Thursday, February 08, 2018

ಗೈರೋಡಿಜೈನು ಮತ್ತು ಅಜ್ಜಿಯ ಪೌಚು




‘ಪಾಪು ಹುಟ್ಟಿದ್ಮೇಲೆ ನಂಗೆ ನಂದೂ ಅಂತ ಒಂದು ಲೈಫೇ ಇಲ್ದೇಹೋದಂಗೆ ಆಗಿದೆ’ ಅಂತ ಹೆಂಡತಿ ಹೇಳಿದಾಗ ನಾನೇನು ಅದನ್ನ ಅಲ್ಲಗಳೆಯಲು ಹೋಗಲಿಲ್ಲ. ಏಕೆಂದರೆ ವಿಷಯ ಕಣ್ಮುಂದೆಯೇ ಇತ್ತು: ಇಪ್ಪತ್ನಾಕು ತಾಸೂ ತನ್ನೊಂದಿಗೆ ಯಾರಾದರೂ ಇರಬೇಕು ಅಂತ ಬಯಸುವ ಮಗಳು, ನಾನು ಆಫೀಸಿಗೆ ಬಂದಮೇಲೆ ಅವಳಮ್ಮನಿಗೆ ಕೊಡುವ ಕಾಟವನ್ನು ನಾನು ಕಲ್ಪಿಸಿಕೊಳ್ಳಬಲ್ಲವನಾಗಿದ್ದೆ. ಯಾವ ಆಟದ ವಸ್ತು ಕೊಟ್ಟರೂ ಐದೇ ನಿಮಿಷಕ್ಕೆ ಅದವಳಿಗೆ ಬೇಜಾರ ಬಂದು ಮತ್ತೆ ಅಮ್ಮನಿಗೆ ಜೋತುಬೀಳುವುದೇ. ಮಗಳು ಮಲಗುವುದೂ ಕಡಿಮೆಯಾದ್ದರಿಂದ ಅವಳಮ್ಮನಿಗೆ ತನ್ನ ಕೆಲಸಗಳನ್ನು ಮಾಡಿಕೊಳ್ಳಲು ಸಮಯ ಸಿಗುವುದೇ ದುರ್ಲಬವಾಗಿತ್ತು.

ಇಂತಿದ್ದ ಹೆಂಡತಿ, ನಾನು ಒಂದು ದಿನ ಆಫೀಸು ಮುಗಿಸಿ ಮನೆಗೆ ಕಾಲಿಡುವಾಗ ಇಡೀ ಹಾಲಿನ ತುಂಬ ಪೇಪರು-ಪೆನ್ನುಗಳನ್ನು ಹರಡಿಕೊಂಡು ಚಿತ್ರ ಬಿಡಿಸುತ್ತ ಕೂತಿದ್ದಳು. ಮಗಳು ಬೇರೆ ಒಂದು ಮೂಲೆಯಲ್ಲಿ ಅದೇ ಪೇಪರುಗಳನ್ನು ಚೂರು ಮಾಡುತ್ತಾ ಆಡುತ್ತಿದ್ದಳು. 'ಇದೇನೇ ನಿನ್ ಕಥೆ?' ಅಂತ ಕೇಳಿದೆ. ಚಿತ್ರ ಬಿಡಿಸುವುದರಲ್ಲಿ ಮಗ್ನಳಾಗಿದ್ದ ಅವಳು ಮಾತಾಡಲಿಲ್ಲ. ಹೋಗಿ ಅದೇನು ಬಿಡಿಸುತ್ತಿದ್ದಾಳೇಂತ ನೋಡಿದೆ, ಏನೋ ಚಕ್ರ-ಚಕ್ರ ಮಾಡುತ್ತಿದ್ದಳು. ಅರ್ಥವಾಗಲಿಲ್ಲ. ಮನೆಗೆ ಬಂದಮೇಲೆ ಮಗಳನ್ನು ನೋಡಿಕೊಳ್ಳುವುದು ನನ್ನ ಪಾಳಿಯಾದ್ದರಿಂದ ನಾನೂ ಮಗಳನ್ನೆತ್ತಿಕೊಂಡು ಗರ್ಕನಾದೆ.

ಪೂರ್ತಿ ಬಿಡಿಸಿಯಾದಮೇಲೆ ಆ ಪೇಪರನ್ನು ನನ್ನತ್ತ ಹಿಡಿದು 'ಮಂಡಲ ಆರ್ಟ್. ಚನಾಗಿದ್ಯಾ?' ಕೇಳಿದಳು. ಎಷ್ಟು ಹೊತ್ತಿನಿಂದ ಬಿಡಿಸುತ್ತಿದ್ದಳೋ ಏನೋ, ಭಯಂಕರ ಸೂಕ್ಷ್ಮ ವಿವರಗಳಿದ್ದ ಆ ಚಿತ್ರ ನೋಡಿ ಅವಳ ತಾಳ್ಮೆಗೆ ತಲೆದೂಗಿದೆ. ಭೇಷ್ ಎಂದೆ.
ಆದರೆ ಹೆಂಡತಿಯ ಈ 'ಹುಚ್ಚು' ಆ ಒಂದು ದಿನಕ್ಕೆ ಮುಗಿಯಲಿಲ್ಲ. ಮರುದಿನಕ್ಕೂ, ಅದರ ಮರುದಿನಕ್ಕೂ, ಮುಂದಿನ ವಾರಕ್ಕೂ ಮುಂದುವರಿಯಿತು. ಮನೆ ತುಂಬಾ ಬಣ್ಣದ ಪೆನ್ನುಗಳು, ಪೇಪರುಗಳು. ನಾನು ಊಟಕ್ಕೆ ಕರೆದರೆ, 'ನೀವು ಮಾಡಿ. ನಾನು ಇದೊಂದಕ್ಕೆ ಕಲರ್ ತುಂಬಿ ಆಮೇಲೆ ಊಟ ಮಾಡ್ತೇನೆ' ಎಂದಳು. 'ಅಲ್ಲ ಮಾರಾಯ್ತೀ, ಬೆಳಗಿನಿಂದ ಪಾಪು ಜೊತೆ ಒದ್ದಾಡಿ ಸುಸ್ತಾಗಿರತ್ತೆ, ನಾನು ಆಫೀಸಿನಿಂದ ಬಂದಮೇಲಾದ್ರೂ ನೀನು ಅರಾಮಾಗಿರು, ಟೀವಿ ನೋಡು, ನಿಶ್ಚಿಂತೆಯಿಂದ ಊಟ ಮಾಡು ಅಂದ್ರೆ ಕಣ್ಣು ಕಿರಿದು ಮಾಡ್ಕೊಂಡು ಚಿತ್ರ ಬಿಡಿಸ್ತಾ ಮತ್ತೂ ಕಷ್ಟ ಪಡ್ತಾ ಕೂತಿದೀಯಲ್ಲಾ?' ಅಂದೆ. 'ಇಲ್ಲ, ಇದು ಕಷ್ಟ ಅಲ್ಲ; ನಂಗೆ ಇಷ್ಟ. ಸ್ಟ್ರೆಸ್‌ಬಸ್ಟರ್ ಥರ ಕೆಲಸ ಮಾಡ್ತಿದೆ ಇದು. ಅಡಿಕ್ಟ್ ಆಗ್‌ಹೋಗಿದೀನಿ' ಅಂದ್ಲು. ಹತ್ತಿರ ಹೋಗಿ ನೋಡಿದರೆ ಇಂದಿನ ಮಂಡಲ ಇನ್ನೂ ಮೊದಲ ಹಂತದಲ್ಲಿತ್ತು. ಬಲೆಬಲೆಯಾಗಿದ್ದ ವೃತ್ತಗಳನ್ನ ನೋಡಿ 'ಏ ಮಾರಾಯ್ತಿ, ಇದನ್ನ ಮಾಡಕ್ಕೆ ಇಷ್ಟೆಲ್ಲ ಕಷ್ಟ ಯಾಕೆ ಪಡ್ತಿದೀಯಾ, ಗೈರೋಡಿಜೈನ್ ಇದ್ರೆ ಅರ್ಧ ನಿಮಿಷದಲ್ಲಿ ಮಾಡ್ಬಹುದು' ಅಂದೆ. ಅವಳಿಗೆ ಅದೇನೆಂದು ಗೊತ್ತಿರಲಿಲ್ಲ. 'ಏನದು ಗೈರೋಡಿಜೈನ್?' ಕೇಳಿದಳು. 'ಏ ಗೈರೋಡಿಜೈನ್ ಕಣೇ. ಜಾತ್ರೇಲೆಲ್ಲಾ ಇಟ್ಕೊಂಡ್ ಮಾರ್ತಾರಲ್ಲ, ಒಂದು ಗ್ಲಾಸಿನ ವ್ಹೀಲ್ ಇರುತ್ತೆ, ಅದ್ರೊಳಗೆ ಮತ್ತೆ ಸಣ್ಸಣ್ಣ ವ್ಹೀಲ್ಸ್ ಹಾಕ್ಕೊಂಡು, ಅದ್ರಲ್ಲಿರೋ ಕಿಂಡಿಗಳಲ್ಲಿ ಪೆನ್ ಇಟ್ಟು ತಿರುಗಿಸಿದ್ರೆ ನೀನು ಈಗ ಮಾಡಿರೋ ಥರದ್ದೇ ಡಿಸೈನ್ ಕ್ಷಣದಲ್ಲಿ ರೆಡಿ ಆಗುತ್ತೆ' ಅಂದೆ.

ಅವಳ ಕಣ್ಣರಳಿತು. ತಾನು ನೋಡೇ ಇಲ್ಲ, ತಂದ್ಕೊಡಿ ಹಾಗಾದ್ರೆ ಅಂದಳು. ಈ ಬೆಂಗಳೂರಲ್ಲಿ ಎಲ್ಲೀಂತ ಹುಡುಕ್ಕೊಂಡು ಹೋಗೋಣ? ಕಡ್ಲೆಕಾಯಿ ಪರಿಷೆಯಲ್ಲಿ ನೋಡಿದಂತಿತ್ತಾದ್ರೂ ಇನ್ನು ಮುಂದಿನ ವರ್ಷದ ಪರಿಷೆಯವರೆಗೆ ಕಾಯಬೇಕು. ಹೋಗಲಿ, ಯುಟ್ಯೂಬಲ್ಲಿ ಅದರ ವೀಡಿಯೋಗಳು ಇರಬಹುದು ಅಂದುಕೊಂಡು, 'ಗೈರೋಡಿಜೈನ್ ಆರ್ಟ್ಸ್' ಅಂತ ಸರ್ಚ್ ಮಾಡಿದರೆ ನಾನು ಹುಡುಕುತ್ತಿದ್ದುದು ಸಿಗಲಿಲ್ಲ. ಎಲಾ, ಕಂಡ್‌ಕಂಡಿದ್ದೆಲ್ಲ ಸಿಗೋ ಇಂಟರ್ನೆಟ್ಟಲ್ಲಿ ಒಂದು ಪುಟಗೋಸಿ ಗೈರೋಡಿಜೈನ್ ಇಲ್ವಲ್ಲಾ ಅಂತ ಆಶ್ಚರ್ಯ ಆಯ್ತು. ನಾನೇ ಅದರದ್ದೊಂದು ವೀಡಿಯೋ ಮಾಡಿ, ಒಂದು ಆರ್ಟಿಕಲ್ ಬರೆದು ಫುಲ್ ಫೇಮಸ್ ಆಗಬಹುದು ಅಂದುಕೊಂಡೆ. ಆದರೆ ಸುಮಾರು ತಡಕಾಡಿ ಕೊನೆಗೆ ಹೆಂಡತಿಯೇ ಕಂಡುಹಿಡಿದಳು: ಅದರ ಸರಿಯಾದ ಹೆಸರು ಗೈರೋಡಿಜೈನ್ ಅಲ್ಲ, 'ಸ್ಪೈರೋಗ್ರಾಫ್ ಆರ್ಟ್' ಎಂದು. ಸಾಗರದ ಜಾತ್ರೆಯಲ್ಲಿ ಮಾರಲ್ಪಡುತ್ತಿದ್ದ ಇದರ ಡಬ್ಬಿಯ ಮೇಲೆ 'ಗೈರೋಡಿಜೈನ್' ಅಂತಲೇ ಬರೆದುಕೊಂಡಿರುತ್ತಿದ್ದರಿಂದ ನಾವೂ ಅದನ್ನು ಹಾಗೇ ಕರೆಯುತ್ತಿದ್ದುದು. ಸ್ಪೈರೋಗ್ರಾಫ್ ಆರ್ಟ್ ಬಗ್ಗೆ ಈಗಾಗಲೇ ಸುಮಾರು ಬರಹಗಳು, ಚಿತ್ರಗಳು, ವೀಡಿಯೋಗಳು ಅಂತರ್ಜಾಲದಲ್ಲಿ ಇರುವುದು ತಿಳಿದು, ನಾನು ಫೇಮಸ್ ಆಗುವುದು ಮಿಸ್ ಆದುದಕ್ಕೆ ಬೇಸರವಾಯ್ತು.

ಸರಿ, ಈಗ ಇದನ್ನು ಹೆಂಡತಿಗೆ ತೋರಿಸಬೇಕಲ್ಲ? ಮನೆಯಲ್ಲಿ ನಾನು ಆಟವಾಡುತ್ತಿದ್ದ ಕಾಲದಲ್ಲಿ ಈ ಗೈರೋಡಿಜೈನಿನ ಒಂದು ಸೆಟ್ ಇತ್ತು. ಈಗ ಇದೆಯೋ ಇಲ್ಲವೋ ಗೊತ್ತಿರಲಿಲ್ಲ. ಯಾವುದಕ್ಕೂ ನೋಡೋಣ ಅಂತ ಅಪ್ಪನಿಗೆ ಮೆಸೇಜ್ ಮಾಡಿದೆ. ಅವನು ಇದನ್ನು ಯಾವುದೋ ಪೆಟ್ಟಿಗೆಯಲ್ಲಿ ಹುಡುಕಿ, 'ಇದೆ. ನಾಡಿದ್ದು ಬರುವಾಗ ತರ್ತೀನಿ' ಅಂತ ರಿಪ್ಲೇ ಮಾಡಿದ.
ನಿನ್ನೆ ಬಂದ ಅಪ್ಪ ಗೈರೋಡಿಜೈನ್ ಸೆಟ್ ತಂದಿದ್ದಾನೆ. ಇಪ್ಪತ್ತೈದು ವರ್ಷಕ್ಕೂ ಹಳೆಯದಾದ ಈ ಗಾಜಿನ ಪುಟ್ಟ ಉಪಕರಣಗಳು ಇನ್ನೂ ಹಾಗೆಯೇ ಇರುವುದು ನಿಜಕ್ಕೂ ಆಶ್ಚರ್ಯವೇ ಆಗಿತ್ತು. ಆದರೆ ಅದಕ್ಕೂ ಆಶ್ಚರ್ಯದ ವಿಷಯವೆಂದರೆ, ಈ ಗೈರೋಡಿಜೈನಿನ ಸೆಟ್ ಹಾಕಿಟ್ಟಿದ್ದ ಚರ್ಮದ ಪೌಚು! ಈ ಚರ್ಮದ ಸಂಚಿಗೆ ಕನಿಷ್ಟ ಎಪ್ಪತ್ತು ವರ್ಷವಾಗಿದೆ. ಅಜ್ಜಿ ತಾನೇ ನಿಂತು ಹೊಲಿಸಿ ಮಾಡಿಸಿದ ಸಂಚಿಯಂತೆ ಇದು. ಇದು ಅವಳ ವ್ಯಾಲೆಟ್ ಆಗಿತ್ತು! ಇದರಲ್ಲಿ ಅವಳು ಎರಡು-ಐದು-ಹತ್ತು ಪೈಸೆಗಳ ನಾಣ್ಯಗಳನ್ನು ಇಟ್ಟುಕೊಂಡಿರುತ್ತಿದ್ದಳು. ಆ ಪೈಸೆಗಳು ಬೆಲೆ ಕಳೆದುಕೊಳ್ಳುವಷ್ಟರಲ್ಲಿ ಅವಳ ಸಂಚಿಯೂ ಅಪ್‌ಗ್ರೇಡ್ ಆಗಿದ್ದರಿಂದ, ಸಾಗರದ ಜಾತ್ರೆಯಿಂದ ಅಪ್ಪ ತಂದಿದ್ದ ಈ ಗೈರೋಡಿಜೈನಿನ ಸೆಟ್ಟನ್ನು ನಾನು ಈ ಪೌಚಿನಲ್ಲಿ ಹಾಕಿಟ್ಟುಕೊಂಡಿದ್ದೆ. ಹಾಗೆ ಅಂದು ಹಾಕಿಟ್ಟಿದ್ದು ಇನ್ನೂ ಹಾಗೆಯೇ ಇರುವುದು, ಮತ್ತು ಆ ಸಂಚಿ ಸಹ ಹಾಳಾಗದೇ ಇರುವುದರ ಕಥೆಯನ್ನು ನಾನೂ-ಅಪ್ಪನೂ ಹೆಂಡತಿಗೆ ಹೇಳಿದೆವು. ಅವಳೂ ಆಶ್ಚರ್ಯ ಪಟ್ಟಳು.

ಆದರೆ ನಮ್ಮ ಈ ಸುಮಧುರ ನೆನಪಿನ ಕಲಾಪ ಹನ್ನೊಂದು ತಿಂಗಳ ಮಗಳಿಗೆ ಹೇಗೆ ಅರ್ಥವಾಗಬೇಕು? ತಾನು ನೋಡದ ಮುತ್ತಜ್ಜಿಯ ಕಾಲದ ಪೌಚು ಅವಳಿಗೆ ಹೊಸ ಆಟದ ಸಾಮಾನಿನಂತೆ ಕಂಡು, ಅದನ್ನು ಹಿಡಿಯಲೆಂದು ಆ ಮೂಲೆಯಿಂದ ಓಡಿ ಬರುವಾಗ, ಆ ಪೌಚನ್ನೂ ಅದರೊಳಗಿದ್ದ ಗಾಜಿನ ಉಪಕರಣಗಳನ್ನೂ ರಕ್ಷಿಸಿಕೊಳ್ಳಲು ನಾನೂ-ಅಪ್ಪನೂ ಒಮ್ಮೆಲೇ ಓಡಿ ಅದನ್ನು ಹಿಡಿದುಕೊಂಡಾಗ, ಸುಕ್ಕು ಕೈಗಳ ಅಜ್ಜಿಯನ್ನೇ ಸ್ಪರ್ಶಿಸಿದಂತೆ ಎನಿಸಿತು.

1 comment:

sunaath said...

ನಿಮ್ಮ ‘ಗೈರೊಡಿಜೈನ್’ ನಾನೂ ಒಮ್ಮೆ ಕೊಂಡುಕೊಂಡಿದ್ದ ಉಪಕರಣವನ್ನು ನೆನಪಿಸಿತು. ಮನಕ್ಕೆ ಖುಶಿಯಾಯಿತು. ‘ಈಗ ಎಲ್ಲಿದೆ ಆ ಉಪಕರಣ?’ ಎಂದು ಕೇಳಬೇಡಿ, ಸುಶ್ರುತ. ಈಗ ನನ್ನ ಹೆಂಡತಿಯ ಸುತ್ತ ಗರಗರ ತಿರುಗುವ ನಾನೇ ಒಂದು ಗೈರೋ ಆಗಿದ್ದೇನೆ!