ಅದೊಂದು ಮುಂಜಾನೆ ಆ ಹಕ್ಕಿ ಬಂದು
ನನ್ನ ಮನೆಯ ಕಿಟಕಿ ಸರಳ ಮೇಲೆ ಕೂತು
ಚಿಲಿಪಿಲಿಗುಡುತ್ತಿತ್ತು
ಗಿಣಿಯಂಥ ಮೂತಿ; ಆದರೆ ಗಿಣಿಯಲ್ಲ
ಗುಬ್ಬಿಯಂತೆ ಚಿಲಿಪಿಲಿ ದನಿ; ಆದರೆ ಗುಬ್ಬಿಯಲ್ಲ
ಹಾಡಲು ತೊಡಗಿದರೆ ಕೋಗಿಲೆಯೇ; ಆದರೆ... ಊಹುಂ, ಕೋಗಿಲೆಯಲ್ಲ
ಬಣ್ಣ ಮಾತ್ರ ಪಾರಿವಾಳ; ಆದರೆ ಗುಟುರಿಲ್ಲ...
ಹಾಗಾದರೆ ಇದ್ಯಾವ ಹಕ್ಕಿಯಿರಬಹುದೆಂದು
ನನಗೆ ಅಚ್ಚರಿ...
ಅಂಥದ್ದೊಂದು ಕುತೂಹಲವನ್ನು ನನ್ನಲಿ ಹುಟ್ಟಿಸಿ
ಹಕ್ಕಿ ತಾನು ಪುರ್ರನೆ ಹಾರಿ ಹೋಯಿತು
ಆಮೇಲೆ ದಿನವೂ ಬರತೊಡಗಿತು...
ಚಿಲಿಪಿಲಿಚಿಲಿಪಿಲಿಚಿಲಿಪಿಲಿ!
ಮಾತು ಮಾತು ಮಾತು!
ನನಗರ್ಥವಾಗದ ಭಾಷೆಯಲ್ಲಿ ಅದು ಏನೇನೋ ಹೇಳುತ್ತಿದ್ದರೂ
ನನ್ನ ಮನಸಿಗೇಕೋ ಅವೆಲ್ಲ ಇಷ್ಟವಾಗುತ್ತಿತ್ತು..
ಇಷ್ಟ ಪ್ರೀತಿಯಾಗಲು ಎಷ್ಟೊತ್ತು ಬೇಕು?
ನಿಜ ಹೇಳಬೇಕೆಂದರೆ, ಬೇಟೆ ನನಗೆ ವರ್ಜ್ಯ
ಹಕ್ಕಿಗಳನ್ನು ನೋಡುವುದರಲ್ಲೇ ನಾನು ಧನ್ಯ
ಬೇಕೆನಿಸಿದ್ದನ್ನು ಪಡೆದೇ ತೀರಬೇಕೆಂದು ಹೊರಡುವುದು ನನ್ನಿಂದ ಅಸಾಧ್ಯ
ಕಂಡ ಕನಸು ಮುರುಟಿಹೋದರೆ ಆಗುವ ಬೇಸರ ಸಹ ನನಗೆ ಸಹ್ಯ
ಆದರೂ ಈ ಹಕ್ಕಿಯ ಮೋಡಿ ಬಲು ದೊಡ್ಡದು!
ಇದರ ಹಾಡಿಗೆ ನಾನು ಮನಸೋತೆ
ಮೈಯ ಒನಪಿಗೆ ಮೈಸೋತೆ
ಮಾತ ಮಳೆಗೆ ಒದ್ದೆಯಾಗಿಹೋದೆ
ಅಂದು ಹಾರಿಹೊರಟ ಹಕ್ಕಿಯ ಬಳಿ ಹೇಳಿದೆ:
ನನಗೆ ನೀನು ಬೇಕು; ಇಲ್ಲೇ ಇರಬೇಕು
ನಾನೇನು ನಿನ್ನನ್ನು ಬಂಧಿಸಿಡುವುದಿಲ್ಲ
ನನ್ನ ಮನೆಯಲ್ಲಿ ಹಾರಾಡಿಕೊಂಡಿರು ಸಾಕು
ಎಲ್ಲಿ ಬೇಕಾದರೂ ಸುತ್ತಿಕೊಂಡು ಬಾ;
ಆದರೆ 'ನನ್ನ ಹಕ್ಕಿ'ಯಾಗಿರು ಅಷ್ಟೇ
-ಅಂತ.
ನನ್ನ ಬಿನ್ನಹ ಕೇಳಿದ ಮೇಲೆ ಹಕ್ಕಿ ಮೌನವಾಯಿತು..
ಅದರ ಪುಟ್ಟ ಕಣ್ಣಕೊಳ ತುಂಬಿಕೊಂಡಿತು..
ಏನೆಂದರೆ ಏನೂ ಹೇಳದೆ ರೆಕ್ಕೆ ಬೀಸಿ ಹಾರಿಹೋಗಿಬಿಟ್ಟಿತು..
ತಪ್ಪು ಮಾಡಿದೆನೇನೋ ಎನಿಸಿದರೂ
ನಾನು ಅದರ ಅನುಪಸ್ಥಿತಿ ಸಹಿಸದಾದೆ.
ಜಾಡು ಹಿಡಿದು ಕಾಡು ಹೊಕ್ಕೆ
ಬಿಸಿಲು ಮಳೆಯೆನ್ನದೆ ತಿರುಗಿದೆ, ಹುಡುಕಿದೆ
ಹಕ್ಕಿ ಸಿಗಲಿಲ್ಲ. ಆದರೆ ವರ್ತಮಾನ ಸಿಕ್ಕಿತು:
ಆ ಹಕ್ಕಿ ಅದಾಗಲೇ ಬೇರೆ ಬೇಟೆಗಾರನ ವಶದಲ್ಲಿದೆ ಅಂತ.
ತಿರುಗಾಡಿ ಹುಡುಕಾಡಿ ಬಳಲಿ ಸೋತುಹೋಗಿದ್ದ ನನಗೆ
ಈ ಮಾತು ಕೇಳಿ ಬೇಸರಕ್ಕಿಂತ ಹೆಚ್ಚು ಅಚ್ಚರಿಯೆನಿಸಿತು:
ಯಾರದೋ ಮನೆಯ ಹಕ್ಕಿ ಇಷ್ಟು ದಿನ ನನ್ನ ಮನೆಗೆ ಬಂದು
ನಿರುದ್ದೇಶ ಉಲ್ಲಾಸವನ್ನು ತನ್ನ ಉಲಿಯಿಂದ ತುಂಬುತ್ತಿತ್ತಲ್ಲ ಎಂದು...
ದಿಗ್ಭ್ರಮೆಯಿಂದ ಮನೆಗೆ ಮರಳಿದೆ.
ಅಚ್ಚರಿ ನೋಡಿ:
ಈ ಹುಚ್ಚಾಟಗಳ ಮಧ್ಯೆ ನನಗೆ ಗೊತ್ತೇ ಆಗದಂತೆ
ನನ್ನ ಮನದ ಮರದಲ್ಲಿ ಹೊಸ ಪ್ರೀತಿಹಕ್ಕಿಯೊಂದು ಬಂದು
ಬೀಡು ಬಿಟ್ಟು ಮೊಟ್ಟೆಯಿಟ್ಟು ಕಾವು ಕೊಡುತ್ತಿತ್ತು...!
23 comments:
ಸುಶ್
ಕೊನೆಯ ಸಾಲುಗಳು ಯಾಕೋ ಇಷ್ಟ ಆಗಲ್ಲೆ.
ನೀನು ಆ ಹಕ್ಕಿಯ ನೆನಪಲ್ಲೆ ಇರ್ತೆ ಅಂತಾ expect ಮಾಡ್ತಾ ಇದ್ದಿದಿ ಅದಕ್ಕೆ ಆ ಸಾಲುಗಳು ಇಷ್ಟ ಆಗಲ್ಲೆ ಅನ್ನಿಸ್ತು.
ನನಗೆ ಪ್ರೀತಿಯಲ್ಲಿ ಇರುವ ಖುಷಿಗಿಂತ ಅದು ಬಿಟ್ಟು ಹೋದಾಗಿನ ನೋವು ನಂಗೆ ಇಷ್ಟ ಆಕ್ತು ಅನ್ನಿಸ್ತು.
ನೀನು ಆ ಹಕ್ಕಿನ ಮನಸಾರೆ ಪ್ರೀತಿಯೆ ಮಾಡಿದ್ದಿಲ್ಲೆ ಅನ್ನಿಸ್ತು ಅದಕ್ಕೆ ಅದು ಇನ್ನೊಬ್ಬನ ಒಟ್ಟಿಗೆ ಇದ್ದಾಗ ಎನು ಅನ್ನಿಸಿದ್ದೆ ಇಲ್ಲೆ. ಅದರ ಒನಪು ವಯ್ಯಾರ ನಿನ್ನ ಮನಸ್ಸನ್ನ ಸೆಳದಿತ್ತು ಅನ್ನಿಸ್ತು.
anyway once again good wordings from u........ keep it up.
@ ranju
ಕೊನೇ ಸಾಲು ನಂಗೂ ಇಷ್ಟ ಆಗಲ್ಲೆ!! ಆದ್ರೆ ಏನು ಮಾಡ್ಲಿ? ಸಾಲು ಸಾಲೇ ಅಲ್ದಾ?
ಕೆಲವೊಮ್ಮೆ ಹಂಗಾಗ್ತು. ನಾವು ನಮ್ಮದಲ್ಲದ ಹಕ್ಕೀನಾ ನೋಡ್ತಾ ಮೈಮರ್ತಿರೋವಾಗ ಇಲ್ಲಿ ನಮ್ಮ ಮನದಲ್ಲಿ 'ನಾನು ನಿನ್ನವಳೇ' ಎನ್ನುವ ಹಕ್ಕಿಯೊಂದು ಬಂದು ಗೂಡು ಕಟ್ಟಿರ್ತು. ಅದಕ್ಕೋ, ನನ್ನ ಥರಾನೇ ಹುಚ್ಚು: ಇವನು ಬೇರೆ ಹಕ್ಕಿಯ ಪ್ರೀತಿಯಲ್ಲಿದ್ದ ಅಂತ ಗೊತ್ತೇ ಇರೋದಿಲ್ಲೆ. ತಾನು ಮಾತ್ರ ಪ್ರೀತಿ ಮಾಡಕ್ಕೆ ಶುರು ಮಾಡ್ತು. ಹಾಗಿದ್ದಾಗ, ನಾನು ಪ್ರೀತಿಸಿದ ಹಕ್ಕಿ ಅದಾಗಲೇ ಬೇರೆಯವನ ಸ್ವತ್ತು ಅಂತ ಗೊತ್ತಾದಾಗ, ಇಲ್ಲಿ ನನ್ನನ್ನೇ ಪ್ರೀತಿಸ್ತಿರೋ ಹೊಸಹಕ್ಕಿಯೆಡೆಗೆ ನಾನು ತಿರುಗಿ ನೋಡಿದ್ರೆ ಅದು ತಪ್ಪಾ? ಹೌದು, ಹಳೆ ಹಕ್ಕಿಯ ನೆನಪು ಕಾಡ್ತು... But, still.... Life is nothing but living with compromises...?
Thanx.
ಸತ್ಯಕ್ಕೆ ತುಂಬ ಹತ್ತಿರವಾದ ಪದ್ಯ. ಹಕ್ಕಿ,ಬೇಟೆಗಾರನ ಬದಲು ತಮ್ಮಂತ ಇನ್ನೊಬ್ಬರ ಮನೆಯಂಗಳದಲ್ಲಿ ಹಾಡುತ್ತಿದ್ದರೆ ಇನ್ನೂ ಹಿತವಾಗಿರುತ್ತಿತ್ತು.
@ ಶರಣ್ಯಾ
ಥ್ಯಾಂಕ್ ಯೂ. ಹಕ್ಕಿ ಬೇಟೆಗಾರನ ಬದಲು ಬೇರೆ ನನ್ನಂಥವರದೇ ಮನೆಯಲ್ಲಿದ್ದರೆ ನನಗೂ ನೆಮ್ಮದಿಯೆನಿಸುತ್ತಿತ್ತು. ಆದ್ರೆ ಏನು ಮಾಡೋಣ! ಈಗ ಬೇಟೆಗಾರನೇ ನನ್ನಂತೆ ಬದಲಾಗಲಿ ಅಂತ ಆಶಿಸೋದೊಂದೇ ಉಳಿದ ದಾರಿ...! ಆದ್ರೂ, 'ಬೇಟೆಗಾರನ ಮನೆಯ ಹಕ್ಕಿ' ಇಷ್ಟೊಂದು ಭಾವುಕ ಹಕ್ಕಿಯಾಗಿತ್ತಲ್ಲಾ, ನನಗೆ ಅದು ಅಚ್ಚರಿಯೆನಿಸಿದ್ದು..!
ಹಮ್...ಬೇಟೆಗಾರನ ಮನೆ ಹಕ್ಕಿ ಭಾವುಕನಾಗಿರಬಾರದೆಂದೇನಿಲ್ಲ. ಅವ ಬೇಟೆಗಾರನಾಗಿದ್ದರಿಂದಲೇ ಭಾವುಕ ಹಕ್ಕಿ ನಿಮ್ಮನೆ ಕಿಟಕಿಯಲ್ಲಿ ಕೂತು ಹಾಡಿದ್ದು.ಇಲ್ಲದಿದ್ದರೆ ಅವನ ಮನೆಯಲ್ಲೇ ಹಾಡುತ್ತಿತ್ತು. ಅಲ್ಲವೇ?
@ ಶರಣ್ಯಾ
ಕರೆಕ್ಟ್! ಬೇಟೆಗಾರನಲ್ಲಿ ಸಿಗದ ಅದ್ಯಾವ ಸ್ನೇಹಲ ತೃಪ್ತಿಗಾಗಿ ನನ್ನ ಮನೆಗೆ ಬಂದಿತ್ತೋ ಏನೋ? ನಾನು ತಿಳಿದುಕೊಳ್ಳುವ ಮೊದಲೇ ಹಾರಿಹೋಯ್ತು.. :(
ಹೊಸದಾಗಿ ಒಲ್ನುಡಿಗಳನ್ನಾಡುತ್ತಿರುವ ಹಕ್ಕಿಯ ಪೂರ್ವಾಪರಗಳನ್ನು ಮೊದಲೇ ವಿಚಾರಿಸಿಕೊಳ್ಳಬೇಕೆಂದು ಪ್ರಾಮಾಣಿಕವಾದೊಂದು ಸಲಹೆ ನನ್ನದು.
ಅದಿರ್ಲಿ, ಮೀನು ಹಿಡಿಯು ಗಾಳ ಬಿಟ್ಟು ಹಕ್ಕಿ ಹಿಡಿಲಿಕ್ಕೆ ಬಲೆ ತಕೊಂಡ್ರಾ ಎಂತ ಕಥೆ?
@ yaatrika
ಸರಿಯಾಗಿ ಹೇಳಿದ್ರಿ! ನಾನೂ ನಾನಾ ರೀತಿಯಲ್ಲಿ ವಿಚಾರಿಸಿದೆ. ಆದ್ರೆ ಅದು ಹೇಳ್ಲಿಕ್ಕೇ ತಯಾರಿರ್ಲಿಲ್ಲ. ನಾನು 'ಬಾಯಿ ಒಡ್ದು' ಕೇಳ್ಬೇಕಿತ್ತೇನೋ ಅಂತ ಈಗನ್ನುಸ್ತಿದೆ... ಬಟ್... ನೋ ಯೂಸ್.. :(
ಹಹ್ಹ, ಜನ ಛೇಂಜ್ ಕೇಳ್ತಾರೆ ನೋಡೀ... ಹೀಗಾಗಿ... ಹಹ್ಹ..! :)
ಹ್ವಾಯ್...ಅದಲ್ಲ....ನಾನು referiಸುತ್ತಿರುವುದು ಇದೀಗ ಹಾಡುತ್ತಿರುವ ಹಕ್ಕಿಯ ಬಗ್ಗೆ. :-) ಎಲ್ಲಾ ಕೂಲಂಕಷವಾಗಿ ತಿಳ್ಕಳಿ ಮೊದ್ಲು. ಆದೀತಾ? ಮತ್ತ್ ಸುಮ್ನೆ ಬೇಜಾರ್ ಮಾಡೂ ಪ್ರಸಂಗ ಬಾರದಿರ್ಲಿ.
ಸುಶ್,
ಮುಕ್ತಾಯ ಅಷ್ಟೇನೂ ಆದರ್ಶಮಯವಾಗಿರಲಿಕ್ಕಿಲ್ಲ ಆದರೆ ನೈಜ್ಯವಾಗಿದೆ.
ಹಕ್ಕಿ ಬೇಟಗಾರನಿಗೆ ವಶವಾಗಿದ್ದು ಹೇಗಿರಬಹುದು? ಹಕ್ಕಿಗೆ ಅವನು ಬೇಟಗಾರ ಅಂತಾ ತಿಳಿದಿರಲಿಲ್ಲವೇ ಅಥವಾ ಪರಿಸ್ಥಿತಿಯ ಒತ್ತಡವೇ?
ಸು,
ವಿಶಿಷ್ಟ ಕವಿತೆ. ಕವಿತೆಯ ವಿಷಯ ಆಶಯಗಳಿಗಿಂತ, ಶೈಲಿ ತುಂಬ ಇಷ್ಟವಾಯಿತು.
ಪ್ರೀತಿ ನದಿಯಂತೆ. ಚಿರನೂತನ.ಚಿರ ಚೇತನ ಪ್ರಕೃತಿಯ ಭಾಷ್ಯವೇ ಪ್ರೀತಿ. ನಮ್ಮನೆಯಂಗಳವೋ, ಬೇಟೆಗಾರನ ಬಲೆಯೋ, ನಮ್ಮ ಎದೆಗೂಡೋ, ಒಮ್ಮೆ ಅನುಭವಿಸಿದ ಪ್ರೀತಿಯ ಪರಿ ಸದಾ ತಂಪಾಗಿ ನೆಲೆಯೂರುತ್ತದೆ. ಕೆನ್ನೆಯ ಮೇಲೆ ಜಾರಿ ಬೀಳುವ ನೀರು ತೊಡೆಯುವ ದುಃಖದಲ್ಲು ಎಂದೋ ಅನುಭವಿಸಿದ ಪ್ರೀತಿಯ ನವಿರುತನ ಹೊಳೆಯುತ್ತಿರುತ್ತದೆ.
ಪ್ರೀತಿಯಿರಲಿ
ಸುಶ್,
ಒಂತರ ಮಜವಾಗಿದ್ದು ನೋಡು.
"ಬೇಕೆನಿಸಿದ್ದನ್ನು ಪಡೆದೇ ತೀರಬೇಕೆಂದು ಹೊರಡುವುದು ನನ್ನಿಂದ ಅಸಾಧ್ಯ
ಕಂಡ ಕನಸು ಮುರುಟಿಹೋದರೆ ಆಗುವ ಬೇಸರ ಸಹ ನನಗೆ ಸಹ್ಯ"
ಯೇ, ಜೀವನ್ದಲ್ಲಿ ಹೀಂಗೆ ಸುಮ್ನೆ ಕೂತ್ರೆ ಏನೂ ಆಗದಿಲ್ಲ ಮಗಾ! ಅಸಾಧ್ಯ ಗಿಸಾಧ್ಯ ಎಲ್ಲ ಇಟ್ಗಬೇಡ! ಪಡ್ದೇ ತೀರ್ತೀನಿ ಅನ್ನ ಹಠ ಬೆಳ್ಸ್ಗ ಮಾರಾಯ್ನೆ! ಇಲ್ದೇ ಇದ್ರೆ ಆಗದಲ್ಲ ಹೋಗದಲ್ಲ. :D
ಒಟ್ಟಾರೆಯಾಗಿ ಪದ್ಯ ಇಷ್ಟ ಆದ್ರೂ-- "ಬೇಕೆನಿಸಿದ್ದನ್ನು ಪಡೆದೇ ತೀರಬೇಕೆಂದು ಹೊರಡುವುದು ನನ್ನಿಂದ ಅಸಾಧ್ಯ
ಕಂಡ ಕನಸು ಮುರುಟಿಹೋದರೆ ಆಗುವ ಬೇಸರ ಸಹ ನನಗೆ ಸಹ್ಯ"-- ಈ ಸಾಲುಗಳು ಮತ್ತೂ ಇಷ್ಟ ಆದವು.
ಜೀವನ, compromises ಜೊತೆಗೂ ರಾಜಿ ಮಾಡಿಕೊಳ್ಳುವ ಕಲೆ. ಈ ಎರಡು ಸಾಲುಗಳಲ್ಲಿ ಆ ಕಲೆಯ ಸೆಲೆಯಿದೆ. ಅದಕ್ಕೆ ನನಗಿಷ್ಟ. ಗಾಳ ಹಾಕಿ, ಬಲೆ ಬೀಸಿ, ಬಿಸ್ಕೆಟ್ ಹಾಕಿ... ಅದು ನಿಮ್ಮಿಷ್ಟ. ಬರೀತಾ ಇರಿ, ನಮಗಾಗಿ.
ನನಗರ್ಥವಾಗದ ಭಾಷೆಯಲ್ಲಿ ಅದು ಏನೇನೋ ಹೇಳುತ್ತಿದ್ದರೂ
ನನ್ನ ಮನಸಿಗೇಕೋ ಅವೆಲ್ಲ ಇಷ್ಟವಾಗುತ್ತಿತ್ತು..
ಇಷ್ಟ ಪ್ರೀತಿಯಾಗಲು ಎಷ್ಟೊತ್ತು ಬೇಕು?
ನಿಜ ಹೇಳಬೇಕೆಂದರೆ, ಬೇಟೆ ನನಗೆ ವರ್ಜ್ಯ..wonderful..ತುಂಬಾ ಚೆನ್ನಾಗಿದೆ..
ಆದ್ರೆ ಇಷ್ಟು ಪ್ರೀತಿಯಾಗಲು ಅಂದ್ರೆ ಏನರ್ಥ?? ಪ್ರೀತಿಗೆ ಅಷ್ಟು ಇಷ್ಟು ಅಂತ ಇದೆಯಾ?
ಗಾಳವೂ ಬೇಡ, ಬಲೆಯೂ ಬೇಡ. ಮೌನಿಯ ಭಾವನೆಗಳು ಸುಮ್ಮನೇ ಹೀಗೆ ಹರಿಯುತ್ತಿರಲಿ ಸ್ವಚ್ಚಂದ ಮೀನಿನಂತೆ, ನಿರುದ್ದೇಶ ಉಲ್ಲಾಸವನ್ನು ತನ್ನ ಉಲಿಯಿಂದ ತುಂಬುತ್ತಿದ್ದ ಹಕ್ಕಿಯಂತೆ
@ yaatrika
ಹಹ್ಹ, ಈಗ ಸಿಕ್ಕಾಪಟ್ಟೆ ಬುದ್ವಂತ ಆಗಿದೀನಿ ಯಾತ್ರಿಕರೇ! ಹೇಳದೇ ಕೇಳದೆ ಮನೆಗೆ ಬಂದ ಅತಿಥಿಗಳನ್ನ ವಿಚಾರ್ಸಿದೇ ಮುಂದುವರಿಸ್ಲಿಕ್ಕಾಗುತ್ತಾ? ಹಾಂ, ನೋಡುವ, ಏನಾಗೊತ್ತೆ ಅಂತ... :-)
@ shiv
ಹಕ್ಕಿಗೆ ಅವನು ಬೇಟೆಗಾರ ಎಂದು ತಿಳಿದೇ ಇರಲಿಲ್ಲ ಅನ್ಸುತ್ತೆ. ಏನೋ, ಎಂತೋ, ಯಾರಿಗ್ಗೊತ್ತು? ಈಗ ಕೇಳಲಿಕ್ಕೂ ಆಗಲ್ಲ.. ಎಲ್ಲಾ ಅವರವರ ಕಲ್ಪನೆಗೆ ಬಿಟ್ಟಿದ್ದು.. ;)
@ ಸಿಂಧು ಅಕ್ಕ
ಥ್ಯಾಂಕ್ಸ್.
ಪ್ರೀತಿಯ ಬಗೆಗೆ ನೀನು ಬರೆದ ಸಾಲುಗಳು ತುಂಬಾ ಇಷ್ಟವಾದ್ವು. ಪ್ರೀತಿ ಒಂದು ಹೃದಯದಿಂದ ಮತ್ತೊಂದು ಹೃದಯಕ್ಕೆ ಹರಿಯುವ ನದಿ -ಹುಂ, ಅದು ನಂದು ಡೈಲಾಗು :)
ಬಹಳ ದಿನಗಳ ನಂತರ ಹುಟ್ಟಿದ ಕವಿತೆ... ಹೀಗಾಗಿ ಸ್ವಲ್ಪ ಯಡವಟ್ಟುಗಳಾಗಿರಬಹುದು.. ಆದರೂ ನನ್ನ ಸತ್ಯ ನನ್ನ ಸತ್ಯವೇ ಅಲ್ಲವೇ? ಹಕ್ಕಿಯ ಸತ್ಯ ಹಕ್ಕಿಗೆ, ಬೇಟೆಗಾರನ ಸತ್ಯ ಬೇಟೆಗಾರನಿಗೆ, ಹೊಸ ಹಕ್ಕಿಗೂ ಅದರದ್ದೇ ಸತ್ಯ... ಓದುವಾಗ ನಿಮಗೇನನಿಸುತ್ತದೋ ಅದು ನಿಮ್ಮ ಸತ್ಯ. ಅಲ್ವಾ?
@ ಶ್ರೀನಿಧಿ
ಸಲಹೆಯನ್ನ ಮನ್ನಿಸ್ತೇನೆ. ಆದ್ರೆ ಅದು ನನ್ನ ಜನ್ಮದಲ್ಲಿ ಆಗೋ ಥರ ಕಾಣೊಲ್ಲ! ಇನ್ನೇನಾದ್ರೂ ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ ನಾನೂ ಬೇಟೆಗಾರನಾಗಬೇಕು ಅಷ್ಟೆ... No, that'll also not happen.. :)
@ suptadeepti
ತುಂಬಾ ಥ್ಯಾಂಕ್ಸ್ ಜ್ಯೋತೀಜೀ.
>>ಜೀವನ compromises ಜೊತೆಗೂ ರಾಜಿ ಮಾಡಿಕೊಳ್ಳುವ ಕಲೆ- ವ್ಹಾವ್ ವ್ಹಾವ್! Nice line.
@ ಮಲ್ನಾಡ್ ಹುಡುಗಿ
ಮೆಚ್ಚುಗೆಗೆ ಧನ್ಯವಾದ.
ನಾನಂದಿದ್ದು 'ಇಷ್ಟ ಪ್ರೀತಿಯಾಗಲು ಎಷ್ಟೊತ್ತು ಬೇಕು?' ಅಂತ. 'ಇಷ್ಟ' -not 'ಇಷ್ಟು'. ಸರಿಯಾಗಿ ನೋಡ್ಲಿಲ್ಲ ಅನ್ಸುತ್ತೆ..
ಮತ್ತ್ತೊಂದು ಹಕ್ಕಿ ತುಂಬ ಬೇಗ ಬಂತಲ್ಲಾ !!!!
ಪಾಪ ಹಳೇ ಹಕ್ಕಿ :(
ಹಳೇ ಹಕ್ಕೀನ ಬೇಟೆಗಾರನ ವಶದಿಂದ ಬಿಡಿಸೋ ಪ್ರಯತ್ನ ಮಾಡ್ಬಹುದಿತ್ತಲ್ವಾ ? !! :O
@ l@n@
ಪ್ರತಿಕ್ರಿಯೆಗೆ ಧನ್ಯವಾದಗಳು ಲಕ್ಷ್ಮೀನಾರಾಯಣ ಭಟ್ರೇ!
ಹುಂ, ಮತ್ತೊಂದು ಹಕ್ಕಿ ಇಷ್ಟು ಬೇಗ ಬಂದದ್ದು ನನ್ನ ಅಚ್ಚರಿಯೂ ಹೌದು, ಅದೃಷ್ಟವೂ ಹೌದು ಅಂದ್ಕೋತೀನಿ.
ಹಳೇ ಹಕ್ಕಿಯನ್ನು ಬಿಡಿಸುವ ಪ್ರಯತ್ನ ಮಾಡಲಿಲ್ಲ. ಯಾಕೇಂದ್ರೆ, ನನಗೆ ಬೇಟೆಗಾರನ ಮೇಲೇನು ದ್ವೇಶವಿಲ್ಲ. ಆ ಹಕ್ಕಿಯನ್ನು ಅಲ್ಲಿಂದ ಕದ್ದು ತಂದೋ ಅಥವಾ ಬೇಟೆಗಾರನನ್ನು ಸೋಲಿಸಿ ಗೆದ್ದು ತಂದೋ ನನ್ನದಾಗಿಸಿಕೊಳ್ಳುವುದು ಅಷ್ಟೇನು ಒಳ್ಳೇ ವಿಚಾರ ಅಂತ ನಂಗನ್ನಿಸಲಿಲ್ಲ. ಹೀಗಾಗಿ, ಹೊಸಹಕ್ಕಿಗೇ ಆಶ್ರಯವಿತ್ತುಬಿಟ್ಟೆ.:)
ಛೆ ಒಂದು ಬಾರಿ ಸಾಮದಿಂದಾದ್ರೂ ಪ್ರಯತ್ನಿಸಬೇಕಿತ್ತು ಸುಶ್.. :O
Post a Comment