ಇದ್ದಕ್ಕಿದ್ದಂತೆ ಮಧ್ಯರಾತ್ರಿಯಲ್ಲಿ ಸುರಿಯಲು ಶುರುವಿಡುವ ಮಳೆ
ಊರಲ್ಲಿ ಯಾರೋ ತೀರಿಕೊಂಡರಂತೆ ಎಂಬ ಸುದ್ದಿ
ಯಾಕೋ ನಿದ್ದೇನೇ ಬರ್ತಿಲ್ಲ ಅಂತ ಹುಡುಗಿಯ ಎಸ್ಸೆಮ್ಮೆಸ್ಸು
ಕರವೀರದ ಹೂವನ್ನು ಸೀಪಿದ ಸಿಹಿಯ ನೆನಪು
ಬಾನಿಯಲ್ಲಿ ನೆನೆಸಿಟ್ಟ ಮೈಲುತುತ್ತ ಕಂಡರೆ
ನಾಳೆ ಕೊಳೆ ಔಷಧಿ ಹೊಡೆಯಲು ಶೀನ ಬರುತ್ತಾನೋ ಇಲ್ಲವೋ ಚಿಂತೆ
ಈ ಆಗಸ್ಟ್ ತಿಂಗಳೇ ಹೀಗೆ
ಒಂದಕ್ಕೊಂದು ಸಂಬಂಧವಿಲ್ಲದ ಚಿತ್ರಗಳನ್ನು ಜೋಡಿಸಿ ಮಾಡಿದ ಕೊಲಾಜ್
ಅದರಲ್ಲೇ ಅರ್ಥ ಹುಡುಕುವ ಹುಂಬತನ
ಜಾರುವ ಬಚ್ಚಲುಕಲ್ಲಿಗೆ ಬ್ಲೀಚಿಂಗ್ ಪೌಡರ್ ಹೊಯ್ದು ತರೆದು ತರೆದು ಕೈನೋವು
ನಿಂಬೆಹಣ್ಣು ಹಿಂಡುವಾಗ ಬೀಜವೂ ಬಿದ್ದುಹೋಗಿ ಎಲ್ಲಾ ಕಹಿಕಹಿ
ಮಲ್ಲಿಗೆ ಕ್ಯಾಲೆಂಡರಿನಲ್ಲಿ ಸೈಕಲ್ ಪ್ಯೂರ್ ಅಗರಬತ್ತಿಯ ಜಾಹೀರಾತು
ಎಷ್ಟೇ ಪ್ರಯತ್ನಪಟ್ಟರೂ ನಗು ತಾರದ ಗಂಗಾವತಿ ಬೀಚಿಯ ಜೋಕು
ಛೇ, ಈ ಆಗಸ್ಟ್ ತಿಂಗಳೇ ಹೀಗೆ
ಊರ ಗಣಪೆ ಮಟ್ಟಿಯ ಮರೆಯಲ್ಲಿ ನೀಲಿಹೂವೊಂದು ಬಿಟ್ಟಂತೆ ಕನಸು
ಕಲಾಸಿಪಾಳ್ಯದ ಬೀದಿನಾಯಿ ಬೆದೆಗೆ ಬಂದು ಅಂಡರ್ಪಾಸ್ ಕೆಳಗೆ ಕಾಮಕೇಳಿ
ಕನ್ನಡ ನಿಘಂಟಿನ ಕೊನೇಪುಟದಲ್ಲಿ ಳಕಾರದ ಆತ್ಮಹತ್ಯೆ
ಮಿಥುನ ರಾಶಿಯನ್ನು ಹಾದುಹೋಗುವಾಗಲೆಲ್ಲ ಇನ್ಸಾಟ್-ಬಿ ಉಪಗ್ರಹಕ್ಕೆ ಏನೋ ಪುಳಕ
ಸೋರುತ್ತಿರುವ ನಲ್ಲಿ ಕೆಳಗಿನ ಬಕೇಟಿನಲ್ಲಿ ಕ್ಷಣಕೊಂದು ಅಲೆಯ ಉಂಗುರ
ಶನಿವಾರದ ಜಾಗರದ ಪರಿಣಾಮ, ಶಂಕರ ಭಾಗವತರ ಮದ್ದಲೆಗೆ ಭಾನುವಾರ ಮೈಕೈ ಸೆಳೆತ
ಏನು ಮಾಡೋದು, ಈ ಆಗಸ್ಟ್ ತಿಂಗಳೇ ಹೀಗೆ
ಟೀವಿಯಲ್ಲಿ ಕತ್ರೀನಾ ಕೈಫಿಗೆ ಈ ಚಳಿಯಲ್ಲೂ ದಿನಕ್ಕೆ ನೂರಾಎಂಟು ಸಲ ಸ್ನಾನ
ಅಂಬೋಲಿ ಘಾಟಿನಲ್ಲಿ ಹಸಿದ ಇಂಬಳದ ಅಂಗುಲ-ಅಂಗುಲ ನಡಿಗೆ
ನೈಟ್ ಬಸ್ಸು ನಿಂತ ಡಾಬಾದಲ್ಲಿ ಅಣ್ಣಾವ್ರ ಹಾಡಿನ ಉಸ್ತುವಾರಿ
ಅಲ್ಲಲ್ಲೆ ನಿಲ್ಲುವ ಮನಸುಗಳಿಗೆ, ಅರಳಲಣಿಯಾಗಿರುವ ಮೊಗ್ಗುಗಳಿಗೆ
ನೀರು ಜಿನುಗಿಸುತಿರುವ ಒರತೆಗಳಿಗೆ, ಅಂಚೆಪೆಟ್ಟಿಗೆಯಲ್ಲಿರುವ ಪತ್ರಗಳಿಗೆ
ಮುತ್ತಮಧುಗ್ರಾಹೀ ಅಧರಗಳಿಗೆ, ಬೆಳ್ಳಿನೂಪುರ ಘಲ್ಲುಘಲ್ಲೆನೆ ಉಷೆ
ಹೇಳಿದೆನಲ್ಲಾ, ಈ ಆಗಸ್ಟ್ ತಿಂಗಳೇ ಹೀಗೆ.
29 comments:
Liked it :)
"ಒಂದಕ್ಕೊಂದು ಸಂಬಂಧವಿಲ್ಲದ ಚಿತ್ರಗಳನ್ನು ಜೋಡಿಸಿ ಮಾಡಿದ ಕೊಲಾಜ್
ಅದರಲ್ಲೇ ಅರ್ಥ ಹುಡುಕುವ ಹುಂಬತನ"
"ನಿಂಬೆಹಣ್ಣು ಹಿಂಡುವಾಗ ಬೀಜವೂ ಬಿದ್ದುಹೋಗಿ ಎಲ್ಲಾ ಕಹಿಕಹಿ"
:-) Nice lines.. :)
ತು೦ಬಾನೆ ಚೆನ್ನಾಗಿದೆ ಸುಶ್, ಆಗಸ್ಟ್ ಮುಗೀತಿದೆಯಲ್ಲ
ಸೆಪ್ಟೆ೦ಬರ್ ಇನ್ಹೆ೦ಗೋ ? ಅದಕ್ಕೂ ಒ೦ದು ಕವನ ಬರಲಿ.
nice one!!!!!! innu oMde dina kayiri august mugiyutta baMtu!!!!!!!!
ಅಂಬರದಲ್ಲಿ ನೇಸರ, ಅಡ್ಡಗೋಡೆ ಇಟ್ಟ ಹಾಗೇ ಮೋಡ, ಸುರಿಯುವದು ಇಲ್ಲವೋ ಧಾವಂತ ಮನದ ಮೂಲೆಯಲ್ಲಿ, ಪ್ರಾಣಿಗಳ ತೀಟೆ ಮತ್ತು ತಿಕ್ಕಲು, ಕಯ್ಯಲ್ಲಿ ಕಾಫಿ ಬಟ್ಟಲು, ಕಾಳು ಅರಸೋ ಕೋಳಿ,ಅದರಕಾಲಿಗೆ ಅಡ್ಡ ಬಾರೋ ಕೋಳಿ ಮರಿಗಳ ಹಿಂಡು, ಎಲ್ಲೋ ಅಮ್ಲೆಟ್ ಬೇಯಿಸಿ ತಿನ್ನೋ ವಾಸನೆ, ಮರಿಯಾಗದ ಮೊಟ್ಟೆಗೆ ಮರುಗೋ ಮನ, ಇನ್ನೂ ಏನೇನೋ? ಮನದಲ್ಲಿ ಕವುಚಿ ಹಾಕಿದ ಹಾಗಾಯ್ತು ಕವನ ಓದ್ತಾ ಇದ್ದ ಹಾಗೇ!
ಚೆಂದದ ಬಿಡಿ ಬಿಡಿ ಭಾವ ಅನೂಹ್ಯ ಭಂದನದಲ್ಲಿ ಬೆಸೆದ ಹಾಗೇ. ಮನದ ಚಿತ್ರ-ವಿಚಿತ್ರ ರಿಂಗಣ ಯಥಾವತ್ತಾಗಿ ಹಿಡಿದಿಟ್ಟಿದ್ದಿರಾ...
ಧನ್ಯವಾದಗಳು.
lifeu ishtene
nice one ..
ಕವನ ಚೆನ್ನಾಗಿದೆ. ಇಷ್ಟ ಆಯ್ತು.
ಕವನ ತುಂಬ ಖುಷಿ ನೀಡಿದೆ.
ಕವನ ಇಷ್ಟ ಆಯಿತು.
ಸುಶ್ರುತರಿಂದ ಕವನಗಳ ಧಾರೆ.
ಆ ಧಾರೆಯಲ್ಲಿ ಓದುಗರ ಮನವೆಲ್ಲ ಒದ್ದೆ.
ಈ ಅಗಸ್ಟ ತಿಂಗಳೇ ಹೀಗೆ!
ಚೆನ್ನಾಗಿದೆ...ಇಷ್ಟ ಆಯ್ತು...
ha ha gud one. lifu oshtena padya preraneya?
ಸುಶ್ರುತ ಕವನವೂ ಕೊಲಾಜ್ ಆಗಿದೆ ವಿಚಿತ್ರ ಅನಿಸಿದರೂ ಚೆನ್ನಾಗಿದೆ
sooper..
:-O... en helbeko gothaagtilla ... odokke chennagittu :-)
ಆಗಸ್ಟ್ ವರ್ಣನೆ ಸೊಗಸಾಗಿದೆ.
ಲೋ ಗುರು, ಟಿಪಿಕಲ್ ಕನ್ನಡ ಸಿನಿಮಾ ಉದ್ಯಮದ ಕಥೆ ಆಯ್ತಲ್ಲೊ ನಿಂದು. ಯೋಗರಾಜ್ ಭಟ್ಟರ ಮುಂಗಾರು ಮಳೆ ಚಿತ್ರ ನೋಡಿ, ಸುಮಾರು ೩ ವರ್ಷ ಅಂಥದ್ದೆ ಚಿತ್ರಗಳು! ಅವರ ಕವಿತೆ ನೋಡಿ ಅಂತದ್ದೆ ಕವಿತೆಗಳು. ಎಲ್ಲರಿಗೂ ನಿನ್ನ ಹಾಗೆ ಒಳ್ಳೆ ಕವಿತೆಗೆ ಪ್ರೇರಣೆ ಸಿಕ್ಕರೆ ಉತ್ತಮ. ಇಲ್ಲ ಅಂದ್ರೆ ನೋಡುಗ ದೊರೆ ಹೈರಾಣು! ಒಳ್ಳೆ ಪ್ರಯತ್ನ. ಮುಂದುವರಿಸು...ಕಥೆಯಲ್ಲದ ಕವಿತೆ...
:-) :-) :-) Nice...
chanagiddu:)
really amazing lines sushrut... i just liked
ನಿಮ್ಮ ಕವನಗಳನ್ನು ಓದುವಾಗಿ ಯೋಗ ರಾಜ್ ಭಟ್ಟರ ’ಪಂಚರಂಗಿ ಲೈಫ್ ಇಷ್ಟೇನೆ’ ಹಾಡು ನೆನಪಾಯಿತು.
ತುಂಬಾ ಸುಂದರ ಕವನ ಸರ್
ತುಂಬಾ ಚೆನ್ನಾಗಿದ್ದು :)
ಚನ್ನಾಗಿದೆ.. ಇಷ್ಟವಾಯಿತು
ಮಿಥುನ ರಾಶಿಯನ್ನು ಹಾದುಹೋಗುವಾಗಲೆಲ್ಲ ಇನ್ಸಾಟ್-ಬಿ ಉಪಗ್ರಹಕ್ಕೆ ಏನೋ ಪುಳಕ
ಮೋಟುಗೋಡೆಯ ಸಹವಾಸವಿರಬಹುದು !
Swami...inta baraha ellu nodirlilla....nimagondu dodda namaskara....
ಥ್ಯಾಂಕ್ಯೂ ಆಲ್!
ಬ್ಲಾಗ್ ಲೋಕದ ಪರಿಚಯ ಇತ್ತೀಚೆಗೆ ಆಯ್ತು. ಡಿಸೆಂಬರ್ ನಲ್ಲಿ ಆಗಸ್ಟ್ ತಿಂಗಳ ಕವನ ಓದಿದೆ. ತುಂಬ ಸುಂದರವಾಗಿದೆ. ಅದ್ಭುತ ಕಲ್ಪನೆ. ಮನಸಿಗೆ ಮುದ ನೀಡುವಂತದು.
Post a Comment