ತಳ್ಳುಗಾಡಿಯ ಮೇಲೊಂದು ಸಿಲಾವರದ ಪಾತ್ರೆ-
ಬೇಯಿಸುತ್ತಿದ್ದಾನೆ ಲುಂಗಿಯುಟ್ಟವ ಬಿಸಿನೀರಲ್ಲಿ
ರಾಶಿ ರಾಶಿ ಕಡಲೇಕಾಯಿ ಹಬೆ ಹಬೆ
ಉದ್ದ ಹಿಡಿದರೆ ಎಂಟು; ಜೋತಾಡಿಸಿದರೆ ಗಂಟು
ಒಡೆದರೆ ಎರಡು ಪುಟ್ಟ ಶಿಶುಗಳು ಗರ್ಭದಲ್ಲಿ
ಕೆಲವೊಮ್ಮೆ, ಅದೃಷ್ಟ ಜೋರಿದ್ದರೆ, ಮೂರು.
ಒಂದು ದಿನ, ಯಾರೋ ಹತ್ತಿರ ಬಂದು
ಕೂತುಬಿಡುತ್ತಾರೆ. ಕೈ ಹಿಡಿದು ಕತೆ ಹೇಳುತ್ತಾರೆ.
ಅಪ್ಪ-ಅಮ್ಮ ತುಂಬಾ ಒಳ್ಳೆಯವರು.
ದೊಡ್ಡಪ್ಪ ಚಿಕ್ಕವನಿದ್ದಾಗಲೇ ಮನೆಯಿಂದ ಓಡಿಹೋಗಿದ್ದಂತೆ.
ಅತ್ತೆ ಇದ್ದಾಳಲ್ಲ -ಅದೇ, ಅಪ್ಪನ ತಂಗಿ-
ಅವಳಿಗೆ ಕಿವಿ ಸ್ವಲ್ಪ ಮಂದ
ಆದರೆ ಸನ್ನೆಯಲ್ಲೇ ಎಲ್ಲಾ ಅರ್ಥ ಮಾಡಿಕೊಳ್ಳುತಾಳೆ
ಮಾವನಿಗೆ ಅವಳ ಮೇಲೆ ಯಾವಾಗಲೂ ಸಿಡುಕು
ಗೊತ್ತಾ? ನನ್ನ ತಂಗಿಗೆ ಗಾಜಿನ ಹೂಜಿಯಲ್ಲಿ
ಮೀನು ಸಾಕಬೇಕು ಅಂತ ಆಸೆಯಿತ್ತು
ಇಳಿದು ನೋಡಿದರೆ ಕಣ್ಣಾಳ, ಅದೆಷ್ಟೊಂದು ಕತೆಗಳು
ನಿನ್ನಲ್ಲಿ.. ಇಡಲಾಗದೇ ಈ ಪುರಾಣ, ಇತಿಹಾಸ, ಭೂತ-
ವನ್ನೆಲ್ಲ ಕಟ್ಟಿ ಆಚೆ? ಅಳಿಸಿ ಉಳಿದೆಲ್ಲ ಚಿತ್ರ,
ಬಿಡಲಾಗದೆ ಬರೀ ನಾವಿಬ್ಬರ ಮೌನಭಿತ್ತಿಯಲ್ಲಿ?
ಕಾಯುತ್ತಿದ್ದಾನೆ ತಳ್ಳುಗಾಡಿಯಲ್ಲಿ ಕಡಲೆಕಾಯಿಯವ..
ಒಂದಷ್ಟು ಬೇಯಿಸದ ಕಾಯಿಗಳೂ ಇವೆಯಂತೆ ಅವನ ಬಳಿ
ಕೇಳಿದರೆ, ಪುಟ್ಟ ಪೊಟ್ಟಣದಲ್ಲಿ ಕಟ್ಟಿಕೊಟ್ಟಾನು
ಬಿಡಾರದಲ್ಲಿ ಒಲೆಯಿದೆ; ಸೂರಂಚಿಂದ ಸುರಿವ ಮಳೆಯಿದೆ
ಹೊಸನೀರಿನಲ್ಲಿ ಬೇಯಿಸೋಣ ಕನಸುಗಳನ್ನು.
ಹಾರೈಸೋಣ ಸಾಕು- ಒಡಲ ಹೂರಣ ಕಹಿಯಿರದಿರಲೆಂದು.
9 comments:
ಅದ್ಭುತ ಉಪಮೆ.
ನೆಲಗಡಲೆ ತಿನ್ನಲು ನಾವು ಜೊತೆಯಾಗೋಣವೇ?
ನೆಲಗಡಲೆ ರಾಶಿ
ತಿಂದೆವು ಬಾಚಿ
ಬೆಲ್ಲ ಜೊತೆಯಲ್ಲಿ
ಎದೆಯಲ್ಲಿ ಕಟ್ಟಿದ ಹಾಗೆ
ಬಿಚ್ಚಿಟ್ಟ ಬುತ್ತಿ
ಉಂಡವರು ಯಾರೋ?
ಪಂಚೆ ಎತ್ತಿ ಕಟ್ಟಿ
ನಡೆದವರು ಯಾರು
ಅರೆಬೆಂದ ಕಾಳು
ಸರಭರನೆ ಸುರಿದು
ಜೋಳ್ಳೇಲ್ಲಾ ತೂರಿ
ಕನಸುಗಳ ಮೆರವಣಿಗೆ
ನನಸುಗಳ ನಡುವೆ.
ತುಂಬಾ ಸ್ಫೂರ್ತಿದಾಯಕ ಕವನ
ಓದುತ್ತಿದ್ದಂತೆ ನನ್ನೊಳಗೂ ಬರೆವ ತುಡಿತ ತಡೆಯಲಾಗಲಿಲ್ಲ
ಸುಶ್,
ಚಂದದ ಕವಿತೆ... ಕೊನೆಯ ಭಾಗ ತುಂಬಾ ಇಷ್ಟ ಆಯಿತು. :)
thumba channagi ide kavite.
"nanna thangige gaajina hujiyalli meenu saakuva aase ittu"
channagi ide
ಸುಶ್ರುತರ ಕವನದ ಕಡಲೆಕಾಯಿಗೆ ಸೀತಾರಾಮರ ಸ್ಪಂದನದ ಬೇಯಿಸುವಿಕೆ! ಎರಡೂ ಚೆನ್ನಾಗಿವೆ. ಬೆಂದ ಕಡಲೆಕಾಯಿ ತಿನ್ನಲು ನಾನೂ ಬರಲೆ?
ಎಂದಿನ ಚಂದದ ಸುಶ್ರುತನ ಕವನ
ಕನಸು ಬೇಯಿಸುವ ಕವನ ಚೆನ್ನಾಗಿದೆ ಸುಶ್ರುತ
thumba chennagidhe kavana sush... neevu kotta holikegaLu thumba hidisithu...
thumba chennagidhe kavana sush... neevu kotta holikegaLu thumba hidisithu...
ಕವನಕ್ಕೆ ಚಿಕ್ಕ ಚೂರೊಂದು ಸಿಕ್ಕರೂ ಅದೊಂದು ಪರಿಕಲ್ಪನೆ, ಚೆನ್ನಾಗಿದೆ !
Post a Comment