Friday, April 12, 2024

ಉತ್ತಿ ಬಿತ್ತಿದ್ದು

ಹಲ್ಲು ಬಿತ್ತೆಂದು ಅಳಬೇಡ ಮಗಳೇ
ಅವು ಹಾಲುಹಲ್ಲು, ಬೀಳಲೆಂದೇ ಹುಟ್ಟಿದವು
ವರುಷವೇಳಾಯ್ತಲ್ಲ ನಿನಗೆ, ಬೀಳುವವು ಹೀಗೆ ಒಂದೊಂದೇ
ಹುಟ್ಟುವುವಲ್ಲಿ ಹೊಸ ಹಲ್ಲು
ಫಳಫಳ ಹೊಳೆವ ಬಿಳಿಬಿಳಿ ಹಲ್ಲು
ತಿಕ್ಕಬೇಕವನ್ನು ಗಸಗಸ ಪ್ರತಿದಿನ
ಇರಿಸಿಕೊಳ್ಳಬೇಕು ಆದಷ್ಟೂ ಸ್ವಚ್ಛ
ಚಾಕ್ಲೇಟು ಬಿಸ್ಕೇಟುಗಳ ಕಡಿಮೆ ಮಾಡಿ
ತರಹೇವಾರಿ ಟೂತ್‌ಪೇಸ್ಟು ಬಳಸಿ
ಆದಾಗ್ಯೂ ಬಿದ್ದರೆ ಕುಳಿ, ತುಂಬಿಸಿ ಬೇಗಡೆ

ಹೀಗೆ ಸಹಜವಾಗಿ ಬಿದ್ದು ಅದಾಗೇ ಹುಟ್ಟುವ
ವಸ್ತು-ವಿಷಯಗಳ ಬಗ್ಗೆ ಅಷ್ಟು ಚಿಂತಿಸಬೇಕಿಲ್ಲ ಬಿಡು

ಆದರೆ ಕೆಲವೊಂದನ್ನು ನಾವೇ ಬಿತ್ತಿ ಬೆಳೆಸಬೇಕು
ಒಳ್ಳೆಯ ಬೀಜವನ್ನೇ ಆಯ್ದು, ಒಳ್ಳೆಯ ಗೊಬ್ಬರ ಹಾಕಿ,
ಪಾತಿ ಮಾಡಿ ನೆಟ್ಟು, ದಿನವೂ ನೀರೆರೆದು, ಕಳೆ ತೆಗೆದು,
ದಾಳಿ ಮಾಡುವ ಹಕ್ಕಿಪಿಕ್ಕಿ ಕಾಡುಮೃಗಗಳಿಂದ ಕಾಪಾಡಿಕೊಂಡು
ಫಲ ತೆಗೆಯುವುದೊಂದು ಧ್ಯಾನ ಮಗಳೇ...
ಬೀಜ ಬಿತ್ತುವುದಕ್ಕೂ ಮೊದಲು ಮಾಡಿಸಿರಬೇಕು ಮಣ್ಣಿನ ಪರೀಕ್ಷೆ
ಎಲ್ಲ ಗಿಡಗಳೂ ಎಲ್ಲ ಹವೆಯಲ್ಲೂ ಬೆಳೆಯುವುದಿಲ್ಲ
ಕೃಷಿಗೆ ಕೈ ಹಾಕುವ ಮೊದಲೇ ತಿಳಕೊಂಡಿರಬೇಕು ರೈತಧರ್ಮ

ಹಾಗೆ ಉತ್ತಿ ಬಿತ್ತಿಯೇ ಬೆಳೆಯಬೇಕು
ಒಳ್ಳೆಯ ಗೆಳೆಯರ ಒಳ್ಳೆಯ ವ್ಯಸನಗಳ
ಒಳಿತೆನಿಸಿದ ದಾರಿಯ ಸರಿಯೆನಿಸಿದ ಆಯ್ಕೆಗಳ
ಗಟ್ಟಿ ನಿರ್ಧಾರಗಳ ತಳೆವ ಧೃತಿಯ
ಹದಗೊಳಿಸಿಕೊಳ್ಳಬೇಕು ನಿನ್ನ ಮನವ ನೀನೇ

ಎಷ್ಟೆಲ್ಲ ವಹಿಸಿದರೂ ಜಾಗ್ರತೆ,
ಬಂದುಬಿಡಬಹುದು ಒಮ್ಮೊಮ್ಮೆ ಹಲ್ಲುನೋವು
ಸಹಿಸಬೇಕು ತುಟಿ ಕಚ್ಚಿ
ತಲುಪಿದರದು ಸಹಿಸಲಾಗದ ಹಂತ
ಇರಬೇಕು ಕಿತ್ತೊಗೆಯುವಷ್ಟು ಸ್ಥೈರ್ಯ

ಎಲ್ಲವನ್ನೂ ನಾ ಹೇಳಿಯೇ ನೀ ತಿಳಿದುಕೊಳ್ಳಬೇಕಂತಲ್ಲ;
ಆದರೆ ಈಗ ಹುಟ್ಟುವ ಈ ಹೊಸ ಹಲ್ಲುಗಳು
ನಿನಗೆ ಎಂಬತ್ತೋ ತೊಂಬತ್ತೋ ವರ್ಷವಾದಾಗ
ಮತ್ತೆ ಅಲುಗಲಾರಂಭಿಸುತ್ತವೆ...
ಆಗ ಅಕಸ್ಮಾತ್ ನೀನಿದನ್ನು ಓದಿದರೆ,
ನನಗೆ ನಂಬಿಕೆಯಿದೆ:
ಆಗಷ್ಟೆ ಹಲ್ಲು ಬಿದ್ದ ನಿನ್ನ ಮರಿಮಕ್ಕಳಿಗೆ
ಇದನ್ನು ಓದಿ ಹೇಳುವೆ.

1 comment:

Suma Udupa said...

ನಿಮ್ಮ ಊರಿನ ಬಗೆಗಿನ ಬರಹಗಳು ಬಹಳ ಆಪ್ತ ಭಾವ ಕೊಡುತ್ತದೆ. ಊರಿಗೆ ಹೋಗಿ ಬಂದಷ್ಟೆ. ನನ್ನ ಮಕ್ಕಳಿಗೂ ಓದಿಸುತ್ತಿರುತ್ತೇನೆ. ಬರವಣಿಗೆ ನಿಲ್ಲಿಸದೆ ಇದ್ದದಕ್ಕೆ 🙏🙂