ಎಲ್ಲೋ ಓದಿದ ನೆನಪು:
ಅವರವರ ಮನದಂತೆ ದೃಷ್ಟಿಯೂ ಬೇರೆ
ಕವಿಯ ಕಣ್ಣಿಗೆ ಚಂದ್ರ ಹೆಂಡತಿಯ ಮೋರೆ
ಮಕ್ಕಳಿಗೆ ಶಶಿ ಬಾಂದಳದ ಚೆಂಡು
ವಿಜ್ಞಾನಿಗಳಿಗೆ ಅದು ಬರೀ ಕಲ್ಲುಗುಂಡು
ಕವಿ ಯಾರೋ ನೆನಪಿಲ್ಲ. ಹೈಸ್ಕೂಲ್ ಕನ್ನಡ ಪಠ್ಯದಲ್ಲಿತ್ತು. ನಮ್ಮ ಮೇಷ್ಟ್ರು ಎಂ.ಜಿ. ಹೆಗಡೆ ಅದನ್ನು ಬಹಳ ಚೆನ್ನಾಗಿ ವಿವರಿಸಿದ್ದರು ಕೂಡ. ಹೇಗೆ ಒಬ್ಬೊಬ್ಬರ ದೃಷ್ಟಿಕೋನ ಒಂದೊಂದು ತರಹ ಇರುತ್ತೆ ಎಂಬುದನ್ನ ತುಂಬ ಸುಂದರವಾಗಿ, ಕೇವಲ ನಾಲ್ಕೇ ನಾಲ್ಕು ಸಾಲುಗಳಲ್ಲಿ ಬಿಚ್ಚಿಡುತ್ತದೆ ಆ ಕವನ.
ಇಲ್ಲ, ನಾನಿವತ್ತು ಕವಿತೆಗಳ ಬಗ್ಗೆಯಾಗಲೀ, ದೃಷ್ಟಿಕೋನಗಳ ಬಗ್ಗೆಯಾಗಲೀ, ಬೇರೆ ಬೇರೆ ದೃಷ್ಟಿಕೋನಗಳ ಜನಗಳ ಬಗ್ಗೆಯಾಗಲೀ ಹೇಳುವುದಕ್ಕೆ ಹೊರಟಿಲ್ಲ. ನಾನು ಹೇಳ ಹೊರಟಿರುವುದು ಚಂದಿರನ ಬಗ್ಗೆ.
ಚಂದಿರ. ಅದೆಷ್ಟು ಚಂದದ ಹೆಸರು. ಅದೆಷ್ಟು ಸುಂದರ ಅಂವ. ಚಂದಿರ ಎಂದರೆ ಬೆಳದಿಂಗಳು. ಬೆಳದಿಂಗಳು ಎಂದರೆ ಪ್ರೀತಿ. ಪ್ರೀತಿ ಎಂದರೆ ಅವಳು. ಅವಳು ಎಂದರೆ ಪ್ರೀತಿ.
ಚಂದ್ರ ಎಂದರೆ, ಭಾವನೆಗಳನ್ನು ಸ್ಪುರಿಸುವ ಕೇಂದ್ರ ನನ್ನ ಪಾಲಿಗೆ. ಹುಣ್ಣಿಮೆಯ ರಾತ್ರಿ ಲಕ್ಷ ನಕ್ಷತ್ರಗಳ ನಡುವೆ ತಾನೇ ತಾನಾಗಿ ಮೆರೆಯುವ ಮನ್ಮತ. ಕಪ್ಪು ಕಡಲಲ್ಲಿ ಬೆಳ್ಳಿತುಂಡಿನಂತೆ ತೇಲುವವ. ಹೊಟ್ಟೆಕಿಚ್ಚಾಗೊತ್ತೆ ಅವನನ್ನು ನೋಡಿದರೆ.
ಲೆಕ್ಕ ಇಟ್ಟಿಲ್ಲವಂತೆ ಚಂದ್ರ: ಅದೆಷ್ಟೋ ಮಕ್ಕಳಿಗೆ ಮಾಡಿಸಿದ ಊಟ. ನನಗೆ ಅಮ್ಮನೂ ಹಾಗೇ ಊಟ ಮಾಡಿಸುತ್ತಿದ್ದಿದ್ದಂತೆ. ಚಂದ್ರನಿಗೊಂದು ತುತ್ತು - ನಿನಗೊಂದು ತುತ್ತು ಅಂತ ಹೇಳಿ, ಚಂದ್ರನಿಗೆ ಕೊಟ್ಟಂತೆ ಮಾಡಿ, ನಾನು ಬೆರಗುಗಣ್ಣುಗಳಲ್ಲಿ ಮೇಲ್ನೋಡುತ್ತಿರುವಾಗ, ತೆರೆದ ಬಾಯಿಗೆ ತುತ್ತು ತುರುಕಿ... ಹೀಗೇ ಅದೆಷ್ಟು ತಾಯಂದಿರು ಉಣ್ಣಿಸಿದ ತುತ್ತು ತಿಂದಿದ್ದಾನೋ ಚಂದ್ರ. ಅದಕ್ಕೇ ಅಷ್ಟು ಸ್ಮಾರ್ಟ್ ಅಂವ. ಆದರೆ ಅದು ವಿಚಿತ್ರವೂ ಹೌದು: ಅಷ್ಟೊಂದು ಮನೆಯ ಅಡಿಗೆ ಉಂಡು ಅವನ ಹೊಟ್ಟೆ ಕೆಟ್ಟು ಹೋಗಬೇಕಿತ್ತು! ಆದರೆ ಎಂದೂ ಅಂವ ಕಾಯಿಲೆ ಬಿದ್ದ ವರ್ತಮಾನ ಬಂದಿಲ್ಲ!
ನಿನ್ನೆ ರಾತ್ರಿ ಎಲ್ಲ ರಾತ್ರಿಗಳಂತಲ್ಲ. ನನ್ನ ಗೆಳೆಯ ಚಂದ್ರನಿಗೆ ಗ್ರಹಣ. ಬಿಚ್ಚು ಆಕಾಶದಲ್ಲಿ ನಕ್ಷತ್ರಗಳ ಜಾತ್ರೆ ನೆರೆದಿತ್ತು.. ಕಪ್ಪು ಕಡಲಲ್ಲಿ ತೇಲಿಬಂದ ನನ್ನ ಗೆಳೆಯ.. ಮೇಲೆ ಮೇಲೆ ಬಂದ.. ರಾತ್ರಿ ಹತ್ತೂ ವರೆಯಾಗಿತ್ತೇನೋ: ನಿಧ ನಿಧಾನವಾಗಿ ಅವನ ಒಂದು ಪಾರ್ಶ್ವದಿಂದ ಕಪ್ಪು ಆವರಿಸುತ್ತಾ ಬಂತು... ತುಂಬು ಚಂದಿರನ ಮೇಲ್ಮೈಯ ಮೇಲೆ ಯಾರದೋ ಕಪ್ಪು ನೆರಳು.. ನನಗೆ ಬೇಸರ..
ದುಂಡೀರಾಜರ ಕವನವೊಂದು ಬಿಟ್ಟೂ ಬಿಡದೆ ನೆನಪಾಗುತ್ತಿತ್ತು:
ನಾಚುತ್ತಾ ಆಕೆ
ಎದೆಯ ಮೇಲಿನ ಹೊದಿಕೆ
ಬದಿಗೆ
ಸರಿಸುತ್ತಾ ಹೋದ ಹಾಗೆ
ಪಾಡ್ಯ, ಬಿದಿಗೆ, ತದಿಗೆ..
'ಹುಣ್ಣಿಮೆ' ಎಂಬ ಶೀರ್ಷಿಕೆಯಡಿ ಅದೆಷ್ಟು ಅದ್ಭುತವಾಗಿ ಬರೆದಿದ್ದಾರೆ ಕವಿ! ನಾನು ಚಂದಿರನನ್ನು ನೋಡುತ್ತಾ ಹಾಗೇ ಟೆರೇಸಿನಲ್ಲಿ ಅಡ್ಡಾಡುತ್ತಿದ್ದೆ ಮಧ್ಯರಾತ್ರಿಯವರೆಗೂ. ಒಂದು ಗಂಟೆಯ ಮೇಲೆ ಗ್ರಹಣ ಬಿಟ್ಟಿತು. ನನ್ನನ್ನು ಕವಿದಿದ್ದ ಖಿನ್ನತೆಯೂ ಕಳೆದಂತಾಯ್ತು.
2 comments:
ಅವರವರ ಮನದಂತೆ ದೃಷ್ಟಿಯೂ ಬೇರೆ
ಕವಿಯ ಕಣ್ಣಿಗೆ ಚಂದ್ರ ಹೆಂಡತಿಯ ಮೋರೆ
ಮಕ್ಕಳಿಗೆ ಶಶಿ ಬಾಂದಳದ ಚೆಂಡು
ವಿಜ್ಞಾನಿಗಳಿಗೆ ಅದು ಬರೀ ಕಲ್ಲುಗುಂಡು
ದಿನಕರ ದೇಸಾಯಿಯವರದ್ದು :)
@ ಮನಸ್ವಿನಿ
ನಿಜ, ನೆನಪಾಯ್ತು. ಅಷ್ಟೊಂದು ಪ್ರಬುದ್ಧವಾದ ವಿಷಯವೊಂದನ್ನು ಇಷ್ಟೊಂದು ಚಂದದ ಪ್ರಾಸಬದ್ಧವಾದ ಚುಟುಕಾಗಿಸುವುದು ಮತ್ತಿನ್ಯಾರಿಂದ ಸಾಧ್ಯ..
Post a Comment