Tuesday, April 17, 2007

ಮತ್ತೇರಿಸುವ ಮುತ್ತು

ಶಿಲ್ಪಾ ಶೆಟ್ಟಿಗೆ ರಿಚರ್ಡ್ ಗೇರ್ ಮೊನ್ನೆ ಮುತ್ತು ಕೊಟ್ಟಿದ್ದು ಇವತ್ತಿನ ಪೇಪರುಗಳಲ್ಲಿ ದೊಡ್ಡ ಸುದ್ದಿ. ಸಿಟ್ಟಿಗೆದ್ದ ಶಿಲ್ಪಾ ಅಭಿಮಾನಿಗಳು ಅವಳ ಪೋಸ್ಟರುಗಳಿಗೆ ಬೆಂಕಿಯಿಡುತ್ತಿರುವ ಚಿತ್ರಗಳು. ರಿಚರ್ಡ್ ಗೇರ್ ವಿರುದ್ಧ ಕೂಗುತ್ತಿರುವ ಘೋಷಣೆಯ ಸದ್ದೂ ಇದೆ ಪೇಪರಿನಲ್ಲಿ. 'ಗೇರ್ ತನ್ನ ಈ ಹೊಲಸು ವರ್ತನೆಗಾಗಿ ಕ್ಷಮೆ ಕೋರಬೇಕು; ಇಲ್ಲವೇ ತಕ್ಷಣ ಭಾರತ ಬಿಟ್ಟು ತೊಲಗಬೇಕು' ಎಂದು ಪ್ರತಿಭಟನಾಕಾರರು ಕೂಗಾಡುತ್ತಿದ್ದಾರೆ. ಈ ಸುದ್ದಿಯನ್ನು ವೈಭವೀಕರಿಸಿ ಬರೆಯುತ್ತಿರುವ ಮೀಡಿಯಾದ ಮೇಲೆ ಶಿಲ್ಪಾ ಸಿಟ್ಟಾಗಿದ್ದಾಳೆ. 'ಇಂಥಾ ಸುದ್ದಿಯನ್ನೆಲ್ಲಾ ದೊಡ್ಡದು ಮಾಡಿದರೆ ನಾವು ವಿದೇಶಿಯರ ದೃಷ್ಟಿಯಲ್ಲಿ ಸಣ್ಣವರಾಗುತ್ತೀವಿ' ಎಂದು ಅಲವತ್ತುಕೊಂಡಿದ್ದಾಳೆ. ಒಂದು ಮುತ್ತನ್ನು ಅರಗಿಸಿಕೊಳ್ಳಲು ಅವಳು ಪಡುತ್ತಿರುವ ಪಾಡು ನೋಡಿದರೆ ಬೇಸರವಾಗುತ್ತದೆ.

ಆದರೆ ನನ್ನ ಆಶ್ಚರ್ಯ ಏನೆಂದರೆ, ಮುತ್ತು ಪಡೆವಾಗ ಆದ ರೋಮಾಂಚನವನ್ನು ಶಿಲ್ಪಾ ಎಲ್ಲೂ ಹೇಳಿಕೊಂಡಿಲ್ಲ. ಗೇರ್ ನಂತಹ ಗೇರ್. ಜಗತ್ತಿನ ಅತ್ಯಂತ 'ಸೆಕ್ಸಿ ಮ್ಯಾನ್' ಎಂಬ ಖ್ಯಾತಿಯ ಗೇರ್. ಶ್ರೀಮಂತ ಹಾಲಿವುಡ್ ನಟ ಗೇರ್. ಆತ ಕೊಟ್ಟ ಮುತ್ತು ಶಿಲ್ಪಾಗೆ ಯಾವ ರೀತಿಯ ಖುಷಿಯನ್ನು ಕೊಟ್ಟಿರಬಹುದು? ಸಿನಿಮಾಗಳಲ್ಲಿ ಅಭಿನಯಿಸುವಾಗ ಇಂತಹ ಎಷ್ಟೋ ಮುತ್ತೆತ್ತಿರಾಯರಿಂದ ಮುತ್ತು ಕೊಡಿಸಿಕೊಳ್ಳುವ ಶಿಲ್ಪಾಗೆ ಇದು ಏನೂ ಅನ್ನಿಸಲಿಲ್ಲವೇ? ಅದು ಹೇಗೆ ಸಾಧ್ಯ? ಒಂದು ಮುತ್ತು.. ಅಚಾನಕ್ಕಾಗಿ ಪಡೆದ ಒಂದು ಚುಂಬನ.. ಹುಡುಗಿ ಶಿಲ್ಪಾಳಲ್ಲಿ ಒಂದು ಮಧುರ ಅಲೆ ಎಬ್ಬಿಸಲಿಲ್ಲವೇ? ಆಕೆಯ ರಾತ್ರಿಯ ಅಂದಿನ ಕನಸಿನಲ್ಲಿ ಗೇರ್ ಬರಲಿಲ್ಲವೇ? ಗೇರ್‌ನ ಮುತ್ತು ಸಹ ಮತ್ತು ತರಿಸುವುದಿಲ್ಲವೆಂದರೆ ಹುಡುಗಿಯರು ಇನ್ನು ಯಾರ ಮೊರೆ ಹೋಗಬೇಕು?

ಹೋಗಲಿ, ಚುಂಬಿಸುವಾಗ ತುಟಿಗಂಟಿದ ಶಿಲ್ಪಾಳ ಮುಖದ ಕ್ರೀಮು, ಪೌಡರು, ಎಟ್ಸೆಟ್ರಾ.. ಗೇರ್‌ನನ್ನು ಕಾಡುತ್ತಿಲ್ಲವೇ? ಬಾಗಿದಾಗ ಮೈಗಂಟಿದ ಅವಳ ಸೀರೆಯ ಅತ್ತರು ರಿಚರ್ಡ್‌ನ ಧೃತಿಯನ್ನು ಸ್ವಲ್ಪವಾದರೂ ಕೆಡಿಸಲಿಲ್ಲವೇ?

ಈ ಪ್ರಶ್ನೆಗಳಿಗೆ ಉತ್ತರ 'ಇಲ್ಲ' ಎಂಬುದಾದರೆ ಅದು ಸುಳ್ಳು. ಸುಳ್ಳಲ್ಲ; ಅದು ಸತ್ಯ ಎಂದಾದರೆ ನಾವೆಲ್ಲಾ ಸಿನಿಮಾ ನೋಡಿ, ನಮ್ಮ ಪ್ರೀತಿಯ ನಟ-ನಟಿಯರನ್ನು ನೋಡಿ ಕಲ್ಪಿಸಿಕೊಳ್ಳುವ ಮಧುರ ಆಲೋಚನೆಗಳಿಗೆ ಅರ್ಥವೆಲ್ಲಿದೆ? ಎಲ್ಲಾ ಕನ್ನಡಿಯೊಳಗಿನ ಗಂಟು ಎಂದಾಯ್ತಲ್ಲಾ?

* * *

ಒಂದ್ಸಲ ನಮ್ಮನೆ ಆಳು ಗುತ್ಯಪ್ಪ ಹೇಳ್ತಿದ್ದ: ಪಕ್ಕದ ಊರಿನ ರಾಯರ ಮನೆಗೆ ಅವನು ಕೆಲಸಕ್ಕೆ ಹೋಗಿದ್ನಂತೆ. ಅವತ್ತು ಭಾನುವಾರ. ಟೀವಿಯಲ್ಲಿ ಯಾವುದೋ ಪಿಚ್ಚರ್ ಬರುತ್ತಿತ್ತು. ತುಂಬಾ ಜನ ಕುಳಿತು ಪಿಚ್ಚರ್ ನೋಡುತ್ತಿದ್ದರು. ರಾಯರ ಮಗಳೂ ಇದ್ದಳಂತೆ. ಸಿನಿಮಾದ ಮಧ್ಯೆ ಹೀರೋ ಹೀರೋಯಿನ್ನಿಗೆ ಮುತ್ತು ಕೊಡುವ ಸೀನ್ ಬಂತಂತೆ. ಅವಾಗ ರಾಯರ ಮಗಳು 'ಅಯ್ಯೋ! ಅದು ಹೆಂಗೆ ಮುತ್ತು ಕೊಡಿಸಿಕೊಳ್ತಾರೇನೋ! ನಮಗಾದ್ರೆ ಒಂಥರಾ ಆಗೊತ್ತಪ್ಪ. ನಾಚ್ಕೆ ಆಗುತ್ತೆ!' ಅಂದಳಂತೆ! ಜನ ಎಲ್ಲ ಮುಸಿಮುಸಿ ನಕ್ಕರಂತೆ. ನಮ್ಮನೆ ಆಳು ಗುತ್ಯಪ್ಪನ ಪ್ರಕಾರ 'ರಾಯರ ಮಗಳು ಹಂಗೆ ಹೇಳಿದ್ಲು ಅಂದಮೇಲೆ ಅವಳಿಗೆ ಮುತ್ತು ಕೊಡಿಸಿಕೊಂಡು ಗೊತ್ತಿರಬೇಕಲ್ಲವೇ?! ಅವಳು ಸಾಮಾನ್ಯದವಳಲ್ಲ! ಸಿಕ್ಕಾಪಟೆ ಜೋರಿದಾಳೆ!' ಗುತ್ಯಪ್ಪನ ಮಾತಿಗೆ ಅವನ ಯೋಚನಾಲಹರಿಗೆ ನಾನು ತಲೆದೂಗಿದ್ದೇನು ಸುಳ್ಳಲ್ಲ.

* * *

ಮುತ್ತಿನ ಬಗ್ಗೆ ಮತ್ತಷ್ಟು ಹುಡುಕಿದಾಗ ಕೆಲವು ಆಸಕ್ತಿಕರ ವಿಷಯಗಳು ದೊರಕಿದವು. ಒಬ್ಬ ಅವರೇಜ್ ಮನುಷ್ಯ ತನ್ನಾಯಸ್ಸಿನ ೨೦,೧೬೦ ನಿಮಿಷಗಳನ್ನು ಮುತ್ತು ಕೊಡುವುದರಲ್ಲಿ ಕಳೆಯುತ್ತಾನಂತೆ! ಒಂದು ನಿಮಿಷದ ಚುಂಬನಕ್ಕೆ ೨೬ ಕ್ಯಾಲೋರಿಯಷ್ಟು ಶಕ್ತಿ ವ್ಯಯವಾಗುತ್ತದಂತೆ. ಪ್ರಪಂಚದ ಐವತ್ತು ಪ್ರತಿಶತಕ್ಕೂ ಹೆಚ್ಚು ಜನ ತಮ್ಮ ಹದಿನಾಲ್ಕನೇ ವಯಸ್ಸಿನ ಒಳಗೇ ಪ್ರಥಮ ಚುಂಬನದ ಅನುಭವ ಪಡೆದಿರುತ್ತಾರಂತೆ. (ಮಗುವಾಗಿದ್ದಾಗ ಪಡೆಯುವ 'ಪಪ್ಪಿ'ಯನ್ನೂ ಇದರಲ್ಲಿ ಸೇರಿಸಿದ್ದಾರೋ ಇಲ್ಲವೋ ಗೊತ್ತಿಲ್ಲ!). ಮುತ್ತು ಕೊಡುವುದಕ್ಕೆ ಒಟ್ಟು ಮೂವತ್ನಾಲ್ಕು ಮೂಳೆಗಳು ಏಕಕಾಲದಲ್ಲಿ ಕೆಲಸ ಮಾಡಬೇಕಾಗುತ್ತದಂತೆ. ೧೮೯೬ರಲ್ಲಿ ಬಿಡುಗಡೆಯಾದ 'ದಿ ಕಿಸ್' ಅನ್ನೋ ಸಿನಿಮಾದಲ್ಲಿ ಮೊದಲ ಕಿಸ್ಸಿಂಗ್ ಸೀನ್ ತೋರಿಸಿದ್ದಂತೆ.

ಚುಂಬನದಿಂದ ಅನೇಕ ಲಾಭಗಳಿವೆ. ಮುತ್ತು ಕೊಟ್ಟುಕೊಳ್ಳುವುದರಿಂದ (ಕೊಟ್ಟು - ಕೊಳ್ಳುವುದು!) ಬಾಯಲ್ಲಿ ಲಾಲಾರಸ ಹೆಚ್ಚುತ್ತದಂತೆ. ಇದರಿಂದ ಹಲ್ಲುಗುಳಿ (tooth decay) ಆಗುವುದು ಕಮ್ಮಿಯಾಗುತ್ತದಂತೆ. ಮುತ್ತು ಕೊಡುವುದು ಟೆನ್ಷನ್ನನ್ನು ಕಮ್ಮಿ ಮಾಡುತ್ತದಂತೆ. (ಆದರೆ ಗೇರ್-ಶಿಲ್ಪಾ ಕೇಸಲ್ಲಿ ಇದು ಉಲ್ಟಾ ಆಯ್ತು; ಪಾಪ!). ಸುದೀರ್ಘ ಚುಂಬನ ದೇಹದ ತೂಕವನ್ನು ಕಮ್ಮಿ ಮಾಡುತ್ತದೆ ಎಂಬುದು ಇತ್ತೀಚಿನ ಶೋಧದಿಂದ ತಿಳಿದು ಬಂದಿದೆ. ಅದು ದೇಹದ 'ಫಿಟ್‌ನೆಸ್' ಕಾಯ್ದುಕೊಳ್ಳಲು ಸಹಾಯ ಮಾಡುತ್ತದಂತೆ.

ಮುತ್ತು ಸಾಮಾನ್ಯವಾಗಿ ಸಿಹಿಯಾಗಿರುತ್ತದೆ (ಅಂತೆ). ಕಹಿಮುತ್ತು ಅನ್ನೋ ಪದ ಬಳಕೆಯಲ್ಲಿದ್ದಂತಿಲ್ಲ. ತುಟಿಗೆ ತುಟಿ ಸೇರಿಸಿದರೆ ಅದು ಸ್ಮೂಚಿಂಗ್. ಕೆನ್ನೆಗೋ ಗಲ್ಲಕ್ಕೋ ಹಣೆಗೋ ಮತ್ತೆಲ್ಲಿಗೋ ಕೊಟ್ಟರೆ ಅದು ಬರೀ ಮುತ್ತು. ನಲ್ಲೆಯ ಮುತ್ತಿನಿಂದ ಮೈಮರೆಯುವ ನಲ್ಲ ಅವಳನ್ನು ಮದುವೆಯಾಗಿ ಆಮೇಲೆ ಪ್ರತಿದಿನವೂ ಅವಳಿಂದ ಮುತ್ತು-ರತ್ನದ ಬೇಡಿಕೆ ಸ್ವೀಕರಿಸುವ ಕಷ್ಟಕ್ಕೆ ಬೀಳುವುದು ತೀರಾ ಸಾಮಾನ್ಯ ಸಂಗತಿ.

ಮುತ್ತಿನಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ ಕೆಲವು:

  • ಕೆನ್ನೆಗೆ ಮುತ್ತು (Cheek Kiss): ಸ್ನೇಹಕ್ಕಾಗಿ ಕೊಟ್ಟುಕೊಳ್ಳುವ ಸಾಮಾನ್ಯ ಮುತ್ತು. ಮೊದಲ ‘ಡೇಟ್’ ದಿನ ಈ ಮುತ್ತು ಕೊಟ್ಟುಕೊಳ್ಳುವುದು ಸಾಮಾನ್ಯ. ಸಂಗಾತಿಯ ಹೆಗಲ ಮೇಲೆ ಕೈ ಹಾಕಿ ಗಟ್ಟಿಯಾಗಿ ಕೆನ್ನೆಗೆ ಮುತ್ತೊತ್ತಬೇಕು.
  • ಕಿವಿಗೆ ಮುತ್ತು (Earlobe Kiss): ಕಿವಿಯನ್ನು ಕಚ್ಚಿ (ಜೋರಾಗಲ್ಲಾರೀ!), ಚೀಪುವುದು! ಈ ಪ್ರಕ್ರಿಯೆಯಲ್ಲಿ ಜಾಸ್ತಿ ಶಬ್ದ ಮಾಡುವುದು ಅಪಾಯ. ಏಕೆಂದರೆ ನಿಮ್ಮ ಸಂಗಾತಿ ಕಿವುಡಾಗುವ ಸಂಭವವಿರುತ್ತದೆ!
  • ಮೂಗು ಮರ್ದನ (Eskimo Kiss): ಇಬ್ಬರೂ ತುಂಬಾ ಹತ್ತಿರ ಬಂದು ಪರಸ್ಪರರ ಮೂಗನ್ನು (ಮೂಗಿನಿಂದಲೇ) ತಿಕ್ಕಾಡುವುದು. ಇದನ್ನೂ ಮುತ್ತಿನ ಪಟ್ಟಿಗೆ ಸೇರಿಸಿದ ಮಹಾನುಭಾವರು ಯಾರೋ ಗೊತ್ತಿಲ್ಲ.
  • ಹಣೆಗೆ ಮುತ್ತು (Forehead Kiss): ‘ಮದರ್ಲಿ ಕಿಸ್’ ಎಂದು ಜನಜನಿತವಾದ ಇದು ಕೇವಲ ಸ್ನೇಹದ ದ್ಯೋತಕ. ಈ ಮುತ್ತು ‘ಮುತ್ತಿಸಿಕೊಂಡವ’ರಿಗೆ ಏನೋ ಸಮಾಧಾನ ನೀಡುತ್ತದೆ.
  • ಹಣ್ ಮುತ್ತು (Fruity Kiss): ಇಬ್ಬರ ಬಾಯಲ್ಲೂ ಹಣ್ಣಿನ ಚೂರನ್ನು ಕಚ್ಚಿಕೊಂಡು (ದ್ರಾಕ್ಷಿ, ಸ್ಟ್ರಾಬೆರಿಯಂತ ರಸಭರಿತ ಹಣ್ಣು ಇದಕ್ಕೆ ಸೂಕ್ತ), ತುಟಿಗೆ ತುಟಿ ಹಚ್ಚಿ ಚುಂಬಿಸುವುದು. ಹಣ್ಣಿನ ರಸ ಹೀರಿ ಖಾಲಿಯಾದರೂ ಅಧರದ ಮಾಧುರ್ಯವನ್ನು ಹೀರುತ್ತಾ ಚುಂಬನವನ್ನು ಮುಂದುವರಿಸಲು ಅಡ್ಡಿಯಿಲ್ಲ.
  • ವ್ಯಾಘ್ರ ಚುಂಬನ (Tiger Kiss): ಸಂಗಾತಿಗೆ ತಿಳಿಯದಂತೆ ಹಿಂದಿನಿಂದ ಹೋಗಿ ಗಬ್ಬಕ್ಕನೆ ‘ಗ್ರಾಬ್’ ಮಾಡಿ ಜೋರಾಗಿ ಮುತ್ತಿಡುವುದು. ಈ ಸಪ್ರೈಸ್ ಚುಂಬನ ಆಕೆ/ಆತ ನನ್ನು ರೋಮಾಂಚನಗೊಳಿಸುತ್ತದೆ.
  • ಪಾತರಗಿತ್ತಿ ಮುತ್ತು (Butterfly Kiss): ಉಸಿರಿನಷ್ಟು ಸಮೀಪಕ್ಕೆ ಹೋಗಿ ನಿಮ್ಮ ಸಂಗಾತಿಗೆ ಮುತ್ತೊತ್ತುವಾಗ ನಿಮ್ಮ ಕಣ್ಣುಗಳು ಪಟಪಟನೆ ಬಡಿದುಕೊಂಡರೆ ಅದು ಪಾತರಗಿತ್ತಿ ಮುತ್ತು! ಈ ಥರದ ಮುತ್ತು ಸಂಗಾತಿಯೆಡೆಗೆ ನಿಮ್ಮ ಹೃದಯ ತೆರೆದುಕೊಳ್ಳುವಂತೆ ಮಾಡುತ್ತವೆ.
  • ಮಾತಿನಲ್ಲೇ ಮುತ್ತು (Talking Kiss): ಸಂಗಾತಿಯ ಬಾಯ ಸಮೀಪಕ್ಕೆ ಹೋಗಿ ಏನನ್ನೋ ಉಸುರುವುದು! ಯಾರಾದರೂ ನೋಡಿ ಸಿಕ್ಕಿಬಿದ್ದರೆ, ‘ಇಲ್ಲ, ನಾನು ಅವಳಿಗೆ ಮುತ್ತು ಕೊಡುತ್ತಿರಲಿಲ್ಲ. ಗುಟ್ಟು ಹೇಳುತ್ತಿದ್ದೆ’ ಎಂದು ಹೇಳಿ ತಪ್ಪಿಸಿಕೊಳ್ಳುವುದು!
  • ಇಂಟರ್‌ನೆಟ್ ಮುತ್ತು (Internet Kiss): ಇಷ್ಟೆಲ್ಲಾ ಹೇಳಿ ಇದನ್ನು ಹೇಳದಿದ್ದರೆ ನೀವು ಮುನಿಸಿಕೊಳ್ಳುತ್ತೀರಿ. ಏನಿಲ್ಲ, ತೀರಾ ಸುಲಭ. ಚಾಟಿಂಗ್ ಮಾಡುವಾಗ ಅಥವಾ ಸ್ಕ್ರಾಪ್ ಬರೆಯುವಾಗ ಈ ಚಿಹ್ನೆಯನ್ನು ಬಳಸಿದರಾಯ್ತು: :-*

ಸಾಕು. ತುಂಬಾ ಜಾಸ್ತಿ ಆಯ್ತು. ಯಕ್ಚುವಲೀ, ಇವತ್ತು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ. ಬೆಳಗಿನಿಂದ ನನಗೆ ಮೂಡ್ ಔಟ್. ನನ್ನ ಮೂಡೇ ಆವಿಯಾಗಿ ಹೋಗಿ ಆಗಸದಲ್ಲಿ ಮೋಡವಾದಂತಿದೆ. ಹೀಗಾಗಿ, ಏನಾದರೂ ಇಂಟರೆಸ್ಟಿಂಗ್ ವಿಷಯವನ್ನು ಓದಿ ಮನಸ್ಸನ್ನು ಸರಿ ಮಾಡಿಕೊಳ್ಳೋಣ ಅಂತ ಇಂಟರ್‌ನೆಟ್ಟಿನಲ್ಲಿ ಹುಡುಕ ಹೊರಟೆ. ಆಗ ಸಿಕ್ಕಿದ್ದು ಇದು! ಹೀಗಾಗಿ, ನಿಮಗೆ ಈ ಮಾಹಿತಿಯಿಂದ ಮತ್ತೇರಿ, ಯಾವುದಾದರೂ ವಿಧಾನವನ್ನು ಪ್ರಯೋಗ ಮಾಡಲು ಹೋಗಿ ಹೆಚ್ಚು-ಕಮ್ಮಿ ಆದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಇಲ್ಲಿರುವ ಮಾಹಿತಿಯೆಲ್ಲವನ್ನೂ ನಾನು ಪಡೆದದ್ದು ಅಂತರ್ಜಾಲದಿಂದ. ನನ್ನ ಅನುಭವ ಎಳ್ಳಷ್ಟೂ ಇಲ್ಲ.

ಮತ್ತೊಂದು ವಿಷಯ: ನೀವು ಈ ವಿಧಾನವನ್ನು ಪ್ರಯೋಗಿಸಲೇಬೇಕು ಎಂದಾದರೆ ದಯವಿಟ್ಟು ಅದನ್ನು ನಿಮ್ಮ ಸಂಗಾತಿಯ ಮೇಲೇ ಪ್ರಯೋಗಿಸಿ. ಅದಿಲ್ಲದಿದ್ದರೆ ‘ಪ್ರಥಮ ಚುಂಬನಂ ದಂತ ಭಗ್ನಂ’ ಆದೀತು; ಎಚ್ಚರ!

35 comments:

Shree said...

ಈ ಸಲಿ ಸುಷ್ರುತ ತಲೆಕೆಡಿಸ್ಕೊಂಡಿರೋ ವಿಷ್ಯ ಭಾರಿ ಸೀರಿಯಸ್. ಯಾರ್ಗಾದ್ರು ಸುಷ್ರುತನ್ ಮನೆ ಫೋನ್ ನಂಬರ್ ಗೊತ್ತಿದ್ರೆ ಫೋನ್ ಮಾಡ್ಬಿಟ್ಟು ಹಿರಿಯವ್ರಿಗೆ ವಿಷ್ಯ ತಿಳ್ಸದು ಒಳ್ಳೆದು :-)

Anonymous said...

ಹೆಯ್ ಸುಶ್ರುತ,
ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತದರ ಬಗ್ಗೆ ಸಂಶೋಧನೆ ಬ್ಯಾಡಿತ್ತು ಮರಾಯಾ.ಇನ್ನು ೪ ವರ್ಷ ಹೋಗ್ಲಕ್ಕಾಗಿತ್ತು.
ಅನುಭವ ಬೆರೆ ಇಲ್ಲೆ ಹೇಳ್ತೆ.
ಅನುಭವ ಇಲ್ದೆ ಹಿಂಗೆಲ್ಲಾ ಬರಿಯಕೆ ಸಾದ್ಯಾನಾ?
anyway ಅನುಭವ ಇಲ್ಲೆ ಅಂದ್ರೆ ಶ್ರೀಘ್ಹ್ರ ಮೇವ ಅನುಭವ ಪ್ರಾಪ್ತಿ ರಸ್ತು. (kidding)

ಗುಹೆ said...

ಸುಷ್ರುತನ ಸಂಶೋಧನೆಗೆ ಕಾರಣರಾದ ಗೇರ್ ಮತ್ತು ಶಿಲ್ಪಾರಿಗೆ ಧನ್ಯವಾದಗಳು.

Sushrutha Dodderi said...

@ shree

ಇದು ಹಿರಿಯರಿಗೆ ತಿಳಿಸಿದ್ರೆ ಬಗೆಹರಿಯೋ ವಿಷ್ಯ ಅಲ್ಲ. ಮುತ್ತಿನ ವಿಷ್ಯದಲ್ಲಿ ಹಿರಿಯರು ಏನ್ ತಾನೇ ಮಾಡ್ಲಿಕ್ಕೆ ಸಾಧ್ಯ? ಯಾರಿಗೆ ತಿಳಿಸ್ಬೇಕೋ ಅವ್ರಿಗೆ ತಿಳಿಸ್ಬೇಕು! :)

Sushrutha Dodderi said...

@ ranju

ನೀನು ನಾಕು ವರ್ಷ ಹೇಳಿ ಗಡುವು ಹಾಕಿದ್ದು ಸ್ವಲ್ಪಾನೂ ಸರಿ ಇಲ್ಲೆ ನೋಡು. ;) ಅನುಭವ ನಿಜ್ವಾಗ್ಯೂ ಇಲ್ಯಪ್ಪಾ, ಅನುಮಾನ ಬ್ಯಾಡ. ಹಾರೈಕೆಗೆ ಥ್ಯಾಂಕ್ಸ್ (i'm not kidding!)

Sushrutha Dodderi said...

@ ಗುಹೆ

ಗೇರ್ ಮತ್ತು ಶಿಲ್ಪಾರಿಗೆ ನಾನೂ ಥ್ಯಾಂಕ್ಸ್ ಹೇಳ್ಬೇಕು: ಮೂಡ್ ಸರಿ ಮಾಡಿದ್ದಕ್ಕೆ.:)

ಅಂದಹಾಗೇ ಶ್ರೀ ಮತ್ತು ಗುರುಗಣೇಶ ಹೆಗಡೆ,
ನನ್ನ ಹೆಸರು ಸುಶ್ರುತ.

ಸಿಂಧು sindhu said...

ಯಾರಿಗೆ ತಿಳಿಸ್ಬೇಕೋ ಅವ್ರಿಗೆ ಅಂದ್ರೆ - ಅವರ್ಯಾರು ಅಂತ ನಮಗ್ಗೊತ್ತಿಲ್ಲೆ.. ಯಾವ್ದಕ್ಕೂ ಇರ್ಲಿ ಅಂತ ನಾನು ದೊಡ್ಡೇರಿ ಮನೆ ನಂಬರ್ ಟ್ರೈ ಮಾಡ್ತಾ ಇದ್ದಿ.. ;-)

ತಮಾಶೆ ಎಲ್ಲ ಬಿಡು.. ಯಾಕೋ ಸುಶ್ರುತ 'ಓ ಮನಸೇ'ಲಿ ಆರ್ಟಿಕಲ್ ಬರೆಯಲೆ ಸೇರ್ಕಂಡೆಯಾ ಅಂತ ಯೋಚನೆಯಾಗಿದೆ ನಂಗೆ.. ಅಥ್ವಾ ಗಾಂಡಲೀನಳ ನೆನಪಲ್ಲಿ ಶಿಲ್ಪಾ ಪ್ರಕರಣಕ್ಕೆ ರಂಗು ತುಂಬಿದೆಯಾ?

ಹೀಗೀಗೆ ಮಾಡ್ ಬೇಕು ಅಂತ ಕಲಿತು ಮುತ್ತಿಡಬೇಕೇನೋ? ಅಮ್ಮಾ ತಪ್ಪಾಯ್ತು ಅಂತ ತಲೆಬಗ್ಗಿಸಿ ನಿಂತಾಗ - ಹೋಗ್ಲಿ ಬಿಡು ಅಂತ ಹತ್ತಿರ ಎಳೆದು ತಲೆಗೊಂದು ಮುತ್ತಿಟ್ಟಳಲ್ಲಾ ಅದು ಯಾವ ಕೆಟಗರಿ - ಅದ್ಯಾಕೆ ಬಿಟ್ಟೋಯ್ತು ಇಲ್ಲಿ?

ಹೂವಿಗಿಂತ ಅರಳು ಮೊಗ್ಗು ಯಾಕೆ ಚಂದ ಹೇಳು - ಪೂರ್ತಿ ಬಿರಿಯದೆ, ಒಳಗೆ ಸೊಬಗಿದೆ ಅಂತ ಹೇಳುವ ಬಗೆಗೆ. ಮುತ್ತು ಹಾಗೆ ಅಂತ ನನ್ನ ಭಾವನೆ.

ರಸಿಕತೆ ಪೂರ್ತಿ ಬಿರಿಯದಿದ್ದರೆ ಚೆನ್ನ ಅಂತ ಒಂದು ಸಲಿಗೆಯ ಸಲಹೆ.

ಅಕ್ಕ.

ಯಜ್ಞೇಶ್ (yajnesh) said...

ಸುಶ್ರುತ,

ಇನ್ನೊಂದು ಬಿಟ್ಯಲ್ಲೋ.....

Flying kiss...
ಇದರ ಕನ್ನಡ ಅನುವಾದ ಮಾಡಿದ್ರೆ ನಗು ಬರತ್ತೆ.
ಹಾರುವ ಅಥವಾ ಹಾರಿಬರುವ ಮುತ್ತು ..ಹಹಹ

ಈ ಟಿವಿ, ನ್ಯೂಸ್ ಚಾನೆಲ್ ಗಳಿಗೆ ಬೇರೆ ಕೆಲ್ಸನೇ ಇಲ್ಲಪ್ಪ. ಯಾರೋ ಯಾರಿಗೆ ಮುತ್ತು ಕೊಟ್ಟರೆ ಅದನ್ನೇ ದೊಡ್ಡದಾಗಿ ಪ್ರಚಾರ ಮಾಡ್ತಾರೆ. ಬೇರೆ ಯಾವ್ದೂ ವಿಷ್ಯನೇ ಇಲ್ದೇ ಇರೋ ತರ.

ಯಾರದ್ದೋ ವಿಷ್ಯ... ಏಲ್ಲಮ್ಮನ ಜಾತ್ರೆ.

Harsha Bhat said...

ಖರೇ ಇದು ಮುತ್ತಿನ೦ತಾ ಲೇಖನ....... ಮಸ್ತ ಇದ್ದು...

Pramod P T said...

ಸುಶ್ರುತರವರೇ,

ತುಂಬಾ ಉಪಯುಕ್ತ ಮಾಹಿತಿ! ಧನ್ಯವಾದಗಳು.
theory ಓದಿ ಆಯ್ತು..ಇನ್ನು practicle ಒಂದೇ ಬಾಕಿ. (ಕೊನೆಯ ಸಾಲುಗಳನ್ನ ನೆನಪಿನಲ್ಲಿರಿಸಿಕೊಂಡು..!!)

ಪ್ರಮೋದ್

ಸತೀಶ್ ಕುಮಾರ್ ಜಿ said...

ಏನ್ರೀ ಮಲೆನಾಡು,ಕೊಟ್ಟಿಗೆ,ಸುಗ್ಗಿ,ಬಾಲ್ಯ,ಕೆ ಎಸ್ ನ,ಎಲ್ಲಾರಿಂದ ಹೊರಟು ಈಗ ಮುತ್ತಿಗೆ ಅಡಿಯಿರಿಸಿರುವಿರಾ?? ಏನೇ ಆದ್ರೂ ಮುತ್ತಿರೋದು ಕಡಲಾಳದ ಚಿಪ್ಪಿನಲ್ಲ್ವೇನ್ರಿ ಅದು ಅಲ್ಲಿರಬೆಕು ಇಲ್ಲ ಘನವಾಗಿ ಹೆಣ್ಮಕ್ಕಳ ಕೊರಳಲ್ಲಿದ್ದರೆ ಚೆಂದಾ ತಾನೆ

Sushrutha Dodderi said...

@ ಸಿಂಧು

ನೀನೇನು ಮನಿಗೆ ಫೋನ್ ಮಾಡದು ಬ್ಯಾಡ. ನಾನೇ ಊರಿಗೆ ಹೋದಾಗ ಈ ಆರ್ಟಿಕಲ್ ಪ್ರಿಂಟೌಟ್ ತಗಂಡೋಗಿ ಅಪ್ಪಂಗೆ ಕೊಡ್ತಿ. (ಮುಂದಿನ ತೀರ್ಮಾನ ಅವ್ರೇ ತಗಳ್ಲಿ ಅಲ್ದಾ?!)

'ಓ ಮನಸೇ'ಲಿ ಆರ್ಟಿಕಲ್ ಬರಿಯಕ್ಕೆ ಸೇರ್ಕ್ಯಳ್ಲೆ. ಸೇರ್ಕ್ಯಳದೂ ಇಲ್ಲೆ. ಈ ಆರ್ಟಿಕಲ್ 'ಓ' ನಲ್ಲಿ ಬರೋ ಆರ್ಟಿಕಲ್ಸ್ ಥರ ಇದ್ದು ಅಂದ್ಯಾ? ಪ್ರಾಮಾಣಿಕವಾಗಿ ಹೇಳವು ಅಂದ್ರೆ ಹಿಂಗೇ ಬರಿಯಕ್ಕು ಅಂದ್ಕಂಡಿದ್ದಲ್ಲ; ಬರಿತಾ ಹೋದಿ, ಅದು ಹಿಂಗಾತು ಅಷ್ಟೆ. ಗಾಂಡಲೀನ.. ಹಿಹ್ಹಿ.. ಹೋಗ್ಲಿ ಬಿಡು. :)

ಛೇಛೇ! ಹೀಗೇ ಮಾಡ್ಬೇಕು ಅಂತ ಅಲ್ವೇ ಅಲ್ಲ; ಹೇಗ್ ಹೇಗೆ ಮಾಡ್ತಾರೆ ಅಂತ ಅಷ್ಟೆ! ಅಮ್ಮ ಕೊಡೋ ಮುತ್ತು Forehead Kiss ಗೇ ಸೇರ್ತು ಅಂದುಕೈಂದಿ. ಮುತ್ತುಗಳನ್ನು ಹೀಗೆ categorize ಮಾಡೋದು ತಪ್ಪೋ ಸರಿಯೋ ಗೊತ್ತಿಲ್ಲೆ; ಆದ್ರೆ ಈಗಾಗ್ಲೇ ಯಾರೋ categorize ಮಾಡಿದ್ದ; ಅದ್ನ ನಾನು ಕನ್ನಡಕ್ಕೆ ಅನುವಾದ ಮಾಡಿದಿ ಅಷ್ಟೆ.

ಮುತ್ತಿನ ಬಗೆಗಿನ ನಿನ್ನ ವ್ಯಾಖ್ಯಾನ ಅದ್ಭುತವಾಗಿದ್ದು. ಬಹುಶಃ ನಾನು ಇಷ್ಟೆಲ್ಲಾ ಬರಿಯೋ ಬದ್ಲು ಅದೊಂದು sentence ಹಾಕಿದಿದ್ರೆ ಸಾಕಿತ್ತೇನೋ?

ರಸಿಕತೆ ಜಾಸ್ತಿ ಆಯ್ತು ಅನ್ಸಿದ್ರೆ ದಯವಿಟ್ಟು ಕ್ಷಮಿಸಿ. ಶಿಲ್ಪಾ-ಗೇರ್ ಪ್ರಕರಣಕ್ಕಿಂತ ವಿಲಕ್ಷಣ ಆಗಿಲ್ಲ ಅಂದುಕೊಳ್ತೀನಿ.

ಬೈದದ್ದಕ್ಕೆ, ತಿದ್ದಿದ್ದಕ್ಕೆ, ಸಲಹೆ ನೀಡಿದ್ದಕ್ಕೆ ಥ್ಯಾಂಕ್ಸ್.

Sushrutha Dodderi said...

@ ಹುಡುಕಾಟ

Flying Kiss ನಂಗೂ ನೆನಪಾತು. ಆದ್ರೆ ಹೆಂಗೆ explain ಮಾಡೋದು ಅಂತ ಗೊತ್ತಾಗ್ದೇ ಸುಮ್ನಾದಿ :)

ಮೀಡಿಯಾ ಬಗ್ಗೆ ನೀನು ಹೇಳಿದ್ದು ಅಕ್ಷರಶಃ ಸತ್ಯ.

Sushrutha Dodderi said...

@ ಹರ್ಷ

ಧನ್ಯವಾದ ಗುರುಗಳೇ :)

Sushrutha Dodderi said...

@ pramod pt

ಮಾಹಿತಿಯಿಂದ ನಿಮಗೆ ಉಪಯೋಗ ಆದ್ರೆ ಸಾರ್ಥಕ ಅಂದುಕೊಳ್ತೀನಿ. ಹುಷಾರಾಗಿ ಮುಂದುವರೆಯಿರಿ. ಶುಭವಾಗಲಿ.. :)

Sushrutha Dodderi said...

@ ಸತೀಶ್ ಕುಮಾರ್

ಓಹೋ! ನೀವು ಆ ಮುತ್ತಿನ ಬಗ್ಗೆ ಮಾತಾಡ್ತಾ ಇದೀರೋ? ಹೂಂ ಬಿಡಿ, ಅದು ಈ ಮುತ್ತಿಂಕಿತಾ ಚೆನ್ನ ಒಂಥರಾ.. :)

ಥ್ಯಾಂಕ್ಸ್ ಸ್ವಾಮೀ..

ಸಿಂಧು sindhu said...

ಸು,

ನಿನ್ನ ಬಯ್ಯಲ್ಲೆ. ಸುಮ್ಮನೆ ಇಬ್ಬರು ಗೆಳತಿಯರು ಕೂತು ಮಾತಾಡಿಕೊಂಡಂತೆ, ಗೆಳೆಯರಿಬ್ಬರು ಕಾಡುದಾರಿಯಲ್ಲಿ ನಗುತ್ತ ಹರಟಿಕೊಂಡು ವಾಕ್ ಹೋದಂತೆ, ಊರಿನ ಮಳೆಯ ತಂಪಿನಂತೆ, ಮಳೆಯ ನಡುವಿನ ಎಳೆಬಿಸಿಲಿನಂತೆ ಬರೆಯುವ ನಿನ್ನ ಸೂಕ್ಷ್ಮ ಲೇಖನಿ - ಇಲ್ಲಿ ಬೆಂಗಳೂರಿನ ಮೀಡಿಯಾ ಮೌತ್ ಪೀಸ್ ಹಾಗೆ ಅನಾವರಣಗೊಂಡಿದ್ದು ಒಂದು ವಿಚಿತ್ರ ಅನುಭವ,ತಲ್ಲಣ ಉಂಟು ಮಾಡಿತು.
ನಾನು ಖಂಡಿತ ಸಂಸ್ಕೃತಿ-ಪೋಲಿಸ್ ತರ ಬರೆಯಲ್ಲೆ. ರವಿ ಕಾಣದ್ದನ್ನ ಕವಿ ಕಂಡ ಅಂತ ಹಿರಿಯರು ಹೇಳಿರುವುದು ಸತ್ಯ. ಬರವಣಿಗೆ ಸತ್ವಯುತ ಸತ್ಯವನ್ನು ಹೇಳಲೇ ಇರುವುದು. ನಿನ್ನ ಬರವಣಿಗೆಯಲ್ಲಿ ಇತರ ಪ್ರಚಾರಿ-ಸೋಗು ಮಾಧ್ಯಮಗಳ ನೆರಳು ನೋಡಿ ತಡೆಯಲಾರದೆ ಹಾಗೆ ಬರದೆ.

ತಿದ್ದಲಿಕ್ಕೆ ಏನಿದೆ. ನನಗೇನು ಗೊತ್ತಿದೆ. ಒಂದು ಸಲಿಗೆಯ ಸಲಹೆ ಅಷ್ಟೆ. ನಿನ್ನ ಬುಟ್ಟಿಯಲ್ಲಿ ಚಂದದ ಮತ್ತು ಸತ್ವಯುತ ಮುತ್ತುಗಳಿಗಾಗಿ ಕಾಯುತ್ತೇನೆ. ಮೀನು ಬೇಡ.. ಒಣಗಿದ ಮೇಲೆ ವಾಸನೆ ಬರುತ್ತೆ. :)

ಅಕ್ಕ

ರಾಜೇಶ್ ನಾಯ್ಕ said...

ಸುಶ್ರುತ ಸಾಹೇಬ್ರೆ,

ಚೆನ್ನಾಗಿದೆ ಕಿಸ್ಸಾ 'ಕಿಸ್' ಕಾ! ಮೊನ್ನೆ ಕಿಸ್ಸಾ 'ಕೀ' ಕಾ ಇತ್ತು. ವ್ಯತ್ಯಾಸ ಅಂದ್ರೆ 'ಕೀ' ಪುರಾಣ ನಿಮ್ಮ ಬಗ್ಗೆ ಆಗಿದ್ರೆ, 'ಕಿಸ್' ಪುರಾಣ ಬೇರೆಯವರ ಬಗ್ಗೆ. ಮುಂದಿನ ಸರದಿ ಯಾವುದ್ರದ್ದು?

ಶ್ರೀನಿಧಿ.ಡಿ.ಎಸ್ said...

ಅರ್ರೆರೇ!
ಏನಪಾ ಸುಶ್, ಭಾರಿ ಬರದ್ದೆ! ಸುಶ್ರುತತನ ಬಿಟ್ಟು ಬರೆದಂತಿದೆ. ಸಂತೋಷ.

ಒಂದೇ ರೀತಿಯ ಬರಹಗಳಿಗಂಟಿಕೊಳ್ಳದೇ, ಈ ಒಂದು ಪ್ರಯತ್ನ ಮಾಡಿದ್ದು ಸ್ವಾಗತಾರ್ಹ! ಮುತ್ತು ಎಂಬ ಸಬ್ಜೆಕ್ಟು ಸ್ವಲ್ ಮುಜುಗರ ತರಿಸುವುದರಿಂದ, ಬರಿಯೋದೂ ಸ್ವಲ ಕಷ್ಟವೇ!

ಒಬ್ಬ ಬರಹಗಾರ "ಹೀಗೇ" ಅಂತ ಬ್ರಾಂಡ್ ಆದ್ರೆ ಅದೂ ತೊಂದರೆಯೇ! ನಿನ್ನ ನವಿರು ಬರಹಗಳ ಜೊತೆಗೆ, ಇಂತಹ ತುಂಟ ಬರವಣಿಗೆಯೂ ಬರಲಿ!

ಜೈ!

ಸುಪ್ತದೀಪ್ತಿ suptadeepti said...

ಸುಶ್ರುತ, ಶಿಲ್ಪಾ-ಗೇರ್ ಮುತ್ತಿನಾಟದ ಬಗ್ಗೆ ಶುರುವಾದ ಈ ಲೇಖನ ಕೊನೆಗೊಂಡದ್ದು ಮುತ್ತಿನ ಬಗ್ಗೆ ಹುಡುಕಾಟದಲ್ಲಿ ಸಿಕ್ಕಿದ ಮಾಹಿತಿಗಳಿಂದ. ಮೊದಲ ಭಾಗದಲ್ಲಿ ಮೂಡಿದ್ದ ಕುತೂಹಲದ ಪ್ರಶ್ನೆಗಳು ನಿಮ್ಮ ತಪ್ಪಲ್ಲ, ನಿಮ್ಮ ವಯಸ್ಸಿನದು. ಅದೇ ಕುತೂಹಲದ ಪರಿಣಾಮ ಮಾಹಿತಿ ಸಂಗ್ರಹ, ನಿರೂಪಣೆ. ಅದಕ್ಕಾಗಿ ಧನ್ಯವಾದಗಳು ಅನ್ನಬಲ್ಲೆ. ಮಾತೆಯ ಮಮತೆಯ ಮುತ್ತು ಮತ್ತು ಪ್ರೇಮಿಯ ಮತ್ತಿನ ಮುತ್ತು- ಇವುಗಳ ನಡುವೆ ಹಲವಾರು ಬಣ್ಣಗಳ "ವಾಸನೆ"ಗಳ ಬಗೆ-ಬಗೆಯ ಮುತ್ತುಗಳಿವೆ ಎನ್ನುವುದು ಗೊತ್ತು. ಕೆಲವುದರ ಪರಿಚಯ ಮಾಡಿಕೊಟ್ಟಿದ್ದೀರಿ.

ಇನ್ನು ಸಭ್ಯತೆಯ ಪ್ರಶ್ನೆ- ಶಿಲ್ಪಾ-ಗೇರ್ ಪ್ರಕರಣ ಸಭ್ಯತೆಯ ಗೆರೆ ಮೀರಿದ್ದು, ನಿಜ. ಈ ಲೇಖನ ಅಲ್ಲಿಂದ ಶುರುವಾದರೂ ಅಲ್ಲಿಗೇ ಸೀಮಿತವಾಗಿಲ್ಲ, ಅದರ ವಿಶ್ಲೇಷಣೆ ಇದರ ಉದ್ದೇಶವಲ್ಲ. ಆದ್ದರಿಂದ ಸಭ್ಯತೆಯ ಸರಹದ್ದು ಮೀರಿಲ್ಲವೆಂದು ನನ್ನ ಅಭಿಪ್ರಾಯ.

ನಿಮ್ಮ ಆಳು ಹೇಳಿದ ಮಾತು ಅವನ ಅನುಭವವನ್ನೂ ಹೇಳತ್ತೆ ಅನ್ನುವುದೂ ಅಷ್ಟೇ ನಿಜ. ಜೊತೆಗೆ, ಹಳ್ಳಿಜನರು ಹೆಣ್ಣು ಮಕ್ಕಳನ್ನು "ಅಳೆಯುವ" ರೀತಿಯ ಉತ್ತಮ ಉದಾಹರಣೆ ಆ ಮಾತು. ಅವರ ಅಭಿಪ್ರಾಯ ನಿಖರವೆಂದೇನೂ ಅಲ್ಲ.
ಒಟ್ಟಿನಲ್ಲಿ ಓದಿಸಿಕೊಂಡು ಹೋಗುವ ಲೇಖನ, ನಿಮ್ಮ ಎಂದಿನ ಶೈಲಿಗಿಂತ ಭಿನ್ನವಾದ ಲೇಖನ.

Sushrutha Dodderi said...

@ ಸಿಂಧು

ಗೆಳತಿಯರಿಬ್ಬರ ಸುಮ್ಮನೆ ಮಾತು, ಕಾಡ ಹಾದಿಯ ವಾಕು, ಊರ ಮಳೆಯ ತಂಪು, ಎಳೆಬಿಸಿಲಿನ ಇಂಪು... ಎಲ್ಲಾ ಚೆಂದ ಹೌದು ಅಕ್ಕಾ.. ಆದ್ರೆ ಮಾತು ಜಾಸ್ತಿ ಆದ್ರೆ, ಹಾದಿ ಉದ್ದ ಆದ್ರೆ, ಮಳೆ ಹೆಚ್ಚಾದ್ರೆ, ಎಳೆಬಿಸಿಲೇ ದಿನವಿಡೀ ಇದ್ರೆ ಯಾರಿಗೆ ಇಷ್ಟ ಆಗ್ತು ಹೇಳು? ನನ್ನ ಬರಹಗಳಲ್ಲಿ ಏಕತಾನತೆ ಕಾಣ್ತಾ ಇದ್ದು ಅಂತ ಇತ್ತೀಚಿಗೆ ನಂಗೇ ಅನ್ನಿಸ್ತಿತ್ತು.. ಅದ್ಕೇ ಸ್ವಲ್ಪ ಬೇರೆ ವಿಷಯ ಆಯ್ದುಕೊಂಡೆ.

ನಿನ್ನ ತಲ್ಲಣ ನಂಗೆ ಅರ್ಥ ಆಗ್ತು. ನೀನು ನನ್ನ ಬರಹಗಳ ಬಗ್ಗೆ ಇಟ್ಟಿರೋ ಅಕ್ಕರಾಸ್ಥೆಗೆ ನಾನು ಋಣಿ. ಆದ್ರೆ ಅದೇ ಸೂಕ್ಷ್ಮ ಲೇಖನಿಯನ್ನೇ ಪದೇ ಪದೇ ಉಪಯೋಗಿಸ್ತಾ ಇದ್ರೆ 'ಇಂಕು' ಬೇಗ ಖಾಲಿಯಾದೀತು ಅನ್ನೋ ಆತಂಕ ನಂದು. ಹಾಗಾಗಿ ಸ್ವಲ್ಪ 'ಬೇರೆ ಪೆನ್'ತಗೊಂಡೆ. 'ಜನ ಛೇಂಜ್ ಕೇಳ್ತಾರೆ' ಅನ್ನೋ ಮಾತನ್ನ ನಾನು ಬಲವಾಗಿ ನಂಬಿದ್ರಿಂದ ಹೀಗಾಯ್ತು ಅಂದ್ಕೋತೀನಿ. :)

ಆದರೆ ಅವಾಗಿವಾಗ ಹೀಗೆ ಬರೆದಾಗ ತೀರಾ ಕೋಪ ಮಾಡ್ಕೋಬೇಡಿ, ಏನನ್ನೇ ಬರೆದರೂ ಸಭ್ಯತೆಯ ಗೆರೆ ದಾಟದೇ ಬರೆಯಲು ಪ್ರಯತ್ನಿಸುತ್ತೇನೆ. ನಗರದ ಹೊಲಸು-ಮೀಡಿಯಾದ ಬೆಡಗು ಮೇಳೈಸದಂತೆ ನೋಡಿಕೊಳ್ಳುತ್ತೇನೆ. ಐ ಪ್ರಾಮಿಸ್, ಇವತ್ತಿಗೂ ನನ್ನಿಷ್ಟದ ವಿಷಯಗಳು ಅದೇ ಹಳ್ಳಿ, ಅದೇ ಕಾಡು, ಅದೇ ಹಕ್ಕಿ, ಅದೇ ಪ್ರೀತಿ, ಅದೇ ನೆನಪು, ಅದೇ...... ಹಾಂ, ಅವೇ.

ಕೊಳಕ್ಕೆ ಗಾಳ ಹಾಕಿ ಕುಳಿತಿದ್ದಾಗಿದೆ. ಸಿಕ್ಕಷ್ಟನ್ನು ಎತ್ತಿ ಬುಟ್ಟಿಗೆ ಹಾಕಿಕೊಳ್ಳೋಣ ಅಂದುಕೊಂಡಿದ್ದೆ. ಆದರೆ ನೀನು ಮೀನು ಬ್ಯಾಡ, ಮುತ್ತೇ ಬೇಕು ಅಂದಿದ್ದೀಯ. ಅಂದ್ಮೇಲೆ ಗಾಳದ ತುದಿಯ ಹುಳುವಿಗೆ ಸ್ವಲ್ಪ ಬುದ್ಧಿ ಕಲಿಸಬೇಕಿದೆ. 'ನೋಡಿ ಬಾಯಿಗೆ ತುತ್ತಾಗು' ಅಂತ :) ನೋಡೋಣ, ಏನಾಗೊತ್ತೆ ಅಂತ...

ಥ್ಯಾಂಕ್ಸ್ ಅ ಲಾಟ್ ಫಾರ್ ದಿ ಸೆಕೆಂಡ್ ಕಾಮೆಂಟ್..

Sushrutha Dodderi said...

@ ರಾಜೇಶ್ ನಾಯ್ಕ

ಮುಂದಿನ ಸರಣಿ... ಕಾದು ನೋಡಿ..! :)

Sushrutha Dodderi said...

@ ಶ್ರೀನಿಧಿ...

'ಸುಶ್ರುತತನ' ಬಿಟ್ಟು ಬರ್ದಿದ್ದನ್ನ ಗುರುತಿಸಿದ್ದಕ್ಕೆ ಥ್ಯಾಂಕ್ಸ್. ಮೆಚ್ಚಿಕೊಂಡಿದ್ದಕ್ಕೆ ಇನ್ನೊಂದು. :)

ಮುತ್ತಿನ ಬಗ್ಗೆ ಬರಿಯೋದು ಸ್ವಲ್ಪ ಏನು ಮಾರಾಯ, ಸಿಕ್ಕಾಪಟೆ ಮುಜುಗರದ ವಿಷ್ಯ..!

>>ಒಬ್ಬ ಬರಹಗಾರ "ಹೀಗೇ" ಅಂತ ಬ್ರಾಂಡ್ ಆದ್ರೆ ಅದೂ ತೊಂದರೆಯೇ! -ಹಾಂ, ಅದು ನನ್ನ ಅನಿಸಿಕೆಯೂ ಆಗಿತ್ತು. ಆದ್ರೆ ಈಗ ಅದು ತಪ್ಪೋ ಸರಿಯೋ ಅನ್ನೋ ಡೈಲೆಮಾಕ್ಕೆ ಸಿಕ್ಕಿಹಾಕ್ಯೈಂದಿ... :(

:-(

Sushrutha Dodderi said...

@ suptadeepti

ಮುತ್ತಿನಾಟದಿಂದ ಹುಡುಕಾಟದವರೆಗೆ ನಾನು ಮಾಡಿರುವ ಹುಡುಗಾಟವನ್ನು ಗ್ರಹಿಸಿದ್ದಕ್ಕೆ ಥ್ಯಾಂಕ್ಸ್.

ಶಿಲ್ಪಾ-ಗೇರ್ ಪ್ರಕರಣ ನಾವು ಭಾರತೀಯರಿಗೆ ನಿಜಕ್ಕೂ ಕಷ್ಟಸಹ್ಯ. ಆದರೆ ಶಿಲ್ಪಾಳ ಕಷ್ಟ ನೋಡ್ಲಿಕ್ಕಾಗ್ಲಿಲ್ಲ ನಂಗೆ; ಅದ್ಕೇ ಹಾಗೆಲ್ಲಬರ್ದೆ :) 'ಸಭ್ಯತೆಯ ಗೆರೆ' ಮೀರಿಲ್ಲ ಎಂದಿರಾ? ಥ್ಯಾಂಕ್ಸ್ ಮಾರಾಯ್ರೇ! ಯಾಕೇಂದ್ರೆ ನಂಗೆ ಅದೇ ತಲೆಬಿಸಿ ಆಗಿತ್ತು...

ಈ ಸಲ ಊರಿಗೆ ಹೋದಾಗ ಗುತ್ಯಪ್ಪನನ್ನು ನೀವು ಕೇಳಿದ್ರಿ ಅಂತ ಹೇಳ್ತೀನಿ ಬಿಡಿ.. :)

Anonymous said...

ಮೂಡು ಸರಿ ಮಾಡ್ಕೊಳ್ಳೊ ಹೊಸ ವಿಧಾನ ಹೇಳ್ಕೊಟ್ಟಿದ್ದಕ್ಕೆ ತುಂಬ ಧನ್ಯವಾದಗಳು ಸುಶ್ರುತ!!!

Sushrutha Dodderi said...

@ anonymous

ಧನ್ಯವಾದಗಳು

ರಾಧಾಕೃಷ್ಣ ಆನೆಗುಂಡಿ. said...

ಮುತ್ತು ಕೊಡುವಾಗ ಅದರಲ್ಲೂ ಪ್ರೇವ್ಮಿಗಳು ಕಣ್ಣು ಮುಚ್ಚುತ್ತಾರಂತೆ( ಬೆಕ್ಕು ಹಾಲು ಕುಡಿದ ಕಾರಣವಲ್ಲ)
ಹೌದಾ?..............

Sushrutha Dodderi said...

@ ರಾಧಾಕೃಷ್ಣ ಆನೆಗುಂಡಿ

ಕೇಳಿದ್ದೇನೆ. ಖಚಿತವಾಗಿ ನಂಗೂ ಗೊತ್ತಿಲ್ಲ. ಬೆಕ್ಕಿನಾಣೆ- ನನಗೆ ಇಂತಹ ವಿಷಯಗಳ ಬಗ್ಗೆ ಸ್ವಲ್ಪವೂ ಜ್ಞಾನ ಇಲ್ಲ. :) :)

Shiv said...

ಗುರುಗಳೇ,

ನಿಮ್ಮ ಆಗಾಧ ಮುತ್ತಿನ ಜ್ಞಾನ ಓದಿ ಅದೇ ಮತ್ತಲ್ಲಿ ತುಟಿಗಳು ಒಣಗಿವೆ..

ಭಾರೀ ಅಪ್ತವೆನಿಸ್ತು ಮುತ್ತಿನ ಕತೆ :)


ಅಂದಾಗೆ ಪಾತರಗಿತ್ತಿ ಮುತ್ತಿಗೂ ನಮಗೂ ಎನು ಸಂಬಂಧವಿಲ್ಲವೆಂದು ನಾವು ಸ್ಪಷ್ಟಪಡಿಸುತ್ತೇವೆ :)

Sushrutha Dodderi said...

@ shiv

ಒಣಗಿದ ತುಟಿಗಳಿಗೆ ಪರಿಹಾರವೇನು ಎಂಬುದನ್ನು ನಾನು ಹೇಳಿಕೊಡಬೇಕಿಲ್ಲ ಅಂದುಕೊಳ್ಳುತ್ತೇನೆ..? :) ;)

ನಿಮ್ಮ ಸ್ಪಷ್ಟನೆಯನ್ನು ನಿರೀಕ್ಷಿಸಿದ್ದೆ; ಹಾಗೇ ಆಯಿತು. :)
ಶಿಶ್ಯೋತ್ತಮನಿಗೆ ಒಳ್ಳೆಯದಾಗಲಿ. :)

Mahantesh said...

muttina mattinalli nimma swanubhavagaLe? :)-

Anonymous said...

ಶಿಲ್ಪಾಗೆ,
ಮುತ್ತು ಕೊಡೋನು ಬಂದಾಗ
ತುತ್ತು ನೀಡಿದ ದೇಶದ ಸಂಸ್ಕೃತಿಯ ಮರಿಬ್ಯಾಡ!

ಸುಶೃತ,ಲವ್ ಲವಿಕೆಯ ಬರಹಕ್ಕೆ ಮೆಚ್ಚಿಗೆ.

ಯಾರಿಂದಲಾದರೂ ಮೆಚ್ಚಿಗೆಯ ಮುತ್ತು ಸಿಕ್ಕಿರಬಹುದೇ?;)

Sushrutha Dodderi said...

@ Mahantesh

ModalE hELidde; eega mattomme confirm maaDutthiddEne. nanna anubhava Enoo illa idaralli.. nannannu nambi.. :-)

Sushrutha Dodderi said...

@ sritri

ಶಿಲ್ಪಾ ನೀವು ಹೇಳಿದ ಹಿತವಚನವನ್ನು ಪಾಲಿಸಲಿ ಅಂತ ಆಶಿಸೋಣ.

ಥಾಂಕ್ಸ್ ಮ್ಯಾಮ್.. ಆದ್ರೆ ನೀವೆಣಿಸಿದಂತೆ ಇನ್ನೂ ಮೆಚ್ಚುಗೆಯ ಮುತ್ತು ಸಿಕ್ಕಿಲ್ಲ. ಸಿಕ್ಕಿದಿದ್ರೆ ಈ ಆರ್ಟಿಕಲ್‍ನ ಭಾಗ-2 ಬರೆಯುತ್ತಿದ್ದೆನೇನೋ? 'ಮತ್ತೇರಿಸಿದ ಮುತ್ತು' ಎಂಬ ಶೀರ್ಷಿಕೆ ಕೊಟ್ಟು...! :)

Mahantesh said...

hirayaru heLiddare
"anubhav irolli amRut (muttina) irutte aMta ".
kiss ka kissaa sirf kismatwalonko milta hain annovaNte nimma mele jaasti gumani