Monday, April 09, 2007

ಒಂದು ಕೀ-ಕತೆ!

"ಕಾ ಕಾ" ಅನ್ನುವುದು ಕಾಗೆ, "ಕೂ ಕೂ" ಅನ್ನುವುದು ಕೋಗಿಲೆ, "ಕೋ ಕೋ" ಅನ್ನುವುದು ಕೋಳಿ, ಹಾಗಾದ್ರೆ "ಕೀ ಕೀ" ಅನ್ನುವುದು ಯಾರು?

ಉ: ಕೀ ಕಳಕೊಂಡವರು!

-ಅದೊಂದು ಜೋಕು. ಆದರೆ ಈ ಜೋಕುಗಳು ಜೋಕಿಗೀಡಾದವರಿಗೆ ಜೋಕಾಗಿರುವುದಿಲ್ಲ ನೋಡಿ. ಐ ಮೀನ್, ವ್ಹಾಟ್ ಐ ವಾಂಟ್ ಟು ಸೇ ಈಸ್, ಯಾರು ಈ ಜೋಕೀ-ಘಟನೆಯಲ್ಲಿ ಪಾತ್ರಧಾರಿಗಳಾಗಿರುತ್ತಾರೋ ಅವರಿಗೆ ಅದು ನಗಲಿಕ್ಕೂ ಆಗದ ಧರ್ಮಸಂಕಟವಾಗಿರೊತ್ತೆ. ಇನ್ನೂ ಅರ್ಥ ಆಗ್ಲಿಲ್ವಾ? ಹೋಗ್ಲಿ ಬಿಡಿ, ಬಿಟ್ ಹಾಕಿ.

ಮೊನ್ನೆ ಏನಾಯ್ತು ಅಂದ್ರೆ, ನಾನು ಯುಗಾದಿಗೆ ಊರಿಗೆ ಹೋಗಿದ್ನಲ್ಲಾ? ಹೋಗಿದ್ದೆ ತಾನೆ? ಹೋಗಿ, ಬೆಂಗಳೂರಿಗೆ ವಾಪಾಸ್ ಬರಬೇಕಾದ್ರೆ ನನ್ನ ರೂಮಿನ ಕೀಯನ್ನು ಊರಿನಲ್ಲೇ ಬಿಟ್ಟುಬಂದುಬಿಟ್ಟೆ! ಊರಿನಿಂದ ಸೊರಬಕ್ಕೆ ಬಂದು, ಸೊರಬದಿಂದ ಬೆಂಗಳೂರಿನ ಬಸ್ಸು ಹತ್ತಿ, ಪುಶ್‍ಬ್ಯಾಕ್ ಸೀಟನ್ನು ಹಿಂದಕ್ಕೆ ಪುಶ್ ಮಾಡುವಾಗಲೇ ಗೊತ್ತಾಗಿಹೋಯಿತು ಕೀ ಮನೆಯಲ್ಲೇ ಉಳಿದಿದೆ ಅಂತ. ಆದರೆ ಏನು ಮಾಡುವುದು? ಬಸ್ಸು ಆಗಲೇ ಹೊರಡಲಿಕ್ಕೆ ರೆಡಿಯಾಗಿದೆ. ಈಗ ಮತ್ತೆ ಊರಿಗೆ ಹೋಗಿ ಕೀ ತರುವುದಂತೂ ಸಾಧ್ಯವಿಲ್ಲ. ಸರಿ ಮತ್ತೇನು ಮಾಡಲಿಕ್ಕಾಗುತ್ತೆ, ಓನರ್ ಬಳಿ ಇನ್ನೊಂದು ಕೀ ಹೇಗಂದರೂ ಇರೊತ್ತೆ; ಅವನಿಂದ ಕೇಳಿ ಪಡೆದರಾಯಿತು ಅಂದುಕೊಂಡು ಸೀಟಿಗೊರಗಿದೆ. ಆದರೂ ಈ ಟೆನ್ಷನ್ ಯಾರಪ್ಪನ ಮನೇದು ಹೇಳಿ? ಪಾಪಿ, ರಾತ್ರಿಯಿಡೀ ನಿದ್ದೆಗೊಡಲಿಲ್ಲ.

ನಾನು ಟೆನ್ಷನ್‍ನಲ್ಲಿರುವುದು ಬಸ್ಸಿನಲ್ಲಿನ ಮತ್ಯಾವುದೇ ಜೀವಿಗೂ ಗೊತ್ತಿರಲಿಲ್ಲ. ಎಲ್ಲರೂ ಅವರವರ ಸೀಟಿಗೊರಗಿ, ಅವರವರ ಕಣ್ಣು ಮುಚ್ಚಿ, ಅವರವರ ಕನಸು-ನಿದ್ರೆಯ ಲೋಕದಲ್ಲಿ ಮುಳುಗಿದರು. ಶಿರಾಳಕೊಪ್ಪದಲ್ಲಿ ಬಸ್ಸು ನಿಂತಿದ್ದಾಗ ಒಳನುಗ್ಗಿದ್ದ ಸೊಳ್ಳೆಗಂತೂ ನನ್ನ ಮೇಲೆ ಅದೇನು ಪ್ರೀತಿಯೋ ಕಾಣೆ: ಬೆಂಗಳೂರು ಮುಟ್ಟುವವರೆಗೂ ನನ್ನ ಕಾಲಿಗೆ, ಕೈಗೆ, ಮುಖಕ್ಕೆ ಮುತ್ತುಕೊಡುತ್ತಲೇ ಇತ್ತು. ಕೆಲವೊಮ್ಮೆ ಅದು ನನ್ನ ಕಿವಿಯ ಬಳಿ ಬಂದು ಎಷ್ಟು ಇಂಪಾಗಿ ತನ್ನ 'ಗುಂಯ್-ಗಾನ' ಹಾಡುತ್ತಿಂದರೆ ಅಷ್ಟೆಲ್ಲಾ ಅಬ್ಬರದಿಂದ ಬಸ್ಸು ಹಾಡುತ್ತಿದ್ದ 'ಬುರ್-ಗಾನ' ಇದರ ಮುಂದೆ ಡಲ್ಲಾಗಿಬಿಡುತ್ತಿತ್ತು.

ಆರೂವರೆಗೆ ಸರಿಯಾಗಿ ಬಸ್ಸು ಬೆಂಗಳೂರು ಮುಟ್ಟಿತು. ಇನ್ನೂ ಬೆಂಗಳೂರಿಗೆ ಪೂರ್ತಿ ಎಚ್ಚರಾಗಿರಲಿಲ್ಲ. ಪೇಪರ್ ಹುಡುಗರು ಫುಟ್‍ಪಾತ್ ಮೇಲೆ ಕುಕ್ಕರಗಾಲಲ್ಲಿ ಕುಳಿತು ಪೇಪರ್ ಬಂಡಲುಗಳನ್ನು ಒಡೆದು ಗರಿಗರಿ ಮೇನ್ ಪೇಪರಿನ ಒಡಲಿಗೆ ಸಪ್ಲಿಮೆಂಟನ್ನು ಸೇರಿಸುತ್ತಾ ಕೌಂಟ್ ಮಾಡುವುದರಲ್ಲಿ ಮಗ್ನರಾಗಿದ್ದರು. ಅವರನ್ನೆಲ್ಲಾ ಹಾದು ನಾನು ಮನೆ ಮುಟ್ಟಿದೆ. ಓನರ್ ಮನೆ ಬಾಗಿಲು ಮುಚ್ಚಿತ್ತು. ಈಗ ಬೆಲ್ ಮಾಡಿ ಅವರನ್ನು ಎಬ್ಬಿಸುವುದು ನನಗೆ ಒಳಿತಾಗಿ ಕಾಣಲಿಲ್ಲ. ಬಾಗಿಲು ತೆರೆಯುವವರೆಗೆ ಕಾಯೋಣ ಅಂತ ತೀರ್ಮಾನಿಸಿದೆ. ನನ್ನ ಬ್ಯಾಗನ್ನು ನನ್ನ ರೂಮಿನ ಬಾಗಿಲಲ್ಲೇ ಇಟ್ಟು, ಅದಾಗಲೇ ತೆರೆದಿದ್ದ ಮೂಲೆ ಅಂಗಡಿಗೆ ಹೋಗಿ ಎರಡು ರೂಪಾಯಿಯ 'ಬೆಡ್-ಕಾಫಿ' ಕುಡಿದೆ. ಪೇಪರ್ ಎಣಿಸುತ್ತಿದ್ದ ಹುಡುಗರ ಬಳಿ ಹೋಗಿ ಯಾವುದೋ ಒಂದು ಪೇಪರ್ ಕೊಂಡು ಅವರ ಜೊತೆಯಲ್ಲೇ ಅಂಗಡಿಕಟ್ಟೆಯ ಮೇಲೆ ಕುಳಿತು ಪೇಪರ್ ಓದತೊಡಗಿದೆ. ಎಲ್ಲೆಲ್ಲೋ ಏನೇನೋ ಆಗಿದೆ ಎನ್ನುತ್ತಿತ್ತು ಪೇಪರು. 'ಎಲ್ಲಿ ಏನಾಗಿದ್ದರೆ ನಿನಗೇನು? ಕೀ ಸಿಗುವವರೆಗೆ ಕಾಯುವ ನಿನ್ನ ಕಷ್ಟ ನಿನಗೆ. ನಿನ್ನ ಜೇಬಲ್ಲಿ ಎರಡು ರೂಪಾಯಿ ಕಾಸಿದೆಯಾ? ಇದ್ದರೆ ಕೊಟ್ಟು ಇನ್ನೊಂದು ಕಾಫಿ ಕುಡಿ' ಅನ್ನುತ್ತಿತ್ತು ಮುಂಜಾನೆ.

ಏಳೂಕಾಲು ಗಂಟೆಗೆ ಓನರ್ ಮನೆಯ ಕದ ತೆರೆದುಕೊಂಡಿತು. ನಾನು ತಕ್ಷಣವೇ ಒಳನುಗ್ಗಿ ನನ್ನ ಸಂಕಷ್ಟವನ್ನು ತೋಡಿಕೊಂಡೆ. ಪ್ರಾಬ್ಲೆಮ್ ಏನಾಗಿತ್ತಪ್ಪಾಂದ್ರೆ, ನಮ್ಮ ಓನರ್ರು ಇದೇ ಏರಿಯಾದಲ್ಲೇ ಸುಮಾರು ಎಂಟ್‍ಹತ್ತು ಮನೆಗಳನ್ನು ಹೊಂದಿದ್ದಾನೆ. ಒಟ್ಟು ನೂರಾರು ಕೀಗಳು. ಅದರಲ್ಲಿ ನನ್ನ ರೂಮಿನ ಕೀ ಹುಡುಕಿ ತೆಗೆಯುವುದು ಅಷ್ಟು ಸುಲಭವಿರಲಿಲ್ಲ. 'ಕೀ ನಂಬರ್ ಗೊತ್ತಾ?' ಕೇಳಿದರು ಓನರ್ರು. ಕೀ ನಂಬರೆಲ್ಲಾ ಯಾರು ನೆನಪಿಟ್ಟುಕೊಳ್ಳುತ್ತಾರ್ರೀ ಈಗಿನ ಕಾಲದಲ್ಲಿ? ಈ ಮೊಬೈಲು ಬಂದಮೇಲೆ ಫೋನ್ ನಂಬರುಗಳನ್ನೇ ನೆನಪಿಟ್ಟುಕೊಳ್ಳುವುದನ್ನು ಬಿಟ್ಟಾಗಿದೆ. ನಾನು 'ಗೊತ್ತಿಲ್ಲ' ಅಂದೆ. ಮನೆಗೆ ಫೋನ್ ಮಾಡಿ ನಾನು ಮಾಡಿಕೊಂಡಿರುವ ಅಚಾತುರ್ಯವನ್ನು ಅಮ್ಮ-ಅಪ್ಪರಿಗೆ ಅರುಹಿ ಬೆಳಗಾ ಮುಂಚೆ ಅವರನ್ನೂ ಟೆನ್ಷನ್ನಿಗೆ ನೂಕಿದೆ. ಕೀ ಹುಡುಕಿ ನಂಬರ್ ಹೇಳುವಂತೆ ತಿಳಿಸಿದೆ. ಐದು ನಿಮಿಷ ಬಿಟ್ಟು ಅವರು ಫೋನ್ ಮಾಡಿ ಕೀ ಮಂಚದ ಕಾಲಬುಡದಲ್ಲೇ ಇತ್ತೆಂದು ತಿಳಿಸಿದರು. ಅರ್ಧಕ್ಕರ್ಧ ಅಳಿಸಿಹೋಗಿದ್ದ ನಂಬರನ್ನು ಕಷ್ಟಪಟ್ಟು ಓದಿ ಹೇಳಿದರು: 'ಟೂ ಫೈವ್ ಟೂ ಏಟ್ ಇರಬೇಕು, ಅಥವಾ ಟೂ ಫೈವ್ ಟೂ ಥ್ರೀ'. ಎರಡೂ ನಂಬರುಗಳನ್ನೂ ನಾನೂ ಓನರ್ರೂ ಸೇರಿ ಜಾಲಾಡಿದೆವು. ಬೆಳಬೆಳಗಾಮುಂಚೆ ಈ ಪರಿ ಕಾಟ ಕೊಡುತ್ತಿರುವುದಕ್ಕೆ ನಮ್ಮ ಓನರ್ ಮನಸ್ಸಿನಲ್ಲಿ ಹಾಕುತ್ತಿರಬಹುದಾದ ಶಾಪಗಳಿಂದ ನನಗೆ ನರಕದಲ್ಲಿ ಸೀಟೊಂದು ರಿಸರ್ವ್ ಆಗಿರೊತ್ತೆ ಅಂದುಕೊಂಡೆ.

ಬಹಳ ಹೊತ್ತು ಹುಡುಕಿದರೂ ಕೀ ಸಿಗಲಿಲ್ಲ. ಕೊನೆಗೆ ಬಾಗಿಲು ಒಡೆದು ತೆಗೆಯುವುದೊಂದೇ ಮಾರ್ಗ ಉಳಿಯಿತು. 'ಒಂಬತ್ತು ಗಂಟೆಗೆ ಪಕ್ಕದ ಮನೆ ಕೆಲಸಕ್ಕೆ ಕಾರ್ಪೆಂಟರ್ ಬರುತ್ತಾನೆ, ಅವನ ಬಳಿ ಹೇಳಿದರಾಯಿತು' ಎಂದು ತೀರ್ಮಾನಿಸಿದೆವು. ನಾನು ಒಂಭತ್ತು ಗಂಟೆಗೆ ಆಫೀಸಿನಲ್ಲಿರಬೇಕಾಗಿತ್ತು. ಆ ಯೋಜನೆಗೆ ಕಲ್ಲು ಬಿತ್ತು. ಒಂಭತ್ತಕ್ಕೆ ಬರಬೇಕಿದ್ದ ಕಾರ್ಪೆಂಟರ್ ಹತ್ತು ಗಂಟೆಗೆ ಬಂದ. ಇತ್ತೀಚೆಗೆ ನಾನು ಒಂದೆರಡು ತಾಸೆಲ್ಲ ತಡವಾದರೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದೇನೆ. ಅರ್ಥಾತ್, ಭಾರತೀಯನಾಗುತ್ತಿದ್ದೇನೆ. ಕಾರ್ಪೆಂಟರ್ ಬಾಗಿಲು ಒಡೆಯದೇ ಕೀ ತೆಗೆಯಲು ಬಹಳ ಕಸರತ್ತು ಮಾಡಿದ. ಈ ಇನ್‍ಸೈಡ್ ಡೋರ್‌ಲಾಕ್‍ಗಳದು ಇದೊಂದು ರಗಳೆ ನೋಡಿ. ಇಲ್ಲಿ ಕೀ ಕಳೆದುಹೋಯಿತೆಂದರೆ ಬೀಗ ಒಡೆಯಲು ಸಾಧ್ಯವೇ ಇಲ್ಲ; ಬಾಗಿಲನ್ನೇ ಒಡೆಯಬೇಕು! ಕಾರ್ಪೆಂಟರು ಉಳಿ, ಚಾಣ, ಸುತ್ತಿಗೆ, ಬೈರಿಗೆ ಇತ್ಯಾದಿ ಏನೇನೋ ಉಪಕರಣಗಳನ್ನು ನನ್ನ ರೂಮಿನ ಬಾಗಿಲ ಮೇಲೆ ಬಳಸಿದ. ಯಾವುದಕ್ಕೂ ಜಗ್ಗಲಿಲ್ಲ ಬಾಗಿಲು. ನನಗೆ ತಲೆಬಿಸಿಯಲ್ಲೂ ಹೆಮ್ಮೆಯೆನಿಸುತ್ತಿತ್ತು: ಇಷ್ಟೊಂದು ಗಟ್ಟಿ-ಸುರಕ್ಷಿತ ಬಾಗಿಲಿನ ಹಿಂದೆ ನಾನು ಇಷ್ಟು ದಿನ ಜೀವಿಸುತ್ತಿದ್ದೆನಲ್ಲ ಎಂದು! ಸುಮಾರು ಅರ್ಧ ಗಂಟೆ ಗುದ್ದಾಡಿ ಬಾಗಿಲು ಒಡೆದದ್ದಾಯಿತು.

ಒಡೆದ ಬಾಗಿಲ ರೂಮಿನೊಳಹೊಕ್ಕೆ. ಖುರ್ಚಿಯ ಮೇಲೆ ಕುಳಿತರೆ ಯಾವುದೋ ಪಾಳುಮನೆಯಲ್ಲಿ ಕುಳಿತಂಥ ಅನುಭವ... ಬಾಗಿಲು ರಿಪೇರಿ ಮಾಡಿ, ಹೊಸ ಬೀಗ ಹಾಕುವವರೆಗೆ ನಾನು ನಾನಾಗಿಯೇ ಇರಲಿಲ್ಲ. ನನ್ನ ರೂಮಿನ ಬಗ್ಗೆ ಏನೋ ಅಭದ್ರತೆ ಕಾಡುತ್ತಿತ್ತು. ತಿಂಗಳ ಕೊನೆಯಲ್ಲಿ ರೆಂಟಿನ ಜೊತೆ ಬಾಗಿಲು ಒಡೆದ ಕಾರ್ಪೆಂಟರ್ ಕೂಲಿ, ಹೊಸ ಬೀಗ ಹಾಕಿಸಿದ ಚಾರ್ಜು ಎಲ್ಲವನ್ನೂ ಕೊಡಬೇಕಾಗಿ ಓನರ್ ಹೇಳಿದ. ನಿರುಪಾಯನಾಗಿ ಒಪ್ಪಿಕೊಂಡೆ. ರಾತ್ರಿ ಮನೆಗೆ ಫೋನ್ ಮಾಡಿದಾಗ 'ಸುಮ್ನೆ ಅನವಶ್ಯಕ ಎಷ್ಟು ಟೆನ್ಷನ್ ತಗೊಂಡೆ.. ದುಡ್ಡು ಬೇರೆ ಖರ್ಚು.. ಪ್ಚ್!' ಎಂದ ಅಮ್ಮನಿಗೆ ಅಂದೆ: 'ಇಂಥಾ ಅನುಭವ ಒಂದು ಸಲ ಆಗ್ಬೇಕು ಬಿಡಮ್ಮ. ಇನ್ನೇನು ಜೀವಮಾನದಲ್ಲಿ ಕೀ ಬಿಟ್ಟು ಹೋಗಲ್ಲ...'

19 comments:

ಗುಹೆ said...

ಚೆನ್ನಾಗಿದೆ..
ಅನುಭವಿಸುವಾಗ ನರಕಯಾತನೆ. ನಂತರ ನೆನೆಸಿಕೊಂಡರೆ ನಗು ಬರುತ್ತೆ ಅಲ್ವಾ?

Anonymous said...

ಸುಶ್ರುತ ಏನೋ ನಿನ್ನ ಕಥೆ. ಚನ್ನಾಗಿ ಇದ್ದು ಕಣೋ. ನೀನು ಏನೇನು ಪಾಡು ಪಟ್ಟಿಕ್ಕು ಅಂತಾ ನೆನಸ್ಕೆಂಡು ನೆನಸ್ಕೆಂಡು ನಗು ಬಂತು. ಚನ್ನಾಗಿ ಇದ್ದು.

Sushrutha Dodderi said...

@ ಗುಹೆ

ಹೂಂ.. ಕಳೆದ ಯಾವುದೋ ದುಃಖದ / ಕಷ್ಟದ ಘಟನೆಯನ್ನು ಈಗ ನೆನಪಿಸಿಕೊಂಡಾಗ ನಗು ಬರುತ್ತೆ, ಸಿಲ್ಲಿ ಅನ್ಸುತ್ತೆ. ಅದೇ ಯಾವುದೋ ಸಂತಸದ ಘಟನೆಯನ್ನ ನೆನಪು ಮಾಡಿಕೊಂಡ್ರೆ ಕಣ್ಣಲ್ಲಿ ನೀರು ಬರುತ್ತೆ: ಬಹುಶಃ ಆ ಸಂತೋಷ ಈಗ ಇಲ್ವಲ್ಲಾ ಅನ್ನೋ ಭಾವನೆಯಿಂದ ಇರ್ಬಹುದು...

ಥ್ಯಾಂಕ್ಸ್ ಫಾರ್ ದಿ ಕಮೆಂಟ್.

Sushrutha Dodderi said...

@ ranju

ಹೂನಪ್ಪಾ.. ನಗು ಬರ್ತು... ನನ್ ಕಷ್ಟ ನಂಗೆ.. ನೀ ನೋಡಿದ್ರೆ ನಿಗ್ಯಾಡ್ತೆ..

ಏನ್ ಮಾಡದು... :(

Anonymous said...

ಚೆನ್ನಾಗಿದೆ. ಈ ಕಾಮೆಂಟುಗಳನ್ನು ಓದುವಾಗ ಎಸ್ಸೆಮ್ಮೆಸ್ಸಿನಲ್ಲಿ ಬಂದ ಒಂದು ಮುಂದುವರಿಕೆಯು ನೆನಪಾಗುತ್ತಿದೆ - "ಚಿಕ್ಕಂದಿನಲ್ಲಿ ಯಾವಯಾವುದೋ ಕಾರಣಗಳಿಗೆ ಅತ್ತದ್ದನ್ನು ಈಗ ನೆನಪಿಸಿಕೊಂಡಾಗ ನಗುಬರುತ್ತದೆ; ಆದರೆ ಅದೇ ಬಾಲ್ಯದಲ್ಲಿ ಎಲ್ಲರೂ ಸೇರಿ ನಕ್ಕಿದ್ದನ್ನು ನೆನಪಿಸಿಕೊಂಡರೆ ಅಳು ಬರುತ್ತದೆಯೆಂದು ತಿಳಿದೇ ಇರಲಿಲ್ಲ" ಎಂಬುದು.

ಇನ್ನಾದರೂ ಜೋ‘ಕೀ’.

Sushrutha Dodderi said...

@ ಯಾತ್ರಿಕ

ಆ ಎಸ್ಸೆಮ್ಮೆಸ್ಸು ತುಂಬಾ ಚೆನ್ನಾಗಿದೆ. ಥ್ಯಾಂಕ್ಸ್.

ಇನ್ಮೇಲಿಂದ ಜೋ'ಕೀ'..? ಹೂಂ!

ಯಜ್ಞೇಶ್ (yajnesh) said...

ಸುಶ್ರುತ,

ಇಷ್ಟೆಲ್ಲಾ ಕಷ್ಟ ಪಡೋದಕ್ಕಿಂತ, ಒಂದು ದಿನ ಫ್ರೆಂಡ್ಸ್ ಅಥವಾ ನೆಂಟರ ಮನೇಲಿ ಉಳಿದು, ಮನೆಯಿಂದ ಕೀ ನ ಬಸ್ಸಿಗೆ ಕಳಿಸ್ಲಿಕ್ಕೆ ಹೇಳಿದ್ರೆ ಆಗ್ತಿತ್ತಲ್ವಾ??? ಟೆನ್ಷನ್ ಸಹ ಇರ್ತಿರಲಿಲ್ಲ + ದುಡ್ಡು ಉಳಿತಾಯಿತ್ತು.

ಈಗ ಇನ್ನೊಂದು ಡೂಪ್ಲಿಕೇಟ್ ಕೀ ಮಾಡ್ಸಿ ನಿನಗೆ ತುಂಬಾ ಕ್ಲೋಸ್ ಅಥವಾ ನೆಂಟರ ಮನೇಲಿ ಇಡು.ಮುಂದೆ ಹೇಲ್ಪ್ ಆಗಬಹುದು!!!

Sushrutha Dodderi said...

@ ಹುಡುಕಾಟ

ಅದ್ನೂ ಯೋಚ್ನೆ ಮಾಡಿದ್ನಾ.. ಆದ್ರೆ ಅಪ್ಪ ಪ್ಯಾಟಿಗೆ ಬಂದು, ಬಸ್ ಹಿಡ್ದು, ಡ್ರೈವರ್ರಿಗೆ ಮಸ್ಕಾ ಹೋಡ್ದು, ಕೊಡಕ್ ಹೇಳಿ, ಕೊನಿಗೆ ನಾನು ಮರುದಿನ ಬೆಳಗಾಮುಂಚೆ ಬಸ್ ಹಿಡಿಯಕ್ಕೆ ಹೋಗಿ, ಇಸ್ಕಂಡ್ ಬಂದು, ಅಲ್ಲೀವರಿಗೆ ಯಾರ್ದೋ ಮನೇಲಿ ನನ್ನ ಕಷ್ಟ ಎಲ್ಲ ಹೇಳ್ಕ್ಯಂಡು ಇದ್ದು......... ಅಷ್ಟೆಲ್ಲಾ ಮಾಡಕ್ಕಿಂತ ಬೀಗ ಒಡ್ಸದೇ ಒಳ್ಳೇದು ಕಾಣ್ಚು; ಅದ್ಕೇ ಜೈ ಅಂದ್ಬುಟಿ. ಆದ್ರೆ ಒಡಿಯಕ್ಕೆ ಇಷ್ಟೆಲ್ಲಾ ಕಷ್ಟಾಗ್ತು ಅಂತ ಮುಂಚೇನೇ ಗೊತ್ತಿದಿದ್ರೆ ಖಂಡಿತಾ ನೀ ಹೇಳ್ದಂಗೇ ಮಾಡ್ತಿದ್ದಿ... :(

ಹಾಂ, ಈಗ ಒಟ್ಟು ಮೂರು ಡುಪ್ಲಿಕೇಟ್ ಕೀಸ್ ಮಾಡ್ಸಿದ್ದಿ! ಒಂದು ನನ್ ಹತ್ರ, ಇನ್ನೊಂದು ಓನರ್ ಹತ್ರ, ಮತ್ತೊಂದು ಫ್ರೆಂಡ್ ಮನೇಲಿ! ಅದೆಂತೋ ಕೆಟ್ ಮೇಲೆ ಬುದ್ದಿ ಬಂತು ಹೇಳ್ತ್ವಲ, ಹಂಗಾತು ನನ್ ಕತೆ!

ಯಜ್ಞೇಶ್ (yajnesh) said...

ಅದು ಹೌದು.

ನೀನು ಕಿಡ್ನಿ ಉಪಯೋಗಿಸಿದ್ರೆ ಇನ್ನೊಂದು ಕೆಲ್ಸ ಮಾಡ್ಲಾಗಿತ್ತು.ಡೂಪ್ಲಿಕೇಟ್ ಕೀ ಮಾಡೋರನ್ನ ಕರ್ಕಂಡು ಬಂದು, ಕೀ ನ ಡೂಪ್ಲಿಕೇಟ್ ಮಾಡ್ಸಿ, ಅವ್ನು ಹೋದ್ಮೇಲೆ ಇನ್ನೊಂದು ಬೀಗ ತಂದಿದ್ರೆ ನಿಂಗೆ ಸ್ವಲ್ಪ ದುಡ್ದು ಉಳಿತಿತ್ತು. ನೀನು ಹೊಸ ಬೀಗ ತರ್ದೇ ಇದ್ರೇ...ಅಷ್ಟೇ... ನಾಳೆ ಡೂಪ್ಲಿಕೇಟ್ ಮಾಡಿದವನೇ ಬಂದು ಕನ್ನ ಹಾಕ್ತಾಯಿದ್ದಿದ್ದ.. ಹಹಹ..

ಇರ್ಲಿ ಬಿಡು, ಹೊಸ ಪಾಠ ಕಲ್ತಾಂಗಾತು. ಮುಂದಿನ ತಿಂಗ್ಳು ವಾನರ...ಸಾರಿ, ಒನರ್ ನಿನ್ನ ದುಡ್ದಲ್ಲೇ ಓಂದು ತಿಂಗ್ಳು ಸಂಸಾರ ಮಾಡ್ತ ಬಿಡು.

ಅದು, ಇದು ಹೇಳಿ ಸಮ ಚೌರ ಮಾಡ್ತ. ಸ್ವಲ್ಪ ಹುಷಾರಾಗಿರು.

Sushrutha Dodderi said...

@ ಹುಡುಕಾಟ

ಹೂಂ ಮರಾಯ, ಅದೂ, ಇಂಥಾ ಟೈಮಲ್ಲೇ ಸರಿಯಾಗಿ ಕಿಡ್ನಿ ಕೈ ಕೊಡ್ತು (ಫೇಲ್ಯೂರ್!) ಆಗ್ತು.. ತಲೆಯೇ ಓಡ್ತಲ್ಲೆ.. ಹಿಂಗಾಗಿ... ಹಿಹ್ಹಿ.. ಇರ್ಲಿ ಬಿಡು..

ಏ ಈಗ ಭಾಳಾ ಹುಷಾರಾಯ್ದಿ ಬಿಡು... :)

ಶ್ಯಾಮಾ said...

ಕಥೆ ಅಲ್ಲದ್ದು ನಿಜವಾಗ್ಲೂ ಆಗಿದ್ದು ಇದನ್ನ ಓದುವಾಗ ನಾನೊಮ್ಮೆ hostel ರೂಮಿಯನಲ್ಲಿ cupboard ಕೀ ಕಳೆದುಕೊಂಡು ಬೀಗ ಒಡೆಯಲು ಒದ್ದಾದಿದ್ದು ನೆನಪಾಯ್ತು..... ಈ ಕಾಮೆಂಟುಗಳನ್ನು ಓದುವಾಗ "ಸಿಹಿ ನೆನಪುಗಳಿನ್ನೇನು ಬರೀ ನೆನಪುಗಳು ನೀವು.. ಮತ್ತೆ ಸಿಗದ ಆ ಕ್ಷಣಗಳಿಗಾಗಿ ಪರಿತಪಿಸಬೇಕು ನಾನು" ಎಂಬ ನಾನು ಯಾವಾಗಲೋ ಬರೆದ ಕವನದ ಸಾಲುಗಳು ನೆನಪಾದವು..

Sushrutha Dodderi said...

@ ಶ್ಯಾಮಾ

ಧನ್ಯವಾದಗಳು. "ಸಿಹಿ ನೆನಪುಗಳಿನ್ನೇನು ಬರೀ ನೆನಪುಗಳು ನೀವು.. ಮತ್ತೆ ಸಿಗದ ಆ ಕ್ಷಣಗಳಿಗಾಗಿ ಪರಿತಪಿಸಬೇಕು ನಾನು" ಕವಿತೆಗಾಗಿ ನಿಮ್ಮ ಬ್ಲಾಗಿನಲ್ಲಿ ಕಾಯುತ್ತೇನೆ.

ಸಿಂಧು sindhu said...

ಸು,

ನಿನ್ನ ಕೀ ಕತೆ ಮಜವಾಗಿದೆ. ಪರದಾಟದ ಕಾಗುಣಿತ ಖುಷಿ ಕೊಟ್ಟರೂ, ಒಮ್ಮೆ ಅಯ್ಯೊ ಕತೆಯೇ ಅನ್ಸಿದ್ದು ಸುಳ್ಳಲ್ಲ. ನಿನ್ನೆನೇ ಪ್ರತಿಕ್ರಿಯಿಸಬೇಕೆಂದಿದ್ದೆ. ನಾವೂ ಕೀ ಕಳೆದುಕೊಂಡ ಮೂಡಲ್ಲಿ ಇದ್ದಿದ್ರಿಂದ ಸುಮ್ನಾಗಿಬಿಟ್ಟೆ. ನಿನ್ನೆಯ ಕಸಿವಿಸಿ ಇವತ್ತು ತಮಾಷೆಯ ನೆನಪಾಗಿರುವುದರಿಂದ ಬರೆಯಲು ಸಾಧ್ಯವಾಗಿದೆ.

ನಿನ್ನೆ ನಮ್ಮನೆಯಲ್ಲೂ ಕೀ ಕಳೆದುಕೊಂಡು ಪರದಾಡಿಬಿಟ್ಟಿದ್ದೆವು. ನನ್ನ ಮಾವನವರು ಸಾಕಷ್ಟು ಹೊತ್ತು ಕಷ್ಟ ಪಟ್ಟು ಬಿಸಿಲಲ್ಲಿ ನಿಂತು, ಓಡಾಟ ನಡೆಸಿ ಹುಡುಕಿ ತಂದಿದ್ದರಿಂದ ನಮ್ಮ ಪರದಾಟ ನೀಗಿತು. ಬಾಗಿಲು ಒಡೆದು ಓನರ್ ಅಕೌಂಟ್ ಸಮೃದ್ಧಗೊಳಿಸುವ ಸ್ಥಿತಿ ಬರಲಿಲ್ಲ. :)

ಒಂದು ತಮಾಷೆ/ಫಜೀತಿಯ ನೆನವರಿಕೆ - ಎಷ್ಟೊಳ್ಳೆಯ ಭಾವುಕ ನೆನಪುಗಳಿಗೆ ಲಗ್ಗೆಯಿಟ್ಟಿತಲ್ಲಾ ಎಂದು ಸೋಜಿಗ.. ಯಾತ್ರಿಕ,ಶ್ಯಾಮಾ ಮತ್ತು ನಿನ್ನ ಮರುಪ್ರತಿಕ್ರಿಯೆ ಓದಿದಾಗ ಅನ್ನಿಸಿತು.

Sushrutha Dodderi said...

@ ಸಿಂಧು

ಒಂದು ತಮಾಷೆ/ಫಜೀತಿಯ ನೆನವರಿಕೆ - ಎಷ್ಟೊಳ್ಳೆಯ ಭಾವುಕ ನೆನಪುಗಳಿಗೆ ಲಗ್ಗೆಯಿಟ್ಟಿತಲ್ಲಾ ಎಂದು ಸೋಜಿಗ.. ಯಾ, ನಂಗೂ ಅದೇ ಆಶ್ಚರ್ಯ. ನಿಜ ಹೇಳ್ಬೇಕು ಅಂದ್ರೆ, ಮೊನ್ನೆ ಆಫೀಸಲ್ಲಿ ಏನೂ ಕೆಲ್ಸ ಇರ್ಲಿಲ್ಲ.. ಹಾಗಾಗಿ, ಸುಮ್ನೆ ಟೈಮ್‍ಪಾಸಿಗೆ ಅಂತ ಬರೆದಿದ್ದು ನಾನು...

ನಾನು ಅನುಭವಿಸಿದ ಫಜೀತಿಯನ್ನ ನೀವೂ ಅನುಭವಿಸಿದ್ರಿಂದ ಈ ಬರಹ ನಿಂಗೆ ಮಜಾ ಅನ್ನಿಸ್ತಾ ಅಂತ...?

Supreeth.K.S said...

ಅನುಭವಗಳ ವಿಶೇಷವೇ ಅಂಥದ್ದು. ಆ ಘಟನೆಗಳೌ ನಡೆಯುವಾಗ ಮನಸ್ಸಲ್ಲಿ ಉಂಟಾಗುವ ತಳಮಳ, ತಾಕಲಾಟ, ಪೇಚಾಟ ಆ ಘಟನೆ ನಡೆದು ಅದು ಅನುಭವದ, ನೆನಪುಗಳ ಗೂಡು ಸೇರಿದಾಕ್ಷಣ ಬೆಚ್ಚನೆಯ ಕಾಫಿಯಂತೆ ಹಿತವಾಗಿಬಿಡುತ್ತದೆ. ಲೇಖನ ಮಜವಾಗಿದೆ.

ಪ್ರಶಂಕು said...

very nicely written!

Sushrutha Dodderi said...

@ ಸುಪ್ರೀತ್ ಕೆ.ಎಸ್.

ಒಳ್ಳೆಯದೊಂದು ಕಾಮೆಂಟ್ ಬರೆದು ಬೆಚ್ಚನೆಯ ಕಾಫಿ ನೆನಪಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್. ಬರ್ತಾ ಇರಿ.

@ nanobot

Thanx a lot :)

Lanabhat said...

ಬ್ಲಾಗ್ ಚೆನ್ನಾಗಿದೆ ಕಮೆಂಟ್ ಗಳನ್ನೂ ಓದಿಕೊಂಡು ಕೂತರೆ ಹೊತ್ತು ಹೋಗೋದೇ ಗೊತ್ತಾಗೊದಿಲ್ಲ...

Sushrutha Dodderi said...

l@n@

ಲಕ್ಷ್ಮೀನಾರಾಯಣ ಭಟ್ರಿಗೆ ಸುಸ್ವಾಗತ. ಪ್ರತಿಕ್ರಿಯೆಗೆ, ಮೆಚ್ಚುಗೆಗೆ ಧನ್ಯವಾದಗಳು.