Wednesday, September 07, 2016

ಕರ್ಮಣ್ಯೇವಾಧಿಕಾರಸ್ತೇ

ಲೋಕಲ್ ರೈಲುಗಳು ಮಾತ್ರ ನಿಲ್ಲುವ ಸಣ್ಣ ಪಟ್ಟಣದ ಸ್ಟೇಷನ್ನಿನ ತಡರಾತ್ರಿಯ ನೀರವದಲ್ಲಿ ಬ್ಯಾಂಡ್‌ಸೆಟ್ ತಂಡವೊಂದರ ಐವರು ಸಮವಸ್ತ್ರಧಾರಿಗಳ ಗುಂಪು ಪ್ಲಾಟ್‌ಫಾರ್ಮಿನ ಮೂಲೆಯಲ್ಲಿ ಕೂತಿದೆ. ಎಲ್ಲಿಂದ ಬಂದವರೋ, ಎಲ್ಲಿಗೆ ಹೊರಟವರೋ- ಕಾಯುತ್ತ ಕೂತು ಬಹಳ ಹೊತ್ತಾದ ಕುರುಹಂತೆ ಎಲ್ಲರೂ ತೂಕಡಿಸುತ್ತಿದ್ದಾರೆ. ಅತ್ತ ದಿಕ್ಕಿಂದ ಕ್ಷೀಣ ಸದ್ದಿನೊಡನೆ ಬರುವ ಯಾವ ಬೆಳಕೇ ಕಂಡರೂ ಧಿಗ್ಗನೆ ಎಚ್ಚರಗೊಂಡು ದಡಬಡಿಸಿ ತಮ್ಮ ಸಲಕರಣೆಗಳನೆಲ್ಲ ಬಗಲಿಗೇರಿಸಿ ಸುಸ್ತು ತುಂಬಿದ ನಿದ್ರೆಗಣ್ಣನ್ನು ಇಷ್ಟಗಲ ಮಾಡಿಕೊಂಡು ಪ್ಲಾಟ್‌ಫಾರ್ಮಿನ ತುದಿಗೆ ಹೋಗಿ ನಿಲ್ಲುವರು. ಪೋಂಕನೆ ಸದ್ದು ಮಾಡುತ್ತ ಹಳಿಗಳ ಮೇಲೆ ಹಾಯುವ ಎಕ್ಸ್‌ಪ್ರೆಸ್ ರೈಲಿನ ರಭಸದಲ್ಲೇ ಇರುವ ನಿರ್ದಯೆಗೆ ಕಂಗಾಲಾಗುವರು. ಮತ್ತದೇ ಮೂಲೆಗೆ ಸರಿದು ಅದದೇ ಜಾಗದಲ್ಲಿ ತಮ್ಮ ಬಗಲ ಚೀಲಗಳನ್ನಿರಿಸಿ ಕುಕ್ಕರಿಸುವರು. ಎಲ್ಲಿ ಯಾರ ಮದುವೆ ದಿಬ್ಬಣವೋ, ಯಾರ ಶವಯಾತ್ರೆಯೋ, ಯಾವ ರಾಜಕಾರಣಿಯ ವಿಜಯದ ಮೆರವಣಿಗೆಯೋ, ಯಾವ ದೇವರ ಪಲ್ಲಕ್ಕಿಯುತ್ಸವವೋ, ಯಾವ ಮಠಾಧಿಪತಿಗೆ ಪೂರ್ಣಕುಂಭ ಸ್ವಾಗತವೋ- ತಮ್ಮ ಉಸಿರನ್ನೂ ಕಸುವನ್ನೂ ಅರ್ಪಿಸಿ ಸದ್ದಲ್ಲೇ ಸಂಭ್ರಮ ಹೆಚ್ಚಿಸಿ, ಟಪ್ಪಾಂಗುಚ್ಚಿ ಕುಣಿಸಿ ಧೂಳೆಬ್ಬಿಸಿ, ಪಡೆದು ರಿಯಾಯಿತಿ ಜತೆ ಕೊಟ್ಟ ಹಣ, ಈಗ ಈ ನಿಲ್ದಾಣದ ಮೌನದಲ್ಲಿ ಚಳಿಗೆ ಗಢಗಢ ನಡುಗುತ್ತ ಹಳಿಗಳನ್ನೇ ನೋಡುತ್ತ ಕೂತಿರುವರು. ಅವರ ಬಾಜೂ ಇರುವ ಕ್ಲಾರಿಯೋನೆಟ್ಟು- ಟ್ರಂಪೆಟ್ಟುಗಳೊಳಗೆ ಇನ್ನೂ ಸಿಕ್ಕಿಕೊಂಡಿರುವ ಉಸಿರು, ಕಿವಿಯಿಟ್ಟು ಕೇಳಿದರೆ ಬಟ್ಟೆಚೀಲದಲ್ಲಿನ ಡ್ರಮ್ಮುಗಳಿಂದ ಇನ್ನೂ ಹೊಮ್ಮುತ್ತಿರುವ ಡಂಕ್ಕಣಕ ಧ್ವನಿ, ಅವರ ಯೂನಿಫಾರ್ಮು-ಟೋಪಿಗಳ ಮೇಲೆ ಕೂತಿರುವ ಧೂಳಿನಲ್ಲಿ ಇನ್ನೂ ಅಡಗಿರುವ ಟಪ್ಪಾಂಗುಚ್ಚಿಯ ಹೆಜ್ಜೆಲಯ- ಯಾವುದೂ ಈ ನಿಶ್ಶಬ್ದವ ಕಲಕುವ ಗೋಜಿಗೆ ಹೋಗುತ್ತಿಲ್ಲ. ಆದರೂ, ಹಳಿಗಳಾಚೆಯಿಂದ ಅನಾಮತ್ ಹಾರಿಬಂದು ಡ್ರಮ್ಮಿಗೆ ಬಡಿದ ಜೀರುಂಡೆ ಹೊಮ್ಮಿಸಿದ ಶಬ್ದ ತಡೆಯಲು ಯಾರಿಂದಲೂ ಸಾಧ್ಯವಾಗಿಲ್ಲ. ಕೆಲವರು ಹೇಳುವುದುಂಟು: ಈ ಬ್ಯಾಂಡ್‌ಸೆಟ್ಟಿನವರು ಅವಕಾಶವಾದಿಗಳೆಂದು. ಅದು ಸುಳ್ಳೇ ಇರಬೇಕು. ಹಾಗಿದ್ದಿದ್ದರೆ, ಈ ದರವೇಶಿ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವ ಬದಲು ತಮ್ಮ ಚೀಲಗಳಿಂದ ಬ್ಯಾಂಡ್‌ಸೆಟ್ ಹೊರತೆಗೆದು ಸ್ಟೇಶನ್ ಮಾಸ್ತರನೂ, ಅಳಿದುಳಿದ ಪ್ರಯಾಣಿಕರೂ ಬೆಚ್ಚಿಬೀಳುವಂತೆ ಗದ್ದಲವೆಬ್ಬಿಸಿ ಯಾವುದಾದರೂ ರೈಲು ನಿಲ್ಲುವಂತೆ ಮಾಡಿ ಅದನ್ನೇರಿ ಇಲ್ಲಿಂದ ಈಗಾಗಲೇ ಜಾಗ ಖಾಲಿ ಮಾಡಿರುತ್ತಿದ್ದರು. ಇವರು ಅವಕಾಶ ಕೊಟ್ಟಾಗ ವಾದ್ಯ ನುಡಿಸುವವರು ಅಷ್ಟೇ. ಸಂದರ್ಭವಿಲ್ಲವೆಂದರೆ ತಮ್ಮ ಪೀಪಿಯ ಮೂತಿಗೆ ಬಿರಡೆ ಹಾಕಿ ಡ್ರಮ್ಮಿನ ಕಡ್ಡಿಗಳನ್ನು ಚೀಲದೊಳಗಿರಿಸಿ, ಹೀಗೆ ಅನಂತದತ್ತ ದಿಟ್ಟಿನೆಟ್ಟು ಯಾವುದೋ ಲೋಕದಿಂದ ಬರುವ ರೈಲಿಗಾಗಿ ಕೂತಲ್ಲೆ ಜೋಲಿ ಹೊಡೆಯುತ್ತಾ ಇಡೀರಾತ್ರಿ ಕಾಯುವರು: ಕೆಲವೇ ಗಂಟೆ ಮೊದಲು ತಾವಿದ್ದ ಜಾಗದ ಸಂಭ್ರಮಕ್ಕೋ ದುಃಖಕ್ಕೋ ಗದ್ದಲಕ್ಕೋ ಶಾರೀರವಾದುದ ಮರೆತು, ಏನನ್ನೂ ಅಂಟಿಸಿಕೊಳ್ಳದೆ, ಹಗುರವಾಗಿಯೇ ಉಳಿದು.

No comments: