Tuesday, September 06, 2016

ಶಿಕ್ಷಕರ ದಿನದಂದು ಪಿ.ಟಿ. ಮೇಷ್ಟ್ರು ನೆನಪಾಗಿ...

ಶಾಲೆಯಲ್ಲಿರುತ್ತಿದ್ದಾಗ ನಿಮ್ಮ ನೆಚ್ಚಿನ ಮೇಷ್ಟ್ರು ಯಾರಾಗಿದ್ದರು? ತಿಪ್ಪರಲಾಗ ಹೊಡೆದರೂ ಬಿಡಿಸಲಾಗದ ಲೆಕ್ಕಗಳನ್ನು ಬಿಡಿಸಲು ಹೇಳುತ್ತಿದ್ದ ಗಣಿತದ ಮೇಷ್ಟ್ರೇ? ಎಷ್ಟೇ ಉರು ಹೊಡೆದರೂ ಮರೆಯುವ ಇಸವಿಗಳನ್ನು ನೆನಪಿಡಲು ಹೇಳುತ್ತಿದ್ದ ಇತಿಹಾಸದ ಮೇಷ್ಟ್ರೇ? ಮುಟ್ಟಲೇ ಹೇಸಿಗೆಯಾಗುವ ಕಪ್ಪೆಯನ್ನು ಕತ್ತರಿಸಲು ಹೇಳುತ್ತಿದ್ದ ವಿಜ್ಞಾನ ಶಿಕ್ಷಕರೇ? ಮೀನಿಂಗು, ಸಿನಾನಿಮ್ಮು, ಪ್ಯಾಸಿವ್ ವಾಯ್ಸು, ನೆಗೆಟಿವ್ ಸೆಂಟೆನ್ಸು ಅಂತೆಲ್ಲ ನಾಲಿಗೆ, ಪೆನ್ನು, ತಲೆಗಳಿಗೆ ಕಷ್ಟ ಕೊಡುತ್ತಿದ್ದ ಇಂಗ್ಲೀಷ್ ಮೇಡಮ್ಮೇ? ಲಘು, ಗುರು, ಛಂದಸ್ಸು, ಸಮಾಸ, ವ್ಯಾಕರಣ, ರಾಘವಾಂಕನ ಕಾವ್ಯ ಅಂತೆಲ್ಲ ಹೇಳುತ್ತ ಮಧ್ಯಾಹ್ನದ ತರಗತಿಯಲ್ಲಿ ಬೋರು ಹೊಡೆಸುತ್ತಿದ್ದ ಕನ್ನಡ ಬೋಧಕರೇ?

ಅಥವಾ- ಬಿಳೀ ಅಂಗಿ, ಬಿಳೀ ಪ್ಯಾಂಟು, ಬಿಳ್‌ಬಿಳೀ ಶೂ ಧರಿಸಿ ಬರುತ್ತಿದ್ದ, ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಅಕೋ ಮೂಲೆಯಲ್ಲಿ ಅಟೆನ್ಷನ್ ಪೊಸಿಷನ್ನಿನಲ್ಲಿ ನಿಂತಿರುತ್ತಿದ್ದ, ಇಳಿಬಿಸಿಲಿನ ಆಟದ ತರಗತಿಗಳಲ್ಲಿ ದೊಡ್ಡ ಬಯಲಿಗೆ ಕರೆದೊಯ್ದು, ನಿಮ್ಮನ್ನೇ ಕಂಬ ಹತ್ತಿಸಿ ನಿಮ್ಮಿಂದಲೇ ನೆಟ್ ಕಟ್ಟಿಸಿ ನಿಮ್ಮಿಂದಲೇ ಸರ್ವ್ ಮಾಡಿಸಿ ವಾಲಿಬಾಲ್ ಆಡಿಸುತ್ತಿದ್ದ, ಫುಟ್‌ಬಾಲಿನ ನಾಭಿಗೆ ಬಾಲದ ನಾಝಲ್ ಒತ್ತಿ ಹಿಡಿದು ಸೈಕಲ್ ಪಂಪಿನಿಂದ ಗಾಳಿ ಹೊಡೆಯಲು ಹೇಳುತ್ತಿದ್ದ, ಗೋಲ್‌ಪಾಯಿಂಟ್‌ವರೆಗೆ ನಿಮ್ಮೊಂದಿಗೇ ಬಾಲಿನ ಹಿಂದೆ ಓಡಿ ಬರುತ್ತಾ ಪಾಸ್ ಮಾಡುವ ಟ್ರಿಕ್ ಹೇಳಿಕೊಡುತ್ತಿದ್ದ, ‘ಇವತ್ತು ನಂಗೆ ಓಡ್ಲಿಕ್ಕೆ ಆಗಲ್ಲ’ ಅಂದ ಹುಡುಗಿಯ ಸಣ್ಣ ಮುಖ ನೋಡಿಯೇ ವಿಷಯ ಅರ್ಥ ಮಡಿಕೊಳ್ಳುತ್ತಿದ್ದ, ಅಷ್ಟೊಳ್ಳೆಯ ಪಿಟಿ-ಮೇಷ್ಟ್ರೇ?

ನೀವೇನಾದರೂ ಅಕೌಂಟ್ಸನ್ನೋ ಕಾಮರ್ಸನ್ನೋ ನಿಮ್ಮ ಉದ್ಯೋಗದ ಕ್ಷೇತ್ರವನ್ನಾಗಿ ತೆಗೆದುಕೊಂಡವರಾಗಿದ್ದರೆ, ಮೂಲಸೂತ್ರಗಳನ್ನು ಎಂದೂ ಮರೆಯದಂತೆ ಹೇಳಿಕೊಟ್ಟಿದ್ದಕ್ಕೆ ಹೈಸ್ಕೂಲಿನ ಗಣಿತದ ಮೇಷ್ಟ್ರಿಗೆ ನೀವು ಕೃತಜ್ಞರಾಗಿರಬಹುದು. ಇಲ್ಲವೇ, ಒಂದ್ಯಾವುದೋ ತರಗತಿಯಲ್ಲಿ ಭಗತ್‌ಸಿಂಗನ ಶೌರ್ಯದ ಕತೆಯನ್ನು ಮೈನವಿರೇಳಿಸುವಂತೆ ಹೇಳಿದ ಇತಿಹಾಸದ ಮೇಷ್ಟ್ರ ಪಾಠ ನಿಮಗೆ ಇನ್ನೂ ನೆನಪಿರಬಹುದು. ಜೀವಶಾಸ್ತ್ರ ತೆಗೆದುಕೊಳ್ಳುತ್ತಿದ್ದ ಅವಿವಾಹಿತ ಟೀಚರ್ರು, ‘ಮಾನವ ಜೀವಿಯಲ್ಲಿ ಸಂತಾನಪ್ರಕ್ರಿಯೆ’ ಎಂಬ ಅಧ್ಯಾಯವನ್ನು ಅತ್ಯಂತ ಮುಜುಗರ ಪಟ್ಟುಕೊಂಡು ಓದಿಹೇಳಿದ್ದು ಮರೆತಿಲ್ಲದಿರಬಹುದು. ಸಂಸ್ಕೃತ ಪಂಡಿತರು ‘ಹೇಲತಾ, ಹೇಲತೇ, ಹೇಲತಾಃ’ವನ್ನು ಕಂಠಪಾಠ ಮಾಡಿಸುತ್ತಿದ್ದುದು ನೆನಪಾದರೆ ಈಗಲೂ ನಗು ಬರಬಹುದು. ಎಲ್ಲ ಶಿಕ್ಷಕರೂ ಒಂದಲ್ಲಾ ಒಂದು ದಿನ, ಒಂದಲ್ಲಾ ಒಂದು ಘಳಿಗೆಯಲ್ಲಿ ನೆನಪಿಗೆ ಬರಬಹುದು.

ಆದರೆ ನಮ್ಮ ಸ್ಮೃತಿಪಟಲದಲ್ಲಿ ಅವರೊಬ್ಬ ಪಿಟಿ-ಮೇಷ್ಟ್ರು ಸಹ ಇದ್ದಾರಾ? ಅಥವಾ ಹೈಸ್ಕೂಲು ಮುಗಿಯುತ್ತಿದ್ದಂತೆ ಹೆಚ್ಚುಕಮ್ಮಿ ನಿಂತೇಹೋದ ಗುಂಡು ಎಸೆತ, ಜಾವಲಿನ್ ಥ್ರೋ, ಕೋಕೋ, ಕಬ್ಬಡ್ಡಿ, ರಿಲೇ ಆಟಗಳ ಹಾಗೆ ಅವರೂ ನಮ್ಮ ನೆನಪಿನ ಕೋಶದಿಂದ ಮರೆಯಾಗಿಹೋದರಾ? ಶಾಲೆಯ ದಿನಗಳು ಮುಗಿದು ಕಾಲೇಜು ಸೇರುವಷ್ಟರಲ್ಲಿ ಆ ಎಲ್ಲ ಆಟಗಳನ್ನು ಬಿಟ್ಟು, ಊರಲ್ಲಿ ಹುಡುಗರನ್ನು ಸಂಘಟಿಸಿಕೊಂಡು ಕ್ರಿಕೆಟ್ಟೊಂದೇ ಸರ್ವಶ್ರೇಷ್ಠ ಆಟವೆಂಬಂತೆ ಆಡುತ್ತಾ, ವಿದ್ಯಾಭ್ಯಾಸ ಮುಗಿದು ದುಡಿಯುವವರಾದಮೇಲಂತೂ ಯಾವ ಆಟ ಆಡುವುದಕ್ಕೂ ಸಮಯವಿಲ್ಲವೆಂಬಂತೆ ಬಿಜಿಯಾಗಿ, ಭಾರತದ ಕ್ರಿಕೆಟ್ ಇದ್ದಾಗಲೆಲ್ಲಾ ಟೀವಿಯಲ್ಲಿ ಮುಳುಗಿ, “ನಮ್ ಕೋಹ್ಲಿ ಮುಂದೆ ನಿಮ್ ತೆಂಡೂಲ್ಕರ್ ಏನು ಮಹಾ?” ಎಂದು ಕೇಳುವ ಹೊಸ ಹುಡುಗರಿಗೆ ಉತ್ತರಿಸಲು ತಿಳಿಯದೇ ಒದ್ದಾಡುತ್ತಾ, ಬೊಜ್ಜು ಬೆಳೆಸಿಕೊಂಡು ಓಡಾಡುವ ಅಂಕಲ್-ಆಂಟಿಯರಾಗಿಬಿಟ್ಟೆವಾ? ಇವತ್ತು ನಾವು ಟೀವಿಯಲ್ಲಿ ನೋಡುವ ಏಷ್ಯನ್, ಕಾಮನ್‌ವೆಲ್ತ್, ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ತಮ್ತಮ್ಮ ದೇಶವನ್ನು ಪ್ರತಿನಿಧಿಸುತ್ತಾ, ಪದಕವನ್ನು ಗೆಲ್ಲಲ್ಲೇಬೇಕು ಅಂತ ಒದ್ದಾಡುತ್ತಾ, ಸೋತಾಗ ದುಃಖದಿಂದ – ಗೆದ್ದಾಗ ಆನಂದದಿಂದ ಕಣ್ಣೀರಿಡುತ್ತಾ, ಗೆಲುವೊಂದನ್ನೇ ಮಂತ್ರವಾಗಿಸಿಕೊಂಡು ಬೆವರು ಹರಿಸುತ್ತಿರುವ ಕ್ರೀಡಾಪಟುಗಳ ಸಾಧನೆಯ ಹಾದಿಯಲ್ಲಿ ಇದ್ದಿರಬಹುದಾದ ಒಬ್ಬ ಮೆಡ್ಲಿಸ್ಕೂಲ್-ಹೈಸ್ಕೂಲ್ ಸ್ಪೋರ್ಟ್ಸ್ ಟೀಚರನ್ನು ನಾವು ಕಲ್ಪಿಸಿಕೊಂಡೆವಾ?

ಎಂದೂ ಅಪ್ರಿಯರಾಗಿರಲಿಲ್ಲ ನಮಗೆ ಪಿಟಿ-ಮೇಷ್ಟ್ರು. ಯಾವತ್ತೂ ಹೊಡೆಯಲಿಲ್ಲ. ಯಾವಾಗಲೂ ಹೆದರಿಸಲಿಲ್ಲ. ಎಲ್ಲೂ ಪ್ರಶ್ನೆಪತ್ರಿಕೆಯಲ್ಲಿ ಕಷ್ಟದ ಪ್ರಶ್ನೆಗಳನ್ನು ಹೆಣೆದು ನಮ್ಮನ್ನು ಫೇಲ್ ಮಾಡಲಿಲ್ಲ. ನೋಟ್ಸ್ ಬರೆಸಲಿಲ್ಲ, ಹೋಮ್‌ವರ್ಕ್ ಕೊಡಲಿಲ್ಲ. ಪಿಟಿ-ಮೇಷ್ಟ್ರು ನಮಗೆ ಆಟ ಹೇಳಿಕೊಟ್ಟರು. ನಮ್ಮನ್ನು ಓಡಿಸಿದರು. ನಮ್ಮೊಂದಿಗೆ ಆಟವಾಡಿದರು. ನಮಗೆ ಕವಾಯತು ಮಾಡಿಸಿದರು. ‘ಕಮಾನ್, ಯು ಕ್ಯಾನ್ ಡೂ ಇಟ್’ ಎಂದು ಹುರಿದುಂಬಿಸಿದರು. ಲೆಫ್ಟ್-ರೈಟ್ ಲೆಫ್ಟ್-ರೈಟ್ ಎಂದು ಕೂಗುತ್ತಾ ನಮ್ಮ ಹೆಜ್ಜೆಗಳಿಗೆ ಶಿಸ್ತು ಕಲಿಸಿದರು. ತಮ್ಮ ಉಸಿರನ್ನು ವಿಷಲ್‌ನ ಶಬ್ದ ಹೊರಡಿಸಲು ಖರ್ಚು ಮಾಡಿದರು. ನಮ್ಮ ದೇಹಗಳನ್ನು ಹಗುರು ಮಾಡಿದರು.

ಪಿಟಿ-ಮೇಷ್ಟ್ರು ನಮ್ಮನ್ನು ಯಾವ್ಯಾವುದೋ ಊರಲ್ಲಿ ನಡೆಯುವ ಕ್ರೀಡಾಕೂಟಗಳಿಗೆ ಸಮವಸ್ತ್ರದಲ್ಲಿ ಕರೆದುಕೊಂಡು ಹೋದರು. ಹತ್ತಾರು ಶಾಲೆಗಳ ಹುಡುಗ-ಹುಡುಗಿಯರೊಂದಿಗೆ ನಾವು ಬೆರೆತೆವು. ನಮ್ಮ ಮೇಷ್ಟ್ರು ಬೇರೆ ಶಾಲೆಯ ಪಿಟಿ-ಮೇಷ್ಟ್ರುಗಳೊಂದಿಗೆ ಕೈ ಕುಲುಕಿ ಮಾತಾಡುವುದನ್ನು ಹೆಮ್ಮೆಯಿಂದ ನೋಡಿದೆವು. ಪಕ್ಕದೂರ ಶಾಲೆಯ ಹುಡುಗರೊಂದಿಗೆ ನಾವು ಕಬ್ಬಡ್ಡಿ ಆಡುವಾಗ ನಮ್ಮ ಮೇಷ್ಟ್ರು ಔಟಾದ ಹುಡುಗರೊಂದಿಗೆ ನಿಂತು ಶಕ್ತಿಯಾದರು. ದಡಿಯ ಎದುರಾಳಿ ಎರಗಿ ಬಂದಾಗ ‘ಬಕಾಪ್’ ಅಂದು ಧೈರ್ಯ ತುಂಬಿದರು. ಉದ್ದಜಿಗಿತದ ದೂರವನ್ನು ಪಟ್ಟಿ ಹಿಡಿದು ಅಳೆದರು. ಬಿದ್ದು ಮಾಡಿಕೊಂಡ ಮಳ್ಳಂಡೆ ಗಾಯಕ್ಕೆ ಟಿಂಚರ್ ಹಚ್ಚಿದರು. ವಿದ್ಯಾರ್ಥಿನಿಯರ ರಿಲೇಯಲ್ಲಿ ಓಡಿ ಸುಸ್ತಾಗಿ ಬಂದ ಹುಡುಗಿಗೆ ಗ್ಲುಕೋಸು ತಿನ್ನಿಸಿದರು. ಕೋಕೋ ಆಟದಲ್ಲಿ ತಾವೇ ಕಂಬವಾಗಿ ನಿಂತ ಅವರನ್ನು ನಾವು ಪ್ರದಕ್ಷಿಣೆ ಹಾಕಿದೆವು.

ಹೊರಗೆ ಮಳೆ ಬಂದ ದಿನ, ಈ ದೈಹಿಕ ಶಿಕ್ಷಣದ ಮೇಷ್ಟ್ರು ನಮ್ಮನ್ನು ಕ್ಲಾಸ್‌ರೂಮಿನೊಳಗೇ ಕೂರಿಸಿಕೊಂಡು ದೇಶವಿದೇಶಗಳ ಕ್ರೀಡಾಪಟುಗಳ ಸಾಧನೆಯ ಕಥೆ ಹೇಳಿದರು. ಮಿಲ್ಕಾ‌ಸಿಂಗ್ ಫ್ಲೈಯಿಂಗ್ ಸಿಖ್ ಆದ ಕಥೆಯನ್ನೂ, ಬ್ಲಾಕ್ ಪೀಲೆ ಹೇಗೆ ಫುಟ್‌ಬಾಲ್ ಪ್ರಿಯರಿಗೆ ಜ್ವರ ಹಿಡಿಸಿದ್ದ ಎಂಬುದನ್ನೂ, ಮೊಹಮ್ಮದ್ ಅಲಿ ಬಾಕ್ಸಿಂಗಿನ ದಂತಕಥೆಯಾದ ಪರಿಯನ್ನೂ, ಮಣಿಪುರದ ಒಂದು ಸಣ್ಣ ಹಳ್ಳಿಯಿಂದ ಬಂದ ಮೇರಿಕೋಮ್ ವಿಶ್ವ ಮಟ್ಟಕ್ಕೆ ಏರಿದ ಸಾಹಸವನ್ನೂ ಮೈಜುಮ್ಮೆನಿಸುವಂತೆ ವಿವರಿಸಿ ಹೇಳಿದರು. “ಬರೀ ಕ್ರಿಕೆಟ್ ಕ್ರಿಕೆಟ್ ಅಂತ ಒಂದೇ ಜಪ ಮಾಡ್ಬೇಡ್ರೋ.. ಕ್ರಿಕೆಟ್ ಅಲ್ಲದೇನೂ ಬಹಳಷ್ಟು ಆಟಗಳು ಇವೆ ಜಗತ್ತಲ್ಲಿ. ಅವುಗಳ ಕಡೇನೂ ಗಮನ ಹರಿಸಿ” ಅಂತ ಕಿವಿಮಾತು ಹೇಳಿದರು.

ಆಟೋಟಗಳಲ್ಲಿ ಮುಂದಿರುವ, ಲಘು ಶರೀರದ ಹುಡುಗ-ಹುಡುಗಿಯರು ಪಿಟಿ-ಮೇಷ್ಟ್ರಿಗೆ ಹೆಚ್ಚು ಪ್ರಿಯರಾಗುತ್ತಿದ್ದರು. ಆ ವಿದ್ಯಾರ್ಥಿಗಳಿಗಾದರೂ ಅಷ್ಟೇ, ಪಿಟಿ-ಮೇಷ್ಟ್ರು ಉಳಿದೆಲ್ಲರಿಗಿಂತ ಅಚ್ಚುಮೆಚ್ಚು. ಶಾಲಾ ಮಟ್ಟದಲ್ಲಿ ಗೆದ್ದ ವಿದ್ಯಾರ್ಥಿಗಳನ್ನು ವಲಯ ಮಟ್ಟಕ್ಕೆ, ವಲಯ ಮಟ್ಟದಲ್ಲಿ ಗೆದ್ದ ವಿದ್ಯಾರ್ಥಿಗಳನ್ನು ತಾಲೂಕು-ಜಿಲ್ಲಾ ಮಟ್ಟಗಳಿಗೆ ಪಿಟಿ-ಮೇಷ್ಟ್ರು ಬಸ್ಸಿನಲ್ಲಿ ಕರೆದುಕೊಂಡು ಹೋಗುವರು. ಅಲ್ಲಿ ಆ ವಿದ್ಯಾರ್ಥಿಯ ಲಗೇಜುಗಳನ್ನು ತಾವೇ ಹೊತ್ತು ಅವನ ಜತೆಜತೆಗೆ ನಡೆವರು. ಅಲ್ಲಿಂದ ತನ್ನ ವಿದ್ಯಾರ್ಥಿ ಗೆದ್ದು ತಂದ ಪದಕಗಳನ್ನು ಹೆಮ್ಮೆಯಿಂದ ಇಡೀ ಶಾಲೆಗೆ ತೋರಿಸುವರು. ಬಡ ವಿದ್ಯಾರ್ಥಿಯೊಬ್ಬ ಆಟದಲ್ಲಿ ಸಮರ್ಥನಿದ್ದಾನೆ ಎನಿಸಿದರೆ ತಮ್ಮದೇ ದುಡ್ಡಿನಲ್ಲಿ ಅವನಿಗೆ ಸ್ಪೋರ್ಟ್ಸ್ ಶೂ ಕೊಡಿಸುವರು. ಸಣ್ಣ ಸಾಧನೆಗಳಿಗೂ ಬೆನ್ನು ತಟ್ಟುವರು. ಸೋಲುಗಳಿಗೆ ಖಿನ್ನರಾಗದೇ ದೊಡ್ಡ ಗಮ್ಯಗಳೆಡೆಗೆ ಹೇಗೆ ನಡೆಯುವುದು ಎಂದು ಹೇಳಿಕೊಡುವರು.

ಇವತ್ತು ವಿಕಾಸ್ ಗೌಡ ಡಿಸ್ಕಸ್ ಎಸೆವ ಕಸುವಿನಲ್ಲಿ, ಸೈನಾ ನೆಹ್ವಾಲ್ ಸರ್ವ್ ಮಾಡುವಾಗಿನ ಚಾಕಚಕ್ಯತೆಯಲ್ಲಿ, ಅಭಿನವ್ ಬಿಂದ್ರಾ ದೃಷ್ಟಿ ಕದಲಿಸದಂತೆ ಗುರಿ ಇಡುವಲ್ಲಿ, ದೀಪಾ ಕರ್ಮಕಾರ್, ಸಾಕ್ಷಿ ಮಲಿಕ್, ಪಿವಿ ಸಿಂಧು ಮುಂತಾದವರು ದೇಶಕ್ಕೆ ಹೆಮ್ಮೆ ತಂದಿರುವಲ್ಲಿ –ಹಿಂದೆಲ್ಲೋ ಅವರುಗಳ ಶಾಲಾದಿನಗಳಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ ಹುರಿದುಂಬಿಸಿದ ಪಿಟಿ-ಮೇಷ್ಟ್ರು ಸಹ ಇರುತ್ತಾರೆ. ಸುಸ್ತಾಗಿ ನಿಂತ ಬಾಲಕನಿಗೆ ನೀರು-ಗ್ಲುಕೋಸು ಕೊಟ್ಟು ಪ್ರೋತ್ಸಾಹದ ಮಾತನ್ನಾಡಿರುತ್ತಾರೆ. ಶಿಸ್ತಿನ ಮೊದಲ ಪಾಠ ಮಾಡಿರುತ್ತಾರೆ. ಈಗ ಟೀವಿಯ ಮುಂದೆ ಕೂತಿರುವ ಆ ಮೇಷ್ಟ್ರು, ತನ್ನ ವಿದ್ಯಾರ್ಥಿ ಯಾವುದೋ ದೇಶದಲ್ಲಿ ಕ್ರೀಡಾಂಗಣದಲ್ಲಿ ಆಡಿ ಗೆಲ್ಲುತ್ತಿರುವುದನ್ನು ನೋಡಿ, “ನನ್ ಸ್ಟುಡೆಂಟು.. ನನ್ ಸ್ಟುಡೆಂಟು” ಅಂತ ಹೆಮ್ಮೆಯಿಂದ ತುಂಬುಗಣ್ಣಾಗಿ ಅಕ್ಕಪಕ್ಕದವರನ್ನೆಲ್ಲ ಕರೆದು ತೋರಿಸಿರುತ್ತಾರೆ.


ನಮಗೆ ಅಕ್ಷರ-ವಿದ್ಯೆ ಹೇಳಿಕೊಟ್ಟ ಗುರುಗಳನ್ನು ನೆನೆಯುವ ಶಿಕ್ಷಕರ ದಿನದ ಈ ಸಂದರ್ಭದಲ್ಲಿ, ನಮ್ಮ ಶಾಲಾದಿನಗಳ ಶನಿವಾರದ ಮುಂಜಾನೆಗಳ ಚಳಿ ಓಡಿಸುತ್ತಿದ್ದ, ನಮಗೆ ವಿವಿಧ ಆಟಗಳನ್ನು ಕಲಿಸಿದ, ನಮ್ಮೊಂದಿಗೇ ಕಲೆತು ಆಟವಾಡಿದ, ಸದಾ ಉತ್ಸಾಹದ ನಗು ಬೀರುತ್ತಿರುತ್ತಿದ್ದ ಪಿಟಿ-ಮೇಷ್ಟ್ರನ್ನೂ ನೆನಪು ಮಾಡಿಕೊಳ್ಳೋಣ. ಅವರಿಗೊಂದು ಶುಭಾಶಯ ಹೇಳೋಣ. 

[ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ]

No comments: