ಕರುಣಾಳು ಬಾ ಬೆಳಕೇ
ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಎಂದು ನಾನು ಹಾಡಿದಾಗ ಕತ್ತಲೆಯೇನು ಇರಲಿಲ್ಲ;
ಮಬ್ಬಿತ್ತು ಅಷ್ಟೆ.
ನೀನು ಬೆಳಕಾಗಿ ಬಂದೆ.
ನಾನು ಖುಷಿಯಲ್ಲಿ ಮುಳುಗಿಹೋದೆ.
ಗಾಳಿ ಬೀಸುವ ಮೊದಲು
ಬಾಗಿಲು
ಭದ್ರಗೊಳಿಸಿಕೊಳ್ಳಬೇಕು ಎಂಬ ಅರಿವು
ನನಗಾದಾಗ ತಡವಾಗಿತ್ತು.
ಜೋರು ಗಾಳಿ ಬೀಸತೊಡಗಿದಾಗ ಭಿನ್ನವಿಸಿಕೊಂಡೆ:
ದೀಪವೂ ನಿನ್ನದೆ
ಗಾಳಿಯೂ ನಿನ್ನದೆ
ಆರದಿರಲಿ ಬೆಳಕು..
ಬೆಳಕು ಉಳಿಯಲಿಲ್ಲ;
ಗಾಳಿ ಬಿಡಲಿಲ್ಲ.
ದೀಪವಾರಿದಾಕ್ಷಣ ಕತ್ತಲು
ಸುತ್ತಮುತ್ತಲೂ.
ಸಣ್ಣ ಬಿಳಿ ಹೊಗೆ ಎದ್ದಿತ್ತೇನೋ-
ಕಾಣಲಿಲ್ಲ ಕತ್ತಲೆಯಲ್ಲಿ.
ಒಳ್ಳೆಯದೇ ಆಯಿತು;
ನನಗೆ ಹೊಗೆ ಎಂದರೆ 'ಹೋಗೇ'.
ಈಗೆಲ್ಲ ಇಲ್ಲಿ ದೀಪ ಉಳಿಸಿ ಹೋದ
ಕಂಪಿನದೇ ರಾಜ್ಯಭಾರ.
ಮತ್ತು ನನ್ನ ಮಂತ್ರಪಠಣ:
ತಮಸೋಮಾ ಜ್ಯೋತಿರ್ಗಮಯ..
1 comment:
"ಈಗೆಲ್ಲ ಇಲ್ಲಿ ದೀಪ ಉಳಿಸಿ ಹೋದ
ಕಂಪಿನದೇ ರಾಜ್ಯಭಾರ.
ಮತ್ತು ನನ್ನ ಮಂತ್ರಪಠಣ:
ತಮಸೋಮಾ ಜ್ಯೋತಿರ್ಗಮಯ.."
ಅರ್ಥಗರ್ಭಿತ ಸಾಲುಗಳು...ನಿರಾಸೆಯ ಕತ್ತಲಲ್ಲೂ ಬೆಳಕನ್ನು ಕಂಡುಕೊಳ್ಳುವ ರೀತಿಗೆ ಯಶಸ್ಸು ಸಿಗಲಿ.
Post a Comment