ಈಗ್ಗೆ ಹಲ ವರುಷಗಳ ಹಿಂದೆ, ನಮ್ಮೂರ ಪಕ್ಕದೂರಿನ ಯುವಕರೊಬ್ಬರು ಆರೆಸ್ಸೆಸ್ ಸಂಘಟನೆಗೆ ಹುಡುಗರನ್ನು ಒಗ್ಗೂಡಿಸುವ ಸಲುವಾಗಿ ಊರೂರು ಸುತ್ತಿ, ಪ್ರತಿ ಊರಲ್ಲೂ ಅಷ್ಟಿಷ್ಟು ಜನರನ್ನು ಒಂದೆಡೆ ಕೂಡಿಸಿ, ಧ್ವಜವಂದನೆ ಮಾಡಿಸಿ, ‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ..’ ಹಾಡಿಸಿ ಹೋಗಿದ್ದರು. ಆಗ ಅವರ ಜೊತೆ ನಾನೂ ಒಂದಷ್ಟು ಕಾಲ ಓಡಾಡಿಕೊಂಡಿದ್ದೆ. ಇದನ್ನು ನೋಡಿ ನನ್ನ ಅಪ್ಪ-ಅಮ್ಮ, ಇರುವ ಒಬ್ಬನೇ ಮಗ ಎಲ್ಲಿ ದೇಶಸೇವೆ-ಗೀಶಸೇವೆ ಅಂತ ಹೊರಟುಬಿಡುತ್ತಾನೋ ಎಂದು ವ್ಯಾಕುಲರಾಗಿ, ‘ಅದೆಲ್ಲ ನಮ್ಮಂಥವರಿಗಲ್ಲ, ಮನೇಲಿ ಇಬ್ರು-ಮೂವರು ಮಕ್ಕಳು ಇದ್ರೆ ಒಬ್ಬ ಮಗ ಹಿಂಗೆ ಹೋಗೋದು ಸರಿ. ನೀನು ಇನ್ಮೇಲೆ ಅವನ ಹಿಂದೆ ಓಡಾಡ್ಬೇಡ’ ಅಂತ ನನ್ನನ್ನು ಕೂರಿಸಿಕೊಂಡು ಹೇಳಿದ್ದರು. ನನಗಾದರೂ ಆರೆಸ್ಸೆಸ್ ಬಗೆಗಾಗಲೀ, ದೇಶದ ಬಗೆಗಾಗಲೀ, ದೇಶಸೇವೆ ಎಂದರೇನು ಅಂತಾಗಲೀ, ಪುತ್ರವಾತ್ಸಲ್ಯದ ಅರ್ಥವಾಗಲೀ ಆಗ ಗೊತ್ತಿರಲಿಲ್ಲ. ಅಪ್ಪ-ಅಮ್ಮ ಹೇಳಿದಮೇಲೆ ಹೌದಿರಬಹುದು ಅಂದುಕೊಂಡು ಆಮೇಲೆ ಅತ್ತಕಡೆ ತಲೆ ಹಾಕಲಿಲ್ಲ.
ಐದಾರು ತಿಂಗಳ ಹಿಂದೆ ಊರಿಗೆ ಹೋಗಿದ್ದಾಗ, ಮನೆಗೆ ಬಂದಿದ್ದ ಅತ್ತೆ ಮತ್ತು ಅವಳ ಮಕ್ಕಳೊಂದಿಗೆ ಉಪ್ಪು-ಖಾರ ತಿನ್ನುತ್ತ ಅದೂ-ಇದೂ ಹರಟೆ ಹೊಡೆಯುತ್ತ ಹಿತ್ಲಕಡೆ ಕಟ್ಟೆಯ ಮೇಲೆ ಕೂತಿದ್ದೆ. ಅಷ್ಟೊತ್ತಿನ ತನಕ ಹಳೇ ನೆನಪು, ಅವರಿವರ ಮನೆ ಕತೆ, ಗೋಳಿನ ಬೆಂಗಳೂರಿನ ಬಗ್ಗೆಯೆಲ್ಲ ನನ್ನ ಜೊತೆ ಲೋಕಾರೂಢಿ ಮಾತಾಡುತ್ತಿದ್ದ ಅತ್ತೆ ಇದ್ದಕ್ಕಿದ್ದಂತೆ ‘ಸರೀ, ಈ ವರ್ಷ ಮದುವೆ ಆಗ್ತ್ಯಾ?’ ಅಂತ ಕೇಳಿಬಿಟ್ಟಳು. ಈ ವಿಧಿಯ ಸಂಚೇ ಹಾಗೆ, ಯಾವಾಗ ಕೈ ಕೊಡುತ್ತೆ ಹೇಳಲಿಕ್ಕಾಗುವುದಿಲ್ಲ. ಆದರೂ ಧೃತಿಗೆಡದ ನಾನು, ‘ಅಯ್ಯೋ, ಇನ್ನೊಂದೆರ್ಡು ವರ್ಷ ತಡಿ ಮಾರಾಯ್ತಿ’ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದೆ. ಆದರೆ ಅತ್ತೆ ಮುಂದುವರಿದು, ‘ಹಂಗಲ್ಲಾ, ನೀನೇ ಬೆಂಗಳೂರಲ್ಲಿ ಯಾರನ್ನಾದ್ರೂ ನೋಡಿಕೊಂಡ್ರೂ ಅಡ್ಡಿ ಇಲ್ಲೆ. ಆದರೆ ಎಲ್ಲಾ ಸರಿ ಇದ್ದಾ ನೋಡಿ ಮಾಡ್ಕ್ಯ’ ಎಂದಳು. ‘ಎಲ್ಲಾ ಸರಿ ಇರದು ಅಂದ್ರೆ ಎಂತು?’ ನಾನು ಕೇಳಿದೆ. ‘ನಿಂಗ ಸಾಹಿತಿಗಳು ಆದರ್ಶ-ಗೀದರ್ಶ ಅಂತ ಹೊರಟುಬಿಡ್ತಿ. ನೀನು ಮಾಡಿಕೊಳ್ಳೋದಿದ್ರೆ ನಮ್ ಜಾತಿ ಕೂಸಿನ್ನೇ ಮಾಡ್ಕ್ಯ. ಹುಡುಗಿ ಮನೆ ಕಡೆಗೂ ಚನಾಗಿರವು. ಕುಂಟಿ, ಕಿವುಡಿ, ನಿನಗಿಂತ ದೊಡ್ಡೋರು, ಡೈವೋರ್ಸಿಗಳು, ಇಂಥವರನ್ನೆಲ್ಲಾ ಮಾಡಿಕೊಳ್ಬೇಡ. ಮೊದಮೊದಲು ಆದರ್ಶ ಅಂತ ಚೊಲೋ ಕಾಣ್ತು. ಆದರೆ ಆಮೇಲೆ ಅದೇ ಒಂದು ಕೊರಗು ಆಗ್ತು..’ ಅಂತೆಲ್ಲ ಹೇಳಿ, ‘ಆದರ್ಶಗಳೆಲ್ಲ ಬೇರೆಯವರಿಗೆ ಹೇಳೋದಿಕ್ಕೇ ವಿನಹ ನಾವೇ ಪಾಲಿಸಲಿಕ್ಕೆ ಅಲ್ಲ’ ಎಂದಳು.
ಅವಳ ಕೊನೆಯ ವಾಕ್ಯ ನನ್ನೊಳಗೇ ಉಳಿದುಕೊಂಡು ಬಿಟ್ಟಿತು: ‘ಆದರ್ಶಗಳು ನಾವು ಪಾಲಿಸಲಲ್ಲ; ಬೇರೆಯವರಿಗೆ ಬೋಧಿಸಲು.’ ಅದೆಷ್ಟೇ ವಿರೋಧಾತ್ಮಕವಾಗಿದ್ದರೂ, ನನ್ನ ಅತ್ತೆ ಹೇಳಿದ ಮಾತು ಅವಳ ಆ ಕ್ಷಣದ, ಪ್ರಾಮಾಣಿಕವಾಗಿ ಹೊರಬಂದ, ಅಂತಃಕರಣದ ಮಾತಾಗಿತ್ತು. ಅವಳ ಹೇಳಿಕೆಯನ್ನಿಟ್ಟುಕೊಂಡು ದಿನವಿಡೀ ವಾದಿಸಬಹುದಿತ್ತಾದರೂ ನಾನು ಸರಿಸರಿಯೆಂದು ತಲೆದೂಗಿದೆ. ಆದರೆ ಆ ವಾಕ್ಯ ಇವತ್ತಿನ ಈ ಕ್ಷಣದವರೆಗೂ ನನ್ನೊಂದಿಗೆ ಬರುತ್ತಿದೆ, ಮನಸಿನೊಂದಿಗೆ ಸೆಣಸುತ್ತಿದೆ.
ಬಹುಶಃ ನನ್ನ ಅತ್ತೆ ಬಾಯಿಬಿಟ್ಟು ಹೇಳಿದ ಆ ಮಾತು ನಾವೆಲ್ಲ ನಮ್ಮ ಆಪ್ತರಿಗೆ ಬಾಯಿಬಿಟ್ಟೋ ಬಿಡದೆಯೋ ಹೇಳುವ ಮಾತು. ‘ಯೋಧ ಜನಿಸಬೇಕು. ಆದರೆ ನಮ್ಮ ಮನೆಯಲ್ಲಲ್ಲ, ಪಕ್ಕದ ಮನೆಯಲ್ಲಿ’ ಎಂಬ ಅಭಿಪ್ರಾಯ ೯೦ ಪ್ರತಿಶತ ಜನರದು. ನಿರ್ಧಾರದ ಗಳಿಗೆಗಳಲ್ಲೆಲ್ಲ ನಮ್ಮನ್ನು ಕಾಡಿದ ದ್ವಂದ್ವ ಅದೇ: ಧ್ಯೇಯವೋ? ಮೋಹವೋ? ಕವಲುದಾರಿಯಲ್ಲಿ ನಿಂತಾಗಲೆಲ್ಲ ನಮಗೆ ಎದುರಾಗುವ ಗೊಂದಲ ಅದೇ: ಜನ ಹೇಳಿದತ್ತ ಹೋಗಲೋ? ನನ್ನ ವಿವೇಕ ಹೇಳಿದತ್ತ ಹೋಗಲೋ? ಇಷ್ಟಕ್ಕೂ ಆದರ್ಶದ ಪಾಲನೆ ನಮ್ಮ ಸಂತೋಷಕ್ಕೋ ಅಥವಾ ಸಮಾಜ ನನ್ನನ್ನು ಪ್ರಶ್ನಿಸುವ ಕಣ್ಣುಗಳಿಂದ ನೋಡುತ್ತಿದೆ ಎಂಬ ಆತಂಕಕ್ಕೋ?
ಈ ಆದರ್ಶದ ಪರಿಕಲ್ಪನೆಯೂ ಒಬ್ಬರಿಂದೊಬ್ಬರಿಗೆ ಭಿನ್ನ. ಜಗತ್ತು ನಮ್ಮ ಮೇಲೆ ಹೇರುವ ಆದರ್ಶಗಳು ಒಂದು ತೂಕದವಾದರೆ ನಮ್ಮ ಮೇಲೆ ನಾವೇ ಹೇರಿಕೊಳ್ಳುವ ಆದರ್ಶಗಳು ಇನ್ನೊಂದು ತೆರನವು. ಬಹುಶಃ ನಮ್ಮ ಆದರ್ಶವನ್ನು ನಾವು ಮೊದಲೇ ಸೆಟ್ ಮಾಡಿಕೊಂಡಿದ್ದರೆ ಆಯ್ಕೆಯ ಕ್ಷಣಗಳಲ್ಲಿ ಗೊಂದಲಗಳಾಗುವುದಿಲ್ಲ. ‘ನನ್ನ ಆದರ್ಶದ ಮಿತಿ ಇಷ್ಟೇ’ ಅಂತ ಜಗತ್ತಿಗೆ ಉತ್ತರಿಸಬಹುದು. ಅಥವಾ ಜಗತ್ತಿಗೆ ಉತ್ತರಿಸುವ ದರ್ದಿಲ್ಲ ಎಂದರೆ ನನಗೆ ನಾನೇ ಸಮಾಧಾನ ಮಾಡಿಕೊಳ್ಳಬಹುದು. ಆದರೆ ಅದು ‘ಬುದ್ಧಿವಂತಿಕೆ’ ಆಗಿಹೋಗುತ್ತದಾ? ಹಾಗಾದರೆ ಆದರ್ಶಗಳನ್ನು ಮೈಮೇಲೆ ಹೇರಿಕೊಳ್ಳುವುದೇ ತಪ್ಪಾ? ಬಿಡುಬೀಸಾಗಿ ನಡೆದು, ಮನಸಿಗೆ ತೋಚಿದತ್ತ ಸಾಗುವುದೇ ಸರಿಯಾದ ರೀತಿಯಾ? ಆ ಕ್ಷಣದಲ್ಲಿ ನನಗೆ ಏನನ್ನಿಸುತ್ತದೋ ಅದರಂತೆಯೇ ನಿರ್ಧರಿಸುವುದು ಸರಿಯಾದ ಮಾರ್ಗವಾ? ಗೊತ್ತಿಲ್ಲ.
* * *
ಜಯಂತ ಕಾಯ್ಕಿಣಿ ‘ಚಾರ್ಮಿನಾರ್’ ಎಂಬ ನೀಳ್ಗತೆಯೊಂದನ್ನು ಬರೆದಿದ್ದಾರೆ. ನನ್ನನ್ನು ಬಹಳವಾಗಿ ಕಾಡಿದ ಕತೆ ಅದು. ಯುನಿವರ್ಸಿಟಿಗೇ ಪ್ರಥಮ ಸ್ಥಾನ ಪಡೆದು ತೇರ್ಗಡೆಯಾದ ನೈಋತ್ಯ ಗಾಂವಕರ ಎಂಬ ಯುವಕ, ಕೆಲಸ ಹಿಡಿದು ದುಡ್ಡು ಮಾಡುವುದು ಬಿಟ್ಟು, ಈ ಸಮಾಜಕ್ಕೆ ಒಳ್ಳೆಯದಾಗುವಂಥದ್ದೇನಾದರೂ ಮಾಡಬೇಕು ಎಂದುಕೊಂಡು, ಮನೆ ಬಿಟ್ಟು ಓಡಿ ಬಂದಂತಹ ಮಕ್ಕಳನ್ನು ಮರಳಿ ಮನೆ ಸೇರಿಸುವ ಕೈಂಕರ್ಯದಲ್ಲಿ ತೊಡಗಿಕೊಳ್ಳುತ್ತಾನೆ. ರೈಲುಗಳಲ್ಲಿ ಟೀ, ಮಜ್ಜಿಗೆ, ವಡೆ, ನ್ಯೂಸ್ಪೇಪರು, ತಿಂಡಿಯ ಪೊಟ್ಟಣಗಳನ್ನು ಹಿಡಿದು ಬರುವ ಮಕ್ಕಳಿಂದ ಹಿಡಿದು ಹೋಟೆಲ್ಗಳ ಕ್ಲೀನರ್ ಹುಡುಗರವರೆಗೆ, ಅವರ ಪೂರ್ವಾಪರ ವಿಚಾರಿಸಿ ಮತ್ತೆ ಸಾಮಾನ್ಯ ಮಕ್ಕಳನ್ನಾಗಿಸುವ, ಮಕ್ಕಳಿಗೆ ಸಿಗಬೇಕಾದುದನ್ನು ಕೊಡಿಸುವ ಪ್ರಯತ್ನ ಮಾಡುತ್ತಾನೆ. ಪುನರ್ವಸು ಎಂಬ ಹುಡುಗಿ ಅವನ ಈ ಕೆಲಸದಲ್ಲಿ ಸಾಥಿಯಾಗಿ, ಕೊನೆಗೆ ಅವರಿಬ್ಬರೂ ಮದುವೆಯಾಗುತ್ತಾರೆ. ಇನ್ನಾದರೂ ಇವರು ಹಳಿಗೆ ಬಂದಾರು ಎಂದುಕೊಂಡ ಉಭಯ ಪೋಷಕರೂ ನಿರಾಶೆಯಾಗುವಂತೆ ಇವರು ತಮ್ಮ ಸಮಾಜೋದ್ಧಾರದ ಕೆಲಸ ಮುಂದುವರೆಸುತ್ತಾರೆ. ವೈಯಕ್ತಿಕ ಸುಖ-ದುಃಖಗಳು ಗೌಣವಾಗುತ್ತವೆ. ರಸ್ತೆಬದಿ, ರೈಲು, ಬಸ್ಸ್ಟಾಂಡು, ಶಾಲೆಯ ಕಟ್ಟೆಗಳ ಮೇಲೇ ಮಲಗೆದ್ದು, ಎಲ್ಲೆಲ್ಲೋ ಏನೇನೋ ತಿನ್ನುತ್ತ, ಅವರು ಈ ಕೆಲಸದಲ್ಲೇ ಮುಳುಗಿಹೋಗಿರುತ್ತಾರೆ. ಆದರೆ ಯಾವಾಗ ಪುನರ್ವಸು ಗರ್ಭಿಣಿಯಾಗುತ್ತಾಳೋ ಆಗ ಅವರಿಗೂ ಒಂದು ‘ವೈಯಕ್ತಿಕ ಬದುಕು’ ಪ್ರಾಪ್ತವಾಗುತ್ತದೆ. ಬಸುರಿ ಹೆಂಡತಿಗಾಗಿ ಹಾಲು, ಒಳ್ಳೆಯ ಊಟ, ಮನೆ, ಬಟ್ಟೆ, ಆರೈಕೆ, ತಾನು, ತನ್ನದು -ಗಳಂತಹ ಸಂಸಾರದ ಚೌಕಟ್ಟಿಗೆ ಅವರೂ ಒಳಗಾಗಬೇಕಾಗುತ್ತದೆ. ‘ಹಣ’ಕ್ಕೊಂದು ಪ್ರಾಮುಖ್ಯತೆ ಬರುತ್ತದೆ. ಬೇರೆ ಸಂಸಾರಗಳನ್ನು, ಗೆಳೆಯರ ಮಕ್ಕಳನ್ನು ನೋಡಿದಾಗ ತಾನು ತೆಗೆದುಕೊಂಡ ನಿರ್ಧಾರಗಳು, ತನ್ನ ಆದರ್ಶಗಳು ಎಲ್ಲಾ ಸುಳ್ಳಾಗಿದ್ದವೇ ಎಂಬ ಗೊಂದಲಕ್ಕೆ ಬೀಳುತ್ತಾನೆ ನೈಋತ್ಯ.
ನಾವು ಪಾಲಿಸಿಕೊಂಡು ಬಂದ ಆದರ್ಶಗಳನ್ನು ಕೈಬಿಡುವ ಕ್ಷಣಗಳಲ್ಲಿ ಆಗುವ ಗೊಂದಲ ತೀವ್ರವಾದದ್ದು. ಬಹುಶಃ ಈ ‘ಆದರ್ಶದ ಪರಿಪಾಲನೆ’ ಎಂಬ ಸಂಗತಿಗೆ ‘ಯಾವುದೋ ಸುಖದ ತ್ಯಾಗ’ ಎಂಬ ಸಂಗತಿ ಲಿಂಕ್ ಆಗಿರಬೇಕು. ಮತ್ತು ಈ ‘ಯಾವುದೋ ಸುಖದ ತ್ಯಾಗ’ ಎಂಬುದು ಮತ್ತೊಬ್ಬರನ್ನು ನೋಡಿದಾಗ ನಮಗನಿಸುವ ಭಾವವಿರಬೇಕು. ಉದಾಹರಣೆಗೆ, ‘ಹಣ ಮಾಡುವುದಕ್ಕಾಗಿ ನಾನು ದುಡಿಯುವುದಿಲ್ಲ; ಸಧ್ಯಕ್ಕೆ ನನಗೆ ಬದುಕಲೆಷ್ಟು ಬೇಕೋ ಅಷ್ಟನ್ನು ಮಾತ್ರ ನಾನು ದುಡಿದುಕೊಳ್ಳುತ್ತೇನೆ’ ಎಂಬ ಧ್ಯೇಯವನ್ನು ನಾನು ಇಟ್ಟುಕೊಂಡರೆ, ಇಡೀ ಜಗತ್ತೇ ಹಣದ ಹಿಂದೆ ಬಿದ್ದಿರುವ ಈ ದಿನಗಳಲ್ಲಿ ನಾನು ಒಂಟಿಯಾಗಿಬಿಡುತ್ತೇನೆ. ನಾನೂ ನನ್ನ ಗೆಳೆಯರ, ಊರವರ, ಸಮಾಜದವರ ಸರಿಸಮಾನನಾಗಿ ಬದುಕಬೇಕು ಎಂಬ ಬಯಕೆಗೂ ನನ್ನ ಆದರ್ಶಕ್ಕೂ ಬೀಳುವ ಜಿದ್ದಾಜಿದ್ದಿ ಇದು. ಗೆಳೆಯ ಕಾರು ತಗೊಂಡ, ಸೈಟು ಖರೀದಿಸಲು ನೋಡುತ್ತಿದ್ದಾನೆ, ಫ್ಲಾಟ್ನಲ್ಲಿ ಇದ್ದಾನೆ, ಅಮೆರಿಕೆಗೆ ಹಾರುತ್ತಿದ್ದಾನೆ, ಎಷ್ಟು ಸುಂದರಿ ಹೆಂಡತಿ, ಫೈವ್ ಸ್ಟಾರ್ ಹೋಟೆಲಿಗೆ ಕರೆದೊಯ್ಯುತ್ತಾನೆ, ಮಲ್ಟಿಪ್ಲೆಕ್ಸಿನಲ್ಲೇ ಸಿನೆಮಾ ನೋಡುತ್ತಾನೆ, ಶಾಪಿಂಗ್ ಮಾಡುವುದೇನಿದ್ದರೂ ಮಾಲಿನಲ್ಲೇ -ಎಂಬಿತ್ಯಾದಿ ಬೇಡವೆಂದರೂ ನನ್ನನ್ನು ಚುಚ್ಚುವ ಶೂಲಗಳು; ‘ಬರೀ ಈಗಿನದಷ್ಟೇ ನೋಡಿಕೊಂಡ್ರೆ ಆಗ್ಲಿಲ್ಲ, ನಿನ್ನನ್ನಷ್ಟೇ ಸಂಭಾಳಿಸಿಕೊಂಡ್ರೆ ಆಗ್ಲಿಲ್ಲ; ಫ್ಯೂಚರ್ - ಫ್ಯೂಚರ್ ಬಗ್ಗೆ ಯೋಚಿಸು. ನಿನ್ನ ತಂದೆ-ತಾಯಿಯರನ್ನ ನೋಡ್ಕೋಬೇಕು, ಮದುವೆ ಮಾಡ್ಕೋಬೇಕು, ಆಮೇಲೆ ಮಕ್ಳು-ಮರಿ-ಶಾಲೆ-ಫೀಸು, ಸಂಸಾರವನ್ನ ಸುಖವಾಗಿಡಬೇಕು, ಕೊನೇಕಾಲದಲ್ಲಿ ನಿನಗೇ ಹಣದ ಜರೂರತ್ತು ಬೀಳಬಹುದು... ಇದನ್ನೆಲ್ಲ ಯೋಚಿಸು. ಕಮ್ ಔಟ್ ಆಫ್ ದಟ್ ಕಂಪನಿ ಅಂಡ್ ಜಾಯ್ನ್ ಅ ನ್ಯೂ ಜಾಬ್’ ಎಂದು ನನ್ನನ್ನು ಪ್ರೇರೇಪಿಸುವ ಶಕ್ತಿಗಳು; ‘ಈಗಿನ ಕಾಲದಲ್ಲಿ ಲಾಯಲ್ಟಿ, ಭಾವನೆ, ಆದರ್ಶ ಅಂತೆಲ್ಲ ಯೋಚಿಸ್ತಾ ಕೂತ್ರೆ ಅಷ್ಟೇ ಕತೆ. ದುಡ್ಡಿಗಾಗಿ ಏನು ಮಾಡಲಿಕ್ಕೂ ಹೇಸದ ಜನಗಳ ಮಧ್ಯೆ ನೀನಷ್ಟೇ ಸುಮ್ಮನಿದ್ದು ಏನು ಸಾಧಿಸ್ತೀಯಾ? ಹೇಳ್ತೀನಿ ಕೇಳು: ಮುಂದೆಮುಂದೆ ನಿನ್ನ ಆದರ್ಶಗಳ ಪಾಲನೆಗೂ ಹಣವೇ ಬೇಕಾಗತ್ತೋ ಮೂರ್ಖಾ!’ ಎಂದು ಹೆದರಿಸುವ ಆಪ್ತರು; ‘ಒಂದು ಸಲ ನಿಂಗೆ ಎಷ್ಟು ಬೇಕೋ ಅಷ್ಟು ಹಣ ಮಾಡಿಕೊಂಡು ಲೈಫಲ್ಲಿ ಸೆಟಲ್ ಆಗಿ ಕೂತುಬಿಟ್ರೆ ಮುಗೀತಪ್ಪ. ಆಮೇಲೆ ನಿಂಗೆ ಏನು ಬೇಕೋ ಅದು ಮಾಡ್ಕೋ. ಹ್ಯಾಗೆ ಬೇಕೋ ಹಾಗೆ ಬದುಕು’ ಎಂಬ ಹೊಸ ಆಯಾಮದ ಸಲಹೆ -ಇವೆಲ್ಲವುಗಳ ಮಧ್ಯೆ ನಾನು ನಾನಾಗಿ ಉಳಿಯುವುದು ಹೇಗೆ?
ಈ ಸುಖ ಎಂಬ ಊಹನೆಗೆ ಗರಿಷ್ಠ ಮಿತಿಯೇ ಇಲ್ಲದಿರುವುದು ಇವಕ್ಕೆಲ್ಲ ಕಾರಣವಿರಬಹುದು. ಏನೆಲ್ಲ ಇದ್ದೂ ಇವ್ಯಾವುದೂ ಬೇಡ, ಮತ್ತೇನೋ ಬೇಕು ಎಂದು ಹಂಬಲಿಸುವುದು ಅಧ್ಯಾತ್ಮ. ಆದರೆ ಇಷ್ಟೆಲ್ಲ ಇದ್ದರೂ ಇನ್ನೂ ಬೇಕೆಂಬುದಕ್ಕೆ, ಎಷ್ಟೇ ಅನುಭವಿಸಿದರೂ ಸಾಕೆನಿಸದೇ ಹೋಗುವುದಕ್ಕೆ, ಬರೀ ನಮಗಿಂತ ಮೇಲಿನವರೇ ನಮ್ಮ ಕಣ್ಣಿಗೆ ಚುಚ್ಚುವುದಕ್ಕೆ ತೃಪ್ತಿಯ ಅಳತೆಗೋಲು ಬೆಳೆಯುತ್ತಲೇ ಹೋಗುವುದೇ ಕಾರಣ. ಈ ಎಲ್ಲ ಏನೆಲ್ಲವನ್ನು ಗಳಿಸುವ ಭರಾಟೆಯಲ್ಲಿ ನಾನು ಮುರಿಯಬೇಕಿರುವ ನಿರ್ಧಾರಗಳಿಗೆ ಕೊಟ್ಟುಕೊಳ್ಳಬಹುದಾದ ಸಮರ್ಥನೆಯೇನು? ನಾನು ಬದುಕುತ್ತಿರುವ ಈ ವಾಸ್ತವಿಕ ಜಗತ್ತು ನನ್ನದಲ್ಲ, ನಾನು ಮಾಡುತ್ತಿರುವ ಈ ಕೆಲಸ ನನ್ನದಲ್ಲ, ಐಯಾಮ್ ನಾಟ್ ವ್ಹಾಟ್ ಐಯಾಮ್ -ಎಂಬ, ಆಗಾಗ ನನಗನಿಸುವ ಭಾವ, ಮತ್ತು ಹಾಗಿದ್ದಾಗ್ಯೂ ಇವ್ಯಾವುದನ್ನೂ ಬಿಡಲಾಗದ ಅನಿವಾರ್ಯತೆಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಕಾಲ ಸವೆಸುವುದೇ ಬದುಕೇ? ಗೊತ್ತಿಲ್ಲ.
* * *
ಭಾನುವಾರ ಬೆಳಬೆಳಗ್ಗೆ ಫೋನಿಸಿದ ಹುಡುಗಿ ಭೈರಪ್ಪನವರ ‘ನಿರಾಕರಣ’ ಓದುತ್ತಿರುವುದಾಗಿ ಹೇಳಿದಳು. ಅದ್ಯಾವುದೋ ಗುಂಗಿನಲ್ಲಿದ್ದ ನಾನು, ‘ಅದರಲ್ಲಿ ಬರುವ ಪಾತ್ರ ನರಹರಿಯ ಹಾಗೆ ನಂಗೂ ಆಗಾಗ ಹಿಮಾಲಯಕ್ಕೆ ಹೋಗಿಬಿಡಬೇಕು ಅಂತ ಅನ್ನಿಸುತ್ತೆ. ಒಂದಷ್ಟು ಕಾಲ ಸನ್ಯಾಸಿಯ ಥರ ಬದುಕಿ ಬರಬೇಕು ಅಂತ ಇದೆ’ ಎಂದುಬಿಟ್ಟೆ. ಅಷ್ಟೇ, ಫೋನ್ ಕಟ್! ಏನಾಯಿತು ಅಂತ ತಿಳಿಯಲು ಅರ್ಧ ಗಂಟೆಯ ನಂತರ ಬಂದ ಎಸ್ಸೆಮ್ಮೆಸ್ಸನ್ನೇ ಓದಬೇಕಾಯಿತು: ‘ನಿಂಗೆ ಸನ್ಯಾಸಿ ಆಗ್ಬೇಕು ಅಂತೆಲ್ಲ ಇದ್ರೆ ಮೊದಲೇ ಹೇಳ್ಬಿಡು. ನಾನು ನಿನ್ನ ಮದುವೇನೇ ಮಾಡ್ಕೊಳಲ್ಲ. ಆಮೇಲೆ ಸಂಸಾರ ಬಿಟ್ಟು, ಮಕ್ಕಳನ್ನ ಹರಾಜಿಗೆ ಹಾಕಿ ನೀನು ಹತ್ತಿ ಹೋಗೋದು ಎಲ್ಲಾ ನಂಗೆ ಸಹಿಸಲಿಕ್ಕೆ ಆಗಲ್ಲ. ಎಲ್ಲಾರ ಹಾಗೆ ಡೀಸೆಂಟಾಗಿ ಬದುಕೋ ಹುಡುಗ ಬೇಕು ನಂಗೆ.’ ಆಹ್! ಆಮೇಲೆ ‘ನಾನು ಹೇಳಿದ್ದು ಹಂಗಲ್ಲ, ಹಿಂಗೆ, ನಾನು ದೇವರಾಣೆ ಸನ್ಯಾಸಿ ಆಗಲ್ಲ, ಹೆಂಡತಿ-ಮಕ್ಕಳನ್ನ ಬಿಟ್ಟುಹೋಗುವಷ್ಟು ಬೇಜವಾಬ್ದಾರಿತನ ನಂಗಿಲ್ಲ’ ಅಂತೆಲ್ಲ ಹೇಳಿ ಸಮಾಧಾನ ಮಾಡಬೇಕಾಯ್ತು. ಮೂರು ದಿನ ಮಾತಿಲ್ಲ ಕತೆಯಿಲ್ಲ. ಕೊನೆಗೆ ದೇವರೇ ಡೈರಿಮಿಲ್ಕ್ ರೂಪದಲ್ಲಿ ಬಂದು ಈ ಪ್ರಕರಣಕ್ಕೆ ಸುಖಾಂತ್ಯ ಕೊಟ್ಟ. ಕ್ಯಾಡ್ಬರೀಸಿಗೆ ಥ್ಯಾಂಕ್ಸ್ ಹೇಳಿದೆ.
ಕನಸಿಗೂ, ಆದರ್ಶಕ್ಕೂ, ಹುಚ್ಚಿಗೂ ಸಿಕ್ಕಾಪಟ್ಟೆ ಸಂಬಂಧವಾ? ಕನಸು ಕಾಣುವುದು ಹಾಗೂ ಆದರ್ಶಗಳನ್ನು ಆವಾಹಿಸಿಕೊಳ್ಳುವುದು ಹುಚ್ಚಿನ ಲಕ್ಷಣವಾ? ಗೊತ್ತಿಲ್ಲ.
* * *
ಏನೇನೂ ಗೊತ್ತಿಲ್ಲದ ಕಾಲದಲ್ಲಿ ಶುರು ಮಾಡಿದ್ದು ಈ ಬ್ಲಾಗು. ಆದರೆ ಹೀಗೆಲ್ಲ ನಿಮ್ಮೊಂದಿಗೆ ಮಾತಾಡುತ್ತ ಐದು ವರುಷಗಳೇ ಕಳೆದುಹೋಗಿವೆ. ನಾನು ಬರೆದದ್ದೆಲ್ಲ ಓದಿದ ನಿಮ್ಮ ಪ್ರೀತಿ ದೊಡ್ಡದು. ನಿಮ್ಮ ಸ್ಪಂದನಗಳು ನನಗೆ ನೀಡಿದ ಆತ್ಮವಿಶ್ವಾಸ ಅಪಾರ. ಥ್ಯಾಂಕ್ಸ್, ಋಣಿ, ಕೃತಜ್ಞ, ಆಭಾರಿ -ಇತ್ಯಾದಿ ಶಬ್ದಗಳು ಈ ಸದ್ದಿಲ್ಲದ ಭಾವಗೀತದ ಬಣ್ಣನೆಗೆ ಏನೇನೂ ಸಾಲವು. ಆದರೂ ಈ ಕ್ಷಣಕ್ಕೆ ಹೊಳೆಯುತ್ತಿರುವವು ಅವೇ.
ದೈನಂದಿನ ಬದುಕಿಗೆ ಇಂಗ್ಲೀಷ್ ಕ್ಯಾಲೆಂಡರ್ ಇಯರ್, ಹಿಂದೂಗಳಿಗೆ ಸಂವತ್ಸರ, ವ್ಯವಹಾರ ಜಗತ್ತಿಗೆ ಫೈನಾನ್ಷಿಯಲ್ ಇಯರ್ -ಇರುವ ಹಾಗೆ ಬ್ಲಾಗಿಗರಿಗೆ ‘ಬ್ಲಾಗೀ ವರ್ಷ.’ ಈ ಬ್ಲಾಗೀ ವರ್ಷ ನನಗೆ ಒಂದಷ್ಟು ಬಹುಮತಿಗಳನ್ನು ತಂದುಕೊಟ್ಟಿತು: ನನ್ನ ‘ಹೊಳೆಬಾಗಿಲು’ ಕೃತಿಗೆ ಸಾಹಿತ್ಯ ಪರಿಷತ್ ಕೊಟ್ಟ ಅರಳು ಪ್ರಶಸ್ತಿ, ಕವಿತೆಗಳಿಗೆ ಟೋಟೋ ಕೊಟ್ಟ ಸರ್ಟಿಫಿಕೇಟು, ಮೊನ್ನೆಮೊನ್ನೆ ಕನ್ನಡ ಪ್ರಭ-ಅಂಕಿತ ಪುಸ್ತಕದ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಬಂದ ಬಹುಮಾನ ...ಹೀಗೆ ಹಂಚಿಕೊಳ್ಳಲು ಒಂದಷ್ಟು ಖುಶಿಗಳು. ನಿಮ್ಮೊಂದಿಗೇ ಯಾಕೆ ಹಂಚಿಕೊಳ್ಳಬೇಕು ಎಂದರೆ ಮೇಷ್ಟ್ರಿಗೆ ಯಾಕೆ ಗೌರವ ಕೊಡಬೇಕು ಎಂದಂತಾಗುತ್ತದೆ.
ಗಾಳ ಹಾಕಿ ಕುಳಿತವನಿಗೆ ಮೀನೇ ಸಿಗಬೇಕೆಂಬ ಹಟವಿಲ್ಲ. ಆಮೆಮರಿ, ಕಪ್ಪೆಚಿಪ್ಪು, ಉರೂಟು ಕಲ್ಲು, ಸಣ್ಣ ಶಂಕು, ಯಾರದೋ ಸಾಕ್ಸು, ನೀರುಳ್ಳೆ ಹಾವು, ಕನ್ನಡಕದ ಫ್ರೇಮು... ಬುಟ್ಟಿಗೆ ಬಿದ್ದುದೆಲ್ಲ ಕವಿತೆಯಾಗಲಿ; ಮರೆತ ಉಸಿರು ಕತೆಯಾಗಲಿ. ಸಾಗುತ್ತಿರುವ ಪಯಣದಲ್ಲಿ, ಜಾರುತ್ತಿರುವ ಕ್ಷಣಗಳಲ್ಲಿ, ಭಾರ ಭಾರ ಮನಸಿನಲ್ಲಿ ಹೀಗೊಂದು ಪುಟ್ಟ ಪ್ರಾರ್ಥನೆ:
ಜಗುಲಿಕಟ್ಟೆಯ ಮೇಲೆ ನಡೆಯುತ್ತಿದೆ ಜೋರುನಗೆಯಲಿ ಅಂತ್ಯಾಕ್ಷರಿ
ಹೊಸ ಹಾಡು ಹೊಳೆಯುತಿರಲಿ, ಆಟಕಂತ್ಯವಿಲ್ಲದಿರಲಿ
ಕಾದ ಧರಣಿಗೆ ಆಗುತ್ತಿದೆ ರಾತ್ರಿಯಿಡೀ ಮಳೆಯ ಮೇಜವಾನಿ
ಯಾವ ಗೋಡೆಯೂ ಕುಸಿಯದಿರಲಿ, ಮರದ ರೆಂಬೆ ಗಟ್ಟಿಯಿರಲಿ
ತಿರುಗುತ್ತಿರುವ ಆಲೆಮನೆಯ ಕೋಣಗಳಿಗೆ ತಲೆಸುತ್ತು ಬಾರದಿರಲಿ
ಅರಳುತ್ತಿರುವ ಎಲ್ಲ ಹೂವ ಕೊರಳಿಗೂ ದುಂಬಿಯುಸಿರು ತಾಕಲಿ
ಉಪ್ಪಿಟ್ಟು ವಾಕರಿಕೆ ತರಿಸುವ ಮುನ್ನ ಬ್ಯಾಚುಲರುಗಳಿಗೆ ಮದುವೆಯಾಗಲಿ
ವುಡ್ವರ್ಡ್ಸ್ ಕುಡಿದ ಮಗು ಅಳು ನಿಲ್ಲಿಸಲಿ, ಅಪ್ಪನಿಗೆ ತನ್ನಮ್ಮನ ನೆನಪಾಗಲಿ
ಬಿಸಿಲ ಬೇಗೆಗೆ ಇರಲಿ ಇಬ್ಬಟ್ಟಲ ಹಣ್ಣಿನ ಶರಬತ್ತು
ಚಳಿಯ ರಾತ್ರಿಗೆ ಇರಲಿ ತಬ್ಬಿ ಮುತ್ತಿಡುವಷ್ಟು ಮೊಹಬತ್ತು
ಸೂಜಿಯೊಳಗೆ ದಾರ ಪೋಣಿಸುತ್ತಿರುವಜ್ಜಿಗೆ ನೆರವಾಗಲಿ ಮೊಮ್ಮಗಳು
ಮರಳಿ ಬರಲಿ ವನಮಾಲಿ ರಾಧೆಯೆಡೆಗೆ, ಉಲಿಯಲಿ ಮತ್ತೆ ಕೊಳಲು
ಒತ್ತೆಯಲ್ಲಿಟ್ಟ ಹಣ್ಣು ಸಿಹಿಯಾಗಲಿ, ಒಳ್ಳೆ ಸುದ್ದಿಯೇ ಬರಲಿ ಕಾದವರಿಗೆ
ಆಸೆ ಪಟ್ಟ ಹುಡುಗಿಗೆ, ತಂದು ಮುಡಿಸಲಿ ಹುಡುಗ ಪರಿಮಳದ ಕೇದಿಗೆ
ಕಣ್ಣ ಕೆಂಪೆಲ್ಲ ತಿಳಿಯಾಗಲಿ, ಭಾಷ್ಪವೆಲ್ಲ ಮೀಸಲಿರಲಿ ಆನಂದಕೆ
ಅನ್ನವಿರಲಿ ಹಸಿದ ಹೊಟ್ಟೆಗಳಿಗೆ, ಕಾವಿರಲಿ ತಬ್ಬಲಿ ಮೊಟ್ಟೆಗಳಿಗೆ
ಒಲ್ಲದ ಒಪ್ಪಿಗೆಗಳ ನೀಡದಂತೆ ನನ್ನನ್ನು ಅಣಿಗೊಳಿಸು
ನಿರ್ಧಾರದ ಗಳಿಗೆಗಳಲಿ ಮನಸನ್ನು ಗಟ್ಟಿಗೊಳಿಸು
ಕನಸುಗಳನ್ನು ಗುರಿಗಳನ್ನಾಗಿಸುವ ಛಲ ತೊಡಿಸು
ಕವಿತೆಗಳನು ಕವಿಸಮಯಕೇ ಬಿಟ್ಟು ವಾಸ್ತವದಲ್ಲಿ ಬದುಕುವುದ ಕಲಿಸು
ತುಂಬು ಪ್ರೀತಿ,
-ಸುಶ್ರುತ ದೊಡ್ಡೇರಿ
40 comments:
sush, happy birthday to your blog..!!
and a wonderful poem too.
yes whatever u have hoped and is hoping t have, please get it.
best wishes
ಚೆನ್ನಾಗಿದ್ದು, ಲೇಖನ ಮತ್ತು ಪದ್ಯ.
All the best
ಸುಶ್ರುತರವರೆ, ಅಭಿನಂದನೆಗಳು. ನಿಮ್ಮ ಬ್ಲಾಗಿಗೆ ಜನುಮದಿನದ ಶುಭಾಶಯಗಳು. ನಿಮ್ಮ ಬರಹದಲ್ಲೇನೋ ಸೆಳೆತವಿದೆ. ಹಾಗೆ ಓದಿಸಿಕೊಂಡು ಹೋಗತ್ತೆ. ಅಂದಹಾಗೆ ಮದುವೆ ಆಗ್ತಾ ಇದೀರಾ??
-ಮಲ್ಲಿಕ್ (ಧನಂಜಯ)
Sush, nice Write-up.ಉಪ್ಪಿಟ್ಟು ಬೇಗ ವಾಕರಿಕೆ ತರಿಸಲಿ. ಶುಭವಾಗಲಿ.
ತುಂಬಾ ಚನ್ನಾಗಿ ಬರೆದಿದ್ದೀರಿ ಸುಶ್ರುತ. ಐದು ವರ್ಷ ತುಂಬಿದ ನಿಮ್ಮ ಬ್ಲಾಗು ಐವತ್ತೂ ಮುಟ್ಟಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ. ಸಾಹಿತ್ಯ ಕೃಷಿ ಇನ್ನೂ ಜೋರಾಗಿ ನಡೆಯಲಿ. ನೀವು ಕೊನೆಗೆ ಬರೆದ ಕವನದ ಸಾಲುಗಳು ಬಹಳ ಇಷ್ಟ ಆದವು.
ಅಂದಹಾಗೆ, ನಿಮ್ಮ ಅತ್ತೆ ಹೇಳಿದ ಮಾತು "ಆದರ್ಶಗಳೆಲ್ಲ ಬೇರೆಯವರಿಗೆ ಹೇಳೋದಿಕ್ಕೇ ವಿನಹ ನಾವೇ ಪಾಲಿಸಲಿಕ್ಕೆ ಅಲ್ಲ" ಅಕ್ಷರಃ ಸತ್ಯ. ಅದಕ್ಕೆ ನೀವು ಆದರ್ಶಗಳ ಬಗ್ಗೆ ಬಹಳ ತಲೆಕೆಡಿಸಿಕೊಳ್ಳಬೇಡಿ. ಎಲ್ಲ ಆದರ್ಶಗಳ ಮೀರಿದ್ದು ಮನುಷ್ಯತ್ವ. ಅದನ್ನು ಮಾತ್ರ ಬಿಡಬೇಡಿ.ಆದರ್ಶಗಳನ್ನು ಕೆಲವೊಮ್ಮೆ ಬಿಟ್ಟರೂ ಬಿಡಬಹುದು!ಶುಭವಾಗಲಿ....:-)
ತುಂಬು ಪ್ರೀತಿ,
ದಿವ್ಯಾ
ನಮ್ಮಲ್ಲಿ ಹಲವರ ತಳಮಳಗಳು...beautifully expressed! ಕವನನೂ ಮುದ್ದಾಗಿದೆ:) ಅಂದಹಾಗೆ ಯಾವ್ದೋ ಹೊಸ ಎಂಟ್ರಿ ಇದ್ದಹಾಗಿದೆ? ಛೆ ಪಾಪ ಇನ್ನು ಶ್ರೀನಿಧಿ & ಕೋ out of job-a? ;)
ಮತ್ತೆ ಹ್ಯಾಪ್ಪಿ ಬರ್ತಡೇ ಟು ಮೌನಗಾಳ:)
< ‘ಆದರ್ಶಗಳೆಲ್ಲ ಬೇರೆಯವರಿಗೆ ಹೇಳೋದಿಕ್ಕೇ ವಿನಹ ನಾವೇ ಪಾಲಿಸಲಿಕ್ಕೆ ಅಲ್ಲ’ >
ಇಂದಿನ ಕಾಲದಲ್ಲಿ ಇದು ಬಹುಮಟ್ಟಿಗೆ ಸತ್ಯ. ಆದರೂ ನಾನು ಹೇಳುವುದೇನೆಂದರೆ ಸ್ವಂತಕ್ಕೆ (ಮತ್ತು ಇತರರಿಗೆ) ಹಾನಿಮಾಡಿಕೊಳ್ಳದೆ ಸಾದ್ಯವಿದ್ದಷ್ಟು ಆದರ್ಶ ಪಾಲನೆ ಮಾಡಿ ಎಂದು.
ಲೇಖನ ಚೆನ್ನಾಗಿದೆ.
-ಪವನಜ
ಶುಭಾಶಯಗಳು ಸು- ಶ್ರುತ. ಇಷ್ಟ ಆಯಿತು ಪೋಸ್ಟು.
ಈ ಇಬ್ಬಂದಿತನವೇ ಮುಂದಿನ ದಾರಿ ತೋರುವ ಕೈಮರಗಳು. ನಿರ್ಧಾರ ಕೈಗೊಳ್ಳುವವರ ಗಟ್ಟಿತನದ ಮೇಲೆ ನಿರ್ಧರಿತವಾಗುತ್ತೆ. ನನ್ನ ಸದ್ಯದ ಇಬ್ಬಂದಿ ಕನ್ನಡ ಮೀಡಿಯಂ. :)
ಎಲ್ಲ ಸರಿಯಾಗಿರುವ ಹುಡುಗಿಗೆ ಡೈರಿಮಿಲ್ಕ್ ಕೊಟ್ಟು ಕೊಟ್ಟು ಹಾಳು ಮಾಡಬೇಡ. ಹಲ್ಲು ಕಟ್ಟಿಸಿಕೊಂಡ ಹುಡುಗಿ, ರೂಟ್ ಕೆನಾಲ್ ಆಯ್ದು ಅಂದ್ರೆ ಅತ್ತೆಗೆ ಬೇಜಾರು. :)
ಮರೆತ ಮಾತು. ಚಾರ್ಮಿನಾರು ನನ್ನ ಅತ್ಯಂತ ಇಷ್ಟದ ಕತೆಗಳಲ್ಲಿ ಒಂದು. ಅದಕ್ಕೆ ಅವರು ನಮಗಿಬ್ರಿಗೂ ಇಷ್ಟ ಅಲ್ದ. :)
ಪ್ರೀತಿಯಿಂದ,ಸಿಂಧು
ಪುಟ್ಟಣ್ಣಾ...
ಸಖತ್ ಇಷ್ಟವಾಯ್ತು.
ಮೌನಗಾಳಕ್ಕೆ ಐದು ವರ್ಷ ತುಂಬಿದ್ದಕ್ಕೆ ಅಭಿನಂದನೆ, ಶುಭಾಶಯ ಎರಡೂ.
ಬರೀತಿರು ಪುಟ್ಟಣ್ಣಾ, ಓದ್ತಿರ್ತೀವಿ.
ಪ್ರೀತಿಯಿಂದ,
-ಪುಟ್ಟಕ್ಕ
ಭಾವನೆಗಳ ಗಾಳಕ್ಕೆ ನಮ್ಮಂತ ಮೀನುಗಳನ್ನು ಸಿಕ್ಕಿಸುವ ನಿಮ್ಮ ಪರಿ ಅದ್ಭುತ..
ಆದರ್ಶಗಳ ಬಗೆಗಿನ ನಿಮ್ಮ ಅನಿಸಿಕೆ ಅಕ್ಷರಶಃ ಸತ್ಯ.. ಬರಹ, ಕವನ ಮಸ್ತಾಗಿದೆ.. ೫ ತುಂಬಿದ್ದಕ್ಕೆ ಮೌನಗಾಳಕ್ಕೆ ಅಭಿನಂದನೆಗಳು..
ಇನ್ನಷ್ಟು ಮೀನುಗಳು ಮೌನಗಾಳಕ್ಕೆ ಸಿಕ್ಕಿಹಾಕಿಕೊಳ್ಳಲಿ.. ಐದು ಐವತ್ತಾಗಲಿ..
lovely post puTTaNNa on the occassion of 5th year of blogging
matte aStEnu think maaduva agatyavilla neenu. You are fun, intelligent and at the same time very sensible.adarsha or not you will cross the bridge when u come to it.
khushiyaagirteeyaa. idu nanna aasheervaada kooDa.
happy blogging
:-)
malathakka
endinante idu kooda ashte chennagide.. all the best...
ಸುಶ್ರುತರವರೆ, ಅಭಿನಂದನೆಗಳು.ಹಾಗೆಯೇ ಚೆನ್ನಾಗಿದೆ ನಿಮ್ಮ ಬರಹ.ಮೂಲ ಯೋಚನೆಗಳಿಗೂ ಮತ್ತು ಸಂದರ್ಭಾನುಸಾರ ನಮ್ಮ ಮನದಲ್ಲಿ ಮೂಡುವ ಗೊಂದಲಗಳ ಪುಟ ತೆರೆದಿಟ್ತಂತಿದೆ
ನಿಮ್ಮ ಗೊ೦ದಲಗಳನ್ನೆಲ್ಲ ನನ್ನ ಗೊ೦ದಲವೆ೦ದು ಓದಿ ಗೊ೦ದಲದಲ್ಲಿ ಕೊಚ್ಚಿಕೊ೦ಡು ಹೋದೆ. ನಿಮ್ಮ ಅನಿಸಿಕೆ, ಬರಹ ಎಲ್ಲವೂ ಅಚ್ಚುಕಟ್ಟಾಗಿ ಅದ್ಭುತವಾಗಿ ಮೂಡಿಬ೦ದಿದೆ. ಐದು ವರ್ಷ ಉರುಳಿಸಿದ್ದಕ್ಕೆ ಅಭಿನ೦ದನೆಗಳು.. :)
"ಗಾಳ ಹಾಕಿ ಕುಳಿತವನಿಗೆ ಮೀನೇ ಸಿಗಬೇಕೆಂಬ ಹಟವಿಲ್ಲ......." ವಾಹ್
Nice Sush...!
ನಿಮ್ಮ ಮೌನ ಗಾಳಕ್ಕೆ ಬಿದ್ದವರೆಲ್ಲ ಮತ್ತೊಮ್ಮೆ ಬಂದು ಓದುತ್ತಾರೆ. ಆತ್ಮೀಯವಾದ ಪ್ರೌಢ ಬರವಣಿಗೆ ನಿಮ್ಮದು. ಕವನದ ಸಾಲುಗಳು superb ..! ಬ್ಲಾಗಿನ ಜನುಮದಿನದ ಶುಭಾಶಯಗಳು :))
ಮೌನಗಾಳಕ್ಕೆ ೫ ರ ಸಂಭ್ರಮದ ಶುಭಾಶಯಗಳು.
ಆಕರ್ಷಣೀಯ ಬರಹಗಳು ... ಈ ಬಾರಿಯ ಲೇಖನ ಮತ್ತು ಕವನ ಎರಡು ಚೆನ್ನಾಗಿದ್ದು.
ಬೇಗ ನಮ್ಮ ಗುಂಪಿಗೆ ಬಾರೋ :)
ಬದುಕಿಗೊಂದಿಷ್ಟು ಆದರ್ಶಗಳು ಖಂಡಿತಾ ಬೇಕು. ಆದರೆ ಅದರಿಂದ ನಮ್ಮ ಪ್ರೀತಿಪಾತ್ರರಿಗೆ ನೋವಾಗಬಾರದು , ಅವರಿಗೆ ನಮ್ಮ ಆದರ್ಶಗಳು ಹೇಗೆ, ಯಾಕೆ ಮುಖ್ಯ ಎಂಬುದನ್ನು ಅರ್ಥ ಮಾಡಿಸಲು ಸಾಧ್ಯವಾದಲ್ಲಿ ಸಮಸ್ಯೆ ಇರದು. ನಮ್ಮ ಪರಿಧಿಯಲ್ಲಿ ಸಾಧ್ಯವಾದಷ್ಟು ಆದರ್ಶಮಯವಾಗಿ ಪ್ರಾಮಾಣಿಕವಾಗಿ ಬದುಕೋಣ ಅಲ್ಲವೇ ?
ಲೇಖನ ತುಂಬ ಚೆನ್ನಾಗಿದೆ ಸುಶ್ರುತ .. ಶುಭಾಶಯಗಳು.
ಚೆನ್ನಾಗಿದೆ,ಗಂಭೀರವಾಗಿದೆ,ಪ್ರಾಮಾಣಿಕವಾಗಿದೆ..ನಿಮ್ಮಿಂದ ಬಹಳಷ್ಟು ಬರಹಗಳು ಬರಲಿ.
ಶುಭಾಶಯಗಳು :)
Continue your blogging, so that we have a nice reading time!
ಕೆಲವು ಸಾರಿ ಈ ಜೀವನ ಒಂದು ಗೊಂದಲದ ಗೂಡು ಅನ್ಸುತ್ತೆ ...ಆದರ್ಶ ಅಂತ ಯೋಚನೆ ಮಾಡೋಕೆ ಶುರು ಮಾಡಿದ್ರೆ ಅಪ್ಪ-ಅಮ್ಮ , ಅಕ್ಕ-ತಮ್ಮ ಎಲ್ಲಾ ಎದುರಿಗೆ ನಿಂತುಬಿಡ್ತಾರೆ.
ಯೋಚನೆ ಮಾಡಿ ಮಾಡಿ ಬೋರಲಾಗಿ ಮಲಗೋದು ಅಷ್ಟೇ ಆಗ್ಬಿಟ್ಟಿದೆ ನನ್ ಕಥೆ !!
ಬರಹವನ್ನೋದಿ ಮನಸು ತುಂಬಿ ಬಂದಿತು. ನಿಮಗೆ ನಿಮ್ಮ ಬ್ಲಾಗಿಗೆ ನಲ್ಮೆಯ ಹಾರೈಕೆಗಳು.
ಸುಶ್ರುತ, ತುಂಬಾ ಇಷ್ಟವಾದ, ತುಂಬಾ ಕಾಡಿದ, ತುಂಬಾ ಓದಿಸಿಕೊಂಡ ಬರಹ ಇದು. ಎಷ್ಟೋ ಸಾಲುಗಳು ನನ್ನದೇ ಪ್ರಶ್ನೆಗಳೇನೋ ಎಂಬಷ್ಟು ಆಪ್ತವಾಯ್ತು. ಆದರ್ಶ ಹಾಗೂ ವಾಸ್ತವಗಳ ದ್ವಂದ್ವ ನನ್ನನ್ನು ಸಾಕಷ್ಟು ಕಾಡಿವೆ. ಕೆಲವೊಮ್ಮೆ ರಾಜಿಯಾಗಿದ್ದೂ ಇದೆ, ಕೆಲವೊಮ್ಮೆ ರಾಜಿಯಾಗದೆ ಬೇರೆಯವರ ಕಣ್ಣಲ್ಲಿ 'ಕಳಕೊಂಡಿದ್ದೂ' ಇದೆ. ಬರಹ ತುಂಬಾ ಖುಷಿ ಕೊಟ್ಟಿತು. ನಿನ್ನ ಬ್ಲಾಗ್ ಗೆ ೫ ತುಂಬಿದ್ದಕ್ಕೆ ಅಭಿನಂದನೆಗಳು.....ಹಾಗೆ ಇವೆಲ್ಲವಕ್ಕೂ : { ನನ್ನ ‘ಹೊಳೆಬಾಗಿಲು’ ಕೃತಿಗೆ ಸಾಹಿತ್ಯ ಪರಿಷತ್ ಕೊಟ್ಟ ಅರಳು ಪ್ರಶಸ್ತಿ, ಕವಿತೆಗಳಿಗೆ ಟೋಟೋ ಕೊಟ್ಟ ಸರ್ಟಿಫಿಕೇಟು, ಮೊನ್ನೆಮೊನ್ನೆ ಕನ್ನಡ ಪ್ರಭ-ಅಂಕಿತ ಪುಸ್ತಕದ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಬಂದ ಬಹುಮಾನ ...}. ಜಯಂತ ರ ಕಥೆ ನನಗೂ ತುಂಬಾ ಇಷ್ಟವಾದ ಕಥೆ. ಬಹುಷಃ ಈ ಆದರ್ಶ ವಾಸ್ತವಗಳ ದ್ವಂದ್ವ ಕಾಡುವುದು ನಿಂತ ದಿನ ನಾವು ಕಳೆದೇ ಹೋಗುತ್ತೆವೇನೋ. ವಂದನೆಗಳು...ನಿನಗೆ , ನಿನ್ನ ಸುಂದರ ಬರಹಕ್ಕೆ. ---ರಾಮಚಂದ್ರ ಹೆಗಡೆ
ಇಷ್ಟು ಒಳ್ಳೆಯ ‘ಪ್ರಾರ್ಥನೆ’ಯನ್ನು ಡಿ.ವಿ.ಜಿಯಾಗಲೀ, ಅಡಿಗರಾಗಲೀ ಬರೆದಿಲ್ಲ. ತುಂಬ ಲೈಕ್ ಆಯ್ತು. ಐದು ವರ್ಷದ ಹಬ್ಬಕ್ಕೆ ಶುಭಾಶಯಗಳು.
very nice..
ಶುಭಾಶಯಗಳು ಸುಶ್..
ಆದರ್ಶದ ಬಗ್ಗೆ ಮತ್ಯಾವಾಗಾದ್ರೂ ಮಾತಾಡೋಣ.
ಬರೆಯುತ್ತಿರು.. ಬೆಳೆಯುತ್ತಿರು...
ನಿಮ್ಮೀ ಅಹ್ಲಾದಕರ ಬರವಣಿಗೆ, ಜೋಮು ಹಿಡಿದ ಮನಗಳಿಗೆ, ತತ್ ಕ್ಷಣದ ಚಿಕಿತ್ಸೆ, ಸುಶ್ರುತ ಅವರೆ..
-Harsha Nagarajaswamy
Congrats kanree :) keep blogging :)
Bahala Apthavada Baraha Sushruta. Heege bareyuttiri shubavagali
veda
tumba chennagide.. :)
ವರ್ಷದ ಹರ್ಷದ ಸಂದರ್ಭದ ಧನ್ಯವಾದಗಳು, ಸುಶೃತರೇ. ಆದರ್ಶ ಬೇರೆಯವರಿಗೆ, ನಾವು ಪಾಲಿಸಲು ಅಲ್ಲ ಎಂದು ಎಲ್ಲರೂ ಅಂದುಕೊಂಡರೆ ಆದರ್ಶ ಅನಾಥವಾಗುವುದು!
ನಮಸ್ಕಾರ ಸುಶ್ರುತರವರೆ ,ಅಭಿನಂದನೆಗಳು! ಹಲವರ ಮೌನ ದ್ವಂದ್ವಗಳಿಗೆ ನೀವು ಪ್ರಾಮಾಣಿಕವಾದ ಅಭಿವ್ಯಕ್ತಿ ನೀಡಿದ್ದು ತುಂಬ ಸಮಾಧಾನ ಕೊಟ್ಟಿತು.ಎಂದೋ ಓದಿದ್ದ ಮುಲ್ಕ್ ರಾಜ ಆನಂದರ ನುಡಿ ನೆನಪಾಯ್ತು"..what is a writer if he is not the fiery voice of the people, who thro' his own torments, urges and exaltations , by realising the pains, frustrations and aspirations of others, and by cultivating his incipient powers of expression, transmutes in art all feeling,all thought,all experience...."
ನಿಮ್ಮ ಬರೆಹಗಳನ್ನು ಓದೋದಕ್ಕೆ ನಮಗೆಷ್ಟು ಖುಷಿನೋ, ನಿಮಗೆ ಅದರ ಸಾವಿರ ಪಾಲಾದರೂ ಖುಷಿ ಬರೆಯೋದ್ರಿಂದ ಸಿಗಲೀಂತ ಹಾರೈಸ್ತೀನಿ :):)
abhinandanegaLu...
abbabbaahh... ivattu Odi mugsde aavattu shuru maaDiddaakke....
sakkath kaNayya... :-)
ಒಳ್ಳೆಯ ಸಂವೇದನೆಯುಳ್ಳ ಪ್ರಾಮಾಣಿಕ ಲೇಖನ. ಗೊಂದಲಗಳು ಪ್ರಶ್ನಿಸುವ ಹಾಗೂ ಅಲಿಪ್ತ ಮನಸ್ಸಿನ ಸೂಚಕ. "ಆದರ್ಶಗಳು ಕೇವಲ ಬೋಧನೆಗೆ ಮಾತ್ರ, ಪಾಲಿಸಲು ಅಲ್ಲ" ಎನ್ನುವುದು ವಿರೋಧಾಭಾಸ (ಪ್ರಸ್ತುತ ಭಾರತೀಯ ಸಂಕೀರ್ಣ ಸಮಾಜವನ್ನು ಹೊರತು ಪಡಿಸಿದರೆ..). ನಾವು ಆಚರಿಸದ ಆದರ್ಶವನ್ನು ಬೋಧಿಸುವುದು ಯಾಕೆ!.
ಇನ್ನು ಬದುಕಿನಲ್ಲಿ ಆದರ್ಶಗಳು ಬೇಕೋ ಬೇಡವೋ?, ಇನ್ನೊಬ್ಬರಿಗೆ ವಿನಾ ಕಾರಣ ತೊಂದರೆ ಆಗಬಾರದು. ಜಂಗುಳಿ ಎಲ್ಲಾ ಕಳೆದು ಓರ್ವನೇ ನಿಂತ ಕ್ಷಣಗಳಲ್ಲಿ ಬದುಕಿನ ಕುರಿತಾಗಿ, ಸಾಗಿ ಬಂದ ದಾರಿಯ ಕುರಿತಾಗಿ, ಬದುಕಿನ ಹಲವು ಕವಲುಗಳಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ, ಗೈದ ಕೃತಿಯ ಬಗ್ಗೆ ಒಂದು ಸುಧೀರ್ಘ ವಿಷಾದ, ಪಶ್ಚಾತ್ತಾಪ ಉಂಟಾಗಬಾರದು.
ಇನ್ನು, ವಿಧವೆಯನ್ನು ಮದುವೆ ಆಗುವುದು ಆದರ್ಶವಲ್ಲ, ಅದೊಂದು ವ್ಯಸನ. ಇಷ್ಟಕ್ಕೂ ವಿಧವೆಯನ್ನು ಹುಡುಕಿಕೊಂಡು ಹೋಗಿ ಮದುವೆ ಆಗುವುದು ಅಸಂಬದ್ದ ಹಾಗೂ ಅನೈಸರ್ಗಿಕ.ಅದು ಕೇವಲ 'ನಾನು ವಿಧವೆಗೆ ಬಾಳು ಕೊಟ್ಟವ' ಎನ್ನುವ ಅಹಂಕಾರಕ್ಕೆ ಹೇತು. ಹಾಗೆಂದು, ಯಾರಾದರೂ ಹುಡುಗಿ ತುಂಬಾ ಇಷ್ಟವಾದರೆ, ಆಕೆ ವಿಧವೆ ಎನ್ನುವ ಒಂದೇ ಕಾರಣಕ್ಕೆ ತ್ಯಜಿಸುವುದೂ ಅಸಹ್ಯ. ಹೀಗೆ ಗಹನಾ ಕರ್ಮಣೋ ಗತಿಹಿ ಎನ್ನುವ ಹಾಗೆ ಸಂಕೀರ್ಣ ಬದುಕಿದು.
ಇನ್ನು, ದುಡ್ಡು ಜೀವನದ ಅವಿಭಾಜ್ಯ ಸಾಧನ. ಅಸಂಖ್ಯ ಸಾಧ್ಯತೆಗಳನ್ನು ಬಳಸಿಕೊಂಡು, ಪ್ರಾಮಾಣಿಕವಾಗಿ, ಸಾಮಾಜಿಕ ಹಾಗೂ ವಯಕ್ತಿಕ ಮೌಲ್ಯಗಳ ಚೌಕಟ್ಟಿನಲ್ಲಿ ಹಣ ಗಳಿಸುವುದು ಬಹಳ ದೊಡ್ಡ ಆದರ್ಶ. ಇನ್ನು ಎಷ್ಟೇ ಮಥಿಸಿದರೂ ಬದುಕೆನ್ನುವುದು ಈ ಶಾಬ್ಧಿಕ ಚೌಕಟ್ಟಿನಲ್ಲಿ ಆಡಿ ಮುಗಿಸಬಹುದಾದ ಸರಳವಾದ ಕೇಳಿಯಲ್ಲ. ಹಲವೊಮ್ಮೆ, ಮೌಲ್ಯಗಳನ್ನೂ ಹಾಗೂ ವೈಬ್ಹೊಗಗಳನ್ನೋ ಮುಖಾ-ಮುಖಿ ನಿಲ್ಲಿಸುತ್ತದೆ (ಕುರುಕ್ಷೇತ್ರದಲ್ಲಿ ಪಾನ್ದವರನ್ನೂ, ಕೌರವರನ್ನೂ ನಿಲ್ಲಿಸಿದ ಹಾಗೆ). ಆಗ ಶ್ರದ್ಧೆಯ ಬೆಳಕಿನಲ್ಲಿ ಹೇಳುವುದಾದರೆ 'ಹತೋ ಪ್ರಾಪ್ಸ್ಯಸಿ ಸ್ವರ್ಗಂ, ಜಿತೋ ಭೋಕ್ಷಸೆ ಮಹೀಮ್'.
-D.M.Sag
Congrats Sushrutha....
nimma blogina haLeya kelavu barahagaLannu odhidhe.... thumbaane barediddeera... besaravaadaagalella bandu nimma blogina puta mugichidare ullaasa thumbuvudaralli samshayavilla....
bareetha iri heege... innashtu yashassu sigali nimage... :)
ಗಾಳ ಹಾಕಿ ಕುಳಿತವನಿಗೆ ಮೀನೇ ಸಿಗಬೇಕೆಂಬ ಹಟವಿಲ್ಲ. ಆಮೆಮರಿ, ಕಪ್ಪೆಚಿಪ್ಪು, ಉರೂಟು ಕಲ್ಲು, ಸಣ್ಣ ಶಂಕು, ಯಾರದೋ ಸಾಕ್ಸು, ನೀರುಳ್ಳೆ ಹಾವು, ಕನ್ನಡಕದ ಫ್ರೇಮು...
***
ನಿಮ್ಮ ಪ್ರಾಮಾಣಿಕ ಶಬ್ದಗಳನ್ನು ಓದಿ ಸಿಕ್ಕಾಪಟ್ಟೆ
ಖುಷಿಯಾಯ್ತು. ಬಹುಶಃ ಇದೇ ನಿಮ್ಮ ಬ್ಲಾಗ್ ನ ಗಟ್ಟಿತನ..
ಗುಡ್ ಲಕ್!
-ರಾಘವೇಂದ್ರ ಜೋಶಿ
cನೋಜ್ಞವಾಗಿ ಬರೆದಿದ್ದೀಯ ಸುಶ್... ನನ್ನ ಅನುಭವ ಕಂಡ ಹಾಗೆ, ಆದರ್ಶ, ಸಮಾಜ ಸೇವೆ ಅಂತೆಲ್ಲ ಮದುವೆ ಆಗೋ ತನಕ ಹಾರಾಡಬಹುದು. ನಂತ್ರ ಬಾಲ ರೆಕ್ಕೆ ಚಕ್ರ ಎಲ್ಲಾ ಕಟ್... ಸಂಸಾರ ಸಾಗರದಲ್ಲಿ ಮುಳುಗಲೇ ಬೇಕಾಗ್ತದೆ, ಏಳಬೇಕೆಂದ್ರೂ ಏಳಲಾಗುವುದಿಲ್ಲ!
ನಿನ್ನ ಮಾಹಿತಿಗೆ (ತಿಳ್ಕೋಬೇಕು ನೀನು :-))- ಗ್ರೈಪ್ ವಾಟರ್ ಈಗೀಗ ಯಾರೂ ಪುಟ್ಟ ಮಕ್ಕಳಿಗೆ ಹಾಕುವುದಿಲ್ಲ, ವುಡ್ ವಾರ್ಡ್ಸ್ ಜಾಹೀರಾತಿನಲ್ಲಿ ಹಾಕ್ತಾರೆ, ಮತ್ತು ಉತ್ತರ ಭಾರತೀಯರು ಜನಮ್ ಘುಟ್ಟಿ ಅಂತ ಹಾಕ್ತಾರೆ. ಗ್ರೈಪ್ ವಾಟರಲ್ಲಿ ಆಲ್ಕೋಹಾಲಿರುತ್ತೆ, ಅದ್ನ ಮಕ್ಕಳಿಗೆ ಹಾಕ್ಬೇಡಿ, ಬದಲಿಗೆ ಶುಂಠಿರಸ, ಓಮದ ರಸ ಇರೋಂಥ ಕೋಲಿಕ್ ಏಯ್ಡ್ ಗಳು ಹಾಕಿ ಅಂತಾರೆ ನಮ್ಮ ತಂಟೆಪೋರಿಯ ಡಾಕ್ಟರು...:-)
ಗಾಳಿಯ ಕಣಕಣವೂ ದೀಪಕೆ ಜೀವವೀಯಲಿ
ನೆನೆದಾಗೆಲ್ಲ ಊರದಾರಿ ಕಣ್ಣೆದುರ ಪ್ರತಿಬಿಂಬವಾಗಲಿ
ಕಡಲು ತಲುಪಿದರೂ ಹೊಳೆನೀರು ಸಿಹಿಯಾಗೇ ಇರಲಿ
ಎದೆಯ ಬೆಚ್ಚನೆ ಗೂಡಲಿ ಪದಪದವೂ ಕವಿತೆಯಲಿ ಅಕ್ಷಯವಾಗಲಿ..
ಮೌನಗಾಳಕ್ಕೆ ಐದು ತುಂಬಿ ಆರು..
ಬ್ಲಾಗಿಸುತ ಕನ್ನಡ ಡಿಂಡಿಮ ಜೋರು..
ಸುಶ್ರುತರೇ, ಶುಭಾಶಯಗಳು.. :)
ಶುಭಾಶಯ ಹೇಳಿದ ಎಲ್ಲರಿಗೂ ನಾನು ಕೃತಜ್ಞ. ಇಷ್ಟೆಲ್ಲ ಪ್ರೀತಿಗೆ, ಇದರ ರೀತಿಗೆ, ಕಣ್ಣ .... ..ಕೆ. :-)
ಐ ಲವ್ಯೂ ಆಲ್.. :-)
happy birthday to your blog:)
ಪ್ರಾಮಾಣಿಕವಾದ ಬರಹ. ತುಂಬಾ ಇಷ್ಟ ಆಯ್ತು.
ಆದರ್ಶಗಳ ಬಗ್ಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ ನಾನು. ಆದರೂ ನನಗನ್ನಿಸಿದ ಒಂದು ಮಾತು ಹೇಳಿಯೇ ಬಿಡ್ತೀನಿ. ನನ್ನ ಪ್ರಕಾರ ಜೀವನಕ್ಕೆ ಆದರ್ಶಗಳ ಚೌಕಟ್ಟು ಬೇಕೇ ಬೇಕು ಅಂತೇನಿಲ್ಲ. ಬದುಕನ್ನು ಬಂದ ಹಾಗೆ ಬದುಕುತ್ತ ಹೋದರೆ ಹೆಚ್ಚಿನ ಸಮಸ್ಯೆಗಳೇನು ಬರೋದಿಲ್ಲ. ಹಾಗೂ conflict ಗಳು ಬಂದರೆ ನಮ್ಮ ಮನಸು, ನಮ್ಮ ಸಂಸ್ಕಾರ ದಾರಿ ತೋರಿಸುತ್ತವೆ.
ನನಗೆ ನಿಮ್ಮ ಕವನಗಳು, ಬರಹಗಳು ಇಷ್ಟವಾಗೋದು ಅವುಗಳ naturalness ನಿಂದ. ನೀವು ಕವನಕ್ಕೆ ಒಂದು ಲಯ, ಒಂದು ಚೌಕಟ್ಟು, ಒಂದು ಛಂದಸ್ಸು ಅಂತೆಲ್ಲ ತಲೆ ಕೆಡಿಸ್ಕೊಳ್ಳದೆ ಬರೀತೀರ (ಅಥವಾ ನಂಗೆ ಹಾಗನ್ನಿಸ್ತು). ಜೀವನ ಸಹ ಹಾಗೆ ಇದ್ದರೆ ಚಂದ.
Post a Comment