Tuesday, February 13, 2007

ಒಂದು ಪ್ರೇಮಪತ್ರವು...

ಬೊಗಸೆ ಕಣ್ಗಳ ಹುಡುಗೀ,

ನಿನಗೆ ಸಾವಿರ ಸಿಹಿಮುತ್ತುಗಳು.

ಇಲ್ಲೊಂದು ಸುಂದರ ಸಂಜೆ. ಇವತ್ತು ಬೆಂಗಳೂರಿಗೆ ಬಂದ್. ಬೆಳಗ್ಗೆಯಿಂದ ಮುಚ್ಚಿದ್ದ ಅಂಗಡಿಗಳು ಇದೀಗ ತಾನೆ ಕಣ್ಣು ಬಿಡುತ್ತಿವೆ.. ಹೋಟೆಲುಗಳ ಸ್ಟೋವ್ ಹೊತ್ತಿಕೊಳ್ಳುತ್ತಿವೆ.. ಸಿಗ್ನಲ್ ದೀಪಗಳು ತಮ್ಮ ಬಣ್ಣಗಳನ್ನು ಮತ್ತೆ ನೆನಪು ಮಾಡಿಕೊಳ್ಳುತ್ತಿವೆ.. ಯೋಚಿಸುತ್ತಿದ್ದೆ ನಾನು: ಹೀಗೆ ನಾನು ನಿನ್ನನ್ನು ನೆನಪಿಸಿಕೊಳ್ಳುವ ಪ್ರಸಂಗ ಬರದೇ ಎಷ್ಟು ದಿನಗಳಾದವು..? ಯಾಕೆಂದರೆ ನಾನು ನಿನ್ನನ್ನು ಮರೆತಿದ್ದೇ ಇಲ್ಲ! ನನ್ನ ಹೃದಯದ ಬೀದಿಗಳಲ್ಲಿ ನಿನ್ನ ಸವಿನೆನಪುಗಳ ಅಂಗಡಿಗಳು ಯಾವಾಗ ಮುಚ್ಚಿದ್ದವು ಹೇಳು? ನೀನು ಹಚ್ಚಿಟ್ಟು ಹೋದ ಪ್ರೀತಿಯ ಹಣತೆ ಎಂದು ಆರಿತ್ತು ಹೇಳು? ಆದರೂ ನಿನಗೆ ಹುಸಿಕೋಪ. ಪತ್ರ ಬರೆಯದೇ ಎಷ್ಟು ದಿನಗಳಾದವು ಎಂದಾ? ಹೌದು ಕಣೆ, ಟೈಮೇ ಸಿಗಲಿಲ್ಲ. ನಿನ್ನ ಬಳಿ ಹೇಳಿಕೊಳ್ಳಲು ಸಾಕಷ್ಟು ವಿಷಯಗಳಿವೆ ಎಂಬುದಂತೂ ನಿಜ.

ಕಳೆದ ಭಾನುವಾರ ಒಂದು ಟೂರ್ ಹೋಗಿದ್ದೆ. 'ಹವ್ಯಕ-ಸಾಗರ' ಮತ್ತು 'ಆರ್ಕುಟ್-ಹವ್ಯಕ' ಬಳಗಗಳು ಸಂಯೋಜಿಸಿದ್ದ ಪ್ರವಾಸ. ಬಲಮುರಿ ಜಲಪಾತ ಮತ್ತು ರಂಗನತಿಟ್ಟು ಪಕ್ಷಿಧಾಮಗಳಿಗೆ ಹೋಗಿದ್ದೆವು. ಪೂರ್ತಿ ನೂರಾ ಮೂವತ್ತು ಜನ! ಮೂರು ಬಸ್‍ಗಳಲ್ಲಿ ಹೋಗಿದ್ದು. ಸುಮಾರು ಮೂವತ್ತು ಹುಡುಗಿಯರೂ ಬಂದಿದ್ದರು. (ಅವರ ಬಗ್ಗೆ ಬರೆಯುವುದಿಲ್ಲ ನಾನು; ಯಾಕೆಂದರೆ ನೀನು ಕೋಪಿಸಿಕೊಳ್ಳುತ್ತೀ!) ಪ್ರವಾಸ ತುಂಬಾ ಚೆನ್ನಾಗಿತ್ತು. ಬಸ್ಸಿನಲ್ಲಿ ವಿಪರೀತ ಗಲಾಟೆಯಿತ್ತು. ಹಾಡುಗಳು, ಅಂತ್ಯಾಕ್ಷರಿ, ಯಾವ್ಯಾವುದೋ ಆಟಗಳು... ಓಹ್! ಫುಲ್ ಮಸ್ತ್! ಬಲಮುರಿಯಲ್ಲಿ ಬೀಳುತ್ತಿದ್ದ ನೀರಿನಲ್ಲಿ ನಿನ್ನದೇ ಲಹರಿಯಿತ್ತು.

ಜುಳುಜುಳು ನೀರಿಲ್ಲಿ ತಿಲ್ಲಾನ ಹಾಡಿತ್ತು ನೋಡೋಕೆ ನಾ ಬಂದರೆ:
ನಿನ್ನದೇ ತಕತೈ ಕಂಡಿತು.. ತಕದಿಮಿ ಹೆಚ್ಚಿತು..





ಬಹಳ ಹೊತ್ತು ನೀರಿನಲ್ಲಿ ಆಟವಾಡಿ ನಾವು ರಂಗನತಿಟ್ಟಿಗೆ ಬಂದೆವು. ಅದೆಷ್ಟೊಂದು ಬಿಳಿ ಬಿಳಿ ಹಕ್ಕಿಗಳು ಅಲ್ಲಿ... ಹತ್ತು-ಹನ್ನೆರಡು ಜನ ಒಂದು ದೋಣಿಯಲ್ಲಿ ಕುಳಿತು ಕೊಳದಲ್ಲಿ ತೇಲುತ್ತಾ ಪಕ್ಷಿಗಳನ್ನು ನೋಡುವುದು. ಎಲ್ಲೆಲ್ಲಿಂದಲೋ ಬಂದ ಹಕ್ಕಿಗಳು. ದೋಣಿಯವ ಹೇಳುತ್ತಿದ್ದ: "ಇವು ಸ್ನಿಕ್ಕರ್ ಅಂತ. ಗ್ರೀಸ್ ದೇಶದಿಂದ ಬಂದವು.." "ಇವು ಫೆದರ್‌ಸ್ಟೋನ್ ಅಂತ, ಮಲೇಷಿಯಾದಿಂದ ಬರ್ತಾವೆ.." ಯಾವುದೋ ದೇಶದಿಂದ ಇಲ್ಲಿಗೆ ಬಂದು, ಮರದ ಎಲೆಗಳ ಮರೆಯಲ್ಲಿ ಗೂಡು ಕಟ್ಟಿಕೊಂಡು, ಮೊಟ್ಟೆ ಇಟ್ಟು ಮರಿ ಮಾಡಿ, ಮರಿಹಕ್ಕಿಯ ರೆಕ್ಕೆ ಬಲಿಯುತ್ತಿದ್ದಂತೆಯೇ ಮತ್ತೆ ಹಾರಿಹೋಗುತ್ತವಂತೆ. ಹಕ್ಕಿಗಳನ್ನು ನೋಡುತ್ತಾ ಅಲೆಗಳ ಮೇಲೆ ತೇಲುತ್ತಾ ನಾನು ಮೈಮರೆತಿದ್ದೆ. ಯಾವುದೋ ಹಕ್ಕಿ ಮರಿಗೆ ಗುಟುಕು ನೀಡುತ್ತಿತ್ತು.. ಮತ್ಯಾವುದೋ ಹಕ್ಕಿ ತನ್ನ ಸಂಗಾತಿಗೆ ಗುಟ್ಟು ಹೇಳುತ್ತಿತ್ತು..


ದೂರ ನಾಡಿನ ಹಕ್ಕಿ
ಹಾರಿ ಬಾ ಗೂಡಿಗೆ..
ಗೂಡು ತೂಗ್ಯಾವ ಗಾಳೀಗೆ..
ಸುವ್ವಿ ಸುವ್ವಾಲೆ ಸುವ್ವಿ..

ಪಯಣದುದ್ದಕ್ಕೂ ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ.

ಮೊನ್ನೆ ಶುಕ್ರವಾರ ಏರ್‌ಶೋ ನೋಡಲಿಕ್ಕೆ ಹೋಗಿದ್ದೆ: ಆಫೀಸಿಗೆ ರಜೆ ಹಾಕಿ. ಇವೂ ಹಕ್ಕಿಗಳು. ಲೋಹದ ಹಕ್ಕಿಗಳು. ಮೊಟ್ಟೆ ಇಡದ ಹಕ್ಕಿಗಳು. ಇವೂ ಆಗಸದಲ್ಲಿ ತನ್ಮಯತೆಯಿಂದ ಹಾರಾಡುತ್ತವೆ. ಪಲ್ಟಿ ಹೊಡೆಯುತ್ತವೆ. ನಿಂತಂತೆ ತೇಲುತ್ತವೆ. ರೆಕ್ಕೆ ಅಗಲಿಸುತ್ತವೆ... ಯಾವ್ಯಾವುದೋ ದೇಶಗಳಿಂದ ಬಂದ ವಿಮಾನಗಳು, ಜೆಟ್‍ಗಳು ನಡೆಸಿದ ತರಹೇವಾರಿ ಕಸರತ್ತು ನೋಡುವಂತಿತ್ತು. ಜೆಟ್‍ಗಳ ಆರ್ಭಟವೇ ಒಂದು ತೂಕವಾದರೆ ನಮ್ಮ ಭಾರತದ 'ಸೂರ್ಯಕಿರಣ್' ಹೆಸರಿನ ಮಿನಿ ವಿಮಾನಗಳದ್ದೇ ಒಂದು ತೂಕ. ಪುಟ್ಟ ಪುಟ್ಟ ಒಂಭತ್ತು ವಿಮಾನಗಳು ಆಗಸದಲ್ಲಿ ಅದೇನೇನು ಆಟವಾಡಿದೆವು ಅನ್ನುತ್ತೀ..? ಆಗಸದಲ್ಲಿ ತ್ರಿವರ್ಣಗಳ ಓಕುಳಿ ನಿರ್ಮಿಸಿ ಅವು ಗಿಟ್ಟಿಸಿದ ಸಿಳ್ಳೆ-ಚಪ್ಪಾಳೆಗಳು ಅದೆಷ್ಟೋ? ಚುಕ್ಕಿಗಳೇ ಇಲ್ಲದೆ ಅವು ಎಳೆದ ರಂಗೋಲಿಗಳೆಷ್ಟೋ? ಕೊನೆಗೊಮ್ಮೆ, ಅವುಗಳಲ್ಲೇ ಎರಡು ವಿಮಾನಗಳು ವಿರುದ್ಧ ದಿಕ್ಕಿನಿಂದ ಹಾರಿಬಂದು ಒಂದು ದೊಡ್ಡ ಹಾರ್ಟು ಸೃಷ್ಟಿಸಿದವು. ಮತ್ತೊಂದು ವಿಮಾನ ಬಂದು ಒಂದು ಬಾಣವನ್ನೂ ಸೇರಿಸಿತು ಆ ಹೃದಯಕ್ಕೆ... ಜನರಿಂದ ವಿಮಾನದ ಸಪ್ಪಳವನ್ನೂ ಮೀರಿಸುವಂತಹ ಕರತಾಡನ. ನೀನು ಇರಬೇಕಿತ್ತು ಅನ್ನಿಸಿತು. ಆದರೆ ಆ ಬಿಸಿಲಿಗೆ ನಿನ್ನ ಮುಖ ಬಾಡಿಹೋಗುತ್ತಿತ್ತು; ಬಾರದಿದ್ದುದೇ ಒಳ್ಳೆಯದಾಯಿತು ಅನ್ನಿಸಿತು ಕೊನೆಗೆ.

ನಿನ್ನೆ ರಾತ್ರಿಯಿಡೀ ಕುಳಿತು ಎಸ್.ಎಲ್. ಭೈರಪ್ಪನವರ ಹೊಸ ಕಾದಂಬರಿ 'ಆವರಣ' ಓದಿ ಮುಗಿಸಿದೆ. ಅದ್ಭುತ ಕಾದಂಬರಿ ಕಣೇ. ಕತೆ ಹೇಳಿ ನಿಂಗೆ ಬೇಜಾರ ಮಾಡೊಲ್ಲ; ನೀನೇ ಕೊಂಡು ಓದು. ಮೊದಲ ಮುದ್ರಣದ ಪ್ರತಿಗಳು ಎರಡೇ ದಿವಸಗಳಲ್ಲಿ ಖಾಲಿಯಾಗಿ ಈಗ ರಿಪ್ರಿಂಟ್ ಆಗಿ ಬಂದಿದೆ ಮತ್ತೆ. ಬೇಗ ಹೋಗಿ ಒಂದು ಕಾಪಿ ಎತ್ತಿಕೊಂಡು ಬಂದುಬಿಡು. ಓದಿಯಾದಮೇಲೆ ಹೇಳು: ಕುಳಿತು ಚರ್ಚಿಸೋಣ.

ಸರಿ, ಮತ್ತೇನು ವಿಶೇಷ? 'ಏನೇನೋ ಕತೆ ಹೇಳುತ್ತಾ ಮುಖ್ಯ ವಿಷಯವನ್ನೇ ಮರೆಸುತ್ತಿದ್ದೀಯಾ' ಅನ್ನುತ್ತೀಯಾ? ಗೊತ್ತು, ವ್ಯಾಲೆಂಟೈನ್ಸ್ ಡೇಗೆ ಗಿಫ್ಟ್ ಎಲ್ಲಿ ಎಂಬುದು ನಿನ್ನನ್ನು ಆಗಿನಿಂದಲೂ ಕಾಡುತ್ತಿರುವ ಪ್ರಶ್ನೆ. ಏನು ಕೊಡಲಿ ನಲ್ಲೆ ನಿನಗೆ...?

ನನ್ನದೆಲ್ಲವನೂ ನಿನಗೆ ಕೊಟ್ಟಿರುವಾಗ ಉಳಿದಿರುವುದೇನು?
ನಾನೇ ನಿನ್ನವನಾಗಿರುವಾಗ ಬೇಕಿನ್ನೇನು?

ನೀನೇನು ಕೊಡುತ್ತೀ ನಂಗೆ? ಹೇ ಕಳ್ಳೀ, ನಾಚುತ್ತೀ ಏಕೆ? ಸಪ್ರೈಸಾ? ಇರಲಿ ಇರಲಿ... ರಾಗಿಗುಡ್ಡದ ಮಧ್ಯದಲ್ಲಿರುವ ಗುಲ್‍ಮೊಹರ್ ಮರ ನಮಗಾಗಿಯೇ ನೆರಳು ಹಾಯಿಸುತ್ತಾ ಕಾಯುತ್ತಿದೆಯಂತೆ. ಮಲ್ಲೇಶ್ವರಂ ಎಯ್ತ್ ಕ್ರಾಸಿನಲ್ಲಿ ಹೂಮಾರುವ ಮಹಿಳೆಯ ಬುಟ್ಟಿಯಲ್ಲಿ ನಿನಗೆಂದೇ ಅರಳಿರುವ ಕೆಂಪು ಗುಲಾಬಿ ಇದೆಯಂತೆ. ಗ್ಯಾಸ್‍ಲೈಟಿನ ಬೆಳಕಿನಲ್ಲಿ ಕಾಯುತ್ತಿರುತ್ತಾನಂತೆ ಪಾನಿಪುರಿ ಮಾಡಿಕೊಡಲು ಅಂಗಡಿಯವ... ಸಿಗುತ್ತೀ ತಾನೇ?

ಹ್ಯಾಪಿ ವ್ಯಾಲೆಂಟೈನ್ಸ್ ಡೇ...!

-ನಿನ್ನವನು

[12.02.2007]

24 comments:

ಸಿಂಧು sindhu said...

ಚುಕ್ಕಿಗಳೇ ಇಲ್ಲದೆ ಅವು ಎಳೆದ ರಂಗೋಲಿಗಳೆಷ್ಟೋ..!
ಚಂದ ಭಾವನೆಯ ಅಂದದ ಚಿತ್ತಾರ.. ನಿನ್ನ ನೇಯ್ಗೆಗೆ ಮಾರು ಹೋಗಿದ್ದೇನೆ ಸು..

ಲಹರಿಯಲ್ಲಿ ಹೊಳೆದ ಪ್ರೀತಿಯಿಂದ ತೋಯ್ದ ಭಾವನೆಗಳ ಸೊಬಗೇ ಅದು.. ನಿನ್ನ ಬ್ಲಾಗ್ ಬುಟ್ಟಿಯಲ್ಲ.. ಅಕ್ವೇರಿಯಂ.. ಜೀವಂತ ಭಾವಗಳ ಈಜುಕೊಳವಲ್ಲವೆ?!

ನಿನ್ನ ಹುಡುಗಿ..ಇರಲಿ-ಇಲ್ಲದಿರಲಿ.. ನಿನ್ನ ಚಿತ್ತಾರಗಳ ಪ್ರತಿ ಕೋನಗಳಲ್ಲೂ.. ಮಿನುಗುತ್ತಿರಲಿ..

Chetan said...

tumbaa chennagide sushruta avare. bhaavanegalige elle iruvudilla annodanna spashtikarisiddira..ide modalu naanu nimma blog nodiddu... chennagide!

Anveshi said...

ಗಾಳ ಹಾಕುತ್ತಾ ಪ್ರೇಮ ಪತ್ರ ಬರೆದವರೆ,

ನೀವು ಬರೆದ ಪತ್ರ ತಲುಪಿತು.
ಓದಿ ಸಂತೋಷವಾಯಿತು.
ಉತ್ತರಿಸಲು ತಡವಾಗಿದೆ.
ಮುಂದಿನ ಪತ್ರದಲ್ಲಿ ಸುದೀರ್ಘವಾಗಿ ಬರೆಯುವೆ.
ವ್ಯಾಲೆಂಟೈನ್ಸ್ ಡೇ ಆಚರಣೆ ಹೇಗಿತ್ತು ಎಂಬುದನ್ನು ಮುಂದಿನ ಪತ್ರದಲ್ಲಿ ದಾರಿ ಕಾಯುತ್ತಿರುವ....
ಇಂತಿ...
;)

Anonymous said...

ಸುಶೃತ, ನಿಮ್ಮ ಪ್ರೇಮಪತ್ರ ಹುಡುಗಿಯ ಕೈಸೇರಿತೇ? ಅಲ್ಲಿವರೆಗೆ -

"ಒಂದು ಪ್ರೇಮಪಲ್ಲಕ್ಕಿಯ ಮೇಲೆ ಎರಡು ಹೃದಯಗಳ ಪಯಣ ಸಾಗಲಿ!"

ಶ್ರೀನಿಧಿ.ಡಿ.ಎಸ್ said...

ಸುಶ್,
ಸುಮ್ ಸುಮ್ನೆ ಚೊಲೋ ಬರದ್ದೆ ಚೊಲೋ ಬರದ್ದೆ ಹೇಳಿ ಸಾಕಾಗಿ ಹೋತಾ ಮಾರಾಯಾ..
ನೋಡನ ಸ್ವಲ ಕೆಟ್ದಾಗಿ ಎಂತಾರು ಬರಿ!:)ಬೈಯಲಾರು ಬೈತಿ.

Sushrutha Dodderi said...

@ ಸಿಂಧು

ನನ್ನ ಬ್ಲಾಗನ್ನು ಅಕ್ವೇರಿಯಂ ಅಂದದ್ದಕ್ಕೆ, ಜೀವಂತ ಭಾವಗಳ ಈಜುಕೊಳ ಅಂದದಕ್ಕೆ, ನೇಯ್ಗೆಗೆ ಮಾರುಹೋದದ್ದಕ್ಕೆ, 'ಹುಡುಗಿ ಇರಲಿ-ಇಲ್ಲದಿರಲಿ' ಅಂದು relaxation ತೋರ್ಸಿದ್ದಕ್ಕೆ.... ತುಂಬಾ ಥ್ಯಾಂಕ್ಸ್ :)

Sushrutha Dodderi said...

@ chetan

ನನ್ನ ಬ್ಲಾಗಿಗೆ ಸ್ವಾಗತ. ನೀವು ತೋರಿಸಿದ ಪ್ರೀತಿಗೆ ಋಣಿ. ಬರುತ್ತಿರಿ.

Sushrutha Dodderi said...

@ ಅಸತ್ಯ ಅನ್ವೇಷಿ

ಅನ್ವೇಷಿಗಳೇ, ಪತ್ರ ತಲುಪಿತಾ? ಸಂತೋಷವಾಯ್ತಾ? ಸರಿ! ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ. ಆಚರಣೆ.. ನಮ್ದೆಲ್ಲಾ ಏನು ಬಿಡಿ ಸ್ವಾಮಿ... :)

Sushrutha Dodderi said...

@ sritri

ತಲುಪಿತೋ ಇಲ್ಲವೋ ಗೊತ್ತಿಲ್ಲ ಮೇಡಂ. No reply from that side! ಸಧ್ಯಕ್ಕೆ, ನೀವಂದಂತೆ, ಪಲ್ಲಕ್ಕಿಯೇ ಗತಿ ನಂಗೆ!

Sushrutha Dodderi said...

@ ಶ್ರೀನಿಧಿ....

ಒಟ್ನಲ್ಲಿ ನೀನು ಬೈಯಕ್ಕೆ ಸಕಲ ಸಿದ್ಧತೆಗಳನ್ನೂ ಮಾಡ್ಕ್ಯಂಡು ಕಾಯ್ತಾ ಇದ್ದೆ ಅಂತಾತು..! ಇರ್ಲಿ ಇರ್ಲಿ, ನಿನ್ನ ಆಸೆ ಆದಷ್ಟು ಬೇಗ ನೆರವೇರಲಿ ಅಂತ ಹಾರೈಸ್ತಿ :)

Shiv said...

ಸುಶ್,

ತುಂಬಾ ಚೆನ್ನಾಗಿದೆ ಕಣೋ..
ಬೇಗ ರಾಗಿಗುಡ್ಡದ ಮರದ ಕೆಳಗೆ ನೀವು ಸೇರಿ..

Sushrutha Dodderi said...

@ shiv

ಬೇಗ ಅಂದ್ರೆ ಕೇಳ್ಬೇಕಲ್ಲಪ್ಪಾ...? ನೋಡುವ ಏನಾಗ್ತದೋ.. :)

Pramod P T said...

ನಿಮ್ಮ ಮೌನ ಗಾಳದ ಮಾತುಗಳಿಗೆ ಮರುಮಾತಿಲ್ಲ!

Sushrutha Dodderi said...

@ Pramod P T

ನೀವು ಬಿಡಿ ಪ್ರಮೋದ್.. ಮಾತಿಲ್ಲದೆಯೂ ಚಿತ್ರಗಳ ಮೂಲಕವೇ ಎಲ್ಲವನ್ನೂ ಹೇಳಬಲ್ಲಿರಿ... ಥ್ಯಾಂಕ್ಸ್ ಎ ಲಾಟ್ ಮ್ಯಾನ್..

ರಾಧಾಕೃಷ್ಣ ಆನೆಗುಂಡಿ. said...

ತುಂಬಾ ಖುಷಿಯಾಯಿತು. ಬಂದ್ ದಿನ ನಾನು ನಿದ್ದೆ ಮಾಡುತ್ತಿದ್ದೆ. ನೀವು ನಿಮ್ಮ ಹುಡುಗಿಯ ಬಗ್ಗೆ ಕವನ - ಕನಸು ಕಟ್ಟಿತ್ತೀರಿ.

ಪ್ರೀತಿಯ ದಿನ ಮುಗಿದು ಕೆಲ ದಿನವಾಯಿತು. ಇವತ್ತು ನನಗೆ ಬ್ಲಾಗ್ ಟೂರ್ ಹಾಗೆ....

ತಡವಾಗಿದಕ್ಕೆ ಕ್ಷಮೆ ಇರಲಿ. ಚೆನ್ನಾಗಿತ್ತು. ನನ್ನ ಹಳೆಯ ದಿನಗಳು ನೆನಪಾಯಿತು( ಕಾಲೇಜು ದಿನಗಳು) . ಈಗ ಕೆಲಸವೇ ನನ್ನ ಪ್ರೀಯತಮೆ

Sushrutha Dodderi said...

@ ರಾಧಾಕೃಷ್ಣ ಆನೆಗುಂಡಿ

ಬಂದ್ ದಿನ ನಾನೂ ನಿದ್ದೆ ಮಾಡುವವನಿದ್ದೆ; ಆದರೆ ನಿದ್ದೆಯಲ್ಲೂ ಕನಸಾಗಿ ಬರುತ್ತಾಳಲ್ಲ ಅವಳು... ನಾನಾದರೂ ಏನು ಮಾಡಲಿ: ಕವಿತೆ ಹೊಸೆಯುವ ಬದಲು...?

ಹಹ್ಹ, ಕೆಲಸಾನೆಲ್ಲ ಪ್ರಿಯತಮೆ ಅಂದ್ಕೋಬೇಡಿ ಸ್ವಾಮೀ... ಬೇರೆ ಪ್ರಿಯತಮೆಯರನ್ನೂ ಸಲುಹಿ ಸ್ವಲ್ಪ.. :))

Shree said...

ಇಷ್ಟು ಚೆನ್ನಾಗಿ ಪ್ರೀ ತಿ ಬಗ್ಗೆ ಬರೀತೀರಲ್ಲ, ನಿಜವಾಗ್ಲೂ ಅದನ್ನ ನೋಡಿದ್ದೀರಾ?:-)

Anonymous said...

ಸುಶ್ರುತ, ಬಹಳ ನಾಜೂಕಾಗಿ ಎಳೆಗಳನ್ನು ಕೂಡಿಸಿ ಶಬ್ದ ಜಾಲ ಹೆಣೆದಿದ್ದೀರಿ, ಗಾಳ ಇಲ್ಲದೆಯೂ ಈ ಬಲೆಗೆ ನಿಮ್ಮ ಹುಡುಗಿ ಇನ್ನೂ ಬಿದ್ದಿಲ್ಲವೆ? ಬೇಗನೇ ನಿಮ್ಮ ಕನಸಿನ ಕನ್ನಿಕೆ ಮನೆಗೂ ಬರಲೆಂದು ಹಾರೈಸುವೆ.

Sushrutha Dodderi said...

@ SHREE

'ಪ್ರೀತಿ ಮಾಡಿದೀರಾ?' ಅಂತ ಕೇಳೋವ್ರನ್ನ ನೋಡಿದೀನಿ; ಆದ್ರೆ 'ನೋಡಿದೀರಾ?' ಅಂತ ಕೇಳ್ತಿರೋರು ನೀವೇ ಫಸ್ಟು! ಪ್ರೀತಿಯನ್ನೇನಿದ್ರೂ ಅನುಭವಿಸೋದು ಅಲ್ವಾ?. "ಆಹಾ ಎಂಥ ಮಧುರ ಯಾತನೇ.." ಅಷ್ಟೇ!

ಧನ್ಯವಾದಗಳು.

Sushrutha Dodderi said...

@ ಜ್ಯೋತಿ

ಹುಡುಗಿ ಇದ್ದಾಳೆಯೋ ಇಲ್ಲವೋ, ಪ್ರೀತಿಯಂತೂ ಇದೆ. ನಾನು ಪ್ರೀತಿಯೆಂಬ ಪ್ರಕ್ರಿಯೆಯನ್ನು ಪ್ರೀತಿಸುವವನು. ನೋಡೋಣ, ಗಾಳಕ್ಕೆ ಬೀಳುತ್ತಾಳೋ, ಬಲೆಗೆ ಬೀಳುತ್ತಾಳೋ ಅಥವಾ ನನ್ನನ್ನೇ ಹೊಂಡಕ್ಕೆ ಕೆಡವಿಕೊಳ್ಳುತ್ತಾಳೋ...! :)

ಕಾಂಪ್ಲಿಮೆಂಟಿಗೆ, ಹಾರೈಕೆಗೆ ತುಂಬಾ ಥ್ಯಾಂಕ್ಸ್.

Gubbacchi said...

ಇದು ಕಲ್ಪನೆ ಅಂತ ಹೇಳಲಿಕ್ಕೆ ಕಷ್ಟ....:)

Sushrutha Dodderi said...

@ Gubbacchi

ನೀವು ಹೆಂಗನ್ಕೋತೀರೋ ಹಂಗೆ! ನಂದೇನು ನೋ ಅಬ್ಜೆಕ್ಶನ್ ಇಲ್ಲ!! :)

kpbolumbu said...

"bareyada mounada kavite haadayitu.....edeyali nenapina novu sukha tanditu....."

Sushrutha Dodderi said...

@ krishna

ಕೃಷ್ಣನಿಗೆ ಈ ಪ್ರೇಮದ ನಂದನವನಕ್ಕೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು.