Tuesday, May 28, 2019

ಒದ್ದೆ ಆಸೆಗಳು



ಯಾಕೆ ಇತ್ತೀಚಿಗೆ ಕವಿತೆ ಬರೆದಿಲ್ಲ
ಅಂತ್ಯಾರೋ ಕೇಳಿದರು
ಅವರೋ ಭಯಂಕರ ಕಾವ್ಯಾಸಕ್ತರು
ಅಯ್ಯೋ ನನ್ನ ಕವಿತೆ ಯಾರಿಗೆ ಬೇಕು ಬಿಡಿ
ಗೆಳೆಯರೆಲ್ಲ ದೇಶ ಚುನಾವಣೆ ರಾಜಕೀಯ
ಪಕ್ಷ ಭವಿಷ್ಯ ಸೋಲು ಗೆಲುವುಗಳ ಬಗ್ಗೆ
ಅತಿ ಸೀರಿಯಸ್ಸಾಗಿ ಚರ್ಚಿಸುತ್ತಿರುವಾಗ
ನಾನು ಸಿಲ್ಲಿಯಾಗಿ ಕವನ ಬರೆಯುವುದೇ
ಎಂದು ತಪ್ಪಿಸಿಕೊಂಡೆ

ಆದರೆ ಈ ಗಾಳಿಮಳೆಗೆ ಮೇಫ್ಲವರುಗಳೆಲ್ಲ ಉದುರಿ
ಮರಗಳು ಬೋಳಾದುದನ್ನು ಯಾರಾದರೂ ಬರೆಯಬೇಕಲ್ಲ?
ಪುಟ್ಟಪೋರ ನುಣುಪು ಮಣ್ಣಿನಲ್ಲಿನ ಸಣ್ಣ ಕುಣಿಗೆ ಬೆರಳು ಹಾಕಿ
ಬೆದಕಿದಾಗ ಹೊರಬಂದ ಗುಬ್ಬಚ್ಚಿ ಹುಳುವ ನೋಡಿ ಚಕಿತನಾದುದನ್ನು?
ಗಿರಾಕಿಯಿಲ್ಲದ ಹೊತ್ತಲ್ಲಿ ಕಲ್ಲಂಗಡಿ ಹಣ್ಣಿನಂಗಡಿಯವ
ಒಂದು ಸಿಹಿಗೆಂಪು ಹೋಳನು ತಾನೇ ಚಂದ್ರಿಕೆಯೆತ್ತಿ ತಿಂದುದನು?
ಮೈಯೆಲ್ಲ ಒದ್ದೆ ಮಾಡಿಕೊಂಡಿರುವ ಮುದ್ದುಮಗಳು
ಐಸ್‌ಕ್ಯಾಂಡಿಯೊಳಗಿನ ಕಡ್ಡಿಯನ್ನು ಅದರ ಬೀಜ ಎಂದುದನು?

ಹಾಗೂ ಬರೆಯದಿದ್ದರೆ ಏನಾಗುವುದು ಮಹಾ?
ಮತ್ತೊಂದು ಮೇಗೆ ಮರ ಹೂ ಬಿಡುವುದು
ಅಮ್ಮನ 'ಹೋಂವರ್ಕ್' ಕರೆಗೆ ಹೆದರಿ ಪುಟ್ಟ ಒಳಗೋಡುವನು
ಕಲ್ಲಂಗಡಿಯ ಸೀಸನ್ನು ಮುಗಿದು ಮಾವು ಮೇಳೈಸುವುದು
'ಬೀಜವಲ್ಲ, ಅದು ಕಡ್ಡಿ' ಎಂದು ತಿಳಿಸಿ ಮಗಳ ಮುಗ್ಧತೆ ಕಳೆಯಬಹುದು

ಬರೆಯದಿದ್ದರೆ ಒಂದು ಕಾಗದ ಒಂದಿಷ್ಟು ಇಂಕು
ಇಲ್ಲವೇ ಭೂಮಿಯ ಯಾವುದೋ ಮೂಲೆಯಲ್ಲಿರುವ ಸರ್ವರಿನಲ್ಲಿ
ಒಂದಿಷ್ಟು ಸ್ಪೇಸು ಉಳಿಯಬಹುದು
ಜತೆಗೆ ನಿಮ್ಮ ಟೈಮೂ

ಆದರೂ ಒಂದು ಆಸೆ:
ಬರೆದರೆ-
ನೀವು ಬೀದಿಬದಿಯ ಆ ಮರದತ್ತ ಒಮ್ಮೆ ಕಣ್ಣು ಹಾಯಿಸಬಹುದು
ಪೋರ ತನ್ನ ಗೆಳೆಯರನೂ ಕರೆದು ವಿಸ್ಮಯವ ಹಂಚಬಹುದು
ಮಾವಿನ ಹಣ್ಣು ಕೊಳ್ಳುವಾಗ 'ನೀವು ತಿಂದ್ರಾ?' ಅಂತ
ಅಂಗಡಿಯವನನ್ನು ವಿಚಾರಿಸಬಹುದು
ನನ್ನ ಮಗಳ ನೆನೆದು ನಿಮ್ಮ ಮಗಳ ತಣ್ಣನೆ ಕೆನ್ನೆಗೆ ಮುತ್ತಿಡಬಹುದು

ಕನಿಷ್ಟ, ಸಂಜೆಮಳೆಯಲಿ ಒದ್ದೆಯಾಗಿ ಬರುವ ಇಂತಹ ಆಸೆಗಳನು
ಮತ್ಯಾರೋ ಪೊರೆಯಬಹುದು ಟವೆಲಿನಲ್ಲಿ ತಲೆಯೊರೆಸಿ.

No comments: