Tuesday, February 02, 2021

ದಿಂಬುಗಳು

ಉಚಿತ ಸಲಹೆ‌ಯೊಂದನ್ನು ಕೊಡುತ್ತೇನೆ
ಅನ್ಯಥಾ ಭಾವಿಸಬೇಡಿ
ನೀವು ಯಾವತ್ತಾದರೂ ಹಾಸಿಗೆ ಕೊಳ್ಳಲು ಹೋದಾಗ
ಹಾಸಿಗೆಯಿದ್ದಷ್ಟೇ ದಿಂಬು ಕೊಡಿ ಎಂದು ಹೇಳಬೇಡಿ;
ಖರ್ಚಿನ ಜೊತೆಗೆ ಖರ್ಚು,
ಎರಡು ದಿಂಬುಗಳನ್ನು ಎಕ್ಸ್‌ಟ್ರಾ ಕೊಳ್ಳಿ

ದಿಂಬುಗಳು ಹೆಚ್ಚಿದ್ದಷ್ಟೂ ಒಳ್ಳೆಯದು
ಯಾಕೇಂತ ಹೇಳ್ತೇನೆ ಕೇಳಿ

ಮನೆಗೆ ನೆಂಟರು ಬಂದ ಮಧ್ಯಾಹ್ನ
ಜಗಲಿಯಲ್ಲೊಂದು ಕಂಬಳಿ ಹಾಸಿ
ಈ ಎಕ್ಸ್‌ಟ್ರಾ ದಿಂಬುಗಳನ್ನು ಅವರಿಗೆ ಕೊಡಿ
ಅವರು ಹಾಗೇ ಅಡ್ಡಾಗುವರು

ಸಂಜೆಯ ಹೊತ್ತಿಗೆ ಆ ನೆಂಟರ ಮಕ್ಕಳು
ನಿಮ್ಮ ಮಕ್ಕಳ ಜೊತೆ ಸೇರಿ
ಅದೇ ದಿಂಬುಗಳನ್ನು ಒಂದರ ಮೇಲೊಂದು ಪೇರಿಸಿ
ಆಟವಾಡಿ ನಿಮ್ಮ ಮನರಂಜಿಸುವರು

ಒಂದು ದಿಂಬಿನ ಎತ್ತರ ಸಾಲದೆಂದ ಅಜ್ಜಿಗೆ
ಶುಭಕಾರ್ಯದ ಮನೆಯ ಅಂಗಳಕ್ಕೆ
ಇಸ್ಪೀಟು ಮಂಡಲದ ಭೂಪರು ಒರಗಲಿಕ್ಕೆ
ಜೋಮು ಬಂದ ಅಜ್ಜನ ಕೈಯಡಿಗೆ ಇಡಲಿಕ್ಕೆ
ನೀವು ಇದೇ ದಿಂಬು ಬಳಸಬಹುದು

ಸಂಗಾತಿಯಿಲ್ಲದ ರಾತ್ರಿ ದಿಂಬನ್ನಾಲಂಗಿಸಿ
ಮಲಗಿ ವಿರಹವ ಕಳೆಯಬಹುದು
ಎಷ್ಟತ್ತರೂ ಮುಗಿಯದ ದುಃಖವ
ದಿಂಬಿನ ಮೈಯೊದ್ದೆ ಮಾಡಿ ತೀರಿಸಿಕೊಳ್ಳಬಹುದು
ಈ ಜಗತ್ತಲ್ಲಿ ಕರ್ಚೀಫು ಬಿಟ್ಟರೆ
ಅಷ್ಟೊಂದು ಕಣ್ಣೀರು ಕುಡಿದ ವಸ್ತ್ರ
ದಿಂಬಿನ ಕವರು ಮಾತ್ರ
ಅದೆಷ್ಟೋ ಜನರ ಉಸಿರು ತುಂಬಿದ
ದಿಂಬುಗಳ ಬಲದ ಮೇಲೆಯೇ
ರೈಲೊಂದು ಸಾವಿರ ಮೈಲಿ ಸಾಗುತ್ತದೆ

ದುಡ್ಡು ಉಳಿಸಿ ಏನು ಮಾಡುವಿರಿ
ಖರ್ಚಿನ ಜೊತೆಗೆ ಖರ್ಚು
ಎರಡು ದಿಂಬು ಎಕ್ಸ್‌ಟ್ರಾ ಕೊಳ್ಳಿ.

1 comment:

Narayan Bhat said...

ತುಂಬಾ ಚೆನ್ನಾಗಿದೆ