Saturday, July 02, 2016

ಬೇಡ್ಕಣಿ ಕ್ರಾಸ್

ಬೇಡ್ಕಣಿ ಕ್ರಾಸಿನಲ್ಲಿ ವಾಹನ ಸವಾರರು ಮೈಮರೆಯಬಾರದು.
ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಇಳಿವ ಅಷ್ಟಗಲದ ಜಾರು-
ರಸ್ತೆಯಲ್ಲಿ ಬ್ರೇಕು ಗೀಕು ಸರಿಯಾಗಿರದ ಸೈಕಲ್ಲಿನಲ್ಲಂತೂ ಹೋಗಲೇಬಾರದು.
ಅದೆಷ್ಟೋ ಅಪಘಾತಗಳಿಗೆ ಸಾಕ್ಷಿಯಾಗಿರುವ ಈ ತಿರುವಿನಲ್ಲಿ,
ಸಂಜೆಯಾದರೆ ಸಾಕು, ನಿಮ್ಮ ಮಗ್ನತೆ ಭಗ್ನಗೊಳಿಸಲು ನೂರೆಂಟಾಕರ್ಷಣೆಗಳು-
ಆ ತಿರುವ ಕೊನೆಯೇ ದಿಗಂತವೆಂಬಂತೆ ಅಲ್ಲೇ ಇಳಿವ ಕೆಂಪುಸೂರ್ಯ;
ಕತ್ತೆತ್ತಿದರೆ ಸಗ್ಗವಿಲ್ಲಿಯೇ ಎನ್ನುವ ಬೆಟ್ಟಸಾಲು;
ಅತ್ತಿತ್ತ ನೋಡಿದರೋ ದಿಕ್ಕೆಟ್ಟ ನವಿಲುಗಳು, ಹಾರುವ ಗಿಣಿವಿಂಡು,
ಗಿಡ್ಡಮರದ ಟೊಂಗೆಯಲ್ಲಿ ಕಿಲಿಗುಡುತ್ತ ಕುಣಿವ ಪಿಕಳಾರ.
ಅಪರೂಪಕ್ಕೆ ನುಣುಪಾಗಿರುವ ರಸ್ತೆಯಂದಕ್ಕೆ ಮನಸೋತು
ಪೆಡಲು ತುಳಿದಿರೋ, ಓಹೋ ಹಿಂದೆ ದಬ್ಬುವ ತೂರುಗಾಳಿ.

ಇವ್ಯಾವಕ್ಕೂ ಚಿತ್ತ ಕಲಕದೇ ದಿಟ್ಟತನದಲಿ ನೀವು
ರಸ್ತೆಯೆಡೆಗೇ ದಿಟ್ಟಿಯಿಟ್ಟು ನಡೆದಿರೋ- ಊಹುಂ,
ಆ ತಿರುವಿನಲ್ಲೇ ಸಿಗುತ್ತಾಳವಳು ಎಷ್ಟೋ ವರ್ಷದ ತರುವಾಯ.
ಜತೆಗೆ ಇದ್ದಕ್ಕಿದ್ದಂತೆ ಸುರಿಯತೊಡಗುವ ಮುಂಗಾರು ಮಳೆ.
ಬಿಡಿಸಿ ಹಿಡಿದ ಪುಟ್ಟ ಕೆಂಪು ಕೊಡೆ ಬೀಸಿ ಬಂದ ಅಡ್ಡಗಾಳಿಗೆ
ಉಲ್ಟಾ ಆಗಿ, ತುಂತುರು ನೀರ ಹನಿಗಳು ಅರಗಿಣಿಯ ಕೆನ್ನೆ,
ಅರೆಮುಚ್ಚಿದ ಕಣ್ಣು, ಅರೆಬಿರಿದ ತುಟಿಗಳ ಮೇಲೂ ಸೇಚನಗೊಂಡು,
ತ್ವರಿತ ಆತಂಕದ ಮೋಡಗಳು ಅವಳ ಮೊಗಕವಿದು

ನೀವದೇ ಹಳೆಯ ಪಡ್ಡೆ ಪ್ರೇಮಿಯಾಗಿ ಪರಿವರ್ತಿತರಾಗಿ
ಅದೇ ದೌರ್ಬಲ್ಯದ ಅದೇ ಹಳೆಹುಡುಗನಾಗಿ ಕ್ಷಣದಲ್ಲಿ
ಅವಳಿಗೆ ಸಹಾಯ ಮಾಡಲು ಹೋಗಿ,
ಮತ್ತೇನೋ ಹೊಳೆದು ಥಟ್ಟನೆ, ಮೋರೆ ತಿರುಗಿಸಿ, ಹತಾಶ ನಾಯಕನಾಗಿ...

ಬೇಡ್ಕಣಿ ಕ್ರಾಸು ಜುಗಾರಿ ಕ್ರಾಸಿನಂತಲ್ಲ. ಮಳ್ಗದ್ದೆ ಇಳಕಲಿನ ಹಾಗೂ ಅಲ್ಲ.
ಲಿಂಗ್ದಳ್ಳಿಯ ತಿರುವಿಗೂ, ಅಮಚಿ ಸೇತುವೆಗೂ ಹೋಲಿಕೆಯೇ ಸಲ್ಲ.
ಸಿಲ್ಕ್ಬೋರ್ಡ್ ಜಂಕ್ಷನ್ನಿನಂತೆ ಜಂಗುಳಿಯೂ ಇಲ್ಲ-
ಹಿಂದಡಿಯಿಡಲು. ತರೆಮರೆಸಿಕೊಳ್ಳಲು. ಕಳೆದುಹೋಗಲು.
ಮತ್ತೆ ಮನುಷ್ಯನಾಗಲು.

*
ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಇದೆಲ್ಲ ಮಾಯವಾಗಿ,
ಈಗಷ್ಟೆ ಕಂಡ ಅವಳು, ಹಳದಿ ಚೂಡಿ, ಬಣ್ಣಕೊಡೆ,
ಸೋಕಿದ ಮಳೆನೀರು, ದಡಬಡಾಯಿಸಿ ಧಾವಿಸಿದ ನೀವು
-ಎಲ್ಲ ಬರಿ ಭ್ರಮೆಯೆಂದರಿವಾಗಿ...
ಬಿಕೋರಸ್ತೆಯ ಮಧ್ಯದಲಿ ಬಿರ್ರನೆ ಚಲಿಸುತ್ತಿರುವ ನಿಮ್ಮ ಸೈಕಲ್
ಮತ್ತು ಎದುರಿಗೆ ಬರುತ್ತಿರುವ ಬೃಹತ್ ಲಾರಿ:
ಹ್ಯಾಂಡಲ್ ಎತ್ತ ತಿರುಗಿಸಬೇಕೆಂದು ಹೊಳೆಯದೆ
ಗಲಿಬಿಲಿಗೊಂಡು ಅತ್ತಿತ್ತ ನೋಡುವಷ್ಟರಲ್ಲಿ...

ಬೇಡ್ಕಣಿ ಕ್ರಾಸಿನಲ್ಲಿ ವಾಹನ ಸವಾರರು ಮೈಮರೆಯಬಾರದು. 

No comments: