ಹುಟ್ಟಿ ನಾಲ್ಕು ತಿಂಗಳಾಗಿ ತನ್ನಮ್ಮನ ಊರಿನಲ್ಲಿರುವ ನನ್ನ ಮಗಳಿಗೆ ಇದು ಮೊದಲ ಮಳೆಗಾಲ. ಕಡುನೀಲಿ ಸ್ವೆಟರು, ತಲೆ-ಕಿವಿ ಮುಚ್ಚುವಂತೆ ಟೋಪಿ, ಕೈ-ಕಾಲುಗಳಿಗೆ ಸಾಕ್ಸು ತೊಡಿಸಿ ಬಾಗಿಲ ಬಳಿ ಒಂದು ಮೆತ್ತನೆ ಹಾಸು ಹಾಸಿ ಅವಳನ್ನು ಮಲಗಿಸಿದರೆ, ಹೊರಗೆ ಹೊಯ್ಯುತ್ತಿರುವ ಮಳೆಯನ್ನು ತನ್ನ ಅಚ್ಚರಿಯ ಕಣ್ಣುಗಳಿಂದ ಪಿಳಿಪಿಳಿ ನೋಡುತ್ತಾಳೆ. ಆಕಾಶ ಎಂದರೇನು, ಭೂಮಿ ಎಂದರೇನು, ಮೋಡ ಎಂದರೇನು, ಮಳೆ ಎಂದರೇನು -ಯಾವುದೂ ಗೊತ್ತಿಲ್ಲದ ಮಗಳು, ಹನಿಗಳು ಮನೆಯ ಮೇಲೆ ಉಂಟುಮಾಡುತ್ತಿರುವ ತಟ್ತಟ ತಟ್ತಟ ಸದ್ದನ್ನು ಕುತೂಹಲದಿಂದ ಆಲಿಸುತ್ತಾಳೆ. ಬೇಸಿಗೆ ಮಳೆಯ ಗುಡುಗು-ಸಿಡಿಲುಗಳಿಗೆ ಬೆಚ್ಚಿಬೀಳುತ್ತಿದ್ದವಳು ಈಗ ಶಾಂತಸ್ವರದಲ್ಲಿ ಸುರಿಯುತ್ತಿರುವ ಮುಂಗಾರು ಮಳೆಗೆ ಹೀಗೆ ಕಣ್ಣಾಗಿ-ಕಿವಿಯಾಗಿ ನಮ್ರ ಪುಳಕವನ್ನನುಭವಿಸುತ್ತಿರುವಾಗ, ಅವಳ ಪಕ್ಕ ಕೂತ ನನಗೆ, ಕಳೆದ ಮಳೆಗಾಲಗಳ ನೆನಪುಗಳು.. ನಾನಾದರೂ ನೂರಾರು ಮಳೆಗಾಲಗಳ ಕಂಡವನೇ? ಅಲ್ಲ. ಆದರೆ, ಹೀಗೆ ಮೊದಲ ಮಳೆಗಾಲದ ಅನುಭವಕ್ಕೆ ಒಳಗಾಗುತ್ತಿರುವ ಮಗಳ ಬಳಿ ಕುಳಿತಾಗ, ನಾನು ಕಂಡ ಮೂವತ್ತು-ಚಿಲ್ಲರೆ ಮಳೆಗಾಲಗಳು, ತುಳಿದ ಕೆಸರು, ತೊಯ್ದ ಛತ್ರಿಗಳು, ಮಳೆ ನೋಡಲೆಂದೇ ನಾನು ಮಾಡಿದ ಪ್ರವಾಸಗಳು, ಅಲ್ಲಿ ಕಂಡ ಚಿತ್ರಗಳೆಲ್ಲ ಯಾಕೋ ಒಂದೊಂದೆ ಕಣ್ಮುಂದೆ ಬರುತ್ತಿವೆ..
ಅದೇ ಬಾನು, ಅದೇ ಭೂಮಿ, ಆದರೆ ಪ್ರತಿ ಊರಿನ ಮಳೆಯೂ ಬೇರೆಯೇ. ಪ್ರತಿ ಮಳೆಗಾಲವೂ ಭಿನ್ನವೇ. “ನಮ್ ಕಾಲದ್ ಮಳೆ ಈಗೆಲ್ಲಿ? ನಾವ್ ನೋಡಿದಂಥಾ ಮಳೆಗಾಲ ನೀವು ಒಂದು ವರ್ಷಾನೂ ನೋಡಿಲ್ಲ” –ಅಂತ ಅಜ್ಜ ಆಗಾಗ ಹೇಳುತ್ತಲೇ ಇರುತ್ತಿದ್ದ. ಹಾಗಾತ ಹೇಳುವಾಗ ಆಗಿನ ದಟ್ಟ ಕಾನನ, ತುಂಬುಬೆಟ್ಟಗಳು, ಒಂಟೊಂಟಿ ಮನೆ, ಬಿಡದೆ ಧೋ ಎಂದು ಸುರಿಯುತ್ತಿರುವ ಮಳೆಯ ಕಲ್ಪನೆಯೇ ಮೈ ಜುಮ್ಮೆನಿಸುತ್ತಿತ್ತು. ಹಾಗಂತ ನಾನೇನು ಮಳೆಯನ್ನೇ ಕಾಣದವನಲ್ಲ. ಮಲೆನಾಡಿನಲ್ಲಿ ಹುಟ್ಟಿ ಬೆಳೆದವನಿಗೆ, ಜೂನ್ ತಿಂಗಳು ಬಂತು ಎಂದೊಡನೆ ಶುರುವಾಗುತ್ತಿದ್ದ ಮಳೆಗಾಲವನ್ನು ಸೆಪ್ಟೆಂಬರಿನ ಅಂತ್ಯದವರೆಗೂ ಅನುಭವಿಸಲು ಸಿಕ್ಕೇ ಸಿಗುತ್ತಿತ್ತು. ಮಳೆ ನೋಡಲು ನಾನು ಯಾವುದೇ ಊರಿಗೆ ಹೋಗಬೇಕಿರಲಿಲ್ಲ. ಕೆಲ ವರ್ಷಗಳಂತೂ ಹನಿ ಕಡಿಯದಂತೆ ಮಳೆಯಾಗುತ್ತಿತ್ತು. ಶಾಲೆಗೆ ಹೋಗುವಾಗ ಅಲ್ಲಿಲ್ಲಿ ಗುಂಡಿಯಲ್ಲಿ ನಿಂತ ನೀರನ್ನು ಪಚಕ್ಕನೆ ಹಾರಿಸುತ್ತ ಹೋಗುವುದು ನಿತ್ಯದ ಖುಷಿಯ ಆಟವಾಗಿತ್ತು. ಸಂಜೆಯಾಯಿತೆಂದರೆ ವಟರುಗಪ್ಪೆಗಳ ಗಾಯನ. ಎಂದು ಬರುವುದೆಂದು ಹೇಳಲಾಗದಂತೆ ಹೋಗಿರುವ ಕರೆಂಟು. ಲಾಟೀನಿನ ಚುಟುಕು ಬೆಳಕು. ಕರಿದ ಹಲಸಿನ ಹಪ್ಪಳ. ಸೂರಂಚಿಂದ ಸುರಿಯುತ್ತಲೇ ಇರುತ್ತಿದ್ದ ಧಾರೆಧಾರೆ ನೀರು. ಕೈಯೊಡ್ಡಿದರೆ ಹಿಮಾನುಭವ.
ಕೂತುಬಿಡಬಹುದಿತ್ತು ಬೇಕಿದ್ದರೆ ಹಾಗೆಯೇ ಮಳೆಯ ನೋಡುತ್ತ. ರಸ್ತೆಯಲ್ಲಿ ಕಂಬಳಿಕೊಪ್ಪೆ ಹೊದ್ದು ಸಾಗುತ್ತಿದ್ದ ರೈತರನ್ನು ಮಾತಾಡಿಸುತ್ತ. ಗದ್ದೆಯ ಬದುವಿನಲ್ಲಿ ಜಾರುತ್ತ. ಪೈರಿನ ಗಾಳಿ ಅನುಭವಿಸುತ್ತ. ಗೇರುಬೀಜವ ಸುಟ್ಟು ತಿನ್ನುತ್ತ. ಜಲವೊಡೆದು ತುಂಬಿ ಬರುವ ಬಾವಿಯನ್ನಾಗಾಗ ಬಗ್ಗಿ ನೋಡುತ್ತ. ಆದರೆ ಭಯಂಕರ ಜರೂರಿತ್ತೇನೋ ಎಂಬಂತೆ ನಗರಕ್ಕೆ ಬಂದುಬಿಟ್ಟೆ. ಇಲ್ಲಿ ಮಳೆ ಬಂದರೆ ಜನ ಬೈದುಕೊಳ್ಳುವರು. ಜೋರು ಮಳೆಯಾದರೆ ರಸ್ತೆಯೇ ಕೆರೆಯಾಗುತ್ತಿತ್ತು. ನಮ್ಮೂರಲ್ಲಿ ಕೋಡಿ ಬಿದ್ದಾಗ ಹರಿವಂತೆ ಇಲ್ಲಿನ ಚರಂಡಿಯಲ್ಲೂ ಭರಪೂರ ನೀರು ಹರಿಯುತ್ತಿತ್ತು. ಜನಗಳು ಅದರಲ್ಲಿ ಬಿದ್ದು ತೇಲಿಹೋದರಂತೆ ಎಂದೆಲ್ಲ ಸುದ್ದಿ ಬರುತ್ತಿತ್ತು. ನಗರದ ಮಳೆ ಭಯ ಹುಟ್ಟಿಸುವಂತಾಗಿಹೋಗಿತ್ತು. ಜನ ಮಳೆಗೆ ಶಾಪ ಹಾಕುತ್ತಿದ್ದರು. ಆದರದು ಮಳೆಯ ತಪ್ಪಾಗಿರಲಿಲ್ಲ. ಗಾಂಧಿ ಬಜಾರಿನಲ್ಲಿ ಸುರಿದರೆ ಕವಿತೆಯಾದೇನು ಎಂಬಾಸೆಯಲ್ಲಿ ಮಳೆ ಸುರಿಯುತ್ತಿದ್ದರೂ ಕೊನೆಗೂ ಅದು ಅಚ್ಚಾಗುತ್ತಿದ್ದುದು ದುರಂತ ಕತೆಯಾಗಿ.
ನಗರದ ಮಳೆಯೊಂದಿಗೆ ದೋಸ್ತಿ ಸಾಧ್ಯವೇ ಆಗಲಿಲ್ಲ. ಇಲ್ಲೇ ಹೀಗೇ ಇದ್ದರೆ ನಾನೂ ಮಳೆಯನ್ನು ಬೈಯುವ ನಾಗರೀಕನಾಗುತ್ತೀನೇನೋ ಎಂಬ ಭಯ ಕಾಡಿದ್ದೇ, ಒಂದಷ್ಟು ಗೆಳೆಯರನ್ನು ಒಟ್ಟು ಮಾಡಿಕೊಂಡು, ರಾತ್ರೋರಾತ್ರಿ ಹೊರಟು, ಕುರಿಂಜಾಲು ಬೆಟ್ಟದ ತಪ್ಪಲು ಸೇರಿದೆ. ಮಾನ್ಸೂನ್ ಟ್ರೆಕ್ಕಿನ ಮಜವೇ ಬೇರೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹುಟ್ಟಿ ಆಗಷ್ಟೆ ತೆವಳಲು ಶುರುವಿಟ್ಟುಕೊಳ್ಳುತ್ತಿರುವ ಇಂಬಳಗಳ ತುಳಿಯುತ್ತ ಬೆಟ್ಟವನ್ನೇರುತ್ತಿದ್ದರೆ, ತೊಟ್ಟ ರೈನ್‌ಕೋಟಿನ ಅಂಚಿನಿಂದ ತೊಟ್ಟಿಕ್ಕುತ್ತಿದ್ದ ಹನಿಗಳಿಗೆ ನಮ್ಮ ಮೇಲೆ ಅದೆಂತು ಪ್ರೀತಿ..! ಅಡ್ಡಗಾಳಿಗೆ ಮುಖಕ್ಕೆ ಬಡಿಯುತ್ತಿರುವ ನೀರಪದರಕ್ಕೆ ಎಲ್ಲ ಜಂಜಡಗಳನ್ನೂ ಕಳಚಿ ನಿರ್ಭಾರಗೊಳಿಸುವ ತಾಕತ್ತು. ಚಿಗುರಲಣಿಯಾಗುತ್ತಿರುವ ಚುಪುರು ಹುಲ್ಲು ಕಾಲಿಗೆ ತಾಕುವಾಗ ಎಂಥವರನ್ನೂ ಮೈಮರೆಸುವ ಶಕ್ತಿ ಎಲ್ಲಿಂದ ಬಂತು? ಮೇಲೇರುತ್ತ ಏರುತ್ತ ಹೋದಂತೆ ದೇಹ ಹಗುರಗೊಳ್ಳುತ್ತ, ಅಕ್ಕಪಕ್ಕದ ಪರ್ವತಶ್ರೇಣಿಗಳೆಲ್ಲ ಸೌಂದರ್ಯದ ಖನಿಗಳಾಗಿ ರೂಪುಗೊಂಡು, ದೃಶ್ಯವೈಭವವ ಕಣ್ಮುಂದೆ ಜಾಹೀರು ಮಾಡುವಾಗ, ಎರಡೂ ಕೈ ಚಾಚಿ ನಾನೇ ಹಕ್ಕಿಯಂತಾಗಿ ತೇಲುತ್ತಿರುವ ಅನುಭವ. ಶೃಂಗ ತಲುಪಿಯಾಯಿತೋ, ನಾನೇ ಮೋಡದೊಳಗೆ! ನಾಲ್ಕಡಿ ದೂರದಲ್ಲಿರುವ ಗೆಳೆಯರೂ ಈಗ ಕಾಣರು. ಬಿಳಿಯ ತಿಳಿಯೊಳಗೆ ಸೇರಿಕೊಂಡಿರುವ ನಮಗೀಗ ಈ ಇಳೆಯಲ್ಲಿ ಹೆಸರಿಲ್ಲ.
ಸ್ವಲ್ಪ ಹೊಳವಾದಂತೆ ಕಂಡ ಕ್ಷಣ, ಒದ್ದೆ ಬಂಡೆಯೊಂದರ ಮೇಲೆ ಕುಳಿತು ಬುತ್ತಿಯ ಗಂಟು ಬಿಚ್ಚಿ ಹೊಟ್ಟೆ ತುಂಬಿಸಿಕೊಳ್ಳುವಾಗ, ಅದೋ ದೂರದ ಬೆಟ್ಟವನ್ನೊಮ್ಮೆ ನೋಡಬೇಕು.. ಇಲ್ಲಿ ಬಿಡುವು ಕೊಟ್ಟ ಮಳೆಯೀಗ ಅಲ್ಲಿ ಸುರಿಯುತ್ತಿದೆ. ಹೇಗೆ ಕರಿಮೋಡ ಕರಗಿ ಕರಗಿ ಬೀಳುವುದು ಸ್ಫುಟವಾಗಿ ಕಾಣುತ್ತಿದೆ.. ಯಾವಾಗದು ಖಾಲಿಯಾಗುವುದು? ಜತೆಗೆ ಬಂದ ಗೆಳೆಯ ಈಗ ಹಾಡಲು ಶುರುವಿಡುತ್ತಾನೆ. ಎಂದೋ ಕೇಳಿ ಮರೆತಿದ್ದ ಹಾಡು ಇಂದು ಇಲ್ಲಿ ಹೇಗೆ ಆಪ್ತವಾಗುತ್ತಿದೆ.. ಘಳಿಗೆಗಳ್ಯಾಕೆ ಸರಿಯಬೇಕು ಇಂತಲ್ಲಿ? ಬೆಟ್ಟದಂಚಿಗೆ ಬಂದು ಬಗ್ಗಿ ನೋಡಿದರೆ ಇಡೀ ಕಂದರವೇ ಹಾಲಾಗಿದೆ. ರುದ್ರರಮಣೀಯ ಎಂಬ ಪದಪುಂಜ ಪೋಣಿಸಿದ ವ್ಯಕ್ತಿ ಇಲ್ಲಿಗೆ ಬಂದೇಬಂದಿರುತ್ತಾನೆ.
ಎಂಥ ಬೆಟ್ಟವೇರಿದವನೂ ಮತ್ತೆ ಕೆಳಗಿಳಿಯಲೇಬೇಕು ಎಂಬಂತೆ, ಬ್ಯಾಚುಲರ್ ದಿನಗಳಲ್ಲಿ ಗೆಳೆಯರೊಂದಿಗೆ ಹುಚ್ಚಾಪಟ್ಟೆ ಟ್ರೆಕಿಂಗ್ ಹೋಗುತ್ತಿದ್ದವನು ಸಂಸಾರಸ್ಥನಾದಮೇಲೆ ಆ ಪರಿಯ ತಿರುಗಾಟ ಕಮ್ಮಿಯಾಗಿಹೋಯಿತು. ಆದರೆ ಮಳೆಯ ನಾಡಿನ ಸೆಳೆತವೇನು ಕಳೆಯಲಿಲ್ಲ. ಹೆಂಡತಿಯೊಡಗೂಡಿ ಮಡಿಕೇರಿಗೋ ಚಿಕ್ಕಮಗಳೂರಿಗೋ ಮಳೆಗಾಲದಲ್ಲೊಮ್ಮೆ ಭೇಟಿ ಕೊಡುವುದು ಸಂಪ್ರದಾಯವಾಯಿತು. ಮಡಿಕೇರಿಯ ಮಳೆ ಮತ್ತೆ ಬೇರೆಯೇ. ಇಲ್ಲಿನ ಗೆಸ್ಟ್‌ಹೌಸುಗಳ ಗೋಡೆಗಳಿಗೂ ಬೆವರು. ಎಲ್ಲೆಲ್ಲು ತಣಸು. ಸಂಜೆಯಾಯಿತೆಂದರೆ ಹಕ್ಕಿಗಳಂತೆ ಎಲ್ಲರೂ ಗೂಡು ಸೇರಿಕೊಳ್ಳುವರು. ರಾತ್ರಿಯ ಚಳಿಗಾಳಿಯೋಡಿಸಲು ಎಲ್ಲ ರೆಸಾರ್ಟುಗಳ ಮಗ್ಗುಲಲ್ಲರಳುವ ಕ್ಯಾಂಪ್‌ಫೈರುಗಳು. ಅದರ ಸುತ್ತ ಮೈಮರೆತು ಕುಣಿಯುವ ಮತ್ತ-ಉನ್ಮತ್ತ ಮಂದಿ. ಇದು ಒಗ್ಗದ ಜೀವಗಳೋ, ಬಿಸಿಬಿಸಿ ಕಾಫಿಯ ಬಟ್ಟಲು ಹಿಡಿದು ಅಕೋ ತಮ್ಮ ರೂಮಿನ ಕಿಟಕಿಯ ಬಳಿ ಆರಾಮಕುರ್ಚಿ ಹಾಕಿ ಆಸೀನರು. ಸುರಿಮಳೆಯ ಮುಂದೆರೆಯಲ್ಲಿ ಹಬೆಯಾಡುವ ಕಾಫಿಗೂ ಇಲ್ಲಿ ನಶೆಯೇರುವ ಮಾಯೆ. ಮಡಿಕೇರಿ-ಮಳೆ-ಮಂಜು-ಮತ್ತು –ಎಲ್ಲವೂ ಇಲ್ಲಿ ಸಮಾನಾರ್ಥಕ ಪದಗಳು.
ಈ ತಂಬೆಲರಿನಲ್ಲಿ ಕಾಫಿತೋಟಗಳನ್ನು ಸುತ್ತುವುದೂ ಒಂದು ರಸಾನುಭವ. ಅದೂ ಜತೆಗಾತಿಯೊಡನೆ ಒಂದೇ ಛತ್ರಿಯಡಿ ಹೆಜ್ಜೆಯಿಡುವಾಗ ಸಣ್ಣ ಬಿಸಿಲಿಗೂ ಮೂಡುವ ಕಾಮನಬಿಲ್ಲು. ಅಲ್ಲೇ ತೋಟದ ಮಗ್ಗುಲಲ್ಲಿರುವ ಕೆರೆಯಲ್ಲೀಗ ಕೆನ್ನೀರಿನ ಭರಾಟೆ. ಎಲ್ಲೆಡೆಯಿಂದಲೂ ಬಂದು ಧುಮ್ಮಿಕ್ಕುತ್ತಿರುವ ನೀರು. ಹೀಗೆ ಕೆರೆಯ ಮೇಲೆ ಬೀಳುತ್ತಿರುವ ಮಳೆಹನಿಗಳು ಈ ಕೆನ್ನೀರಿನೊಂದಿಗೆ ಬೆರೆತು ತಾವೂ ಕೆಂಪಾಗಲು ಎಷ್ಟು ಕ್ಷಣ ಬೇಕು? ಮಳೆ ತೆರವಾದಾಗ ಉಳಿದ ತುಂಬುಕೆರೆಯ ನೀರು ತಿಳಿಯಾಗಲು ಎಷ್ಟು ದಿನ ಬೇಕು? ಕೆರೆ ತುಂಬಿ ಕಟ್ಟೆಯೊಡೆದು ಸಣ್ಣ ಅವಳೆಗಳಲ್ಲಿ ಸಾಗಿ ದೊಡ್ಡ ಧಾರೆಯೊಂದಿಗೆ ಬೆರೆತು ನದಿಯಾಗಿ ಚಿಮ್ಮುತ್ತ ಸಾಗಿ ಸಮುದ್ರ ಸೇರಲು ಎಷ್ಟು ಕಾಲ ಬೇಕು? ಸಮುದ್ರದ ದಾರಿಯಲ್ಲದು ಎಷ್ಟು ಜಲಪಾತಗಳ ಸೃಷ್ಟಿಸಿತು? ಎಷ್ಟು ಕೆಮೆರಾಗಳಲ್ಲಿ ಸೆರೆಯಾಯಿತು? ಪ್ರತಿ ಹನಿಯ ಹಣೆಯಲ್ಲೂ ಬರೆದಿರುತ್ತದಂತೆ ಅದು ಸಾಗಬೇಕಾದ ದಾರಿ, ಸೇರಬೇಕಾದ ಗಮ್ಯ. ಆದರೆ ಅದರ ಹಣೆ ನೋಡಿ ಭವಿಷ್ಯ ಹೇಳುವವರಾರು? ಕೆರೆಯ ಕಟ್ಟೆಯ ಮೇಲೆ ನಿಂತು ಒಂದೇ ಸಮನೆ ನೋಡುತ್ತಿದ್ದರೆ ಎಲ್ಲ ಕಲಸಿದಂತಾಗಿ ಕಣ್ಮಂಜು.
ಮಳೆಗಾಲವೀಗ ಕಮ್ಮಿಯಾಗಿದೆ. ಋತುವಿಡೀ ಸುರಿಯಬೇಕಿದ್ದ ಮಳೆಯೀಗ ಮಿತವಾಗಿದೆ. ಯಾವ್ಯಾವಾಗಲೋ ಬರುವಷ್ಟು ಅನಿಯಮಿತವಾಗಿದೆ. ಊರಿನಿಂದ ಬರುವ ಫೋನಿನಲ್ಲಿ ಬರದ ಗೋಳಿನ ಕತೆಯೇ ಜಾಸ್ತಿ. ಎಲ್ಲರ ಮನೆಯಲ್ಲೂ ಖಾಲಿ ಬಾವಿಗಳು. ನಾವು ಮಾಡಿದ ತಪ್ಪಿಗೆ ನಾವೇ ಅನುಭವಿಸುತ್ತಿದ್ದೇವೆ.
ಆದರೂ ಭರವಸೆ ಹೋಗಿಲ್ಲ. ನಾವು ಹತಾಶರಾಗಿಲ್ಲ. ಕ್ಯಾಲೆಂಡರಿನ ಪುಟ ತಿರುಗಿಸುತ್ತಲೇ ಆಕಾಶದೆಡೆಗೆ ನೋಡುತ್ತೇವೆ ತಲೆಯೆತ್ತಿ. ಕಾರ್ಮೋಡಗಳು ಮೇಳೈಸುವುದನ್ನು ಕಾತರಿಸಿ ಈಕ್ಷಿಸುತ್ತೇವೆ. ಬಿಸಿಲಿನ ಝಳದ ನಡುವೆ ಸಣ್ಣದೊಂದು ತಂಗಾಳಿ ಬಂದರೂ ಇವತ್ತು ಮಳೆಯಾಗಿಯೇ ಆಗುತ್ತದೆ ಅಂತ ದೇವರ ಮುಂದೆ ಕಾಯಿಯಿಟ್ಟು ಕಾಯುತ್ತೇವೆ. ವರುಣನಿನ್ನೂ ನಿಷ್ಕರುಣಿಯಾಗಿಲ್ಲ. ಸಂಜೆಯಾಗುತ್ತಿದ್ದಂತೆಯೇ ಶುರುವಾಗಿದೆ ಥಟಥಟ ಹನಿಗಳ ಲೀಲೆ. ಜೋರಾಗಿದೆ ನೋಡನೋಡುತ್ತಿದ್ದಂತೆಯೇ. ಅಂಗಳದಲ್ಲಿ ಒಣಹಾಕಿದ್ದ ಬಟ್ಟೆಗಳನ್ನೆಲ್ಲ ಒಳ ತಂದಿದ್ದೇವೆ. ಕಟ್ಟೆಯ ಮೇಲೆ ನಿಂತು ಹೃನ್ಮನಗಳನೆಲ್ಲ ತೆರೆದು ಮುಂಗಾರಿನ ಮೊದಲ ಮಳೆಗೆ ಒಡ್ಡಿಕೊಂಡಿದ್ದೇವೆ. ಒಳಮನೆಯ ನಾಗಂದಿಗೆಯಲ್ಲಿದ್ದ ಛತ್ರಿಯನ್ನು ಕೆಳಗಿಳಿಸಿ ತಂದು ಧೂಳು ಕೊಡವಿ ಬಿಡಿಸಿ ಹೊರಟುಬಿಟ್ಟಿದ್ದೇವೆ ತೋಟ-ಗದ್ದೆಗಳೆಡೆಗೆ. ಹೊಂಡದ ಮೀನಿಗೂ ಈಗ ಹೊಸನೀರ ಸಹವಾಸ. ಗೂಡೊಳಗಿನ ಗೀಜಗದ ಮರಿಗೀಗ ಎಲ್ಲಿಲ್ಲದ ಆತಂಕ. ಮಣ್ಣ ಪದರದ ಕೆಳಗೆಲ್ಲೋ ಹುದುಗಿರುವ ಹೂಗಿಡದ ಬೀಜಕ್ಕೂ ತಲುಪಿದೆ ಮಳೆಬಂದ ಸುದ್ದಿ: ಅದರ ಮೊಳಕೆಯೊಡೆವ ಸಂಭ್ರಮಕ್ಕೆ ತರಾತುರಿಯಲಿ ಸಾಗುತ್ತಿರುವ ಇರುವೆಗಳು ಸಾಕ್ಷಿಯಾಗಿವೆ. ಈ ಸಲ ಮುಂಗಾರು ಜೋರು ಎನ್ನುತ್ತಿದ್ದಾರೆ ಹವಾಮಾನ ತಜ್ಞರು. ಈ ಒಳ್ಳೆಯ ವರ್ತಮಾನ ಅಡಕೆಯ ಮರಗಳ ತುದಿಯ ಒಣಗಿದ ಸುಳಿಗೂ ಮುಟ್ಟಿದಂತಿದೆ: ಉಲ್ಲಾಸದಿಂದ ತೂಗುತ್ತಿವೆ ಅವು ತಲೆ -ಒಂದಕ್ಕೊಂದು ತಾಕುವಂತೆ.
ಮಗಳ ಪಕ್ಕ ಕುಳಿತು ಮಳೆಯ ಲೋಕದೊಳಗೆ ಮುಳುಗಿ ತೋಯುತ್ತಿದ್ದರೆ ಊರಿನಿಂದ ಅಮ್ಮನ ಫೋನು: ಒಂದು ವಾರದಿಂದ ಮಳೆ ಪರವಾಗಿಲ್ಲ ಅಂತಲೂ, ನಿನ್ನೆಯಷ್ಟೇ ಸೌತೆಬೀಜ ಹಾಕಿದೆ ಅಂತಲೂ, ಬಾವಿಗೆ ಸ್ವಲ್ಪಸ್ವಲ್ಪವೇ ನೀರು ಬರುತ್ತಿದೆ ಅಂತಲೂ ಹೇಳಿದಳು. ಮೊಮ್ಮಗಳು ಅಲ್ಲಿಗೆ ಬರುವಷ್ಟರಲ್ಲಿ ನೀರಿನ ಸಮೃದ್ಧಿಯಾಗಿರುತ್ತದೆ ಅಂತ ಹೇಳಿದವಳ ದನಿಯಲ್ಲಿ ಖುಷಿಯಿತ್ತು.
ಮಳೆಯ ನೋಡುತ್ತ ಆಟವಾಡುತ್ತಿದ್ದ ಮಗಳು ಈಗ ನಿದ್ದೆ ಹೋಗಿದ್ದಾಳೆ. ವರ್ಷಧಾರೆ ಮಾತ್ರ ಹೊರಗೆ ಮುಂದುವರೆದಿದೆ. ಮಗಳಿಗೆ ನಿದ್ದೆ ಬಂದಿದ್ದು ಈ ಮಳೆಯ ಜೋಗುಳದಿಂದಲೋ ಅಥವಾ ನನ್ನ ಮಳೆಗಾಲದ ಕತೆಗಳ ಮೌನಾಖ್ಯಾನ ಕೇಳಿಯೋ ತಿಳಿಯದಾಗಿದೆ. ಹೆಂಡತಿ ಮಗಳನ್ನು ಎತ್ತಿಕೊಂಡು ಹೋಗಿ ತೊಟ್ಟಿಲಲ್ಲಿ ಮಲಗಿಸಿದ್ದಾಳೆ. ಅತ್ತೆ ಬಿಸಿಬಿಸಿ ಕಷಾಯ ತಂದುಕೊಟ್ಟಿದ್ದಾರೆ. ಬಾಗಿಲ ಬಳಿ ನಿಂತು ಒಂದು ಕೈಯಲ್ಲಿ ಕಷಾಯದ ಬಟ್ಟಲು ಹಿಡಿದು ಇನ್ನೊಂದು ಕೈಯನ್ನು ಸುರಿಮಳೆಗೊಡ್ಡಿದ್ದೇನೆ. ಬೊಗಸೆ ತುಂಬಿ ತುಂಬಿ ಹರಿಯುತ್ತಿದೆ ನಿಷ್ಕಲ್ಮಶ ಸಲಿಲ ಸಳಸಳ.
[ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ]
2 comments:
ನನ್ನದೆಷ್ಟೋ ಮಳೆ ನೆನಪುಗಳಿದ್ದರೂ ಮಗಳೊಂದಿಗೆ ಮಳೆ ನೋಡುವುದು ಹೊಸದೇ ಅನುಭವ..,. ಅವಳಿಗೆ ಮಳೆ ತೋರಿಸಿ ಅವಳು ತೊದಲು ಭಾಷೆಯಲ್ಲಿ "ಮಯೆ" ಎನ್ನುವುದ ಕೇಳುವುದು ಹಬ್ಬ ನನಗೆ..
ಊರಿಗೆ ಹೋಗಿ ಮಳೆಯಲ್ಲಿ ಅದ್ದಿದಷ್ಟೇ ಖುಶಿಆತು ! ಚಿಕ್ಕಂದಿನ ನೆನಪುಗಳು , ಚರಂಡಿ ನೀರಲ್ಲಿ ತೇಲಿಬಿಟ್ಟ ದೋಣಿ .. ಬಚ್ಚಲೊಲೆಯ ಗೇರುಬೀಜ ..... ಎಲ್ಲ ನೆನಪುಗಳು ಮತ್ತೆ ಮುತ್ತಿದವು !! ಚಂದ ಚಂದ !!
Post a Comment