Saturday, March 10, 2007

ಕೊಟ್ಟಿಗೆ: ಒಂದು ಸುಲಲಿತ ಪ್ರಬಂಧ

ಅಮ್ಮ ಅಂದಳು ಫೋನಿನಲ್ಲಿ "ದನ ಮೊನ್ನೆ ಕರ ಹಾಕ್ಚು. ಆದರೆ ಹಾಲು ಕರೆಯಕ್ಕೇ ಕೊಡ್ತಾ ಇಲ್ಲೆ. ಹಾಯಕ್ಕೇ ಬರ್ತು. ನಿಲ್ತೇ ಇಲ್ಲೆ ಒಂದು ಕಡೆ, ಒಂದೇ ಸಮನೆ ತಿರುಗ್ತು. ಮೊಲೆಗೆ ಕೈ ಹಾಕಿದ್ರೆ ಒದಿತು.."

ಅಯ್ಯೋ! ಏನಾಯಿತು ನಮ್ಮನೆ ದನಕ್ಕೆ? ಎಂಥ ಸಿಟ್ಟು ಅದಕ್ಕೆ? ನಾನು ಯೋಚಿಸಿದೆ. ಹೇಳಿದೆ ಅಮ್ಮನ ಹತ್ರ "ಕೈ ಮರ್ಚಲೇನ? ಅಪ್ಪನ ಹತ್ರ ನೋಡಕ್ಕೆ ಹೇಳಕ್ಕಾಯಿತ್ತು" ಅಂತ. ಅಮ್ಮ ಅಂದಳು "ಅಯ್ಯೋ ಎಲ್ಲಾ ನೋಡ್ಯಾತು. ಅವರಿಗೂ ಕೊಡ್ಲೆ. ನಿನ್ನೆ ಮಾವ ಬಂದಿದ್ದಿದ್ದ, ಅವನ ಹತ್ರ ನೋಡು ಅಂದ್ಯ. ಅವಂಗೆ ಸಲೀಸಾಗಿ ಕೊಡ್ಚು!"

ವಿಷಯ ಏನಪ್ಪಾ ಅಂದ್ರೆ, ಅದು ಮಾವನ ಮನೆಯಿಂದ ಹೊಡೆದು ತಂದ ದನ. ನಮ್ಮನೆಯಲ್ಲಿ ಅಜ್ಜಿ ತೀರಿಕೊಂಡಾಗ, ಪ್ರತಿ ತಿಂಗಳೂ ಗೋಗ್ರಾಸ ಕೊಡಬೇಕಲ್ಲ, ಅದಕ್ಕೆ ದನ ಇರಲಿಲ್ಲ. ಬೇರೆ ಯಾರ ಮನೆ ದನಕ್ಕಾದರೂ ಕೊಡುವುದು ಅಂತ ನಾವು ತೀರ್ಮಾನಿಸಿದ್ದೆವು. ಆದರೆ ಅಷ್ಟೊತ್ತಿಗೆ ನಮ್ಮನೆ ಎಮ್ಮೆಯೂ ಹಾಲು ಕಮ್ಮಿ ಮಾಡಿತ್ತು. 'ಓ, ಈಗ ಒಂದು ಬೇರೆ ಜಾನುವಾರು ಮಾಡೋದೇ ಸೈ' ಅಂತ ಅಪ್ಪ ಯೋಚಿಸುತ್ತಿದ್ದಾಗಲೆ ಮಾವ ಬಂದು "ಈಗ ಅರ್ಜೆಂಟಿಗೆ ಎಲ್ಲಿ ಅಂತ ಹುಡುಕ್ತಿ? ನಮ್ಮನೆ ದನಾನೆ ಹೊಡಕಂಡು ಹೋಕ್ಯಳಿ" ಅಂದ. ನಾವೂ ಹೆಚ್ಚು ಯೋಚಿಸದೆ ಮಾವನ ಮನೆ ದನ 'ಕೃಷ್ಣೆ'ಯನ್ನು ತಂದುಕೊಂಡೆವು. ತೌರಿನಿಂದ ಬಂದಮೇಲೆ ಬೇರೆ ಹೆಸರಿಡುವ ಸಂಪ್ರದಾಯ ಜಾನುವಾರುಗಳಲ್ಲಿ ಇಲ್ಲವಾದರೂ ನಾನು ಅದಕ್ಕೆ 'ಮಂಗಳ' ಅಂತ ಹೊಸ ಹೆಸರಿಟ್ಟೆ. ನಾನು ಆ ಹೆಸರಿಟ್ಟಿದ್ದಕ್ಕೆ ನಿಜವಾದ ಕಾರಣ ಅದು ನನ್ನ ಕಾಲೇಜಿನ ಚಂದದ ಹುಡುಗಿಯೊಬ್ಬಳ ಹೆಸರು ಎಂಬುದಾಗಿತ್ತಾದರೂ "ಇವತ್ತು ಮಂಗಳವಾರವಾದ್ದರಿಂದ 'ಮಂಗಳ' ಅಂತ ಹೆಸರಿಟ್ಟೆ" ಅಂತ ನಾನಂದಾಗ ನಮ್ಮ ಮನೆಯಲ್ಲಿ ಯಾರಿಗೂ ಅನುಮಾನ ಬರಲಿಲ್ಲ.

ಇದೆಲ್ಲಾ ಆಗಿದ್ದು ಎರಡು ವರ್ಷದ ಹಿಂದೆ. ಆದರೆ ಆ ದನ ಇನ್ನೂ ಮಾವನನ್ನು ನೆನಪಿಟ್ಟುಕೊಂಡಿದೆ! ಅದು ಅವರ ಮನೆಯಲ್ಲೇ ಹುಟ್ಟಿದ ದನ. ಮಾವನ ಮನೆಯವರು ಅಕ್ಕರೆಯಿಂದ ಬೆಳೆಸಿದ ದನ. ಮೊದಲನೇ ಕರು ಹಾಕಿದಾಕ್ಷಣ ನಮ್ಮನೆಗೆ ಬಂದಿತ್ತು ಅದು.

ಹಳ್ಳಿ ಮನೆ ಎಂದಮೇಲೆ ಅದಕ್ಕೊಂದು ಕೊಟ್ಟಿಗೆ ಇರಬೇಕು. ಕೊಟ್ಟಿಗೆ ತುಂಬಾ ಜಾನುವಾರುಗಳಿರಬೇಕು. ಒಂದು ಕೊಟ್ಟಿಗೆ ಇದೆ ಎಂದರೆ ಏನೆಲ್ಲ ಇರಬೇಕು... ಹುಲ್ಲು ಗೊಣಬೆ, ಕಲ್ಡದ ಬ್ಯಾಣ, ಹಸಿಹುಲ್ಲಿಗೆ ಹಿತ್ಲು, ಹಿಂಡಿ-ಗೋಧಿಭೂಸ-ತೌಡು ಶೇಖರಿಸಿಡಲು ಗೋಡೌನು, ಅಕ್ಕಚ್ಚು ತೋರಲು ಒಂದು ಹಿಂಡಾಲಿಯಂ ಬಕೀಟು, ಹರಿದು ಹೋದರೆ ಬೇಕಾಗುತ್ತದೆ ಎಂದು ತಂದಿಟ್ಟ ಎಕ್ಸ್‍ಟ್ರಾ ಕಣ್ಣಿ.... ಕೊಟ್ಟಿಗೆ ಇದೆ ಎಂದಮೇಲೆ ಅಲ್ಲಿ ಏನೆಲ್ಲ ಇರುತ್ತದೆ... ಆಡಿಕೊಳ್ಳಲೆಂದು ಅಂಗಳದಲ್ಲಿ ಬಿಟ್ಟಿದ್ದ ಕರು ಅಲ್ಲಲ್ಲಿ ಹಾಕಿದ ಸಗಣಿ ಉಳ್ಳೆ, ಸರಿಯಾದ ಹೊತ್ತಿಗೆ ಹುಲ್ಲು ಹಾಕಲಿಲ್ಲವೆಂದರೆ ಕೊಟ್ಟಿಗೆಯಿಂದ ಬರುವ ದನದ 'ಅಂಬಾ..' ಕೂಗು, ಅದನ್ನು ಹಿಂಬಾಲಿಸುವ ಎಮ್ಮೆಯ 'ಆಂಯ್' ಕೂಗು, ಹಾಗೆ ಕೊಟ್ಟಿಗೆಯಿಂದ ಕೂಗುಗಳು ಬಂದಾಕ್ಷಣ ಅಮ್ಮನನ್ನು 'ಹುಲ್ಲು ಹಾಕಲ್ಯನೇ?' ಎಂದು ಕೇಳುವ ಅಪ್ಪ, 'ಹಿಂಡಿ ಖಾಲಿ ಆಯ್ದು. ಸುಬ್ಬಣ್ಣನ ವ್ಯಾನು ಸಾಗರಕ್ಕೆ ಹೋಗ್ತೇನ, ಒಂದು ಚೀಲ ಹಾಕ್ಯಂಡು ಬರಕ್ಕೆ ಹೇಳಲಾಗಿತ್ತು' ಎಂಬ ಅಮ್ಮನ ವರಾತ, ಹಾಲು ಕೊಡದಿದ್ದರೆ 'ಮುರ ಇಟ್ಕಂಡು ನೋಡಿ' ಎಂಬ ಸಲಹೆ... ಕೊಟ್ಟಿಗೆ ಎಂಬುದು ಹಳ್ಳಿಯ ಮನೆಗಳ ಅವಿಭಾಜ್ಯ ಅಂಗ. ಅದು ಹಳ್ಳಿಗರ ಜೀವನಶೈಲಿಯೆಂಬ ಚಿತ್ರಾನ್ನಕ್ಕೆ ಹಾಕಿದ ಉಪ್ಪು-ಖಾರ.

ಮನೆಗೆ ಹೊಂದಿಕೊಂಡಂತೆ ಇರುತ್ತದೆ ಕೊಟ್ಟಿಗೆ. ಚಪ್ಪಡಿ ಹಾಸಿದ ಕೊಟ್ಟಿಗೆಯಲ್ಲಿ ಮಧ್ಯದಲ್ಲೊಂದು ಒಗದಿ. ಜಾನುವಾರು ಹೊಯ್ದ ಉಚ್ಚೆ (ಗ್ವಾತ), ಅವುಗಳ ಮೈತೊಳೆದ ನೀರು, ಎಲ್ಲಾ ಆ ಒಗದಿಯ ಮೂಲಕ ಸಾಗಿ ಗೊಬ್ಬರಗುಂಡಿಯ ಪಕ್ಕ ಇರುವ ಒಂದು ಬಾನಿಗೆ ಬೀಳುತ್ತದೆ. ಹುಲ್ಲು ತಿನ್ನುತ್ತಾ ನಿಂತಿರುವ ದನ, ಮಲಗಿ ಮೆಲಕು ಹಾಕುತ್ತಿರುವ ಎಮ್ಮೆ, ಆಸೆಗಣ್ಣುಗಳಲ್ಲಿ ತಾಯಿಯನ್ನೇ ನೋಡುತ್ತಿರುವ ಕರು, ತಾನು ಹಾಕಿದ ಸಗಣಿಯನ್ನು ತಾನೇ ಮೂಸುತ್ತಿರುವ ಪೆದ್ದ ಎಮ್ಮೆಕರು... ಈ ಜಾನುವಾರುಗಳು ಎಷ್ಟೊಂದು ಸುಖಿಗಳು ಅನ್ನಿಸುತ್ತದೆ ಎಷ್ಟೋ ಸಲ. ಅವುಗಳ ಸುಖ ನಮಗಿಲ್ಲವಲ್ಲ ಅನ್ನಿಸುತ್ತದೆ. ಅರಾಮಾಗಿ ಹಾಕಿದ ಹುಲ್ಲು ತಿನ್ನುವುದು, ಮಲಗುವುದು, ಮೆಲುಕು ಹಾಕುವುದು, ಏಳುವುದು.... ಉಚ್ಚೆ ಹೊಯ್ಯುವುದಕ್ಕೂ ಹೊರಗೆ ಹೋಗಬೇಕಿಲ್ಲ; ಸಂಡಾಸನ್ನು ಲ್ಯಾಟ್ರೀನ್ ರೂಮಿಗೇ ಹೋಗಿ ಮಾಡಬೇಕೆಂಬ ರಿಸ್ಟ್ರಿಕ್ಷನ್ ಇಲ್ಲ! ನಿಂತಲ್ಲೇ ಎಲ್ಲಾ ಮಾಡಿದರಾಯಿತು. ಬೇಕಾದರೆ ಸಾಕಿಕೊಂಡವರು ಅವನ್ನೆಲ್ಲಾ ಕ್ಲೀನ್ ಮಾಡಿಕೊಳ್ಳಲಿ. ಆಹಾ! ಎಷ್ಟು ಸುಖಜೀವನ! ಯಾವ ಸಾಫ್ಟ್‍ವೇರ್ ಇಂಜಿನಿಯರ್ರಿನ ಹೆಂಡತಿಗಿದೆ ಈ ಸುಖ?

ಇವೆಲ್ಲಾ ಮೇಯಲು ಹೊರಗಡೆ ಬಿಡದ, ಮನೆಯಲ್ಲೇ ಕಟ್ಟಿ ಹಾಕುವ ಮನೆಗಳ ಜಾನುವಾರುಗಳ ಸುಖದ ಕತೆಯಾದರೆ ಮೇಯಲು ಬ್ಯಾಣಕ್ಕೆ ಬಿಡುವ ಜಾನುವರಗಳ ಸುಖ ಮತ್ತೊಂದು ತರ! ಬೆಳಗ್ಗೆ ಎದ್ದ ಕೂಡಲೆ ಹುಲ್ಲು ಹಾಕಿ, ಹಾಲು ಕರೆದು, ತೊಳಕಲು, ಹಿಂಡಿ ಕೊಟ್ಟು, ಕಣ್ಣಿ ಕಳಚಿ ಹೊರಗೆ ಬಿಟ್ಟರೆ ಆಮೇಲು ಅವು ವಾಪಾಸು ಕೊಟ್ಟಿಗೆಗೆ ಬರುವುದು ಸೂರ್ಯ ಮುಳುಗಿದ ಮೇಲೇ. ಕೆಲ ಊರುಗಳಲ್ಲಿ ದನಗಾವಲು ಅಂತಲೇ ಇರುತ್ತದೆ. 'ದನ ಕಾಯುವ ಹುಡುಗ' ಎಂಬ ಬಿರುದಾಂಕಿತ ಹುಡುಗನೊಬ್ಬ ತನ್ನ ಕಂಬಳಿ ಕೊಪ್ಪೆ ಮತ್ತು ದಾಸಾಳ ಬರ್ಲು ಹಿಡಿದು 'ದನ ಹೊಡಿರೋss..' ಎಂದು ಕೂಗುತ್ತ ಪ್ರತಿ ಬೆಳಗ್ಗೆ ಬರುತ್ತಾನೆ. ಅವನ ಕೂಗು ಕೇಳುತ್ತಿದ್ದಂತೆ ಎಲ್ಲರೂ ತಮ್ಮ ಮನೆಗಳ ಕೊಟ್ಟಿಗೆಯ ಬಾಗಿಲು ತೆರೆದು ದನಕರುಗಳನ್ನು ಕಣ್ಣಿ ಕಳಚಿ ಹೊರಬಿಡುತ್ತಾರೆ. ಎಲ್ಲರ ಮನೆಯ ಜಾನುವಾರುಗಳ ಹಿಂಡಿನ ಜೊತೆ ನಮ್ಮನೆ ದನವೂ ಸೇರಿಕೊಳ್ಳುವುದನ್ನು ನೋಡುವಾಗ ಶಾಲೆಗೆ ಹೊರಟ ಮಗುವಿನ ಚಿತ್ರ ಕಣ್ಣ ಮುಂದೆ ಬರುತ್ತದೆ. ಬೀಳ್ಕೊಡುವ ಹೃದಯ ಒಂದು ಕ್ಷಣ ತುಂಬಿಕೊಳ್ಳುತ್ತದೆ.

ಗೋಪಬಾಲಕ ಜಾನುವಾರುಗಳನ್ನೆಲ್ಲ ಹೊಡೆದುಕೊಂಡು ಯಾವುದೋ ಬೆಟ್ಟದ ಮೇಲೋ, ಹುಲ್ಲುಗಾವಲಿಗೋ ಒಯ್ಯುತ್ತಾನೆ. ಅಲ್ಲಿ ಅವನ್ನೆಲ್ಲಾ ಮೇಯಲು ಬಿಟ್ಟು ಇವನು ಮರ ಹತ್ತಿ ಹಣ್ಣು ಕೀಳುವುದೋ, ಊರ ಹುಡುಗರಿಗೆ ಎರಡು ರೂಪಾಯಿಗೆ ಕೊಡಲು ಪೆಟ್ಲು ಮಾಡುವುದರಲ್ಲೋ ತೊಡಗುತ್ತಾನೆ. ಅವನು ಹಾಗೆ ಬೇರೆ ಕಡೆ ಹೋಗುತ್ತಿದ್ದಂತೆಯೇ ದನಗಳು ಮರದ ತಂಪನ್ನರಸಿ ಹೊರಟರೆ ಎಮ್ಮೆಗಳು ಕೆಸರಿನ ಹೊಂಡ ಎಲ್ಲಿದೆ ಅಂತ ಹುಡುಕಿ ಹೊರಡುತ್ತವೆ. ಈ ಎಮ್ಮೆಗಳಿಗೆ ಕೆಸರಿನ ಹೊಂಡದಲ್ಲಿ ಹೊರಳಾಡುವುದೆಂದರೆ ಭಾರೀ ಪ್ರೀತಿ. ಉರಿಬಿಸಿಲಿನಲ್ಲಿ ಮುಖವನ್ನಷ್ಟೇ ನೀರಿನಿಂದ ಮೇಲಕ್ಕೆ ಎತ್ತಿ ಕೆಸರಿನ ಹೊಂಡದಲ್ಲಿ ಶತಸೋಮಾರಿಯಂತೆ ಈಜುತ್ತಾ ತೂಕಡಿಸುತ್ತಾ ಇರುವ ಎಮ್ಮೆಯ ಸುಖದ ತಂಪಿನ ಮುಂದೆ ಹೊಂಡಾ ಕಾರಿನ ಏಸಿ ಏನೂ ಅಲ್ಲ. ಹೊಟ್ಟೆಕಿಚ್ಚಾಗುತ್ತೆ ಅದನ್ನು ನೋಡಿದರೆ!

ಸೂರ್ಯ ಮುಳುಗುವ ಹೊತ್ತಿಗೆ ದನಕರುಗಳೆಲ್ಲ ತಮ್ಮ ತಮ್ಮ ಮನೆ ಸೇರುತ್ತವೆ. ಬೆಳಗ್ಗೆಯಷ್ಟೆ ಮೈತೊಳೆದು ಬಿಟ್ಟಿದ್ದ ಎಮ್ಮೆ ಮೈಯೆಲ್ಲಾ ಕೆಸರು ಮಾಡಿಕೊಂಡು ಬಂದದ್ದನ್ನು ನೋಡಿ ಅಪ್ಪ ಸಿಡಿಮಿಡಿಗೊಳ್ಳುತ್ತಾನೆ. ಗೂಟಕ್ಕೆ ಕಣ್ಣಿ ಕಟ್ಟಿ ಹಿಂದೆ ಬರುವಾಗ ಅದು ಬೀಸಿದ ಬಾಲ ಅಪ್ಪನ ಮುಖಕ್ಕೆ ಹೊಡೆದು ಅಪ್ಪನ ಸಿಟ್ಟು ಇಮ್ಮಡಿಯಾಗುತ್ತದೆ. 'ಥೂ, ಸುಮ್ನೆ ನಿಂತ್ಕಳಕ್ಕೆ ಆಗ್ತಲ್ಯನೆ?' ಎಂದು ಒಂದೇಟು ಕೊಡುತ್ತಾನೆ. ಆಮೇಲೆ ಅಕ್ಕಚ್ಚು ಕೊಡುತ್ತಾನೆ. ಯಜಮಾನ ಬೈದನಲ್ಲ ಎಂಬ ಅವಮಾನಕ್ಕೋ ಅಥವಾ ಮತ್ತೆ ಹೊಡೆದಾನು ಎಂಬ ಭಯಕ್ಕೋ, ಪೂರ್ತಿ ಎರಡು ಬಕೆಟ್ ಅಕ್ಕಚ್ಚನ್ನು ಶುಲ್ಟಿ ಎಮ್ಮೆ ತಲೆ ಎತ್ತದೆ ಕುಡಿದು ಮುಗಿಸುತ್ತದೆ. ಆಮೇಲೆ ಅಮ್ಮ ದನದ ಹಾಲನ್ನೂ ಅಪ್ಪ ಎಮ್ಮೆಯ ಹಾಲನ್ನೂ ಕರೆಯುತ್ತಾರೆ. ಹಾಲು ಕರೆದಾದಮೇಲೆ ಹುಲ್ಲು ಹಾಕಿ, ಕೊಟ್ಟಿಗೆಯ ಬಾಗಿಲು ಮುಚ್ಚಿ ಒಳಬಂದರೆ ಹೆಚ್ಚುಕಮ್ಮಿ ಅವತ್ತಿನ ಕೊಟ್ಟಿಗೆ ಕೆಲಸ ಆದಂತೆಯೇ.

ಹಳ್ಳಿಯ ಜನ ಕೊಟ್ಟಿಗೆಗೆ, ಜಾನುವಾರುಗಳಿಗೆ ಎಷ್ಟು ಹೊಂದಿಕೊಂಡಿರುತ್ತಾರೆಂದರೆ ಒಂದು ದಿನ ಕೊಟ್ಟಿಗೆಗೆ ಹೋಗಲಿಲ್ಲವೆಂದರೆ ಸಮಾಧಾನವಿರುವುದಿಲ್ಲ. ಅಲ್ಲದೇ ಕೊಟ್ಟಿಗೆ ಇಲ್ಲದಿದ್ದರೆ ಹಳ್ಳಿ ಮನೆಯ ಜನಗಳಿಗೆ ಅಂತಹ ಕೆಲಸವೂ ಇರುವುದಿಲ್ಲ. ಕೊಟ್ಟಿಗೆ ಕೆಲಸ ದಿನದ ಮುಖ್ಯ ಕೆಲಸಗಳಲ್ಲಿ ಒಂದು. ಬೆಳಗ್ಗೆ ಎದ್ದಕೂಡಲೇ ಹಾಲು ಕರೆಯುವುದು, ಆಮೇಲೆ ದನಕರುಗಳ ಮೈತೊಳೆಯುವುದು, ಆಮೇಲೆ ಕೊಟ್ಟಿಗೆ ಕ್ಲೀನ್ ಮಾಡುವುದು, ಗೋಬರ್ ಗ್ಯಾಸಿಗೆ ಸಗಣಿ ಕರಡುವುದು, ಹಿತ್ಲಿನಿಂದ ಹಸಿ ಹುಲ್ಲು ಕೊಯ್ದು ತರುವುದು, ಅವಾಗಿವಾಗ ಹುಲ್ಲು ಹಾಕುತ್ತಿರುವುದು, ಸಂಜೆ ತೊಳಕಲು ತೋರುವುದು, ಹಿಂಡಿ ಕೊಡುವುದು.... ಹೀಗೆ ಕೊಟ್ಟಿಗೆ ಕೆಲಸ ಹಳ್ಳಿಗರ ದಿನದ ಬಹಳ ಸಮಯವನ್ನು ತಿಂದು ಹಾಕುತ್ತದೆ. ಇದನ್ನು ಆಲೋಚಿಸಿಯೇ ಕೆಲ ಮನೆಯವರು ಇತ್ತೀಚೆಗೆ ತಮ್ಮ ಮನೆಯ ಜಾನುವಾರುಗಳನ್ನೆಲ್ಲಾ ಮಾರಿ ಹಾಲು ಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ. ಅಲ್ಲದೇ ಕೊಟ್ಟಿಗೆಗೆ ಖರ್ಚೂ ತುಂಬಾನೇ ಬರುತ್ತದೆ. ದನಕರುಗಳಿಗೆ ಹಿಂಡಿ, ಹತ್ತಿಕಾಳು, ಗೋಧಿಬೂಸ, ತೌಡು, ಬಿಳಿಹುಲ್ಲು.... ಹೀಗೆ ಆಹಾರಕ್ಕೇ ಸಿಕ್ಕಾಪಟ್ಟೆ ಖರ್ಚು. ಅವಕ್ಕೆ ಖಾಯಿಲೆ-ಕಸಾಲೆ ಬಂದರಂತೂ ಡಾಕ್ಟರಿಗೆ-ಔಷಧಿಗೆ ದುಡ್ಡು ಕೊಟ್ಟು ಪೂರೈಸುವುದೇ ಅಲ್ಲ. ಈ ಮಧ್ಯೆ ಎಮ್ಮೆ-ದನಗಳು ಯಾವಾಗ ಬತ್ತಿಸಿಕೊಳ್ಳುತ್ತವೆ (ಹಾಲುಕೊಡುವುದು ನಿಲ್ಲಿಸುವುದು) ಎಂದು ಹೇಳಲಾಗುವುದಿಲ್ಲ. ಬಲ್ಡು (ಬರಡು) ಬಿದ್ದ ಜಾನುವಾರನ್ನು ಇಟ್ಟುಕೊಂಡು ಸುಮ್ಮನೆ ಸಾಕುವುದು ಯಜಮಾನನಿಗೆ ಹೊರೆಯೇ. ಹೀಟಿಗೆ ಬಂದಾಗ ಮಳಗದ್ದೆ ಮನೋಹರನನ್ನೋ ಮೂಡಗೋಡು ಅರವಿಂದನನ್ನೋ ಕರೆಸಿ ಇನ್ಸೆಮಿನೇಶನ್ ಮಾಡಿಸಬೇಕು. ಒಂದೇ ಸಲಕ್ಕೆ ಗರ್ಭ ಕಟ್ಟುತ್ತದೆ ಅಂತ ಹೇಳಲಾಗುವುದಿಲ್ಲ. ಮತ್ತೆ ಮತ್ತೆ ಕರೆಸಬೇಕಾಗಬಹುದು. ಗಬ್ಬ ಆಗಿ ಐದಾರು ತಿಂಗಳಾದ ಮೇಲೆ ದನ ಹಾಲು ಕೊಡುವುದು ನಿಲ್ಲಿಸುತ್ತದೆ. ಇನ್ನು ಅದು ಕರು ಹಾಕುವವರೆಗೂ ಕಾಯಬೇಕು. ಇದೆಲ್ಲಾ ರಗಳೆಗಳು ಬೇಡವೇ ಬೇಡ ಎಂದು ನಿರ್ಧರಿಸಿ ಹಳ್ಳಿ ಜನಗಳು ಈಗೀಗ 'ಬುದ್ಧಿವಂತ'ರಾಗುತ್ತಿದ್ದಾರೆ. ದಿನಕ್ಕೆ ಎರಡು ಲೀಟರ್ ಹಾಲು ಕೊಂಡರಾಯಿತು. ತೋಟಕ್ಕೆ ಹಾಕಿಸಲು ಎರಡು ಲೋಡ್ ಗೊಬ್ಬರ ಕೊಂಡರಾಯಿತು. ಅಡುಗೆಗೆ ಹೇಗಿದ್ದರೂ ಸಿಲಿಂಡರ್ ಗ್ಯಾಸ್ ಇದೆ.

ಆದರೆ ಹಾಗೆ ಜಾನುವಾರುಗಳನ್ನೆಲ್ಲಾ ಕೊಟ್ಟು ಕೊಟ್ಟಿಗೆ ಖಾಲಿ ಮಾಡಿಕೊಂಡವರು ಆ ಮೂಲಕ ಕೆಲಸ ಕಮ್ಮಿ ಮಾಡಿಕೊಂಡರೂ ಕೊಟ್ಟಿಗೆಯಿಂದ ಸಿಗುತ್ತಿದ್ದ ಅದೆಷ್ಟೋ ಖುಷಿಯನ್ನು ಅವರು ಮಿಸ್ ಮಾಡಿಕೊಳ್ಳುತ್ತಾರೆ. ದನಕರುಗಳು, ಅವು ಕೊಟ್ಟಿಗೆಯಲ್ಲಿದ್ದರೂ, ಮನೆ ಮಂದಿಯಷ್ಟೇ ಪ್ರಾಮುಖ್ಯತೆ ಇರುತ್ತದೆ ಅವಕ್ಕೆ. 'ಏನೇ, ಇನ್ನೂ ಮಲಗಿದ್ಯಲ, ಏಳು ಸಾಕು' ಎನ್ನುತ್ತಾ ಕೊಟ್ಟಿಗೆಗೆ ಹೋದರೆ ಅದೆಷ್ಟು ದೈನ್ಯತೆಯಿಂದ ಎದ್ದು ನಿಲ್ಲುತ್ತದೆ ದನ! ಎಷ್ಟು ಪ್ರೀತಿ ತೋರಿಸುತ್ತದೆ ಅದು ಯಜಮಾನನಿಗೆ! ಸಾಕುಪ್ರಾಣಿಗಳ ಒಡನಾಟದಲ್ಲಿ ನಾವು ನಮ್ಮ ದುಃಖವನ್ನೆಲ್ಲಾ ಮರೆಯುತ್ತೇವೆ. ಅಪ್ಪ-ಅಮ್ಮ ಯಾವುದೋ ಕಾರಣಕ್ಕೆ ಬೈದಾಗ ಕೊಟ್ಟಿಗೆಗೆ ಹೋಗಿ ಕರುವಿನ ಎದುರು ನಿಂತು ಬಿಕ್ಕಿ ಬಿಕ್ಕಿ ಅಳುತಿದ್ದರೆ, ಅದು ನಮ್ಮ ಕಷ್ಟವನ್ನೆಲ್ಲಾ ಅರಿತಂತೆ, ತನ್ನ ಒರಟು ನಾಲಿಗೆಯಿಂದ ನಮ್ಮ ಕಾಲನ್ನು ನೆಕ್ಕುತ್ತಾ ಸಾಂತ್ವನ ಹೇಳುತ್ತದೆ. ಕೊಟ್ಟಿಗೆಗೆ ಹೋಗಿ ಬರುವಾಗೆಲ್ಲ ದನಕರುಗಳೊಂದಿಗೆ ಮಾತನಾಡುತ್ತಾ, ಅವುಗಳ ಮೈದಡುವುತ್ತಾ, ಒಂದು ವಿಲಕ್ಷಣ ಸುಖವನ್ನು ಅನುಭವಿಸುತ್ತಿರುತ್ತೇವೆ.

ಜಾನುವಾರುಗಳಿಗೆ, ಕೊಟ್ಟಿಗೆಯನ್ನು ತೂಗಿಸುವುದಕ್ಕೆ ತುಂಬಾ ಖರ್ಚು ಬರುತ್ತದೆಯಾದರೂ ಅದರಿಂದ ಲಾಭವೂ ಅಷ್ಟೇ ಇದೆ. ಒಳ್ಳೆಯ ಬನಿ ಇರುವ ಹಾಲು, ಸಗಣಿಯಿಂದ ಗೋಬರ್ ಗ್ಯಾಸ್, ಕೊಟ್ಟಿಗೆಯ ತ್ಯಾಜ್ಯದಿಂದ ತೋಟಕ್ಕೆ ಫಲವತ್ತಾದ ಗೊಬ್ಬರ.... ನಮ್ಮನೆ ಅಜ್ಜಿ ಅವಾಗಿವಾಗ ಹೇಳುತ್ತಿದ್ದಳು: 'ನಾವು ತಿನ್ನೋದು ದನಕರದ ಸಗಣಿ! ಅವುನ್ನ ಚನಾಗಿ ಸಾಕವು' ಅಂತ. ಎಷ್ಟೋ ಸಲ ಅದು ಸರಿ ಅನ್ನಿಸುತ್ತದೆ.

ಎಮ್ಮೆ ವ್ಯಾಪಾರದಿಂದಲೇ ದುಡ್ಡು ಮಾಡಿದವರಿದ್ದಾರೆ. ಅದನ್ನೇ ದಂಧೆಯನ್ನಾಗಿ, ಉದ್ಯೋಗವನ್ನಾಗಿ ಮಾಡಿಕೊಂಡವರಿದ್ದಾರೆ. ಕ್ಯಾಸನೂರು ಮಾರ್‍ಯಾ (ಮಾರಪ್ಪ)ನಂತೂ ಫೇಮಸ್ಸು ನಮ್ಮ ಕಡೆ! ಸಾಗರದ ಪುರುಷೋತ್ತಮ ಎಮ್ಮೆ ದಲ್ಲಾಳಿ ಮಾಡಿ ಮಾಡಿಯೇ ಚಿನ್ನದ ಹಲ್ಲು ಕಟ್ಟಿಸಿಕೊಂಡಿದ್ದಾನೆ! ಒಳ್ಳೆಯ ಶುಲ್ಟಿ (ಸುರುಟಿ) ಎಮ್ಮೆಗಳಿಗೆ, ಜರ್ಸಿ ಆಕಳುಗಳಿಗೆ ತುಂಬಾನೇ ರೇಟ್ ಇದೆ.

ನಾನು ಇಲ್ಲಿ ಬರೆದದ್ದೆಲ್ಲಾ ದನ-ಎಮ್ಮೆಗಳ ಕತೆಯಾಯಿತು. ಗದ್ದೆ ಇರುವ ಮನೆಗಳಲ್ಲಿ ಕೋಣ, ಎತ್ತುಗಳನ್ನೂ ಸಾಕಿರುತ್ತಾರೆ. ಎತ್ತುಗಳು ಗದ್ದೆ ಉಳುಮೆಗೆ, ಗಾಡಿಯಲ್ಲಿ ಸರಂಜಾಮುಗಳನ್ನು ಸಾಗಿಸುವುದಕ್ಕೆ ಬಳಸಲ್ಪಡುತ್ತವೆ. ಕೋಣಗಳು ಆಲೆಮನೆಯಲ್ಲಿ ಗಾಣ ತಿರುಗಿಸಲಿಕ್ಕೆ ಬಳಸಲ್ಪಡುತ್ತವೆ. ಗದ್ದೆ ಇಲ್ಲದ ಮನೆಯಲ್ಲಿ ಗಂಡು ಕರುಗಳು ಜನಿಸಿದರೆ ಅವಕ್ಕೆ ಒಂದೆರಡು ವರ್ಷ ವಯಸ್ಸಾಗುತ್ತಿದ್ದಂತೆಯೇ ಮಾರಿಬಿಡುತ್ತಾರೆ. 'ಕೊಟ್ಟಿಗೆಯಲ್ಲಿ ಹೆಣ್ಣು ಹುಟ್ಟಬೇಕು; ಮನೆಯಲ್ಲಿ ಗಂಡು ಹುಟ್ಟಬೇಕು' ಎಂಬುದು ನಮ್ಮ ಕಡೆ ನಾಣ್ಣುಡಿ.

ಮನುಷ್ಯರಿಗೆ ಇಷ್ಟೆಲ್ಲಾ ಉಪಕಾರ ಮಾಡುವ ದನಕರುಗಳಿಗೆ ಹಳ್ಳಿಗರು ದೀಪಾವಳಿಯ ಸಮಯದಲ್ಲಿ ವಿಶೇಷ ಪೂಜೆ ಮಾಡಿ ಕೃತಜ್ಞತೆ ಸಲ್ಲಿಸುತ್ತಾರೆ. ಗೋವುಗಳಿಗೆ ಎಣ್ಣೆ ಸ್ನಾನ ಮಾಡಿಸಿ, ಬಣ್ಣ ಹಚ್ಚಿ, ಹೂಮಾಲೆ ಕಟ್ಟಿ ಸಿಂಗರಿಸಿ, ಭರ್ಜರಿ ಪೂಜೆ ಮಾಡಿ, ಹೋಳಿಗೆ-ಗೋಗ್ರಾಸ ಕೊಟ್ಟು ಸಂಭ್ರಮಿಸುತ್ತಾರೆ. ಗೋವುಗಳನ್ನು ದೇವರೆಂದೇ ಪೂಜಿಸುತ್ತಾರೆ. ಗೋಮಾತಾ ಎಂದೇ ಕರೆಯುತ್ತಾರೆ. ಆದರೆ ಗೋವಿಗೆ ಸಿಗುವ ಈ ವಿಶೇಷ ಆದರ ಎಮ್ಮೆ-ಕೋಣಗಳಿಗೆ ಅಷ್ಟಾಗಿ ಸಿಕ್ಕುವುದಿಲ್ಲ.

ಬೆಂಗಳೂರಿನಿಂದ ಊರಿಗೆ ಹೋದಾಗೆಲ್ಲಾ, ನನ್ನನ್ನು ಎಂದೂ ಮರೆಯದ ಮಂಗಳ, ನನ್ನನ್ನು ಕಾಣುತ್ತಿದ್ದಂತೆ ಕಣ್ಣಿ ಕಿತ್ತು ಬರುವಂತೆ, ನನ್ನನ್ನು ಮುಟ್ಟಲು ಬಾಗುತ್ತಾ ಹಾತೊರೆಯುತ್ತದೆ. ಕಾಲೇಜಿನ ಮಂಗಳಳ ಪ್ರೀತಿ ದಕ್ಕದಿದ್ದರೂ ಕೊಟ್ಟಿಗೆಯ ಮಂಗಳಳ ಪ್ರೀತಿ ಸಿಕ್ಕತಲ್ಲ, ನಾನು ಧನ್ಯ! ಅದರ ಪ್ರೀತಿಗೆ ನನ್ನ ಮರುಪ್ರೀತಿಯ ಶರಣು.

16 comments:

ಜ್ಯೋತಿ said...

ಹೌದು, ಕೊಟ್ಟಿಗೆಯ ಜೀವಿಗಳ ಪ್ರೀತಿ ಅದನ್ನು ಅನುಭವಿಸಿದವರಿಗೇ ಗೊತ್ತು. ನನ್ನ ಬಾಲ್ಯದ ದಿನಗಳಲ್ಲಿ ನಮ್ಮನೆಯಲ್ಲಿದ್ದ "ಬೊಳ್ಳಿ", "ಬಂಗಾರಿ"ಯರ ನೆನಪಾಗಿ ಕಣ್ಣು ಹನಿಗೂಡಿತು. ಈಗಲೂ ಅತ್ತೆ ಮನೆಯಲ್ಲಿ ಒಂದು ದನ ಇದೆ, ಆದರೆ ಅದಕ್ಕೆ ನನ್ನ ಗುರುತೇ ಇಲ್ಲ... ನಾವು ಯಾವಾಗಲಾದರೊಮ್ಮೆ ಊರಿಗೆ ಹೋಗಿ ಬರುವವರು, ಕೊಟ್ಟಿಗೆಗೆ ಹೋದರೂ ದಿನ-ದಿನದ ಹತ್ತಿರದ ಒಡನಾಟ ಇಲ್ಲವಲ್ಲ, ಹಾಗಾಗಿ. ಒಳ್ಳೆಯ ಲೇಖನಕ್ಕಾಗಿ ಧನ್ಯವಾದಗಳು.

ಸಿಂಧು Sindhu said...

ಸು.. ಒಳ್ಳೆಯ ಬರಹಕ್ಕಾಗಿ ಧನ್ಯವಾದಗಳು..

ವಿಷಯ ನಿರೂಪಣೆ ವಿಭಿನ್ನವಾಗಿದೆ. ನಮ್ಮ ಸುತ್ತಲ ಬದುಕಿನ ಪುಟ್ಟಸಂಗತಿಗಳೇ ಹೇಗೆ ನಮ್ಮ ಇಡೀ ಬದುಕಿನ ಒಟ್ಟಂದವಾಗಿ ರೂಪುಗೊಳ್ಳುತ್ತವೆ ಎಂಬುದನ್ನ ನಿರೂಪಿಸುವ ಚಂದದ ಬರಹ..

ಒಂದು ವಿಷಯ ನನಗೆ ಅರ್ಥವಾಗಲಿಲ್ಲ..ಯಾವ
ಸಾಫ್ಟ್ ವೇರ್ ಇಂಜಿನಿಯರ್ರನ ಹೆಂಡ್ತಿಗಿದೆ ಈ ಸುಖ ಅನ್ನುವ ಸಾಲುಗಳೇನು.. ಇಲ್ಲ ಇದು ವಿಮೆನ್ ಲಿಬ್ ಪ್ರಶ್ನೆ ಖಂಡಿತ ಅಲ್ಲ.. ;)

ಅಕ್ಕ

Annapoorna Daithota said...

ಆಹಾ !! ಅದ್ಭುತ ಚಿತ್ರಣ..... !!!

ಹಟ್ಟಿಯಲ್ಲಿ ಹೆಣ್ಣು ಹುಟ್ಟಬೇಕು, ಮನೆಯಲ್ಲಿ ಗಂಡು ಹುಟ್ಟಬೇಕು ಎನ್ನುವ ನಾಣ್ಣುಡಿ ನಮ್ಮ ಕಡೆಯೂ ಇದೆ...
ಬಹುಶಃ ಎಲ್ಲಾ ಕಡೆ ಇರಬಹುದು, ಯಾಕೆಂದರೆ ನಮ್ಮದು ಪುರುಷ ಪ್ರಧಾನ ಸಮಾಜ ಎಂಬ ಹೇಳಿಕೆ ಇದೆ ಅಲ್ವೇ :)

ಬಹಳ ಚೆನ್ನಾಗಿ ಬರೆಯುತ್ತೀರಿ ಸುಶ್ರುತ....

ಸುಶ್ರುತ ದೊಡ್ಡೇರಿ said...

@ ಜ್ಯೋತಿ

ಧನ್ಯವಾದಗಳು ಜ್ಯೋತಿ. ಇದನ್ನು ಬರೆದದ್ದಕ್ಕೆ ಮೊದಲ ಕಾರಣ ಕೊಟ್ಟಿಗೆ ಮತ್ತು ಕೊಟ್ಟಿಗೆಯ ಜೀವಿಗಳೆಡೆಗಿನ ನನ್ನ ಪ್ರೀತಿಗೆ ಮತ್ತಷ್ಟು ಹೊಳಪು ಕೊಡುವ ಯತ್ನ. ಮತ್ತೊಂದು, ಕೊಟ್ಟಿಗೆಯ ಬಗ್ಗೆ ಗೊತ್ತಿಲ್ಲದವರಿಗೆ ಅದರ ಸೌಂದರ್ಯ, ಸೂಕ್ಷ್ಮಗಳ ಪರಿಚಯವಾಗಲಿ ಎಂಬ ಉದ್ದೇಶ. ಅದಕ್ಕೇ ಸ್ವಲ್ಪ informative ಆಗಿರುವಂತೆ ಬರೆದೆ.

ಸುಶ್ರುತ ದೊಡ್ಡೇರಿ said...

@ ಸಿಂಧು

ಥ್ಯಾಂಕ್ಸ್ ಅಕ್ಕ. 'ಸಾಫ್ಟ್‍ವೇರ್ ಇಂಜಿನೀರ್‍ನ ಹೆಂಡತಿ' ಅಂದದ್ದಕ್ಕಾಗಿ ಮಹಿಳಾಮಣಿಗಳು ಸಿಡಿದೇಳಬೇಕಿಲ್ಲ. ಸಾಫ್ಟ್‍ವೇರ್ ಇಂಜಿನೀರ್‍ನ ಹೆಂಡತಿ ಸುಖವಾಗಿರುತ್ತಾಳೆ ಎಂಬ ತಪ್ಪು ತಿಳುವಳಿಕೆಯೂ ನನಗಿಲ್ಲ. ಆದರೆ ನಮ್ಮ ಅನೇಕ ಹೆಣ್ಣುಮಕ್ಕಳಿಗೇ ಆ ಭ್ರಮೆ ಇದೆ. ಮೊನ್ನೆ ಮೊನ್ನೆ ಮಹಿಳಾ ದಿನಾಚರಣೆ ಆಚರಿಸಿಕೊಂಡಿದ್ದೀರಿ; ಬಿ ಕೂಲ್!

ಸುಶ್ರುತ ದೊಡ್ಡೇರಿ said...

@ annapoorna daithota

ನಮ್ಮದು ಪುರುಷ ಪ್ರಧಾನ ಸಮಾಜ ಎಂಬುದು ಹೇಳಿಕೆ ಅಷ್ಟೇ ಅಲ್ಲ, ಇದು ಪುರುಷ ಪ್ರಧಾನ ಸಮಾಜವೇ! ಆದರೆ ನನಗಂತೂ ನಾವೇ ಪ್ರಧಾನರು ಎಂಬ ಭಾವನೆ ಇಲ್ಲ; ನಂಬಿ :)

ಪ್ರತಿಕ್ರಿಯೆಗೆ, ಮೆಚ್ಚುಗೆಗೆ ತುಂಬಾ ಥ್ಯಾಂಕ್ಸ್.

ಶ್ರೀನಿಧಿ.ಡಿ.ಎಸ್ said...

ಹ್ವಾ,
ಪ್ರಾಯಶಃ ನಿನ್ನ ಅತ್ಯುತ್ತಮ ಬರಹ ಇದು! ಕೊಟ್ಟಿಗೆ, ನನಗೂ ನೆನಪಾಯಿತು. ನಮ್ಮ ನಂದಿನಿ, ಲಕ್ಷ್ಮಿ..

ಆ ಸುಖಗಳನ್ನ ಕಳೆದುಕೊಳ್ಳುತ್ತಿದ್ದೇವಲ್ಲ ಸುಶ್, ಬೇಜಾರಾಗುತ್ತದೆ.

ಸುಶ್ರುತ ದೊಡ್ಡೇರಿ said...

@ ಶ್ರೀನಿಧಿ...

ಹೌದನಾ? ನಂಗೆ ಯಾರೋ 'ಚನಾಗಿಲ್ಲೆ' ಅಂದ. ನಾನು ಅದ್ನೇ ಸೀರಿಯಸ್ಸಾಗಿ ತಗಂಡಿದ್ದಿ! Actually, ಕೊಟ್ಗೆ ಬಗ್ಗೆ ಬರಿಯವು ಅಂತ ತುಂಬಾ ದಿನದಿಂದ ಅಂದ್ಕಂಡಿದ್ದಿ, ಅಂತೂ ಈಗ ಸಾಧ್ಯ ಆತು. ಥ್ಯಾಂಕ್ಸ್ ಮಾರಾಯ... :)

Shiv said...

ಸುಶ್ರುತ,

ಆ ಹಸುವಿನ ತರ ನಿಮ್ಮ ಮನೆ ನಾಯಿ,ಬೆಕ್ಕು, ಕೋಳಿಗಳ ಹೆಸರು ಹೇಳಿದರೆ ನಿನ್ನ ಕಾಲೇಜಿನ ಎಲ್ಲಾ 'ಹಳೆ' ನೆನಪುಗಳ ಹೆಸರುಗಳು ಹೇಳಿದಾಗೆ ಅನಿಸುತ್ತೆ :)

ಕೊಟ್ಟಿಗೆ ಬಗ್ಗೆ ದನ-ಕರುಗಳ ಬಗ್ಗೆ ಡೀಪ್ ಅಧ್ಯಯನ ಮಾಡಿ ಬರೆದಿದ್ದೀಯಾ..

ನಮ್ಮ ಕಡೆ ಗಿಣ್ಣು ಅಂತಾ ಮಾಡ್ತಾರೆ..ಕರು ಹಾಕಿದ ನಂತರ..ನಿಮ್ಮಲ್ಲಿ ಉಂಟಾ?

ಸುಶ್ರುತ ದೊಡ್ಡೇರಿ said...

@ shiv

ಹಹ್ಹಹ್ಹಹ್ಹ! ಹಾಗೇನೂ ಇಲ್ಲಪ್ಪ; ಎಲ್ಲೋ ಒಂದೆರಡು ಕೇಸು ಹಿಂಗಾಗಿವೆ ಅಷ್ಟೇ! ಅಲ್ದೇ ನಮ್ಮನೆಲಿ ಎಮ್ಮೆ-ದನ ಬಿಟ್ರೆ ಬೇರೆ ಯಾವ ಪ್ರಾಣೀನೂ ಇರ್ಲಿಲ್ಲ (ಸಧ್ಯ!).

ಯಾ ಯಾ, 'ಗಿಣ್ಣು' ಬಗ್ಗೆ ಪ್ರಸ್ತಾಪ ಮಾಡಿದ್ದು ಒಳ್ಳೇದಾಯ್ತು. ನಾನು ಬರೆದ ಪ್ರಬಂಧದಲ್ಲಿ ಮಿಸ್ ಆಗಿಹೋಗಿದ್ದ ಪಾಯಿಂಟ್ ಅದು. ಪೋಸ್ಟ್ ಮಾಡಿಯಾದಮೇಲೆ ಫ್ಲಾಶ್ ಆಯ್ತು. ಹೌದು, ನಮ್ಮಲ್ಲೂ ಗಿಣ್ಣು ಇದೆ. ಅದ್ನ ನಾವು 'ಗಿಣ್ಣ' ಅಂತೇವೆ. ಕರು ಹಾಕಿ ಸುಮಾರು ಹತ್ತು-ಹದಿನೈದು ದಿವಸಗಳವರೆಗೆ ಎಮ್ಮೆ/ದನದ ಹಾಲು ತುಂಬಾ ಬನಿ ಇರುತ್ತೆ. ಆಗ ಅದಕ್ಕೆ ಬೆಲ್ಲ ಹಾಕಿ ಕಾಯಿಸಿದರೆ ಗಿಣ್ಣ ಆಗುತ್ತೆ. ಹಾಗೆ ಕಾಯಿಸಿದ ಹಾಲಿಗೆ ಗಿಣ್‍ಹಾಲು ಅಂತೇವೆ; ಇನ್ನೂ ಕಾಯಿಸಿ ಕಾಯಿಸಿ ಪೂರ್ತಿ ಡ್ರೈ ಮಾಡಿದ್ರೆ ಅದು ಹುಡಿಗಿಣ್ಣ :)

ತಿನ್ಲಿಕ್ಕೆ ತುಂಬಾ ಚನಾಗಿರುತ್ತಮ್ಮಾ... ಯುಗಾದಿಗೆ ಊರಿಗೆ ಹೋಗ್ತಿದೀನಿ ತಿನ್ನೋಕೆ... ;)

archana said...

tumbaa chennagi barediddeeri..bareeta iri..
namma mane haTTi nenaapaytu..

ಸುಶ್ರುತ ದೊಡ್ಡೇರಿ said...

@ archana

Thanx archana. bartha iri..

ಯಾತ್ರಿಕ said...

ನಮಸ್ಕಾರ.

ದನಗಳೊಂದಿಗಿನ ಆತ್ಮೀಯತೆಯ ಬದುಕು ನನ್ನದಾಗಲಿಲ್ಲವೆಂದು ಕರುಬುವಂತಾಗಿದೆ. ಅದರಷ್ಟೇ ದುಃಖಕರ ಸಂಗತಿ ಹಳ್ಳಿಬದುಕಿನಿಂದಾಗಿ ನಿಮಗೆ ದೊರೆತಿರುವ, ನನಗೆ ಸಿಗದಿರುವ ಅಚ್ಚ ಗ್ರಾಮೀಣ ಶಬ್ದಭಂಡಾರ! ಜೊತೆಗೆ ಹವ್ಯಕ ಭಾಷೆಯ ಸೊಗಡು. ಆಹಾ...ಧನ್ಯರು ನೀವು.

ಸುಶ್ರುತ ದೊಡ್ಡೇರಿ said...

@ ಯಾತ್ರಿಕ

ಕರುಬಬೇಡಿ... ಈಗ್ಲೂ ಕಾಲ ಮಿಂಚಿಲ್ಲ... ಹಳ್ಳಿಕಡೆ ನಾಕು ಎಕರೆ ಜಮೀನು ತಗೊಂಡುಆರಾಮಾಗಿದ್ಬಿಡಿ... ತೇಜಸ್ವಿ ಥರ... :)

ಹಾಂ, ನಾನು ಧನ್ಯ ಎಂಬುದನ್ನು ಮನಸಾ ಒಪ್ಪುತ್ತೇನೆ. ಹಳ್ಳಿಯಲ್ಲಿ ನನ್ನಾಯಸ್ಸಿನ ಮೊದಲ ಹದಿನೆಂಟು ವರ್ಷಗಳನ್ನು ಕಳೆದ ಬಗ್ಗೆ ಖುಷಿ, ನೆಮ್ಮದಿ ಇದೆ..

ಧನ್ಯವಾದಗಳು ಯಾತ್ರಿಕರೇ...

Anonymous said...

'gaaLa haaki kuLitavaru' anno sheershike ishTa aaythu.

one more thing I liked is the description of paper boys on foot path in 'key kathe'.

ಸುಶ್ರುತ ದೊಡ್ಡೇರಿ said...

@ anonymous

ಧನ್ಯವಾದಗಳು ಅನಾಮಿಕರೇ! ಪೇಪರ್ ಬಾಯ್ಸ್ ಬಗ್ಗೆ ಇನ್ನೂ ತುಂಬಾ ಬರಿಯೋದಿದೆ..