Thursday, June 20, 2019

ಕೊಡೆ ರಿಪೇರಿ


ಕಡಿದಿಟ್ಟ ಸೌದೆಗಳ ಸೂರಿನೊಳಗೆ ಸರಿದಾಗಿದೆ
ಇರುವೆಗಳು ಮೊಟ್ಟೆಗಳ ಸಮೇತ ಗೂಡು ಬದಲಾಯಿಸಿವೆ
ಜೇನುಗಳಿಗೆ ಬೇಕಾದಷ್ಟು ಮಧುಸಂಗ್ರಹ ಮುಗಿದಂತಿದೆ
ಹವಾಮಾನ ಇಲಾಖೆಯಲಿ ನಡೆದಿದೆ ಕೊನೇಕ್ಷಣದ ತಯಾರಿ
ಇನ್ನೇನು ಶುರುವಾಗಲಿರುವ ಪತ್ರಿಕಾಗೋಷ್ಠಿಯಲಿ ಘೋಷಿಸಲಾಗುತ್ತದೆ:
ಅಪ್ಪಳಿಸಿದೆ ಮುಂಗಾರು ಕರಾವಳಿಯ ತೀರ
ಇನ್ನೇನು ಬರಲಿದೆ ನಿಮ್ಮೂರಿನತ್ತ ಬೇಗ
ನೀವೀಗಲೇ ಓಡಿ ಹಿಡಿಯಿರೊಂದು ಸುರಕ್ಷಿತ ಜಾಗ

ದಟ್ಟೈಸುತ್ತಿರುವ ಮೋಡಗಳ ನೋಡುತ್ತ
ಬೆಳಗಿನಿಂದ ಒಂದೇ ಯೋಚನೆ:
ಅವ ಎತ್ತ ಹೋದ?
ಮಳೆಗಾಲದ ಶುರುಗಾಲಕೆ ಬರಬೇಕಿತ್ತಲ್ಲವೇ

ನಡುಮನೆಯ ನಾಗಂದಿಗೆಯಲಿದೆ ಆ ಕಪ್ಪು ಛತ್ರಿ
ಕತ್ತಲಲ್ಲಿ ಕತ್ತಲಾಗಿ ಇಷ್ಟುದ್ದ ಮೈಯ ಇಷ್ಟಕ್ಕೆ ಮುರುಟಿ
ಇದ್ದಲ್ಲೆ ಇದ್ದು ಮರಗಟ್ಟಿದ ಕಡ್ಡಿಯೆಲುಗುಗಳು
ಇಟ್ಟಲ್ಲೆ ಇಟ್ಟು ಲಡ್ಡಾದ ಮಾಸಲು ಬಟ್ಟೆ
ಮೂಲೆಗುಂಪಾಗಿದ್ದ ಹಿಡಿಗೈ ಬಂಟನಿಗೀಗ
ತಿಂಗಳುಗಳ ಅಜ್ಞಾತ ಮುಗಿಸುವ ಸಮಯ

ಆದರವ ಎಲ್ಲಿ ಹೋದ?
ಬಟನು ಒತ್ತಿ ಬಿಚ್ಚಿದರೆ ಕೈಗೆಟುಕುವ ಆಕಾಶ
ಕಮ್ಮನೆ ಪರಿಮಳದಲಿ ಹಳೆಯ ಮಳೆಗಾಲಗಳ ನೆನಪು
ಮಳೆಗೆಂದು ತಂದದ್ದು ಬಿಸಿಲಿಗೂ ಆದದ್ದು
ಚಂದದ ಫೋಟೋಪೋಸಿಗೂ ನೆರವಾದದ್ದು
ಮರೆತು ಬಿಟ್ಟುಹೋದ ದಿನವೇ ಮಳೆ ಬಂದದ್ದು

ಈಗ ಒಂದು ಕಡ್ಡಿ ಬಿಟ್ಟುಕೊಂಡಿದೆ
ಅವನು ಬರದೆ ವಿಧಿಯಿಲ್ಲ ಮುಂದಡಿಯಿಡಲಿಲ್ಲ
ವರುಷಕ್ಕೊಮ್ಮೆ ಬರುವವ
ಉಳಿದ ಋತುಗಳಲಿ ಏನು ಮಾಡುವ?
ವಲಸೆ ಹಕ್ಕಿಗಳಂತೆ ಮಳೆ ಬೀಳುವ ದೇಶಗಳ
ಹುಡುಕಿ ಹೊರಡುವನೆ?
ಪುಟ್ಟ ಪೆಟ್ಟಿಗೆಯ ತೂಗುತ್ತ ಬೀದಿಯಲಿ ನಡೆಯುವನೆ?
ಅಲ್ಲೂ ತನ್ನ ಏರುಕಂಠದಲಿ
ಕೊಡೆ ರಿಪೇರೀ ಎಂದು ಕೂಗುವನೆ?

ಕೇಳಬೇಕಿದೆ ಪ್ರಶ್ನೆಗಳ ಕೂರಿಸಿಕೊಂಡು
ಅವನ ಪೆಟ್ಟಿಗೆಯೊಳಗೆ ಹೇಳದ ಅದೆಷ್ಟು ಕತೆಗಳಿರಬಹುದು
ಎಂದೂ ಹೊಂದಿಸಲಾಗದ ಅದೆಷ್ಟು ಕಡ್ಡಿಗಳಿರಬಹುದು
ಸಣ್ಣ ಸುತ್ತಿಗೆ ಸಣ್ಣ ಉಳಿ ಸಣ್ಣ ಸೂಜಿ
ಎಷ್ಟು ಮಳೆಹನಿಗಳ ತಾಕಿ ಬಂದಿರಬಹುದು
ಎಷ್ಟು ಅಜ್ಜಂದಿರಿಗೆ ಊರುಗೋಲಾಗಿರಬಹುದು
ಇವನು ರಿಪೇರಿ ಮಾಡಿಕೊಟ್ಟ ಕೊಡೆಯ ಹಿಡಿ

ಒಮ್ಮೆ ಸವರಿ ನೋಡಬೇಕಿದೆ ಅವನ ಒರಟು ಕೈ
ನಿಮ್ಮ ಕಡೆ ಬಂದರೆ ದಯವಿಟ್ಟು ಕಳುಹಿಸಿಕೊಡಿ.