Friday, February 18, 2011

ಪೂರ್ಣಾಹುತಿ

ಮುಗಿಸಿಯೇ ಬಿಡಬೇಕು ಈ ಕತೆಯನ್ನು..
ಹೇಗಾಯಿತೋ ಹಾಗೆ. ಅಂದು ಅರ್ಧಕ್ಕೆ ನಿಂತಿದ್ದು
ಹಾಗೇ ನಿಂತೇಬಿಟ್ಟಿದೆ. ಕಲ್ಪನೆಯಲ್ಲೇ ಎಳೆದೆಳೆದು
ಎಲ್ಲೆಲ್ಲಿಗೋ ಹೋಗಿ, ಈಗ ತಿಳಿದಿರುವ ಕೊನೆಯೇ
ಅಸ್ಪಷ್ಟ.

ಯಜ್ಞಕುಂಡದ ಸುತ್ತ ಕೂತ ಋತ್ವಿಜರು
ಮೊಗೆಮೊಗೆದು ಹೊಯ್ಯುತ್ತಿದ್ದಾರೆ ತುಪ್ಪ..
ಯಾವ ದೇವಿಗೋ ಶಾಂತಿಯಂತೆ,
ಗಂಧ-ಚಂದನ ಪ್ರೀತಿಯಂತೆ.
ಅಗ್ನಿದೇವನ ಒಡಲಲ್ಲಿ ನಿರ್ವಿಘ್ನ ಶಾಕ.
ಹೇಗೆ ಹುಡುಕುವುದು ಇಲ್ಲಿ ಮೊದಲ ಕಟ್ಟಿಗೆ?
ಭಸ್ಮದ ನುಣುಪಲ್ಲಿ ಅದ್ಯಾವ ಚಿಗುರಿನ ಕನಸು?
ಮರೆತ ಮಂತ್ರದ ಸಾಲು, ಹೊಗೆ ತರಿಸಿದ ಕಣ್ಣೀರು,
ಇನ್ನೂ ಯಾವ ನೆನಪಿನ ನವೆ?

ಇಲ್ಲ ಅಂತಲ್ಲ, ಬಿಟ್ಟೇ ಹೋಗಿದ್ದಾನೆ ಕೀಲಿಕೈ..
ಸಣ್ಣ ಕಿಂಡಿಯೊಳಗೆ ತೂರಿಸಿ ಒಮ್ಮೆ ತಿರುವಿದರೆ ಸಾಕು;
ನಿಷ್ಪಂದ ಕತೆಯೂ ಆದೀತು ನಿಷ್ಕಲ
ಆದರೂ ಇದೇಕೆ ಈ ಹಿಂಜರಿಕೆ?
ಬಾಗಿಲು ತೆರೆಯದೇ ಉಳಿಯುವ ಸಾವರಿಕೆ?

ಪುರೋಹಿತರು ದೊಡ್ಡ ದನಿಯಲ್ಲಿ ಕರೆಯುತ್ತಿದ್ದಾರೆ:
ಪೂರ್ಣಾಹುತಿಗೆ ಸಮಯ, ಎಲ್ಲರೂ ಬನ್ನಿ
ಯಜ್ಞಕಾಷ್ಠದ ಸಿಗುರು ಕೈಗೆ ಚುಚ್ಚದಂತೆ
ಹಿಡಿದು ಒಯ್ಯುತ್ತಿದ್ದೇವೆ ಮನೆಮಂದಿಯೆಲ್ಲ..
ದಶದಿಕ್ಕುಗಳಿಂದಲೂ ಕರೆದ ದೇವತೆಗಳು
ಸಂಪ್ರೀತರಾಗಲೆಂದು ಭರ್ಜರಿ ಹವಿಸ್ಸು

ಕಣ್ಮುಚ್ಚಿ ಪ್ರಾರ್ಥಿಸುತ್ತಿದ್ದೇನೆ:
ಓ ದಿಕ್ಪಾಲಕರೇ, ನನಗಿವನನ್ನು ಹುಡುಕಿಕೊಡಿ
ಇನ್ನೆಂದೂ ಕೈ ಮಾಡುವುದಿಲ್ಲ, ಮರಳಿ ಬರಲು ಹೇಳಿ
ಗಿಣ್ಣು ಎಂದರೆ ಪ್ರಾಣ, ಈಯ್ದ ಗೌರಿಯ ಸುದ್ದಿ ಕೊಡಿ
ಇನ್ನೂ ಬತ್ತದ ಅವನಮ್ಮನ ಕಣ್ಣಾಸೆಯ ಬಗ್ಗೆ ತಿಳಿಸಿ
ಒಡೆದ ಗಾಜೂ ಕೂಡಿ ಹೊಸದಾಗಿದೆಯೆಂದೆನ್ನಿ
ಹೋಮಹರಕೆಯ ಫಲ ಹುಸಿಹೋಗದಿರಲಿ,
ಬೀಗ ತೆರೆಯುವ ತಿರುವ ನೀಡದೆ ಮುನ್ನಡೆಸಿ
ಕತೆಯ ಪೂರಣದ ದಾರಿ ತೋರಿಸಿ

8 comments:

nuthan said...

rashi dinatala blog update madi...
chalo iddu... hottekichchapastu chanda barite....

U G said...

uhmm.... artha aagalilla..

ಮಹಾಬಲಗಿರಿ ಭಟ್ಟ said...

ಸುಶ್ರುತ ಅಣ್ಣಯ್ಯ ಕವನವನ್ನ ಐದು ಬಾರಿ ಓದಿದೆ ಆದ್ರು ಅರ್ಥ ಆಯ್ದಿಲ್ಲೆ
ನಿನ್ನ ಕಬ್ಬಿಣದ ಕಡಲೆಕಾಯಿ ಕವನವನ್ನ ಸವಿಯುವಾಸೆ ಆದರೆ ನನ್ನ ಅಲ್ಪ ಜ್ನಾನದ ಹಲ್ಲು ಕೈಕೊಡುತ್ತದೆ...

sunaath said...

ದೇವತೆಗಳಿಗೆ ಮಾಡಿದ ಪ್ರಾರ್ಥನೆ ಸಫಲವಾಗಲಿ. ಕತೆ ಪುರ್ಣವಾಗಲಿ!

Subrahmanya said...

ಇದೊಂಥರಾ ಗ್ಯಾಂಬ್ಲಿಂಗ್ !..ಕವನ ಚೆನ್ನಾಗಿದೆ.

ವಾಣಿಶ್ರೀ ಭಟ್ said...

ಇದು ಕಳೆದು ಹೋದ ಮಗನ ನೆನಪಿನಂತೆ,ಅವನನ್ನು ಹುಡುಕಿಸಿ ಕೊಳ್ಳಲು ದೇವರಲ್ಲಿ ಪ್ರಾರ್ಥಿಸುತ್ತಿರುವಂತೆ ಬರೆದ ಕವನ ವಲ್ಲವೇ.. ?? ಚೆನ್ನಾಗಿದೆ...

Narayan Bhat said...

ತುಂಬ ಚೆನ್ನಾಗಿದೆ.

Ragu Kattinakere said...

ಅಹ್! ಇದು ನಿಜವಾದ ನವ್ಯ. ಗೇಯಗುಣವಿಲ್ಲದಿದ್ದರೂ ಏನೋ ಒ೦ದುರೀತಿಯ ಲಯ. ಅರ್ಥದಲ್ಲೋ, ಭಾವದ ಬಳುಕಿನಲ್ಲೋ ಗೊತ್ತಿಲ್ಲ. ಒ೦ದು ರೀತಿಯ ಅಸಮ ಮಾತ್ರಾ ಸಮ್ಮಿಲನ (non-monotonous mixture of time unit resemblances).