Thursday, November 19, 2015

ಹುಚ್ಚ ವೆಂಕಟ್‌ಗೆ

ನಿನ್ನ ಕೆದರಿದ ತಲೆಗೂದಲು
ರಕ್ತ ತುಂಬಿದ ಕೆಂಗಣ್ಣು
ನೀಲಿಯಂಗಿಯ ವೇಷ
ಉಕ್ಕುಕ್ಕಿ ಬರುವ ಆವೇಶ
ಕೆಮೆರಾದ ಎದೆಯೊಡೆಯುವಂತೆ ದುರುಗುಟ್ಟುವ ಆ ನೋಟ
ಚೂರೇ ಬಾಗಿದ ಕತ್ತು
ಕುಡಿಯುವೆಯೆನ್ನುವ ಲೋಕಲ್ ವಿಸ್ಕಿ

ನಿನ್ನ ಹಳೆಯ ಪ್ರೇಮಕಥೆಗಳು
ಸಿನಿಮಾದೆಡೆಗಿನ ಅಪಾರ ಮೋಹ
ಯಾರನ್ನೂ ಎದುರಿಸುವ ಕಿಚ್ಚು
ಮೇಲೇರೆರಗಿಹೋಗುವ ತಾಕತ್ತು
ಹೃದಯದೊಳಗೆ ತುಂಬಿಕೊಂಡಿರುವ ಕಣ್ಣೀರು

ನಿನ್ನ ಮೇಲೆ ನಿನಗೇ ಇರುವ ವಿಷಾದ
ಲೋಕದೆಡೆಗಿನ ಅತಾರ್ಕಿತ ಭ್ರಮೆಗಳು
ಕುಲುಮೆಯಿಂದೀಗಷ್ಟೆ ತಂದ ಕತ್ತಿಯಲಗಿನಂಥ ಮಾತುಗಳು
ಹೆಮ್ಮಕ್ಕಳ ಕಾಲಿಗೆ ಬೀಳುವೆನೆನ್ನುವ ಗುಣ
ಕಂಬಳಿಹುಳುವಿನ ಹಾರುವ ಕನಸು
ಗಳಿಗೆಗೊಮ್ಮೆ ಗುಟುಕರಿಸುವ ಚಹಾ

ಪುರಾಣದಲ್ಲಿ ಕಥೆಗಳು:
ಉಗ್ರನಾಗಿದ್ದ ನರಸಿಂಹನ ಕೋಪಶಮನ ಮಾಡಲು
ಲಕ್ಷ್ಮಿಯೇ ಪ್ರಾರ್ಥಿಸಿ ಅವನ ಜತೆಯಾದಳಂತೆ..
ಸೊಕ್ಕಿನಿಂದ ಮುನ್ನುಗ್ಗಿ ಹರಿಯುತ್ತಿದ್ದ ಗಂಗೆಯನ್ನು
ಆಪೋಶನ ತೆಗೆದುಕೊಂಡನಂತೆ ಜಹ್ನು ಮಹರ್ಷಿ..
ದೂರ್ವಾಸರ ಕೋಪಶಮನ ಮಾಡಲು
ಲಕ್ಷ್ಮಣ ಸಾವನ್ನೇ ಸ್ವೀಕರಿಸಿದನಂತೆ..

ನರಸಿಂಹ, ಜಾಹ್ನವಿ, ದೂರ್ವಾಸರ ಕೋಪಗಳಿಗೂ
ಕಥೆಯಿದೆ, ಕಾರಣವಿದೆ ಪುರಾಣದಲ್ಲಿ.
ವೆಂಕಟ್, ಹಾಗೇ ನಿನ್ನ ಕೋಪ, ತಾಪ, ಪ್ರತಾಪಗಳಿಗೂ.
ವ್ಯತ್ಯಾಸ ಇಷ್ಟೇ: ಇಲ್ಲಿ ನಿನ್ನನ್ನು ರಕ್ಷಿಸಲು
ಯಾವ ಲಕ್ಷ್ಮಿಯೂ ಇಲ್ಲ, ಜಹ್ನುವೂ ಇಲ್ಲ,
ತ್ಯಾಗಕ್ಯಾರೂ ಸಿದ್ಧರಿಲ್ಲ.

ಮಥನದಲುದ್ಭವಿಸುವ ಹಾಲಾಹಲದ ಹಾಹಾಕಾರ
ನಮಗೆಲ್ಲ ರುಚಿಯೆನಿಸುವ ಹೊತ್ತಿನಲ್ಲಿ ನೀಲಕಂಠನಿಗೇನು ಕೆಲಸ
ನರಕಾಸುರ, ಶಂಬರಾಸುರ, ಕಂಸ, ಶಿಶುಪಾಲರ
ರಾಜ್ಯಭಾರವನ್ನೊಪ್ಪಿಕೊಂಡ ಮೇಲೆ ಕೃಷ್ಣನ ಸುದರ್ಶನ ಚಕ್ರಕಿಲ್ಲ ತಾವು
ಅತ್ಯಾಚಾರ, ಕೊಲೆ, ಸುಲಿಗೆಗಳ ನೋಡಿ ಸುಮ್ಮನಿರುವ ನಮಗೆ
ದುಷ್ಟಸಂಹಾರೀ ರಾಮನ ಅವಶ್ಯಕತೆಯಿಲ್ಲ ಬಿಡು.

ನಿನ್ನ ನೋವು, ನಿರಾಶೆ, ವಿಷಾದ, ಕೋಪಗಳನ್ನು ಹೀರಲು
ಇಲ್ಯಾರೂ ಅವತರಿಸುವುದಿಲ್ಲ. ನೀನು ಬಲಿಪಶು.
ನಾನು ಕೊಲೆಗಾರ.  

['ಸಖಿ' ಪಾಕ್ಷಿಕದಲ್ಲಿ ಪ್ರಕಟಿತ]

Monday, November 09, 2015

ಕಾಗದದ ಸುರುಳಿಯೊಳಗೆ ಸದ್ದಿನ ಮದ್ದು ತುಂಬುವ ಕೈಗಳಿಗೊಂದು ಹೂಗುಚ್ಛ ಕೊಟ್ಟು...

ನಾವೆಲ್ಲ ಪಟಾಕಿಯನ್ನು ಹೆದರುತ್ತಲೇ ಒಪ್ಪಿಕೊಂಡಿದ್ದು. ಚಿಕ್ಕವರಿದ್ದಾಗ ಪಟಾಕಿ ಮಾಡುವ ಭಾರೀ ಸದ್ದಿಗೆ, ಧಿಗ್ಗನೆ ಸಿಡಿಯುವ ಅದರ ರೀತಿಗೆ, ಹೊಮ್ಮಿಸುವ ಬೆಂಕಿಗೆ ನಾವೆಲ್ಲ ಹೆದರಿದವರೇ. ಪಟಾಕಿಯೇನು, ಸುರುಸುರುಬತ್ತಿ ಹಿಡಕೊಳ್ಳಲಿಕ್ಕೂ ನಮಗೆ ಭಯವಿತ್ತು. ಅದರ ಚಿಮ್ಮುಕಿಡಿಗಳು ಎಲ್ಲಿ ಕೈಗೆ ತಾಕುತ್ತವೋ ಎಂಬ ಅಂಜಿಕೆಯೊಂದಿಗೇ ನಾವದನ್ನು ನಮ್ಮ ಪುಟ್ಟ ಕೈಗಳಲ್ಲಿ ಹಿಡಿದು ಆರತಿ ಬೆಳಗಿದ್ದು. ಈ ನಮ್ಮ ಭಯವನ್ನು ಸ್ವಲ್ಪ ಹೋಗಲಾಡಿಸಿದ್ದು ನೆಲಗುಮ್ಮ. ಇದನ್ನು ಪಟಾಕಿಯ ಪಟ್ಟಿಗೇ ಸೇರಿಸಬೇಕೋ ಬಾಂಬಿನ ಗುಂಪಿಗೆ ತಳ್ಳಬೇಕೋ ಗೊತ್ತಿಲ್ಲ.  ಹೆಚ್ಚುಕಮ್ಮಿ ಆಟಂಬಾಂಬಿನ ಸೈಜೇ ಇರುತ್ತಿದ್ದ ಇದನ್ನು ಬೀಸಿ ನೆಲಕ್ಕೋ ಗೋಡೆಗೋ ಒಗೆದರೆ ಸಾಕು, ಢಂ ಎಂದು ಸಿಡಿಯುತ್ತಿತ್ತು.  ಸಿನೆಮಾಗಳಲ್ಲಿ ಬಾಂಬನ್ನು ವಿಲನ್ನುಗಳು ಹಲ್ಲಲ್ಲಿ ಕಚ್ಚಿ ಎಸೆದಾಗ ಅದು ದೂರ ಹೋಗಿ ಸಿಡಿದು ಭರ್ಜರಿ ಹೊಗೆಯೂ ಧೂಳೂ ಎದ್ದು ಅಲ್ಲಿದ್ದವರೆಲ್ಲಾ ಮಟಾಶ್ ಆಗುವುದನ್ನು ನೋಡಿದ್ದರಿಂದ, ನೆಲಗುಮ್ಮವನ್ನು ಪ್ರಯೋಗಿಸಿದ ನಾವೂ ವಿಲನ್ ಆದಂತೆ ಭಾವಿಸಿದೆವು. 

ಸ್ವಲ್ಪ ದೊಡ್ಡವರಾದಂತೆ ನಮ್ಮ ಧೈರ್ಯ ಇನ್ನೂ ಹೆಚ್ಚಿತು. ನೆಲಗುಮ್ಮದಿಂದ ನಿಧಾನಕ್ಕೆ ಪಿಸ್ತೂಲಿಗೆ ಭಡ್ತಿ ಪಡೆದೆವು. ಸಣ್ಸಣ್ಣ ಮದ್ದಿನ ರೋಲನ್ನು ಪಿಸ್ತೂಲಿನೊಳಗೆ ಸಿಕ್ಕಿಸಿ, ಟ್ರಿಗರ್ ಎಳೆದು ಚಟಾರ್ ಎನಿಸುವುದನ್ನು ಕಲಿತೆವು. ಈ ಮದ್ದಿನ ರೋಲು ನಮ್ಮನ್ನು ವಿಲನ್ ರೋಲಿನಿಂದ ಹೀರೋ ರೋಲಿಗೆ ಕರೆದೊಯ್ಯಿತು. ಹೀರೋ ಆದಮೇಲೆ ಕೇಳಬೇಕೇ?  ಈಗ ನಮಗಿಂತ ಚಿಕ್ಕ ಮಕ್ಕಳು ಪಿಸ್ತೂಲು ಹಿಡಿದ ನಮ್ಮನ್ನು ನೋಡಿ ಹೆದರುತ್ತಿದ್ದರು.  ನಾವೀಗ ಸರಪಟಾಕಿಗಳನ್ನು ಹೊಡೆಯುವಷ್ಟು ಜೋರಾದೆವು. ಮೊದಲೇ ಡೇಂಜರಿನ ಸಂಕೇತವೆಂಬಂತೆ ಕೆಂಬಣ್ಣವನ್ನು ಹೊಂದಿರುತ್ತಿದ್ದ, ಉದ್ದ ಹೊಟ್ಟೆಯ, ಅಷ್ಟೇ ಉದ್ದದ ಬತ್ತಿಯನ್ನು ಹೊಂದಿರುತ್ತಿದ್ದ ಈ ಪಟಾಕಿಗಳನ್ನು ಸರದಿಂದ ಬಿಡಿಸಿ, ಬತ್ತಿಯ ತುದಿಯ ಹೊದಿಕೆಯನ್ನು ಚೂರೇ ಕಿತ್ತು ತೆಗೆದು, ಮನೆಯಿಂದ ದೂರ ಅದನ್ನು ಪ್ರತಿಷ್ಟಾಪಿಸಿ, ಸುರಕ್ಷಿತ ಅಂತರದಲ್ಲಿ ನಿಂತು, ಊದಿನಕಡ್ಡಿಯಿಂದ ಬತ್ತಿಗೆ ಕಿಡಿ ತಾಕಿಸಿ, ಓಡಿ ಬಂದು ಕಿವಿ ಮುಚ್ಚಿ ನಿಲ್ಲುವುದು. ಇದರಲ್ಲಿ ಢಂ ಅನ್ನುವವೆಷ್ಟೋ, ಟುಸ್ ಅನ್ನುವವೆಷ್ಟೋ.

ಹೀರೋ ಇಮೇಜು ಜಾಸ್ತಿಯಾಗುತ್ತ ಹೋದಂತೆ ನಾವು ಹೊಡೆಯುವ ಪಟಾಕಿಗಳ ಗಾತ್ರವೂ ದೊಡ್ಡದಾಗುತ್ತಾ ಹೋಯ್ತು. ಆನೆ ಪಟಾಕಿಗಳೂ, ಲಕ್ಷ್ಮೀ ದಡಾಕಿಗಳೂ, ಆಟಂಬಾಂಬುಗಳೂ ನಮ್ಮಿಂದ ಸಿಡಿಯಲ್ಪಟ್ಟವು. ಬಿರುಸಿನ ಕುಡಿಕೆಗಳು ಮನೆಯೆದುರು ಕಾರಂಜಿ ಸೃಷ್ಟಿಸಿದರೆ, ರಾಕೆಟ್ಟುಗಳು ಆಕಾಶದಲ್ಲಿ ಪರ್ಯಾಯ ನಕ್ಷತ್ರಗಳ ಹೊಮ್ಮಿಸಿದವು. ನೆಲಚಕ್ರಗಳು ಮನೆಯೊಳಗೆಲ್ಲ ತಿರುಗಿದವು. ಗೆಳೆಯರೆಲ್ಲ ಸೇರಿ ಪಟಾಕಿಯಿಂದ ಪ್ರಯೋಗಗಳನ್ನೂ ಮಾಡಿದೆವು. ಬೀದಿನಾಯಿಯ ಬಾಲಕ್ಕೆ ಪಟಾಕಿ ಕಟ್ಟಿ ಹಚ್ಚಿ ಓಡಿಸುವುದೂ, ಪಟಾಕಿಯನ್ನು ಸಗಣಿಯಲ್ಲಿಟ್ಟು ಸಿಡಿಸಿ ಸುತ್ತಮುತ್ತೆಲ್ಲ ಸಗಣಿಮಯವಾಗುವುದು ನೋಡಿ ಖುಷಿ ಪಡುವುದೂ, ಲಕ್ಷ್ಮೀ ದಡಾಕಿಗೆ ಬೆಂಕಿ ತಾಗಿಸಿ ಅದರ ಮೇಲೊಂದು ಡಬ್ಬಿ ಕವುಚಿ ಓಡಿ ಬಂದು ಪಟಾಕಿ ಸಿಡಿದಾಗ ಡಬ್ಬಿ ಆಕಾಶಕ್ಕೆ ಹಾರುವುದು ನೋಡಿ ಚಪ್ಪಾಳೆ ತಟ್ಟುವುದೂ, ಸಿಡಿಯದೇ ಉಳಿದ ಟುಸ್-ಪಟಾಕಿಗಳನ್ನೆಲ್ಲ ಬಿಡಿಸಿ ಅದರ ಮದ್ದನ್ನೆಲ್ಲಾ ಸೇರಿಸಿ ದೊಡ್ಡ ಪಟಾಕಿ ಮಾಡಿ ಉಡಾಯಿಸುವುದೂ ಹೀಗೆ ನಾನಾ ರೀತಿಯ ಕ್ರಿಯಾಶೀಲ ಕಿತಾಪತಿಗಳನ್ನು ಮಾಡಿ ಹಿರಿಯರಿಂದ ಬೈಗುಳ-ಒದೆತಗಳನ್ನು ಹಬ್ಬದುಡುಗುರೆಯಾಗಿ ಪಡೆದೆವು.

ಉರಿದದ್ದೆಲ್ಲಾ ತಣ್ಣಗಾಗುತ್ತವೆ ಎಂಬಂತೆ ಪಟಾಕಿಯ ಬಗೆಗಿದ್ದ ನಮ್ಮ ವ್ಯಾಮೋಹವೂ ನಿಧಾನಕ್ಕೆ ಕಮ್ಮಿಯಾಯಿತು. ಮುಂಚೆ ಒಂದೊಂದೇ ಪಟಾಕಿ ಹಚ್ಚುತ್ತಿದ್ದವರು ಈಗ ಸರಕ್ಕೇ ಬೆಂಕಿಯಿಡತೊಡಗಿದೆವು. ಹಿಂದೆ ಸಾವಿರಾರು ರೂಪಾಯಿ ಖರ್ಚು ಮಾಡಿ ಪಟಾಕಿ ಕೊಳ್ಳುತ್ತಿದ್ದವರು, ಈಗ ಒಂದು ಪ್ಯಾಕು ಗರ್ನಾಲು ಹೊಡೆದ್ರೆ ಸಾಕು ಬಿಡೋ ಈ ಹಬ್ಬಕ್ಕೆ ಅನ್ನೋ ಹಂತಕ್ಕೆ ಬಂದೆವು. ಮಕ್ಕಳ್ಯಾರಾದರೂ ಸಿಕ್ಕಾಪಟ್ಟೆ ಪಟಾಕಿ ಹೊಡೆಯುತ್ತಿದ್ದರೆ ಥೂ, ಡಿಸ್ಟರ್ಬೆನ್ಸು ಅಂತ ಹಲ್ಲು ಕಿವುಚಿದೆವು. ನಮ್ಮ ಮನೆ ಮಕ್ಕಳೇ ಪಟಾಕಿ ಬೇಕೆಂದು ಹಟ ಮಾಡಿದಾಗ ಅದನ್ನು ತಪ್ಪಿಸುವ, ಮನವೊಲಿಸುವ ಪ್ರಯತ್ನ ಮಾಡಿದೆವು.

ಇದಕ್ಕೆಲ್ಲ ಪೂರಕವೆಂಬಂತೆ ಈಗ ದೀಪಾವಳಿಯಲ್ಲಿ ಪಟಾಕಿ ಸುಡುವುದಕ್ಕೆ ನಿರ್ಬಂಧ ಹೇರಬೇಕು ಎಂಬ ಕೂಗು ಜೋರಾಗಿದೆ. ಜನ ಕೋರ್ಟ್ ಮೆಟ್ಟಿಲೇರಿದ್ದಾರೆ. ಏನು ಈ ವರ್ಷದ ದೀಪಾವಳಿಗೆ ಪಟಾಕಿ ನಿಷೇಧ ಜಾರಿಯಾಗಿಯೇಬಿಡುತ್ತದೇನೋ ಎಂಬ ಹಂತ ತಲುಪಿದ್ದ ಕೇಸು, ಈಗ ಸ್ವಲ್ಪ ಸಡಿಲಾದಂತಿದೆ. ಆದರೆ ಹಿಂದೆಂದಿಗಿಂತಲೂ ಈಗ ಪಟಾಕಿಯೆಡೆಗಿನ ಅಸಮಾಧಾನ ಜಾಸ್ತಿಯಾಗಿದೆ.

ಇಷ್ಟಕ್ಕೂ ಮನುಷ್ಯ ಈ ಪಟಾಕಿಯಂತಹ ಒಂದು ವಸ್ತುವನ್ನು ಯಾಕಾದರೂ ತಯಾರಿಸಿದ ಎಂಬುದು ಕುತೂಹಲದ ವಿಷಯ. ದೊಡ್ಡದಾಗಿ ಶಬ್ದ ಮಾಡುವ ವಸ್ತುವೊಂದು ಮನುಷ್ಯನಿಗೆ ಖುಷಿ ಕೊಡುವಂತಾದದ್ದು ಹೇಗೆ? ಹಬ್ಬಗಳಲ್ಲಿ, ವಿಜಯೋತ್ಸವಗಳಲ್ಲಿ ಭಾರೀ ಶಬ್ದವನ್ನುಂಟುಮಾಡಿದಾಗ ಅದು ಮಜ ನೀಡುತ್ತದೆ ಎಂಬ ಕಲ್ಪನೆ ನಮ್ಮ ಮನಸ್ಸುಗಳಲ್ಲಿ ನೆಲೆಯಾಗಿದ್ದಾದರೂ ಹೇಗೆ? ಫ್ಲವರ್ ಪಾಟ್, ರಾಕೆಟ್, ಭೂಚಕ್ರದಂತಹ ಸಿಡಿಮದ್ದುಗಳು ಕಣ್ಣಿಗೆ ಸಂಭ್ರಮವನ್ನಾದರೂ ತರುತ್ತವೆ; ಆದರೆ ಸದ್ದು ಮಾಡುವ ಪಟಾಕಿ? ಅದು ಬೆಚ್ಚಿಬೀಳಿಸುವುದೇ ಹೆಚ್ಚು! ಬಹುಶಃ ಈ ಬೆಚ್ಚಿಬೀಳುವ, ಭಯಕ್ಕೊಳಗಾಗುವ, ಬೇರೆಯವರನ್ನು ಭಯಕ್ಕೊಳಪಡಿಸುವ ಥ್ರಿಲ್ಗಾಗಿಯೇ ಈ ಪಟಾಕಿಗಳ ಸೃಷ್ಟಿಯಾಗಿರಬೇಕು. ಆಮೇಲೆ ಅದೊಂದು ಸಂಪ್ರದಾಯವೇ ಆಗಿಹೋಯಿತು. ಹಬ್ಬ ಬಂತೆಂದರೆ ಪಟಾಕಿ, ಕ್ರಿಕೆಟ್ ಮ್ಯಾಚಿನಲ್ಲಿ ಇಂಡಿಯಾ ಗೆದ್ದಿತೆಂದರೆ ಪಟಾಕಿ, ಚುನಾವಣೆಯಲ್ಲಿ ನಮ್ಮ ಸ್ಫರ್ಧಿ ಗೆದ್ದನೆಂದರೆ ಪಟಾಕಿ... ಎಲ್ಲೆಲ್ಲೂ ಸರಣಿ ಸದ್ದುಗಳದೇ ಮೇಲುಗೈ.

ಹೀಗೆ ನಮ್ಮ ಸಂಭ್ರಮಗಳಲ್ಲಿ ಹಾಸುಹೊಕ್ಕಾಗಿರುವ ಪಟಾಕಿಯನ್ನೇ ಈಗ ನಿಷೇಧಿಸಿಬಿಟ್ಟರೆ? ನಿಜ, ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಹೊಡೆಯಲ್ಪಡುವ ಪಟಾಕಿಯಿಂದಾಗಿ ಸೃಷ್ಟಿಯಾಗುವ ವಾಯುಮಾಲಿನ್ಯ, ಶಬ್ದಮಾಲಿನ್ಯ, ಪಟಾಕಿಯಿಂದಾಗಿ ಮೈಕೈ ಸುಟ್ಟುಕೊಳ್ಳುವ ಅದೆಷ್ಟೋ ಚಿಣ್ಣರು, ಕಣ್ಣು-ಕಿವಿಗಳಿಗೆ ಹಾನಿ ಮಾಡಿಕೊಳ್ಳುವವರು, ವಯೋವೃದ್ಧರಿಗೆ-ಉಸಿರಾಟದ ತೊಂದರೆಯಿರುವವರಿಗೆ ಪಟಾಕಿಗಳಿಂದಾಗಿ ಆಗುವ ತೊಂದರೆ, ಬೀದೆಯಲ್ಲ ತುಂಬುವ ಕಸ... ಎಲ್ಲವನ್ನೂ ಗಣನೆಗೆ ತೆಗೆದುಕೊಂಡಾಗ ಪಟಾಕಿಯಿಲ್ಲದ ದೀಪಾವಳಿಯೇ ಸರಳ-ಸುಂದರ ಎನಿಸುತ್ತದೆ. ಆದರೆ ಅದನ್ನು ಸಂಪೂರ್ಣ ಬ್ಯಾನ್ ಮಾಡಿಬಿಟ್ಟರೆ ಹಬ್ಬದ ಕಳೆಯೇ ಹೊರಟುಹೋಗುತ್ತದೆಯೇ? ನಾವನುಭವಿಸಿದ ಮೋಜು-ಮಸ್ತಿಗಳನ್ನು ಮಕ್ಕಳು ಅನುಭವಿಸುವುದು ಬೇಡವೇ?

ಹಳ್ಳಿಗಳಲ್ಲಾದರೆ ದೀಪಾವಳಿ ಹಬ್ಬದಂದು, ಹಬ್ಬದ ಹಿಂದೆ-ಮುಂದೆ ಅನೇಕ ಕಾರ್ಯ ಚಟುವಟಿಕೆಗಳಿರುತ್ತವೆ. ಭೂರೆಹಬ್ಬ, ಗಂಗಾಪೂಜೆ, ಅಭ್ಯಂಜನ ಸ್ನಾನ, ಗೋಪೂಜೆ, ಲಕ್ಷ್ಮೀ ಪೂಜೆ, ದನ ಬೆದರಿಸುವ ಆಟ, ಬಲೀಂದ್ರನಿಗೆ ನೈವೇದ್ಯ, ಊರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹಬ್ಬದ ಪಾಡ್ಯ, ಭರ್ಜರಿ ಹಬ್ಬದೂಟ, ಗುರಿಗಾಯಿ ಆಟ, ಹಬ್ಬ ಕಳುಹಿಸುವ ಕೆಲಸ, ಕಾರ್ತೀಕ ದೀಪೋತ್ಸವ, ಅಂಟಿಗೆ ಪಿಂಟಿಗೆ... ಹೀಗೆ ಪಟಾಕಿ ಹೊಡೆಯಲೂ ಸಮಯವಿಲ್ಲದಷ್ಟು ಸಂಪ್ರದಾಯಗಳೂ, ಸಂಭ್ರಮಗಳೂ, ಕೆಲಸಗಳೂ ಇರುತ್ತವೆ.  ಆದರೆ ನಗರಗಳಲ್ಲಿ ದೀಪಾವಳಿ ಎಂದರೆ ಬಹುತೇಕ ಪಟಾಕಿ ಹೊಡೆಯುವುದೇ ಆಗಿಹೋಗಿದೆ.  ಮನೆಯ ದೇವರಿಗೆ ಪೂಜೆ ಮಾಡಿ, ದೇವಸ್ಥಾನಕ್ಕೆ ಹೋಗಿಬಂದು, ನೆಂಟರೋ-ಅಕ್ಕಪಕ್ಕದ ಮನೆಯವರೋ ಬಂದರೆ ಅವರನ್ನು ಉಪಚರಿಸಿ, ಊಟ ಮಾಡುವುದು ಬಿಟ್ಟರೆ ಆಮೇಲೆಲ್ಲಾ ಪಟಾಕಿ ಸುಡುವುದೇ ಹಬ್ಬ. ಹೀಗಾಗಿ, ಹಳ್ಳಿಗಳಲ್ಲಾದರೂ ಪಟಾಕಿಯಿಲ್ಲದ ದೀಪಾವಳಿಯನ್ನು ಕಲ್ಪಿಸಿಕೊಳ್ಳಬಹುದು, ಆದರೆ ನಗರಗಳಲ್ಲಿ ಮಾತ್ರ ಅದು ತುಂಬಾ ಕಷ್ಟ.

ಇಷ್ಟಲ್ಲದೇ, ಪಟಾಕಿಗೆ ನಿರ್ಬಂಧ ಹೇರಿದ್ದೇ ಹೌದಾದರೆ ಪಟಾಕಿ ಉದ್ಯಮಗಳ ಕಥೆ ಏನು? ಅವರಿಗಾಗುವ ನಷ್ಟವನ್ನು ತುಂಬಿಕೊಡುವವರು ಯಾರು?  ಆ ಉದ್ಯಮದಲ್ಲಿ ಕೆಲಸ ಮಾಡುವ ಸಾವಿರಾರು ಜನರ ಕಥೆಯೇನು? ಎಂಬಂತಹ ವಾದಗಳೂ ಕೇಳಿಬರುತ್ತಿವೆ.  ಹೀಗಾಗಿ ಪಟಾಕಿಯನ್ನು ಬ್ಯಾನ್ ಮಾಡುವುದು ಸರ್ಕಾರಗಳಿಗೂ ಅಷ್ಟು ಸುಲಭದ ವಿಷಯವಾಗಿ ಉಳಿದಿಲ್ಲ.

ಸಂಪೂರ್ಣ ಕಡಿವಾಣ ಸಾಧ್ಯವಾಗದೇ ಹೋದರೂ, ಪಟಾಕಿ ಸುಡುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮಲ್ಲಿ ಜಾಗೃತಿ ಮೂಡುವ ಅವಶ್ಯಕತೆ ಇದೆಯೆಂದೆನಿಸುತ್ತದೆ. ಈ ವರ್ಷದ ದೀಪಾವಳಿ ಅಂಥದೊಂದು ನಿಲುವಿಗೆ ನಾಂದಿಯಾಗಬಲ್ಲುದೇ? ಪಕ್ಕದ ಮನೆಯ ತಾತ ಬಂದು, ಪಟಾಕಿ ಹೊಡೀಬೇಡ್ರಪ್ಪಾ, ತೊಂದ್ರೆ ಆಗುತ್ತೆ ಅಂತ ಕೇಳಿಕೊಂಡರೆ, ಅವರ ಕೋರಿಕೆಯನ್ನು ಮನ್ನಿಸುವಷ್ಟಾದರೂ ಸಹಿಷ್ಣುತೆ ನಮ್ಮಲ್ಲಿ ಮೂಡಬಹುದೇ? ಇಷ್ಟಕ್ಕೂ ದೀಪಾವಳಿ ದೀಪಗಳ ಹಬ್ಬವೇ ಹೊರತು ಪಟಾಕಿಗಳ ಹಬ್ಬ ಅಲ್ಲ.  ಹೀಗಾಗಿ, ಈ ವರ್ಷದ ದೀಪಾವಳಿಯನ್ನು ಸಿಡಿಮದ್ದಿಲ್ಲದೆ ಆಚರಿಸಲು ಸಾಧ್ಯವಾ?


ಹಾಗಾದರೆ ಏನು ಮಾಡಬಹುದು? ಪಟಾಕಿ ಬೇಕೇಬೇಕು ಅಂತ ಹಟ ಮಾಡುವ ಮಕ್ಕಳನ್ನು ಹೇಗೆ ಸುಮ್ಮನಿರಿಸುವುದು?  ಈ ವರ್ಷ ದೀಪಾವಳಿಯಂದು, ಮಕ್ಕಳನ್ನೆಲ್ಲ ಕೂರಿಸಿಕೊಂಡು, ಜೇಡಿಮಣ್ಣು, ಬಾಟಲಿನ ಮುಚ್ಚಳ, ಹಿಂಡಿದ ನಿಂಬೆಯ ಸಿಪ್ಪೆ ಮುಂತಾದವುಗಳಿಂದ ದೀಪಗಳನ್ನು ನಾವೇ ತಯಾರಿಸಿ ಮನೆ ಮುಂದೆ ಸಾಲುಸಾಲು ದೀಪ ಹಚ್ಚೋಣ.  ಬಣ್ಣದ ಕಾಗದಗಳನ್ನು ತಂದು ವಿವಿಧ ಆಕಾರದ ಆಕಾಶಬುಟ್ಟಿಗಳನ್ನು ತಯಾರಿಸಿ ಮನೆ ಮುಂದೆ ತೂಗಿಬಿಡೋಣ.  ಹೂವು-ತೋರಣ-ಬಣ್ಣದ ಕಾಗದಗಳಿಂದ ಮನೆಯನ್ನು ಸಿಂಗರಿಸೋಣ.  ರಸ್ತೆಯಲ್ಲಿ ದೊಡ್ಡದಾಗಿ ರಂಗೋಲಿ ಹಾಕಿ ಬಣ್ಣ ತುಂಬೋಣ. ಮಾರುಕಟ್ಟೆಯಲ್ಲಿ ಕೆಲವೆಡೆ ಬಣ್ಣದ ಪಟಾಕಿ ಸಿಗುತ್ತದೆ: ಇದನ್ನು ಸಿಡಿಸಿದಾಗ ಬೆಂಕಿ ಮತ್ತು ಶಬ್ದದ ಬದಲು ಬಣ್ಣದ ಬುಗ್ಗೆ ಏಳುತ್ತದೆ. ಇಂಥದನ್ನು ಬಳಸಲು ಯತ್ನಿಸೋಣ.  ಹಳ್ಳಿಗಳಲ್ಲಿ ನಡೆಯುವ ಆಚರಣೆಗಳಲ್ಲಿ ಕೆಲವನ್ನಾದರೂ ನಗರಗಳಲ್ಲಿ ಸಾಕಾರಗೊಳಿಸಲಾದೀತೇ ಅಂತ ಯೋಚಿಸೋಣ. ಬೀದಿಯ ಮಕ್ಕಳನ್ನೆಲ್ಲ ಕೂಡಿಸಿ ಸಣ್ಣ ಮನರಂಜನೆ ಕಾರ್ಯಕ್ರಮ ಏರ್ಪಡಿಸೋಣ, ಆಟ ಆಡಿಸೋಣ. ಆಪ್ತೇಷ್ಟರೆಲ್ಲ ಸೇರಿ ಹಾಡಿ ನಲಿಯೋಣ. ಎದುರಿಗೆ ಸಿಕ್ಕವರಿಗೆ ಶುಭಾಶಯ ಕೋರೋಣ.  ನಾವೆಲ್ಲ ಇಷ್ಟೆಲ್ಲ ಸಂಭ್ರಮಿಸುವಾಗ ಬೆಳಕನ್ನು ನೋಡುವ ಭಾಗ್ಯವೇ ಇಲ್ಲದ ಅಂಧರು ಇರುವ ಶಾಲೆ-ವಸತಿ ನಿಲಯಗಳಿಗೆ ಭೇಟಿ ಕೊಟ್ಟು, ಅವರೊಂದಿಗೆ ಸ್ವಲ್ಪ ಕಾಲ ಕಳೆದು ರಂಜಿಸಿ ಬಂದರೆ ಬೆಳಕಿನ ಹಬ್ಬಕ್ಕೊಂದು ಸಾರ್ಥಕ್ಯವೂ ಸಿಕ್ಕೀತು.  ಕಾಗದದ ಸುರುಳಿಯೊಳಗೆ ಸದ್ದಿನ ಮದ್ದು ತುಂಬುವ ಕೈಗಳಿಗೆ ಹೊಸ ಬದುಕಿನ ಭರವಸೆಯ ಹೂಗುಚ್ಛವನ್ನೂ, ಸಿಹಿಯ ಹೋಳಿಗೆಯನ್ನೂ ಕೊಡುವ ನಿಟ್ಟಿನಲ್ಲಿ ಯೋಚಿಸೋಣ. ದೀಪಾವಳಿ ಎಲ್ಲರ ಬಾಳಿಗೂ ಹೊಸ ಬೆಳಕು ತರುವಂತಾಗಲಿ. ಶುಭಾಶಯಗಳು.

[ವಿಜಯ ಕರ್ನಾಟಕ ಸಾಪ್ತಾಹಿಕಕ್ಕಾಗಿ ಬರೆದದ್ದು.]

Friday, October 30, 2015

ಗದ್ದೆಹಾದಿ

ಬಸ್ ನಿಲ್ದಾಣದಿಂದ ಮನೆಗೆ ಹೋಗಲು
ಗದ್ದೆಹಾದಿಯೇ ಹತ್ತಿರ ಎಂಬ ಮಾತು ಆಗ ಎಲ್ಲರ ಬಾಯಲ್ಲಿ..
ನಡಿಗೆಗೆ ಬಹುದೂರವೆಂದು ವರ್ಜಿಸಲ್ಪಟ್ಟ ಮುಖ್ಯರಸ್ತೆ
ಬಿಸಿಲಲ್ಲಿ ಬಣಗುಡುತ್ತ ಹೊರಗೆ ಬಿದ್ದುಕೊಂಡಿರುತ್ತಿತ್ತು.
ನಡೆದು ನಡೆದೇ ಸವೆದಿದ್ದ ಒಳಹಾದಿಯ ಗದ್ದೆಬದುವಿನ ಮೇಲೆ
ಹೆಜ್ಜೆಯ ಮೇಲೊಂದೆಜ್ಜೆಯನಿಕ್ಕುತ ನಡೆಯುತ್ತಿದ್ದರೆ
ಬಾಗಿದ ಭತ್ತದ ತೆನೆಗಳು ತಾಗಿ ಮೊಣಕಾಲಿಗೆ ಕಚಗುಳಿ..
ಟುರ್ರನೆ ಹಾರುವ ಸಣ್ಣ ಪೊದೆಯ ಹಿಂದಡಗಿದ್ದ ಪುಟ್ಟಹಕ್ಕಿ
ಸರ್ರನೆ ಸರಿಯುವ ಮಟ್ಟಿಯ ಮರೆಯ ಬಿಳಿಹಾವು
ಅಂಚಿಗೆ ಕಾಲಿಟ್ಟರೆ, ಜರ್ರನೆ ಜಾರುವ ಒದ್ದೆಬದು.

ಗಂಡಸರು ಪಂಚೆ ಮಡಿಚಿ ಕಟ್ಟಿಕೊಂಡೂ, ಹೆಂಗಸರು ಸೀರೆ
ಸ್ವಲ್ಪವೇ ಎತ್ತಿಕೊಂಡೂ ಅರಲು ತಾಗದಂತೆ ಹುಷಾರಾಗಿ ಅಡಿಯಿಡುವರು.
ನಡುವೆ ಸಿಕ್ಕ ಊದ್ದನೆ ಸಾರವನ್ನು ಚಪ್ಪಲ್ಲಿ ಕೈಯಲ್ಲಿ ಹಿಡಿದು
ಥರಥರಗುಡುತ್ತ ದಾಟಿಬಿಟ್ಟರೆ ನಂತರದ ತಂಪುಹಾದಿಯಲ್ಲಿ ನಿಟ್ಟುಸಿರು.

ವಾಹನಗಳು ಅಗ್ಗವಾದವೋ ಜನರು ಸಿರಿವಂತರಾದರೋ,
ಮುಖ್ಯರಸ್ತೆಯಲ್ಲಿ ಮೋಟಾರುಗಳ ಸಶಬ್ದ ಸಂಚಾರ ಹೆಚ್ಚಾಯಿತು.
ಕೆಂಪುರಸ್ತೆ ಟಾರು ಹೊಯ್ಯಿಸಿಕೊಂಡು ಪೂರ ಕಪ್ಪಾಯಿತು.
ಹೊಸಹುಡುಗರ ಪ್ಯಾಂಟೂ, ಲಲನೆಯರ ಲೆಗ್ಗಿಂಗೂ ಕೆಸರಸ್ಪರ್ಶಕ್ಕೆ
ಹೆದರಿ ಗದ್ದೆಹಾದಿಯ ತ್ಯಜಿಸಿದವು. ಒಳಹಾದಿಗಿಂತ ಥಳಗುಟ್ಟುವ
ಬಳಸುದಾರಿಯೇ ಬಳಕೆಗನುಕೂಲವೆನಿಸಿದ ಘಳಿಗೆ
ಮುಖ್ಯರಸ್ತೆ ವಿಜಯೋತ್ಸವದಲಿ ವಿಜ್ರಂಭಿಸಿತು.

ಗದ್ದೆಹಾದಿಯ ಮೇಲೀಗ ಚುಪುರಾಗಿ ಬೆಳೆದ ಹುಲ್ಲು
ಹಳ್ಳದ ಬಳಿಯ ಇಳಿಜಾರಿನಲಿ ಬರೀ ಜುಳುಜುಳು ಗುಲ್ಲು
ಮನುಷ್ಯರ ಕಾಣದೇ ಬೆದರಿರುವ ಬೆರ್ಚಪ್ಪಗಳು
ಕನಸಿನಿಂದೇಳದೇ ಮಲಗಿರುವ ಮರಿ ಗೀಜಗಗಳು

ಇವತ್ತು ಸಕ್ಕರೆಯಂತೆ ಇಬ್ಬನಿ ಬೀಳುತ್ತಿದೆ.
ಬೇಲಿಬದಿಯ ಸಾಲು ಸಿತಾಳೆ ಗಿಡಗಳಿಂದುದುರಿದ
ಹೂಪಕಳೆಗಳು ರಾಜಕುವರಿಯ ಮೃದುಕಾಲ ಸ್ಪರ್ಶಕ್ಕೆ ಕಾದಿವೆಯಂತೆ;

ಗೆಳತೀ, ಇವತ್ತು ಗದ್ದೆಹಾದಿಯಲ್ಲಿ ಹೋಗೋಣ, ಬಾ. 

Sunday, October 04, 2015

ಗಣೇಶ ಹೋದಮೇಲೆ

ಗಣೇಶ ಹೋದಮೇಲೆ ಬೀದಿಯಲ್ಲಿ ಪರಮಮೌನ.
ಮೂರು ದಿನದಿಂದ ಮೊಳಗುತ್ತಿದ್ದ ಮೈಕಿನ ಸದ್ದಡಗಿ
ಸಾಲುಮನೆಗಳ ಸೋಪಾನದಲ್ಲಿ ಹೆಜ್ಜೆಗಳಿಗೆ ಬಾಯಿ ಮರಳುವುದು.
ಕಿಟಕಿಗಳು ತೆರೆಯಲ್ಪಡುವವು. ನೆಂಟರೊಡನೆ ಬಂದಿದ್ದ ಕೀಟಲೆ ಮಕ್ಕಳು
ಹೊರಟುಹೋದಾಗ ತುಂಬುವ ನೀರವದಂತೆ ಕಿವಿಗಳು ಗವ್ವೆನ್ನುವವು.
ಎದ್ದೇಳು ಮಂಜುನಾಥಾ ಎಂದು ಮುಂಜಾನೆಯೇ ಬಡಿದೆಬ್ಬಿಸುವ ಹಾಡಿಲ್ಲ.
ಅನ್ನಸಂತರ್ಪಣೆಗೆ ಸಾಲಾಗಿ ಬನ್ನಿ ಎನ್ನುವವರಿಲ್ಲ. ಮಂತ್ರಪಾರಾಯಣವಿಲ್ಲ.
ಪ್ರತಿಮನೆಗೂ ಬಳ್ಳಿಯಾಗಿ ನೇತುಬಿಟ್ಟಿದ್ದ ಸರಣಿದೀಪಗಳನ್ನೂ ತೆರವುಗೊಳಿಸಿ
ಈಗ ಎಲೆಯುದುರಿದ ಶಿಶಿರದ ಕಾಡಂತೆ ಬೀದಿ ಪಿಚ್ಚೆನಿಸುವುದು.

ಆರ್ಕೆಸ್ಟ್ರಾದಲ್ಲಿ ವನ್ಸ್‌ಮೋರ್ ಬೇಡಿಕೆಗೆ ಕಲಕಲ್ಪಟ್ಟಿದ್ದ ಹೃದಯಸಮುದ್ರದಬ್ಬರವೂ ಇಳಿದು
ತೀರದಲ್ಲೀಗ ಅಲೆಗಳಿಲ್ಲದ ಬೇಸರ. ಬೀದಿಯಲ್ಲೇ ಎದ್ದುನಿಂತಿದ್ದ ವೇದಿಕೆಯೂ
ಸಭಾತ್ಯಾಗ ಮಾಡಿ ದಾರಿಹೋಕರಿಗೆ ಬಣಬಣ. ತರಕಾರಿ ತಳ್ಳುಗಾಡಿಯವನು
ಈ ಜಾಗ ದಾಟಿಹೋಗುವಾಗ ಒಂದು ಕ್ಷಣ ಅನುಮಾನಿಸುವನು; ಅಕಸ್ಮಾತ್ ಕೊತ್ತಂಬರಿ ಕಟ್ಟು
ಕೆಳಗೆ ಜಾರಿಬಿದ್ದರೆ ಗರಿಕೆಹುಲ್ಲು ಗಣೇಶಾರ್ಪಣವಾಯಿತೆಂದು ಹಾಗೇ ಸಾಗುವನು.

53ನೇ ವರ್ಷದ ಗಣೇಶೋತ್ಸವದ ಬ್ಯಾನರು ಇಳಿಸಿಯಾದಮೇಲೆ
ಸಂಘಟಕರ ಮನೆಯ ಕೋಣೆಯಲ್ಲಿ ಲೆಕ್ಕಾಚಾರದ ಸಮಯ.
ತಮಟೆಯ ಬಡಿತಕ್ಕೆ ಕುಣಿದ ಇವರ ಕಾಲುಗಳ ನೋವು ಹ್ಯಾಂಗೋವರಿನೊಂದಿಗೆ
ನಿಧಾನಕೆ ಇಳಿಯುವಾಗ, ಅತ್ತ ಮುಳುಗಿದ ಕೆರೆಯಲ್ಲಿ ವಿಘ್ನೇಶ್ವರ ಹಿತವಾಗಿ ಕರಗುವನು.
ಪಕ್ಕದ ಬೀದಿಯಲ್ಲಾಗಲೇ ಏಳುತ್ತಿರುವ ವೇದಿಕೆಯಲ್ಲಿ ಪುನರಾವಿರ್ಭವಸಲು ಸಜ್ಜಾಗುವನು.
ಸದ್ದುಗದ್ದಲಗಳೆಲ್ಲ ಸಾಲುಮನೆಗಳ ಮೇಲಿಂದ ಹೈಜಂಪು ಮಾಡಿ ಅತ್ತ ಸಾಗುವವು.
ಸಂಭ್ರಮದತಿಥಿ ಟ್ರಾಕ್ಟರಿನಲ್ಲಿ ತನ್ನನ್ನು ದಾಟಿಹೋಗುವಾಗ ಈ ಬೀದಿ
ಇಲ್ಲಿಂದಲೇ ಕೈಬೀಸಿ ಗೆಳೆಯನಿಗೆ ಹಾಯೆನ್ನುವುದು. ಮೋದಕಹಸ್ತ ಕುಲುಕಲ್ಲೆ ಸ್ಪಂದಿಸುವನು.

Saturday, September 12, 2015

ಜೊನಾಥನ್‌ಗೆ

ನೀನು ಹುಟ್ಟಿದ ದಿನ ಹುಣ್ಣಿಮೆಯೇ ಆಗಿರಬೇಕು
ಸಮುದ್ರದಡದಲಿ ಅಲೆಗಳ ಹುಚ್ಚುಮೊರೆತ
ಮೊಟ್ಟೆಯಿಂದ ಹೊರಬಂದರೂ ಚಿಪ್ಪಿನಿಂದ ಹೊರಬರಲು ದಿನಗಳೇ ಹಿಡಿಯಿತು
ಮೊದಲ ಹೆಜ್ಜೆ ಯಾವ ದಿಕ್ಕಿಗಿರಿಸಿದೆ?
ನೆನೆದರೀಗಲೂ ಪುಳಕ: ಉಕ್ಕುನೊರೆಗಳ ಸೊಕ್ಕುತೆರೆಗಳ ಮೇಲೇರಿಳಿದು ಈಜಿದ್ದು,
ಶಾರ್ಕು ತಿಮಿಂಗಿಲಗಳ ಭಾರೀ ಉರಗಗಳ ಬಾಯಿಂದ ತಪ್ಪಿಸಿಕೊಂಡಿದ್ದು..
ಚಿಪ್ಪು ಗಟ್ಟಿಯಾಗುತ್ತ ಹೋದಂತೆ, ಅಮ್ಮನಾಸರೆಯೆ ಬಿಟ್ಟು ಹೊರಹೊರಟಂತೆ,
ತಲೆಯೆತ್ತಿ ನಡೆದೆ. ವಿಷ್ಣುವಿನವತಾರವೇ ಆದ ನಿನಗೆ ದೀರ್ಘಾಯುಷ್ಯದಾಶೀರ್ವಾದ
ಅದಾರು ಮಾಡಿದ್ದರೋ ತಿಳಿಯೆ. ಜಾತಕ ಬೇರೆ ಎಟಕುತ್ತಿಲ್ಲ.

ಮಳೆಗಾಲಗಳ ಕಥೆ ಹೇಳು ಜೊನಾಥನ್, ಎಷ್ಟು ಬೇಸಿಗೆಗಳ ಕಂಡೆ?
ಬಿರುಗಾಳಿಗಳ ಕಥೆ ಹೇಳು ಜೊನಾಥನ್, ಎಷ್ಟು ವಿರಹಗಳನುಂಡೆ?
ಮಹಾಯುದ್ಧಗಳ ಕಥೆ ಹೇಳು ಜೊನಾಥನ್, ಎಷ್ಟು ವಿದ್ರೋಹಗಳಿಗೆ ಸಾಕ್ಷಿಯಾದೆ?

ಸಂಗಾತಗಳ ಸಂಭ್ರಮವ ನೆನೆದು ನಗುವಾಗ,
ಸಂಗಾತಿಗಳಿಟ್ಟ ಮೊಟ್ಟೆಗಳ ಮೂಸಿ ನೋಡಿದ ಪರಿಮಳ
ಈಗಲೂ ನಿನ್ನ ಮೂಗನರಳಿಸುವಾಗ, ಅರೆಕುರುಡಲ್ಲಿ ನಿಧಾನಕ್ಕೆ ಹೆಜ್ಜೆ ಹಾಕುವಾಗ
ನೆನಪ ಭಾರವನ್ನೇ ನೀನು ಚಿಪ್ಪ ಮೇಲಿಟ್ಟು ನಡೆಯುತ್ತಿರುವಂತೆ ಭಾಸ..

ಯಾವ ರಾಣಿ ಎಂದು ಎಂಥ ಯುವರಾಜನನ್ನು ಹೆತ್ತಳು
ಯಾವ ಸೇನಾಧಿಪತಿ ಯಾವ ರಾಜ್ಯದ ಮೇಲೆ ದಂಡೆತ್ತಿಹೋದ
ಯಾವ ಜೀವಸಂಕುಲ ಹೇಗೆ ಬೆಳೆದು ನಳನಳಿಸಿ ನಶಿಸಿಹೋಯಿತು
ಯಾವ ನದಿಯ ದಿಕ್ಕು ಬದಲಿಸಲಾಯ್ತು, ವಿಕಿರಣಗಳ ಶಾಪ ಎಲ್ಲಿಗೆ ತಟ್ಟಿತು
ಯಾವ ಸಾಮ್ರಾಜ್ಯ ಒಡೆದು ಚೂರಾಯ್ತು, ಸುಂದರಿಯ ನತ್ತು ಹೇಗೆ ಕಳೆಯಿತು

ಎಲ್ಲ ಪ್ರಶ್ನೆಗಳಿಗೂ ನಿನ್ನಲ್ಲುತ್ತರವಿದೆ. ಅವರ ಧ್ವಜವನ್ನಿಳಿಸಿ ನಮ್ಮ ಧ್ವಜವೇರಿಸಿ
ಮೆರೆದ ಸಾಹಸಗಳನ್ನೂ, ಆಕಾಶಕ್ಕೇರಿದ ರಾಕೆಟ್ಟುಗಳನ್ನೂ,
ಹಿಮಕಂದರಳಿಗೆ ಜಾರಿಬಿದ್ದ ಮುಕುಟಗಳನ್ನೂ, ಮರಳಿ ಬಂದ ಪತ್ರಗಳ ಸಂಕಟಗಳನ್ನೂ,
ಸಾಲುಗಟ್ಟಿ ನಡೆದ ಇರುವೆಗಳು ತಲುಪಿದ ಹುತ್ತವನ್ನೂ, ಕಮರಿದ ಬೆಳಕುಗಳನ್ನೂ
ನೀ ನೋಡಿ ಬಲ್ಲೆ. ಸುಕ್ಕುಗಟ್ಟಿದ ಚರ್ಮದೊಳಗೆ ಹೆಪ್ಪುಗಟ್ಟಿದ ನಿಟ್ಟುಸಿರುಗಳಲಿ
ಈ ಜಗಹೃದಯದ ಉಶ್ವಾಸ ನಿಶ್ವಾಸಗಳೆಲ್ಲ ಅಡಗಿದಂತಿದೆ.

ಕಥೆ ಹೇಳು ಜೋ, ನಿನ್ನ ಚಿಪ್ಪ ಮೇಲೆ ಬಿದ್ದು ಜಾರಿದ ಮಳೆಹನಿಗಳ ಕಥೆ ಹೇಳು.
ಕೂತ ಧೂಳನ್ನು ಹಾರಿಸಿದ ಗಾಳಿಯ ಕಥೆ ಹೇಳು.
ತಿಂದ ಹಣ್ಣುಗಳ, ಮಳೆಹುಳಗಳ, ಬ್ರೆಡ್ಡಚೂರುಗಳ ರುಚಿ ಹಂಚಿಕೋ.
ಸಾವಿರ ಋತುಗಳ ತಿರುವಿನಲಿ ಕಂಡ ಚಿತ್ರಗಳ ನನಗೆ ದಯಪಾಲಿಸು.
ಇತಿಹಾಸಕಾರನಾಗುವ ಹಂಬಲದಿಂದಲ್ಲ, ಕಥೆ ಕೇಳುವ ಖುಷಿಗಾಗಿ
ನಿನ್ನ ಬೆನ್ನು ಬಿದ್ದಿದ್ದೇನೆ. ಕತ್ತೇರಿಸಿ ಹೇಳು. ರಾತ್ರಿಗಳು ಕರಗಿ ಹಗಲಾಗಲಿ.
ಹಗಲಳಿದು ಮುಸ್ಸಂಜೆಯಾಗಲಿ. ನಾನು ಇಲ್ಲೇ ಕೂತಿರುವೆ ನಿನ್ನ ಸಂಗಡ.

ಕಥೆ ಹೇಳು ಜೊನಾಥನ್, ಆ ಕಥೆ ಹೇಳು.

[ಜೊನಾಥನ್ ಎಂಬುದು ಸುಮಾರು 182 ವರ್ಷ ವಯಸ್ಸಿನ ಆಮೆ. ದಕ್ಷಿಣ ಅಟ್ಲಾಂಟಿಕ್ ಸಾಗರದ ಬಳಿಯಿರುವ ಸೇಂಟ್ ಹೆಲೆನಾ ದ್ವೀಪದಲ್ಲಿ ವಾಸವಿದೆ. ಸದ್ಯಕ್ಕೆ ಜೀವಂತವಿರುವ ಅತೀ ಹಿರಿಯ ಸರೀಸೃಪ ಇದೆಂದು ನಂಬಲಾಗಿದೆ. ವಿಕಿ ಲಿಂಕ್: Jonathan (tortoise)]