ಎಷ್ಟು ಸಣ್ಣ ಎಳೆ ಅದು ಹಿಡಿದಿಟ್ಟಿದ್ದು
ಅದೆಷ್ಟು ಬೆಳಕು, ಜುಮ್ಮೆನಿಸುವ ವಿದ್ಯುತ್ತು
ವಿರುದ್ಧ ಧ್ರುವಗಳನೂ ಜತೆಮಾಡಿದ ತಂತಿ
ಸಂಚರಿಸಿದ ಕಿರಣಗಳು, ಯಾರು ಕಟ್ಟಿದರು ಬಿಲ್ಲು?
ಅಳಿಸಿಬಿಡಬಹುದೇ ಹಾಗೆ ನೆನಪುಗಳನ್ನು, ಕರಿ-
ಹಲಗೆಯ ಮೇಲೆ ಬರೆದ ಚಿತ್ರವನ್ನು ಒರೆಸಿದಂತೆ ವಸ್ತ್ರ
ಮರೆಯಾಗಿಸಬಹುದೇ ಹಾಗೆ ಮರಳದಿಣ್ಣೆಯ ಮೇಲೆ
ಕೊರೆದ ಅಕ್ಷರಗಳನ್ನು ಒಂದೇ ಭರತದ ಅಲೆ
ತೊಳೆಯಬಹುದೇ ಹಾಗೆ ಹೋಳಿಯ ಬಣ್ಣ ಮೆತ್ತಿದ
ಅಂಗಿಯನ್ನು ನೆನೆಸಿಟ್ಟಲ್ಲೇ ಬುರುಗಿನ ನೀರು
ಎಷ್ಟೆಲ್ಲ ಕೆಲಸವಿದೆ- ಆರ್ಕುಟ್ಟಿನಲ್ಲಿನ ನಿನ್ನ ಸ್ಕ್ರಾಪು,
ಫೇಸ್‌ಬುಕ್ಕಿನಲ್ಲಿನ ಮೆಸೇಜು, ಜಿಮೇಲಿನಲ್ಲಿನ ಇಮೇಲು,
ಬ್ಲಾಗುಗಳಲ್ಲಿನ ಕಮೆಂಟು, ಮೊಬೈಲಿನಲ್ಲಿನ ಎಸ್ಸೆಮ್ಮೆಸ್ಸು...
ಎಲ್ಲವನ್ನು ಡಿಲೀಟು ಮಾಡಿ, ನೀನು ಕೊಟ್ಟ ಕೀಚೈನು,
ಪುಟ್ಟ ಟೆಡ್ಡಿಬೇರು, ಆರೇ ಸಾಲಿನ ಪತ್ರ, ಬಿಳಿನವಿಲಿನ ಚಿತ್ರ...
ಎಲ್ಲ ಒಯ್ದು ಎಲ್ಲಿಡಲಿ? ಊರಾಚೆ ಅಷ್ಟೆಲ್ಲ ಜಾಗವಿಲ್ಲ.
ನಕ್ಷತ್ರಗಳೆಲ್ಲ ಮಿಂಚುಹುಳುಗಳಾದರೆ
ಚಂದ್ರ ಎಲ್ಲಿಗೆ ಹೋಗಬೇಕು ಪಾಪ?
ಮೀನುಗಳೆಲ್ಲ ಸಮುದ್ರವನ್ನೇ ಬಯಸಿದರೆ
ನದಿಯ ಕಲ್ಲಿನ ಏಕಾಂತಕ್ಯಾರು ಜೊತೆ?
ಕತ್ತಲೆಗೆ ಹೆದರಿದವನಲ್ಲ ನಾನು,
ಆದರೂ ಇವತ್ಯಾಕೋ ಹೆಜ್ಜೆ ಮುಂದಾಗುತ್ತಿಲ್ಲ;
ಬಲ್ಬು ಹೋಗಿದೆ ಅಂತ ಗೊತ್ತಿದೆ,
ಆದರೂ ಸ್ವಿಚ್ ಒತ್ತುವುದು ಬಿಡುವುದಿಲ್ಲ.
[Eternal Sunshine of the Spotless Mind ಸಿನೆಮಾ ನೋಡಿ..]
9 comments:
ಹೀಗೆಲ್ಲಾ ಬರೆಯಲು ನಿಮಗೆ ಸ್ಪೂರ್ತಿ ಕೊಟ್ಟ ಆ ಸಿನಿಮಾವನ್ನು ನೋಡಬೇಕು. ಚೆನಾಗ್ ಬರ್ದಿದೀರಿ.
Its so full of fine feelings, puTTaNNa!
malathi S
ಕವಿತೆ ಚೆನ್ನಾಗಿದೆ..
ವಿಶೇಷವಾಗಿ ಕೆಳಗಿನ ಸಾಲುಗಳು ಬಹಳ ಹಿಡಿಸಿತು...
ನಕ್ಷತ್ರಗಳೆಲ್ಲ ಮಿಂಚುಹುಳುಗಳಾದರೆ
ಚಂದ್ರ ಎಲ್ಲಿಗೆ ಹೋಗಬೇಕು ಪಾಪ?
ಮೀನುಗಳೆಲ್ಲ ಸಮುದ್ರವನ್ನೇ ಬಯಸಿದರೆ
ನದಿಯ ಕಲ್ಲಿನ ಏಕಾಂತಕ್ಯಾರು ಜೊತೆ?
ನಿಮ್ಮವ,
ರಾಘು.
ತುಂಬ ಚೆನ್ನಾಗಿದೆ ಕವನ.
ಕವನ ತುಂಬಾ ಚೆನ್ನಾಗಿದೆ.ಕೊನೆಯ ನಾಲ್ಕು ಸಾಲುಗಳು ಅಡಿಗರ ನೆನಪು ತರಿಸಿತು.
ಚೆನ್ನಾಗಿದೆ ಕವನ... ಕವನದ ಕೊನೆ ಸಕತ್..
ನೆನಪುಗಳಿಗೊಂದು ಕಸದ ಬುಟ್ಟಿ ಇಲ್ಲ ಅನ್ನೋದು ಸತ್ಯ. ತುಂಬಾ ಒಳ್ಳೆ ಕವನ.
"ನಕ್ಷತ್ರಗಳೆಲ್ಲ ಮಿಂಚುಹುಳುಗಳಾದರೆ
ಚಂದ್ರ ಎಲ್ಲಿಗೆ ಹೋಗಬೇಕು ಪಾಪ?
ಮೀನುಗಳೆಲ್ಲ ಸಮುದ್ರವನ್ನೇ ಬಯಸಿದರೆ
ನದಿಯ ಕಲ್ಲಿನ ಏಕಾಂತಕ್ಯಾರು ಜೊತೆ?"
ಯಾಕೋ ಈ ಸಾಲನ್ನ ಮತ್ತೆ ಮತ್ತೆ ಓದಿಕೊಂಡೆ. ತುಂಬಾ ಮನಃ ಮುಟ್ಟಿದ ಕವನ ಇದು..:-)
ಪುಟ್ಟ ಪುಟ್ಟ ಮನತಟ್ಟುವ ಬಾವನೆಗಳನ್ನು ಪುಟ್ಟ ಪುಟ್ಟ ಪ್ಯಾರಾಗಳಲ್ಲಿ ಹಿಡಿದಿಟ್ಟಿದ್ದೀರಾ,ಚೆಂದ ಇದೆ, ಚಿತ್ರ ನೋಡ್ತೇನೆ ನಂತರ ಮಾತಾಡೋಣ..
Post a Comment