Thursday, February 08, 2018

ಲಘಿಮಾ

ಪಾರ್ಕಿನ ಬೆಂಚಿನ ಮೇಲೆ ಕುಳಿತು
ಹಗುರ ಎಂದರೇನು ಅಂತ ಕೇಳಿದ ಹುಡುಗಿಗೆ
ನೀನೇ ಎಂದುತ್ತರಿಸಿದ್ದೆ ಚುಟುಕಾಗಿ.
ಅಷ್ಟಕ್ಕೆ ಪಾರಾಗಲಿಲ್ಲ. ಪಾರಾಗುವುದಷ್ಟು ಸುಲಭವೂ ಅಲ್ಲ.
ಅಲ್ಲೇ ಇದ್ದ ಹೂವನೊಂದ ಕೊಯ್ದು ನನ್ನ ಕೈಗಿತ್ತು
ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು.
ಹೌದೌದು, ಹೂವೇ ಹಗುರೆಂದೆ ಪೆಚ್ಚಾಗಿ ನಗುತ್ತಾ.
ಹೂವನರಸಿ ಬಂದ ಚಿಟ್ಟೆ ತೋರಿಸಿ ಗೆಲುವ ನಗೆ ಬೀರಿದಳು.
ಅವಳೆದುರು ಸೋಲುವುದೇನು ಹೊಸತೇ?
ನೀನೇ ಗೆದ್ದೆಯೆಂದೆ.
ಆದರೆ ತೆಳ್ಳಗೆ ಬೀಳಹಿಡಿದ ಮಂಜು ಇಬ್ಬರನೂ ಸೋಲಿಸಿತ್ತು.
ಒಬ್ಬರ ಮುಖವನ್ನೊಬ್ಬರು ನೋಡಿಕೊಂಡೆವು.

ಆ ಹಳೆಯದೆಲ್ಲ ನೆನಪಾಗಲು
ಬೀನ್‌ಬ್ಯಾಗ್ ಚಟ್ಟಿ ಸಣ್ಣಗಾಗಿದ್ದೇ ಕಾರಣ ಎಂಬುದು ನಿಜ.
ಫ್ಲಿಪ್‌ಕಾರ್ಟಿನ ಹುಡುಗ ತಂದುಕೊಟ್ಟ ರೀಫಿಲ್ಲಿನೊಳಗಿನ
ಉರೂಟು ಥರ್ಮಕೋಲ್ ಗುಂಡುಗಳನ್ನು
ಚಟ್ಟಿದ ಬ್ಯಾಗಿನ ಬಾಯಿ ತೆರೆದು ತುಂಬಿಸುವ
ಕಸರತ್ತಿನಲ್ಲಿಬ್ಬರೂ ಮಗ್ನರಾಗಿರುವಾಗ,
ಅದು ಹೇಗೋ ಚೀಲ ಬಾಯಿ ಬಿಚ್ಚಿಕೊಂಡು

ನಿರ್ಭಾರ ಕೋಶಗಳು ಇಡೀ ಹಾಲಿನ ತುಂಬ ಹರಡಿ
ಫ್ಯಾನಿನ ಗಾಳಿ, ಕಿಟಕಿಯಿಂದ ಬರುವ ಗಾಳಿ,
ಕೊನೆಗೆ ಜೋರಾಗಾಡಿದ ಉಸುರಿಗೂ ಹಾರಿ
ಹಿಡಿಯಹೊರಟರೆ ಮೈಕೈಗೆಲ್ಲ ಅಂಟಿಕೊಂಡು
ಅಲಕ್ಷಿಸಿದರೆ ಮತ್ತಷ್ಟು ಜಾರಿ
ಬೊಗಸೆಗೆ ಬಾರದ ಸೊಗಸಿನ ಚೂರುಗಳು

ಹೇಳಿದವು ಸ್ವಚ್ಛಂದ ತೇಲುತ್ತಾ ಬಿಳಿಬಿಳಿ:
ಈ ಮನೆಗಡಿಯಿಟ್ಟಾಗ ಇದ್ದುದೊಂದು ಚಾಪೆಯಷ್ಟೇ
ಆಮೇಲೆ ಹಾಸಿಗೆ ಖುರ್ಚಿ ಮಂಚ
ಮಲಗಿಯೇ ಟೀವಿ ನೋಡಲೆಂದು ದೀವಾನ್
ಹಾಯಾಗಿರಲೆಂದು ಸೋಫಾ
ಮೆತ್ತಗಿರಲೆಂದು ಬೀನ್‌ಬ್ಯಾಗ್....
ಎಲವೋ ನೀವು ಹೊತ್ತಿರುವ ಭಾರ ನೋಡಿರಿ ಈಗ
ಬಿಟ್ಟಿರಲಾರಿರಿ ಯಾವುದನ್ನೂ
ಕುಸಿಯಿತೋ ಬೀನ್‌ಬ್ಯಾಗಿನ ಎತ್ತರ,
ಆರ್ಡರ್ ಮಾಡುವಿರಿ ಹೊಸ ರೀಫಿಲ್
ಕೂರಲಾಗದೀಗ ನೆಲಕ್ಕೆ, ಊಟಕ್ಕೂ ಡೈನಿಂಗ್ ಟೇಬಲ್
ಹಿಡಿಯಿರಿ ನಮ್ಮನ್ನು, ಓಹ್ ಬಗ್ಗಲಾಗದು ಮೈಯೇರಿ

ಕಿಟಕಿಯಿಂದ ಹೊರನೋಡಿದರೆ
ಪಾರ್ಕಿನ ಬೆಂಚಿನ ಮೇಲೊಂದು ಹೊಸಜೋಡಿ ಕುಳಿತಿದೆ
ಏನೋ ಕೀಟಲೆಯ ಮಾತಾಡುತ್ತಿದ್ದಾರೆ
ಅವಳೊಂದು ಹೂವು ಕಿತ್ತು ಕೊಡುತ್ತಿದ್ದಾಳೆ
ಅಂವ ಪೆಚ್ಚುಮೋರೆ ಹಾಕುತ್ತಿದ್ದಾನೆ
ಇದು ಕಿಟಕಿಯೋ ಹಳೆಯದನ್ನು ತೋರಿಸುವ
ಮಾಯಾಕನ್ನಡಿಯೋ ತಿಳಿಯದಾಗಿದೆ.

[ಅಷ್ಟಸಿದ್ಧಿಗಳ ಸರಣಿಯ ಎರಡನೇ ಪದ್ಯ]

3 comments:

sunaath said...

ಕವನ ಚೆನ್ನಾಗಿದೆ ಸುಶ್ರುತ. ನಿಮಗೆ ಅಷ್ಟಸಿದ್ಧಿಗಳು ಸಿದ್ಧಿಸಲಿ, ನಿಮ್ಮಿಂದ ಇನ್ನಷ್ಟು ಕವನಗಳು ಹೊರಬರಲಿ ಎಂದು ಹಾರೈಸುತ್ತೇನೆ.

Unknown said...

ಎಷ್ಟ ಸೊಗಸಾಗಿ ಹೇಳಿದಿರಿ.. ದಿನ ಕಳದಂತೆ ವಸ್ತುಗಳ ಭಾರ ನೆನಪುಗಳ ಭಾರ ಹೆಚ್ಚಾಗುವದಂತು ನಿಜ

Unknown said...

ಎಷ್ಟ ಸೊಗಸಾಗಿ ಹೇಳಿದಿರಿ.. ದಿನ ಕಳದಂತೆ ವಸ್ತುಗಳ ಭಾರ ನೆನಪುಗಳ ಭಾರ ಹೆಚ್ಚಾಗುವದಂತು ನಿಜ