Monday, April 02, 2007

ಪ್ರೈಮರಿ ಶಾಲೆಯ ದಿನಗಳ ನೆನೆದು...

ಆನಂದ್ ಮೇಷ್ಟ್ರು! ಹೆಸರು ಕೇಳಿದರೆ ಇವತ್ತಿಗೂ ರೋಮಾಂಚನವಾಗುತ್ತದೆ. ನನ್ನ ಪ್ರೈಮರಿ ಸ್ಕೂಲ್ ಮೇಷ್ಟ್ರು. ಚಿತ್ರ ಸ್ಪಷ್ಟವಿಲ್ಲ; ಮಸುಕಾಗಿದೆ. ಗುಂಡು ಗುಂಡಿ-ಗುಂಡಿ ಮುಖ, ತುಂಬಾ ಬೆಳ್ಳಗೇನಲ್ಲ; ಎಣ್ಣೆಗಪ್ಪು ಬಣ್ಣ. ಮೂಗಿನ ಮೇಲೆ ಬ್ಯಾಡಿತ್ತೇನೋ ಅನ್ನಿಸುವ ಕನ್ನಡಕ. ಮೂವತ್ತು ದಾಟದ ವಯಸ್ಸು. ಪ್ರತಿ ಮಾತಿನಲ್ಲೂ, ಪ್ರತಿ ನಡಿಗೆಯಲ್ಲೂ ಉತ್ಸಾಹ. ಪ್ರೈಮರಿ ಸ್ಕೂಲ್ ಮೇಷ್ಟ್ರು ಅಂದ್ರೆ ಹೀಗಿರಬೇಕು ಅನ್ನೋ ಹಾಗಿದ್ರು ನಮ್ ಆನಂದ್ ಮೇಷ್ಟ್ರು.

ನಮ್ಮ ಮನೆ ಹತ್ರಾನೇ ಮೇಷ್ಟ್ರ ಮನೆ. ಅದೊಂದು ಬಾಡಿಗೆ ಮನೆ. ನಮ್ಮೂರಿನಂತಹ ಹಳ್ಳಿಯಲ್ಲೂ ಒಂದು ಬಾಡಿಗೆ ಮನೆ ಇದೆ ಎಂದರೆ ಅಚ್ಚರಿ ಪಡಬೇಡಿ. ಅದು ಇಂತಹ ಮೇಷ್ಟ್ರುಗಳಿಗಾಗಿಯೇ ಊರಿನವರು ಕಟ್ಟಿಸಿರುವ ಮನೆ. ತಿಂಗಳಿಗೆ ಬರೀ ಮೂವತ್ತು ರೂಪಾಯಿ ಬಾಡಿಗೆ. ಎದುರಿಗೇ ಸರ್ಕಾರಿ ಬಾವಿ ಇದೆ. ಟ್ವೆಂಟಿ ಫೋರ್ ಅವರ್ಸ್ ವಾಟರ್!

ಮೇಷ್ಟ್ರು ಒಬ್ಬರೇ ಇರುತ್ತಿದ್ದರು. ನಮ್ಮೂರಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಉಳವಿಗೆ ತಮ್ಮ ಸೈಕಲ್ ಏರಿ 'ಶಾಪಿಂಗ್'ಗೆ ಹೋಗುತ್ತಿದ್ದರು. ಆನಂದ್ ಮೇಷ್ಟ್ರು ಉಳವಿಗೆ 'ಏನಕ್ಕೋ ಹೋಗುತ್ತಾರೆ' ಅಂತ ನಮ್ಮ ಮನೆಗಳಲ್ಲಿ ಹಿರಿಯರು ಮಾತಾಡಿಕೊಳ್ಳುತ್ತಿದ್ದರಾದರೂ ನಮಗೆ ಅವೆಲ್ಲಾ ಅರ್ಥವಾಗುತ್ತಿರಲಿಲ್ಲ. ಆನಂದ್ ಮೇಷ್ಟ್ರು ನಮ್ಮ ಪಾಲಿಗೆ ತುಂಬಾ ಒಳ್ಳೆಯವರಿದ್ರು.

ನಾನು ಚಿಕ್ಕವನಿರಬೇಕಾದರೆ ಓದಿನಲ್ಲಿ ತುಂಬಾ ಚುರುಕಿದ್ದೆ. ಶಾಲೆಗೆ ಸೇರುವ ಮೊದಲೇ, ಅಂದರೆ ನಾನು ಸುಮಾರು ನಾಲ್ಕು ವರ್ಷದವನಿದ್ದಾಗಲೇ ಬರೆಯುವುದು, ಓದುವುದು ಕಲಿತುಬಿಟ್ಟಿದ್ದೆ. ಕನ್ನಡವಷ್ಟೇ ಅಲ್ಲ; ಇಂಗ್ಲಿಷಿನಲ್ಲಿಯೂ ಎಲ್ಲರ ಹೆಸರನ್ನೂ ಬರೆಯುತ್ತಿದ್ದೆ. ಈಗಿನ ಮಕ್ಕಳ ಕಥೆ ಬಿಟ್‍ಹಾಕಿ. ಆದರೆ ಅವಾಗಿನ ಕಾಲದಲ್ಲಿ ಹಳ್ಳಿ ಮೂಲೆಯಲ್ಲಿನ ಹುಡುಗನೊಬ್ಬ ಹೀಗೆ ಓದುವುದರಲ್ಲಿ ಚುರುಕಾಗಿದ್ದಾನೆಂದರೆ ಅದು ಜನಗಳಿಗೆ ಅಗ್ರರಾಷ್ಟ್ರೀಯ ವಾರ್ತೆ! ಆನಂದ ಮೇಷ್ಟ್ರು ನನ್ನ ಪಾಂಡಿತ್ಯವನ್ನು ಕಂಡು ಸಂಪ್ರೀತರಾಗಿ (!) ನನ್ನನ್ನು ಐದನೇ ವರ್ಷಕ್ಕೇ ಶಾಲೆಗೆ ಸೇರಿಸಿಕೊಂಡುಬಿಟ್ಟರು. ನಾನೂ, ಬೇರೆ ಮಕ್ಕಳಂತೆ ಶಾಲೆಗೆ ಹೋಗಲು ರಗಳೆ ಮಾಡದೆ ಶಿಸ್ತಾಗಿ ಶಾಲೆಗೆ ಹೋಗತೊಡಗಿದೆ.

ಶಾಲೆಯಲ್ಲಿ ನಾನು ಉಳಿದವರಿಗಿಂತ ಸ್ವಲ್ಪ ಭಿನ್ನವಾಗಿ ಟ್ರೀಟ್ ಆಗುತ್ತಿದ್ದೆ. ಶಾಲೆಯಲ್ಲಿದ್ದುದು ಒಂದೇ ಕೊಠಡಿ. ಅದರಲ್ಲೇ ಒಂದರಿಂದ ನಾಲ್ಕನೇ ತರಗತಿವರೆಗಿನ ಎಲ್ಲಾ ಹುಡುಗರೂ ಕೂರುತ್ತಿದ್ದುದು. ಕೂರಲು ಮಣೆ ಇತ್ತು. ಸ್ಲೇಟು-ಕಡ್ಡಿ-ಪಾಟಿಚೀಲ ಇತ್ಯಾದಿಗಳೊಂದಿಗೆ 'ಅಣ್ಣನು ಮಾಡಿದ ಗಾಳಿಪಟ' ಹಾರುತ್ತಿತ್ತು. ಆನಂದ ಮೇಷ್ಟ್ರು ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರು. ಒಂದು ತರಗತಿಯವರಿಗೆ ಪಾಠ ಮಾಡುವಾಗ ಉಳಿದ ತರಗತಿಯವರಿಗೆ ಏನನ್ನಾದರೂ ಓದಿಕೊಳ್ಳಲಿಕ್ಕೋ, ಮಗ್ಗಿ ಬರೆಯಲೋ, ಇಲ್ಲಾ ಕಕಾಕಿಕೀ ಬರೆಯಲೋ ಹೇಳಿರುತ್ತಿದ್ದರು. ನಾನು ಅದನ್ನು ಮಾಡುತ್ತಲೇ ಮೇಷ್ಟ್ರು ಬೇರೆ ತರಗತಿಯವರಿಗೆ ಮಾಡುವ ಪಾಠದ ಕಡೆಗೂ ಒಂದು ಕಿವಿ ಇಟ್ಟಿರುತ್ತಿದ್ದೆ.

ಒಂದು ಘಟನೆ ತುಂಬಾ ಚೆನ್ನಾಗಿ ನೆನಪಿದೆ. ನಾನಾಗ ಒಂದನೇ ಕ್ಲಾಸಿನಲ್ಲಿದ್ದೆ. ಆನಂದ್ ಮೇಷ್ಟ್ರು ನಾಲ್ಕನೇ ಕ್ಲಾಸಿನವರಿಗೆ ಪಾಠ ಮಾಡುತ್ತಿದ್ದರು. ಪಾಠ ಮುಗಿದ ಮೇಲೆ 'ಮೋಹನ' ಅನ್ನೋ ಹುಡುಗನನ್ನು ಎಬ್ಬಿಸಿ ನಿಲ್ಲಿಸಿ ಏನೋ ಪ್ರಶ್ನೆ ಕೇಳಿದರು. ಮೋಹನ ಪಾಪ, ಉತ್ತರಿಸಲಿಲ್ಲ. ಅದೇ ಸಮಯಕ್ಕೆ ನಾನು ಕೈಯೆತ್ತಿಬಿಟ್ಟೆ! 'ಏನೋ, ನಿಂಗ್ ಉತ್ರ ಗೊತ್ತಾ?' ಕೇಳಿದ್ರು ಮೇಷ್ಟ್ರು. 'ಹೂಂ' ಅಂತ ತಲೆ ಗುಂಡು ಹಾಕಿದೆ. 'ಏನು ಹೇಳು ನೋಡೋಣ' ಅಂದ್ರು ಮೇಷ್ಟ್ರು. ನಾನು ಸರಿಯಾಗಿ ಉತ್ತರಿಸಿಬಿಟ್ಟೆ. ಇಡೀ ಕ್ಲಾಸೇ ಧಂಗಾಗಿಬಿಟ್ಟಿತು. ಮೇಷ್ಟ್ರು ಮೋಹನನಿಗೆ ಬೈಯತೊಡಗಿದರು: 'ಒಂದನೇ ಕ್ಲಾಸಿನ ಹುಡುಗ ಉತ್ರ ಹೇಳ್ತಿದಾನೆ ನಾಕ್ನೇ ಕ್ಲಾಸಿನವರ ಪ್ರಶ್ನೆಗೆ, ನಿಂಗೆ ನಾಚ್ಕೆ ಆಗಲ್ವೇನೋ......' ಮೋಹನ ತಲೆ ತಗ್ಗಿಸಿ ನಿಂತಿದ್ದ. ಮೇಷ್ಟ್ರು ನನಗೆ ಆದೇಶವಿತ್ತರು: 'ಏಯ್, ಅವನ ಕೆನ್ನೆಗೆ ಹೊಡಿಯೋ!' ನಾನು ಮೋಹನನತ್ತ ನಡೆಯತೊಡಗಿದೆ... ನನಗೆ ಮೋಹನನ ಮೇಲೆ ಯಾವುದೇ ತರಹದ ದ್ವೇಷವಿರಲಿಲ್ಲ. ಎಲ್ಲಾ ಹುಡುಗರಂತೆಯೇ ಅವನೂ ಪಾಪ. ಅವನ ಊರು ಹೊಸಕೊಪ್ಪ; ನಮ್ಮೂರಿಗೆ ಹೊಂದಿಕೊಂಡಂತೆ ಇರುವ ಊರು. ಜೋಯಿಸರ ಮನೆ ರಾಘು, ಅಣ್ಣಪ್ಪ, ದೀಪ್ತಿ, ಭೈರಪ್ಪ ಮುಂತಾದ ಹುಡುಗರ ಜೊತೆ ತಾನೂ ಕೌಳಿಮಟ್ಟಿ ಸುತ್ತಿಕೊಂಡು ಶಾಲೆಗೆ ಬರುತ್ತಿದ್ದ. ನಾಲ್ಕನೇ ಕ್ಲಾಸು ಮುಗಿದ ಮೇಲೆ ತನ್ನ ಅಪ್ಪ ದನ ಕಾಯಲಿಕ್ಕೆ ಹಾಕೇ ಹಾಕುತ್ತಾನೆ ಎಂಬ ಅಂಶ ಅವನಿಗೆ ಆಗಲೇ ತಿಳಿದಿತ್ತೋ ಏನೋ, ಓದಿನಲ್ಲಿ ತುಂಬಾ ಹಿಂದಿದ್ದ. ನನಗೆ ಅವನನ್ನು ಹೊಡೆದು ಆಗಬೇಕಾದ್ದು ಏನೂ ಇರಲಿಲ್ಲ. ಮೇಷ್ಟ್ರು ಕೇಳಿದ್ದ ಪ್ರಶ್ನೆಗೆ ನನಗೆ ಉತ್ತರ ಗೊತ್ತಿತ್ತು; ಕೈಯೆತ್ತಿಬಿಟ್ಟೆ. ಈಗ ಮೇಷ್ಟ್ರು ಹೊಡೆಯಲಿಕ್ಕೆ ಹೇಳಿದರು; ಹೊಡೆಯಲಿಕ್ಕೆ ಹೊರಟಿದ್ದೆ. ಅಷ್ಟೆ!

ಮಣೆಯ ಮೇಲೆ ನಿಂತಿದ್ದ ಮೋಹನ ತನ್ನೆಡೆಗೆ ಯುದ್ಧಸನ್ನದ್ಧನಾಗಿ ಬರುತ್ತಿರುವ ನನ್ನನ್ನೇ ಕಿರುಗಣ್ಣಿನಿಂದ ನೋಡಿದ. ಇನ್ನೇನು ಅಳು ಬಂದುಬಿಡುತ್ತದೇನೋ ಎಂಬಂತಿತ್ತು ಅವನ ಮುಖ. ಅವನ ಕಣ್ಣುಗಳಲ್ಲಿ ನನ್ನೆಡೆಗೊಂದು ರಿಕ್ವೆಸ್ಟ್ ಇತ್ತು: 'ನಿಧಾನಕ್ಕೆ ಹೊಡಿಯೋ ಸುಶ್ರುತಾ' ಎಂದವು ಹೇಳುತ್ತಿದ್ದಂತೆ ನನಗನ್ನಿಸಿತು. ಅವನು ಸಿಂಬಳವನ್ನು ಏರಿಸಿ ನನಗೆ ಮೂಗು ಹಿಡಿಯಲಿಕ್ಕೆ ಅನುವು ಮಾಡಿಕೊಟ್ಟ. ನಾನು ಮೂಗು ಹಿಡಿಯಲಿಕ್ಕೆ ಕೈ ಹಾಕಿದೆ.. ಅವನು ನನಗಿಂತ ತುಂಬಾ ಎತ್ತರ ಇದ್ದ. ನಾನು ತುದಿಗಾಲ ಮೇಲೆ ನಿಂತೆ. ಅವನ ಮೂಗು ಹಿಡಿದೆ. ನನ್ನ ಪುಟ್ಟ ಅಂಗೈಯಿಂದ ಅವನ ಕೆನ್ನೆಗೆ ಒಂದೇಟು ಹಾಕಿದೆ. 'ಝೊಳ್' ಎಂದು ಸದ್ದಾಯಿತು. ಏನೂಂತ ನೋಡಿದರೆ, ಮೋಹನ ಪಾಪ ಉಚ್ಚೆ ಹೊಯ್ದುಕೊಂಡಿದ್ದ! ನನಗೆ ಆಘಾತವಾಯಿತು. ಹಾಗಾದರೆ ನಾನು ಅಷ್ಟೆಲ್ಲಾ ಜೋರಾಗಿ ಹೊಡೆದೆನೇ? ನಿಜ ಹೇಳ್ತೀನಿ ಕಣ್ರೀ, ನಾನು ಅವತ್ತು ಹೊಡೆದದ್ದು ಇಂದಿಗೂ ಸರಿಯಾಗಿ ನೆನಪಿದೆ. ನಾನು ಎಷ್ಟು ನಿಧಾನಕ್ಕೆ ಹೊಡೆದಿದ್ದೆ ಅಂದ್ರೆ, ಅಷ್ಟು ನಿಧಾನಕ್ಕೆ ಹೊಡೆದರೆ ಈಗಿನ ಕಾಲದಲ್ಲಿ ಸೊಳ್ಳೆ ಸಹ ಸಾಯುವುದಿಲ್ಲ. (ಹಿಂದಿನ ಕಾಲಕ್ಕಿಂತ ಈಗ ಸೊಳ್ಳೆಗಳು ಪ್ರಬಲವಾಗಿವೆ ಅಂತ ನನ್ನ ನಂಬುಗೆ, ಅದಿರಲಿ!).

ಮೇಷ್ಟ್ರು ತಕ್ಷಣ ಅಲ್ಲಿಗೆ ಧಾವಿಸಿದರು. 'ಏಯ್ ಏನೋ ನಿಂದು? ಇಲ್ಲೇ ಉಚ್ಚೆ ಮಾಡ್ಕೊಂಡ್ಯಲ್ಲೋ.. ಥೂ ನಿನ್ನ! ಹೋಗಿ ಗೋಣಿಚೀಲ ತಗಂಬಂದು ವರ್ಸು ಹೋಗು' ಎಂದು ಅವನನ್ನು ತಳ್ಳಿದರು. ಮೋಹನ ಎರಡು ಹೆಜ್ಜೆ ಮುಂದಿಟ್ಟರೆ ಇನ್ನೂ ಅವನ ಚಡ್ಡಿಯಿಂದ ನೀರು ಸೋರುತ್ತಲೇ ಇತ್ತು. ಮೇಷ್ಟ್ರು ಅವನನ್ನು ತಡೆದರು. 'ಏಯ್ ನೀನಿಲ್ಲೇ ನಿಂತ್ಕೋ. ಏಯ್ ನಟರಾಜಾ, ನೀನು ಗೋಣಿಚೀಲ ತಗಂಬಾರೋ' ಅಂದ್ರು. ನಟರಾಜ ಗೋಣಿಚೀಲ ತಂದು ಮೋಹನನ ಕಾಲ ಬುಡಕ್ಕೆ ಹಾಕಿದ. ಮೋಹನ ಎಲ್ಲವನ್ನೂ ಒರೆಸಿ ಚೊಕ್ಕ ಮಾಡಿದ. ಇಡೀ ಘಟನೆಯಲ್ಲಿ ನನ್ನದೇನೂ ತಪ್ಪಿರಲಿಲ್ಲವಾದರೂ ನಾನೇ ಅಪರಾಧಿಯೇನೋ ಎಂಬಂತೆ ನರಳಿದೆ.

ಆನಂದ ಮೇಷ್ಟ್ರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಧ್ಯಾರ್ಥಿಗಳನ್ನು ತಯಾರು ಮಾಡುವಲ್ಲಿ ಬಹಳ ಮುಂದಿದ್ದರು. ಅವರು ಮೇಷ್ಟ್ರಾಗಿದ್ದ ಕಾಲದಲ್ಲಿ ನಡೆದ ಶಾಲೆಯ ಯೂನಿಯನ್‍ಡೇಗಳನ್ನು ಊರಿನ ಜನಗಳು ಇಂದಿಗೂ ನೆನೆಸಿಕೊಳ್ಳುತ್ತಾರೆ. ಅವರು ವರ್ಗವಾಗಿ ಹೋದಮೇಲೆ ನಮ್ಮ ಶಾಲೆಗೆ ಅನೇಕ ಬೇರೆ ಶಿಕ್ಷಕರು ಬಂದರು. ಯಶೋಧ ಟೀಚರ್ರು, ವೇದಾವತಿ ಟೀಚರ್ರು, ಯಲ್ಲಪ್ಪ ಮೇಷ್ಟ್ರು, ಈಶ್ವರಪ್ಪ ಮೇಷ್ಟ್ರು.. ಇತ್ಯಾದಿ ಇತ್ಯಾದಿ.

ಪ್ರೈಮರಿ ಶಾಲೆಯಲ್ಲಿ ನಮಗೆ ಕುಳಿತುಕೊಳ್ಳಲು ಊದ್ದ ಮಣೆ ಇತ್ತಲ್ಲಾ, ಆ ಮಣೆಯನ್ನು ನಾವು ಮೇಷ್ಟ್ರು ಇಲ್ಲದ ಹೊತ್ತಿನಲ್ಲಿ ಕಿಟಕಿಕಟ್ಟೆಗೆ ಸಾಚಿ ಜಾರುಬಂಡೆ ತರ ಮಾಡಿಕೊಂಡು ಆಟವಾಡುತ್ತಿದ್ದೆವು. ಮೇಷ್ಟ್ರು ಬಂದರೆ ಹೊರಗಡೆ ಇದ್ದ ಯಾರಾದರೂ ಹುಡುಗರು 'ಮೇಷ್ಟ್ರು ಬಂದ್ರು' ಅಂತ ಸಿಗ್ನಲ್ ಕೊಡುತ್ತಿದ್ದರು. ತಕ್ಷಣ ಮಣೆಗಳನ್ನು ಕೆಳಗಿಳಿಸಿ ಯಥಾಸ್ಥಾನದಲ್ಲಿರಿಸುತ್ತಿದ್ದೆವು.

ಬೆಳಗ್ಗೆ ಒಂಭತ್ತೂ ಮುಕ್ಕಾಲಿಗೆ ಶಾಲೆ ಶುರುವಾಗುತ್ತಿತ್ತು. ಪ್ರಾರ್ಥನೆ ಮಾಡಿ ಒಳಬಂದರೆ ಎರಡು ತಾಸು ಮೇಷ್ಟ್ರು ಮಾಡುವ ಪಾಠ ಕೇಳಬೇಕು. ಆಮೇಲೆ ರೀಸಸ್ಸಿಗೆ ಬಿಡುತ್ತಿದ್ದರು. ಹುಡುಗಿಯರು ಹೊಸಕೊಪ್ಪಕ್ಕೆ ಹೋಗುವ ದಾರಿಯಲ್ಲಿನ ಕೌಳಿಮಟ್ಟಿಯ ಮರೆಯನ್ನು ಆಶ್ರಯಿಸುತ್ತಿದ್ದರೆ ನಾವು ಶಾಲೆ ಪಕ್ಕದಲ್ಲಿದ್ದ ಅಕೇಶಿಯಾ ಮರಗಳ ತೋಪನ್ನು ಆರಿಸಿಕೊಂಡಿದ್ದೆವು. ಆಗೆಲ್ಲಾ ಉಚ್ಚೆ ಹೊಯ್ಯುವುದೂ ಒಂದು ಆಟವೇ! ಯಾರು ಹೆಚ್ಚು ದೂರ ಹಾರಿಸುತ್ತಾರೆ ಎಂದು! ಉಚ್ಚೆ ಹೊಯ್ಯಲಿಕ್ಕೆಂದು 'ಉಚ್ಚೆಗುಂಡೆ' ಅಂತ ಮಾಡಿಕೊಂಡಿದ್ದೆವು. ಎಲ್ಲರೂ ಅದಕ್ಕೇ ಉಚ್ಚೆ ಹೊಯ್ಯುವುದು. ಹೊಯ್ದ ಉಚ್ಚೆ ಸಾಗಿ ಹೋಗಲಿಕ್ಕೆ ಒಂದು ಒಗದಿಯನ್ನೂ ಕೊರೆದಿರುತ್ತಿದ್ದೆವು. ಉಚ್ಚೆ ಹೊಯ್ದಾದಮೇಲೆ ಒಂದು ಕಣ್ಣಿನ ರೆಪ್ಪೆಯನ್ನು ಕಿತ್ತು ಅದಕ್ಕೆ ಹಾಕಿ ಬರುತ್ತಿದ್ದೆವು. 'ಒಬ್ರು ಹೊಯ್ದ ಉಚ್ಚೆಯ ಮೇಲೆ ಮತ್ತೊಬ್ರು ಹೊಯ್ದ್ರೆ ಹೀಗೆ ಕಣ್ರೆಪ್ಪೆ ಕಿತ್ತು ಹಾಕ್ಬೇಕು' ಎಂದು ಆಗ ಯಾರೋ ರೂಮರ್ರು ಹಬ್ಬಿಸಿದ್ದರು! ಅದರ ಬಗ್ಗೆ ವಿಶ್ಲೇಷಿಸುವಷ್ಟೆಲ್ಲಾ ವಿವೇಕ ಆಗ ಇದ್ದರೆ ತಾನೇ! ಮಧ್ಯಾಹ್ನ ಒಂದೂ ಕಾಲಿಗೆ ಊಟಕ್ಕೆ ಬಿಡುತ್ತಿದ್ದರು. ಮನೆಗೆ ಬಂದು ಊಟ ಮಾಡಿ, ಎರಡು ಗಂಟೆ ಹೊತ್ತಿಗೆ ಮತ್ತೆ ಶಾಲೆಗೆ. ಮೂರೂ ವರೆಗೆ ಮತ್ತೆ ರೀಸಸ್ಸು; ನಾಲ್ಕೂ ಕಾಲಿಗೆ ಆಟ! ಎಷ್ಟೊಂದು ಆಟಗಳು ಗೊತ್ತಿದ್ದವು ನಮಗಾವಾಗ... ಅಜ್ಜಿ ಮನೆ ಆಟ, ಕೆರೆ-ದಡ ಆಟ, ಬಸ್ ಆಟ, ಕಣ್ಣಾಮುಚ್ಚಾಲೆ, ಐಸ್-ಪೀಸ್ ಕಂಬ, ವಿಮಾನ, ಅನ್ನ-ಆಸೆ ಆಟ.... ಶಾಲೆಯ ಕಸ ಗುಡಿಸುವುದಕ್ಕೆ ಪಾಳಿ ಮಾಡಿಕೊಂಡಿದ್ದೆವು. ದಿನಾ ಒಬ್ಬೊಬ್ಬರು ಗುಡಿಸುವುದು. ನೀರು ತರಲಿಕ್ಕೂ ಪಾಳಿ. ವಾರಕ್ಕೊಮ್ಮೆ ಇಡೀ ಶಾಲೆಯ ಆವರಣದ ಕಸ ಹೆಕ್ಕುತ್ತಿದ್ದೆವು. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ, ಸರಸ್ವತಿ ಪೂಜೆಯ ದಿನಗಳಿಗಂತೂ ಹೂವು ತರುವ ಸಂಭ್ರಮ. ಆಗೆಲ್ಲಾ ಸರ್ಫ್ ಎಕ್ಸೆಲ್ ಇರಲಿಲ್ಲ: ಬಿಳೀ ಯೂನಿಫಾರ್ಮ್ ಕೊಳೆಯಾಗದಂತೆ ನೋಡಿಕೊಳ್ಳುವುದು ಎಷ್ಟು ಕಷ್ಟವಾಗುತ್ತಿತ್ತು ಗೊತ್ತಾ? ಶಾಲೆಯ ಅಕ್ಕಪಕ್ಕ ನಾವು ನೆಟ್ಟ ಗಿಡಗಳು ಈಗ ಆಳೆತ್ತರ, ಊಹೂಂ, ಮುಗಿಲಿನೆತ್ತರಕ್ಕೆ ಬೆಳೆದು ನಿಂತಿವೆ. ಊರಿಗೆ ಹೋದಾಗ, ಶಾಲೆ ಹಾದು ಹೋಗುವಾಗ ಏನೋ ಆಪ್ಯಾಯಮಾನ ಅನುಭವ...

ಪ್ರೈಮರಿ ಸ್ಕೂಲು ಎಂದಕೂಡಲೇ ನನಗೆ ನೆನಪಾಗುವುದು ಇನ್ಸ್‍ಪೆಕ್ಟರು! ಅವರ ಬಗ್ಗೆ ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ! ಅವರೊಂಥರಾ ಲೋಕಾಯುಕ್ತ ವೆಂಕಟಾಚಲ ಇದ್ದಹಂಗೆ. ಯಾವಾಗ ಬರುತ್ತಾರೆ ಅಂತ ಹೇಳಲಿಕ್ಕಾಗೊಲ್ಲ. ಅವರು ಬಂದಾಗ ಏನಾದರೂ ಒಂದು ಗಂಢಾಂತರ ನಡೆದೇ ನಡೆಯುತ್ತಿತ್ತು. ಒಂದೋ ಮೇಷ್ಟ್ರೇ ಅವತ್ತು ಇರುತ್ತಿರಲಿಲ್ಲ; ಅಥವಾ ಅವರು ಕೇಳಬಹುದಾದ ಪ್ರಶ್ನೆಗಳಿಗೆ ನಾವು ಸಿದ್ಧರಾಗಿರುತ್ತಿರಲಿಲ್ಲ. ಅವರಾದರೂ ಏನು ಮಿಲಿಯನ್ ಡಾಲರ್ ಪ್ರಶ್ನೆ ಕೇಳುತ್ತಿರಲಿಲ್ಲ. ಯಾರನ್ನಾದರೂ ಎಬ್ಬಿಸಿ ನಿಲ್ಲಿಸಿ 'ಎಂಟ್ನಾಕ್ಲೆ ಎಷ್ಟು?' ಅಂತ ಕೇಳುತ್ತಿದ್ದರು. ಅಥವಾ 'ನಿಮ್ಮ ಜಿಲ್ಲೆಯ ಹೆಸರೇನು?' ಅಂತ ಕೇಳುತ್ತಿದ್ದರು. ಬಹಳ ಸಲ ಉತ್ತರ ಗೊತ್ತಿದ್ದರೂ ಇನ್ಸ್‍ಪೆಕ್ಟರ್ ಎದುರಿಗೆ ಕೈಕಾಲು ಥರಥರ ನಡುಗಿ ಏನನ್ನೂ ಹೇಳುತ್ತಿರಲಿಲ್ಲ. ಆನಂದ್ ಮೇಷ್ಟ್ರು ಕೈ-ಕಣ್ಸನ್ನೆಗಳ ಮೂಲಕ ಉತ್ತರ ಹೇಳಿಕೊಡುತ್ತಿದ್ದರೂ ನಮಗೆ ಅದನ್ನೆಲ್ಲಾ ಗಮನಿಸುವಷ್ಟು ವ್ಯವಧಾನ ಇರುತ್ತಿರಲಿಲ್ಲ. ಸಾಮಾನ್ಯವಾಗಿ ಇನ್ಸ್‍ಪೆಕ್ಟರಿಂದ ಬೈಯಿಸಿಕೊಳ್ಳುವುದು ಇದ್ದೇ ಇರುತ್ತಿತ್ತು. ಅವರು ನಮಗಿಂತಲೂ ಹೆಚ್ಚಾಗಿ ಮೇಷ್ಟ್ರಿಗೆ ಬೈಯುತ್ತಿದ್ದರು: 'ಏನ್ರೀ, ಇದನ್ನೇ ಏನ್ರೀ ನೀವು ಕಲ್ಸಿದ್ದು ಮಕ್ಳಿಗೇ?' ಅಂತ. ನಾವು ಪೆಕರರಂತೆ ನೋಡುತ್ತಿದ್ದೆವು.

ಮೊನ್ನೆ ಯುಗಾದಿಗೆ ಊರಿಗೆ ಹೋಗಿದ್ದೆನಲ್ಲ, ಹಬ್ಬದ ಹಿಂದಿನ ದಿನ ಹೊಸಕೊಪ್ಪದಲ್ಲಿ ಒಂದು ಬಯಲಾಟ ಇತ್ತು. ಗಣೇಶಣ್ಣ-ಮಧು ಜೊತೆ ನಾನೂ ಹೋಗಿದ್ದೆ. ಯಕ್ಷಗಾನ ಚೆನ್ನಾಗಿಯೇ ಇತ್ತು. ನನ್ನ ಹೈಸ್ಕೂಲು ಕ್ಲಾಸ್‍ಮೇಟು ದುರ್ಗಪ್ಪ ಬೋಂಡದ ಅಂಗಡಿ ಇಟ್ಟಿದ್ದ. ನಾವು ಬೋಂಡ ತಗೊಂಡೆವು. ದುಡ್ಡು ಕೊಡಲು ಹೋದರೆ 'ಏಯ್ ಸುಮ್ನಿರೋ.. ನೀವೆಲ್ಲ ಎಂಥ ದುಡ್ಡು ಕೊಡೋದು..' ಅಂದ. 'ನಿಂಗೆ ಗೊತ್ತಾಗಲ್ಲ ಸುಮ್ನಿರು. ವ್ಯಾಪಾರ ಅಂದ್ರೆ ವ್ಯಾಪಾರ' ಅಂದು ದುಡ್ಡನ್ನು ಜೇಬಿಗೆ ತುರುಕಿ ಬಂದೆವು. ಗುಂಡಾಲಿ ಆಟಾ ನೋಡೋಣ ಅಂತ ಆ ಕಡೆ ಹೋದೆವು. ಗ್ಯಾಸ್‍ಲೈಟಿನ ಬೆಳಕಿನಲ್ಲಿ ಗುಡುಗುಡಿ ಮಂಡ್ಲ ಜೋರಾಗಿ ಸಾಗಿತ್ತು. 'ಸೂರ್ಯ ಚಂದ್ರ ಖಾಲಿ! ಹಾಕ್ಕೊಳಿ ಹಾಕ್ಕೊಳಿ' ಅಂತ ಕೂಗುತ್ತಿದ್ದರು. ಡಬ್ಬಿಯೊಳಗನ ಕಾಯಿ 'ಕಣಕಣಕಣ' ಸದ್ದು ಮಾಡುತ್ತಿತ್ತು. ಯಾರೋ ಕಳವಾರಿಗೆ ನೂರರ ನೋಟು ಎಸೆದರು. ನಾನು ಗಮನವಿಟ್ಟು ನೋಡುತ್ತಿದ್ದೆ. ಯಾರದೋ ನೆರಳ ಹಿಂದೆ ಯಾರೋ ಸರಿದಂತಾಯಿತು. ಫಕ್ಕನೆ ನೋಡಿದೆ: ಮೋಹನ! ಹೌದು, ನೋ ಡೌಟ್, ಮೋಹನನೇ. ಮಾತಾಡಿಸೋಣ ಅಂದುಕೊಂಡೆ. ಆದರೆ ಅವನೇ ನನ್ನ ಕಣ್ಣು ತಪ್ಪಿಸುತ್ತಿದ್ದಾನೆ ಅನ್ನಿಸಿತು. ನನಗೂ ಏನೋ ತಡೆದಂತಾಗಿ ಸುಮ್ಮನಾಗಿಬಿಟ್ಟೆ.

20 comments:

Anonymous said...

ಹಾಯ್ ಸುಶ್ರುತ,
ನೀನು ಬರೆಯುವ ಇಂತ ಲೇಖನ ನನ್ನನ್ನು ನಮ್ಮೂರುಗೆ ಕರೆದುಕೊಂಡು ಹೋಗಿ ಬಿಡ್ತು. ಊರು ತುಂಬಾ ನೆನ್ಪಾಗ್ತು.
ನನ್ನ primary school ಗೆ high school ಗೆ ಕರೆದುಕೊಂಡು ಹೋಕ್ತು. ಯಾಕಾದ್ರು ಇಷ್ಟು ದೊಡ್ಡವಳು ಆಯ್ದನೋ ಅನ್ನಿಸ್ತು ಸುಶ್ರುತ. ತುಂಬಾ ಚನ್ನಾಗಿ ಬರದ್ದೆ(ಯಾವಗಿನಂತೆ)

ಸುಪ್ತದೀಪ್ತಿ suptadeepti said...

ನಿಜ, ಪ್ರೈಮರಿ ಶಾಲೆಯ ನೆನಪುಗಳು ಕೊಡುವ ಮುದ ಬೇರೇನೇ. ಆ ವಯಸ್ಸಿನ ಮುಗ್ಧತೆ, ಗಂಡು-ಹೆಣ್ಣುಗಳ ನಡುವಿನ ಇದ್ದೂ ಇಲ್ಲದ ಭೇದ, ಹುಡುಗರ ಗಲಾಟೆ, ಹುಡುಗಿಯರ ಕಿಲ-ಕಿಲ.... ಇವೆಲ್ಲ ಮಾಸಲಾರದ ಸ್ನಿಗ್ಧ ನೆನಪುಗಳು. ಮತ್ತೊಂದು ಸುಂದರ ಪದ-ಮೆರವಣಿಗೆಗೆ ವಂದನೆಗಳು ಸುಶ್ರುತ.

Sushrutha Dodderi said...

@ ranju

'ಯಾಕಾದ್ರೂ ಇಷ್ಟು ದೊಡ್ಡವಳಾದ್ನೇನೋ ಅನ್ನಿಸ್ತು' ಅಂದಿದ್ದು ಖುಷಿಯಾತು. ನಂಗೂ ಹಂಗೇ ಅನ್ನಿಸ್ತಿತ್ತು ಈ ಬ್ಲಾಗ್ ಬರಿಯಕ್ಕರೆ. ಆದ್ರೆ ಸಣ್ಣಕೇ ಇದ್ದಿದಿದ್ರೆ ಹಿಂಗೆ ಬರಿಯಕ್ಕೆ ಆಗ್ತಿರ್ಲ್ಯನೋ ಅಂದ್ಕಂಡು ಸಮಾಧಾನ ಮಾಡ್ಕ್ಯಂಡಿ :)

ಮೆಚ್ಚುಗೆಗೆ ಥ್ಯಾಂಕ್ಸ್.

Sushrutha Dodderi said...

@ suptadeepti

>> ಹುಡುಗರ ಗಲಾಟೆ, ಹುಡುಗಿಯರ ಕಿಲ-ಕಿಲ..

-ಅಂದ್ರೆ ನೀವ್ ಹೇಳ್ತಿರೋದು ಹುಡುಗೀರು ಗಲಾಟೇನೇ ಮಾಡಲ್ಲ ಅಂತಾನಾ? ಅಥ್ವಾ ಹುಡುಗೀರ ಗಲಾಟೆ ಸಹ ಕಿಲಕಿಲ ಅಂತಾನಾ? ನಮ್ ಕ್ಲಾಸಲ್ಲಂತೂ ಹುಡುಗೀರೇ ಹೆಚ್ಗೆ ಗಲಾಟೆ ಮಾಡ್ತಿದ್ದದ್ದು. :)

ಗಂಡು-ಹೆಣ್ಣುಗಳ ನಡುವೆ ಭೇದ ಇರಲಿಲ್ಲ ಎಂಬುದು ಮಾತ್ರ ಸತ್ಯ. ಅದಿಲ್ಲಾಂದ್ರೆ, ಎಷ್ಟು ಚಂದ್‍ಚಂದ ಹುಡುಗೀರಿದ್ರು ಗೊತ್ತಾ ನಮ್ ಕ್ಲಾಸಲ್ಲಿ? ಆದ್ರೆ ಒಬ್ಳುನ್ನೂ ಲವ್ ಮಾಡ್ಬೇಕು ಅಂತಾನೇ ಅನ್ಸಿರ್ಲಿಲ್ಲ ಆವಾಗ (ಈಗ ನೆನೆಸಿಕೊಂಡ್ರೂ ಹೊಟ್ಟೆ ಉರಿಯೊತ್ತೆ!) :)

ಥ್ಯಾಂಕ್ಸ್ ಕಣ್ರೀ ಕಾಮೆಂಟ್ ಮಾಡಿದ್ದಕ್ಕೆ...

ಸಿಂಧು sindhu said...

ನಮ್ಮೂರಿನ ಎಲ್ಲ ಶಾಲೆಗಳಲ್ಲೂ ಒಬ್ಬ ಮೋಹನ ಇರುತ್ತಾನಾ ಅಂತನ್ನಿಸಿಬಿಟ್ಟಿತು. ನಮ್ಮ ಮೋಹನನೂ ಹೀಗೆ ಇದ್ದ..ಖಂಡಿತಾ ನನಗವನ ಗುರ್ತು ಸಿಕ್ಕುವುದಿಲ್ಲ ಈಗ. ಅಂದಿನ ದಿನಗಳಲ್ಲಿ ಶಾಲೆಯ ಬಗೆಗೆ ಇದ್ದ ಗುರುಭಾವವೇ ಇಲ್ಲ ಎಲ್ಲೂ ಈಗ. ಶಾಲೆಯೆಂದರೆ ಒಂತರಾ ಭಯ, ಒಂತರಾ ಇಷ್ಟ, ಶನಿವಾರ ಮುಂಜಾನೆಯ ಕಷ್ಟ, ಆಟ-ಪಾಠ, ಮಜಾ ಎಲ್ಲ ಹೈಟೆಕ್ ಯುಗದಲ್ಲಿ, ಪ್ರೈವೇಟ್ ಶಾಲೆಗಳ ದೊಡ್ದ ದೊಡ್ದ ಸಿಲಬಸ್ಸಲ್ಲಿ ಅರ್ಧ ಬಿಗಿದ ಉರುಳಲ್ಲಿ ಸಿಕ್ಕಿಬಿದ್ದಿವೆ. ಬಿಡಿಸಿಕೊಳ್ಳಲೂ ಬರೋಲ್ಲ..
ಹಳೆಯ ನೆನಪುಗಳ ಕೊಳಕ್ಕೆ ಚಿನ್ನಾಟದ ಕಲ್ಲೆಸೆದಿದ್ದಕ್ಕೆ ಧನ್ಯವಾದಗಳು ಸು..

Sushrutha Dodderi said...

@ ಸಿಂಧು

ನಿಮ್ ಶಾಲೇಲೂ ಮೋಹನ ಇದ್ನಾ? ಅರೆ!

ಬಹುಶಃ ಈ ಮೋಹನರು ಎಲ್ಲಾ ಶಾಲೆಯಲ್ಲೂ ಇರುತ್ತಾರೆ. ನಾಕನೇ ಕ್ಲಾಸು ಫೇಲಾಗುತ್ತಾರೆ. ನಂತರ ಊರಿನ ದನ ಕಾಯಲಿಕ್ಕೆ ಬರುತ್ತಾರೆ. ತಾವು ಕಲಿತ ಅಕ್ಷರವನ್ನೇ ಬಳಸಿ ಬಸ್‍ಸ್ಟ್ಯಾಂಡ್ ಗೋಡೆಯ ಮೇಲೆ ಏನೇನೋ ಬರೆಯುತ್ತಾರೆ. ಬೇಕು ಅವರಂಥವರೂ ಈ ಜಗಕ್ಕೆ (ಅದಿಲ್ಲಾಂದ್ರೆ ವರ್ಷಕ್ಕೊಂದ್ಸಲ ಬಸ್‍ಸ್ಟ್ಯಾಂಡ್ ಗೋಡೆಗೆ ಸುಣ್ಣ ಹೊಡೆಸುವವರ್ಯಾರು?!)

ಈಗಿನ ಕಾಲದ ಮಕ್ಕಳಿಗೆ ನಾವು ಅನುಭವಿಸಿದ ಮಜಾಗಳು ದಕ್ಕುವುದಿಲ್ಲ ಎಂಬುದು ಸತ್ಯ ಸತ್ಯ. ಅದು ಅವರ ದುರಾದೃಷ್ಟವೇ ಸರಿ. ಕಾನ್ವೆಂಟು, ಇಂಗ್ಲೀಷು, ಟ್ಯೂಶನ್ನು, ಇತ್ಯಾದಿಗಳಲ್ಲಿ ಬಾಲ್ಯದ ಸುಂದರ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುವ ಇವರನ್ನು ನೋಡಿದರೆ ಬೇಸರವಾಗುತ್ತದೆ.

ಪ್ರತಿಕ್ರಿಯೆಗೆ ಥ್ಯಾಂಕ್ಸ್.

ಸುಪ್ತದೀಪ್ತಿ suptadeepti said...

ನಮ್ಮ ಶಾಲೆಯಲ್ಲಿ ಹುಡುಗಿಯರು ಗಲಾಟೆ ಮಾಡುತ್ತಿರಲಿಲ್ಲ ಅಂತಲ್ಲ, ಆದರೆ ಹುಡುಗರ ಗಲಾಟೆಗೆ ಹುಡುಗಿಯರ ಕಿಲ-ಕಿಲದ ಪ್ರತಿಕ್ರಿಯೆ, ಅಂತ. ಗಲಾಟೆಯ ಹುಡುಗಿಯರೂ ಬೇಕಾದಷ್ಟಿದ್ದರು. (ನನಗೆ ಆ ಛಾನ್ಸ್ ಇರಲಿಲ್ಲ, ಅಪ್ಪನ ಕಸಿನ್ಸ್ ಅಲ್ಲಿ ಟೀಚರ್'ಗಳಾದ್ದರಿಂದ ನಾ ಸ್ವಲ್ಪ ಗಂಭೀರವಾಗಿ ಇರಲೇ ಬೇಕಾಗಿತ್ತು.)

ಈಗಿನ ಮಕ್ಕಳಿಗೆ ನಮ್ಮ ಬಾಲ್ಯದಲ್ಲಿದ್ದ ಮಜಾ ಇಲ್ಲ ಅನ್ನುವುದಕ್ಕೆ ನನ್ನ ಸಹಮತ ಇದೆ. ಆ ದಿನಗಳಲ್ಲಿ ಶಾಲೆಯಿಂದ ಮನೆಗೆ ಬರಬೇಕಾದರೆ ಗುಡ್ಡಗಳಲ್ಲಿ ಓಡಾಡಿ, ಹೆಸರರಿಯದ ಹಣ್ಣುಗಳನ್ನು, ಬೇರು, ನಾರು, ಚಿಗುರುಗಳನ್ನು ಮೆಲ್ಲುತ್ತಾ ಬಂದ ಆನಂದ, ಸ್ವಚ್ಛಂದ ಈಗಿನ ಹಳ್ಳಿ ಮಕ್ಕಳಿಗೂ ಇಲ್ಲ. ನಾನು ಮತ್ತು ನನ್ನ ತಮ್ಮಂದಿರು, ಶಾಲೆಯಿಂದ ಮನೆಗೆ ಬರುವಾಗಲೇ ಗುಡ್ಡದಲ್ಲಿ ನಮ್ಮ "ಬೊಳ್ಳಿ ಮತ್ತು ಬಂಗಾರಿ"ಯರು ಕಾಣ ಸಿಕ್ಕಿದರೆ, ಅವರಿಬ್ಬರನ್ನೂ ಮನೆ ಕಡೆ ಹೊಡೆದುಕೊಂಡು ಹೋಗಿ, "ಇಷ್ಟು ಬೇಗ ಕರ್ಕೊಂಡು ಬಂದದ್ದು ಯಾಕೆ?" ಅಂತ ಅಮ್ಮನ ಕೈಯಲ್ಲಿ ಹೊಡೆಸಿಕೊಳ್ಳುತ್ತಿದ್ದೆವು. ಆದರೂ ಅದೂ ಒಂದು ಮಜಾ.

Shiv said...

ಸುಶ್ರುತ,

ಮತ್ತೊಂದು ಸವಿಸವಿ ನೆನಪಿನ ಮೆರವಣಿಗೆ !
ತುಂಬಾ ಆಪ್ತವೆನಿಸಿತು..

>ಗುಂಡಾಲಿ ಆಟಾ
ಅಂದ್ರೆ ಎನು? ಬಹುಷಃ ನಮ್ಮ ಕಡೆ ಇದನ್ನು ಬೇರೆ ಹೆಸರಿಂದ ಕರೆತಿದ್ದರು ಅನಿಸುತ್ತೆ..

ಎಲ್ಲಾ ಓಕೆ..ಪಾಪ ಅವನಿಗೆ ಹಂಗಾ ಹೊಡೆಯೋದು !!

Sushrutha Dodderi said...

@ suptadeepthi

ಏನೇ ಹೇಳಿ, ಮೇಷ್ಟ್ರ ಮಕ್ಳಾಗಿ ಮಾತ್ರ ಹುಟ್ಬಾರ್ದು ನೋಡಿ! ಅಥವಾ ನಮಗೆಗೊತ್ತಿರೋರು ಟೀಚರ್ರಾಗಿದ್ರೂ ಪ್ರಾಬ್ಲಮ್ಮೇ! ಏನೂ ಎಂಜಾಯ್ ಮಾಡ್ಲಿಕ್ಕೇ ಆಗಲ್ಲ. ನಿಮ್ಮ ಬಗ್ಗೆ ನಂಗೆ ಕರುಣೆಯಿದೆ.. ;)

ಹೌದು, ಹಾಗೆ ಬೈಸಿಕೊಳ್ಳುವುದರಲ್ಲೂ ಒಂದು ಮಜಾ ಇತ್ತು...

ಶ್ಯಾಮಾ said...

nimma lekhana nannannu nammoorige nanna baalyakke nanna shaalege kardu kondu hoythu.. vaapas barokke manase agtha illa.... primary school nalli iruvagina aa mugdhathe, aa aata paata aa nagu ega bari nenapu... aa nenapinangalakke nannannu karedukondu hogiddakke dhanyavada!

Shree said...

ಈ ಬರಹ ನನ್ನ ಶಾಲಾದಿನಗಳಿಗೆ ಒ೦ದು ರೌ೦ಡ್ ಟ್ರಿಪ್ ಹೊಡೆಸಿತು ನ೦ಗೆ...
'ಅಗ್ರರಾಷ್ಟ್ರೀಯ ವಾರ್ತೆ' ಅ೦ದಿದ್ದೀರ, ನ೦ಗೆ ಸಿಕ್ಕಾಪಟ್ಟೆ ಖುಶಿ ಆಗೋಯ್ತು.. (ತು೦ಬ ಸಮಯದಿ೦ದ ಈಟಿವಿ ನೋಡ್ತಿದೀರ? ಈಗ ಅದು ಬರೀ ಅಗ್ರವಾರ್ತೆಗೆ reduce ಆಗಿದೆ) ಕನ್ನಡದಲ್ಲಿ 'PRIME NATIONAL BULLETIN'ನ ಇಷ್ಟು ಚೆನ್ನಾಗಿ ಜನಮನದಲ್ಲಿ ಉಳಿಯೋ ಥರ ತರ್ಜುಮೆ ಮಾಡಿದ ಶಬ್ದ ಬ್ರಹ್ಮನ ಜತೆ ನಾನು ಕೆಲಸ ಮಾಡ್ತಿರೋದಕ್ಕೆ..!! :-)

Sushrutha Dodderi said...

@ shiv

Thanx for the comment.

ಗುಡುಗುಡಿ ಅಥವಾ ಗುಂಡಾಲಿ ಆಟದ ಬಗ್ಗೆ ನಾನು ಹೇಳುವುದೇನೂ ಇಲ್ಲ. ಹರ್ಷ ಭಟ್ ನನ್ನ ಪರವಾಗಿ ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ. ಇದನ್ನು ಓದಿದರೆ ನಿಮಗೆ ಗುಂಡಾಲಿ ಆಟದ ಸಂಪೂರ್ಣ ಪರಿಚಯ ಆಗುತ್ತದೆ.

ಉಳಿದಂತೆ, ಸಾರ್, ನಿಜ್ವಾಗ್ಯೂ ನಾನು ನೀವು ಹೇಳೋಷ್ಟು ಜೋರಾಗೆಲ್ಲಾ ಹೊಡೆದಿರಲಿಲ್ಲ ಸಾರ್.. ನನ್ನನ್ನ ನಂಬಿ ಸಾರ್... :-)

btw, thanx a lot to Harsha...

Sushrutha Dodderi said...

@ ಶ್ಯಾಮಾ

Welcome to my blog. ಇದನ್ನ ಬರೆಯುವಾಗನಾನೂ ಶಾಲೆಯ ಅಂಗಳದಲ್ಲಿ ಓಡಾಡುತ್ತಿದ್ದೆ, ಕಟ್ಟೆಯ ಮೇಲೆ ಹುಡುಗರ ಸಾಲಿನಲ್ಲಿ ಒಬ್ಬನಾಗಿ ನಿಂತು ಜನಗಣಮನ ಹೇಳುತ್ತಿದ್ದೆ, ಕಪ್ಪು ಬೋರ್ಡಿನ ಮೇಲೆ ಮೇಷ್ಟ್ರು ಬರೆದದ್ದನ್ನು ನನ್ನ ಸ್ಲೇಟಿನಲ್ಲಿ ಬರೆದುಕೊಳ್ಳುತ್ತಿದ್ದೆ.... ನಾನೂ ಥ್ಯಾಂಕ್ಸ್ ಹೇಳಬೇಕು ಈ ಲೇಖನಕ್ಕೆ.... ಥ್ಯಾಂಕ್ಸ್...

Sushrutha Dodderi said...

@ shree

ನಾನು ಈಟೀವಿ ಆಟೀವಿಗಳನ್ನ ತುಂಬಾ ನೋಡುವುದಿಲ್ಲ. ಆದರೆ ಎಂದೋ ನೋಡಿದ್ದು, ತಲೆಯಲ್ಲಿ ಸ್ಟೋರ್ ಆಗಿದ್ದು, ಇಂದು ಬರೆಯುವಾಗ ತಾನಾಗಿ ಹೊರಬಂತು, ಅಷ್ಟೆ. ಹಾಂ, ಏನಂದ್ರಿ, ನೀವು ಅದರ ಟ್ರಾನ್ಸ್ಲೇಟರ್ ಜೊತೆಗೇ ಕೆಲಸ ಮಾಡ್ತಿರೋದಾ? ಗುಡ್ ಗುಡ್..! :)

Shree said...

ನಿಮ್ಮ ತಲೆಯಲ್ಲೂ ಉಳಿಯೋ ಥರದ ಶಬ್ದ ಸೃಷ್ಟಿ ಮಾಡಿದವ್ರಿಗೆ ಟ್ರಾನ್ಸ್ಲೇಟರ್ ಅ೦ತ್ ಅವಮಾನ ಮಾಡ್ತೀರೇನ್ರಿ? :-( :-(

Sushrutha Dodderi said...

@ shree

ಏ ಸಾರಿ ಕಣ್ರೀ.. ನಂಗೆ ಗೊತ್ತಾಗ್ಲಿಲ್ಲ.. ತಪ್ಪು ತಿಳೀಬೇಡಿ.. ಬೇಜಾರ್ ಮಾಡ್ಕೋಬೇಡಿ.. ಏನೋ ತಿಳೀದೇ ಮಾಡಿದ ತಪ್ಪು.. ಅದಿರ್ಲೀ, ಹಾಗಾದ್ರೆ ಅವ್ರುನ್ನ ಟ್ರಾನ್ಸ್ಲೇಟರ್ ಅನ್ದೇ ಮತ್ತೇನನ್ಬೇಕು?

Archu said...

ವಾವ್ಹ್!! ತುಂಬಾ ಚೆನ್ನಾಗಿದೆ..

Sushrutha Dodderi said...

@ archana

Thanx Archanaji.. :)

Anonymous said...

mhhhh.........yen helali Awesome bere pada sigtaayillaa.. nimma lekanadalli yaara prabavavu illaa..reallyyy cool.. nakku nakku saakaytu...

Sushrutha Dodderi said...

@ siri

Thanx a lot man..