Friday, March 02, 2007

ಮೂರುಸಂಜೆಗೆ ಮೂರು ಹಾಡುಗಳು

"ಸಂಜೆಗೂ ಬೇಸರಕ್ಕೂ ಬಿಡಿಸಲಾಗದ ನಂಟು..."

ಹೌದಲ್ಲ? ಯಾಕೆ ಹಾಗೆ? "ಪಶ್ಚಿಮ ದಿಗಂತದ ಬಣ್ಣ ಕಣ್ಣನ್ನೇ ದಣಿಸುವಷ್ಟು ಮೋಹಕವಾಗಿ ಹಬ್ಬಿದೆ. ಸೂರ್ಯರಶ್ಮಿ ಮಣ್ಣನ್ನೂ ಚಿನ್ನವಾಗಿಸಿದೆ. ಆದರೆ ಒಂದೇ ಕೊರಗು: ಸಂಗಾತಿ ಇಲ್ಲದಿರುವುದು!"

ನಿಸಾರ್ ಅಹ್ಮದರ ಲೇಖನಿಯಿಂದ ಬರೆಯಲ್ಪಟ್ಟ ಈ ಹಾಡು, 'ನಿತ್ಯೋತ್ಸವ' ಕ್ಯಾಸೆಟ್ಟಿನಲ್ಲಿ ಮೈಸೂರು ಅನಂತಸ್ವಾಮಿಯವರ ದನಿಯಲ್ಲಿ ಹಾರ್ಮೋನಿಯಂ ನಾದದೊಂದಿಗೆ ಹೊಮ್ಮುತ್ತಿದ್ದರೆ, ಅದು ಸಂಜೆಯಲ್ಲದಿದ್ದರೂ ಅಲ್ಲಿ ಸಂಜೆ ಕವಿಯುತ್ತದೆ. ಖುಷಿಯಲ್ಲಿದ್ದರೂ ಬೇಸರ ಆವರಿಸಿಕೊಳ್ಳುತ್ತದೆ.

ಸಂಜೆಗೆ ಸಂಗಾತಿ ಇರಬೇಕು. ರಾತ್ರಿಗೆ ಇರದಿದ್ದರೂ ನಡೆಯುತ್ತದೆ, ಸಂಜೆಗೆ ಬೇಕೇ ಬೇಕು. ಅದರಲ್ಲೂ ಜೀವನದ ಸಂಜೆಗೆ. ದಿನವೆಲ್ಲ ದುಡಿದು ದಣಿದಾಗಿದೆ. ಸಂಜೆ ಮನೆಗೆ ಬಂದಾಗ ಕುಡಿಯಲೊಂದು ಬೆಚ್ಚನೆ ಕಾಫಿಯನ್ನು ಅವಳು ತನ್ನ ಅಮೃತ ಹಸ್ತದಿಂದ ಕೊಡಬೇಕು. ಕೊಡುವಾಗ ಅವಳ ಕೈಯ ಹಸಿರು ಗಾಜಿನ ಬಳೆಗಳಲ್ಲಿ ಮುಳುಗುತ್ತಿರುವ ಕೆಂಪು ಸೂರ್ಯನ ರಶ್ಮಿ ಕಣ್ಣು ಹೊಡೆಯಬೇಕು. ಸಂಜೆಯಲೆ ರಾತ್ರಿ ಇಳಿಯಬೇಕು.

ಹಳೆಯ ಕಾಲವೆನ್ನಬೇಡಿ, ಈಗಲಾದರೂ ಅಷ್ಟೆ. ವಾರವೆಲ್ಲ ಆಫೀಸು, ಬ್ಯುಸಿ, ವರ್ಕ್‍ಲೋಡು. ಸಿಕ್ಕುವುದೊಂದು ಭಾನುವಾರ. ಮನೆ ಕ್ಲೀನ್ ಮಾಡುವುದು, ಬಟ್ಟೆ ವಾಶ್ ಮಾಡುವುದು, ಐರನ್ ಮಾಡುವುದು, ಮಧ್ಯಾಹ್ನದ 'ಸ್ಪೆಶಲ್' ಅಡುಗೆ, ಉಂಡಾದಮೇಲೆ ತೆಗೆದ 'ಮದ್ಧಿನ್ ಮೇಲಿನ್ ನಿದ್ದೆ', ನಂತರ ಕುಡಿದ ಕಾಫಿ... ಹೀಗೇ ಸಂಜೆಯಾಗಿದೆ. ಈಗೇನು ಮಾಡುವುದು? ಟಿವಿಯಲ್ಲಿ ಒಂದೂ ಒಳ್ಳೆಯ ಪ್ರೋಗ್ರಾಮ್ ಇಲ್ಲ. ರೂಂಮೇಟ್ ಸಹ ಎಲ್ಲಿಗೋ ಹೊರಟು ನಿಂತಿದ್ದಾನೆ. ಮುಳುಗಿತ್ತಿರುವ ಸೂರ್ಯನನ್ನು ನೋಡುತ್ತಾ ಸುಮ್ಮನೆ ಕುಳಿತಿರಲು ಆಗುವುದಿಲ್ಲ. ಸಿಗುತ್ತಾಳಾ ಅವಳು ಇವತ್ತು? ಬರಬಹುದಾ ಅವಳು ಇವತ್ತು? ಲಗುಬಗೆಯಿಂದ ಸಿದ್ಧಗೊಂಡು, ತಲೆ ಬಾಚಿಗೊಂಡು, ಕಂಕುಳಿಗೆ ಪೌಡರ್ ಹಾಕಿಕೊಂಡು, ಟೀಶರ್ಟ್-ಜೀನ್ಸ್ ತೊಟ್ಟು.. ಪ್ರತಿ ವಾರವೂ ಇದೇ ಕೆಲಸವಾಗಿದೆ. ಹಾಗಾದರೆ ಏನಾದಳು ಅವಳು? ಮೊಬೈಲು ಸ್ವಿಚ್ ಆಫ್. ಬರುತ್ತಾಳೋ ಇಲ್ಲವೋ, ಏನಾದರಾಗಲಿ ನಾನು ಹೋಗುವುದು ಹೋಗುತ್ತೇನೆ...

ಮೂರುಸಂಜೆ: ಅದು ಮೂರು ಬೆಳಕುಗಳ ಸಂಗಮ. ಸೂರ್ಯ ಇನ್ನೂ ಪೂರ್ತಿ ಮುಳುಗಿಲ್ಲ. ಚಂದಿರನ ತಿಂಗಳ ಬೆಳಕಿನ ತುಂತುರು ಅದಾಗಲೇ ಶುರುವಾಗಿದೆ. ಮತ್ತು, ಮನೆ-ಬೀದಿಯ ದೀಪಗಳು ಹೊತ್ತಿಕೊಳ್ಳುತ್ತಿವೆ. ಪಕ್ಕದ ಮನೆಯ ಗೃಹಿಣಿ ತುಳಸಿಕಟ್ಟೆಯ ಎದುರಿಗೆ ಹಣತೆಯನ್ನು ಹಚ್ಚಿಡುತ್ತಿದ್ದಾಳೆ.

ಲಾಲ್‍ಬಾಗು ಪ್ರೇಮಿಗಳಿಂದಲೇ ತುಂಬಿದೆ. ಎಲ್ಲರೂ ಅವರವರ ಸಂಗಾತಿಯೊಂದಿಗೆ ಸಲ್ಲಾಪದಲ್ಲಿ ತೊಡಗಿದ್ದಾರೆ. ಆದರೆ ನನ್ನ ಸಂಗಾತಿ ಎಲ್ಲಿ? ಸಂಗಾತಿಯ ಬರವಿಗಾಗಿ ಕಾದೂ ಕಾದೂ ಬೇಸತ್ತ ಜೀವಗಳ ಹೃದಯೋದ್ಘಾರ ಈ ಪದ್ಯ:

ಮತ್ತದೇ ಬೇಸರ; ಅದೇ ಸಂಜೆ; ಅದೇ ಏಕಾಂತ
ನಿನ್ನ ಜೊತೆ ಇಲ್ಲದೆ, ಮಾತಿಲ್ಲದೆ, ಮನ ವಿಭ್ರಾಂತ!

ಕಣ್ಣನೇ ತಣಿಸುವ ಈ ಪಡುವಣ ಬಾನ್ಬಣ್ಣಗಳು
ಮಣ್ಣನೇ ಹೊನ್ನಿನ ಹಣ್ಣಾಗಿಸುವೀ ಕಿರಣಗಳು
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗಗಾನ
ಚಿನ್ನ, ನೀನಿಲ್ಲದೆ ಭಿಮ್ಮೆನ್ನುತಿದೆ ರಮ್ಯೋದ್ಯಾನ!

ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ
ಬರುವೆಯೋ ಬಾರೆಯೋ ನೀನೆನ್ನುತಿದೆ ಹಾ! ಸಂದೇಹ
ಮುತ್ತಿದಾಲಸ್ಯವ, ಬಿಗಿ ಮೌನವ ಹೊಡೆದೋಡಿಸು ಬಾ
ಮತ್ತೆ ಆ ಸಮತೆ ಹಿರಿ ಬೇಲಿಯ ಸರಿ ನಿಲ್ಲಿಸು ಬಾ

ಬಣ್ಣ ಕಳೆದೊಡವೆಯ ತೆರ ಮಾಸುತಲಿದೆ ಸೂರ್ಯಾಸ್ತ
ನೋಡಗೋ! ತಿಮಿರದ ಬಲೆ ಬೀಸಿದ ಇರುಳಿನ ಬೆಸ್ತ..
ವೆಚ್ಚವಾಗುತ್ತಿದೆ ಸವಿಚಣಗಳ ಧನ ದುಂದಾಗಿ
ನಲಿವಿನ ಗಳಿಕೆಗೆ ಬಳಸವುಗಳನು ಒಂದೊಂದಾಗಿ

//ಹಾಡು ಕೇಳಿ//

* * *

ಸಂಜೆಯ ಬಗ್ಗೆ ಒಳ್ಳೊಳ್ಳೆಯ ಪದ್ಯಗಳಿವೆ. ಕವಿ ಎಚ್.ಎಸ್. ವೆಂಕಟೇಶಮೂರ್ತಿ ದ್ವಾಪರಯುಗಕ್ಕೇ ಕರೆದೊಯ್ಯುತ್ತಾರೆ ಈ ಕವಿತೆಯಲ್ಲಿ:

ಸಂಜೆಯಾಗುತಿದೆ ನಡೆ ನಡೆ ಗೆಳೆಯಾ ಬೃಂದಾವನದ ಕಡೆ
ತಾಳೆಯ ಮರಗಳು ತಲೆಯ ತೂಗುತಿವೆ ಕೆದರುತ ಇರುಳ ಜಡೆ
ಅಂಜಿಕೆಯಾಗುವ ಮುನ್ನವೆ ಸಾಗುವ ಬೃಂದಾವನದ ಕಡೆ

ದಟ್ಟಡವಿಯಲಿ ಪುಟ್ಟ ಬಾಲಕರು; ಕತ್ತಲು ಇಳಿಯುತಿದೆ
ಮಲ್ಲಿಗೆ ಬಣ್ಣದ ಹಸುಗಳಿಗೆಲ್ಲ ಕಪ್ಪನು ಬಳಿಯುತಿದೆ
ಕೃಷ್ಣ ಕಪಿಲೆಯರು ಕಾಣುವುದಿಲ್ಲ; ಅಂಜಿಕೆ ಬೆಳೆಯುತ್ತಿದೆ

ಅಂಜದಿರೆನುವನು ನಂದಕುಮಾರ ಮುರಳಿಯ ತುಟಿಗಿಡುತ
ಅಭಯ ನಾದವನು ಬಯಲಲಿ ತುಂಬಿದ ಕೊಳಲ ಉಸಿರು ಬಿಡುತ
ಇರುಳ ಬಾನಿನಲಿ ತೇಲುತ ಬಂತು ಹುಣ್ಣಿಮೆ ಬೆಳ್ಳಿ ರಥ

ಎಲ್ಲಿ ನೋಡಿದರೂ ಬೆಳದಿಂಗಳ ಮಳೆ ಮಿದುವಾಯಿತು ನೆಲವು
ಹಾಲಿನ ಬಟ್ಟಲ ಎತ್ತಿ ಹಿಡಿಯುತಿದೆ ಕೂ ಎನ್ನುತ ಕೊಳವು
ಬೆಣ್ಣೆಯ ಮೆತ್ತಿದ ತುಟಿಯನೊರೆಸುತಿದೆ ಆ ಯಮುನಾಂಚಲವು

ಗೋಪಬಾಲಕರು ಕುಣಿಯುತಲಿಹರು ಕೊಳಲುಲಿ ಕೇಳುತ್ತಾ
ಮರೆತ ಸಾಲುಗಳ ಒರತೆಯ ಬಗೆದು ಗೀತವ ಪಲುಕುತ್ತಾ
ಹಸುಗಳ ಕೊರಳಿನ ಗಂಟೆಯಲುದಿಸಿ ನಾದಕೆ ಸಿಲುಕುತ್ತಾ;
ತಾರಾಲೋಕವ ನಿಲುಕುತ್ತಾ

//ಹಾಡು ಕೇಳಿ//

* * *

ಅಡಿಗರಂತೂ ಅಡಿಗಡಿಗೂ ನೆನಪಾಗಿ ಕಾಡುತ್ತಾರೆ. 'ಆವರಣ'ದಿಂದ ಹೊರಬರುವ ಪ್ರಯತ್ನವಾಗಿ ಮೊನ್ನೆ 'ಅಂಕಿತ'ದಿಂದ ಗೋಪಾಲಕೃಷ್ಣ ಅಡಿಗರ ಸಮಗ್ರ ಕಾವ್ಯವನ್ನು ಕೊಂಡುತಂದೆ. ಎಷ್ಟೊಂದು ಉದ್ದುದ್ದ ಕವಿತೆಗಳನ್ನು ಬರೆದಿದ್ದಾರೆ ಅಡಿಗರು. ಅಲ್ಲದೇ ಅವರು ಒಂದೊಂದು ಕವಿತೆಯನ್ನೂ ಬರೆಯಲಿಕ್ಕೆ ತೆಗೆದುಕೊಂಡ ಸಮಯ ಅಚ್ಚರಿಗೊಳಿಸುತ್ತದೆ. ಕೆಲವೊಂದು ಕವಿತೆ ಬರೆಯಲಿಕ್ಕೆ ಅವರು ಮೂರು-ನಾಲ್ಕು ತಿಂಗಳು ತೆಗೆದುಕೊಂಡಿದ್ದಾರೆ! ಆದರೆ ಅವು ಎಷ್ಟೊಂದು ಅದ್ಭುತವಾಗಿವೆ. ಸಂಕಲನದಿಂದ ಆಯ್ದ ಒಂದು ಕವಿತೆ ಇಲ್ಲಿದೆ. ಶೀರ್ಷಿಕೆ: 'ಒಂದು ಸಂಜೆ'.

ಮೌನ ತಬ್ಬಿತು ನೆಲವ; ಜುಮ್ಮೆನೆ ಪುಳಕಗೊಂಡಿತು ಧಾರಿಣಿ
ನೋಡಿ ನಾಚಿತು ಬಾನು; ಸರಿಯಿತು ಕೆಂಪು ಸಂಜೆಯ ಕದಪಲಿ
ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು
ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು

ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು;
ನೆಲವು ತಣಿಯಿತು, ಬೆವರು ಹನಿಯಿತು; ಭಾಷ್ಪ ನೆನೆಸಿತು ಹುಲ್ಲನು
ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು,
ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು

//ಹಾಡು ಕೇಳಿ//

ಅದೆಷ್ಟು ಚೆನ್ನಾಗಿ ಬರೆಯುತ್ತಾರೆ ಅಡಿಗರು! ಒಂದು ಸಂಜೆ ಮೌನ ನೆಲವನ್ನು ತಬ್ಬಿತಂತೆ. ನೆಲ ಪುಳಕಗೊಂಡಿತಂತೆ. ಅದನ್ನು ನೋಡಿ ಬಾನು ನಾಚಿತಂತೆ. ಸಂಜೆಯ ಕೆಂಪಿನಡಿಯಲ್ಲಿ ಅಡಗಿತಂತೆ. ಹಕ್ಕಿಗಳು 'ಸೋಬಾನ' ಹಾಡಿದವಂತೆ..... ನೆಲವು ತಣಿಯಿತು, ಬೆವರು ಹನಿಯಿತು, ಭಾಷ್ಪ ನೆನೆಸಿತು ಹುಲ್ಲನು...

ಇಲ್ಲ, ಸಂಗಾತಿ ಇರಲೇಬೇಕು ಸಂಜೆಗೆ.

16 comments:

Alpazna said...

ಹೌದಪ್ಪೋ ಹೌದು!!

ಸಂಜೆಗೆ ರಂಗೇರಬೇಕೆಂದರೆ ನನಗಂತೂ ಸಂಗಾತಿಯ ಸನಿಹ ಬೇಕೇ ಬೇಕು..

ಆದರೆ ಸಂಗಾತಿ ಸಿಕ್ಕರೆ, ಸಂಜೆಯೇ ಆಗಬೇಕೆಂದೇನೂ ಇಲ್ಲ ;)

ಮಟ ಮಟ ಮಧ್ಯಾಹ್ನವೇ ಅವಳ ನೆನಪಾಗುವಂತೆ ಮಾಡಿದೆ
ನೀನು. ಆಹಾ ಎಷ್ಟು ಮಧುರ. ಅವಳೊಡನೆ ಕಳೆದ ಸಂಜೆಗಳ ನೆನಪು! ಏನೋ ತಂಪು ತಂಪು..
ಅದ(ಧ)ರ ಮುಂದೆ ಈ ಎ.ಸಿ. ಏನೂ ಅಲ್ಲ!

ಸಿಂಧು Sindhu said...

ಚಂದದ ಸಂಗತಿಗಳನ್ನು ಅನುಭವಿಸುವಾಗ ಮನಸ್ಸು ಜೊತೆಗೊಂದು ಸಂಗಾತಿಯನ್ನು ಬಯಸುತ್ತದೆ.. ಅವಳು ಸಿಂಗಾರಿ ಬೆಡಗಿಯೇ ಆಗಿರಬೇಕಿಲ್ಲ, ಚೆಲುವಾಂತ ಚೆನ್ನಿಗನೂ ಅಲ್ಲ.. ಬದಲಾಗುವ ಸಂಜೆಗೆಂಪು ಬಣ್ಣಗಳೊಂದದಕ್ಕೂ ಕತೆ ಕಟ್ಟಿ ಹೇಳುವ ಅಜ್ಜನಾಗಿರಬಹುದು, ಅಲ್ಲಿ ನೋಡತ್ತೆ ಸ್ಟಾರು, ಉಂಹೂ ಅದು ನಕ್ಷತ್ರವಲ್ಲ ಅಂತ ತೋರಿಸುವ ಚಿನ್ನಾರಿ ಪುಟ್ಟನಿರಬಹುದು, ಪಾರ್ಕಿನ ಕಾವಲುಗಾರನಿರಬಹುದು, ವಾಕ್ ಬಂದ ನಾಯಿಮರಿಯಿರಬಹುದು, ಕೆರೆಯ ನೀರಿಗದ್ದುವಂತೆ ಬಾಗಿದ ಕೊಂಬೆಯ ಮೇಲೆ ಚಿಂವ್ ಗುಟ್ಟುವ ಹೆಸರೇ ಗೊತ್ತಿಲ್ಲದ ಹಕ್ಕಿಯಿರಬಹುದು, ಸುತ್ತಲ ದಾರಿಸಾಗುವವರಿರಬಹುದು... ನಿನ್ನ/ನನ್ನ ಭಾವ ತೀವ್ರತೆಯ ಕ್ಷಣಗಳಲ್ಲಿ ಹಾಂ.. ಹೌದಲ್ಲಾ ಅನ್ನಲೊಂದು ಜೀವ ಬೇಕೆನ್ನಿಸುತ್ತದೆ. ನಮ್ಮ ಶ್ರೇಷ್ಠ ಕವಿಗಳು ಈ ಭಾವಬಿಂದುಗಳನ್ನ ತಮ್ಮ ಪ್ರತಿಭೆಯ ಗಿರಿಶಿಖರಗಳಲ್ಲಿ ಸುಂದರ ಜಲಪಾತವಾಗಿ ಹರಿಸಿದ್ದಾರೆ.. ಈ ಸುಂದರ ಹಾಡುಗಳನ್ನ ನೆನಪಿಸಿದ್ದಕ್ಕೆ ಥ್ಯಾಂಕ್ಸ್. ನಿನ್ನೆಯಿಂದ ನನ್ನನ್ನು ಕಾಡುತ್ತಿದ್ದ ಸಂಜೆ ಸಾಲು -- ಇರುಳ ಹೊಸ್ತಿಲೆಡವಿ ಹಣೆಯೊಡೆದ ಸಂಜೆ.. ನನ್ನ ಪ್ರೀತಿಯ ಕವಿ ಕೆ.ಎಸ್.ನ ಅವರ ಕವಿತೆಯಿಂದ.

ಸಿಂಧು Sindhu said...

* ಬಣ್ಣಗಳೊಂದಂದಕ್ಕೂ...

ಸುಶ್ರುತ ದೊಡ್ಡೇರಿ said...

@ alpazna

ಹೌದು ದೋಸ್ತಾ. ಆ 'ಹಸಿ' 'ಬಿಸಿ' ಯ ಮುಂದೆ 'ಎ.ಸಿ.' ಯನ್ನು ನೀವಾಳಿಸಿ ಎಸೀಬೇಕು. In fact, ಈ article ಬರಿಯೋದಕ್ಕೆ ನಿನ್ನ 'ಸಂಧ್ಯಾರಾಗ'ವೇ ಸ್ಪೂರ್ತಿ. So, ಒಪ್ಪಿಸಿಕೋ!

Sree said...

ಆಹಾ! ನನ್ನ ಪಾಡಿಗೆ ಯಾವುದೋ ಡಾಕ್ಯುಮೆಂಟ್ ಕಂಪ್ಯೂಟರೊಳಕ್ಕೆ ಕುಟ್ಟುತ್ತಾ ಕೂತಿದ್ದೆ, ಹಂಗೇ ಸ್ವಲ್ಪ ಅಡ್ಡಾಡಿ ಬರೋಣ ಅಂತ ಇಲ್ಲಿಗೆ ಬಂದ್ರೆ ಭಾವಯಾನಕ್ಕೆ ಹಚ್ಚಿಬಿಟ್ರಲ್ಲ್ರೀ! ಇನ್ನು ಕೆಲಸ ಆದ್ ಹಂಗೇ ಇವತ್ತು!:))
ಬೇಂದ್ರೆಯವರ 'ಮುಗಿಲಮಾರಿಗೆ' ಗುನುಗ್ತಿದೀನಿ...

Pramod P T said...

ಅರೆರೆ..ಸುಶ್ರುತರವರೇ,
ಏನಿದು...!ನಿಮ್ಮ 'ಒಂದು ಪ್ರೇಮಪತ್ರವು' ಸೇರಬೇಕಾದ ಕೈ ಸೇರಲಿಲ್ಲವೋ ಹೇಗೆ? ಸೊಗಸಾದ ಬರವಣಿಗೆ..
ಸಕ್ಕತ್ feel ಆಗ್ತಿದೇರಿ, ಇದನ್ನ ಓದಿದ ಮೇಲಂತೂ...
ದಿನಕ್ಕೆ ಎರಡೆರಡು ಬಾರಿ check ಮಾಡೊ ಹಾಗಿದೆ ನಿಮ್ಮ blog-ನ.

ನೀವು comment ಗಳಿಗೆಲ್ಲಾ ಉತ್ತರಿಸುವ ರೀತಿ ಅಧ್ಬುತ!

ಸುಶ್ರುತ ದೊಡ್ಡೇರಿ said...

@ ಸಿಂಧು

ಹಾಂ, ಹೌದು. 'ಹಾಂ ಹೌದಲ್ಲ' ಅನ್ನಲಿಕ್ಕೆ ಒಂದು ಜೀವ ಬೇಕು ಸಂಜೆಯಲ್ಲಿ... ಭಾವತೀವ್ರತೆಯ ಕ್ಷಣಗಳಲ್ಲಿ... ಸರಿ ಹೇಳಿದಿ. ಅದು ಸಂಗಾತಿಯೇ ಆಗಿರಬೇಕೆಂದಿಲ್ಲ; ಸಂಗಾತಿಯಂತೆ 'ಕಂಪೆನಿ' ಕೊಡುವವರ್ಯಾರೇ ಆದರೂ ಓಕೆ. ಚಂದದ ಉದ್ದುದ್ದ ಪ್ರತಿಕ್ರಿಯೆಗೆ ಥ್ಯಾಂಕ್ಸ್.

ಸುಶ್ರುತ ದೊಡ್ಡೇರಿ said...

@ sreematha

ನಿಮ್ಮ ಕೆಲಸ ಹಾಳಾಯ್ತು ! ಈಗ ತಾನೆ ಬರೆದು ಮುಗಿಸಿ ಭಾವಲೋಕದಿಂದ ಹೊರಬಂದಿದ್ದ ನನಗೆ 'ಮುಗಿಲ ಮಾರಿಗೆ..' ನೆನಪು ಮಾಡಿ ಮತ್ತೆ ಹಳ್ಳ ಹತ್ಸಿದ್ರಲ್ರೀ...! ಇನ್ನು ನಾನೂ ಕೆಲಸ ಮಾಡಿದಹಂಗೇ ಇವತ್ತು!

ಸುಶ್ರುತ ದೊಡ್ಡೇರಿ said...

@ pramod p t

ಪ್ರೇಮಪತ್ರ ಮುಟ್ಟಿರಲೇಬೇಕಪ್ಪ (ಅಡ್ರೆಸ್ಸಂತೂ ಕರೆಕ್ಟಾಗಿ ಬರೆದಿದ್ದೆ. ಅನ್ವೇಷಿಗಳೂ 'ಮುಟ್ಟಿದೆ' ಅಂತ confirm ಮಾಡಿದ್ರು!). ಆದ್ರೂ ಈಗ ಮೊಬೈಲ್ ಸ್ವಿಚ್ ಆಫ್ !
ಹೋಗ್ಲಿ ಬಿಡಿ, ಈ ಹಾಡುಗಳು ಎಲ್ಲಾನೂ ರಿಪೇರಿ ಮಾಡ್ತಾವೆ. ನೀವು ಅಷ್ಟೆಲ್ಲಾ ಫೀಲ್ ಆಗ್ಬೇಡಿ... ಎಲ್ಲಾ ಸರಿ ಹೋದ್ಮೇಲೆ ಹೇಳ್ತೀನಿ, ಓಕೇನಾ? ಅರೆ ನಗ್ರೀ..! :)

ಜ್ಯೋತಿ said...

ಶ್ರೀ ಮತ್ತು ಸುಶ್... ನಿಮ್ಮಿಬ್ರ ಕೆಲಸದ ಮನೆ ಹಾಳಾಯ್ತು, ಏನೇನೋ ಮಾಡಬೇಕೆಂಬ ಪಟ್ಟಿ ಇಟ್ಟುಕೊಂಡಿದ್ದ ನನ್ನ ವೀಕೆಂಡಿನ ಮೂರೂ ಸಂಜೆಗಳೂ ಪೂರ್ತಿ ಕೆಟ್ಟು ಕೂತಿವೆ "ಏನು ಮಾಡಲಿ ನಾನೂ ಎಲ್ಲಿ ಹೋಗಲೀ..."

ಸುಂದರ ಸಮಯ ಯಾವಾಗಲಾದರೂ ಸರಿ, ಸಂಗಾತಿಯೂ ಇದ್ದರೆ ಅದರ ಸೊಬಗೇ ಬೇರೆ. ಜೊತೆಗೆ ಸಹಚರಿಯಾಗಿ ಕವಿತಾ/ಗೀತಾ ಇದ್ದರಂತೂ... ಇಲ್ಲಿ ಹೇಳಬಾರದು, ಶ್ಶ್.....!

Shiv said...

ಸುಶ್,

ಅಲ್ಲಿ ನನ್ನ ಬ್ಲಾಗ್‍ನಿಂದ 'ಅದೊಂದು ಸಂಜೆ' ಮೂಡ್‍ನಲ್ಲಿ ಇನ್ನೂ ಮಧುರಾನುಭವಿಸುತ್ತ ಇಲ್ಲಿ ಬಂದರೆ ಇಲ್ಲೂ ಸಂಜೆ ಬಗ್ಗೆನೇ ಇರಬೇಕೆ...

ಸುಂದರ ಕವನಗಳನ್ನು ಹಂಚಿಕೊಂಡಿದ್ದಕೆ ಥ್ಯಾಂಕ್ಸ್ ಕಣೋ..
ನನ್ನ ಸ್ಥಿತಿ..'ಎಲ್ಲಿ ಜಾರಿತು ಮನವೂ...'

Shiv said...

ಹಾಡುಗಳನ್ನೆಲ್ಲ ನೆನಪಿಸಿ, ಸಂಜೆಯ ಅಸಹನೀಯ ಏಕಾಂತವನ್ನು ಮತ್ತಷ್ಟು ಅಸಹನೀಯ ಮಾಡಿದಿರಲ್ಲ ಸುಶ್...
ನಿಜವಾಗಿಯೂ ಚಂದದ ಏಕಾಂತವೂ ಸಹಿಸಲಸಾಧ್ಯವಾಗುವುದು ಸಂಜೆಗಳಲ್ಲಿಯೇ!

ಸುಶ್ರುತ ದೊಡ್ಡೇರಿ said...

@ ಜ್ಯೋತಿ

ನನ್ನ ಈ ಪುಟ್ಟ ಲೇಖನ ನಿಮ್ಮನ್ನ ಇಷ್ಟೆಲ್ಲಾ ಡಿಸ್ಟರ್ಬ್ ಮಾಡುತ್ತೆ ಅಂದ್ಕೊಂಡಿರ್ಲಿಲ್ಲ... ಛೇ! ಸಾರಿ ಕಣ್ರೀ... ;(

ಅದ್ಸರೀ, ಈ ಕವಿತಾ/ಗೀತಾ ಯಾರು? ನಾನು ಯಾರಿಗೂ ಹೇಳಲ್ಲ ಹೇಳ್ರೀ...

ಸುಶ್ರುತ ದೊಡ್ಡೇರಿ said...

@ shiv

ಹಾಂ ಶಿವು. ನಿಜ ಹೇಳ್ಬೇಕು ಅಂದ್ರೆ, ಇದು ನನ್ನ ಗೆಳೆಯನೊಬ್ಬನ ಅವಸ್ಥೆಯನ್ನು ನೋಡಿದಾಗ ಬರೆಯಬೇಕೆನ್ನಿಸಿದ್ದು. ನಿಮ್ಮ 'ಅದೊಂದು ಸಂಜೆ'ಯೂ ಇದಕ್ಕೆ ಇಂಬು ಕೊಟ್ಟಿದ್ದು ಸುಳ್ಳಲ್ಲ. ಥ್ಯಾಂಕ್ಸ್ ಗೆ ವೆಲ್ಕಂ :)

ಚಂದದ ಏಕಾಂತವೂ ಸಂಜೆಯಲ್ಲಿ ಸಹಿಸಲಸಾಧ್ಯವಾಗುವುದಕ್ಕೆ ಕಾರಣವನ್ನು ಅನ್ವೇಷಿಗಳ ದಾಟಿಯಲ್ಲೇ ಸಂಶೋಧಿಸಲಾಗಿ, ಸಂಜೆಯ ಮುಂದೆ (next) ರಾತ್ರಿ ಇರುವುದೇ ಅದಕ್ಕೆ ಕಾರಣ ಎಂದು ತಿಳಿದು ಬಂದಿದೆ!! :D

ಭಾವಜೀವಿ... said...

ನಿಜವಾಗ್ಲೂ ಅದ್ಭುತವಾಗಿದೆ..!!
ಸಂಜೆಯ ಕರಾಮತ್ತೇ ಅಂತದು.. ಎಂತಹ ಮೌನಕ್ಕೂ ಮಾತಿನ ತೂಕ ಒದಗಿಸುತ್ತದೆ.. ದಿನದೆಲ್ಲಾ ದಣಿವು ಕ್ಷಣದಲ್ಲಿ ಮಾಯಮಾಡುತ್ತದೆ..ಮನದಾಳವನ್ನು ತಡಕುವವ ಸಂಗಾತಿಯ ಸನಿಹವಿದ್ದರೆ ಸಾಕು ಮಾತಾಡದೇ ಎಲ್ಲ ನೋವುಗಳನ್ನೂ ನೀವಾರಿಸುತ್ತದೆ.. ಒಬ್ಬಂಟಿಯಾದರೆ "ಮತ್ತೆದೇ ಬೇಸರ, ಅದೆ ಸಂಜೆ ಅದೆ ಏಕಾಂತ".. ಲೋಕಾಂತದಲ್ಲೂ ಏಕಾಂತತೆ ಆವರಿಸುತ್ತದೆ..
ಹಸಿವಿಗೆ ಒಳ್ಳೆಯು ಔತಣ ಬಡಿಸಿದ್ದಕ್ಕೆ ಧನ್ಯವಾದಗಳು..
ಮತ್ತೆ ಕಾಡಲು ಶುರು ಹಚ್ಚಿವೆ ಅವಳಿಲ್ಲದ ಸಂಜೆಗಳು..!!!

ಸುಶ್ರುತ ದೊಡ್ಡೇರಿ said...

@ ಭಾವಜೀವಿ

ಸುಂದರ ಪ್ರತಿಕ್ರಿಯೆಗೆ ಅಭಿನಂದನೆಗಳು ಮತ್ತು ಧನ್ಯವಾದಗಳು. "ಮತ್ತೆ ಕಾಡತೊಡಗಿವೆ ಅವಳಿಲ್ಲದ ಸಂಜೆಗಳು.." --ಯಾಕೆ ಏನಾಯ್ತು? ಕಮಾನ್.. ಚಿಲ್ ಔಟ್..