ಅವರು ಹೀಗಂದುದಕ್ಕೆ
ನಾನು ಹೀಗಂದೆ
ಎನ್ನುವಳು ಅಮ್ಮ
ಯಾರಿಗಾಗಿ ಈ ಸಮರ್ಥನೆ ಅಮ್ಮಾ..
ನನಗೆ ನೀನು ಗೊತ್ತು
ನಿನಗೆ ನಾನು ಗೊತ್ತು
ಅವರಿಗೂ ತಿಳಿದಿಲ್ಲವೆಂದಲ್ಲ
ಪ್ರಶ್ನೆಯ ಸ್ವರ ಹೊರಬೀಳುವುದರೊಳಗೇ
ಅದರ ಉತ್ತರಕ್ರಿಯೆಯೂ ಆಗಿರುತ್ತದೆ
ಆದರೂ ಕೇಳುತ್ತಾರೆ
ರಿಂಗಣವಾಗಿರಬಹುದು ಚಪ್ಪಾಳೆಯ ಮೊಳಗು
ಸಭೆಯ ಸರ್ವರ ಮುಂದೆ
ಮೆಚ್ಚಿರಬಹುದು ಅಹುದಹುದು ಎಂದು
ಆದರೆ ಮುಚ್ಚಿದ ಹೊದರಿನ ಕೆಳಗಿರುವ ಮಿತಿಗಳೂ
ಕದವಿಕ್ಕಿದ ಮನೆಯೊಳಗಿನ ಕತ್ತಲೆಯ ಕತೆಗಳೂ
ಮರೆತ ಸಾಲು, ತಪ್ಪಿ ತಗ್ಗಿದ ಶೃತಿಗಳೂ
ನಿನಗಷ್ಟೇ ಗೊತ್ತು.
ಮಗ ಕಾರ್ನೆಟೋ ಕೊಡಿಸುವಾಗ
ಐದನೇ ಕ್ಲಾಸಿನಲ್ಲಿ ರೇಖಾಗಣಿತದ ಮೇಷ್ಟ್ರು
ಬರೆಸಿದ್ದ ಶಂಕುವಿನ ಚಿತ್ರ ನೆನಪಾಗಿದ್ದು
ನಿನಗೇ ಹೊರತು ಅವರಿಗಲ್ಲ.
ಆದರೂ ಹೇಳುತ್ತಾರೆ: ‘ಎಂಥಾ ರಸಭಂಗ!’
ನೀನು ಅಲ್ಲಿಂದೀಚೆ ಬರುತ್ತಿದ್ದಂತೆಯೇ ಪ್ಲೇಟಿಗೆ ಹೊಯ್ದ
ಹಲ್ವಾವನ್ನು ನೀಟಾಗಿ ಕತ್ತರಿಸಿ ಎತ್ತಿ
ಕೈಗೆ ಬಾಯಿಗೆ ಹಲ್ಲಿಗೆ ಮೆತ್ತಿಕೊಳ್ಳುತ್ತ ಮೆಲ್ಲುತ್ತಾರೆ.
ಕೆಂಪುಗಾರೆಯ ನೆಲದ ಮೇಲೆ ಓಡಾಡುವ ಇರುವೆಗಳು
ತಲೆಯೆತ್ತಿ ನೊಡುತ್ತವೆ. ದಂಡುಪಾಳ್ಯದ
ಗ್ಯಾಂಗಿನಲ್ಲಿ ಸಾಲು ಸಾಲು ಸಂಚಲನ.
ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ,
ನೀ ಸುಮ್ಮನಿರು ಎಂದರೆ ಅಮ್ಮ ಕೇಳುವುದಿಲ್ಲ.
ನಾಳೆ ನಮ್ಮ ಮನೆಯಲ್ಲೂ ಮಾಡುತ್ತಾಳಂತೆ
ಗೋಧಿ ಹಲ್ವಾ.
13 comments:
Nice poem.
ಪ್ರಶ್ನೆಯ ಸ್ವರ ಹೊರಬೀಳುವುದರೊಳಗೇ
ಅದರ ಉತ್ತರಕ್ರಿಯೆಯೂ ಆಗಿರುತ್ತದೆ
ಚೆನ್ನಾಗಿದೆ...
ಸು,
ಬ್ಯೂಟಿಫುಲ್ ಕಣೋ!
ಕತ್ತಲೆಯ ಕತೆ,ತಗ್ಗಿದ ಶೃತಿ, ರಸಭಂಗ..
ದಂಡುಪಾಳ್ಯದ ಇರುವೆ ಗ್ಯಾಂಗು... ಆಹಾ ಎಂತೆಂತಹ ಪ್ರತಿಮೆಗಳು!
ಸಕ್ಕತ್ ಇಷ್ಟ ಆತು.
ಪ್ರೀತಿಯಿಂದ,
ಸಿಂಧು
ಉತ್ತಮ ಕವನ.
'ಗೋದಿ ಹಲ್ವಾ' ! ಹಾ.. ಸಿಹಿಯಾಗಿದೆ ನಿಮ್ಮ ಕವನ.
ಸುಶ್ರುತರವರೆ,
ಥ್ಯಾಂಕ್ಸ್. ಮತ್ತೆ ಬರೆದಿದ್ದಕ್ಕೆ. ಒಂದು ರೀತಿ ಸೆಳೆತ ಇದೆ ಕಣ್ರೀ ನಿಮ್ಮ ಬರಹದಲ್ಲಿ. ಓದ್ತಾ ಇದ್ರೆ ಓದ್ಕೊಂಡೆ ಇರ್ತೀನಿ. ಕಲ್ಪನೆ ಹೋಲಿಕೆಯಂತಹ ನಿಮ್ಮ ಸಮಾಸಗಳು ಸಮೋಸ ತಿಂದಷ್ಟೇ ಮಜ ತಂದ್ವು. ಉತ್ತರಕ್ರಿಯೆ, ರೇಖಾಗಣಿತ, ದಂಡುಪಾಳ್ಯ ಎಲ್ಲ ಇಷ್ಟ ಆಯ್ತು. ನಿಲ್ಲಿಸಬೇಡಿ. ಬರೀತಿರಿ. ನಿಮಗಾಗಿ ಅಲ್ಲ. ನಮಗಾಗಿ.
- ಮಲ್ಲಿಕ್
ಒಂದಕ್ಕೊಂದು ಸಂಬಂಧಪಡದ ರೂಪಕಗಳು ಅದು ಹ್ಯಾಗೋ ಏನೋ ಇಲ್ಲಿ ಅಪರಿಚಿತವಾಗಿಯೇ ಪರಸ್ಪರ ಪರಿಚಿತಗೊಂಡು ಮಿಳಿತವಾಗಿಬಿಟ್ಟಿವೆ!
:-)
ಒಂದಕ್ಕೊಂದು ಸಂಬಂಧಪಡದ ರೂಪಕಗಳು ಅದು ಹ್ಯಾಗೋ ಏನೋ ಇಲ್ಲಿ ಅಪರಿಚಿತವಾಗಿಯೇ ಪರಸ್ಪರ ಪರಿಚಿತಗೊಂಡು ಮಿಳಿತವಾಗಿಬಿಟ್ಟಿವೆ!
:-)
ಹೊಸದೇ ಆದ ರೂಪಕಗಳು.
ನಿಮ್ಮ ಉಳಿದೆಲ್ಲ ಕವನಗಳಿಗಿಂತ ಭಿನ್ನವಾದ ಕವನ. ಇಷ್ಟ ಆಯ್ತು.
ಚೆನ್ನಾಗಿದೆ.. ಇಷ್ಟವಾಯ್ತು..
ಪುಟ್ಟಣ್ಣಾ...
ತೀರ ಅಪರೂಪದ ಭಾವರೂಪಕಗಳು.
" ಕೆಂಪುಗಾರೆಯ ನೆಲದ ಮೇಲೆ ಓಡಾಡುವ ಇರುವೆಗಳು
ತಲೆಯೆತ್ತಿ ನೊಡುತ್ತವೆ. ದಂಡುಪಾಳ್ಯದ
ಗ್ಯಾಂಗಿನಲ್ಲಿ ಸಾಲು ಸಾಲು ಸಂಚಲನ"
ಎಲ್ಲ ಸಾಲುಗಳೂ ಸಖತ್ ಇಷ್ಟವಾದ್ವು.
ಪ್ರೀತಿಯಿಂದ,
ಪುಟ್ಟಕ್ಕ
ಚೆನ್ನಾಗಿದೆ ಈ ಕವನ..
ನಿಮ್ಮವ,
ರಾಘು.
@ Manjunath,
ಧನ್ಯವಾದ ಮಂಜುನಾಥ್..
ಸಿಂಧು,
ಥ್ಯಾಂಕ್ಸ್ ಚಿಂದಕ್ಕಾ.. :-)
ಸುನಾಥ,
ಧನ್ಯವಾದ ಕಾಕಾ..
ಸುಬ್ರಹ್ಮಣ್ಯ,
:-) ಥ್ಯಾಂಕ್ಸ್!
ಮಲ್ಲಿಕ್,
ಬರೀತಿರ್ತೀನಿ ಮಲ್ಲಿಕ್.. ಪ್ರೀತಿಗೆ ಋಣಿ. :-)
ಜೋಶಿ,
ಹ್ಮ್.. :-) ಥ್ಯಾಂಕ್ಸ್ ಅ ಲಾಟು ನಿಮ್ಗೆ. :-)
ಸುಖೇಶ್,
ಹಂಗಂತೀರಾ? :o ಥ್ಯಾಂಕ್ಸ್ ಕಣ್ರೀ.. :-)
ಶಾಂತಲಾ,
ಪ್ರೀತಿ ಪುಟ್ಟಕ್ಕಾ.. :-)
ರಾಘು,
ನಿಮ್ಮವ. ಸದಾ. :-) ;)
superb....
Post a Comment