Monday, August 21, 2006

Chouthiya Shubhashayagalu

ಚೌತಿ ಹತ್ತಿರಾಗುತ್ತಿದೆ. ಶಾಪಿಂಗ್ ಮಾಲ್‌ಗಳಲ್ಲಿ, ಸಣ್ಣಪುಟ್ಟ ಅಂಗಡಿಗಳಲ್ಲಿ, ಕೊನೆಗೆ ಫೂಟ್‌ಪಾತ್‌ನ ಮೇಲೂ ಸಾಲಾಗಿ ಇರಿಸಿರುವ ಗಣೇಶನ ಮೂರುತಿಗಳು! ದಾರಿಯ ಮೇಲೆ ಹೋಗುವ ಬರುವ ಮಂದಿಯೆಲ್ಲಾ ನೋಡಿಯೇ ನೋಡುತ್ತಾರೆ ಇವನ್ನು. ದೊಡ್ಡ ದೊಡ್ಡ ಮೂರ್ತಿಗಳು ಹಿಂದಿನ ಸಾಲಿನಲ್ಲಿ; ಸಣ್ಣವು ಮುಂದೆ. ಸಡನ್ನಾಗಿ ನೋಡಿದರೆ, ಶಾಲೆಯಲ್ಲಿ ಪಾಠ ಕೇಳಲು ಕುಳಿತ ಮಕ್ಕಳಂತೆ ಭಾಸವಾಗುತ್ತದೆ. ಅಥವಾ ಗ್ರೂಪ್ ಫೋಟೋ ತೆಗೆಯಲು ಕೂರಿಸಿದಂತೆ.

ಖರೀದಿ ಮಾಡಲಿಕ್ಕೆಂದು ಹೋದ ಇವನು ಮೂಕವಿಸ್ಮಿತನಾಗಿ ನೋಡುತ್ತಾ ನಿಂತುಬಿಟ್ಟಿದ್ದಾನೆ. ಎಲ್ಲಾ ಗಣೇಶರೂ ‘ನನ್ನನ್ನೇ ಕೊಂಡುಕೋ’ ಅನ್ನುತ್ತಿದ್ದಾರೆ. ಹಿಂದಿನ ಸಾಲಿನಲ್ಲಿನ ಒಬ್ಬ ಗಣೇಶನಂತೂ ಕತ್ತಿ ಬೀಸಿ ನಿಂತಿದ್ದಾನೆ. ಆತ ರುದ್ರ ಗಣಪನಂತೆ. ಆತನ ನೆರಳು ಮುಂದಿನ ಸಾಲಿನ ಪುಟ್ಟ ಗಣೇಶರವರೆಗೂ ಬಿದ್ದಿದೆ. ಅಂತೂ ಇವನು ಹುಡುಕೀ ಹುಡುಕಿ, ಚೌಕಾಶಿ ಮಾಡಿ, ಒಂದು ಕೆಂಪು ಮಡಿ ಉಟ್ಟ ಗಣೇಶನನ್ನು ಖರೀದಿಸಿ ಅಕ್ಕಿ ತುಂಬಿದ ಚೀಲದೊಳಗೆ ಇಳಿಸುವಾಗ ಉಳಿದ ಗಣೇಶರೆಲ್ಲಾ ಟಾಟಾ ಮಾಡಿದ್ದಾರೆ.

ಚೀಲದೊಳಗಿನ ಕತ್ತಲೆಯಲ್ಲಿ ಕುಳಿತಿರುವ ಗಣೇಶನಿಗೆ ಬಸ್ಸಿನ ರಶ್ಶಿನಲ್ಲಿ ಶೆಖೆಯಾಗುತ್ತಿದೆ. ಸುತ್ತಲಿನ ಅಕ್ಕಿ ಕಾಳಿನಿಂದಾಗಿ ಒಂಥರಾ ಕಚಗುಳಿಯಾಗುತ್ತಿದೆ. ಮನೆ ಮುಟ್ಟುತ್ತಲೇ ಮಕ್ಕಳಿಬ್ಬರು ಓಡಿ ಬಂದು ‘ಅಪ್ಪಾ, ಗಣ್ಪತಿ ತಂದ್ಯಾ? ಎಲ್ಲಿ ಎಲ್ಲಿ ತೋರ್‍ಸು..’ ಅನ್ನುತ್ತಾ ಚೀಲವನ್ನು ಕೆಳಗಿಳಿಸಿದ್ದಾರೆ. ಚೀಲದೊಳಗಿನಿಂದ ಹೊರತೆಗದ ಗಣೇಶನನ್ನು ಎತ್ತರದ ಮೇಜಿನ ಮೇಲೆ ಯಾರಿಗೂ ಸಿಗದಂತೆ ಇಡಲಾಗಿದೆ. ಮನೆಗೆ ಬಂದ ಹೊಸ ಅತಿಥಿಯನ್ನು ಎಲ್ಲರೂ ಬಂದು ನೋಡುತ್ತಿದ್ದಾರೆ: ಅಡುಗೆಮನೆಯಲ್ಲಿ ಬತ್ತಿ ಹೊಸೆಯುತ್ತಿದ್ದ ಅಮ್ಮ, ಹಿತ್ತಿಲಕಡೆ ಬಾಳೆ ಸೋಚುತ್ತಿದ್ದ ಅಜ್ಜಿ, ದೇವರ ಮುಂದೆ ಮಂಟಪ ಕಟ್ಟುತ್ತಿದ್ದ ಪಕ್ಕದ್ಮನೆ ಅಣ್ಣಯ್ಯ... ಎಲ್ಲಾ.

ಮರುದಿನ ಭಟ್ಟರು ಬಂದಿದ್ದಾರೆ. ಅಲಂಕೃತ ಮಂಟಪದಲ್ಲಿ ವಿರಾಜಮಾನನಾಗಿರುವ ಗಣೇಶ ತನಗೆ ಸಲ್ಲಿಸಲ್ಪಡುತ್ತಿರುವ ಭರ್ಜರಿ ಪೂಜೆ, ನೈವೇದ್ಯಗಳಿಂದ ಸಂಪ್ರೀತನಾಗುತ್ತಿದ್ದಾನೆ. ಪಟಾಕಿ ಸದ್ದಿಗೆ ಅವನ ಇಲಿ ಬೆಚ್ಚಿಬಿದ್ದಿದೆ. ಹಾವಿಗೋ, ಈ ಡೊಳ್ಳುಹೊಟ್ಟೆಯನ್ನು ಸದಾ ಸುತ್ತಿಕೊಂಡೇ ಇರಬೇಕಲ್ಲ ಎಂಬ ಸಂಕಟ.

ಪೂಜೆಯೆಲ್ಲಾ ಮುಗಿದು, ನೆಂಟರು-ಮನೆಮಂದಿಗೆಲ್ಲಾ ಊಟ ಆಗಿ, ಇಲ್ಲಿ ಗಣೇಶನನ್ನೊಬ್ಬನನ್ನೇ ಬಿಟ್ಟು, ಎಲ್ಲಾ ಹೊರಗೆ ಜಗುಲಿಯಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದಾರೆ. ಗಣೇಶನಿಗೆ ಈಗ ಏಕಾಂತ. ಆತ ಸುಸ್ತಾರಿಸಿಕೊಳ್ಳುತ್ತಾ ಯೋಚಿಸುತ್ತಿದ್ದಾನೆ:

ಯಾರ್‍ಯಾರು ಏನೇನು ಬೇಡಿಕೊಂಡರು ಮಂಗಳಾರತಿ ಸಮಯದಲ್ಲಿ... ಮನೆಯ ಯಜಮಾನ ಕೇಳಿಕೊಂಡ: ಅಡಿಕೆಗೆ ಇನ್ನೂ ರೇಟ್ ಬರೋ ಹಂಗೆ ಮಾಡಪ್ಪ. ಅವನ ಹೆಂಡತಿ ಬೇಡಿಕೊಂಡಳು: ಹಬ್ಬದ ಮರುದಿನವೇ ಹಿಸೆ ಪಂಚಾಯ್ತಿ ಇದೆ, ಯಾರಿಗೆ ಏನು ಹೋಗುತ್ತೊ ಏನೋ, ನಮಗಂತೂ ‘ಸರಿಯಾಗಿ’ ಬರೋಹಂಗೆ ಮಾಡಪ್ಪ! ಅಜ್ಜಿ ಬೇಡಿಕೊಂಡಳು: ಸುಖವಾದ ಸಾವು ಕೊಡಪ್ಪ. ಪುಟ್ಟಿ ಬೇಡಿಕೊಂಡಳು: ಓದದಿದ್ದರೂ ಎಕ್ಸಾಮಲ್ಲಿ ಪಾಸಾಗೋಹಂಗೆ ಮಾಡಪ್ಪ. ಅಜ್ಜ ಯೋಚಿಸುತ್ತಿದ್ದ: ಕಾಶಿಯಾತ್ರೆ ಒಂದು ಪೆಂಡಿಂಗ್ ಉಳಿದುಹೋಯ್ತಲ್ಲ.. ಕಿರೀಮಗನಿಗೆ ಇನ್ನೂ ತನಗೆ ಮದುವೆಯಾಗದ್ದರ ಬಗ್ಗೆ ಚಿಂತೆ. ಅಳಿಯನಿಗೆ ಮುಂದಿನ ವರ್ಷದೊಳಗೆ ಒಂದು ಕಾರ್ ಕೊಂಡುಕೊಳ್ಳಲೇ ಬೇಕೆಂಬ ಕನಸು. ಪುಟ್ಟನಿಗೋ ಚಿಂತೆ: ಹಬ್ಬಕ್ಕೆ ಬಂದಿರುವ ಮಾವ ಚಾಕ್ಲೇಟ್ ತಂದೇ ಇಲ್ಲ ಯಾಕೆ? ಅಥವಾ ತಂದಿದ್ದರೂ ಕೊಡುವುದಕ್ಕೆ ಮರೆತನೇ? ...ಪಕ್ಕದ್ಮನೆ ಅಣ್ಣಯ್ಯನೂ ಏನೋ ಬೇಡಿಕೊಂಡನಲ್ಲ, ಏನು?

ಗಣೇಶನಿಗೆ ಲೆಕ್ಕ ತಪ್ಪುತ್ತಿದೆ... ಮರೆವಾಗುತ್ತಿದೆ.. ತನ್ನನ್ನು ಇಷ್ಟೆಲ್ಲಾ ಭಕ್ತಿಯಿಂದ ಪೂಜಿಸಿದ್ದರ ಹಿಂದಿನ ಮರ್ಮ ಈಗ ಅರ್ಥವಾಗುತ್ತಿದೆ... ಹೌದು, ಎಲ್ಲರ ಆಸೆಗಳನ್ನೂ ಪೂರೈಸಬೇಕು ಅಂದುಕೊಳ್ಳುತ್ತಾನೆ....

ಚೌತಿಯ ಹಾರ್ದಿಕ ಶುಭಾಷಯಗಳನ್ನು ಹೇಳುತ್ತಾ, ಗಣೇಶನೆದುರಿನ ನಿಮ್ಮ ಪ್ರಾರ್ಥನೆಗಳಿಗೆ ಫಲ ಸಿಗಲಿ ಅಂತ ಹಾರೈಸುತ್ತೇನೆ.

2 comments:

~rAGU said...

ಬಹಳ ಚನ್ನಾಗಿದ್ದು. ಹಿ೦ಗೆ ಬರಿತಾಯಿರು.ಹಬ್ಬದ ಶುಭಾಷಯಗಳು.

Raghuuuuu said...

enla maga hingella ninage brilikke baruttha!


ella habbakku hinge baradu kalasu