Monday, February 08, 2021

ಆಲೆಮನೆ ಎಂಬ ಸಂಸ್ಕೃತಿ ಶಿಬಿರ

ಚಳಿಗಾಲ ಮುಗಿದು ಚುರುಕು ಬಿಸಿಲಿನ ದಿನಗಳು ಶುರುವಾಯಿತು ಎನ್ನುವಾಗ ಮಲೆನಾಡಿನಲ್ಲಿ ಒಂದೊಂದಾಗಿ ಆಲೆಮನೆಗಳು ತಲೆಯೆತ್ತತೊಡಗುತ್ತವೆ. ಸಾಲಾಗಿ ಒತ್ತೊತ್ತಾಗಿ, ರಸದುಂಬಿ ಪೊಗದಸ್ತಾಗಿ, ಘನಗಂಭೀರವಾಗಿ ನೆಟ್ಟಗೆ ಬೆಳೆದು, ಕೆಂಪು-ಕಪ್ಪು ಬಣ್ಣಗಳಿಂದ ಕಂಗೊಳಿಸುತ್ತಿರುವ ರಸ್ತೆ ಬದಿಯ ಕಬ್ಬಿನ ಗದ್ದೆಯಿಂದ ಬರುವ ಒಣಗಿದ ಪೈರಿನ ಸರಬರ ಸದ್ದು ದಾರಿಹೋಕರಿಗೆ ಇನ್ನೇನು ಇಲ್ಲಿ ಆಲೆಮನೆ ಶುರುವಾಗುತ್ತದೆ ಎಂಬ ಸೂಚನೆ ಕೊಡುತ್ತದೆ. ಗಾಣ, ಕಣೆ, ಕೊಪ್ಪರಿಗೆ ಇತ್ಯಾದಿಗಳನ್ನು ಹೊತ್ತ ಎತ್ತಿನ ಗಾಡಿ ಟ್ರಾಕ್ಟರುಗಳು ಊರ ರಸ್ತೆಯಲ್ಲಿ ಮೆರವಣಿಗೆ ಹೊರಡುತ್ತವೆ. ಕಬ್ಬು ಬೆಳೆದ ರೈತರು ಆಗಲೇ ಗದ್ದೆಯ ಅಂಕಣವೊಂದನ್ನು ಸಪಾಟು ಮಾಡಿ ಶುಭ್ರಗೊಳಿಸಿ, ಮೂಲೆಯಲ್ಲೊಂದು ಚಪ್ಪರ ಹಾಕಿ, ಸಂಭ್ರಮವನ್ನು ಬರಮಾಡಿಕೊಳ್ಳಲು ತಯಾರಾಗುತ್ತಾರೆ. ಬೆಲ್ಲ ಕಾಯಿಸಲು ಬಳಸುವ ಬೃಹತ್ ಕೊಪ್ಪರಿಗೆಯನ್ನಿಡಲು ಬೇಕಾದ ಒಲೆ ಹೂಡಲು ಮತ್ತೊಂದು ಮೂಲೆಯಲ್ಲಿ ನೆಲವನ್ನು ಅಗೆದು ದೊಡ್ಡದೊಡ್ಡ ಕುಂಟೆಗಳು ಹಿಡಿಯುವಂತಹ ದೊರಗನ್ನು ಸಿದ್ಧಪಡಿಸುತ್ತಾರೆ. ಗಾಣ ಎಲ್ಲಿ ಹೂಡಬೇಕು, ಕೋಣಗಳು ಸಿದ್ಧವಾಗಿವೆಯೇ, ಕಬ್ಬಿನ ಹಾಲು ಸಂಗ್ರಹಿಸಲು ಬಾನಿಗಳ ವ್ಯವಸ್ಥೆ, ಬೆಲ್ಲ ಸುರಿಯಲು ಬೇಕಾದ ಮರಿಗೆ, ತಡರಾತ್ರಿಯವರೆಗೆ ಕಬ್ಬು ಅರೆಯಲು ಜನ, ಇತ್ಯಾದಿಗಳ ಉಸ್ತುವಾರಿಯನ್ನು ಅನುಭವಸ್ಥರು ನೋಡುತ್ತಿರುತ್ತಾರೆ. ಯಾರ ಮನೆಯ ಆಲೆ ಮೊದಲು ಆಗಬೇಕು, ನಂತರ ಯಾರ ಬಾರಿ, ಬಾಡಿಗೆಗೆ ತಂದ ಕಣೆ ಮೊದಲಿಗೆ ಎಲ್ಲಿ ಹೂಡಬೇಕು ಇತ್ಯಾದಿಗಳನ್ನೆಲ್ಲ ಊರಿನ ಕಬ್ಬು ಬೆಳೆಗಾರರೆಲ್ಲ ಒಟ್ಟಿಗೆ ಕೂತು ತೀರ್ಮಾನಿಸಿ, ಒಂದು ಶುಭ ಮುಹೂರ್ತದಲ್ಲಿ ಕಣೆ ತರಿಸಿ ಹೂಡಿಯೇಬಿಡುತ್ತಾರೆ.
 
ಈಗ ಇಡೀ ಊರಿಗೇ ಆಲೆಮನೆಯ ಸಂಭ್ರಮ. ಸೈಕಲ್ಲೇರಿ ಗದ್ದೆಯ ಕಡೆ ಹೊರಟ ಹುಡುಗರ ದಂಡು, ಕಬ್ಬಿನ ಹಾಲು ತರಲು ಉಗ್ಗ ಹಿಡಿದು ಹೊರಟ ಶಾಂತಕ್ಕ, ಬಿಸಿಬೆಲ್ಲ ತಿನ್ನುವ ಆಸೆಯಿಂದ ಬೀಡಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಪಂಚೆ ಏರಿಸಿ ಹೊರಟ ಕಿಟ್ಟೂಭಟ್ರು, ಎರಡು ಡಬ್ಬಿ ಒಳ್ಳೇ ಬೆಲ್ಲ ಬುಕ್ ಮಾಡಿ ಬರಬೇಕೆಂದು ಹೊರಟ ಕೆಳಗಿನಮನೆ ಶಂಕರ... ಹೀಗೆ ಎಲ್ಲರೂ ಆಲೆಮನೆಯೆಡೆ ದೌಡಾಯಿಸುತ್ತಾರೆ. ರಸ್ತೆಯಿಂದ ಅನತಿದೂರದಲ್ಲಿ ಆಗಲೇ ಒಲೆ ಹೂಡಿ, ಬೆಂಕಿ ಹೊತ್ತಿಸಿದ್ದಾಗಿ ಎದ್ದ ಹೊಗೆ ಆಲೆಮನೆ ಇಲ್ಲೇ ಇದೆ ಅಂತ ಗುರುತು ಹೇಳುತ್ತಿದೆ. ರಸ್ತೆ ಬದಿ ಬೇಲಿಯ ಸಣ್ಣ ದಣಪೆ ದಾಟಿ ಬದುವಿನ ಮೇಲೆ ನಡೆದು ಜೋನಿಬೆಲ್ಲದ ಕಂಪಿನ ಜಾಡು ಹಿಡಿದು ಆಲೆಮನೆಯೆಡೆ ನಡೆಯುತ್ತಿದ್ದರೆ ಅಕೋ ಆಗಲೇ ಕೇಳಿಬರುತ್ತಿದೆ ಕೋಣ ಹೊಡೆಯುವವನ ರಾಗಬದ್ಧ ಹಾಡು: “ನೆಡೀ ಕ್ವಾಣಾ... ಓಓಓ... ಅರೀ ಕಣಾ.. ಓಓಓ.. ನೆಡೀ ಬ್ಯಾಗಾ...  ಹೈ.. ಹ್ವಾಯ್.”  
 
ಆಲೆಮನೆಯಲ್ಲಾಗಲೇ ತುರುಸಿನ ಚಟುವಟಿಕೆಗಳು ಶುರುವಾಗಿವೆ. ಜನವೆಲ್ಲ ಲಗುಬಗೆಯಿಂದ ಓಡಾಡುತ್ತಿದ್ದಾರೆ. ದೂರದಲ್ಲಿ ಕಾಣುವ ಗದ್ದೆಯಲ್ಲಿ ಕಬ್ಬಿನ ಕಟಾವು ನಡೆಯುತ್ತಿದೆ. ಕಡಿದ ಕಬ್ಬನ್ನು ಹೊರೆ ಕಟ್ಟಿ ಹೊತ್ತು ತಂದು ಆಲೆಮನೆಯ ಬಳಿ ರಾಶಿ ಹಾಕುತ್ತಿದ್ದಾರೆ.  ಕಣೆಯ ಬಳಿ ಕೂತ ಯುವಕನೊಬ್ಬ ಒಳ್ಳೊಳ್ಳೆಯ ಕಬ್ಬುಗಳನ್ನು ರಾಶಿಯಿಂದ ಎಳೆದೆಳೆದು ಗಾಣಕ್ಕೆ ಕೊಡುತ್ತಿದ್ದಾನೆ. ಮತ್ತೊಬ್ಬ ಆ ಕಡೆ ಸಂಗ್ರಹವಾಗುತ್ತಿರುವ ಚರಟವನ್ನು ಬುಟ್ಟಿಯಲ್ಲಿ ತುಂಬಿಕೊಂಡು ಗದ್ದೆಯ ಮತ್ತೊಂದೆಡೆ ಸುರಿಯುತ್ತಿದ್ದಾನೆ. ಯಂತ್ರದಿಂದ ಹೊರಬಿದ್ದ ಕಬ್ಬಿನರಸ ಪೈಪಿನಲ್ಲಿ ಸಾಗಿ ಸ್ವಲ್ಪ ದೂರದಲ್ಲಿರುವ ಬಾನಿಗೆ ಬೀಳುತ್ತಿದೆ. ಆ ಬಾನಿಗೆ ಒಂದು ಸಾಟಿಪಂಚೆಯನ್ನು ಜರಡಿಯಂತೆ ಮುಚ್ಚಲಾಗಿದೆ. ಮತ್ತೊಂದೆಡೆ ಹೊತ್ತಿ ಉರಿಯುತ್ತಿರುವ ಬೃಹತ್ ಒಲೆಯಿಂದ ಭಾರೀ ಶಾಕ ಹೊಮ್ಮುತ್ತಿದೆ.  ಮಕ್ಳು-ಮರೀನ ದೂರ ಕರ್ಕಂಡ್ ಹೋಗೀ.. ಒಲೆ ಹತ್ರ ಬರ್ಬೇಡೀ ಅಂತ ಹಿರಿಯರು ಎಚ್ಚರಿಸುತ್ತಿದ್ದಾರೆ.  ಭಾರದ ಕೊಪ್ಪರಿಗೆಯ ಹಿಡಿಕೈಗಳಿಗೆ ಎರಡು ಗಟ್ಟಿ ಬಿದಿರಿನಗಳ ತೂರಿಸಿ, ಆ ಗಳದ ಸಹಾಯದಿಂದ ನಾಲ್ಕು ಜನ ಕೊಪ್ಪರಿಗೆಯನ್ನು ತಂದು ಒಲೆಯ ಮೇಲೆ ಇಡುತ್ತಿದ್ದಾರೆ. ಹಾಗೆ ಇಟ್ಟ ಕೊಪ್ಪರಿಗೆಗೆ ಬಾನಿಯಲ್ಲಿ ಸಂಗ್ರಹವಾದ ಕಬ್ಬಿನ ಹಾಲನ್ನು ತಂದು ಸುರಿಯುತ್ತಿದ್ದಾರೆ. ಮತ್ಯಾರೋ ಊದ್ದದೊಂದು ಕೋಲಿನಿಂದ ಒಲೆಯ ಬೆಂಕಿಯನ್ನು ಸರಿ ಮಾಡುತ್ತಿದ್ದಾರೆ. ಕೆನ್ನಾಲಿಗೆ ಚಾಚುತ್ತ ನಿಗಿನಿಗಿ ಉರಿಯುತ್ತಿರುವ ಬೆಂಕಿಯ ಕಾವಿಗೆ ಕಬ್ಬಿನ ಹಾಲು ಕೊತಕೊತ ಕುದಿಯುತ್ತಿದೆ. ಇನ್ನೊಬ್ಬರು ಉದ್ದ ಹಿಡಿಕೆಯ ಜರಡಿ ಬಳಸಿ ಕುದಿವ ಹಾಲು ಹೊರಹಾಕುವ ಜೊಂಡು ತೆಗೆಯುತ್ತಿದ್ದಾರೆ. ಪಾಕ ಬಂತಾ ನೋಡ್ರೋ ಅಂತ ಮತ್ಯಾರೋ ಕೂಗುತ್ತಾರೆ. ಕಬ್ಬಿನ ರಸ ಕುದ್ದು ಪಾಕಗಟ್ಟಿದ ಹದ ತಿಳಿಯಲು ಅನುಭವಸ್ಥರೇ ಬೇಕು. ಎಳೇಪಾಕಕ್ಕೆ ಕೊಪ್ಪರಿಗೆಯನ್ನು ಒಲೆಯಿಂದ ಎತ್ತಿಬಿಟ್ಟರೆ, ಅಥವಾ ಏರುಪಾಕವಾಗಲು ಬಿಟ್ಟರೆ ಬೆಲ್ಲ ಚೆನ್ನಾಗಿ ಆಗುವುದಿಲ್ಲ. ವರ್ಷಪೂರ್ತಿ ಬಾಳಿಕೆ ಬರುವುದಿಲ್ಲ. ಒಂದೆರಡು ತಿಂಗಳಲ್ಲೇ ಹುಳಿ ಬಂದುಬಿಡುತ್ತದೆ. ಹೀಗಾಗಿ ಬಹಳ ವರ್ಷಗಳಿಂದ ಆಲೆ ಮಾಡಿ ಅನುಭವವಿರುವವರು ಕೊಪ್ಪರಿಗೆಯನ್ನು ಇಳಿಸುವ ಸಮಯಕ್ಕೆ ಹಾಜರಿರುತ್ತಾರೆ. ಅವರು ನೋಡಿ ಸಮ್ಮತಿ ಕೊಟ್ಟಮೇಲಷ್ಟೇ ಕೊಪ್ಪರಿಗೆಯನ್ನು ಒಲೆಯ ಮೇಲಿಂದ ಇಳಿಸುವುದು ಮತ್ತು ತಂದು ಮರಿಗೆಗೆ ಸುರಿಯುವುದು. 
 
ಮಲೆನಾಡಿನ ಆಲೆಮನೆಗೆ ಬಂದ ಅತಿಥಿಗಳಿಗೆ ಯಾವಾಗಲೂ ಭರ್ಜರಿ ಸ್ವಾಗತವೇ ದೊರಕುವುದು.  ಬಾನಿಗೆ ಬೀಳುತ್ತಿರುವ ಕಬ್ಬಿನ ಹಾಲನ್ನು ಚೊಂಬಿನಿಂದ ಹಿಡಿದು, ಲೋಟಕ್ಕೆ ಬಗ್ಗಿಸಿ ಎಷ್ಟ್ ಕುಡೀತಿರೋ ಕುಡೀರಿ ಅಂತ ಹಂಚುತ್ತಾರೆ ಯಜಮಾನರು.  ಬೇಕಿದ್ರೆ ನಿಂಬೆ ಹಣ್ಣು ಹಿಂಡಿಕೊಳ್ಳಿ ಅಂತ ಉಪಚಾರ ಮಾಡುತ್ತಾರೆ. ತಂಪಾದ ಸಿಹಿಯಾದ ತಾಜಾ ಹಾಲನ್ನು ಕತ್ತೇರಿಸಿ ಗಟಗಟ ಕುಡಿಯುತ್ತಿದ್ದರೆ ಎಷ್ಟು ಕುಡಿದೆವೆಂಬ ಲೆಕ್ಕವೇ ಸಿಗುವುದಿಲ್ಲ. ಹೊಟ್ಟೆ ತುಂಬಿ ಕುಲುಕುಲುಗುಟ್ಟುವಾಗ ಅವರು, “ಬಿಸಿ ಬೆಲ್ಲ ತಿನ್ತೀರೇನು?” ಅಂತ ಕೇಳುತ್ತ, ಚಪ್ಪರದಡಿಗೆ ಕರೆದೊಯ್ದು, ಅಲ್ಲಿ ಮರಿಗೆಯಲ್ಲಿ ಆಗಷ್ಟೆ ಬಗ್ಗಿಸಿ ಆರಲು ಇಟ್ಟಿರುವ ಬೆಲ್ಲವನ್ನು ಬಾಳೆಯೆಲೆಗೆ ಹಾಕಿ, ಸಣ್ಣದೊಂದು ಕಬ್ಬಿನ ಸಿಪ್ಪೆಯನ್ನು ಚಮಚದಂತೆ ಮಾಡಿಕೊಡುತ್ತಾರೆ. ಮುಳುಗುತ್ತಿರುವ ಸೂರ್ಯ, ತಣ್ಣಗೆ ಬೀಸುತ್ತಿರುವ ಸಂಜೆಗಾಳಿ, ಓಡಾಡುವ ಜನರ ಸರಬರ, ಕೋಣ ಹೊಡೆಯುವವನ ಹಾಡುಎಲ್ಲ ಬೆರೆತ ಈ ಸಾಯಂಕಾಲ ಗದ್ದೆಬಯಲಿನಲ್ಲಿ ನಿಂತು ಬಿಸಿಬೆಲ್ಲ ತಿನ್ನುತ್ತಿದ್ದರೆ, ಈ ರುಚಿಗೆ ಸರಿಸಮನಾದ್ದು ಮತ್ತೊಂದಿಲ್ಲವೇ ಇಲ್ಲ ಎನಿಸಿಬಿಡುತ್ತದೆ. ಆಲೆಮನೆಯಿಂದ ವಾಪಸು ಬರುವಾಗ ಒಂದಷ್ಟು ಬೆಳೆದ ಕಬ್ಬುಗಳನ್ನು ಸೈಕಲ್ಲಿಗೆ ಕಟ್ಟಿಕೊಂಡು ಬಂದು ಮನೆಯಲ್ಲಿ ಎರಡ್ಮೂರು ದಿನ ಕಬ್ಬು ಸಿಗಿಯುವ ಹಬ್ಬ ಮಾಡುತ್ತವೆ ಮಕ್ಕಳು.
 
ಆಲೆಮನೆಯ ರೀತಿ-ರಿವಾಜುಗಳು ಇತ್ತೀಚಿನ ವರ್ಷಗಳಲ್ಲಿ ಬಹಳವೇ ಬದಲಾಗಿವೆ. ಕಬ್ಬು ಬೆಳೆಯುವುದು ಬೆಲ್ಲ ಮಾಡಿ ಮಾರುವುದು ಸಣ್ಣ ಜಮೀನುದಾರರಿಗೆ ಲಾಭದಾಯಕ ಉದ್ದಿಮೆಯೇನು ಅಲ್ಲ. ಸಾಮಾನ್ಯವಾಗಿ ಅವರೆಲ್ಲ ಗದ್ದೆಯ ಒಂದು ಭಾಗದಲ್ಲಿ ಕಬ್ಬು ಬೆಳೆದು ತಮ್ಮ ಮನೆಗೆ, ಅಕ್ಕ-ಪಕ್ಕದ ಮನೆಯವರಿಗೆ, ನೆಂಟರಿಷ್ಟರಿಗೆ ಆಗುವಷ್ಟು ಮಾತ್ರ ಬೆಲ್ಲ ಮಾಡಿಕೊಂಡು ಸುಮ್ಮನಾಗುತ್ತಾರೆ. ಕಬ್ಬಿನ ಬೆಳೆಗೆ ಬರುವ ರೋಗಗಳು, ಕಾಡುಪ್ರಾಣಿಗಳ ಕಾಟ, ಆಲೆಯ ಕಣೆಯ ಬಾಡಿಗೆ, ದುಬಾರಿ ಗುತ್ತಿಗೆದಾರರು, ಅಸ್ಥಿರವಾದ ಬೆಲ್ಲದ ಬೆಲೆ... ಇತ್ಯಾದಿ ಸಮಸ್ಯೆಗಳಿಂದ ಬೆಳೆಗಾರರು ಬೇಸತ್ತಿದ್ದಾರೆ. ಅಲ್ಲದೇ ಗಾಣ ಕಟ್ಟಿ ಕೋಣಗಳನ್ನು ಬಳಸಿ ಮಾಡುವ ಆಲೆಮನೆಗಳ ಸಂಖ್ಯೆಯೂ ವಿರಳವಾಗಿದೆ. ಪೆಟ್ರೋಲ್ ಅಥವಾ ಡೀಸಲ್ ಎಂಜಿನ್ನಿನ ದೊಡ್ಡ ಯಂತ್ರಗಳು ರಾಶಿಗಟ್ಟಲೆ ಕಬ್ಬನ್ನು ಒಂದು ದಿನದಲ್ಲಿ ಅರೆದುಬಿಡುತ್ತವೆ. ರಾತ್ರಿಯಿಡೀ ನಿದ್ರೆಗೆಟ್ಟು ಮೂರ್ನಾಲ್ಕು ದಿನ ಆಲೆ ಮಾಡುವ ಜರೂರತ್ತಿಲ್ಲ.  ಹೀಗಾಗಿ ಆಲೆಮನೆಗಳೂ ಆಧುನಿಕಗೊಂಡಿವೆ.
 
ನಗರದ ಮೋಹಕ್ಕೋ ಅನಿವಾರ್ಯತೆಗೋ ಸಿಲುಕಿ ಹಳ್ಳಿ ಬಿಟ್ಟು ಪೇಟೆ ಸೇರುತ್ತಿರುವ ಯುವ ಜನಾಂಗಕ್ಕೆ ಊರಿನ ಆಲೆಮನೆಯ ನೆನಪು ಆಗಾಗ ಧುತ್ತನೆ ಆವರಿಸಿಬಿಡುತ್ತದೆ. ಏಕೆಂದರೆ ಆಲೆಮನೆಯೆಂಬುದು ಕೇವಲ ಕಬ್ಬು ಬೆಳೆದು ಬೆಲ್ಲ ಮಾಡಿ ಮಾರುವ ಉದ್ಯಮವಲ್ಲ... ಅದೊಂದು ಸಂಸ್ಕೃತಿ ಶಿಬಿರ. ವರ್ಷವಿಡೀ ಜತನ ಮಾಡಿ ಬೆಳೆದ ಬೆಳೆ, ಆಲೆಮನೆಗೆ ಮಾಡುವ ತಯಾರಿ, ಅಹೋರಾತ್ರಿ ನಡೆವ ಆಲೆ, ಕಿಡಿಯೆಬ್ಬಿಸುತ್ತ ಉರಿವ ಬೆಂಕಿ, ತಿರುಗುವ ಕೋಣಗಳು, ಹಾಡು-ಹಾಸ್ಯಗಳ ನಡುವೆ ಗದ್ದೆಬಯಲಲ್ಲಿ ತಂಗುವ ದಿನಗಳು, ಗ್ರಾಮಸ್ಥರು-ನೆಂಟರಿಷ್ಟರ ಸಮಾಗಮ, ಕೊಡು-ಕೊಳ್ಳುವ, ಮತ್ತೊಬ್ಬರಿಗೆ ತೃಪ್ತಿಯಾಗುವಷ್ಟು ಉಣಿಸುವ ಖುಷಿಹೀಗೆ ಅದೊಂದು ಸಂಭ್ರಮದ ಹಬ್ಬ. ಅದಕ್ಕಾಗಿಯೇ ಇತ್ತೀಚೆಗೆ ಆಲೆಮನೆ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. ಹಳೆಯ ಸಂಸ್ಕೃತಿಯೊಂದನ್ನು ಉಳಿಸುವಲ್ಲಿ ಕನಿಷ್ಟ ನೆನಪಿಟ್ಟುಕೊಳ್ಳುವಲ್ಲಿ ಇಂತಹ ಉತ್ಸವಗಳು ಕಿಂಚಿತ್ತಾದರೂ ನೆರವಾಗುತ್ತವೆ. ಪಟ್ಟಣ-ನಗರವಾಸಿಗಳಿಗೆ ಆಲೆಮನೆಯನ್ನು ಪರಿಚಯಿಸಿದಂತೆಯೂ ಆಗುತ್ತದೆ.
 
ಎಷ್ಟೇ ಕಾಲ ಬದಲಾದರೂ ಪಾರಂಪರಿಕ ಆಲೆಮನೆಗಳು ಅಲ್ಲಲ್ಲಿ ನಡೆಯುತ್ತವೆ. ಗದ್ದೆಯ ಮೂಲೆಯಲ್ಲಿ ಕೊಪ್ಪರಿಗೆಗೆ ಹಾಕಿದ ಒಲೆಯಿಂದ ಹೊಗೆಯೇಳುತ್ತಿರುವುದು ಕಾಣುತ್ತದೆ. ಪಕ್ಕದಲ್ಲಿ ಹಾಕಿರುವ ಚಪ್ಪರ ದಾರಿಹೋಕರನ್ನು ಕರೆಯುತ್ತದೆ. ತಿರುಗುತ್ತಿರುವ ಕೋಣಗಳಿಗೆ ತಲೆಸುತ್ತು ಬಾರದಂತೆ ಆಗಾಗ ತಣ್ಣೀರು ಸೋಕುತ್ತ ಕೋಲು ಹಿಡಿದು ಅವುಗಳ ಹಿಂದೆ ಸುತ್ತುತ್ತಿರುವವ ತನ್ನ ಕೀರಲು ಕಂಠದಲ್ಲಿ ಹಾಡುತ್ತಿರುತ್ತಾನೆ: ಅರೆ ಕ್ವಾಣಾ.. ಓಓಓ.. ಕರಿ ಕ್ವಾಣಾ.. ಓಓಓ..

[ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ] 

No comments: