Saturday, April 14, 2007

ಕನಸು ಕಟ್ಟಲು ಮೀಸಲು ಈ ಸಲದ ಬೇಸಿಗೆ ರಜೆ...

ಹೇ ಕಳ್ಳಾ...!

ಕಳ್ಳ ಅನ್ನದೇ ಮತ್ತೇನೋ ಅನ್ಲಿ? ಹೇಳ್ದೇ ಕೇಳ್ದೆ ಮೊದಲ ನೋಟದಲ್ಲೇ ನನ್ನ ಹೃದಯಕ್ಕೆ ಲಗ್ಗೆಯಿಟ್ಟೆ. ಗೊತ್ತೇ ಇಲ್ಲದಿದ್ದ ಹೊಸ ಹೊಸ ಭಾವಗಳ ಅಲೆ ಎಬ್ಬಿಸಿದೆ. ಆಸೆಗಳ ಕೆರಳಿಸಿದೆ. ನನ್ನ ಹೃದಯವನ್ನೇ ಕದ್ದೆ. ಈಗ ನೋಡು, ನೂರಾರು ಮೈಲಿ ದೂರದಲ್ಲಿದ್ದರೂ ನನ್ನ ಮನಸಿನ ಮೂಲೆಯಲ್ಲೆಲ್ಲೋ ಅವಿತು ಕುಳಿತೇ ಇದ್ದೀಯ. ನಿನ್ನನ್ನ ಸುಮ್ನೆ ಬಿಡಲ್ಲ ಕಣೋ, ಮದ್ವೆ ಮದುವೆ ಆಗ್ಬಿಡ್ತೀನಿ!

ಮೊನ್ನೆ ಬಸವನಗುಡಿಯಲ್ಲಿ ಒಂದು ಪ್ರೋಗ್ರಾಂ ಇತ್ತು. ನನ್ನಿಷ್ಟದ ಪ್ರೇಮಕವಿ ಕೆ.ಎಸ್.ನ.ಗೆ ಕವನ ನಮನ ಕಾರ್ಯಕ್ರಮ. ಜೊತೆಗೆ ಡಾ| ರಾಜ್‍ಕುಮಾರ್ ನೆನಪು. ನಾನು ಹೋಗೋಷ್ಟರಲ್ಲಿ ಅಪರ್ಣಾ ಮೈಕ್ ಹಿಡಿದು ನಿರೂಪಣೆ ಶುರು ಮಾಡಿಬಿಟ್ಟಿದ್ಲು. ರಾಜ್‍ರ ಫೋಟೋಗೆ ಹೂವು ಹಾಕೋದರ ಮೂಲಕ ಕಾರ್ಯಕ್ರಮವನ್ನ ಮೂಡಲಮನೆ ಕೆ.ಎಸ್.ಎಲ್. ಸ್ವಾಮಿ ಉದ್ಘಾಟನೆ ಮಾಡಿದ್ರು. ರಾಷ್ಟ್ರಕವಿ ಜಿ.ಎಸ್.ಎಸ್. ಮೆಲುದನಿಯಲ್ಲಿ ಪ್ರೇಮಕವಿಯ ಕವನವೊಂದನ್ನು ಓದಿದರು. ಆಮೇಲೆ ಒಬ್ಬೊಬ್ರಾಗಿ ಕವನ ಓದಿದ್ದು. ಮುಖ್ಯಮಂತ್ರಿ ಚಂದ್ರು, ಬಿ‍ಆರೆಲ್, ಮಾಸ್ಟರ್ ಕಿಶನ್ (ನೀನು ಚಿಕ್ಕವ್ನಿದ್ದಾಗ ಅವ್ನಂಗೆ ಇದ್ದೆ ಕಣೋ, ಈಗ ನೆನಪಾಗ್ತಿದೆ), ನಾಗಾಭರಣ, ಡಾ. ಪೂರ್ಣಿಮಾ.... ಇನ್ನೂ ಯಾರ್‍ಯಾರೋ.. ರವಿ ಬೆಳಗೆರೆ ಒಂದಷ್ಟು ಡೈಲಾಗ್ ಹೊಡ್ದು ಚಪ್ಪಾಳೆ ಗಿಟ್ಟಿಸಿದ.. ಮತ್ತೇನು ಗೊತ್ತಾ? ಕೆ.ಎಸ್.ನ. ಅಜ್ಜನ ಹೆಂಡತಿ ವೆಂಕಮ್ಮ ಅವ್ರೂ ಬಂದಿದ್ರು ಪ್ರೋಗ್ರಾಮಿಗೆ. ನಂಗೆ ಅವ್ರುನ್ನ ನೋಡಿದಾಗಲೆಲ್ಲ ಕಲ್ಪನಾಲೋಕದಲ್ಲಿ ವಯಸ್ಸಾದ ನನ್ನ ಚಿತ್ರ, ಪಕ್ಕದಲ್ಲಿ ಹಣ್‍ಹಣ್ಣು ಮುದುಕ ನಿನ್ನ ಚಿತ್ರ ತೇಲಿಬರುತ್ತೆ.. ಆಮೇಲೆ ಸಿ. ಅಶ್ವತ್ಥ್, ರತ್ನಮಾಲಾ ಪ್ರಕಾಶ್, ಶಂಕರ್ ಶಾನ್‍ಭಾಗ್, ಅಜಯ್ ವಾರಿಯಾರ್ ಎಲ್ರಿಂದ ಹಾಡೂ ಹಾಡು! ಪ್ರೇಮಗೀತೆಯ ಗುಂಗಿನಲ್ಲಿ ನಾನು ಮುಳುಗಿ ಹೋಗಿದ್ದೆ... ಕುಂತಲ್ಲೇ ಕನಸತೊಡಗಿದ್ದೆ. ಕನಸಿನೊಳಗೊಂದು ಕನಸು. ಆ ಒಂದಿರುಳ ಕನಸಿನಲಿ ನಾನೇ ನಿನ್ನನ್ನ ಕೇಳ್ತಾ ಇದ್ದೆ: ನಮ್ಮೂರು ಚಂದವೋ ನಿಮ್ಮೂರು ಚಂದವೋ ಹೇಳೋ ಹಳ್ಳಿಮುಕ್ಕಾ ಅಂತ.. ಉತ್ತರವನ್ನೇ ಕೊಡದೆ ನೀನು ಗೇರು ಮರ ಹತ್ತಿ ನನಗಾಗಿ ಹಣ್ಣುದುರಿಸುತ್ತಿದ್ದೆ..

ಹಾಗೇ ಕನಸು ಕಾಣುತ್ತಾ ಕಹಳೆ ಬಂಡೆಯ ಮೇಲೆ ಕುಳಿತಿದ್ದುಬಿಡುತ್ತಿದ್ದೆನೇನೋ? ನಿನ್ನ ನೆನಪಿನ ಮಳೆಯಲ್ಲಿ ತೋಯುತ್ತಾ? ಆದರೆ ಅಷ್ಟರಲ್ಲಿ ನಿಜವಾದ ಮಳೆ ಶುರುವಾಗಿಬಿಟ್ಟಿತು. ಮಳೆಯ ಮೇಲೆ ಮಳೆ. ಹಾಡುವವರೆಲ್ಲಾ ದಿಕ್ಕಾಪಾಲು. ಆಮೇಲೆಲ್ಲಾ ಮಳೆಯ ಹಾಡು. ಮಣ್ಣ ವಾಸನೆ. ನೆನೆಯುವ ನನ್ನ ಹುಚ್ಚು. ಆ ಕಹಳೆ ಬಂಡೆ ಪಾರ್ಕ್ ಇದೆಯಲ್ಲಾ? ಅಲ್ಲಿ ಸಂಜೆ ಹೊತ್ತಿಗೆ ನೀನೊಮ್ಮೆ ಹೋಗಿ ನೋಡ್ಬೇಕು: ಅದೆಷ್ಟು ಹಕ್ಕಿಗಳಿವೆ ಮಾರಾಯ ಅಲ್ಲಿ...! ನಾನು ಹೋದಾಗ ಅದಿನ್ಯಾವಥರ ಚಿಲಿಪಿಲಿಚಿಲಿಪಿಲಿ ಅಂತ ಕಲರವ ಮಾಡ್ತಿದ್ವು ಅಂತೀಯಾ? ಬೆಂಗಳೂರಿನಲ್ಲೂ ಇಂಥದ್ದೊಂದು ಜಾಗ ಇದೆಯಲ್ಲಪ್ಪಾ ಅಂತ ನಂಗೆ ಆಶ್ಚರ್ಯ.. ಆದ್ರೆ ವಾಪಸು ಹೋಗುವಾಗ ಸ್ವಲ್ಪಾನೂ ಶಬ್ದ ಕೇಳಿಸ್ತಿರಲಿಲ್ಲ.. ಆ ಪರಿಯ ಮಳೆ ಬಂದಿತ್ತಲ್ಲ? ಏನಾದ್ವೋ ಏನೋ ಅಂತ ನಂಗೆ ಕಳವಳ.. ಮಳೆಯಲ್ಲಿ ನೆಂದು ಮರಿಹಕ್ಕಿಗಳಿಗೆ ಜ್ವರ-ಗಿರ ಬಂತೋ ಏನೋ? ಮನೆ ಮುಟ್ಟುವವರೆಗೂ ಅದನ್ನೇ ಯೋಚಿಸುತ್ತಿದ್ದೆ..

ನನಗೆ ಹೀಗೆ ಪ್ರಕೃತಿಯ ಬಗ್ಗೆ, ಹಕ್ಕಿಗಳ ಬಗ್ಗೆ, ಹೂವುಗಳ ಬಗ್ಗೆ, ಹಣ್ಣುಗಳ ಬಗ್ಗೆ ಆಸಕ್ತಿ ಕೆರಳುವಂತೆ ಮಾಡಿದ್ದೇ ನೀನು. ಆಗಿನ್ನೂ ನಾನು ಊರಲ್ಲಿದ್ದೆ. ಒಂಭತ್ತನೇ ತರಗತಿಯ ಪರೀಕ್ಷೆಗಳು ಮುಗಿದು, ರಿಸಲ್ಟ್ ಬಂದು, ನಾನು ಪೂರ್ತಿ ನೈಂಟಿಸಿಕ್ಸ್ ಪರ್‍ಸೆಂಟ್ ತಗೊಂಡು ಪಾಸಾಗಿ, ಖುಷಿಗೆ ಅಮ್ಮ ಮಾಡಿದ್ದ ಕೊಬ್ರಿ ಮಿಠಾಯಿ ಪ್ಯಾಕ್ ಮಾಡ್ಕೊಂಡು ಸೀದಾ ಅಜ್ಜನ ಮನೆಗೆ ಬಂದಿದ್ದೆ. ಪ್ರತಿ ಬೇಸಿಗೆ ರಜೆಯನ್ನೂ ಹೆಚ್ಚುಪಾಲು ನಾನು ಕಳೆಯುತ್ತಿದ್ದುದು ಅಜ್ಜನ ಮನೆಯಲ್ಲೇ. ಯಾಕೇಂದ್ರೆ ಅಲ್ಲಿ ನನಗೆ ಆಡಲಿಕ್ಕೆ ಮಾವನ ಮಗಳು ಪಲ್ಲವಿ ಇದ್ಲು. ಅಲ್ದೇ ಮನೇಲಿದ್ರೆ ಅದೂ ಇದೂ ಅಮ್ಮಂಗೆ ಕೆಲ್ಸ ಮಾಡಿಕೊಡ್ತಾ, 'ಹೋಮ್‍ವರ್ಕ್ ಮಾಡ್ಕೊಳೇ' ಅನ್ನೋ ಬೆದರಿಕೆಯನ್ನ ದಿನಕ್ಕೆ ನಾಲ್ಕು ಸಲ ಕೇಳಿಸಿಕೊಳ್ತಾ ಇರಬೇಕು. ಅಜ್ಜನ ಮನೇಲಾದ್ರೆ ಹಾಗಲ್ಲ. ಒಂದು ಏರ್‌ಬ್ಯಾಗ್ ತುಂಬಾ ಬಟ್ಟೆ ತುಂಬ್ಕೊಂಡು ಬಂದುಬಿಟ್ರೆ ಮುಗೀತು. ನಾನೂ ಪಲ್ಲವಿ ಗಲಾಟೆಯ ಸಾಮ್ರಾಜ್ಯವನ್ನೇ ಸ್ಥಾಪಿಸಿಬಿಡುತ್ತಿದ್ದೆವು. ಆಟ ಆಟ ಆಟ! ಆಮೇಲೇ, ಅಜ್ಜನ ಮನೇಲಿ ಸಿಗೋಷ್ಟು ಹಣ್ಣುಗಳು, ತಿರುಗಾಡೋಕೆ ಗದ್ದೆ, ತೋಟ, ಗುಡ್ಡಗಳು ನಮ್ಮೂರಲ್ಲಿ ಇಲ್ವೇ ಇಲ್ಲ. ನಾವು ಬೇಸಿಗೆ ರಜೆಯ ಆ ಎರಡು ತಿಂಗಳು ಪೂರ್ತಿ ಕಾಡು ಸುತ್‍ತಾ ಇದ್ದುಬಿಡ್ತಿದ್ವಿ. ಕಚಗಟ್ಟೆ ಪೇರಲೇಕಾಯಿಯಲ್ಲೂ ಪರಮ ರುಚಿ!

ಆ ವರ್ಷದ ರಜೆಯಲ್ಲಿ ನೀನು ಸಿಕ್ಕಿದೆ. ಅಜ್ಜನ ಮನೆ ಪಕ್ಕದ ಮನೆ ಗಣಪತಣ್ಣನಿಗೆ ಮಗನೊಬ್ಬನಿದ್ದಾನೆ, ದಾವಣಗೆರೆಯಲ್ಲಿ ಓದ್ತಾ ಇದಾನೆ, ಇಷ್ಟೊಂದು ಸ್ಮಾರ್ಟು, ಇಷ್ಟೊಂದು ಕ್ಯೂಟು, ಇಷ್ಟೊಂದು ಹ್ಯಾಂಡ್‍ಸಮ್ಮು ಅಂತೆಲ್ಲ ನಂಗೆ ಗೊತ್ತೇ ಇರ್ಲಿಲ್ಲ. ಊಹುಂ, ಗೊತ್ತಿತ್ತು; ಆದ್ರೆ ಮರೆತುಹೋಗಿತ್ತು. ನೀನು ಚಿಕ್ಕವನಿದ್ದಾಗ ನಾನು ನೋಡಿದ್ದೆ ಅಷ್ಟೇ. ನಾವಿಬ್ರೂ ಆಟಾನೂ ಆಡಿದ್ವಿ. ಆದರೆ ಆಮೇಲೆ ನೀನು ನಿನ್ನ ಅಜ್ಜನ ಮನೇಲಿ ಓದ್ಲಿಕ್ಕೆ ಅಂತ ಹೋದೆ. ಅಲ್ಲಿಂದ ದಾವಣಗೆರೆಗೆ. ನನ್ನ ಸ್ಮೃತಿಪಟಲದಿಂದ ಹೆಚ್ಚೂಕಮ್ಮಿ ಅಳಿಸಿಯೇ ಹೋಗಿತ್ತು ನಿನ್ನ ಚಿತ್ರ. ಆದರೆ ಎಲ್ಲವನ್ನೂ ಮತ್ತೆ ಎದುರಿಗೇ ತಂದು ನಿಲ್ಲಿಸಿಬಿಟ್ಟೆಯಲ್ಲೋ ಮನ್ಮಥಾ... ಇಷ್ಟು ವರ್ಷ ರಜೆಯಲ್ಲೂ ಯಾಕೋ ಮನೆಗೆ ಬರಲಿಲ್ಲ? ಈಗ ಯಾಕೋ ಬಂದೆ? ಬಂದವನೇ ಏಕೆ ಹೀಗೆ ನನ್ನ ಭಾವನೆಗಳ ಮೇಲೆ ದಾಳಿ ಮಾಡಿದೆಯೋ? ಇಲ್ಲ, ಏನನ್ನೂ ಕೇಳಲಿಲ್ಲ ನಿನ್ನ ಬಳಿ. ನೀನು ಚಿಕ್ಕವನಿದ್ದಾಗ ಇದ್ದ ಗಣಪತಣ್ಣನ ಮಗ ಮಹೇಶನಾಗಿ ಉಳಿದಿರಲೇ ಇಲ್ಲ. ಈಗ ನಿನ್ನನ್ನು ನೋಡಿದಾಕ್ಷಣ ಎಲ್ಲಿಂದಲೋ ನನ್ನಲ್ಲಿ ಉದ್ಭವಿಸಿದ ನಾಚಿಕೆಗೆ ಮಾತೆಲ್ಲಾ ಇಂಗಿಹೋಗಿದ್ದವು.

ಆ ವರ್ಷದ ರಜೆಯಲ್ಲಿ ಕಾಡು ಸುತ್ತಲಿಕ್ಕೆ ನನ್ನ-ಪಲ್ಲವಿ ಜೊತೆ ನೀನೂ ಇದ್ದೆ. ನೀನು ಕೊಯ್ದು ಕೊಡುತ್ತಿದ್ದ ಬಿಳಿಬಿಳೀ ಮುಳ್ಳು ಹಣ್ಣುಗಳಿಗೆ ಇಷ್ಟು ವರ್ಷಕ್ಕಿಂತ ವಿಶೇಷವಾದ ರುಚಿ ಪ್ರಾಪ್ತವಾಗಿತ್ತು. ಗೇರುಹಣ್ಣುಗಳಲ್ಲಿ ಜಾಸ್ತಿ ರಸ ತುಂಬಿತ್ತು. ಹಲಗೆ ಹಣ್ಣಿನ ಸಿಹಿ ಹೆಚ್ಚಿತ್ತು. ಈ ಕೌಳಿ ಹಣ್ಣುಗಳು ಮಾತ್ರ ಖೋಡಿ, ನನ್ನಲ್ಲಿ ಹುಚ್ಚು ಲಹರಿಯನ್ನೇ ಹುಟ್ಟಿಸಿದ್ದವು. ಮಾವಿನ ಕಾಯಿ ಕೊಯ್ದು ತಂದು ಅತ್ತೆ ಹತ್ರ ಉಪ್ಪು-ಖಾರ ಮಾಡಿಸ್ಕೊಂಡು ದೊಡ್ಡ ತಟ್ಟೆಯಲ್ಲಿಟ್ಟುಕೊಂಡು ತಿನ್ನುವಾಗ ನನ್ನ ಕೈ ನಿನ್ನ ಕೈಗೆ ತಾಗಿ ರೋಮಾಂಚನ.

ಪಲ್ಲವಿಗೆ ನಾನು ಹೇಳುವ ಮೊದಲೇ ಎಲ್ಲಾ ಅರ್ಥ ಆಗಿಬಿಟ್ಟಿತ್ತು. 'ಅಮೃತಾ ಯಾಕೋ ಭಾರೀ ಖುಷಿಯಾಗಿದ್ದಂಗೆ ಕಾಣ್ಸುತ್ತಲಾ?' ಅನ್ನುತ್ತಾ ಛೇಡಿಸುತ್ತಿದ್ದಳು. ನಿಜ ಹೇಳಬೇಕೆಂದರೆ ನಿನ್ನಲ್ಲಿ ನಾನು ಮೆಚ್ಚಿದ್ದು ಸ್ಮಾರ್ಟ್‍ನೆಸ್ಸನ್ನಲ್ಲ. ನೀನು ಹ್ಯಾಂಡ್‍ಸಮ್ ಅಂತ ಅಲ್ಲ. ನಂಗಿಷ್ಟವಾದದ್ದು ಪ್ರಕೃತಿಯೆಡೆಗೆ ನಿನಗಿದ್ದ ವ್ಯಾಮೋಹ ಮತ್ತು ನಿನ್ನ ಭಾವಲೋಕ. ಅದಾಗಲೇ ಸಾಹಿತ್ಯದಲ್ಲಿ ನಿನಗಿದ್ದ ಅಪಾರ ಜ್ಞಾನ. ನೀನೇ ಗೀಚುತ್ತಿದ್ದ ಪುಟ್ಟ ಪುಟ್ಟ ಹನಿಗವನಗಳು. ಸೋಗೆ ಅಟ್ಲಿನ ಬಳಿ ಸಿಕ್ಕಿದ ಗಾಯಗೊಂಡ ಮರಿಗಿಣಿಯನ್ನು ನೀನು ತಂದು ಗೂಡಿನಲ್ಲಿಟ್ಟು ಅದೆಷ್ಟು ಚೆನ್ನಾಗಿ ಆರೈಕೆ ಮಾಡಿದ್ದೆ... 'ಓದ್ತೀನಿ. ಆದ್ರೆ ಎಲ್ಲರ ಹಂಗೆ ಬೆಂಗ್ಳೂರಿಗೆ ಹೋಗಿ ಕೆಲಸ ತಗೊಂಡು ಜೀವಮಾನ ಇಡೀ ಅಲ್ಲೇ ಇರಲ್ಲ. ನಂಗೆ ಈ ಊರು ಇಷ್ಟ...' ಅಂತ ಎಷ್ಟು ಸ್ಪಷ್ಟವಾಗಿ ಹೇಳಿದ್ದೆ...

ಈಗ ನೋಡು, ಎಸ್ಸೆಸೆಲ್ಸಿ ಮುಗಿದು, ನಾನು ಡಿಸ್ಟಿಂಗ್ಶನ್‍ನಲ್ಲಿ ಪಾಸಾಗಿ, ನಾನು ಎಷ್ಟೇ ಇಷ್ಟವಿಲ್ಲ ಎಂದರೂ ಬಿಡದೇ 'ಇಲ್ಲೀ ಕಾಲೇಜುಗಳು ಒಂದೂ ಚೆನ್ನಾಗಿಲ್ಲ. ನೀನು ಬೆಂಗಳೂರಿಗೆ ಹೋಗು. ಚಿಕ್ಕಪ್ಪನ ಮನೇಲಿ ಇದ್ಕೊಂಡು ಓದು' ಅಂತ ಬಲವಂತ ಮಾಡಿ ಇಲ್ಲಿಗೆ ತಂದು ಸೇರಿಸಿದ್ದಾರೆ. ಏನಿದೆ ಗೆಳೆಯಾ ಇಲ್ಲಿ..? ಟ್ರಾಫಿಕ್ಕೊಂದು ಬಿಟ್ಟು? ಹೀಗೆ ಅಪರೂಪಕ್ಕೆ ಸಿಗುವ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಬಿಟ್ಟು? ದೂರಕ್ಕೊಂದು ಕಾಣುವ ಪಾರ್ಕುಗಳನ್ನು ಬಿಟ್ಟು? ಇಂದು ಇಲ್ಲಿ ಸಿಕ್ಕ ಹಕ್ಕಿ ಕಲರವ ನನಗೆ ಗೊತ್ತಿದ್ದಂತೆ ಮತ್ತೆಲ್ಲೂ ಇಲ್ಲ ಬೆಂಗಳೂರಿನಲ್ಲಿ... ಯಾಕಿರಬೇಕು ಹೇಳು ಇಲ್ಲಿ?

ನೀನು ಹೇಳಿದ್ದೇ ಸರಿ. ಹಳ್ಳಿಯೇ ಚಂದ. ನನಗಿನ್ನು ಕೇವಲ ಒಂದು ಎಕ್ಸಾಮ್ ಇದೆ. ಆಮೇಲೆ ಎರಡೂ ವರೆ ತಿಂಗಳು ರಜ. ಸೀದಾ ಊರಿಗೆ ಬರುತ್ತೇನೆ. ಅಲ್ಲಿಂದ ಅಜ್ಜನ ಮನೆಗೆ. ನೀನೂ ಬರುತ್ತಿದ್ದೀಯಾ ತಾನೆ? ನಿಂಗೆ ದಾವಣಗೆರೆಯಲ್ಲಿ ಇದೇ ಕೊನೆ ವರ್ಷ ಅಲ್ವಾ? ಆಮೇಲೆ ಏನು ಮಾಡುತ್ತೀ? ತಾಳು, ಊರಲ್ಲಿ ಸಿಕ್ಕಾಗ ಎಲ್ಲಾ ಮಾತಾಡೋಣ. ಈ ಸಲದ ಬೇಸಿಗೆ ರಜವನ್ನು ಕನಸು ಕಟ್ಟಲಿಕ್ಕೇ ಮೀಸಲಿಡೋಣ. ಪಲ್ಲವಿಗೆ ಸುಮ್ಮನೆ ಮನೆಯಲ್ಲಿರಲು ಹೇಳಿ ನಾವಿಬ್ಬರೇ ಕಾಡು ಸುತ್ತೋಣ. ಆಯ್ತಾ?

ಊಂಪ್ಚ್! ಅದು ಮುತ್ತು. ಸಿಗೋವರಿಗೆ ಇಟ್ಕೋ ಅಂತ ಕೊಟ್ಟೆ. ಮಜಾ ಮಾಡು...! ಸೀ ಯೂ..

-ಅಮೃತಾ

[ ದಟ್ಸ್‍ಕನ್ನಡ.ಕಾಂ ನಲ್ಲಿ ಪ್ರಕಟಿತ ] Related article: ನಲ್ಮೆಯ ನಮನ

14 comments:

Shiv said...

ಸುಶ್ರುತ,

ಎನೋ ಇದು..ಕೆ.ಎಸ್.ನ ನೆನಪಿಂದ ಶುರುವಾದದ್ದು ರಜಕ್ಕೆ ಹೋಗಿ,ಅಲ್ಲಿಂದ ಕಾಡಿಗೆ ಹೋಗಿ, ಅಲ್ಲಿಂದ ದಾವಣಗೇರೆ..ಮತ್ತೆ ಅಲ್ಲಿಂದ ಕಾಡು..ನಡುವೆ ಕೌಳಿ ಹಣ್ಣು-ಮಾವಿನ ಕಾಯಿ ನೆಪದಲ್ಲಿ ಸ್ಪರ್ಶ ಸುಖ..

ಸಿಕ್ಕಾಪಟ್ಟೆ ಮುದಗೊಳಿಸ್ತು ಕಣೋ..

ಸುಪ್ತದೀಪ್ತಿ suptadeepti said...

ಪರಕಾಯ ಪ್ರವೇಶ ಮಾಡೋವಾಗ ಹುಡುಗಿ ವಯಸ್ಸು ಸ್ವಲ್ಪ ನೋಡಿಕೋಬೇಕು ಮರೀ. ಒಂಭತ್ತು, ಹತ್ತನೇ ಕ್ಲಾಸಿನ ಹುಡುಗಿ ಇಂಥದ್ದಕ್ಕೆಲ್ಲ ಸ್ವಲ್ಪ ಎಳಸು... ಅಥವಾ ಈಗಿನ ಹುಡುಗೀರು ಹೀಗಾ...?

Sushrutha Dodderi said...

@ shiv

ಹಿಹ್ಹಿ.. ಹೀಗೇ ಏನೋ ಲಹರಿ.. ಎಲ್ಲಾ ಕೆ.ಎಸ್.ನ. ಮಾಯೆ.. :)

ಥ್ಯಾಂಕ್ಸ್..

@ suptadeepti

ಫಸ್ಟ್ ಪೀಯೂಸಿನಲ್ಲಿರೋ ಹುಡುಗಿಗೆ ಇಷ್ಟು ಮಾತ್ರದ ಪ್ರೇಮಪತ್ರ ಬರೀಲಿಕ್ಕೆ ಆಗಲ್ಲ ಅಂದ್ರೆ ಹೆಂಗೆ...?! ಅದ್ರಲ್ಲೂ ಈಗಿನ ಕಾಲದ ಹುಡುಗೀರು..! ಅಬ್ಬಬ್ಬಾ! ಏಳನೇ ಕ್ಲಾಸಿಗೇ ಎಷ್ಟು ಜೋರಿರ್ತಾರೆ ಗೊತ್ತಾ? ಥೋ! ಅಲ್ದೇ ಅವ್ಳು ಈಗ ಬೆಂಗ್ಳೂರಲ್ಲಿದಾಳೆ.. ಹಿಹ್ಹಿ, ನಿಮ್ದೊಳ್ಳೆ ಕಥೆ ಆಯ್ತು..! :P

ಇನ್ ಫ್ಯಾಕ್ಟ್, ಇದು ಪರಕಾಯ ಪ್ರವೇಶ ಅಲ್ಲ; ಪರಭಾವ ಪ್ರವೇಶ.. (ತಪ್ಪುಗಳಿದ್ರೆ ಕ್ಷಮಿಸ್ಬೇಕು ಹುಡುಗೀರು.. ತಿದ್ದಿದ್ರೆ ಇನ್ನೂ ಒಳ್ಳೇದು!) :) :)

ಸುಪ್ತದೀಪ್ತಿ suptadeepti said...

ಓಹೋಹೋ, ಏನಪ್ಪಾ? "ಲಹರಿ" ಎಲ್ಲಿ ಹರೀತಾ ಇದೆ? "ಪರಭಾವ ಪ್ರವೇಶ"!! ನಿಜ, ನನಗೆ ಈಗಿನ ಹುಡುಗೀರ ಬಗ್ಗೆ ಗೊತ್ತಿಲ್ಲ. ನಾನು "ಹುಡುಗಿ"ಯಾಗಿದ್ದಾಗ ಹೀಗಿರಲಿಲ್ಲ ಅನ್ನೋದು ಮಾತ್ರ ಗೊತ್ತು.

Anonymous said...

Lekhana andre ade oduvashtu hothu avanu aa bhavalokadallirabeku adu saarthakavagabelu adu ee lekhanadallagide sorry premapatradalli parvagilla re hudugi baredanthe barediruviri ondu lovlovike odidangaythu besageyalli lekhakana kelasavu ashte oduvathana manasige khushi needodu thavu aa khushiyalli palgollodu thanks for your bhavalahari--satish

Sushrutha Dodderi said...

@ suptadeepti

ಅದು ಲಹರಿ ಅಲ್ವಾ? ಎಲ್ಲೆಲ್ಲಿಗೋ ಹರಿಯೊತ್ತೆ.. ಅದ್ಕೇ ಅದನ್ನ 'ಹರಿವ ಲಹರಿ' ಅನ್ನೋದು.. :) ನೀವು ಹುಡುಗಿ ಆಗಿದ್ದಾಗ decent ಆಗಿದ್ರಿ ಅಂತ ಸುಳ್ ಹೇಳೋದೆಲ್ಲಾ ಬ್ಯಾಡ.. ನಂಗೊತ್ತು ಎಲ್ಲ.. ;)

@ satish

nimma anisike hecchu-kammi sari ide. ishtakkoo naanEnu yarigo ishta aagli antha bariyonalla; nange khushi aago hage bareethini.. nanna bhavanegalige ondu horadaari thorislikke matthu bareebeku anno ingithavanna thanisoke.. ashte....

thanx for your comments. bartha iri..

Anonymous said...

ಹಾಯ್,
ನೀನು ಹುಡುಗೀರ ತರಾನು ಕಲ್ಪನೆ ಮಾಡಕೆ ಬತ್ತಾ! ತುಂಬಾ ಚನ್ನಾಗಿ ಇದ್ದು ಮರಯಾ.ಪ್ರೇಮದ ಕವಿಯ ಪ್ರಭಾವ ಇರಕು.
ನಾನು ಹುಡುಗಿ ಅದ್ರು ನಿನ್ನಷ್ಟು ಚನ್ನಾಗಿ love letter ಬರಿಯಕೆ ಸಾದ್ಯಾ ಇಲ್ಲೆ ಬಿಡು. nice one.

Sushrutha Dodderi said...

@ ranju

ಏನೋ ಹಿಂಗೇ ಒಂದು ಟ್ರೈ ಮಾಡಿದಿ ಅಷ್ಟೆ.. :-) ಹೂಂ, ನೋಡೌಟು, ಪ್ರೇಮಕವಿ ಪ್ರಭಾವವೇ!

ಅಷ್ಟು ಚನಾಗ್ ಬರದ್ನನೇ? ಹಂಗರೆ ಇದೇ ಬ್ಯುಸಿನೆಸ್ ಮಾಡ್ಲಕ್ಕೇನ ಮಾರಾಯ್ತಿ..! ಔಟ್‍ಸೋರ್ಸಿಂಗ್! ನೋಡು, ನಿನ್ನ ಪ್ರಿಯಕರನಿಗೆ ಪ್ರೇಮಪತ್ರ ಬರ್ಕೊಡದಿದ್ರೆ ಹೇಳು, ಬರ್ಕೊಡ್ತಿ.. ನಿನ್ನಿಂದ್ಲೆ ಶುರುಆಗ್ಲಿ; ಏನೀಗ? ಅಲ್ದಾ!

ಸಿಂಧು sindhu said...

ಸು..
ನಂಗ್ಯಾಕೋ ನಿನ್ನ ತುಂಟಾಟಗಳನ್ನ ನೋಡಿದ್ರೆ, ಕೆ.ಎಸ್.ನ ಅವರಿಗಿಂತ ಲಕ್ಷಣರಾವ್ ಪ್ರಭಾವ ಜೋರಾಗಿರುವ ಹಾಗೆ ಕಾಣ್ತಿದೆ.. ;-) ಏನೇ ಆಗ್ಲಿ ಪ್ರೇಮಕಹಳೆಯ ದನಿ ಮಧುರವಾಗಿದೆ.

ನಿನ್ನ ಬರಹ ನೆನಪಿಸಿದ ಒಂದು ಬೇಸರದ ವಿಷಯಎಂದರೆ - ಈಗ ಬೇಸಿಗೆ ರಜೆಯಲ್ಲಿ ಮಕ್ಕಳೆಲ್ಲ ಅಜ್ಜನ ಮನೆಗೆ ಹೋಗೋದೆ ಇಲ್ಲ - extracurricular activities - ಅಂತ ಇಪ್ಪತ್ತೈದು ಕ್ಲಾಸಿಗೆ ಸೇರ್ಕಂಡು ಕಾಂಪಿಟೇಶನ್ನುಗಳಲ್ಲಿ ಕಳೆದು ಹೋಗಿದ್ದಾರೆ.

ನಾವು ಆಡುತ್ತಿದ್ದಾಗ ಸೋಲುವುದೂ ಎಷ್ಟ್ ಮಜಾ ಇತ್ತಲ್ದಾ? ವೋ ಕಾಗಝ್ ಕಿ ಕಶ್ತೀ-ವೋ ಬಾರಿಶ್ ಕೀ ಪಾನಿ ತರಹ..

Anonymous said...

thanks ಸುಶ್ರುತ.
ನನ್ನ ಪ್ರೀಯಕರಂಗೆ ನಾನೆ love letter ಬರ್ಕತ್ತಿ ಬಿಡು.
ಬೇರೆ ಯಾರಿಗಾದ್ರು ಬರೆದು ಕೊಡು.
anyway thanks.

Sushrutha Dodderi said...

@ ಸಿಂಧು

ಈಗಿನ ಹುಡ್ರಿಗೆ ಬ್ಯಾಸ್ಗೆ ರಜ ಸಹ ಇಲ್ಲ ಅನ್ನೋದು ನಿಜಕ್ಕೂ ಬ್ಯಾಸ್ರ ಆಗೋಂತ ವಿಷ್ಯ. ಹುಡುಗ್ರೆಲ್ಲಾ ಸಣ್ಣಕಿದ್ದಾಗ್ಲೇ ದೊಡ್ಡವ್ರ ಥರ ಆಡೋದು ನೋಡಿರೆ ಛೇ ಅನ್ಸುತ್ತೆ. ಸೋಲಿನಲ್ಲೂ ಗೆಲುವಿತ್ತು ಆಗ...

@ ranju

ಕೋಪ ಮಾಡ್ಕೋಬೇಡಪ್ಪಾ... ಸುಮ್ನೇ ಹೇಳ್ದಿ.. ತಮಾಷಿಗೆ.. ನೀನೇ ಬರ್ಕ ಅದ್ಕೇನು...

Anonymous said...

ಇಲ್ಲೆ ಸುಶ್ರುತ ಕೋಪ ಬಂದಿಲ್ಲೆ... ಹಂಗೆಲ್ಲಾ ಕೋಪ ಬತ್ತಿಲ್ಲೆ ನಂಗೆ.... ನಾನು letter ಬರಿಯಕೆ ಇನ್ನು time ಇದ್ದು... ಬರಿಯಕಾದ್ರೆ ಮಾತ್ರ ನಿನ್ನಿಂದ tips ಇಸ್ಕತ್ತಿ ಗ್ಯಾರಂಟಿ. ಆದ್ರೆ ಅವನು ನಿಂಗೆ ಸಿಕ್ಕಿದ್ರೆ ನಾನೇ tips ಕೊಟ್ಟಿದ್ದು ಅಂತಾ ಮಾತ್ರಾ ಹೇಳಡಾ ok ನಾ.

Anonymous said...

mhhhh...coollll ksn prabhava jasti aadhange kansuttee..but maheshan kathe yenu avnigeansutte annodu eega kutoohala? avana kaiyallii vondu reply expect madtalalva Amruta..adu alde avnu bhava jeevi ishthottige reply barbekittu...

Sushrutha Dodderi said...

@ malnad hudugi

ನೀವ್ಯಾರೋ ತಿಳೀಲಿಲ್ಲ. ಆದ್ರೂ 'ನಮ್ ಮಲ್ನಾಡ್ ಹುಡುಗಿ' ಅಂತ ಕನ್ಸಿಡರೇಶನ್ ಕೊಡ್ತಿದೀನಿ. :)

ಮಹೇಶ ರಿಪ್ಲೇ ಮಾಡಿರ್ತಾನೆ ಬಿಡಿ. ಆದ್ರೆ ನನ್ನ ಬ್ಲಾಗು ಬರೀ ಅವರಿಬ್ಬರ ಪತ್ರವ್ಯವಹಾರಕ್ಕೆ ವೇದಿಕೆಯಾದರೆ ಸೋ ಕಾಲ್ಡ್ 'ಮಲೆನಾಡು ಹುಡುಗ-ಹುಡುಗಿಯರು' ಖುಷಿಯಿಂದ ಉಬ್ಬಿಹೋದಾರು ಎಂಬ ಮುನ್ನೆಚ್ಚರಿಕೆಯಿಂದ ಸುಮ್ಮನಾಗಿದ್ದೇನೆ.. :)