Thursday, July 14, 2011

ಕವಿತೆ


ಹಸಿರು ಶಾಯಿಯ ಪೆನ್ನಿನಲ್ಲಿ ಕವಿತೆ
ಬರೆಯುವುದು ಎಂದರೆ ನನಗೆ ಖಯಾಲಿ
ಒಂದೆಲಗ ಬತ್ತಿಸಿದ ನೀರಿಗೆ ಕಾಳು-
ಮೆಣಸು ಜಜ್ಜಿ ಹಾಕಿ ಕುಡಿದೆ
ಮೊಣಕಾಲು ದಾಟುವವರೆಗಿನ ಕುರ್ತಾ
ಧರಿಸಿ ಸಾಹಿತ್ಯ ಸಮಾರಂಭಗಳಿಗೆ ಹೋಗಿಬಂದೆ
ಗೊಂಬೆಗೆ ಉಡಿಸಿದ ಸೀರೆ, ನೀರಲ್ಲಿ ತೇಲಿಬಿಟ್ಟ ದೋಣಿ,
ಮೊದಲ ಮಳೆಯ ಮಣ್ಣ ಘಮ, ಹುಣ್ಣಿಮೆ ರಾತ್ರಿಯ ಚಂದ್ರ-
ಎಲ್ಲ ನನ್ನ ಕವಿತೆಯಲ್ಲಿ ರೂಪಕಗಳಾದವು
ಬೆಟ್ಟದ ಹೂವಿಗೆ ಮಳೆಯ ರಾತ್ರಿ ಬಿದ್ದ ಕನಸಿನಲ್ಲಿ
ದುಂಬಿಯೊಂದು ಕೊಡೆ ಹಿಡಿದು ಬಂದಿತ್ತಂತೆ
ಅಂತೆಲ್ಲ ಬರೆದು ಚಪ್ಪಾಳೆ ಗಿಟ್ಟಿಸಿದೆ
ಶೇವಿಂಗು ಮಾಡ್ಕೊಳೋ ಎಂದ ಅಮ್ಮನಿಗೆ
ಜಿಲೆಟ್ಟಿ ಕಂಪನಿಯ ಲಾಭಕೋರತನದ ಬಗ್ಗೆ ತಿಳಿಹೇಳಿದೆ


ಚಿಕ್ಕವನಿದ್ದಾಗ ನಾನು ಶ್ರುತಿಯ ಕಷ್ಟ ನೋಡಿ
ಟೀವಿಯ ಮುಂದೆ ಅತ್ತದ್ದಿದೆ. ಅಕ್ಟೋಬರಿನ
ಗುಡುಗು-ಸಿಡಿಲಿಗೆ ಹೆದರಿ ಅಮ್ಮನ ಸೆರಗ ಹಿಂದೆ ಬಿಕ್ಕಳಿಸಿದ್ದಿದೆ.
ತಿಳುವಳಿಕೆ ಬಂದಮೇಲೆ ನಾನು ಅತ್ತಿದ್ದೇ ಇಲ್ಲ
ಗಂಡಸರು ಅಳಬಾರದು ಅಂದವರು ಯಾರೋ?
ನಗರಿಯ ಕಟ್ಟಡಗಳ ತುದಿಯಲ್ಲಿ ನನ್ನ ಭಯವನ್ನು ನೂಕಿದೆ
ಅಪಘಾತದ ಸ್ಥಳದಲ್ಲಿ ಸ್ಥಗಿತಗೊಂಡ ಟ್ರಾಫಿಕ್ ಕಂಡು
ಜೋರಾಗಿ ಹಾರನ್ನು ಬಾರಿಸಿದೆ
ಊಟ ಮಾಡಿ ಕೂತು ಕ್ರೈಂಸ್ಟೋರಿಯನ್ನು ರಸವತ್ತಾಗಿ ನೋಡಿದೆ
ಹತನಾದ ಯೋಧನ ಕಥೆ ತೋರಿಸುತ್ತಿದ್ದ ಛಾನೆಲ್
ಫಕ್ಕನೆ ಬದಲಿಸಿ ಕುಣಿಯೋಣು ಬಾರಾ ಎಂದೆ
ಗೆಳೆಯ ಫೋನ್ ಮಾಡಿ ನಾಳೆ ಮನೆ ಶಿಫ್ಟಿಂಗು,
ಸ್ವಲ್ಪ ಹೆಲ್ಪ್ ಮಾಡೋಕೆ ಬಾರಯ್ಯಾ ಎಂದಾಗ
ಎಷ್ಟು ಕೊಡ್ತೀಯ ಅಂತ ಕೇಳಲು ಹೋಗಿ ತಡೆದುಕೊಂಡು
ಬೇರೆ ಏನೋ ಸಬೂಬು ಹೇಳಿ ತಪ್ಪಿಸಿಕೊಂಡೆ
ಟೆರೇಸಿನಲ್ಲಿನ ಮೌನ ಕಂಡು ಖುಶಿಯಾಗಿ
ಬಾಲ್ಯದ ಹಸಿರಿನ ಸಿರಿಯ ಕುರಿತು ಕವನ ಬರೆದು
ನನಗೆ ನಾನೇ ಐದಾರು ಸಲ ಓದಿಕೊಂಡೆ


ರೈಲಿನ ನೂಕಿನಲ್ಲಿ ನಿಜಗಂಧದ ತರುಣಿ
ತೂರಿ ಬಂದರೆ ಕಾಯಕದ ದಿನವಿಡೀ ಉಲ್ಲಾಸ
ಕೈಯಲ್ಲಿ ಐಫೋನು, ಕಿವಿಯಲ್ಲಿ ಮೊರೆಯುವ ಪಾಪ್-
ಚಿಗುರು ಬೆರಳಿನ ಹುಡುಗಿಗೆ ಟಚ್‌ಸ್ಕ್ರೀನ್ ಫೋನು ಇಷ್ಟ;
ಹಾಗೆಯೇ ಟಚ್‌ಸ್ಕ್ರೀನ್ ಫೋನಿಗೆ ಚಿಗುರು ಬೆರಳಿನ ಹುಡುಗಿ.
ಹೂವಿನ ಚಬ್ಬೆಯ ಮುದುಕಿ ಬಂದಾಗ ಎತ್ತಲೋ
ನೋಡಿದ ನಾನು ಐಫೋನಿನ ಹುಡುಗಿಗೆ
ಪ್ಲೀಸ್ ಸಿಟ್ ಅಂತ ಸೀಟು ಬಿಟ್ಟುಕೊಟ್ಟೆ
ನಯವನ್ನೂ ನಾಜೂಕಿನಲ್ಲಿ ಬಳಸಬೇಕು
ಅಂತ ಮನಸಿನಲ್ಲೇ ಅಂದುಕೊಂಡು ಮುಗುಳ್ನಕ್ಕೆ

ಟ್ವೀಟುಗಳನ್ನು ಸ್ಕ್ರಾಲ್ ಮಾಡುತ್ತಿದ್ದವಳು
ಬ್ಲಾಸ್ಟ್ಸ್ ಅಗೇನ್ ಅಂತ ಕೂಗಿದ್ದೇ ರೈಲಿನಲ್ಲಿ
ಗಲಿಬಿಲಿ ಶುರುವಾಗಿ ಕೆಲವರು ಹೊರಗೆ ಹಾರಿ
ಒಬ್ಬರ ಮೇಲೊಬ್ಬರು ಬಿದ್ದು ಆಕ್ರಂದನಗಳು
ಹೇಷಾರವಗಳಾಗಿ ಅಕೋ ಅಲ್ಲಿ ಓಡಿ ಬರುತ್ತಿರುವ
ರಕ್ತಸಿಕ್ತ ದೇಹವೊಂದು ನನಗೇ ಢಿಕ್ಕಿ ಹೊಡೆದು
ನಾನು ಬೋರಲು ಬಿದ್ದು ಯಾರೋ ತುಳಿದುಕೊಂಡು ಹೋಗಿ
ಮತ್ಯಾರೋ ಬಂದು ಕೈ ಹಿಡಿದೆತ್ತಿ ಹತ್ತಿರದ
ಗೋಡೆಗೆ ಒರಗಿಸಿ ಕೂರಿಸಿ ನೀರು ಕೊಟ್ಟರು.


ಆಗಲೇ ನನಗೆ ಅಳು ಮತ್ತೆ ನೆನಪಾದದ್ದು;
ಕೆಂಪು ಇಂಕಿನ ಪೆನ್ನಿನಿಂದ ಪದ್ಯ ಬರೆದದ್ದು.

23 comments:

ತೇಜಸ್ವಿನಿ ಹೆಗಡೆ said...

good one. ನಿಜ... ತಮ್ಮ ಕಾಲಬುಡಕ್ಕೆ ಬಂದಾಗಲೇ ತೀವ್ರ ಅನುಭೂತಿಯುಂಟಾಗುವುದು!

ವಾಣಿಶ್ರೀ ಭಟ್ said...

chennagide :)

Anonymous said...

ಚೆನ್ನಾಗಿದೆ :)

sunaath said...

ವಾಸ್ತವತೆಯ ಕವನ. ಚೆನ್ನಾಗಿದೆ.

Subrahmanya said...

ಕೆಂಪು ಇಂಕು ! ಹ್ಮ್ಮ್ . ಅದೂ ನಿಜ.

ಆನಂದ said...

ಚೆನ್ನಾಗಿದೆ

Veda said...

vastavakke hattiravada kavana Sushrutha

ಸಾಗರದಾಚೆಯ ಇಂಚರ said...

arthapoorna kavite

tumba ishtavaayitu

Shwetha Kiran said...

Very meaningful.. I really really like this poem..

ರಾಘವೇಂದ್ರ ಜೋಶಿ said...

ಬಬ್ಲಿ ಬಬ್ಲಿಯಾಗಿ ಓದಿಸಿಕೊಂಡ ಸಾಲುಗಳೇ ಮುಂದೆ ಕೊನೇ ಕ್ಷಣದಲ್ಲಿ ಬೆಚ್ಚಿ ಬೀಳಿಸಿತು.
Framing ಇಷ್ಟವಾಯಿತು.ಶಭಾಷ್ ಅಂದೇ ಬಿಡುವೆ.. :-)

ರಾಘವೇಂದ್ರ ಜೋಶಿ said...

ಬಬ್ಲಿ ಬಬ್ಲಿಯಾಗಿ ಓದಿಸಿಕೊಂಡ ಸಾಲುಗಳೇ ಮುಂದೆ ಕೊನೇ ಕ್ಷಣದಲ್ಲಿ ಬೆಚ್ಚಿ ಬೀಳಿಸಿದವು.
Framing ಇಷ್ಟವಾಯಿತು.ಶಭಾಷ್ ಅಂದೇ ಬಿಡುವೆ.. :-)

Raghu said...

Good poem.

Nimmava,
Raghu

Annapoorna Daithota said...

Bahala Chennaagide :)

ಸುಧೇಶ್ ಶೆಟ್ಟಿ said...

ಚ೦ದದ ಕವನ....

Unknown said...

ಹಸಿರು ಶಾಯಿಯ ಕರಾಮತ್ತೇ ಹಾಗೆ., ಅಧಿಕಾರವಿದ್ದಾಗ ರಾಜರಂತೆ ಇರುತ್ತಾರೆ.. ಸರ್ಕಾರಿ ಕೆಲಸದ ಅನುಭವ ನನ್ನದು. ಒಮ್ಮೆ ಅಧಿಕಾರದಿಂದ ಕೆಳಗಿಳಿದ ನಂತರ ಯಾರೋ ಬೇಡದ ಮೂಲೆ ಕಸವಾಗುತ್ತಾರೆ. ನಿಮ್ಮ ಎಚ್ಚರಿಕೆ ಅಂತಹಾ ಎಲ್ಲಾ ದುರುಳ ಹಸಿರುಶಾಯಿಗಳ ಮನಸ್ಸಿನಾಳಕ್ಕೆ ತಟ್ಟಲಿ. ಎಂದಾದರೂ ಒಂದು ದಿನ ಎಲ್ಲರ ಬಾಳಲ್ಲೂ ಕೆಂಪು ಶಾಯಿಯಲ್ಲಿ absent ಎಂದು ಬರೆಯಲೇ ಬೇಕಾಗುತ್ತದೆ.

Keshav.Kulkarni said...

One of your best poems! One of the good poems I recently read. Great job. Keep it up.

prabhamani nagaraja said...

ಹಸಿರು ಶಾಯಿಯ ಪೆನ್ನಿನಲ್ಲಿ ಕವಿತೆ ಬರೆಯಲು ಪ್ರಾರ೦ಭಿಸಿ ಕೆಂಪು ಇಂಕಿನ ಪೆನ್ನಿನಿಂದ ಮುಕ್ತಾಯವಾದದ್ದು ವಿಪರ್ಯಾಸ. ಘಟನೆಯನ್ನು ಕವನಗೊಳಿಸಿರುವ ಕಲೆ ಸು೦ದರವಾಗಿದೆ. ಧನ್ಯವಾದಗಳು.

ನಾಗರಾಜ್ ವೈದ್ಯ.// ಎನ್ವೀ ವೈದ್ಯಹೆಗ್ಗಾರ್. said...

ಇವತ್ತಿನ ಮಾರ್ಕೆಟ್ಟಿನಲ್ಲಿ ಕೆಂಪು ಇಂಕಿನ ಪೆನ್ನುಗಳೇ ಮಾರಾಟಕ್ಕಿವೆ ಮತ್ತು ಹಳೆಯ ನೀಲಿ ಇಂಕಿನಲ್ಲಿ ಬರೆದ ಪದ್ಯಗಳು ಕೆಂಪಾಗಿ ಮೂಡುತ್ತಿವೆ

ಹಾಗಾಗದಿರಲಿ.

ನಾಗರಾಜ್ ವೈದ್ಯ.// ಎನ್ವೀ ವೈದ್ಯಹೆಗ್ಗಾರ್. said...

ಇವತ್ತಿನ ಮಾರ್ಕೆಟ್ಟಿನಲ್ಲಿ ಕೆಂಪಿಂಕಿನ ಪೆನ್ನುಗಳೇ ಮಾರಾಟಕ್ಕಿವೆ ಮತ್ತು ಹಳೆಯ ನೀಲಿ ಇಂಕಿನಲ್ಲಿ ಬರೆದ ಪದ್ಯಗಳು ಕೆಂಪಾಗಿ ಮೂಡುತ್ತಿವೆ.


ಮತ್ತೆ ಹಾಗಾಗದಿರಲಿ!

Sachin said...

chennagide

Sachin said...

chennagide

ಅರವಿಂದ said...

ಎಂತಾ ಪದ್ಯ ಕಂಣ್ರಿ.... ಅದ್ಭುತವಾಗಿದೆ ನೋಡಿ.... ತುಂಬಾ ದಿನಗಳು ಕಾಡಿದ ಪದ್ಯ..... ತುಂಬಾ ಧನ್ಯವಾದಗಳು....

ಅರವಿಂದ said...

ಎಂತಾ ಪದ್ಯ ಕಂಣ್ರಿ.... ಅದ್ಭುತವಾಗಿದೆ ನೋಡಿ.... ತುಂಬಾ ದಿನಗಳು ಕಾಡಿದ ಪದ್ಯ..... ತುಂಬಾ ಧನ್ಯವಾದಗಳು....