Tuesday, March 13, 2007

ಸಿದ್ದರ ಬೆಟ್ಟದ ಮೇಲೆ ಸಿದ್ದರು



ರಾಷ್ಠ್ರೀಯ ಹೆದ್ದಾರಿ ಸಂಖ್ಯೆ ನಾಲ್ಕರಲ್ಲಿ ಆ ಏಳೂ ಬೈಕುಗಳು ರೊಂಯ್ಯರೊಂಯನೆ ಸಾಗುತ್ತಿದ್ದವು. ಭಾನುವಾರ ಬೆಳಗ್ಗೆ ಎಂಟು ಗಂಟೆಗೆ ಬೆಂಗಳೂರಿನ ನವರಂಗ್ ಬಳಿಯಿಂದ ಶುರುವಾಗಿದ್ದ ಅವುಗಳ ಪಯಣ ತುಮಕೂರು ಬೈಪಾಸ್ ರಸ್ತೆಯಲ್ಲಿ ಸಾಗಿ ಅಲ್ಲೆಲ್ಲೋ ರೈಟಿಗೆ ತಗೊಂಡು ಮುಂದೆಲ್ಲೋ ಲೆಫ್ಟಿಗೆ ತಗೊಂಡು ಸಾಗಿ ಸಾಗಿ ಸಿದ್ದರ ಬೆಟ್ಟದ ತಪ್ಪಲಿಗೆ ಬಂದು ಮುಟ್ಟಿದಾಗ ಸೂರ್ಯನಿಗೆ ಹನ್ನೊಂದರ ಚಹ ಸಹ ಆಗಿಹೋಗಿತ್ತು. ಈ ಬೆಂಕಿ ಬಿಸಿಲಿನಲ್ಲಿ ಬೆಟ್ಟ ಹತ್ತಲೆಂದು ಬಂದ ಹದಿನಾಲ್ಕು ಜನ ಸಿದ್ದರನ್ನು ಅವನು ತನ್ನ ಉರಿಗಣ್ಣಿನಿಂದ ನೋಡಿದ. ಅವನಿಗೆ ಗುರುತು ಸಿಕ್ಕಿತು. ಆ ಸಿದ್ದರಲ್ಲೇ ಒಬ್ಬನನ್ನು ಕೇಳಿದ: 'ಶಿವನ ಸಮುದ್ರಕ್ಕೆ ಬಂದಿದ್ರಲ್ಲ, ನೀವೇನಾ?' ಸಿದ್ದ ಉತ್ತರಿಸಿದ: 'ಹೌದು.' 'ಮತ್ತೆ ಸಾವನದುರ್ಗಕ್ಕೆ?' 'ನಾವೇ!' 'ಓಹೋ! ಗೊತ್ತಾಯ್ತು ಬಿಡಿ, ನೀವು ಆರ್ಕುಟ್ ಹವ್ಯಕ ಗ್ರೂಪಿನವರು!' ಇವನಿಗೆ ಖುಷಿಯಾಯಿತು 'ಹಾಂ, ಹೌದು ಹೌದು!' 'ಸರಿ, ಒಳ್ಳೆಯದಾಗಲಿ, ಹತ್ತಿ ಬೆಟ್ಟ' ಅಂತಂದು ಸೂರ್ಯ ತನ್ನ ಬಿಸಿಲು ಸೂಸುವಿಕೆಯನ್ನು ಮುಂದುವರೆಸಿದ. ಅವನು ವಿಶ್ವಾಸ ತೋರಿಸಿದ್ದು ನೋಡಿ ಬಿಸಿಲು ಕಮ್ಮಿ ಮಾಡಬಹುದೇನೋ ಅಂದುಕೊಂಡಿದ್ದ ಸಿದ್ದರಿಗೆ ನಿರಾಶೆಯಾಯಿತು. ಅವರ ನಿರಾಶೆ ಸೂರ್ಯನಿಗೂ ಅರ್ಥವಾಗಿರಬೇಕು. ಅವನೆಂದ: 'ಏನ್ಮಾಡ್ಲಿ ಫ್ರೆಂಡ್ಸ್? ನಾನು ತಂಪಾಗಬೇಕಿದ್ದರೆ ಮೋಡ ಬರಬೇಕು. ಅವಳಿಲ್ಲದಿದ್ದರೆ ನಾನು ಹೆಲ್ಪ್‍ಲೆಸ್. ಮೋಡ ಇದ್ದಿದ್ದರೆ ನಾನು ಅವಳ ಸೀರೆ ಸೆರಗಿನಡಿ ಮರೆಯಾಗಿ ನಿಮಗೆ ತಂಪನ್ನೀಯುತ್ತಿದ್ದೆ. ಹ್ಮ್, ನಿಮ್ಮ ಬ್ಯಾಡ್‍ಲಕ್!'



ಸರಿ, ಸಿದ್ದರು ಬೆವರು ಒರೆಸಿಕೊಳ್ಳುತ್ತಾ ಬೆಟ್ಟ ಹತ್ತತೊಡಗಿದರು. ನೀರು ಕುಡಿದರು, ಗ್ಲುಕೋಸ್ ತಿಂದರು, ಬಟ್ಟೆ ಬಿಚ್ಚಿ ಬರೀ ಬನಿಯನ್ನು-ಚಡ್ಡಿಯಲ್ಲಿ ನಡೆಯತೊಡಗಿದರು... ಓಹ್! ಇದೆಂಥಾ ಬೆಟ್ಟ! ಇದ್ಯಾಕೆ ಇಷ್ಟೆತ್ತರ ಬೆಳೆದು ನಿಂತಿದೆ? ಇದಕ್ಕೆ ಮೆಟ್ಟಿಲುಗಳನ್ನು ಕೊರೆದವರು ಯಾರು? ಇಗೋ ಇಲ್ಲಿ ಬೆಳೆದು ನಿಂತಿರುವ ಪುಟ್ಟ ಗಿಡ, ಇದ್ಯಾವ ಬೀಜದ ಫಲ? ನಾವು ಈ ಬೆಟ್ಟವನ್ನು ಇಷ್ಟು ಕಷ್ಟಪಟ್ಟು ಹತ್ತಿ ಬರುತ್ತಿರುವುದು ದೊಡ್ಡದೋ ಅಥವಾ ಈ ಬೀಜ ಬಲಿತು ಗಿಡವಾಗಲು ಪಟ್ಟ ಪರಿಶ್ರಮ ದೊಡ್ಡದೋ? ಸಿದ್ದರಿಗೊಂದೂ ಅರ್ಥವಾಗುತ್ತಿಲ್ಲ... ಯಾರೋ ಜೋಕು ಮಾಡುತ್ತಿದ್ದಾರೆ, ಮತ್ಯಾರೋ ಸುಸ್ತಾಗಿ ಅರ್ಧದಾರಿಯಲ್ಲೇ ಕುಳಿತಿದ್ದಾರೆ, ಇನ್ಯಾರೋ ಫೋಟೋ ತೆಗೆಯುತ್ತಿದ್ದಾರೆ... ಹತ್ತುತ್ತಾ ಹತ್ತುತ್ತಾ ಗುಹೆಯ ಬಾಗಿಲಿಗೆ ಬಂದು ಮುಟ್ಟಿದ್ದಾರೆ.



ಗುಹೆಗಳೊಳಗೆ ದಾರಿ ತಪ್ಪದಂತೆ ಕರೆದೊಯ್ಯಲು ಒಬ್ಬ ಗೈಡ್ ಮುಂದೆ ಬಂದ. ಸಿದ್ದರು ಅವನ ಹಿಂದ್‍ಹಿಂದೆ ಹೊರಟರು. ಗುಹೆಯೊಳಗೆ ಕಾಲಿಡುತ್ತಿದ್ದಂತೆಯೆ ಎಂಥಾ ತಂಪು! ಮಾಡು ಮುಚ್ಚಿದ ಮನೆಯಂತೆ! ಒಳಒಳಗೆ ಹೋಗುತ್ತಿದ್ದಂತೆ ಕಗ್ಗತ್ತಲು. 'ಏಯ್ ಬ್ಯಾಟ್ರಿ ಯಾರ ಹತ್ರ ಇದ್ರೋ?' 'ನನ್ ಹತ್ರ ಇದ್ದು. ತಡಿ, ಬಂದಿ..' 'ಹುಷಾರಿ, ನಿಧಾನ..' 'ಗಿರೀ, ನೀನು ಈ ಕಿಂಡಿ ಒಳಗೆ ತೂರೋದು ಡೌಟು!' ....ಇತ್ಯಾದಿ ಮಾತುಗಳು ಅಲ್ಲಿ ಸಣ್ಣಕೆ ಪ್ರತಿಧ್ವನಿಸುತ್ತಿದ್ದವು. ಜೊತೆಗೆ ಬಂದಿದ್ದ ಗೈಡ್ ಬಾಟಲಿಗಳಲ್ಲಿ ನೀರು ತುಂಬಿಸಿಕೊಟ್ಟ. ಆ ನೀರು ತಣ್ಣಗಿತ್ತೂ ತಣ್ಣಗಿತ್ತೂ, ಫ್ರಿಜ್ ವಾಟರ್‌ಗಿಂತ ತಣ್ಣಗಿತ್ತು. ಕುಡಿದರೆ ಆರಿದ್ದ ಗಂಟಲಿಗೆ ನೀರಿನ ತಂಪು ತಾಗಿ ಮೈಯೆಲ್ಲಾ ರೋಮಾಂಚನ. ಆ ನೀರಿನ ಗುಟುಕು ಗಂಟಲಿನಿಂದ ಕೆಳಗಿಳಿದು ಅನ್ನನಾಳದ ಮೂಲಕ ಜಟರವೆಂಬ ಗುಹೆಯೊಳಗೆ ಬಿದ್ದಾಗ ಎದ್ದ ಸಣ್ಣ ಶಬ್ದ ಪ್ರತಿಧ್ವನಿಸಲೇ ಇಲ್ಲ.



ಕಿಂಡಿಯಿಂದ ಕಾಣುತ್ತಿದ್ದ ಬೆಳಕು. ಜಾಗ ಸಿಕ್ಕಲ್ಲೆಲ್ಲ ತೂರಿಬರುತ್ತಿದ್ದ ಸೂರ್ಯರಶ್ಮಿ. ಸಣ್ಣ ಬಂಡೆಯ ಮೇಲೆ ದೊಡ್ಡ ಬಂಡೆ. ದೊಡ್ಡ ಬಂಡೆಯ ಮೇಲೆ ಸಣ್ಣ ಬಂಡೆ. ಬಂಡೆಯ ಮೇಲೆ ಬಂಡೆ. ಈ ಬಂಡೆಗಳು ಹೀಗ್ಯಾಕೆ ರಚಿತವಾಗಿವೆ? ಮಧ್ಯದಲ್ಲೊಂದು 'ಗ್ಯಾಪ್' ಬಿಟ್ಟಿದ್ಯಾಕೆ? ಆ ಗ್ಯಾಪನ್ನು ಒಂದು ಪುಟ್ಟ ಬಂಡೆ ಮುಚ್ಚಿದ್ದರೂ ಇದು ಗುಹೆಯಾಗುತ್ತಿರಲಿಲ್ಲ. ತೆರೆದಿದ್ದರೆ ಮಾತ್ರ ಅದು ಗುಹೆ. ಒಳಗೆ ತೂರಲು ಬರುವಂತಿದ್ದರೆ ಮಾತ್ರ ಅದು ಗುಹೆ. ಸಿದ್ದರು ಗುಹೆಯ ಒಳಒಳಗೆ ನಡೆದರು.



ಯಾವ ಬಂಡೆಯ ಯಾವ ಪದರದಲ್ಲಿ ಒಡೆದ ಜಲವೋ ಏನೋ, ಇಲ್ಲಿ ನೀರಾಗಿ ಚಿಮ್ಮುತ್ತಿದೆ. ಒಂದು ಪುಟ್ಟ ಬಾವಿ. ಬರುವ ಯಾತ್ರಿಕರ ಬಾಯಾರಿಕೆಯನ್ನೆಲ್ಲಾ ನೀಗುತ್ತಿದೆ. ಗುಹೆಯ ಒಳಗೆ ಒಂದು ಗುಡಿ. ಗುರುತು ಸಿಗದ ಕಲ್ಲು ದೇವರು. ಅಲ್ಲಲ್ಲಿ ಚೆಲ್ಲಿದ ಕುಂಕುಮ. ಕಗ್ಗತ್ತಿಲಿನಷ್ಟೇ ಕಪ್ಪಗಿನ ಅರ್ಚಕನೊಬ್ಬ ಬೆಳಗುತ್ತಿರುವ ಮಂಗಳಾರತಿ. ಗಂಟೆಯ ಶಬ್ದ. ದಾಟಿ ಹೊರಬಂದರೆ ಅಲ್ಲೊಂದು ಮನೆ. ಗುಹೆಯೊಳಗೊಂದು ಮನೆ. ಇಹ-ಪರಗಳ ಕಲ್ಪನೆಯೇ ಬಾರದಂತಹ, ಹೊರಜಗತ್ತಿನ ಗಾಳಿ-ಗಂಧವೊಂದೂ ಸುಳಿಯದ, ಸೂರ್ಯನ ಬೆಳಕೂ ಫಿಲ್ಟರ್ ಆಗಿ ಬರುವ ಈ ಜಾಗದಲ್ಲಿ ಒಂದು ಮನೆ. ಆಹಾ! ಕವಿಕಲ್ಪನೆಯಲ್ಲೂ ಮೂಡಲಾರದಂತಹ ಜಾಗ! ಎಷ್ಟಿರಬಹುದು ಇಲ್ಲಿ ಒಂದು ಸೈಟಿಗೆ? ಕೊಟ್ಟಿದ್ದರೆ ನಾವೂ ಇಲ್ಲೇ ಇರಬಹುದಾಗಿತ್ತಲ್ಲ? ಯಾಕೆ ಬೇಕು ಆ ಹಾಳು ಬೆಂಗಳೂರು? ಯಾಕೆ ಬೇಕು ಆ ಕಂಪ್ಯೂಟರು, ಇಂಟರ್ನೆಟ್ಟು, ಟಾರ್ಗೆಟ್ಟು, ಪ್ಯಾಕೇಜು? ಹೀಗೇ, ಇಲ್ಲೇ, ಇದ್ದೂ ಇಲ್ಲದಂತೆ ಇರಬಾರದೇಕೆ? ಸಿದ್ದರ ಮನಸ್ಸಿನಲ್ಲಿ ಆಲೋಚನೆಗಳು ಏಳುತ್ತಿದ್ದಂತೆಯೇ ಆ ಪುಟ್ಟ ಮನೆಯ ಇಳಿಬಿಟ್ಟ ಪರದೆಗಳು ತೆರೆಗಳಂತೆ ಎದ್ದೆದ್ದು ಬಿದ್ದವು. ಹುಡುಗಿಯೊಂದು ಯಾರಿಗೂ ಕಾಣದಂತೆ ಕಿಟಕಿಯಲ್ಲಿ ಇಣುಕಿ ಮರೆಯಾದಳು.



ಬೆಟ್ಟ ಹತ್ತುವುದಕ್ಕಿಂತ ಇಳಿಯುವುದು ಸುಲಭ. ದಡದಡನೆ ಕೆಳಗಿಳಿದು, ದಾಸೋಹದಲ್ಲಿ 'ಸಹನಾ ಭವತು...' ಹೇಳಿಕೊಂಡು ಉಂಡು, 'ಅನ್ನದಾತೋ ಸುಖೀಭವ' ಎಂದು ಹರಸಿ, ಬೈಕು ಹತ್ತಿ ವಾಪಸು ಹೊರಟರೆ ಸಿದ್ದರ ಬೆಟ್ಟ ತಾನು ಹಿಂದುಳಿದಿತ್ತು: ಇನ್ನೂ ಎಷ್ಟೋ ಸಿದ್ದರಿಗೆ, ಪ್ರಸಿದ್ಧರಿಗೆ, ಪ್ರವಾಸಿಗರಿಗೆ ತಾಣವಾಗಲು; ಆಕರ್ಷಣೆಯಾಗಲು; ಅಚ್ಚರಿಯಾಗಲು.

* * *

ಇದು, ಮೊನ್ನೆ ಮಾರ್ಚ್ ಹನ್ನೊಂದರ ಭಾನುವಾರ ನಾವು ಹೊಗಿದ್ದ ಪ್ರವಾಸದ 'ಕಥನ'. ಆ ಸಿದ್ದರು ನಾವೇ. ಸಿದ್ದರ ಬೆಟ್ಟಕ್ಕೆ ಹೋಗಲು ಸಿದ್ದತೆಯನ್ನೇನೂ ನಡೆಸಿರಲಿಲ್ಲ. ಶನಿವಾರ ಹೋಗಬೇಕು ಅಂತಾಯಿತು, ಭಾನುವಾರ ಬೆಳಗ್ಗೆ ಹೊರಟೆವು! ಹೊರಡುವುದು ಲೇಟಾಗಿದ್ದು, ಕಾಮತ್ತಲ್ಲಿ ತಿಂಡಿ ತಿಂದಿದ್ದು, ಮಧ್ಯೆ ಒಂದು ಗಾಡಿ ಪಂಕ್ಚರ್ ಆಗಿದ್ದು, ಅದನ್ನು ಅಲ್ಲಿಯೇ ಬಿಟ್ಟು, ಟ್ರಿಬಲ್ ಡ್ರೈವ್ ಮಾಡಿಕೊಂಡು ಹೋಗಿದ್ದು, ಊಟ ಮಾಡಿದ್ದು, ಬಾಳೆ ಹಣ್ಣು ತಿಂದಿದ್ದು, ವಾಪಸು ಬರುತ್ತಾ ಪಂಕ್ಚರ್ ಕಟ್ಟಿಸಿದ್ದು, ಮತ್ತೆ ಅದು ಪಂಕ್ಚರ್ ಆಗಿದ್ದು, ಅಲ್ಲೇ ನಿಲ್ಲಿಸಿಕೊಂಡು ಮೆಕ್ಯಾನಿಕ್ಕನ್ನು ಕರೆಸಿದ್ದು, ಹೊಸ ಟ್ಯೂಬು ತಂದದ್ದು, ತರುವವರೆಗೆ ಉಳಿದವರು ಆಟ ಆಡಿದ್ದು, ಮತ್ತೆ ಕಾಮತ್ತಲ್ಲಿ ದೋಸೆ-ಐಸ್‍ಕ್ರೀಮ್ ತಿಂದಿದ್ದು........ ಎಲ್ಲಾ ಬರೆಯುತ್ತಾ ಹೋದರೆ ಭಾಳಾ ಉದ್ದವಾದೀತೆನ್ನಿಸಿ, ಸ್ವಲ್ಪ ಭಟ್ಟಿ ಇಳಿಸಿದೆ.

ಬೆಟ್ಟ ಹತ್ತಿಳಿದ, ಅಷ್ಟು ದೂರ ಬೈಕಿನಲ್ಲಿ ಪಯಣಿಸಿದ ಸುಸ್ತು ಇನ್ನೂ ಪೂರ್ತಿ ಹೋಗಿಲ್ಲ. ಉಳಿದಂತೆ ಎಲ್ಲಾ ಅರಾಂ.

- - - - - - - -
ಫೋಟೋಸ್: ಸಂದೀಪ ನಡಹಳ್ಳಿ / ಸುಬ್ಬು ||| ಮತ್ತಷ್ಟು ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

20 comments:

Annapoorna Daithota said...

ಬರಹ ಸಖತ್ತಾಗಿದೆ :)

Anonymous said...

ಸುಸ್
ಮೆಟ್ಟಿಲು ಲೆಕ್ಕ ಮಾಡ್ತಾ ಇದ್ದಿದ್ದ್ಯಲಾ, ಮರ್ರ್ತೋತಾ, ಲೆಕ್ಕ ತಪ್ಪೋತಾ ? :-)

short and sweet ಆಗಿ ಚೆನಾಗಿದೆ ಪ್ರವಾಸ ಕಥನ

Mahantesh said...

siddare, sogassaad lekhana
ellige muMdina payana ?
heegi nadita ilri nimma jeevan

Anonymous said...

ಗೆಳೆಯ,

ನಿನ್ನ ಬರವಣಿಗೆಯ ಶೈಲಿ ಚೆನ್ನಾಗಿದೆ. ಹೀಗೆ ಮುಂದುವರೆಸು.

Sushrutha Dodderi said...

@ annapoorna daithota

ಧನ್ಯವಾದಗಳು ಮೇಡಂ.

Sushrutha Dodderi said...

@ ವಿಕಾಸ್

ಮೆಟ್ಲು ಲೆಕ್ಕ ಮರ್ತ್ ಹೋತಾ! ಅರ್ಧ ಅಷ್ಟೇ ಮೆಟ್ಲು ಲೆಕ್ಕ ಮಾಡಿದ್ದು; ಆಮೇಲೆ ಬರೀ ಏದುಸಿರು !

ಥ್ಯಾಂಕ್ಸ್ ಫಾರ್ ದಿ ಕಮೆಂಟ್.

Sushrutha Dodderi said...

@ mahantesh

Thanx Mahantesh. Mundina payana ettha antha nangoo gotthilla innoo. ettha karedoyyutthado baiku, atta saaguvudu ashte!

Sushrutha Dodderi said...

@ shreerama shirankallu

ಶರಣು ದೋಸ್ತಾ.. ಥ್ಯಾಂಕ್ಯೂ.. ಹೌದು, ನಾನೂ waiting for the next trip! :)

Sushrutha Dodderi said...

@ yajnesh

ಧನ್ಯವಾದ ಗೆಳೆಯ.. ಈ ಪಯಣ, ಬರಹ, ನಿಮ್ಮ ಪ್ರೀತಿ... ಎಲ್ಲವೂ ಇರಲಿ ನಿರಂತರ.. ಅದು ನನ್ನ ಹಾರೈಕೆಯೂ!

ಸುಪ್ತದೀಪ್ತಿ suptadeepti said...

ಸುಶ್ರುತ, ನಿಮ್ಮ ಬರಹಗಳಿಗೆ ಒಂಥರಾ ಲಾಲಿತ್ಯವಿದೆ. ಮ್ಯಾಜಿಕ್ ಪರಿಣತ ಮಾಂತ್ರಿಕನಂತೆ ಓದಿಸಿಕೊಂಡು ಹೋಗುತ್ತವೆ, ನಿಲ್ಲಿಸೋದಕ್ಕೆ ಆಗೋದಿಲ್ಲ. ಗದ್ಯದಲ್ಲಿ ಒಳ್ಳೇ ವಿವರಣೆ ಕೊಟ್ಟೂ ಬೋರ್ ಹೊಡೆಸದ ಹಿಡಿತ ನಿಮಗಿದೆ, ಶ್ಲಾಘನೀಯ. ಮುಂದಿನ ನಿಮ್ಮ ಪಯಣಕ್ಕೂ (ನೀವು ಹಿಂತಿರುಗಿದ ಬಳಿಕ, ಹೀಗೇನೇ) ನಮ್ಮನ್ನೂ ಕರೆದೊಯ್ಯುತ್ತೀರಿ ತಾನೇ!?

Sushrutha Dodderi said...

@ supatadeepti

ಸಿಕ್ಕಾಪಟ್ಟೆ ಹೊಗಳಿಬಿಟ್ಟೀದ್ದೀರ; ಜೀರ್ಣ ಮಾಡಿಕೊಳ್ಳಲಿಕ್ಕೆ ಒದ್ದಾಡುತ್ತಿದ್ದೇನೆ.. ಈ ಹೊಗಳಿಕೆಯ ಫುಡ್ಡು ನನ್ನ ಮುಂದಿನ ಬರಹಗಳಿಗೆ ಶಕ್ತಿ ಕೊಡುತ್ತದೆ ಅಂದುಕೊಳ್ಳುತ್ತೇನೆ. ಓಹೋ, ಅದಕ್ಕೇನಂತೆ, ಮುಂದಿನ ಪಯಣಕ್ಕೆ ಖಂಡಿತಾ ಕರೆದೊಯ್ಯುತ್ತೇನೆ. ;)

ಫುಡ್ಡೊದಗಿಸಿದ್ದಕ್ಕೆ ಥ್ಯಾಂಕ್ಸ್ :)

ಶ್ರೀನಿಧಿ.ಡಿ.ಎಸ್ said...

ಒಳ್ಳೇ ಬರಹ, ಹೆಚ್ಗೆ ಸಿಕ್ಕಾಪಟ್ಟೆ ಹೇಳದಿಲ್ಲೆ!:)

Shiv said...

ಸುಶ್ರುತ್,

ಸಿದ್ದರ ಬೆಟ್ಟದ ಪ್ರವಾಸಕಥನ ಚೆನ್ನಾಗಿತ್ತು..
ಆ ಗುಹೆಯಿಂದ ಬೆಳಕು ತೂರಿ ಬರುತ್ತಿರುವ ಪೊಟೋ ಚೆನ್ನಾಗಿದೆ.

ಪಂಕ್ಚರ್ ಆಗಿದ್ದೇ ಗಾಡಿ ಮತ್ತೆ ಪಂಕ್ಚರ್ ಯಾಕಾತು :)

Sushrutha Dodderi said...

@ ಶ್ರೀನಿಧಿ...

ಥ್ಯಾಂಕ್ಸ್ ಕಣಮ್ಮ. ನಾನೂ ಹೆಚ್ಗೆ ಹೇಳಕ್ಕೆ ಇಷ್ಟಪಡದಿಲ್ಲೆ :)

@ shiv

ಥ್ಯಾಂಕ್ಸ್ ಗುರೂ. ಫೋಟೋ ತೆಗೆದ ಕ್ರೆಡಿಟ್ಟು ಸಂದೀಪನಿಗೆ ಹೋಗುತ್ತೆ.

'ಪೆಟ್ಟಾದ ಕಾಲೇ ಒಡಾಯೋದು' ಅಂತ ನಮ್ಕಡೆ ಒಂದು ಗಾಧೆ ಇದೆ; ಹಂಗೇ ಇದೂನು! ಹಹ್ಹ, ಅದೇನೂಂದ್ರೆ, ಫಸ್ಟ್ ಸಲ ಕಟ್ಟಿದವ್ನು ಸರಿಯಾಗಿ ಪಂಕ್ಚರ್ ಕಟ್ಟಿರ್ಲಿಲ್ಲ, ಅದ್ಕೇ ಮತ್ತೆ ಪಂಕ್ಚರ್ ಆಯ್ತು ಅಷ್ಟೇ.

ಸುಪ್ತದೀಪ್ತಿ suptadeepti said...

ಸುಶ್ರುತ, ನಿಮಗೂ, ನಿಮ್ಮ ಓದುಗ ಬಳಗಕ್ಕೂ, ನಿಮ್ಮ ಗೆಳೆಯರ ಗುಂಪಿಗೂ, ನಿಮ್ಮ ಮನೆಮಂದಿಗೂ ಯುಗಾದಿ ಹಬ್ಬದ ಶುಭಾಶಯಗಳು.

Sushrutha Dodderi said...

@ suptadeepti

ನನ್ನ ಓದುಗ ಬಳಗದ ಪರವಾಗಿ, ನನ್ನ ಗೆಳೆಯರ ಗುಂಪಿನ ಪರವಾಗಿ, ನನ್ನ ಮನೆಮಂದಿಯ ಪರವಾಗಿ ಹಾಗೂ ವೈಯಕ್ತಿವಾಗಿ ನಿಮಗೆ ಧನ್ಯವಾದಗಳು ಮತ್ತು ಯುಗಾದಿಯ ಹಾರ್ದಿಕ ಶುಭಾಶಯಗಳು. ಬಾಳು ಬೆಲ್ಲವಾಗಲಿ.

ಯಜ್ಞೇಶ್ (yajnesh) said...

ಸುಶ್ರುತ,

ಸಿದ್ದರಬೆಟ್ಟಕ್ಕೆ ಹೋಗೋ ವಿಷಯ ನನಗೆ ಗೊತ್ತಿದ್ರೆ ನಾನು ಬರ್ತಾ ಇದ್ದೆ. ಹೋಗಿ ಬಂದಮೇಲೆ ವೇಣು ಹೇಳ್ದ.
-ಯಜ್ಞೇಶ್

Parisarapremi said...

bombaat lekhana...

Sushrutha Dodderi said...

@ parisarapremi

Thanx Arun.

Anonymous said...

ಸುಂದರ ಹವ್ಯಕ ಸ್ನೇಹ ಪಯಣವನ್ನು ಅಂದವಾಗಿ ಬಿಂಬಿಸಿ, ಸಾಕ್ಷಿ ನಾನೋರ್ವನಾಗಿರಲಿಲ್ಲವೆಂಬ ನೋವು ಮನದುಂಬಿ ಬಂದರೂ.... ನಿಮ್ಮೊಂದಿಗೆ ನಾನೂ ಇದ್ದಿದ್ದನೇನೋ ಎಂಬ ಬಾವನೆ ಮೂಡಿಸಿದ ಈ ನಿಮ್ಮ ಲೇಖನ ಮನದಾಳದ ನೆನಪಾಗಿ ಸ್ಥಪಿತಗೊಂಡು ಸಂತಸದ ಶುಭಹಾರೈಕೆಯನ್ನು ಮನ ಇದೋ ಈ Commentsನ ಮೂಲಕ ವ್ಯಕ್ತಗೊಳಿಸುತ್ತಿದೆ.
ವಂದನೆಯೊಂದಿಗೆ.
ಗೌತಮ
ಚದರವಳ್ಳಿ
http://gowtham.wordpress.com