ಮತ್ತೊಮ್ಮೆ ಮುಖ್ಯಾಂಶಗಳನ್ನು ಹೇಳಿದಮೇಲೆ
ವಾರ್ತೆ ಮುಗಿದುಹೋಗುತ್ತದೆ
ಹಾಗಂತ ಭೂಮಿ ತಿರುಗುವುದು ನಿಲ್ಲುವುದಿಲ್ಲ
ತನ್ನ ಪರಿಕ್ರಮದಲ್ಲಿ ಸೂರ್ಯನನ್ನು ಸುತ್ತುತ್ತಾ
ಬಿಸಿಲಿಗೋ ಮಳೆಗೋ ಮೈಯೊಡ್ಡುತ್ತಾ
ತಿರುಗುತ್ತಲೇ ಇರುತ್ತದೆ ಅನವರತ
ಹಸಿದ ತುಂಬಿ ತುಂಬಿದ ಹೂವನರಸಿ ಹಾರುತ್ತೆ
ಸಿಗ್ನಲ್ಲಿನ ಕೆಂಪುದೀಪ ವಾಹನಗಳ ನಿಲ್ಲಿಸುತ್ತೆ
ಲಕ್ಷ್ಮಣರೇಖೆಯ ಕಂಡು ಇರುವೆ ದಾರಿ ಬದಲಿಸುತ್ತೆ
ಕಂಕುಳ ಕೂದಲ ಒದ್ದೆ ಮಾಡುತ್ತೆ ಚಿಮ್ಮಿದತ್ತರು
ಹೀಗೆಲ್ಲ ಇದ್ದಾಗ್ಯೂ ಇವಳ್ಯಾಕೆ ನಿಂತಿದಾಳೆ ಹೀಗೆ
ಸಂದಣಿಯ ಜನರ ನಗುವಿಗೂ ಅಲುಗಾಡದೇ
ಮಾಸಲು ಅಂಗಿ ಹರಿದಿದೆ ಅಲ್ಲಲ್ಲಿ
ಲಾಲ್ಗಂಧ ತೀಡಿದೆ ಲಲಾಟದಲ್ಲಿ
ಬಿರಿಬಿರಿ ಕಣ್ಣುಗಳು ಒಣಗಿದ ತುಟಿಗಳು
ಹಾಯುತ್ತಿವೆ ಸಾವಿರ ಕಾಲುಗಳು ಪಕ್ಕದಲ್ಲೇ
ಗೊತ್ತಿರುವ ಗಮ್ಯದೆಡೆಗೆ ಬಿಡುಬೀಸಿನಲ್ಲಿ
ಪಕ್ಕದ ಅಂಗಡಿಯ ಬೋರ್ಡಿನ ಹಾಳಾದ ದೀಪ
ಇವಳ ಮೈಮೇಲೆ ಪತರಗುಟ್ಟುತ್ತಿದೆ ಬಿಳಿಬಿಳಿ
ಇಳಿಬಿಟ್ಟ ಎಡಗೈ ತರ್ಪಣಮುದ್ರೆಯಲ್ಲಿದೆ
ಎತ್ತಿ ಹಿಡಿದಿದ್ದಾಳೆ ಬಲಗೈ ಆಶೀರ್ವದಿಸುವಂತೆ
ಅದರಿಂದ ಉದುರುತ್ತಿವೆ ನಾಣ್ಯಗಳು
ಹೊಸವು ಹಳೆಯವು, ಹೊಳೆಯುತ್ತಿವೆ ಫಳಫಳ
ಎದುರು ನಿಂತು ದಿಟ್ಟಿಸಿದರೆ ಥೇಟು ಆ
ಕ್ಯಾಲೆಂಡರಿನ ಲಕ್ಷ್ಮಿಯೇ ಪ್ರತ್ಯಕ್ಷವಾದಂತಿದೆ
ಪುಟ್ಟ ಬಾಲಕಿಯ ರೂಪದಲ್ಲಿ
ಯಾರೂ ಕೆಮರಾ ತರಬೇಡಿ, ದಮ್ಮಯ್ಯ
ಇದು ಬ್ರೇಕಿಂಗ್ ನ್ಯೂಸ್ ಐಟಮ್ ಅಲ್ಲ
ಮುಖ್ಯಾಂಶವಂತೂ ಆಗುವುದಿಲ್ಲ
ಇಲ್ಲ ಇಲ್ಲ, ಈಕೆ ಬೈಟ್ ನೀಡುವುದಿಲ್ಲ
ಕವರ್ ಮಾಡಲು ಎಷ್ಟೆಲ್ಲ ಸುದ್ದಿಗಳಿವೆ ಸುತ್ತ
ಹೊರಡಿ ನೀವು ನಿಮ್ಮ ಮೈಕು ತೆಗೆದುಕೊಂಡು
ನಾನೀಕೆಗೆ ಸ್ನಾನ ಮಾಡಿಸುವೆ,
ಬೇಕಿದ್ದರೆ ನೀವು ನೀರು ಹೊಯ್ಯಿರಿ
ಹೊಸ ಅಂಗಿ ತೊಡಿಸುವೆ,
ಬೇಕಿದ್ದರೆ ನೀವು ಬಳೆ ಇಡಿಸಿರಿ
ಎಣ್ಣೆ ಹಾಕಿ ತಲೆ ಬಾಚುವೆ,
ಬೇಕಿದ್ದರೆ ನೀವು ಸಿಕ್ಕು ಬಿಡಿಸಿರಿ
ಮೊಸರನ್ನವನ್ನು ತುತ್ತು ಮಾಡಿ ತಿನಿಸುವೆ,
ಬೇಕಿದ್ದರೆ ನೀವು ಹಾಲು ಕುಡಿಸಿರಿ
ಕಣ್ಣಾಮುಚ್ಚಾಲೆ ಆಟವಾಡುವೆ,
ಬೇಕಿದ್ದರೆ ನೀವೂ ಬಚ್ಚಿಟ್ಟುಕೊಳ್ಳಿರಿ
ಯಾವುದಕ್ಕೂ ಸ್ವಲ್ಪ ಇಕೋ ಈಕೆಯ ಕೈ ಹಿಡಿದುಕೊಳ್ಳಿ
ಆ ಆಟೋ ನಿಲ್ಲಿಸಿ, ಅದರಲ್ಲಿ ಇವಳನ್ನು ಕೂರಿಸಿಕೊಡಿ
ಓಹ್, ಎಷ್ಟು ಜನ ಸಹಾಯಕ್ಕೆ ಬರ್ತಿದೀರಿ..
ನಂಗೆ ಗೊತ್ತಿತ್ತು ಸಾರ್, ನೀವು ಬರ್ತೀರಿ ಅಂತ
ಒಳ್ಳೆಯತನ ಸತ್ತು ಹೋಗಿಲ್ಲ ಸಾರ್
ನಮ್ಮೆಲ್ಲರ ಕಣ್ಣಲ್ಲೂ ನೀರಿದ್ದೇ ಇದೆ ಸಾರ್.
2 comments:
ಹೌದು,‘ನಮ್ಮೆಲ್ಲರ ಕಣ್ಣಲ್ಲೂ ನೀರಿದ್ದೇ ಇದೆ.’
Nija
Post a Comment