕೊಟ್ಟ ಕವನ.

ಪ್ರಗತಿ ಹೆಗಡೆ said...

hahaha... nice

ವಿನಾಯಕ ಕೆ.ಎಸ್ said...

ಮಾಣಿ ಹಾಳಾಗ್ತ ಇದಾನಪ್ಪ!
ಕೋಡ್ಸರ

Anonymous said...

ನೈಸ್, ಇಷ್ಟವಾತು!

umesh desai said...

ಸುಶ್ರುತ ಆಮ್ಲೆಟ್ ಭರದಲ್ಲಿ ನಿಮ್ಮ ಕವಿತ್ವ ಸಪ್ಪೆ ಅನಿಸಿತು ಡುಂಡಿರಾಜ್ ಮೊನ್ನೆ ಹೇಳಿದಹಾಗೆ ಇದು ಗಪದ್ಯಾನೆ ಅಂತ

Raghu said...

ಹ್ಹೆ ಹ್ಹೆ ಹ್ಹೆ ಒಳ್ಳೆ ಮಾತು ಕಣ್ರೀ ನಿಮ್ಮದು...
ನಿಮ್ಮವ,
ರಾಘು.

ಸಾಗರದಾಚೆಯ ಇಂಚರ said...

ಹಹಹ

ಚೆನ್ನಾಗಿದ್ದು

Harisha - ಹರೀಶ said...

Same as Kavya's comment :-P

Narayan Bhat said...

ಸ್ವಾರಸ್ಯಕರವಾಗಿದೆ..ನಿಮ್ಮ ಜೊತೆಗಾರರೂ ನಿಮ್ಮ ಜೊತೆ ಸಹಕರಿಸಿ, ಮೊಟ್ಟೆಯ ಆಮ್ಲೆಟ್'ನ್ನು, ತಿಂದು ತೇಗಿದ ಮೇಲೆಯೇ ಚರ್ಚೆಗೆ ಕುಳಿತುಕೊಳ್ಳಬಹುದಾಗಿತ್ತು ಅಲ್ವೇ?

ಸೀತಾರಾಮ. ಕೆ. / SITARAM.K said...

ತಿನ್ನಬೇಕಿದ್ದರೆ ತಿನ್ನಿ ಆದರೆ ನಾನ್-ವೆಜ್ಜ ಎಂದು ಸಮಜಾಯಿಸಿ ಬೇಡ.
ನಿಮ್ಮ ತತ್ವ ಸರಿ ಇದೆ. ಸುಮ್ಮನೆ ತಿನ್ನಬೇಕೆನಿಸ್ದರೆ ತಿನ್ನುತಾ ಇರಿ. ವೆಜ್ಜ್ ಅನ್ನೋ ತರ್ಕ ಬೇಡ!

Anonymous said...

ಚೆನ್ನಾಗಿದೆ.. ಇಷ್ಟ ಆಯ್ತು...
ಹೆ ಆಮ್ಲೆಟ್ ಅಲ್ಲ.. ಪದ್ಯ :-)

Ultrafast laser said...

I am honest here (as usual), I request you to stop writing poems.-D.M.Sagar

Sushrutha Dodderi said...

ಪ್ರತಿಕ್ರಿಯಿಸಿದ ಎಲ್ಲರಿಗೂ ಶರಣು.

ಈ ಬ್ಲಾಗು ನನ್ನ ಪ್ರಯೋಗಗಳಿಗೊಂದು ವೇದಿಕೆ. ಕವಿತೆ ನನ್ನ ಪ್ರೀತಿ - ಇತ್ತೀಚಿನ ಹುಚ್ಚು. ಬಿಟ್ಟಿರ್ಲಿಕ್ಕೆಲ್ಲಾ ಆಗಲ್ಲಾ, ಓದಿ ಹೀಂಗೆ ನಿಮಗನ್ನಿಸಿದ್ದನ್ನ ಹೇಳ್ತಿದ್ರೆ ಥ್ಯಾಂಕ್ಸೋ ಥ್ಯಾಂಕ್ಸು. :-)

ಉಳಿದಂತೆ, ನಂಗೆ ಮಾಡ್ಬೇಕು ಅನ್ಸಿದ್ದನ್ನ ಮಾಡ್ಯೇ ತೀರ್ತೀನಿ, ತಿನ್ಬೇಕು ಅನ್ಸಿದ್ದನ್ನ ತಿಂದೇ ತಿಂತೀನಿ. ಹಾಗೇ ಆಮ್ಲೆಟ್ಟು.

ಧನ್ಯವಾದ.