Friday, August 18, 2017

ಅಣಿಮಾ

ಟೆರೇಸಿನ ಮೇಲೊಂದು ಚಾಪೆ ಹಾಸಿ
ನಕ್ಷತ್ರಾಚ್ಛಾದಿತ ಆಕಾಶವನ್ನು ನೋಡುವುದು ಒಂದು ಕ್ರಮ
ಅದಕ್ಕೆ‌ ಎರಡು ಕಣ್ಣು ಸಾಕು
ಆದರೆ ಆಸ್ವಾದಿಸಲು ಹೃದಯ ಬೇಕು
ಮತ್ತದು ಆಕಾಶದಷ್ಟೇ ವಿಶಾಲವಿರಬೇಕು
ಪುಂಜಗಳ ಗುರುತು ನೆನಪಿಟ್ಟುಕೊಂಡು
ಅವು ರಾತ್ರಿ ಬೆಳಗಾಗುವುದರೊಳಗೆ ದಿಗ್ಪರ್ಯಟನ ಮಾಡುವಾಗ
ಬೆಂಬಿಡದೆ ಹಿಂಬಾಲಿಸಲು ಸಿದ್ಧವಿರಬೇಕು
ಉಲ್ಕೆಗಳು ಜಾರಿ ಬೀಳುವಾಗ ಅಂಗೈ ಚಾಚಿ
ಮುಷ್ಟಿಯೊಳಗೆ ಹಿಡಿವುದೂ ಒಂದು ಕಲೆ
ಇಲ್ಲದಿರೆ, ಅವು ಎದೆ ಹೊಕ್ಕು ದೊಡ್ಡ ರಂಧ್ರ ಮಾಡಿ,
ಅಯ್ಯೋ! ರಕ್ತ ರಾಮಾಯಣ!

'ಫೋಕಸ್! ಫೋಕಸ್ ಮುಖ್ಯ' ಅನ್ನುವರು ತಿಳಿದವರು.
ದಿಟವೇ. ಲೆನ್ಸಿನ ಮೂತಿಯನೆತ್ತ ತಿರುಗಿಸುತ್ತಿದ್ದೇನೆ,
ಹಿಂದೆರೆ ಮುಖ್ಯವೋ, ಹತ್ತಿರದ ವಸ್ತು ಮುಖ್ಯವೋ
ಎಂಬುದರ ಸ್ಪಷ್ಟ ಪರಿಕಲ್ಪನೆಯಿರದಿದ್ದರೆ ನೀನು
ಕೆಮೆರಾ ಹಿಡಿದಿದ್ದೂ ದಂಡ.
ದಂಡ ಕದಲದಂತೆ ಬಿಗಿಹಿಡಿದಿರುವುದೇ
ಇಲ್ಲಿ ಉತ್ಕೃಷ್ಟತೆಗೆ ಮಾನದಂಡ.

ಜೂಮ್ ಮಾಡಬೇಕು ಬೇಕಾದ್ದರೆಡೆಗೆ ಮಾತ್ರ.
ಹಾಂ, ಹಾಗೆ ಲಕ್ಷನಕ್ಷತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಾಗ
ಜ್ಯೋತಿರ್ವರ್ಷಗಳ ಬಗ್ಗೆಯೂ ಅರಿವಿರಬೇಕು.
ಲೆಕ್ಕಾಚಾರವಿಲ್ಲದೆ ಬರಿಕಾಂತಿಯ ಹಿಂಬಾಲಿಸಿ ಹೊರಟ
ಎಷ್ಟು ರಾಕೆಟ್ಟುಗಳು ಅಂತರಿಕ್ಷದಲ್ಲಿ ಕಳೆದುಹೋಗಿವೆಯೋ,
ಲೆಕ್ಕಕ್ಕಿಲ್ಲ!

ಅದಕ್ಕೇ ಹೇಳುತ್ತಿದ್ದೇನೆ, ಮೃದುಮನದ ಹುಡುಗನೇ, ಕೇಳು:
ನಕ್ಷತ್ರಗಳ ಅನುಸರಿಸುವುದು ಸುಲಭವಲ್ಲ.
ಇಕೋ, ಇಲ್ಲಿದೆ ಒಂದು ಅಮೀಬಾ. ಏಕಕೋಶ ಜೀವಿ.
ಈ ಸೂಕ್ಷ್ಮದರ್ಶಕವ ತೆಗೆದುಕೋ.
ತಲೆ ತಗ್ಗಿಸು. ಕಣ್ಣು ಕಿರಿದಾಗಿಸಿ ನೋಡು.
ಹೇಗದು ತನ್ನ ಕೈಕಾಲುಗಳನ್ನು ಚಾಚಿ ನಿನ್ನತ್ತಲೇ ಬರುತ್ತಿದೆ ಗಮನಿಸು.
ಉಸಿರು ಬಿಗಿಹಿಡಿ. ಅಂತರಂಗ ಬಹಿರಂಗಗಳ ಶುದ್ಧಿಗೊಳಿಸಿ
ಸೆಟೆದು ನಿಲ್ಲು. ತನ್ನ ಚಲನಕ್ರಮದಿಂದಲೇ ಅದು
ಹೊರಡಿಸುವ ಕಾಕಲಿಗೆ ಕಿವಿಯಾಗು.
ನವೀನ ನವಿರೋದಯವನನುಭವಿಸು.
ನಿಧಾನಕ್ಕದರಲೆ ಲೀನವಾಗು.

3 comments:

venkat.bhats said...

Sushruta, One of the recent bests..
-Venkatraman

Sushrutha Dodderi said...

@Venkatraman Bhat,

Thanks bro!

Unknown said...

ಸುಶ್ರುತ, ನೀವು ಭಿನ್ನವಾಗಿ ಕವನ, ಕಥೆ ಪ್ರಭಂದಗಳನ್ನು ಬರೆಯುತ್ತೀರ.ನನಗೆ ನನ್ನ ಕೆಲವು ಲೇಖನಗಳಿಗೆ ಕವನಗಳಿಗೆ ನೀವೇ ಸ್ಫೂರ್ತಿ. ನಿಮ್ಮ ಬರವಣಿಗೆ ನನಗೆ ತುಂಬಾ ಇಷ್ಟ. ನಿಮ್ಮ ಈ ಕವನ ತಂಬಾ ಇಷ್ಟವಾಯ್ತು. ದಯವಿಟ್ಟು ನನ್ನ ಬ್ಲಾಗಿಗೂ ಒಮ್ಮೆ ಭೇಟಿ ಕೊಡಿ sarovaradallisuryabimba.blogspot.in