Showing posts with label ಮುಂಗಾರು ಮಳೆ. Show all posts
Showing posts with label ಮುಂಗಾರು ಮಳೆ. Show all posts

Monday, June 26, 2017

ಮಗಳು ನೋಡಿದ ಮಳೆ

ಹುಟ್ಟಿ ನಾಲ್ಕು ತಿಂಗಳಾಗಿ ತನ್ನಮ್ಮನ ಊರಿನಲ್ಲಿರುವ ನನ್ನ ಮಗಳಿಗೆ ಇದು ಮೊದಲ ಮಳೆಗಾಲ. ಕಡುನೀಲಿ ಸ್ವೆಟರು, ತಲೆ-ಕಿವಿ ಮುಚ್ಚುವಂತೆ ಟೋಪಿ, ಕೈ-ಕಾಲುಗಳಿಗೆ ಸಾಕ್ಸು ತೊಡಿಸಿ ಬಾಗಿಲ ಬಳಿ ಒಂದು ಮೆತ್ತನೆ ಹಾಸು ಹಾಸಿ ಅವಳನ್ನು ಮಲಗಿಸಿದರೆ, ಹೊರಗೆ ಹೊಯ್ಯುತ್ತಿರುವ ಮಳೆಯನ್ನು ತನ್ನ ಅಚ್ಚರಿಯ ಕಣ್ಣುಗಳಿಂದ ಪಿಳಿಪಿಳಿ ನೋಡುತ್ತಾಳೆ. ಆಕಾಶ ಎಂದರೇನು, ಭೂಮಿ ಎಂದರೇನು, ಮೋಡ ಎಂದರೇನು, ಮಳೆ ಎಂದರೇನು -ಯಾವುದೂ ಗೊತ್ತಿಲ್ಲದ ಮಗಳು, ಹನಿಗಳು ಮನೆಯ ಮೇಲೆ ಉಂಟುಮಾಡುತ್ತಿರುವ ತಟ್ತಟ ತಟ್ತಟ ಸದ್ದನ್ನು ಕುತೂಹಲದಿಂದ ಆಲಿಸುತ್ತಾಳೆ. ಬೇಸಿಗೆ ಮಳೆಯ ಗುಡುಗು-ಸಿಡಿಲುಗಳಿಗೆ ಬೆಚ್ಚಿಬೀಳುತ್ತಿದ್ದವಳು ಈಗ ಶಾಂತಸ್ವರದಲ್ಲಿ ಸುರಿಯುತ್ತಿರುವ ಮುಂಗಾರು ಮಳೆಗೆ ಹೀಗೆ ಕಣ್ಣಾಗಿ-ಕಿವಿಯಾಗಿ ನಮ್ರ ಪುಳಕವನ್ನನುಭವಿಸುತ್ತಿರುವಾಗ, ಅವಳ ಪಕ್ಕ ಕೂತ ನನಗೆ, ಕಳೆದ ಮಳೆಗಾಲಗಳ ನೆನಪುಗಳು.. ನಾನಾದರೂ ನೂರಾರು ಮಳೆಗಾಲಗಳ ಕಂಡವನೇ? ಅಲ್ಲ. ಆದರೆ, ಹೀಗೆ ಮೊದಲ ಮಳೆಗಾಲದ ಅನುಭವಕ್ಕೆ ಒಳಗಾಗುತ್ತಿರುವ ಮಗಳ ಬಳಿ ಕುಳಿತಾಗ, ನಾನು ಕಂಡ ಮೂವತ್ತು-ಚಿಲ್ಲರೆ ಮಳೆಗಾಲಗಳು, ತುಳಿದ ಕೆಸರು, ತೊಯ್ದ ಛತ್ರಿಗಳು, ಮಳೆ ನೋಡಲೆಂದೇ ನಾನು ಮಾಡಿದ ಪ್ರವಾಸಗಳು, ಅಲ್ಲಿ ಕಂಡ ಚಿತ್ರಗಳೆಲ್ಲ ಯಾಕೋ ಒಂದೊಂದೆ ಕಣ್ಮುಂದೆ ಬರುತ್ತಿವೆ..

ಅದೇ ಬಾನು, ಅದೇ ಭೂಮಿ, ಆದರೆ ಪ್ರತಿ ಊರಿನ ಮಳೆಯೂ ಬೇರೆಯೇ. ಪ್ರತಿ ಮಳೆಗಾಲವೂ ಭಿನ್ನವೇ. “ನಮ್ ಕಾಲದ್ ಮಳೆ ಈಗೆಲ್ಲಿ? ನಾವ್ ನೋಡಿದಂಥಾ ಮಳೆಗಾಲ ನೀವು ಒಂದು ವರ್ಷಾನೂ ನೋಡಿಲ್ಲ” –ಅಂತ ಅಜ್ಜ ಆಗಾಗ ಹೇಳುತ್ತಲೇ ಇರುತ್ತಿದ್ದ. ಹಾಗಾತ ಹೇಳುವಾಗ ಆಗಿನ ದಟ್ಟ ಕಾನನ, ತುಂಬುಬೆಟ್ಟಗಳು, ಒಂಟೊಂಟಿ ಮನೆ, ಬಿಡದೆ ಧೋ ಎಂದು ಸುರಿಯುತ್ತಿರುವ ಮಳೆಯ ಕಲ್ಪನೆಯೇ ಮೈ ಜುಮ್ಮೆನಿಸುತ್ತಿತ್ತು. ಹಾಗಂತ ನಾನೇನು ಮಳೆಯನ್ನೇ ಕಾಣದವನಲ್ಲ. ಮಲೆನಾಡಿನಲ್ಲಿ ಹುಟ್ಟಿ ಬೆಳೆದವನಿಗೆ, ಜೂನ್ ತಿಂಗಳು ಬಂತು ಎಂದೊಡನೆ ಶುರುವಾಗುತ್ತಿದ್ದ ಮಳೆಗಾಲವನ್ನು ಸೆಪ್ಟೆಂಬರಿನ ಅಂತ್ಯದವರೆಗೂ ಅನುಭವಿಸಲು ಸಿಕ್ಕೇ ಸಿಗುತ್ತಿತ್ತು. ಮಳೆ ನೋಡಲು ನಾನು ಯಾವುದೇ ಊರಿಗೆ ಹೋಗಬೇಕಿರಲಿಲ್ಲ. ಕೆಲ ವರ್ಷಗಳಂತೂ ಹನಿ ಕಡಿಯದಂತೆ ಮಳೆಯಾಗುತ್ತಿತ್ತು. ಶಾಲೆಗೆ ಹೋಗುವಾಗ ಅಲ್ಲಿಲ್ಲಿ ಗುಂಡಿಯಲ್ಲಿ ನಿಂತ ನೀರನ್ನು ಪಚಕ್ಕನೆ ಹಾರಿಸುತ್ತ ಹೋಗುವುದು ನಿತ್ಯದ ಖುಷಿಯ ಆಟವಾಗಿತ್ತು. ಸಂಜೆಯಾಯಿತೆಂದರೆ ವಟರುಗಪ್ಪೆಗಳ ಗಾಯನ. ಎಂದು ಬರುವುದೆಂದು ಹೇಳಲಾಗದಂತೆ ಹೋಗಿರುವ ಕರೆಂಟು. ಲಾಟೀನಿನ ಚುಟುಕು ಬೆಳಕು. ಕರಿದ ಹಲಸಿನ ಹಪ್ಪಳ. ಸೂರಂಚಿಂದ ಸುರಿಯುತ್ತಲೇ ಇರುತ್ತಿದ್ದ ಧಾರೆಧಾರೆ ನೀರು. ಕೈಯೊಡ್ಡಿದರೆ ಹಿಮಾನುಭವ.

ಕೂತುಬಿಡಬಹುದಿತ್ತು ಬೇಕಿದ್ದರೆ ಹಾಗೆಯೇ ಮಳೆಯ ನೋಡುತ್ತ. ರಸ್ತೆಯಲ್ಲಿ ಕಂಬಳಿಕೊಪ್ಪೆ ಹೊದ್ದು ಸಾಗುತ್ತಿದ್ದ ರೈತರನ್ನು ಮಾತಾಡಿಸುತ್ತ. ಗದ್ದೆಯ ಬದುವಿನಲ್ಲಿ ಜಾರುತ್ತ. ಪೈರಿನ ಗಾಳಿ ಅನುಭವಿಸುತ್ತ. ಗೇರುಬೀಜವ ಸುಟ್ಟು ತಿನ್ನುತ್ತ. ಜಲವೊಡೆದು ತುಂಬಿ ಬರುವ ಬಾವಿಯನ್ನಾಗಾಗ ಬಗ್ಗಿ ನೋಡುತ್ತ. ಆದರೆ ಭಯಂಕರ ಜರೂರಿತ್ತೇನೋ ಎಂಬಂತೆ ನಗರಕ್ಕೆ ಬಂದುಬಿಟ್ಟೆ. ಇಲ್ಲಿ ಮಳೆ ಬಂದರೆ ಜನ ಬೈದುಕೊಳ್ಳುವರು. ಜೋರು ಮಳೆಯಾದರೆ ರಸ್ತೆಯೇ ಕೆರೆಯಾಗುತ್ತಿತ್ತು. ನಮ್ಮೂರಲ್ಲಿ ಕೋಡಿ ಬಿದ್ದಾಗ ಹರಿವಂತೆ ಇಲ್ಲಿನ ಚರಂಡಿಯಲ್ಲೂ ಭರಪೂರ ನೀರು ಹರಿಯುತ್ತಿತ್ತು. ಜನಗಳು ಅದರಲ್ಲಿ ಬಿದ್ದು ತೇಲಿಹೋದರಂತೆ ಎಂದೆಲ್ಲ ಸುದ್ದಿ ಬರುತ್ತಿತ್ತು. ನಗರದ ಮಳೆ ಭಯ ಹುಟ್ಟಿಸುವಂತಾಗಿಹೋಗಿತ್ತು. ಜನ ಮಳೆಗೆ ಶಾಪ ಹಾಕುತ್ತಿದ್ದರು. ಆದರದು ಮಳೆಯ ತಪ್ಪಾಗಿರಲಿಲ್ಲ. ಗಾಂಧಿ ಬಜಾರಿನಲ್ಲಿ ಸುರಿದರೆ ಕವಿತೆಯಾದೇನು ಎಂಬಾಸೆಯಲ್ಲಿ ಮಳೆ ಸುರಿಯುತ್ತಿದ್ದರೂ ಕೊನೆಗೂ ಅದು ಅಚ್ಚಾಗುತ್ತಿದ್ದುದು ದುರಂತ ಕತೆಯಾಗಿ.

ನಗರದ ಮಳೆಯೊಂದಿಗೆ ದೋಸ್ತಿ ಸಾಧ್ಯವೇ ಆಗಲಿಲ್ಲ. ಇಲ್ಲೇ ಹೀಗೇ ಇದ್ದರೆ ನಾನೂ ಮಳೆಯನ್ನು ಬೈಯುವ ನಾಗರೀಕನಾಗುತ್ತೀನೇನೋ ಎಂಬ ಭಯ ಕಾಡಿದ್ದೇ, ಒಂದಷ್ಟು ಗೆಳೆಯರನ್ನು ಒಟ್ಟು ಮಾಡಿಕೊಂಡು, ರಾತ್ರೋರಾತ್ರಿ ಹೊರಟು, ಕುರಿಂಜಾಲು ಬೆಟ್ಟದ ತಪ್ಪಲು ಸೇರಿದೆ. ಮಾನ್ಸೂನ್ ಟ್ರೆಕ್ಕಿನ ಮಜವೇ ಬೇರೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹುಟ್ಟಿ ಆಗಷ್ಟೆ ತೆವಳಲು ಶುರುವಿಟ್ಟುಕೊಳ್ಳುತ್ತಿರುವ ಇಂಬಳಗಳ ತುಳಿಯುತ್ತ ಬೆಟ್ಟವನ್ನೇರುತ್ತಿದ್ದರೆ, ತೊಟ್ಟ ರೈನ್‌ಕೋಟಿನ ಅಂಚಿನಿಂದ ತೊಟ್ಟಿಕ್ಕುತ್ತಿದ್ದ ಹನಿಗಳಿಗೆ ನಮ್ಮ ಮೇಲೆ ಅದೆಂತು ಪ್ರೀತಿ..! ಅಡ್ಡಗಾಳಿಗೆ ಮುಖಕ್ಕೆ ಬಡಿಯುತ್ತಿರುವ ನೀರಪದರಕ್ಕೆ ಎಲ್ಲ ಜಂಜಡಗಳನ್ನೂ ಕಳಚಿ ನಿರ್ಭಾರಗೊಳಿಸುವ ತಾಕತ್ತು. ಚಿಗುರಲಣಿಯಾಗುತ್ತಿರುವ ಚುಪುರು ಹುಲ್ಲು ಕಾಲಿಗೆ ತಾಕುವಾಗ ಎಂಥವರನ್ನೂ ಮೈಮರೆಸುವ ಶಕ್ತಿ ಎಲ್ಲಿಂದ ಬಂತು?  ಮೇಲೇರುತ್ತ ಏರುತ್ತ ಹೋದಂತೆ ದೇಹ ಹಗುರಗೊಳ್ಳುತ್ತ, ಅಕ್ಕಪಕ್ಕದ ಪರ್ವತಶ್ರೇಣಿಗಳೆಲ್ಲ ಸೌಂದರ್ಯದ ಖನಿಗಳಾಗಿ ರೂಪುಗೊಂಡು, ದೃಶ್ಯವೈಭವವ ಕಣ್ಮುಂದೆ ಜಾಹೀರು ಮಾಡುವಾಗ, ಎರಡೂ ಕೈ ಚಾಚಿ ನಾನೇ ಹಕ್ಕಿಯಂತಾಗಿ ತೇಲುತ್ತಿರುವ ಅನುಭವ. ಶೃಂಗ ತಲುಪಿಯಾಯಿತೋ, ನಾನೇ ಮೋಡದೊಳಗೆ! ನಾಲ್ಕಡಿ ದೂರದಲ್ಲಿರುವ ಗೆಳೆಯರೂ ಈಗ ಕಾಣರು. ಬಿಳಿಯ ತಿಳಿಯೊಳಗೆ ಸೇರಿಕೊಂಡಿರುವ ನಮಗೀಗ ಈ ಇಳೆಯಲ್ಲಿ ಹೆಸರಿಲ್ಲ.

ಸ್ವಲ್ಪ ಹೊಳವಾದಂತೆ ಕಂಡ ಕ್ಷಣ, ಒದ್ದೆ ಬಂಡೆಯೊಂದರ ಮೇಲೆ ಕುಳಿತು ಬುತ್ತಿಯ ಗಂಟು ಬಿಚ್ಚಿ ಹೊಟ್ಟೆ ತುಂಬಿಸಿಕೊಳ್ಳುವಾಗ, ಅದೋ ದೂರದ ಬೆಟ್ಟವನ್ನೊಮ್ಮೆ ನೋಡಬೇಕು.. ಇಲ್ಲಿ ಬಿಡುವು ಕೊಟ್ಟ ಮಳೆಯೀಗ ಅಲ್ಲಿ ಸುರಿಯುತ್ತಿದೆ. ಹೇಗೆ ಕರಿಮೋಡ ಕರಗಿ ಕರಗಿ ಬೀಳುವುದು ಸ್ಫುಟವಾಗಿ ಕಾಣುತ್ತಿದೆ.. ಯಾವಾಗದು ಖಾಲಿಯಾಗುವುದು? ಜತೆಗೆ ಬಂದ ಗೆಳೆಯ ಈಗ ಹಾಡಲು ಶುರುವಿಡುತ್ತಾನೆ. ಎಂದೋ ಕೇಳಿ ಮರೆತಿದ್ದ ಹಾಡು ಇಂದು ಇಲ್ಲಿ ಹೇಗೆ ಆಪ್ತವಾಗುತ್ತಿದೆ.. ಘಳಿಗೆಗಳ್ಯಾಕೆ ಸರಿಯಬೇಕು ಇಂತಲ್ಲಿ? ಬೆಟ್ಟದಂಚಿಗೆ ಬಂದು ಬಗ್ಗಿ ನೋಡಿದರೆ ಇಡೀ ಕಂದರವೇ ಹಾಲಾಗಿದೆ. ರುದ್ರರಮಣೀಯ ಎಂಬ ಪದಪುಂಜ ಪೋಣಿಸಿದ ವ್ಯಕ್ತಿ ಇಲ್ಲಿಗೆ ಬಂದೇಬಂದಿರುತ್ತಾನೆ.

ಎಂಥ ಬೆಟ್ಟವೇರಿದವನೂ ಮತ್ತೆ ಕೆಳಗಿಳಿಯಲೇಬೇಕು ಎಂಬಂತೆ, ಬ್ಯಾಚುಲರ್ ದಿನಗಳಲ್ಲಿ ಗೆಳೆಯರೊಂದಿಗೆ ಹುಚ್ಚಾಪಟ್ಟೆ ಟ್ರೆಕಿಂಗ್ ಹೋಗುತ್ತಿದ್ದವನು ಸಂಸಾರಸ್ಥನಾದಮೇಲೆ ಆ ಪರಿಯ ತಿರುಗಾಟ ಕಮ್ಮಿಯಾಗಿಹೋಯಿತು. ಆದರೆ ಮಳೆಯ ನಾಡಿನ ಸೆಳೆತವೇನು ಕಳೆಯಲಿಲ್ಲ. ಹೆಂಡತಿಯೊಡಗೂಡಿ ಮಡಿಕೇರಿಗೋ ಚಿಕ್ಕಮಗಳೂರಿಗೋ ಮಳೆಗಾಲದಲ್ಲೊಮ್ಮೆ ಭೇಟಿ ಕೊಡುವುದು ಸಂಪ್ರದಾಯವಾಯಿತು. ಮಡಿಕೇರಿಯ ಮಳೆ ಮತ್ತೆ ಬೇರೆಯೇ. ಇಲ್ಲಿನ ಗೆಸ್ಟ್‌ಹೌಸುಗಳ ಗೋಡೆಗಳಿಗೂ ಬೆವರು. ಎಲ್ಲೆಲ್ಲು ತಣಸು. ಸಂಜೆಯಾಯಿತೆಂದರೆ ಹಕ್ಕಿಗಳಂತೆ ಎಲ್ಲರೂ ಗೂಡು ಸೇರಿಕೊಳ್ಳುವರು. ರಾತ್ರಿಯ ಚಳಿಗಾಳಿಯೋಡಿಸಲು ಎಲ್ಲ ರೆಸಾರ್ಟುಗಳ ಮಗ್ಗುಲಲ್ಲರಳುವ ಕ್ಯಾಂಪ್‌ಫೈರುಗಳು. ಅದರ ಸುತ್ತ ಮೈಮರೆತು ಕುಣಿಯುವ ಮತ್ತ-ಉನ್ಮತ್ತ ಮಂದಿ. ಇದು ಒಗ್ಗದ ಜೀವಗಳೋ, ಬಿಸಿಬಿಸಿ ಕಾಫಿಯ ಬಟ್ಟಲು ಹಿಡಿದು ಅಕೋ ತಮ್ಮ ರೂಮಿನ ಕಿಟಕಿಯ ಬಳಿ ಆರಾಮಕುರ್ಚಿ ಹಾಕಿ ಆಸೀನರು. ಸುರಿಮಳೆಯ ಮುಂದೆರೆಯಲ್ಲಿ ಹಬೆಯಾಡುವ ಕಾಫಿಗೂ ಇಲ್ಲಿ ನಶೆಯೇರುವ ಮಾಯೆ. ಮಡಿಕೇರಿ-ಮಳೆ-ಮಂಜು-ಮತ್ತು  –ಎಲ್ಲವೂ ಇಲ್ಲಿ ಸಮಾನಾರ್ಥಕ ಪದಗಳು.

ಈ ತಂಬೆಲರಿನಲ್ಲಿ ಕಾಫಿತೋಟಗಳನ್ನು ಸುತ್ತುವುದೂ ಒಂದು ರಸಾನುಭವ. ಅದೂ ಜತೆಗಾತಿಯೊಡನೆ ಒಂದೇ ಛತ್ರಿಯಡಿ ಹೆಜ್ಜೆಯಿಡುವಾಗ ಸಣ್ಣ ಬಿಸಿಲಿಗೂ ಮೂಡುವ ಕಾಮನಬಿಲ್ಲು. ಅಲ್ಲೇ ತೋಟದ ಮಗ್ಗುಲಲ್ಲಿರುವ ಕೆರೆಯಲ್ಲೀಗ ಕೆನ್ನೀರಿನ ಭರಾಟೆ. ಎಲ್ಲೆಡೆಯಿಂದಲೂ ಬಂದು ಧುಮ್ಮಿಕ್ಕುತ್ತಿರುವ ನೀರು. ಹೀಗೆ ಕೆರೆಯ ಮೇಲೆ ಬೀಳುತ್ತಿರುವ ಮಳೆಹನಿಗಳು ಈ ಕೆನ್ನೀರಿನೊಂದಿಗೆ ಬೆರೆತು ತಾವೂ ಕೆಂಪಾಗಲು ಎಷ್ಟು ಕ್ಷಣ ಬೇಕು? ಮಳೆ ತೆರವಾದಾಗ ಉಳಿದ ತುಂಬುಕೆರೆಯ ನೀರು ತಿಳಿಯಾಗಲು ಎಷ್ಟು ದಿನ ಬೇಕು? ಕೆರೆ ತುಂಬಿ ಕಟ್ಟೆಯೊಡೆದು ಸಣ್ಣ ಅವಳೆಗಳಲ್ಲಿ ಸಾಗಿ ದೊಡ್ಡ ಧಾರೆಯೊಂದಿಗೆ ಬೆರೆತು ನದಿಯಾಗಿ ಚಿಮ್ಮುತ್ತ ಸಾಗಿ ಸಮುದ್ರ ಸೇರಲು ಎಷ್ಟು ಕಾಲ ಬೇಕು? ಸಮುದ್ರದ ದಾರಿಯಲ್ಲದು ಎಷ್ಟು ಜಲಪಾತಗಳ ಸೃಷ್ಟಿಸಿತು? ಎಷ್ಟು ಕೆಮೆರಾಗಳಲ್ಲಿ ಸೆರೆಯಾಯಿತು? ಪ್ರತಿ ಹನಿಯ ಹಣೆಯಲ್ಲೂ ಬರೆದಿರುತ್ತದಂತೆ ಅದು ಸಾಗಬೇಕಾದ ದಾರಿ, ಸೇರಬೇಕಾದ ಗಮ್ಯ. ಆದರೆ ಅದರ ಹಣೆ ನೋಡಿ ಭವಿಷ್ಯ ಹೇಳುವವರಾರು? ಕೆರೆಯ ಕಟ್ಟೆಯ ಮೇಲೆ ನಿಂತು ಒಂದೇ ಸಮನೆ ನೋಡುತ್ತಿದ್ದರೆ ಎಲ್ಲ ಕಲಸಿದಂತಾಗಿ ಕಣ್ಮಂಜು.

ಮಳೆಗಾಲವೀಗ ಕಮ್ಮಿಯಾಗಿದೆ. ಋತುವಿಡೀ ಸುರಿಯಬೇಕಿದ್ದ ಮಳೆಯೀಗ ಮಿತವಾಗಿದೆ. ಯಾವ್ಯಾವಾಗಲೋ ಬರುವಷ್ಟು ಅನಿಯಮಿತವಾಗಿದೆ. ಊರಿನಿಂದ ಬರುವ ಫೋನಿನಲ್ಲಿ ಬರದ ಗೋಳಿನ ಕತೆಯೇ ಜಾಸ್ತಿ. ಎಲ್ಲರ ಮನೆಯಲ್ಲೂ ಖಾಲಿ ಬಾವಿಗಳು. ನಾವು ಮಾಡಿದ ತಪ್ಪಿಗೆ ನಾವೇ ಅನುಭವಿಸುತ್ತಿದ್ದೇವೆ.

ಆದರೂ ಭರವಸೆ ಹೋಗಿಲ್ಲ. ನಾವು ಹತಾಶರಾಗಿಲ್ಲ. ಕ್ಯಾಲೆಂಡರಿನ ಪುಟ ತಿರುಗಿಸುತ್ತಲೇ ಆಕಾಶದೆಡೆಗೆ ನೋಡುತ್ತೇವೆ ತಲೆಯೆತ್ತಿ. ಕಾರ್ಮೋಡಗಳು ಮೇಳೈಸುವುದನ್ನು ಕಾತರಿಸಿ ಈಕ್ಷಿಸುತ್ತೇವೆ. ಬಿಸಿಲಿನ ಝಳದ ನಡುವೆ ಸಣ್ಣದೊಂದು ತಂಗಾಳಿ ಬಂದರೂ ಇವತ್ತು ಮಳೆಯಾಗಿಯೇ ಆಗುತ್ತದೆ ಅಂತ ದೇವರ ಮುಂದೆ ಕಾಯಿಯಿಟ್ಟು ಕಾಯುತ್ತೇವೆ. ವರುಣನಿನ್ನೂ ನಿಷ್ಕರುಣಿಯಾಗಿಲ್ಲ. ಸಂಜೆಯಾಗುತ್ತಿದ್ದಂತೆಯೇ ಶುರುವಾಗಿದೆ ಥಟಥಟ ಹನಿಗಳ ಲೀಲೆ. ಜೋರಾಗಿದೆ ನೋಡನೋಡುತ್ತಿದ್ದಂತೆಯೇ. ಅಂಗಳದಲ್ಲಿ ಒಣಹಾಕಿದ್ದ ಬಟ್ಟೆಗಳನ್ನೆಲ್ಲ ಒಳ ತಂದಿದ್ದೇವೆ. ಕಟ್ಟೆಯ ಮೇಲೆ ನಿಂತು ಹೃನ್ಮನಗಳನೆಲ್ಲ ತೆರೆದು ಮುಂಗಾರಿನ ಮೊದಲ ಮಳೆಗೆ ಒಡ್ಡಿಕೊಂಡಿದ್ದೇವೆ. ಒಳಮನೆಯ ನಾಗಂದಿಗೆಯಲ್ಲಿದ್ದ ಛತ್ರಿಯನ್ನು ಕೆಳಗಿಳಿಸಿ ತಂದು ಧೂಳು ಕೊಡವಿ ಬಿಡಿಸಿ ಹೊರಟುಬಿಟ್ಟಿದ್ದೇವೆ ತೋಟ-ಗದ್ದೆಗಳೆಡೆಗೆ. ಹೊಂಡದ ಮೀನಿಗೂ ಈಗ ಹೊಸನೀರ ಸಹವಾಸ. ಗೂಡೊಳಗಿನ ಗೀಜಗದ ಮರಿಗೀಗ ಎಲ್ಲಿಲ್ಲದ ಆತಂಕ. ಮಣ್ಣ ಪದರದ ಕೆಳಗೆಲ್ಲೋ ಹುದುಗಿರುವ ಹೂಗಿಡದ ಬೀಜಕ್ಕೂ ತಲುಪಿದೆ ಮಳೆಬಂದ ಸುದ್ದಿ: ಅದರ ಮೊಳಕೆಯೊಡೆವ ಸಂಭ್ರಮಕ್ಕೆ ತರಾತುರಿಯಲಿ ಸಾಗುತ್ತಿರುವ ಇರುವೆಗಳು ಸಾಕ್ಷಿಯಾಗಿವೆ. ಈ ಸಲ ಮುಂಗಾರು ಜೋರು ಎನ್ನುತ್ತಿದ್ದಾರೆ ಹವಾಮಾನ ತಜ್ಞರು. ಈ ಒಳ್ಳೆಯ ವರ್ತಮಾನ ಅಡಕೆಯ ಮರಗಳ ತುದಿಯ ಒಣಗಿದ ಸುಳಿಗೂ ಮುಟ್ಟಿದಂತಿದೆ: ಉಲ್ಲಾಸದಿಂದ ತೂಗುತ್ತಿವೆ ಅವು ತಲೆ -ಒಂದಕ್ಕೊಂದು ತಾಕುವಂತೆ.

ಮಗಳ ಪಕ್ಕ ಕುಳಿತು ಮಳೆಯ ಲೋಕದೊಳಗೆ ಮುಳುಗಿ ತೋಯುತ್ತಿದ್ದರೆ ಊರಿನಿಂದ ಅಮ್ಮನ ಫೋನು: ಒಂದು ವಾರದಿಂದ ಮಳೆ ಪರವಾಗಿಲ್ಲ ಅಂತಲೂ, ನಿನ್ನೆಯಷ್ಟೇ ಸೌತೆಬೀಜ ಹಾಕಿದೆ ಅಂತಲೂ, ಬಾವಿಗೆ ಸ್ವಲ್ಪಸ್ವಲ್ಪವೇ ನೀರು ಬರುತ್ತಿದೆ ಅಂತಲೂ ಹೇಳಿದಳು. ಮೊಮ್ಮಗಳು ಅಲ್ಲಿಗೆ ಬರುವಷ್ಟರಲ್ಲಿ ನೀರಿನ ಸಮೃದ್ಧಿಯಾಗಿರುತ್ತದೆ ಅಂತ ಹೇಳಿದವಳ ದನಿಯಲ್ಲಿ ಖುಷಿಯಿತ್ತು.

ಮಳೆಯ ನೋಡುತ್ತ ಆಟವಾಡುತ್ತಿದ್ದ ಮಗಳು ಈಗ ನಿದ್ದೆ ಹೋಗಿದ್ದಾಳೆ. ವರ್ಷಧಾರೆ ಮಾತ್ರ ಹೊರಗೆ ಮುಂದುವರೆದಿದೆ. ಮಗಳಿಗೆ ನಿದ್ದೆ ಬಂದಿದ್ದು ಈ ಮಳೆಯ ಜೋಗುಳದಿಂದಲೋ ಅಥವಾ ನನ್ನ ಮಳೆಗಾಲದ ಕತೆಗಳ ಮೌನಾಖ್ಯಾನ ಕೇಳಿಯೋ ತಿಳಿಯದಾಗಿದೆ. ಹೆಂಡತಿ ಮಗಳನ್ನು ಎತ್ತಿಕೊಂಡು ಹೋಗಿ ತೊಟ್ಟಿಲಲ್ಲಿ ಮಲಗಿಸಿದ್ದಾಳೆ. ಅತ್ತೆ ಬಿಸಿಬಿಸಿ ಕಷಾಯ ತಂದುಕೊಟ್ಟಿದ್ದಾರೆ. ಬಾಗಿಲ ಬಳಿ ನಿಂತು ಒಂದು ಕೈಯಲ್ಲಿ ಕಷಾಯದ ಬಟ್ಟಲು ಹಿಡಿದು ಇನ್ನೊಂದು ಕೈಯನ್ನು ಸುರಿಮಳೆಗೊಡ್ಡಿದ್ದೇನೆ. ಬೊಗಸೆ ತುಂಬಿ ತುಂಬಿ ಹರಿಯುತ್ತಿದೆ ನಿಷ್ಕಲ್ಮಶ ಸಲಿಲ ಸಳಸಳ.

[ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ]

Tuesday, June 30, 2015

ಜೂನ್ ಎಂಬ ಮಳೆಮಾಸ

ಇರುವುದು ಮೂವತ್ತೊಂದೇ ದಿನಗಳಾದರೂ ಮುನ್ನೂರು ದಿನಗಳಿವೆಯೇನೋ ಎನಿಸುವಷ್ಟು ಬಿಸಿಲು ಮೇ ತಿಂಗಳಲ್ಲಿ. ದಿನಗಳನ್ನೆಣಿಸೆಣಿಸಿ ಸುಸ್ತಾಗಿ, ಅದ್ಯಾವಾಗ ಈ ಬೇಸಿಗೆಯ ಬೃಹನ್ಮಾಸ ಮುಗಿಯುತ್ತದೋ ಎನ್ನುತ್ತಾ ಉಸ್ಸೆಂದು ಕೂತಿದ್ದೇವೆ ಕುರ್ಚಿಯಲ್ಲಿ. ಕೈಗೆ ಸಿಕ್ಕಿದ ಯಾರದೋ ಮದುವೆಯ ಇನ್ವಿಟೇಶನ್ ಕಾರ್ಡೇ ಬೀಸಣಿಗೆಯಾಗಿದೆ. ಗುಂಡಿ ತೆರೆದಂಗಿ, ಹಣೆಮೇಲೆ ಮೂಡಿದ ಬೆಮರ್ಮಣಿಗಳು, ಆಗಾಗ ಬಿಡುವ ನಿಟ್ಟುಸಿರು, ಕುಡಿದಷ್ಟೂ ಬೇಕೆನಿಸುವ ತಣ್ಣನೆ ನೀರು, ಹಾಗೇ ಕತ್ತೆತ್ತಿ ನೋಡಿದರೆ ಇನ್ನೂ ಮೇ ತಿಂಗಳನ್ನೇ ಮೇಲ್ಮೈಯಾಗಿಸಿಕೊಂಡಿರುವ ಕ್ಯಾಲೆಂಡರು. ಎಲ್ಲೋ ಋತುರಾಜನಿಗೆ ಕರುಣೆ ಬಂದು ತಣ್ಣನೆಯದೊಂದು ಗಾಳಿ ಬೀಸಿದರೆ ಆ ಕ್ಯಾಲೆಂಡರಿನ ಪುಟಗಳು ಪಟಪಟನೆ ಬಡಿದುಕೊಂಡು ಕೆಳಗಿರುವ ಜೂನು ಹಣುಕಿ ನೋಡಿ ‘ಹೇ ಬಂದೆ, ಮುಂದೆ ನನ್ನದೇ ರಾಜ್ಯಭಾರ’ ಅನ್ನುತ್ತದೆ.

ಜೂನಿನ ಬಗ್ಗೆ ಅದೆಂಥದೋ ಮಮಕಾರ. ಮಳೆಮಾಸವೆಂಬ ಮುದ್ದು. ನೋಡಿ ನೋಡಿ ಬೇಸತ್ತಿದ್ದ ಮೇಯ ಪುಟವನ್ನು ತಿರುಗಿಸಿದ್ದೇ ಮ್ಯಾಜಿಕ್ಕಿನಂತೆ ಮಳೆಗಾಲ ಶುರುವಾಗಿಬಿಡುತ್ತದೇನೋ ಎಂಬ ಭ್ರಮೆ.  ಜೂನ್ ಪುಟದ ತಾರೀಖಿನ ಅಂಕಿಗಳಿಗೆ ಬೇರೆಯದೇ ಬಣ್ಣ, ಬೇರೆಯದೇ ಶೈಲಿ, ಬೇರೆಯದೇ ಒನಪಿದ್ದಂತೆ ಭಾಸ.  ಚಾತಕ ಪಕ್ಷಿಯ ತೆರೆದ ಕೊಕ್ಕಿನೊಳಗೆ ಬಿದ್ದ ಮಳೆಹನಿ, ಬಾಯಿಯನ್ನು ಒದ್ದೆ ಮಾಡಿ, ಗಂಟಲಿನೊಳಗೆ ತಣ್ಣಗೆ ಇಳಿದು, ಹೊಟ್ಟೆ ಸೇರಿ, ಅಲ್ಲಿದ್ದ ಕಾಳು-ಹುಳ-ಹಪ್ಪಟೆಗಳನ್ನು ತೇಲಿಸಿದಂತೆ ಕಲ್ಪನೆ. ಸೋನೆಯಿಂದ ಶುರುವಾಗುವುದು ಜೂನು. ಬಾನು ಮುಂಗಾರು ಮೋಡಗಳಿಂದಾವೃತವಾದಾಗಲೇ ಬರುವುದು ಜೂನು.

ಜೂನಿನ ಚೌಕ ದಿನಗಳಲ್ಲಿ ನಡೆಯುತ್ತ ಹೋದಂತೆ ಮಳೆ ಜಾಸ್ತಿಯಾಗುತ್ತ ಹೋಗುತ್ತದೆ. ನಾಗಂದಿಗೆಯಲ್ಲಿದ್ದ ಛತ್ರಿಯನ್ನಿಳಿಸಿ, ಹೊರಬಂದು ಬಿಚ್ಚಿದರೆ ಇಡೀ ಆಕಾಶವೇ ಕಪ್ಪಾಗಿದೆ. ಛತ್ರಿಯ ದಿಗಂತಗಳು ಕೈಗೆಟುಕುವಂತಿವೆ. ಬಣ್ಣದ ಛತ್ರಿಯಲ್ಲಂತೂ ಕಾಮನಬಿಲ್ಲೇ ಇದೆ. ಮಡಿಚಿಟ್ಟಿದ್ದ ರೈನ್‌ಕೋಟುಗಳ ನೆರಿಗೆ ಮುರಿಯುವ ಹೊತ್ತು ಇದು. ಬಿಳಿಹುಲ್ಲಿನ ಗೊಣಬೆಗೆ ನೀಲಿ ಟಾರ್ಪಲಿನಂಗಿ. ಗದ್ದೆ ಬದುವಿನಲ್ಲಿ ಸಾಲಾಗಿ ನಡೆಯುತ್ತಿರುವ ಕಂಬಳಿಕೊಪ್ಪೆ ಹೊದ್ದ ರೈತರನ್ನು ಪಕ್ಕನೆ ನೋಡಿದರೆ ಕಪ್ಪು ದೇವರ ಮೂರುತಿಗಳೆಲ್ಲ ಒಟ್ಟಿಗೆ ಎಲ್ಲಿಗೋ ಹೊರಟಂತೆ ಕಾಣಿಸುತ್ತದೆ.

ಕೆರೆಗಳಿಗೆ ಹೊಸನೀರು ಬಂದಿದೆ. ಈಗಷ್ಟೆ ದೊಗರಿನಿಂದ ಹೊರಬಂದು ಈಜಿನಭ್ಯಾಸ ಶುರುಮಾಡಿರುವ ಮರಿಮೀನುಗಳ ಬಾಯೊಳಗೆ ಕೆಸರುನೀರು ಹೋಗಿ ವಾಕರಿಕೆ ಬಂದಿದೆ. ಕಪ್ಪೆಗಳಿಗಿದು ಸಂತಾನೋತ್ಪತ್ತಿಯ ಕಾಲ. ಬಸುರಿ ಕಪ್ಪೆಗೆ ನೀಲಿಹುಳ ತಿನ್ನುವ ಬಯಕೆ. ಹಡೆದ ಕಂದಗಳ ಹಾರಾಟ ಕಂಡು ಅದು ಉದುರಿಸಿದ ಆನಂದಭಾಷ್ಪಕ್ಕೆ ಜಲಾಶಯದ ನೀರಿನ ಮಟ್ಟ ಇನ್ನಷ್ಟು ಹೆಚ್ಚಿದೆ. ತೋಟದ ಹೊಟ್ಟುಗೆರೆಯಲ್ಲಿ ಜವಳಾಗಿದೆ. ಬಾವಿಗೆ ಬಂದ ಹೊಸ ನೀರು ಕೆಂಪಾಗಿದೆ.  ಅಷ್ಟುದ್ದ ಹಗ್ಗವನ್ನು ಕೆಳಗಿಳಿಸಲು ನೂರು ಸುತ್ತು ತಿರುಗಬೇಕಿದ್ದ ಗಡಗಡೆ ಇನ್ನು ಹತ್ತು ಸುತ್ತು ತಿರುಗಿದರೆ ಸಾಕಪ್ಪಾ ಅಂತ ಖುಷಿಯಾಗಿದೆ. ಮಲಗಿದಲ್ಲೇ ಮಲಗಿ ಬೇಸರವಾಗಿದ್ದ ಕಾರಿನ ವೈಪರುಗಳು ಕೆಲಸ ಸಿಕ್ಕ ಭರದಲ್ಲಿ ಗಾಜನ್ನು ವೇಗವಾಗಿ ಒರೆಸುತ್ತಿವೆ. ನಗರದ ಗುಂಡಿಬಿದ್ದ ರಸ್ತೆಯಲ್ಲಿ ದೊಡ್ಡ ಮೊಸಳೆಯೇ ಪ್ರತ್ಯಕ್ಷವಾಗಿ ಸರ್ಕಾರಕ್ಕೆ ಎಚ್ಚರಾಗಿದೆ. ಡಾಂಬರು ಸವರಿದ ಸಣ್ಣ ಜಲ್ಲಿಕಲ್ಲುಗಳಿಂದ ಗುಂಡಿಗಳನ್ನು ಮುಚ್ಚಲಾಗುತ್ತಿದೆ.

ಶಾಲೆಗಳು ಶುರುವಾಗಿವೆ. ಎಷ್ಟೊಂದು ಅಪ್ಪ-ಅಮ್ಮರ ಕನಸುಗಳು ಪುಟ್ಟ ಛತ್ರಿ ಹಿಡಿದೋ, ರೈನ್‌ಕೋಟು ತೊಟ್ಟೋ ಶಾಲೆಯತ್ತ ನಡೆದಿವೆ. ಪಾಟಿಚೀಲದೊಳಗಿನ ಸಣ್ಣ ಡಬ್ಬಿಯಲ್ಲಿನ ಚಪಾತಿ ಚೂರುಗಳಲ್ಲಿ ಕಾವಲಿ ಮೇಲಿನ ಬಿಸಿಯಲ್ಲದೇ ನಾದಿದ ಕೈಯ ಬಿಸುಪೂ ಸೇರಿಕೊಂಡಿದೆ. ಮಕ್ಕಳಷ್ಟೇ ಅಲ್ಲ, ಮೇಷ್ಟ್ರುಗಳೂ ಸ್ವೆಟರ್ ತೊಟ್ಟು ಬಂದಿದ್ದಾರೆ. ಕಪ್ಪುಹಲಗೆಯ ಮೇಲೆ ಚಾಕ್‍ಪೀಸ್ ಮೂಡಿಸುತ್ತಿರುವ ಚೀಂವ್‌ಚೀಂವ್ ಸದ್ದನ್ನು ವರ್ಷಧಾರೆಯ ಸದ್ದು ನುಂಗಿದೆ. ಜಾರುವ ನೆಲದಲ್ಲಿ ಜೂಟ್-ಮುಟ್ಟಾಟ ಆಡುವಾಗ ಬಿದ್ದು ಮಂಡಿ ತರಚಿಕೊಂಡ ಹುಡುಗನಿಗೆ ಟಿಂಚರ್ ಹಚ್ಚಲಾಗುತ್ತಿದೆ. ಆತನ ಅಳುವನ್ನು ಇಡೀ ಕ್ಲಾಸು ಕಾರಿಡಾರಿನಲ್ಲಿ ನಿಂತು ಯೂನಿಫಾರ್ಮಿನಲ್ಲಿ ನೋಡುತ್ತಿದೆ.

ಮಳೆಗಾಲದೊಂದಿಗೇ ಪಾಪಿ ಆಶಾಢವೂ ಬಂದಿದೆ. ಹೆಂಡತಿಯ ಜೊತೆ ಬೆಚ್ಚನೆ ಸಮಯವನ್ನು ಕಳೆಯುವ ಕನಸು ಕಾಣುತ್ತಿದ್ದ ನವವಿವಾಹಿತನಿಗೆ ಆಶಾಭಂಗವಾಗಿದೆ. ಒಂದೇ ಕೊಡೆಯಲ್ಲಿ ಹೆಂಡತಿಯನ್ನು ಬಸ್‌ಸ್ಟಾಂಡಿನವರೆಗೆ ಬಿಟ್ಟುಬರಲು ಹೋದವ ‘ಈಗಿನ ಕಾಲದಲ್ಲಿ ಈ ಆಶಾಢ-ಗೀಶಾಢ ಎಲ್ಲಾ ಏನೂ ಇಲ್ಲ ಕಣೇ. ಒಂದೆರ್ಡು ದಿನ ಅಮ್ಮನ ಮನೇಲಿ ಇದ್ದಂಗೆ ಮಾಡಿ ಏನಾದ್ರೂ ನೆಪ ಹೇಳಿ ವಾಪಾಸ್ ಬಂದ್ಬಿಡು’ ಅಂತ ಕಿವಿಯಲ್ಲಿ ಹೇಳಿದ್ದಾನೆ. ಹೆಂಡತಿ ಆ ಕ್ಷಣಕ್ಕೆ ತಲೆಯಾಡಿಸಿದರೂ ತವರಿನ ಬಸ್ಸು ಹತ್ತುವಾಗ ಹುಸಿನಗೆ ನಕ್ಕದ್ದು ಕಂಡಕ್ಟರಿಗೆ ಮಾತ್ರ ಕಂಡಿದೆ. ಮನೆಗೆ ಬಂದ ಪುಣ್ಯಾತ್ಮ ಎರಡು ದಿನ ಕಳೆದು, ಒಂದು ವಾರ ಕಳೆದರೂ ಹೆಂಡತಿಯ ಪತ್ತೆಯಿಲ್ಲದೇ ಕಂಗೆಟ್ಟಿದ್ದಾನೆ. ಫೋನು ಮಾಡಿ ಮಾತಾಡೋಣ ಎಂದರೆ ಮೊಬೈಲು ತಾಕುತ್ತಿಲ್ಲ.  ಗಾಳಿಮಳೆಗೆ ಎಲ್ಲೋ ಮರ ಬಿದ್ದು ಲ್ಯಾಂಡ್‌ಲೈನು ಸತ್ತುಹೋಗಿದೆ. ಸಣ್ಣಗೆ ಪ್ರತೀಕಾರದ ಸಂಚು ಹೂಡಿದ್ದಾನೆ: ‘ಅವಳು ಇಲ್ದೇ ಇದ್ರೆ ಏನು, ನಾನೇ ಇವತ್ತು ಮಜಾ ಹೊಡ್ದು ಉಡಾಯಿಸ್ತೀನಿ’ ಅಂತ ಮನಸಲ್ಲೇ ಅಂದುಕೊಂಡು, ಮಾರ್ಕೆಟ್ಟಿಗೆ ಹೋಗಿ, ಕಡಲೆಹಿಟ್ಟು-ಮೆಣಸಿನಕಾಯಿಗಳನ್ನೆಲ್ಲ ತಂದು, ಮೈಕೈಯನ್ನೆಲ್ಲಾ ಹಿಟ್ಟು ಮಾಡಿಕೊಳ್ಳುತ್ತಾ ಕಲಸಿ, ಭರ್ಜರಿ ಬಜ್ಜಿ-ಬೋಂಡಗಳನ್ನು ಕರಿದು, ಅಕ್ಕ-ಪಕ್ಕದ ಮನೆಯ ಹುಡುಗರನ್ನೂ ಕರೆದು ತಿನ್ನಿಸಿ, ತಾನೂ ತಿಂದು ಸಂಭ್ರಮಿಸಿದ್ದಾನೆ. ‘ಏನೂ, ಹೆಂಡತಿ ಊರಿಗೆ ಹೋದ್ಲು ಅಂತ ಪಾರ್ಟೀನಾ?’ ಅಂತ ಕೇಳಿದ ಪಕ್ಕದ ಮನೆಯ ಹಿರಿಯರಿಗೆ ‘ಹೆಹೆ.. ಹಂಗೇನಿಲ್ಲಾ.. ಹಿಂಗೇ, ಸುಮ್ನೇ’ ಅಂತಂದು ಜಾರಿಕೊಂಡಿದ್ದಾನೆ. ವಾಪಸು ಬಂದ ಹೆಂಡತಿಗೆ ತನ್ನ ಸಾಹಸವನ್ನೆಲ್ಲ ಹೇಳಿ ಹೇಗೆ ಉರಿಸಬಹುದು ಅಂತ ನೆನೆದುಕೊಂಡು, ಮಿರ್ಚಿಯ ಖಾರಕ್ಕೆ ಬಾಯಿ ಸೆಳೆದಿದ್ದಾನೆ.

ಶಾಲೆ, ಮಳೆ, ಆಶಾಢವಷ್ಟೇ ಅಲ್ಲ, ರಂಜಾನ್ ಮಾಸ ಸಹ ಬಂದಿದೆ ಜೂನಿನೊಂದಿಗೆ. ಮಳೆಗಾಲದಲ್ಲಿ ಏಕೋ ಹಸಿವೂ ಸ್ವಲ್ಪ ಜಾಸ್ತಿ. ಉಪವಾಸ ಆಚರಿಸುತ್ತಿರುವವರು ಸಂಜೆಯ ಹೊತ್ತಿಗೆ ಇಫ್ತಾರಿಗಾಗಿ ಕಾಯುತ್ತಿದ್ದಾರೆ. ರಂಜಾನ್ ಮಾಸದ ಇಫ್ತಾರ್ ಭೋಜನಕ್ಕಾಗಿಯೇ ತೆರೆದಿರುವ ವಿಶೇಷ ಖಾದ್ಯದಂಗಡಿ-ಹೋಟೆಲುಗಳು ಘಮಘಮಿಸುತ್ತ ಹಸಿದವರನ್ನು ಸ್ವಾಗತಿಸಿವೆ. ತೂಗುಬಿಟ್ಟ ನೂರು ಕ್ಯಾಂಡಲ್ ಬಲ್ಬಿನ ಸಾಲುಸಾಲು ತಿಂಡಿಯಂಗಡಿಗಳು ಚಳಿರಾತ್ರಿಗೆ ವಿಚಿತ್ರ ಮಾದಕತೆಯನ್ನೇ ತಂದಿವೆ. ತಡರಾತ್ರಿಯವರೆಗೆ ನಡೆಯುವ ಈ ಬಗೆಬಗೆಯ ತಿನಿಸುಗಳ-ಮಾಂಸದಡುಗೆಗಳ ಮೇಳ ಮಳೆಗಾಲದ ಜಾತ್ರೆಯಂತೆ ಆಕರ್ಷಕವಾಗಿದೆ.

ಜೂನು ಪ್ರವರ್ಧಮಾನಕ್ಕೆ ಬರವಷ್ಟರಲ್ಲಿ ಮಳೆಯೂ ಪ್ರಬಲವಾಗಿದೆ. ರಾತ್ರಿಯಿಡೀ ಸುರಿವ ಮಳೆ ನೋಡುತ್ತಾ ಕೂಗೀಕೂಗೀ ಜೀರುಂಡೆಗೆ ಗಂಟಲುನೋವು ಬಂದಿದೆ. ಕೋಡಿಯಲ್ಲೀಗ ಪ್ರವಾಹದೋಪಾದಿಯಲ್ಲಿ ನೀರು ಹರಿಯುತ್ತಿದೆ. ಬಾವಿಯ ನೀರು ಕೈಗೆ ಸಿಗುವಷ್ಟು ಮೇಲೆ ಬಂದಿದೆ. ಕರೆಂಟು ಹೋಗಿ ಮೂರು ದಿನವಾಗಿದೆ. ಜಲಪಾತಗಳು ಭೋರ್ಗರೆಯುತ್ತಿವೆ. ಅಂಗಳದ ತುಂಬ ಚುಪುರು ಕಳೆ ಬೆಳೆದು ಎಲ್ಲೆಲ್ಲೂ ಹಸಿರೇ ಕಾಣುತ್ತಿದೆ. ‘ಈ ಸೀಸನ್ನಿನ ಲಾಸ್ಟ್ ಟೈಮು’ ಅಂದುಕೊಂಡು ತಂದ ಮಾವಿನಹಣ್ಣಿನಲ್ಲಿ ಹುಳುಗಳು ಸಿಕ್ಕಿವೆ.  ಪಕ್ಕದ ಮನೆಯ ಬಚ್ಚಲೊಲೆಯಿಂದ ಹಲಸಿನ ಬೀಜ ಸುಟ್ಟ ವಾಸನೆ ಬರುತ್ತಿದೆ.

ನಗರದಲ್ಲಿ ಟಿಕಾಣಿ ಹೂಡಿರುವ ಯಕ್ಷಗಾನ ಮೇಳದ ಕಲಾವಿದರು ಆಟ ಮುಗಿದ ಜಾವ ನ್ಯೂಸ್‌ಪೇಪರ್ ಓದಿ ಮಲಗಿದ್ದಾರೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಆದ ಅವಾಂತರ, ಮರ ಬಿದ್ದು ಆದ ತೊಂದರೆಗಳ ಸುದ್ದಿ ಅವರಿಗೆ ಊರ ನೆನಪು ತಂದು ಕಳವಳವಾಗಿದೆ. ರಸ್ತೆಗಳಲ್ಲಿ ನಿಂತ ನೀರು ಆರುವಷ್ಟರಲ್ಲಿ ಮತ್ತೆ ಮಳೆ ಬಂದಿದೆ. ಫ್ಲೈ‌ಓವರಿನ ಕಟಾಂಜನಕ್ಕೆ ಅಂಟಿನಿಂತಿದ್ದ, ಎಂಥಾ ಭಾರೀ ಲಾರಿ ಹಾಯ್ದರೂ ಜಗ್ಗದ ಮಳೆನೀರಹನಿಗಳು, ಸುಂದರ ಹುಡುಗಿಯ ಸ್ಕೂಟಿ ಸಾಗಿದ್ದೇ ಸಳಸಳನೆ ಉದುರಿವೆ. ಹಾಗೆ ಉದುರಿದ ಹನಿಗಳು ಕೆಳಗೆ ನಡೆದುಕೊಂಡು ಹೋಗುತ್ತಿದ್ದ ಯುವಕನ ಮೈಮೇಲೆ ಬಿದ್ದು, ಅವನಿಗೆ ಪುಳಕವಾಗಿ ಕತ್ತೆತ್ತಿ ಮೇಲೆ ನೋಡಿದರೆ, ಓಡುತ್ತಿರುವ ಪಿಂಕ್ ಸ್ಕೂಟಿಯ ಹುಡುಗಿಯ ಹಾರುತ್ತಿರುವ ವೇಲು ಹಾಯ್ ಎಂದಿದೆ.

ಮಾಗುತ್ತಿರುವ ಜೂನಿನೊಂದಿಗೆ ಮಳೆಗಾಲಕ್ಕೂ ಜನ ಹೊಂದಿಕೊಂಡಿದ್ದಾರೆ. ಗದ್ದೆಗಳಲ್ಲಿ ಚಟುವಟಿಕೆ ಜೋರಾಗಿದೆ. ತೋಟದ ಕಾದಿಗೆಗಳಲ್ಲಿ ನೀರು ಸರಿಯಾಗಿಯೇ ನಿಂತಿದೆ. ಅಡಿಕೆ ಮರಗಳಿಗೆ ಬಂದ ಕೊಳೆರೋಗಕ್ಕೆ ಔಷಧಿ ಹೊಡೆಸಲು ತಯಾರಿ ನಡೆದಿದೆ. ಒಂದು ದಿನ ಹೊಳವು ಕೊಟ್ಟರೆ ಸಾಕು, ಸ್ಲಾಬ್ ಹಾಕಿ ಮುಗಿಸಬಹುದಿತ್ತು ಅಂತ ಮೇಸ್ತ್ರಿಗಳು ಅರ್ಧ ಕಟ್ಟಿದ ಮನೆಯ ಹೊರಗೆ ನಿಂತು ಮಾತಾಡಿಕೊಳ್ಳುತ್ತಿದ್ದಾರೆ. ಮರದಡಿಯಲಿ ನಿಂತ ಪ್ರೇಮಿ ತನ್ನ ಹುಡುಗಿಗೆ ಜರ್ಕಿನ್ ತೊಡಿಸಿ ತಾನು ತೋಯುತ್ತಲೇ ಉಳಿದು ಸಿನೆಮಾ ಹೀರೋ ಥರ ಮಿಂಚಿದ್ದಾನೆ.

ಜೂನ್ ತಿಂಗಳು ಮುಗಿಯಲು ಬಂದಿದೆ. ತನ್ನ ಕೊಡಪಾನದಲ್ಲಿದ್ದ ಚೂರುಪಾರು ನೀರನ್ನೆಲ್ಲ ಅದು ಈಗ ಕೊಡವಿ ಕೊಡವಿ ಚೆಲ್ಲುತ್ತಿದೆ. ಜುಲಾಯಿ ತನ್ನ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದೆ. ಮಳೆಗಾಲದ ಮಾಂತ್ರಿಕ ಕೋಲನ್ನು ಕೈಯಲ್ಲಿ ಹಿಡಿದು ರಿಲೇ ಓಡುತ್ತಿರುವ ಜೂನು ಅಗೋ ಅಲ್ಲಿ ನಿಂತು ತನ್ನನ್ನೇ ಕಾಯುತ್ತಿರುವ ಜುಲಾಯಿಗೆ ಅದನ್ನು ವರ್ಗಾಯಿಸಿ ಜವಾಬ್ದಾರಿ ಕಳೆದುಕೊಳ್ಳುವ ತವಕದಲ್ಲಿದೆ. ಕ್ಯಾಲೆಂಡರಿನ ಹಾಳೆಗಳು ಮತ್ತೆ ಪಟಪಟನೆ ಹಾರುತ್ತಿವೆ. ಜುಲಾಯಿ ನಿಂತಲ್ಲೇ ಚಡಪಡಿಸುತ್ತ ಜೂನು ತರುವ ಮಳೆಗಾಲದ ಮಂತ್ರದಂಡಕ್ಕಾಗಿ ಕಾಯುತ್ತಿದೆ.


[ಈ ಲಹರಿಯು, ಒಂದಷ್ಟು ಬದಲಾವಣೆಗಳೊಂದಿಗೆ, 28.06.2015ರ 'ವಿಜಯ ಕರ್ನಾಟಕ' ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಗೊಂಡಿದೆ.]

Friday, June 01, 2007

ಈ ಮಳೆಯೊಳಗೆ...

ಮಳೆ ಮಳೆ ಮಳೆ ಮಳೆ ಮಳೆ... ಎಷ್ಟು ಮಳೆ..? ಹನಿ ಹನಿ ಹನಿ ಹನಿ ಹನಿ ಹನಿ... ಎಷ್ಟು ಹನಿ..? ಸುರಿ ಸುರಿ ಸುರಿ ಸುರಿ ಸುರಿ... ಅರೆ ಅರೆ, ಇದೇನಿದು ಸುರಿಯುತ್ತಲೇ ಇದೆಯಲ್ಲ? ಮಳೆಗಾಲ ಶುರುವಾಗಿ ಹೋಯಿತಾ? ಹೌದಲ್ಲಾ, ಬಿಸಿಲೇ ಇಲ್ಲ.. ರಜೆ ತೆಗೆದುಕೊಂಡಿತಾ ಹೇಗೆ? ರಸ್ತೆಯ ಮೇಲೆ ಹರಿಯುತ್ತಿರುವುದೇನದು ನದಿಯಾ? ಮನೆಯ ಸೂರಿನಿಂದ, ಕಾರಿನ ವೈಪರಿನಿಂದ, ಸ್ಕೂಟರ್‌ವಾಲಾನ ರೈನ್‍ಕೋಟಿನಿಂದ, ಅಜ್ಜನ ಛತ್ರಿಯಿಂದ, ಮರದ ಎಲೆಯಿಂದ... ಎಲ್ಲೆಲ್ಲಿಂದಿಲೂ ತೊಟ್ಟಿಕ್ಕುತ್ತಿದೆಯಲ್ಲ ಹನಿ ಹನಿ ಹನಿ ಹನಿ... ಇದ್ಯಾವ ಮೋಡದ ಮಾಯೆ? ಮುಂಗಾರು ಮಳೆಯ ಹನಿಗಳ ಲೀಲೆ?

ಒಳಗೆಲ್ಲೋ ನಾಗಂದಿಗೆಯ ಮೇಲೆ ಮಡಚಿಟ್ಟಿದ್ದ ಛತ್ರಿಯನ್ನು ನಾನು ಕೆಳಗಿಳಿಸುತ್ತೇನೆ. ಧೂಳು ಕೊಡವಿ ಅದನ್ನು ಬಿಡಿಸಿದರೆ ಮೇಲೆ ನನ್ನ ನೀಲಾಕಾಶ ಮುಚ್ಚಿಹೋಗಿದೆ. ಮೇಲೇನು ನಡೆಯುತ್ತಿದೆ? ನನಗೆ ತಿಳಿಯುತ್ತಿಲ್ಲ... ಮೇಲಿನ ಕತೆ ಹಾಳಾಯ್ತು; ಮುಂದೇನು ಎಂದು ಸಹ ಕಾಣುತ್ತಿಲ್ಲ. ಅಷ್ಟು ಜೋರು ಮಳೆ. ಮೋಡ ಕವಿದ ದಿಗಂತ. ಕೇವಲ ಹತಾಶೆಯ ಕೆಸರನ್ನಷ್ಟೇ ಎರಚುತ್ತಿರುವ ರಸ್ತೆಯ ವಾಹನಗಳು. ಏಕೆ ಹೀಗಾಯ್ತು? ನನ್ನ ಮುಂದಿನ ದಾರಿಯೇನು?

ಇವತ್ತು ನನಗೆ ಕೆಲಸಕ್ಕೆ ಹೋಗಲು ಮನಸಿಲ್ಲ. ಮನೆಯಲ್ಲೇ ಕುಳಿತಿದ್ದೇನೆ. ಏಕೆಂದರೆ, ಇವತ್ತು ಜೂನ್ ೧. ಶಾಲೆಗಳು ಶುರುವಾಗುತ್ತಿವೆ. ನನ್ನೆಲ್ಲ ಗೆಳೆಯರೂ ಪಾಟಿಚೀಲ ಬೆನ್ನಿಗೇರಿಸಿ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ನಾನು ಮಾತ್ರ ಹೋಗುವಂತಿಲ್ಲ. ನನ್ನ ಏಳನೇ ತರಗತಿಯ ಪರೀಕ್ಷೆಯ ಫಲಿತಾಂಶ ಕೈಕೊಟ್ಟುಬಿಟ್ಟಿತು. ನಾನೇನು ಪರೀಕ್ಷೆಗೆ ಓದಿರಲಿಲ್ಲವೆಂದಲ್ಲ. ಚೆನ್ನಾಗಿಯೇ ಓದಿದ್ದೆ. ಆದರೆ ಪರೀಕ್ಷೆಗೆ ನಾಲ್ಕು ದಿನ ಮುಂಚೆ ಬಂದು ಒಕ್ಕರಿಸಿದ ಜ್ವರ ನನ್ನ ಭವಿಷ್ಯವನ್ನೇ ಹಾಳು ಮಾಡಿಬಿಟ್ಟಿತು. ಮೊದಲೆರಡು ಪರೀಕ್ಷೆಗಳಿಗೆ ಹೋಗಲಿಕ್ಕೇ ಆಗಲಿಲ್ಲ. ಹಾಗಂತ ನಾನು ಪರೀಕ್ಷೆಯನ್ನು ಬರೆದು ಪಾಸಾಗಿದ್ದರೂ ನನ್ನ ಅಪ್ಪ ನನ್ನನ್ನು ಮುಂದೆ ಓದಿಸುತ್ತಿದ್ದುದು ಸಂದೇಹ. ಅದಕ್ಕೇ ಅವನು ನನ್ನನ್ನು ಈ ಬೇಸಿಗೆ ರಜೆಯಲ್ಲೇ ಗ್ಯಾರೇಜಿಗೆ ಸೇರಿಸಿಬಿಟ್ಟ. ಒಂದು ವಾರದಲ್ಲಿ ಅಜ್ಜನ ಮನೆ, ಅತ್ತೆ ಮನೆ, ಎಲ್ಲಾ ಸುತ್ತಿಕೊಂಡು ಬಂದು ಆಮೇಲೆ ಗ್ಯಾರೇಜಿಗೆ ಸೇರಿದ್ದು. ಮೊದಮೊದಲು ದೊಡ್ಡ ಬೈಕಿನ ಟೈರು ಕಳಚಲು ಶಕ್ತಿಯೇ ಸಾಲುತ್ತಿರಲಿಲ್ಲ. ಈಗೀಗ ಎಲ್ಲಾ ಸಲೀಸಾಗಿದೆ. ನನ್ನ ಕೈಗಳು ತಾವೇ ತಾವಾಗಿ ಸ್ಪ್ಯಾನರಿನಿಂದ ನಟ್ಟು ಬೋಲ್ಟುಗಳನ್ನು ತಿರುಗಿಸುತ್ತವೆ. ಎರಡು ತಿಂಗಳಲ್ಲೇ ಎಲ್ಲವನ್ನೂ ಕಲಿತಿದ್ದೇನೆ.

ನನ್ನ ಕೈಗೆ ಬಳಿದಿರುವ ಮಶಿ, ಕವಿದಿರುವ ಮುಂಗಾರು ಮಳೆಯ ಮೋಡಕ್ಕಿಂತ ಕಪ್ಪಿದೆ. ಊಟ ಮಾಡುವ ಮುನ್ನ ಎಷ್ಟು ತೊಳೆದರೂ ಹೋಗುವುದಿಲ್ಲ. ಮೊದಮೊದಲು ಇದೇ ಕೈಯಲ್ಲಿ ಊಟ ಮಾಡುವುದಕ್ಕೆ ಹೇಸಿಗೆಯಾಗುತ್ತಿತ್ತು. ಗ್ರೀಸಿನ ಕಂಪಿಗೆ ವಾಂತಿ ಬಂದಂತಾಗುತ್ತಿತ್ತು. ಈಗ ಎಲ್ಲವೂ ಅಭ್ಯಾಸವಾಗಿದೆ. ಹಸಿದ ಹೊಟ್ಟೆಗೆ ತನ್ನೊಳಗೆ ಆಹಾರವನ್ನು ತುರುಕುತ್ತಿರುವ ಕೈಯ ಬಣ್ಣದ ಪರಿಚಯವೇ ಇರುವುದಿಲ್ಲ. ಹೀಗಾಗಿ, ಅದು ಏನನ್ನು ಹಾಕಿದರೂ ಜೀರ್ಣ ಮಾಡುತ್ತದೆ.

ಈಗ ಹೊರಗೆ ಮಳೆ ಸ್ವಲ್ಪ ತೆರವು ಮಾಡಿಕೊಟ್ಟಿದೆ. ಸುಮ್ಮನೇ ಮನೆಯಲ್ಲಿ ಕುಳಿತಿರಲು ಬೇಸರವಾಗಿ ನಾನು ನಮ್ಮೂರ ಪ್ರೈಮರಿ ಶಾಲೆಯತ್ತ ಹೆಜ್ಜೆ ಹಾಕುತ್ತೇನೆ. ಇಲ್ಲ, ನನಗೆ ನಮ್ಮೂರ ಮುಖ್ಯದಾರಿಯಲ್ಲಿ ಓಡಾಡುವಷ್ಟು ಧೈರ್ಯವಿಲ್ಲ. ಕಟ್ಟೆಯ ಮೇಲೆ ಕುಳಿತ ಜನ ಕೇಳುತ್ತಾರೆ: 'ಏನೋ, ಇವತ್ತು ಕೆಲಸಕ್ಕೆ ಹೋಗಿಲ್ಲವೇನೋ? ಯಾಕೋ?' ಈ ಜನಗಳ ನಿಜವಾದ ಬಣ್ಣ ಗೊತ್ತಾಗುವುದು ನಾವು ಸೋತಾಗಲೇ ನೋಡಿ. ಕಟ್ಟೆಯ ಮೇಲೆ ಕುಳುತು ಕುಳಿತೇ ಇವರ ಅಂಡು ಸವೆದಿದ್ದರೂ ರಸ್ತೆಯ ಮೇಲೆ ಹೋಗಿಬರುವ ಜನಗಳನ್ನು ಹೀಯಾಳಿಸುವುದು ಬಿಡುವುದಿಲ್ಲ. ಅವರಿಗೆ ಅದರಲ್ಲೇ ಮನಸ್ಸಂತೋಷ. ಯಾರ್‍ಯಾರ ಮನೆಯಲ್ಲಿ ಏನೇನಾಯಿತು? ಯಾರ ಮನೆಯ ಹೆಣ್ಣು ಮಗಳು ತೌರಿಗೆ ವಾಪಸು ಬಂದಳು? ಯಾರ ಮನೆಯಲ್ಲಿ ಹಿಸೆ ಪಂಚಾಯಿತಿ? ಅತ್ತೆ-ಸೊಸೆ ಜಗಳ? ಇಸ್ಪೀಟಿನಲ್ಲಿ ಸೋತು ಪಾಪರ್ ಆದ್ನಂತೆ ಅವ್ನು ಹೌದಾ? ಛೇ! ಇವರಿಗೆ ತಮ್ಮ ಅಡುಗೆ ಮನೆಯಲ್ಲಿನ ಗ್ಯಾಸ್ ಸ್ಟೋವ್ ತುಕ್ಕು ಹಿಡಿದಿದ್ದರೂ ಪರವಾಗಿಲ್ಲ; ಬೇರೆಯವರ ಮನೆಯ ಪಾತ್ರೆ ಕಂದಿದರೂ ಅದು ಹಾಸ್ಯಕ್ಕೆ ವಸ್ತು. ನನಗೆ ಇಂಥವರ ಪ್ರಶ್ನೆಗಳಿಗೆ ಆಹಾರವಾಗಲಿಕ್ಕೆ ಇಷ್ಟವಿಲ್ಲ. ಅದಕ್ಕೇ ನಾನು ಹಿತ್ತಿಲ ದಾರಿ ಹಿಡಿದು, ಬೇಲಿ ಹಾರುತ್ತಾ ಶಾಲೆಯ ಹಿಂಭಾಗವನ್ನು ಸೇರುತ್ತೇನೆ.

ಈಗ ತಾನೇ ಮೇಷ್ಟ್ರು ಬಂದಿದ್ದಾರೆ. ಹುಡುಗನೊಬ್ಬನನ್ನು ಕರೆದು ಬೆಲ್ ಹೊಡೆಸಿದ್ದಾರೆ. ಟಿಣ್ ಟಿಣ್ ಟಿಣ್ ಟಿಣ್ ಟಿಣ್... ಮಕ್ಕಳೆಲ್ಲಾ ಹೊರಗೆ ಬಂದು ಕಟ್ಟೆಯ ಮೇಲೆ ಸಾಲಾಗಿ 'ಹೈಟ್ ಪ್ರಕಾರ' ನಿಂತಿದ್ದಾರೆ. 'ಸಾವಧಾನ್! ನಾಡಗೀತೆ ಶುರೂಕರ್!' ಈಗ ಪ್ರಾರ್ಥನೆ ಪ್ರಾರಂಭವಾಗಿದೆ... 'ಜೈ ಭಾರತ ಜನನಿಯ ತನುಜಾತೆ.. ಜಯಹೇ ಕರ್ನಾಟಕ ಮಾತೆ.. ಜೈ ಸುಂದರ ನದಿವನಗಳ ನಾಡೇ.. ಜಯಹೇ...' ಶಾಲೆಯ ಹಿಂದಿನ ಬೇಲಿಯ ಮರೆಯಲ್ಲಿ ನಿಂತ ನಾನೂ ಇಲ್ಲೇ ನೇರವಾಗಿ ನಿಂತು ಸಣ್ಣಗೆ ನಾಡಗೀತೆಯನ್ನು ಗುನುಗುತ್ತೇನೆ.. 'ಭೂದೇವಿಯ ಮಕುಟದ ನವಮಣಿಯೇ...' ಸಾಲಿನಲ್ಲಿ ನಿಂತ ಹುಡುಗರಲ್ಲಿ ಇನ್ನೂ ರಜೆಯ ತೂಕಡಿಕೆ ಇದೆ. ಅಗೋ, ಮೂರನೇ ಸಾಲಿನ ನಾಲ್ಕನೇ ಹುಡುಗ ಶಶಾಂಕ ಆಕಳಿಸುತ್ತಿದ್ದಾನೆ.. ನನಗೆ ನಗು ಬರುತ್ತಿದೆ.. ಈ ವರ್ಷ ಹೊಸದಾಗಿ ಒಂದನೇ ಕ್ಲಾಸಿಗೆ ಸೇರಿದ ಮಕ್ಕಳಿಗೆ ಪ್ರಾರ್ಥನೆ ಸರಿಯಾಗಿ ಬರುವುದಿಲ್ಲ. ಅವರು ಅಕ್ಕಪಕ್ಕದವರ ಬಾಯಿ ನೋಡುತ್ತಿದ್ದಾರೆ. ಮೇಷ್ಟ್ರು ಕಣ್ಣಲ್ಲೇ 'ನೀವೂ ಹಾಡಿ' ಎನ್ನುತ್ತಿದ್ದಾರೆ. ಕೆಲ ಮಕ್ಕಳು ಸುಮ್ಮನೇ ಬಾಯಿ ಪಿಟಿಗುಡುಸಿತ್ತಿದ್ದಾರೆ. ಎದಿರುಗಡೆ ಹುಡುಗಿಯ ತಲೆಯಲ್ಲಿ ಹೇನು ಹುಡುಕುತ್ತಿದ್ದಾಳೆ ಕಲ್ಪನ.. ಹೊರಡುವುದು ತಡವಾದ್ದರಿಂದ ತನ್ನ ಜೊತೆ ಅಪ್ಪನನ್ನೂ ಕರೆದುಕೊಂಡು ಬಂದಿರುವ ನಟರಾಜ ಆಗಲೇ ಶುರುವಾಗಿರುವ ಪ್ರಾರ್ಥನೆಯಲ್ಲಿ ಸೇರಿಕೊಳ್ಳುವುದೋ ಬಿಡುವುದೋ ಅರ್ಥವಾಗದೇ ಹಾಗೇ ದೂರದಲ್ಲಿ ನಿಂತಿದ್ದಾನೆ... ಪ್ರಾರ್ಥನೆ ಮುಗಿಯುತ್ತಿದೆ: '...ಕನ್ನಡ ತಾಯಿಯ ಮಕ್ಕಳ ಗೇಹ'.. ಕೊನೆಯಲ್ಲಿ ಎಲ್ಲರೂ 'ಜೈಹಿಂದ್' ಹೇಳಿ ಶಾಲೆಯ ಒಳನಡೆದಿದ್ದಾರೆ. ಈಗ ಆಗಸದಲ್ಲಿ ಮತ್ತೆ ಮಳೆಮೋಡಗಳು ಒಟ್ಟಾಗುತ್ತಿವೆ... ನಾನು ಕೈಯಲ್ಲಿರುವ ಛತ್ರಿಯ ಬಟ್ಟೆಯನ್ನೊಮ್ಮೆ ಸವರುತ್ತೇನೆ... ನನ್ನ ಮೆಡ್ಲಿಸ್ಕೂಲಿನ ದಿನಗಳ ನೆನಪಿಗೆ ಜಾರುತ್ತೇನೆ...

ನಾನು ನಾಲ್ಕನೇ ಕ್ಲಾಸು ಮುಗಿಸಿದ ಮೇಲೆ ಮುಂದೆ ಯಾವ ಶಾಲೆ ಎಂಬ ಗೊಂದಲವೇ ಇರಲಿಲ್ಲ ನಮ್ಮ ಮನೆಯಲ್ಲಿ. ಸೀದಾ ಹೋಗಿ ಉಳವಿಯ ಸರ್ಕಾರೀ ಶಾಲೆಗೆ ಸೇರಿಸಿದ್ದು ಅಪ್ಪ. ಸ್ವಲ್ಪ ಭಯವಿತ್ತು: ಹೊಸ ಶಾಲೆ, ಹೊಸ ಮೇಷ್ಟ್ರುಗಳು, ಹೊಸ ಗೆಳೆಯರು... ಈ ವರ್ಷದಿಂದ ಇಂಗ್ಲೀಷು ಬೇರೆ ಕಲಿಯಬೇಕಲ್ಲಪ್ಪಾ ಅಂತ.. ಒಂದು ತಿಂಗಳಲ್ಲಿ ಹೊಂದಿಕೊಂಡೆ. ಗೆಳೆಯರೆಲ್ಲರೂ ಒಳ್ಳೆಯವರಿದ್ದರು. ಒಳ್ಳೆಯವರು ಎಂದರೇನು? ನನ್ನಷ್ಟೇ ದಡ್ಡರೂ ನನ್ನಷ್ಟೇ ಬುದ್ಧಿವಂತರೂ ಆಗಿದ್ದರು ಅಂತ! ನಮಗಿಂತ ದಡ್ಡರು ನಮ್ಮ ಜೊತೆ ಸೇರುವುದೇ ಇಲ್ಲ; ನಮಗಿಂತ ಬುದ್ಧಿವಂತರು ನಮ್ಮನ್ನು ಸೇರಿಸಿಕೊಳ್ಳಲಿಕ್ಕೇ ಹಿಂಜರಿಯುತ್ತಾರೆ.. ಇಲ್ಲಿ ಹಾಗಿರಲಿಲ್ಲ. ಟೆಸ್ಟಿನಲ್ಲಿ ಒಬ್ಬರಿಗೊಬ್ಬರು ತೋರಿಸಿಕೊಂಡು, ಸನ್ನೆ-ಗಿನ್ನೆ ಮಾಡಿಕೊಂಡು, ಕಾಪಿಚೀಟಿ ವರ್ಗಾಯಿಸಿಕೊಂಡು ನಾವು ಅನ್ಯೋನ್ಯವಾಗಿದ್ದೆವು.

ಊರಿನಿಂದ ಎರಡು ಮೈಲು ನಡೆದೇ ಹೋಗುತ್ತಿದ್ದುದು ನಾನು. ನನ್ನ ಜೊತೆ ಅಣ್ಣಪ್ಪ, ಭೈರಪ್ಪ, ಗಿರೀಶ ಇತ್ಯಾದಿ ಗೆಳೆಯರು ಇರುತ್ತಿದ್ದರು. ಹೊರಬೈಲು ಬೋರ್ಡ್‍ಗಲ್ಲಿನಲ್ಲಿ ನಾಗಶ್ರೀ, ಹಾಲಮ್ಮರೂ ಸೇರಿಕೊಳ್ಳುತ್ತಿದ್ದರು. ಸುರಿಯುವ ಮಳೆಯಲ್ಲಿ ಛತ್ರಿ ಹಿಡಿದ ನಾವು ಒಬ್ಬರಿಗೊಬ್ಬರು ನೀರು ಹಾರಿಸಿಕೊಳ್ಳುತ್ತಾ, ರಸ್ತೆ ಪಕ್ಕದ ಬುಕ್ಕೆ ಮಟ್ಟಿಗಳನ್ನು ಶೋಧಿಸುತ್ತಾ, ಸಿಕ್ಕ ಕಲ್ಲುಗಳನ್ನು ಲೈಟುಕಂಬಗಳಿಗೆ ಎಸೆಯುತ್ತಾ ಸಾಗುತ್ತಿದ್ದೆವು. ಎದುರಿಗೆ ಬಂದ ಮಲ್ಲಿಕಾರ್ಜುನ ಬಸ್ಸಿನ ಡ್ರೈವರ್ರಿಗೆ ಕೈ ಮಾಡುತ್ತಿದ್ದೆವು. ಅದಕ್ಕೆ ಪ್ರತಿಯಾಗಿ ಡ್ರೈವರು ಹಾರನ್ನು ಮಾಡಿದರೆ ನಮಗೆ ಖುಷಿಯಾಗುತ್ತಿತ್ತು. ಏನೇನೋ ಮಾತು ಏನೇನೋ ಮಾತು... ದಾರಿ ಖರ್ಚಿಗೆ ಇಂಥದ್ದೇ ಬೇಕೆಂದೇನಿಲ್ಲವಲ್ಲ? ಮಾತಾಡುತ್ತಿದ್ದರೆ ಶಾಲೆ ಬೇಗ ಬರುತ್ತದೆ ಅಷ್ಟೆ.

ಶಾಲೆಯಲ್ಲಿ ಛತ್ರಿ ನೇತುಹಾಕಲಿಕ್ಕೆಂದೇ ಹೊರಗಡೆ ಒಂದು ಊದ್ದ ದಬ್ಬೆಯನ್ನು ಹೊಡೆದಿದ್ದರು. ನಾವೆಲ್ಲಾ ನಮ್ಮ ಛತ್ರಿಯನ್ನು ಮಡಚಿ, ಕೊಡವಿ ಅದಕ್ಕೇ ನೇತುಹಾಕುತ್ತಿದ್ದುದು. ಮೇಷ್ಟ್ರುಗಳೂ ತಮ್ಮ ಛತ್ರಿಯನ್ನು ಇಲ್ಲೇ ಇಡುತ್ತಿದ್ದುದು. ನಮ್ಮ ಕನ್ನಡ ಮೇಷ್ಟ್ರ ಉದ್ದ ಕೋಲಿನ ಛತ್ರಿ ಮಾತ್ರ ಯಾವಾಗಲೂ ನ್ಯಾಲೆಯ ಮೊದಲನೆಯದಾಗಿರುತ್ತಿತ್ತು. ನಮ್ಮ ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೂ ಇತ್ತು. ಒಂದನೇ ತರಗತಿಗೆ ಪಾಠ ಮಾಡಲು ಬರುತ್ತಿದ್ದುದು ಒಬ್ಬ ಮೇಡಂ. ಅನಿತಾ ಮೇಡಂ ಅಂತ. ಅವರು ಮಾತ್ರ ತಮ್ಮ ಛತ್ರಿಯನ್ನು ಇಲ್ಲಿ ನೇತುಹಾಕುತ್ತಿರಲಿಲ್ಲ. ಅವರ ಛತ್ರಿಗೆ ಮೂರು ಫೋಲ್ಡುಗಳು! ಅದನ್ನು ಅವರು ಒದ್ದೆಯಿದ್ದರೂ ತಮ್ಮ ವ್ಯಾನಿಟಿ ಬ್ಯಾಗಿನಲ್ಲಿಯೇ ಇಟ್ಟುಕೊಳ್ಳುತ್ತಿದ್ದುದು. ಅದೆಷ್ಟು ಒಳ್ಳೇ ಮೇಡಂ ಅಂತೀರಾ ಅವರು? ಒಮ್ಮೆ ನಾವು ಐದನೇ ತರಗತಿಯ ಹುಡುಗರಿಗೆ ಅವರು ಕ್ಲಾಸು ತೆಗೆದುಕೊಂಡಿದ್ದರು. ಪಾಠ ಇಲ್ಲವೇ ಇಲ್ಲ! ಬರೀ ಹಾಡು, ಕಥೆ, ಆಟ... ಏನೇನೋ ಆಡಿಸಿದ್ದು... ಅವರ ಕಂಠ ಎಷ್ಟು ಚೆನ್ನಾಗಿದೆ ಅಂತೀರಾ? ನನ್ನ ಅಮ್ಮನನ್ನು ಬಿಟ್ಟರೆ ಅಷ್ಟು ಚಂದ ಹಾಡುವವರು ಅನಿತಾ ಮೇಡಮ್ಮೇ ಸರಿ ಅಂತ ನಾನು ತೀರ್ಮಾನಿಸಿದ್ದೆ.

ಈಗ ಮಳೆಹನಿ ಬೀಳತೊಡಗಿದೆ... ಜೋರಾಗುತ್ತಿದೆ... ಶಾಲೆಯಿಂದ ಬರುತ್ತಿರುವ 'ಎರಡೊಂದ್ಲೆ ಎರಡು, ಎರಡೆರಡ್ಲೆ ನಾಕು, ಎರಡ್ಮೂರ್ಲೆ ಆರು..' ಮಗ್ಗಿಯ ಪ್ರಾಕ್ಟೀಸ್, ಮಳೆಯ ಹಾಡಿನೊಂದಿಗೆ ಬೆರೆಯುತ್ತಿದೆ... 'ಇನ್ನೂ ಜೋರಾಗಿ ಹೇಳ್ರೋ' ಮೇಷ್ಟ್ರು ಕೂಗಿದ್ದು ಕೇಳಿಸುತ್ತಿದೆ... ಛತ್ರಿ ಅಗಲಿಸಿ ನಿಂತಿರುವ ನಾನು ನಿಧಾನಕ್ಕೆ ಮನೆಯತ್ತ ವಾಪಸು ಹೆಜ್ಜೆ ಹಾಕುತ್ತೇನೆ...

ಮೆಡ್ಲಿಸ್ಕೂಲಿನ ದಿನಗಳು ತುಂಬಾ ಚೆನ್ನಾಗಿದ್ದವು. ಐದು-ಆರನೇ ಕ್ಲಾಸಿನ ಪರೀಕ್ಷೆಗಳನ್ನು ಪಾಸು ಮಾಡುವುದು ನಮಗೆ ತಲೆನೋವೇ ಆಗಲಿಲ್ಲ. ಪ್ರಶ್ನೆಪತ್ರಿಕೆಗಳು ಬಹಳ ಸುಲಭ ಇದ್ದವು. ಆರನೇ ಕ್ಲಾಸಿನಲ್ಲಿ ಕನ್ನಡ ಮತ್ತು ಸಮಾಜ ವಿಷಯಗಳಲ್ಲಿ ನನಗೇ ಹೈಯೆಸ್ಟ್ ಮಾರ್ಕ್ಸ್! ನನಗೆ ಅವು ಇಷ್ಟದ ವಿಷಯಗಳಾಗಿದ್ದವು. ಮತ್ತೇನಪ್ಪ ಅಂದ್ರೆ, ಕನ್ನಡ ಮತ್ತು ಸಮಾಜ -ಎರಡೂ ವಿಷಯಕ್ಕೆ ಪಾಠಕ್ಕೆ ಬರುತ್ತಿದ್ದವರು ಶಂಕ್ರಪ್ಪ ಮೇಷ್ಟ್ರು. ಎಷ್ಟು ಚೆನ್ನಾಗಿ ಪಾಠ ಮಾಡುತ್ತಿದ್ದರೆಂದರೆ ನನಗೆ ಮನೆಗೆ ಹೋಗಿ ಓದುವ ಪ್ರಮೇಯವೇ ಬರುತ್ತಿರಲಿಲ್ಲ. ಅವರಿಗೂ ನನ್ನನ್ನು ಕಂಡರೆ ಏನೋ ಅಕ್ಕರೆ. 'ಬಡವರ ಮನೆ ಹುಡುಗ... ನೀನು ಓದಿ ಹೆಸರು ಮಾಡಬೇಕು... ಎಷ್ಟು ಖರ್ಚಾದರೂ ಸರಿ, ನಿನ್ನ ಅಪ್ಪನಿಗೆ ಓದಿಸಲಿಕ್ಕೆ ನಾನು ಹೇಳುತ್ತೇನೆ...' ಎಂದಿದ್ದರು. ನಮ್ಮ ಆರನೇ ಕ್ಲಾಸು ಮುಗಿಯುವಷ್ಟರಲ್ಲಿ ವರ್ಗವಾಗಿ ಹೋದರು. ಈಗ ಎಲ್ಲಿದ್ದಾರೋ? ಇಲ್ಲೇ ಇದ್ದಿದ್ದರೆ ನಾನು ಮತ್ತೊಮ್ಮೆ ಏಳನೇ ಕ್ಲಾಸಿನ ಪರೀಕ್ಷೆಗೆ ಕಟ್ಟಿ, ಪಾಸು ಮಾಡಿಕೊಂಡು, ಹೈಸ್ಕೂಲಿಗೆ...... ಹುಂ! ಎಲ್ಲಾ ಭ್ರಮೆಯಷ್ಟೆ.

ಹಿತ್ತಿಲ ಹಾದಿಯಲ್ಲಿ ನಡೆಯುವಾಗ ಎಲ್ಲಾ ನೆನಪಾಗುತ್ತದೆ... ಈ ಮಳೆಯೇ ಹಾಗೆ: ಮಧುರ ಸ್ಮೃತಿಗಳನ್ನು ಸುರಿಸುತ್ತದೆ... ಏನೇನೋ ಭಾವನೆಗಳನ್ನು ಸ್ಪುರಿಸುತ್ತದೆ... ಹೊಸ ಸ್ವಪ್ನಲೋಕದ ತೆರೆಯನ್ನು ಸರಿಸುತ್ತದೆ... ನನ್ನನ್ನು ಹೊಸ ಕನಸುಗಳು ಆವರಿಸುತ್ತವೆ: ಇದೇ ಗ್ಯಾರೇಜಿನಲ್ಲಿ ನಾಳೆಯಿಂದ ಇನ್ನೂ ಜಾಸ್ತಿ ಕೆಲಸ ಮಾಡಿ, ಎಲ್ಲವನ್ನೂ ಕಲಿತು, ಮುಂದೊಂದು ದಿನ ನಾನೇ ಗ್ಯಾರೇಜು ತೆರೆಯುತ್ತೇನೆ.. ದುಡ್ಡು ಮಾಡುತ್ತೇನೆ.. ಊರ ಜನರೆದುರು ತಲೆಯಿತ್ತಿ ನಿಲ್ಲುತ್ತೇನೆ.. ಶಾಲೆ ಬಿಡಿಸಿದ ಅಪ್ಪನಿಗೇ ಅಚ್ಚರಿಯಾಗುವಂತೆ ಬೆಳೆದು ನಿಲ್ಲುತ್ತೇನೆ...

ಮನೆ ಸಮೀಪಿಸುತ್ತಿದೆ. ಅಮ್ಮ ಒಲೆಯ ಬುಡದಲ್ಲಿ ಕುಳಿತು ಇವತ್ತು ಮನೆಯಲ್ಲೇ ಇರುವ ಮಗನಿಗಾಗಿ ಹಪ್ಪಳ ಕರಿಯುತ್ತಿದ್ದಾಳೆ. ಈ ಮಳೆಯ ಜೊತೆ ಹಲಸಿನ ಕಾಯಿ ಹಪ್ಪಳ, ಅದರಲ್ಲೂ ನನ್ನಲ್ಲಿ ಸದಾ ಹೊಸ ಸ್ಪೂರ್ತಿ ತುಂಬುವ ಅಮ್ಮ ಕರಿದುಕೊಟ್ಟ ಹಪ್ಪಳ.. ಆಹ್! ಅದರ ರುಚಿಯೇ ರುಚಿ! ಛತ್ರಿಯನ್ನು ಕಟ್ಟೆಯ ಬದಿಯಲ್ಲಿ ಸಾಚಿ, ಸೂರಿನ ಒಗದಿಯಿಂದ ಬೀಳುತ್ತಿರುವ ನೀರಿಗೆ ನನ್ನ ಕಪ್ಪು ಬಳಿದ ಕೈಯೊಡ್ಡುತ್ತೇನೆ. ಬೊಗಸೆ ತುಂಬಾ ಶುದ್ದ, ಬಣ್ಣರಹಿತ, ಅಹಂಕಾರರಹಿತ, ಸ್ವಾಧಭರಿತ, ಭಾವಸಹಿತ ನೀರು ತುಂಬಿಕೊಳ್ಳುತ್ತದೆ... ನಾನು ಆ ನೀರಿನಲ್ಲಿ ನನ್ನ ಮುಖವನ್ನೇ ನೋಡಿಕೊಳ್ಳುತ್ತೇನೆ... ಹಿಂದಿನಿಂದ ಬಂದ ಅಮ್ಮ 'ಒಳಗಡೆ ಕನ್ನಡಿ ಇದೆ ಬಾ... ಹಪ್ಪಳ ತಿಂತಾ ನೋಡ್ತಾ ಕೂರುವಂತೆ..!' ಎಂದು ನಗುತ್ತಾಳೆ. ನಾನೂ ನಗುತ್ತಾ ಅಮ್ಮನ ಜೊತೆ ಒಳನಡೆಯುತ್ತೇನೆ.

ಸುರಿ ಸುರಿ ಸುರಿ ಸುರಿ ಸುರಿ ಮಳೆ... ಗರಿ ಗರಿ ಗರಿ ಗರಿ ಗರಿ ಹಪ್ಪಳ...